- ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ - ಅಕ್ಟೋಬರ್ 20, 2024
- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
ಪೇಟೆ ಬೀದಿಯ ತೇರು
ಡಾ. ಗೋವಿಂದ ಹೆಗಡೆ.
ಕವನ ಸಂಕಲನ ಕೈಗೆ ಬಂದಾಗ ಮೊದಲು ಹುಡುಕಿದ್ದು ‘ಪೇಟೆ ಬೀದಿಯ ತೇರು’ ಕವನವನ್ನು. ಸಾಮಾನ್ಯವಾಗಿ ಒಂದು ಕವನದ ಶೀರ್ಷಿಕೆಯನ್ನೇ ಸಂಕಲನಕ್ಕೂ ಇಡುವುದು ವಾಡಿಕೆ. ಆ ಕವನದ ಆಶಯ ಸಂಕಲನದ ಒಟ್ಟು ಆಶಯವೂ ಆಗಿರುತ್ತದೆ ಎಂದು ನನ್ನ ನಂಬಿಕೆ. ಆದರೆ ಆ ಹೆಸರಿನ ಕವನ ಸಂಕಲನದಲ್ಲಿಲ್ಲ. ಪೇಟೆ ಬೀದಿಯ ತೇರಿನ ಪ್ರಸ್ತಾಪ ಬರುವುದು 26 ನೆಯ ಸಂ-ಸಾರ ಕವನದ ಒಂದು ಉಲ್ಲೇಖವಾಗಿ. ಮನೆಯ ಹಜಾರದ ನಡುವೆ ಇರಿಸಿದ ಹಣತೆಯೊಂದು ಇಡೀ ಹಜಾರಕ್ಕೆ ಬೆಳಕನ್ನು ಪಸರಿಸುವಂತೆ ಈ ಉಲ್ಲೇಖವೂ ಎಲ್ಲ ಕವನಗಳ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕರಾವಳಿ ಜಿಲ್ಲೆಗಳ ರಥೋತ್ಸವಗಳನ್ನು ನೋಡಿದವರಿಗೆ ಪೇಟೆ ಬೀದಿಯ ತೇರಿನ ಸಾಮತಿ ಸುಲಭವಾಗಿ ಅರ್ಥವಾಗುತ್ತದೆ. ಉತ್ಸವದ ದಿನ ಮುಂಜಾನೆ ರಥದಲ್ಲಿ ಉತ್ಸವಮೂರ್ತಿಯ ಆರೋಹಣ ಕಾರ್ಯಕ್ರಮವಿರುತ್ತದೆ. ಈ ರಥವನ್ನು ರಥಬೀದಿ ಅಥವ ಪೇಟೆ ಬೀದಿಗಳಲ್ಲಿ ಎಳೆದುಕೊಂಡು ಒಂದು ನಿರ್ದಿಷ್ಟ ಸ್ಥಳ ತಲುಪಿದಾಗ ಅಲ್ಲಿಯೇ ಬಿಟ್ಟು ಜನರೆಲ್ಲ ತೆರಳುತ್ತಾರೆ. ನಂತರ ಸಂಜೆಯ ಹೊತ್ತಿಗೆ ಅದನ್ನು ಹಿಂದಕ್ಕೆ ಎಳೆದು ತಂದ ನಂತರ ಉತ್ಸವ ಮೂರ್ತಿಯ ಅವರೋಹಣ ಕಾರ್ಯಕ್ರಮ ನಡೆಯುತ್ತದೆ. ಈ ನಡುವಣ ಕಾಲದಲ್ಲಿ ಉತ್ಸವ ಮೂರ್ತಿಯು ತೇರಿನಲ್ಲಿಯೇ ಇರುತ್ತದೆ. “ಸಂಸಾರವೀಗ ಹಗ್ಗ ಹರಿದು ಪೇಟೆ ಬೀದಿಯಲ್ಲೇ ನಿಂತ ತೇರು” ಎಂದು ಕವಿ ಹೇಳುತ್ತಾರೆ. ಇದು ಭಕ್ತರು ಬಿಟ್ಟು ಹೋದ ತೇರಲ್ಲ. “ಸುಳ್ಳಿನ ಗೂಟಕ್ಕೆ ಮಾತಿನ ಹಸು ಕಟ್ಟಿ ಊರೆಲ್ಲ ಮೇಯಿಸುವ ಆಸಾಮಿಯ” ಹೆಂಡತಿಯು ವಿಚ್ಛೇದನದ ಕೇಸನ್ನೂ ಗೆದ್ದು, ಕೋಟಿಗಟ್ಟಲೆ ಜೀವನಾಂಶ ಕೇಳಿ ನಿಂತಾಗ ಮೂರಾಬಟ್ಟೆಯಾದ, ಅಲ್ಲಲ್ಲ, ಹಗ್ಗ ಹರಿದ ತೇರಿನಂತೆ ಅಯೋಮಯವಾಗಿ ನಿಂತಿರುವ ಸಂಸಾರದ ಪ್ರತಿಮೆಯಿದು. ಪೇಟೆ ಬೀದಿಯಲ್ಲಿ ಹಗ್ಗ ಹರಿದು ನಿಂತಿರುವ ತೇರಿನಿಂದ ಇತರರಿಗೆ ಆಗುವ ತೊಂದರೆ ಎಷ್ಟಿರಬಹುದು? ಸಂಸಾರಗಳೊಳಗಿನ Sumಸಾರ Someಸಾರ, ಅಸಾರ, ಅತಿಸಾರಗಳ ಮೆರವಣಿಗೆಯನ್ನು ಗಮನಿಸುವ ಕವಿ ಸಂಸಾರವೇ ಹೀಗೆಯೇ ಏನೋ ಎಂದು ಉದ್ಗಾರವೆತ್ತುತ್ತಾರೆ. ಈ ಉದ್ಗಾರಗಳಿಗೆ ಪೂರಕವಾಗಿ ಕವಿತೆ ಗರಿಗೆದರಿಕೊಳ್ಳುತ್ತದೆ. ಸಂಕಲನದ ಎಲ್ಲ ಕವನಗಳ ನಡುವೆ ಎದ್ದು ನಿಲ್ಲುವ ಈ ಕವನ ಒಂದು ಪ್ರತ್ಯೇಕ ವಿಶ್ಲೇಷಣೆಗೆ ವಸ್ತುವಾಗಬಹುದು.
ಹಗ್ಗ ಹರಿದು ನಿಂತಿರುವ ಪೇಟೆ ಬೀದಿಯ ತೇರಿನಲ್ಲಿ ಇರುವ ಉತ್ಸವ ಮೂರ್ತಿಯಂತೆಯೇ ನಡುವಯಸ್ಸನ್ನು ತಲುಪಿ ಒಂದು ಹೊರಳಿನಲ್ಲಿ ನಿಂತಿರುವ ವ್ಯಕ್ತಿಯೊಬ್ಬ ತಾನು ಬದುಕಿ ಬಂದ ಹಾದಿಯ ನಿರೀಕ್ಷಣೆ, ವಿಶ್ಲೇಷಣೆಗಳನ್ನು ಮಾಡುತ್ತಿರುವ ಕವನಗಳಿವು ಎಂದು ನನಗನಿಸುತ್ತವೆ. “ಹುಡುಕುತ್ತಿರುವೆ ಮನೆ ಬಾಡಿಗೆಗಲ್ಲ, ನಾನು ವಾಸವಿರುವ ನನ್ನದೇ ಮನೆಯನ್ನು” ಎಂಬ ‘ಕನ್ನಡಿ’ ಕವನದ ಸಾಲು ನನ್ನ ಅನಿಸಿಕೆಗಳನ್ನು ಪುಷ್ಟೀಕರಿಸುತ್ತದೆ. “ಆಚೆ ದಡಕ್ಕೆ (ಏಕ) ತಾರಿ” ಎಂಬ ಸಾಲೂ ಇದನ್ನೇ ಸೂಚಿಸುತ್ತದೆ.
