- ಅನಾದ - ಫೆಬ್ರುವರಿ 18, 2023
- ಗಾಳಿಗೆ ತೊಟ್ಟಿಲ ಕಟ್ಟಿ - ಆಗಸ್ಟ್ 22, 2021
- ಬಾಬಾಸಾಹೇಬರೆಡೆಗೆ - ಆಗಸ್ಟ್ 22, 2021
ಬಾಬಾಸಾಹೇಬರೆಡೆಗೆ:ದೇಶದ ರಾಜಕೀಯ ಶಕ್ತಿ, ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ
ಬಾಬಾಸಾಹೇಬರೆಡೆಗೆ
ಲೇ: ಪ್ರೊ. ಎಚ್. ಟಿ. ಪೋತೆ
ಪುಟ:368, ಬೆಲೆ:400/-
ಪ್ರಕಾಶನ: ಕುಟುಂಬ ಪ್ರಕಾಶನ, ಕಲಬುರಗಿ
ಡಾ. ಎಚ್. ಟಿ. ಪೋತೆ ನಾಡಿನ ಪ್ರಮುಖ ಕಥೆಗಾರ, ಅನುವಾದಕ, ವಿಮರ್ಶಕ, ಪ್ರಬಂಧಕಾರ, ಸಂಶೋಧಕ, ಕಾದಂಬರಿಕಾರ, ಜಾನಪದ ವಿದ್ವಾಂಸ ಮತ್ತು ಸಂಸ್ಕೃತಿ ಚಿಂತಕರು. ಅವರು ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಅಪಾರ ಪರಿಣತಿಯನ್ನು ಹೊಂದಿದ್ದು, ಈವರೆಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಪ್ರೊ. ಎಚ್. ಟಿ. ಪೋತೆಯವರ ‘ಬಾಬಾಸಾಹೇಬರೆಡೆಗೆ’ ಕೃತಿ ಮಲ್ಲಿಕಾರ್ಜುನ ಖರ್ಗೆಯವರ ಬದುಕು, ಹೋರಾಟ, ಸಾಧನೆ ಮತ್ತು ವ್ಯಕ್ತಿತ್ವದ ಹತ್ತಿರದ ಚಿತ್ರಣವನ್ನು ನೀಡುತ್ತದೆ. ಲೇಖಕರು ಖರ್ಗೆಯವರ ಬಾಲ್ಯಜೀವನದಿಂದ ಹಿಡಿದು ಇಲ್ಲಿಯವರೆಗಿನ ಅವರ ‘ಜೀವನ ಕಥನ’ವನ್ನು ಚಾರಿತ್ರಿಕವಾಗಿ ಇಲ್ಲಿ ದಾಖಲಿಸಿದ್ದಾರೆ. ಈ ಕೃತಿ ಹದಿನೆಂಟು ಅಧ್ಯಾಯಗಳನ್ನು ಒಳಗೊಂಡಿದೆ. ‘ಅಂಬೇಡ್ಕರ್ ಯುಗದಲ್ಲಿ’, ‘ಅಪ್ಪ ಅಕ್ಷರ ಅರಿವು’, ‘ಉನ್ನತ ವ್ಯಾಸಂಗ: ಚಳವಳಿ ಚಿಂತನೆ’, ‘ಕಾರ್ಮಿಕ ನಾಯಕ’, ‘ರಾಜ್ಯ ಸರಕಾರದಲ್ಲಿ ಮಂತ್ರಿ ಸ್ಥಾನ’, ‘ಸೋಲಿಲ್ಲದ ಸರದಾರ’, ‘ಸದನದಲ್ಲಿ ಮಲ್ಲಿಕಾರ್ಜುನ ಖರ್ಗೆ’, ‘ಅಂಬೇಡ್ಕರ್ ಬೆಳಕಿನಲ್ಲಿ’, ‘ಹೆತ್ತ ಕರುಳು ಸಂಭ್ರಮಿಸಿತು’, ‘ಅಡಿಯಲ್ಲಿ ಅಡಿಯಿಟ್ಟು: ರಾಧಾಬಾಯಿ ಖರ್ಗೆ’, ‘ಬುದ್ಧ ದರ್ಶನ-ಮಹಾಯೋಗ’, ‘ಗೌರವ ಪದವಿಗೊಂದು ಗೌರವ’, ‘ಭಾರತ ಸರಕಾರದಲ್ಲಿ ಮಂತ್ರಿ ಸ್ಥಾನ’, ‘ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ’, ‘ಲೋಕಸಭೆಯ ಚರ್ಚೆಯಲ್ಲಿ ಮಲ್ಲಿಕಾರ್ಜುನ ಖರ್ಗೆ’, ‘ಲೋಕಸಭೆಯ ಬಜೆಟ್ ಅಧಿವೇಶನದ ಭಾಷಣ,’ ‘ರಾಜ್ಯಸಭೆಯ ಸದಸ್ಯರಾಗಿ ಮಾಡಿದ ಮೊದಲ ಭಾಷಣ’, ‘ಮಲ್ಲಿಕಾರ್ಜುನ ಖರ್ಗೆ: ಅಂದು, ಇಂದು’ ಎಂಬ ಅಧ್ಯಾಯಗಳು ಮಲ್ಲಿಕಾರ್ಜುನ ಖರ್ಗೆ ಹೇಗೆ ಕಾಲ ಕಾಲಕ್ಕೆ ‘ಸಮಾಜಮುಖಿ ವ್ಯಕ್ತಿ’ಯಾಗಿ, ‘ರಾಜಕೀಯ ಶಕ್ತಿ’ಯಾಗಿ ನಿರ್ಮಾಣಗೊಂಡರೆಂಬ ದಾಖಲೆಗಳನ್ನು ನೀಡುತ್ತವೆ. ಲೇಖಕರು ಚಾರಿತ್ರಿಕವಾದ ಈ ವಿವರಗಳನ್ನು ನಿದರ್ಶನ ಸಹಿತ ಅಗತ್ಯ ದಾಖಲೆಗಳೊಂದಿಗೆ ಇಲ್ಲಿ ವಿವರಿಸಿರುವುದರಿಂದ ಕೃತಿಗೆ ವಸ್ತುನಿಷ್ಠತೆ ಪ್ರಾಪ್ತವಾಗಿದೆ. ಈ ಕೃತಿಯ ವ್ಯಾಪ್ತಿಯು ಮಲ್ಲಿಕಾರ್ಜುನ ಖರ್ಗೆಯವರಿಗಷ್ಟೇ ಸೀಮಿತವಾಗದೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಕೂಡ ದಾಟಿಸುತ್ತದೆ.
ಮಲ್ಲಿಕಾರ್ಜುನ ಖರ್ಗೆಯವರನ್ನು ಹಲವಾರು ವರ್ಷಗಳಿಂದ ನಿಕಟವಾಗಿ ಬಲ್ಲ ಎಚ್. ಟಿ. ಪೋತೆ ಈ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಜೀವನ ಚರಿತ್ರೆ ಒಬ್ಬ ವ್ಯಕ್ತಿಯ ಬದುಕಿನ ಇತಿಹಾಸವಾಗಿರದೆ, ಬದುಕಿನ ಬದಲಾವಣೆಯ ಗತಿಯನ್ನು ಹಿಡಿದಿಡುವ ಬರವಣಿಗೆಯಾಗಿದೆ. ಈ ಕೃತಿಯಲ್ಲಿ ಖರ್ಗೆಯವರ ರಾಜಕಾರಣದ ಧನಾತ್ಮಕ ನೆಲೆಗಳನ್ನು ಅಂತೆಯೇ ಅವರ ವ್ಯಕ್ತಿತ್ವದ ಸಂಕೀರ್ಣತೆಯನ್ನು ದಾಖಲಿಸುವ ಕೆಲಸವನ್ನು ವಿಶಿಷ್ಟವಾದ ರೀತಿಯಲ್ಲಿ ಮಾಡಲಾಗಿದೆ. ಖರ್ಗೆಯವರ ‘ಜೀವಪರ-ಜನಪರ ಚಿಂತನೆ’ ನೇರವಾಗಿ ಓದುಗರ ಮನಸ್ಸು ಮುಟ್ಟುತ್ತದೆ.
ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ-ದೇಶದ ರಾಜಕಾರಣ ಕಂಡ ವಿಶಿಷ್ಟ ರಾಜಕಾರಣಿ. ದೇಶದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನೇರ ನಡೆ, ನುಡಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಬಲ್ಲೆ. ನಾನು ಅವರನ್ನು ಸಾಹಿತ್ಯ ಸಂಬಂಧಿ ಕೆಲವು ಸಮಾರಂಭಗಳಲ್ಲಿ ಭೇಟಿಯಾದುದ್ದನ್ನು ಬಿಟ್ಟರೆ, ಅವರೊಂದಿಗಿನ ಒಡನಾಟ ನನಗೆ ಅಷ್ಟಾಗಿ ಇಲ್ಲ. ನಾನು ಅವರ ಬಹುಮುಖ ಪ್ರತಿಭೆಯ ಮತ್ತು ವ್ಯಕ್ತಿತ್ವದ ವಿವಿಧ ಮುಖಗಳನ್ನು ದೂರದಿಂದ ಕೇಳಿ, ಓದಿ ಮಲ್ಲಿಕಾರ್ಜುನ ಖರ್ಗೆಯವರನ್ನು