“ಜೊತೆಗಿದ್ದೂ ಒಂಟಿ ನಡೆದೆವೇನು ದಾರಿ
ನುಡಿಸುತ್ತ ನಂನಮ್ಮ ಏಕತಾರಿ” ( ಏಕತಾರಿ)
ಪೇಟೆ ಬೀದಿಯ ನಡುವೆ ತೇರಿನಲ್ಲಿ ಉತ್ಸವಮೂರ್ತಿಯಾಗಿ ಜಂಗುಳಿಯಲ್ಲಿ ಕುಳಿತೂ ಒಂಟಿ ನಡೆದಿಹೆವು ಎಂದು ಒಂದು ಕಾಲಘಟ್ಟದಲ್ಲಿ ಅನಿಸುವುದು ಸಹಜ. ಇದೇ ಭಾವ ಹೊತ್ತ ಮುಂದಿನ ಸಾಲುಗಳು:
“ಮರಳ ದಾರಿಯ ಗುಂಟ
ಮರಳಲಾಗದ ನಡಿಗೆ
ಹಾಸಿ ಬಿದ್ದ ಮರುಭೂಮಿ
ಕಣ್ಣು ಸೋಲುವ ವರೆಗೆ” (ನವಿಲುಗಳು)
‘ಮೆಟ್ಟಿಲುಗಳು’ ನಾನು ತುಂಬ ಮೆಚ್ಚಿಕೊಳ್ಳುವ ಕವನ. ಈ ಕೆಳಗಿನ ಸಾಲುಗಳ ಧ್ವನಿಯನ್ನು ಗಮನಿಸಿ, ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟಪಡಬೇಕಿಲ್ಲ.
”ಮೆಟ್ಟಿಲುಗಳೇ ಹಾಗೆ
ಏರಿಳಿಸಲು ಮೀಸಲು
ಸ್ವತಃ ಏರದೇ ಇಳಿಯದೇ”“ಮೆಟ್ಟಿಲುಗಳ ಮೆಹನತ್ತು ತಿಳಿದವ
ಕಾಳಜಿ ವಹಿಸುತ್ತಾನೆ”“ಏರುವವರಿಂದ ತುಳಿಸಿಕೊಂಡ
ಮೆಟ್ಟಿಲುಗಳು ಮಗ್ಗುಲು ತಿರುವಿ ಚರಿತ್ರೆ ಬದಲುತ್ತದೆ ಆದುದರಿಂದ“ಹತ್ತಿ ಹೋಗುವಾಗ, ಜೋಪಾನ!
ಮೃದುವಾಗಿ, ಎಚ್ಚರದಿಂದ ತುಳಿಯಿರಿ” (ಮೆಟ್ಟಿಲುಗಳು)
ಕಾರ್ಮಿಕರಿಗೆ ಭರವಸೆಯ ದನಿಯಾಗುವ, ಶೋಷಕರಿಗೆ ಎಚ್ಚರ ನೀಡುವ, ದಮನಿತರಿಗೆ ಸಾಂತ್ವನ ನೀಡುವ ಕವನವಿದು.
ಕವಿತೆಗಳು ಮೈದಳೆಯುವ ಬಗೆಯನ್ನು ಕವಿಯ ಮಾತುಗಳಲ್ಲೇ ಓದಿ.
“ಸಂತೆ ಮಾತುಗಳಲ್ಲೇ ಮೈ
ಪಡೆಯುವುದಂತೆ ನನ್ನ ಕವಿತೆ” (ಕನಸು ಕವಿತೆ)
ಸಂತೆಯಲ್ಲಿ ದೊರೆಯುವ ವಸ್ತುಗಳಿಂದ ಒಂದು ಗೊಂಬೆ ತಯಾರಿಸಬಹುದು. ಆದರೆ ಅದರಲ್ಲಿ “ಉಸಿರು ಬರುವುದು ಹೇಗೆ?” ನನ್ನ ಕವಿತೆಯೂ ಹಾಗೆಯೇ ಎಲ್ಲ ಶಬ್ದ ಸಂಪತ್ತುಗಳನ್ನೂ ಬಳಸಿಕೊಂಡು ಬೆಳೆಯಬಹುದು. ಆದರೆ ಅದು “ಅನಾತ್ಮ ಕವಿತೆ”. ಅದಕ್ಕೆ “ಒಂದು ಚಂದದ ಕನಸು ಶಿಶು ಸಹಜ ನಗು ಸಾಕು – ಸಜೀವ!” ಆದುದರಿಂದ ಅದು
“ಹುಡುಕುತ್ತಿದೆ ಬಿಡದೇ
ಕನಸು ಮಾರುವ ಸಂತೆಯಲ್ಲಿ
ಕಳೆದು ಹೋದ ಕನಸುಗಳ…”
ಯಾರಾದರೂ “ನಿನ್ನ ಹಾಡಿನಲ್ಲಿ ಯಾಕೆ ಅಲುಗಿಸುವ ಯಾತನೆ” ಎಂದು ಕೇಳಿದರೆ ಕವಿ ಹೇಳುತ್ತಾರೆ,
“ಮುಳ್ಳು, ಕಂಪನ ಮತ್ತು
ಎದೆಯ ಗಾಯವಿರದೆ
ಹಾಡು ಹೊಮ್ಮೀತು ಹೇಗೆ?” (ಹುಟ್ಟು)
ಇದು ಪ್ರಶ್ನೆಯೂ ಹೌದು, ಅಚ್ಚರಿಯೂ ಹೌದು.
“ಕುದಿ ಬೇಕು ಕುದಿಯಬೇಕು
ಕುದಿಯಿರದೇ ಎಲ್ಲಿ ರಸಸಿದ್ಧಿ?” (ಚಹಾ)
ಕವಿತೆಯೆಂದರೆ ಶಬ್ದಗಳ ವೈಭವವಲ್ಲ, ಏನಾದರೂ ಬರೆದರೆ ಕವಿತೆಯಾಗುವುದಿಲ್ಲ.
“ಕಳೆಗಳೇ ಬೆಳೆವಲ್ಲಿ ಕಳೆದುಹೋಗಿದೆ ಕವಿತೆ
ಶಬ್ದ ಸಂತೆಗೆ ಬೆದರಿ ಅಡಗಿ ಕುಳಿತಿದೆ ಕವಿತೆ” (ಗಜಲ್ – 3)
ಗೋವಿಂದ ಹೆಗಡೆಯವರ ಕವನಗಳಲ್ಲಿ ಶಬ್ದಗಳ ಸಂತೆಯೂ ಇಲ್ಲ, ಅಲಂಕಾರಗಳಿಲ್ಲ. ಆದರೆ ಇದು ಶಬ್ದಗಳ ಮೆರವಣಿಗೆಯ ಖೋರಾ ಕಾಗದವೂ ಅಲ್ಲ,
“ಇದೀಗ ನಿನ್ನ ಹೆಸರು ಮೂಡಿದ್ದೇ
ಎಂಥ ಉಜ್ವಲ ಹೊಳಪು …
ಏನದರ ಒನಪು!” (ಕಾಗದ)
ಖೋರಾ ಕಾಗದ ಕಾಗದದ ಮೇಲೆ ಮೂಡಿರುವ ಅಕ್ಷರಗಳಲ್ಲಿ ನಿನ್ನ ಹೆಸರು ಮೂಡಿದಾಗ ಅದು ಜೀವ ತಳೆಯುತ್ತದೆ. ಅದರ ಇನ್ನೊಂದು ಮುಖ,
“ಈಗ ಹಾರಿದ ಪುಟಕ್ಕೆ ನೋವು ನೆನಪಿನ ರೆಕ್ಕೆ
ಹಾರುವುದು ಎಲ್ಲಿಯ ವರೆಗೆ”
“ಎದೆ ಮಣ್ಣಿನಲಿ ಬೆರೆತಾಗ ಚಿಗುರು
-ವುದೇನು ಕವಿತೆ ಮಿಸುಕುತ್ತ ಮರಳಿ” (ಹಾರಿ ಹೋಗಿದ್ದು)
ನಾನು ವಾಸವಿರುವ ನನ್ನದೇ ಮನೆಯ ವಿಳಾಸ ಕಳೆದುಕೊಂಡು ದಿಗ್ಭ್ರಮೆಗೊಂಡು ಹುಡುಕಾಟದಲ್ಲಿರುವಾಗ “ಕಡೆಯಲ್ಲಿ ಬಂದವನೊಬ್ಬ ಸಾವಕಾಶವಾಗಿ ಕೇಳಿಕೊಂಡು ತನ್ನ ಕೈಗಳ ತೋರಿಸಿ ಎಡ ಬಲ ತೋರೆಂದ, ಕೆನ್ನೆ ಹಿಡಿದು ಗಲಗಲ ಅಲುಗಿಸಿ ಹೇಳಿದ-“
“ನೀನು ಎಲ್ಲವನ್ನೂ ತಿರುವು
ಮುರುವಾಗಿ ಕಾಣುತ್ತಿದ್ದೀ
ಮತ್ತು
ನೀನೀಗ ನಿನ್ನ ಮನೆಯ
ಮುಂದೇ ನಿಂತಿದ್ದೀ” (ಕನ್ನಡಿ)
ಕವಿಯು ಕನ್ನಡಿಯ ಎದುರು ನಿಂತು ಬದುಕಿ ಬಂದ ತಮ್ಮದೇ ದಾರಿಯನ್ನು ಗಮನಿಸುತ್ತಿದ್ದಾರೆ. ಒಂದು ರೀತಿಯ ಶೋಧನೆಯಲ್ಲಿದ್ದಾರೆ. ಈ ಶೋಧನೆಯ ಹಾದಿಯಲ್ಲಿ ಮಾರ್ಗದರ್ಶಿ ಅಥವ ಗುರುವಿನ ಆಗಮನವಾದದ್ದನ್ನು ಈ ಕವಿತೆ ಧ್ವನಿಸುತ್ತದೆ. ಈ ಅಯೋಮಯ ಭಾವ ಇನ್ನಿತರ ಕವನಗಳಲ್ಲಿಯೂ ಕಾಣಿಸುತ್ತದೆ.
“ನಿಂತಿದ್ದಾನೇನು ನುರಿತ ಗಾಯಕ ಮೊದಲಚರಣವನ್ನೇ ಮರೆತ ತಬ್ಬಿಬ್ಬಲ್ಲಿವಾದಕ ಮದ್ದಳೆಯನ್ನೇ ಮರೆತ ವಿಸ್ಮರಣೆಯಲ್ಲಿ” (ಚಹರೆ)
“ಈಗ ಕುಳಿತಿದ್ದೇವೆ
ಒಡೆದ ದೋಣಿಗಳಲ್ಲಿ ಹಿಂದೆ
ತಿರುಗಿ ಮತ್ತೆಲ್ಲ ಹೊಸದಾಗಿ
ಆರಂಭಿಸಲಾಗದ ಬಿಂದುವಿನಲ್ಲಿ” (ಕಾಗದದ ದೋಣಿ)
“ಪೇಟೆ ಬೀದಿಯ ತೇರು” ಕವನ ಸಂಕಲನದ ಪ್ರತಿಯೊಂದು ಕವನವೂ ಮನನ, ಮಂಥನಗಳಿಗೆ ಯೋಗ್ಯವಾಗಿದೆ. ಅವೆಲ್ಲವನ್ನೂ ವಿರಾಮವಾಗಿ ಓದಿ ಸವಿಯಬೇಕು, ಅವಸರಿಸುವಂತಿಲ್ಲ. ಆಗ ಕವಿತೆಯೊಳಗಣ ದನಿ ದಟ್ಟೈಸಿ ನಮ್ಮದೇ ಮಾತುಗಳಾಗಿ ಹೊಮ್ಮುವುದನ್ನು ಗಮನಿಸಿ ಆನಂದಿಸಬಹುದು. ಆಗ,
“ಅಂಗಳದಲ್ಲಿ ನಚ್ಚನೆಯ ಬಿಸಿಲು
ಹನಿ ಇಬ್ಬನಿ ನೇಸರನಾಗಿ ಮಿರುಗುತ್ತದೆ
ಕೈ ಚಾಚಿದಲ್ಲೆಲ್ಲ ಖುಷಿ ಹೂವರಳುತ್ತದೆ
ಚಾಚಿದಾಗ” (ಚಾಚು)
ಕವಿಯು ಸಂಕಲನದ ಎಲ್ಲ ಕವನಗಳ ಮೂಲಕ ಹೊಮ್ಮಿಸುವ ಪ್ರಧಾನ ಆಶಯ:
“ಕಲಿಯಬೇಕೆ ಇನ್ನು ಕನ್ನಡಿಯಲ್ಲಿ
ತನ್ನದೇ ಬಿಂಬ ಗುರುತಿಸಿ ಖಾತ್ರಿಸಲಿಕ್ಕೆ
ಕನ್ನಡಿ ಇದಿರಿಗೆ ಇಲ್ಲದಾಗ ಕೂಡ” (ಚಹರೆ)
ಗೋವಿಂದ ಹೆಗಡೆಯವರ ಕವನಗಳನ್ನು ವರ್ಗೀಕರಿಸಿಕೊಂಡು ಬರೆಯುವುದು ಕಷ್ಟ. ಪ್ರತಿಯೊಂದು ಕವನವೂ ವಿಶಿಷ್ಟವಾಗಿದ್ದು ಪ್ರತ್ಯೇಕ ಗಮನವನ್ನು ಅಪೇಕ್ಷಿಸುತ್ತದೆ.
ಡಾ. ಗೋವಿಂದ ಹೆಗಡೆಯವರ ಕವನಗಳನ್ನು ಒಟ್ಟಾರೆಯಾಗಿ ಗಮನಿಸುವಾಗ ನನಗೆ ಒಲೆಯ ಮೇಲೆ ಕುದಿಯಲು ಇಟ್ಟ ನೀರು ನೆನಪಾಗುತ್ತದೆ. ಒಲೆಯ ಮೇಲೆ ಒಂದು ದೊಡ್ಡ ಪಾತ್ರೆಯಲ್ಲಿ ತುಂಬಿಸಿ ಕುದಿಸಲು ಇಟ್ಟ ನೀರನ್ನು ನಿರುಕಿಸುವುದು ನನಗಿಷ್ಟ. ಮೊದಲು ಪ್ರಶಾಂತವಾಗಿದ್ದ ನೀರಿಗೆ ಬಿಸಿ ತಾಕಿದೊಡನೆ ಅದರಲ್ಲೇನೋ ಒಂದು ಅಸ್ಪಷ್ಟ ಚಲನೆಯನ್ನು ಕಾಣಬಹುದು. ನೆರಳಿನಂತಹ ಅಸ್ಪಷ್ಟ ಗುರುತುಗಳು ಕಾಣಿಸುತ್ತವೆ. ನಂತರ ಪಾತ್ರೆಯ ತಳಕ್ಕೆ ಅಂಟಿಕೊಂಡಂತೆ ಅಸಂಖ್ಯ ಗುಳ್ಳೆಗಳು ಕಾಣಿಸತೊಡಗುತ್ತವೆ. ಬಿಸಿಯೇರುತ್ತಿದ್ದಂತೆ ಅವು ಮೇಲಕ್ಕೇರಿ ಮಾಯವಾಗುತ್ತವೆ. ನಂತರ ಗುಳ್ಳೆಗಳು ದೊಡ್ಡವಾಗುತ್ತವೆ. ನೀರು ಸಂಪೂರ್ಣ ಕುದಿಯುವಾಗ ನೀರು ವೇಗವಾಗಿ ತಳದಿಂದ ಮೇಲ್ಪದರಕ್ಕೆ ಏಳುವಾಗ ಸದ್ದು ಕೂಡ ಜೊತೆಗಿರುತ್ತದೆ. ಹೆಗಡೆಯವರ ಕವನಗಳನ್ನು ಓದುವಾಗಲೂ ಹೀಗೆಯೇ, ಯಾವುದೋ ಒಂದು ಭಾವ ಅಥವ ವಿಚಾರ ಅಸ್ಪಷ್ಟವಾಗಿ ಎದುರಾಗುತ್ತದೆ; ಕವನ ಬೆಳೆಯುತ್ತಿರುವಂತೆ ಅದು ತೀವ್ರವಾಗಿ ನಮ್ಮನ್ನು ತಟ್ಟುತ್ತದೆ, ಗಟ್ಟಿದನಿಯಲ್ಲಿ ನಮ್ಮೊಂದಿಗೆ ಮಾತನಾಡತೊಡಗುತ್ತದೆ.
20 ವರ್ಷಗಳ ನಂತರ ಬಂದಿರುವ ಎರಡನೇ ಕವನ ಸಂಕಲನವಿದು. ಸಾಹಿತ್ಯಿಕ ವಲಯದಲ್ಲಿ ಸಾಕಷ್ಟು ಸದ್ದು ಮಾಡುವ ಸಾಮರ್ಥ್ಯ ಹೊಂದಿರುವ ಕವಿತೆಗಳು ಇಲ್ಲಿವೆ. ಸಹೃದಯಿ ಓದುಗರು ಅಭಿಮಾನದಿಂದ ಸ್ವೀಕರಿಸಬೇಕು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