ಒಪ್ಪಿಕೊಂಡವನು. ಸಾಮಾಜಿಕ ಅಸಮಾನತೆ, ಪ್ರಾದೇಶಿಕ ಅಸಮಾನತೆ, ಜಾತಿಪದ್ಧತಿ, ಜಾಗತೀಕರಣ, ಉಳ್ಳವರ ದೌರ್ಜನ್ಯಗಳ ಬಗ್ಗೆ ಅವರು ಹುಟ್ಟುಹಾಕಿಕೊಂಡ ಬಂಡಾಯದ ಬೀಜಗಳು ಈಗಲೂ ಹೆಮ್ಮರಗಳಾಗಿ ನನ್ನನ್ನು ಡಿಸ್ಟರ್ಬ್ ಮಾಡುತ್ತಲೇ ಇವೆ. ಅಸ್ಪøಶ್ಯತೆ ಈ ದೇಶದ ಸಾಮಾಜಿಕ, ಧಾರ್ಮಿಕ ಸಮಸ್ಯೆ. ಅದು ಅನೇಕ ಶತಮಾನಗಳಿಂದ ಮುಂದುವರೆದಿರುವುದು ನಾಚಿಕೆಗೇಡಿನ ಸಂಗತಿ. ಇದರ ಜೊತೆಗೆ ಕೋಮುವಾದ ಸಹ ವಿಜೃಂಭಿಸುತ್ತಿದೆ. ಅಸ್ಪ್ರಶ್ಯತೆ, ಜಾತಿವಾದ ಮತ್ತು ಕೋಮುವಾದಗಳು ದೇಶಕ್ಕೆ ಮತ್ತು ದೇಶದ ಅಭಿವೃದ್ಧಿಗೆ ತುಂಬಾ ಅಪಾಯಕಾರಿ. ಇಂದು ಬಹುಪಾಲು ರಾಜಕಾರಣದಲ್ಲಿ ಏನೆಲ್ಲ ಕಾಣುತ್ತಿದ್ದೇವೆಯೋ ಅವೆಲ್ಲ ಅಂಬೇಡ್ಕರ್ ಹೊಂದಿದ್ದ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿವೆ. ಕೆಳವರ್ಗದವರಿಗೆ ರಾಜಕೀಯವಾಗಿ ಉನ್ನತ ಸ್ಥಾನಮಾನ ಕೊಡಲು ಇನ್ನೂ ಹಿಂದೇಟು ಹಾಕಲಾಗುತ್ತಿದೆ. ಇಂದು ರಾಜಕೀಯ ಕ್ಷೇತ್ರ ಸಾಕಷ್ಟು ಕಲುಷಿತವಾಗಿದ್ದು, ಅತ್ಯಂತ ಅನೂಹ್ಯವು ಆಗಿದೆ.
ವಾಸ್ತವವಾಗಿ ಹೈದ್ರಾಬಾದ್ ಕರ್ನಾಟಕದ ಪ್ರಗತಿಗೆ ಶ್ರಮಿಸಿದ ನೇತಾರ-ನಮ್ಮೆಲ್ಲರ ನಲ್ಮೆಯ ನಾಯಕ ಮಲ್ಲಿಕಾರ್ಜುನ ಖರ್ಗೆ. ಅಂತಹ ದಿಟ್ಟತನದ ಗಟ್ಟಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರ ಕುರಿತು ಪ್ರೊ. ಎಚ್. ಟಿ. ಪೋತೆಯವರು ಪ್ರೀತಿಯಿಂದ ಒಂದು ಅನನ್ಯ ಜೀವನಚರಿತ್ರೆ ಬರೆದಿದ್ದಾರೆ.
ಸ್ವಾಭಿಮಾನದ ಖನಿಯಾದ ಖರ್ಗೆ, ನುಡಿದಂತೆ ನಡೆದು ತೋರಿಸಿದವರು. ಸ್ವತಂತ್ರ ಪ್ರವೃತ್ತಿಯವರು. ಈ ಕೃತಿಯ ಲೇಖಕರಾದ ಪೋತೆಯವರು ಖರ್ಗೆಯವರ ವ್ಯಕ್ತಿ ಚಿತ್ರಣವನ್ನು ಕಟ್ಟಿಕೊಡುವಾಗ- ಆ ಎತ್ತರದ ಸಾಧನೆಗೆ ಕಾರಣವಾದ ಸಮಸ್ತ ಘಟನೆಗಳನ್ನೂ ಆ ಹಿನ್ನೆಲೆಯ ಎಲ್ಲ ವಿವರಗಳೊಂದಿಗೆ ಬರೆದಿದ್ದಾರೆ. ಆ ದೃಷ್ಟಿಯಿಂದ ಈ ಕೃತಿ ಕುತೂಹಲಕಾರಿ. ಲೇಖಕರು ನೇರವಾಗಿ ಖರ್ಗೆಯವರ ವ್ಯಕ್ತಿ ಚಿತ್ರಣ ಮಾಡುವ ಬದಲು- ಖರ್ಗೆಯವರ ಮನೆತನದ ಹಿಂದಿನ ಚರಿತ್ರೆಯನ್ನು ಸಾಕಷ್ಟು ವಿವರವಾಗಿಯೇ ಆಕರ್ಷಕವಾಗಿ ಬರೆದಿದ್ದಾರೆ. ತನ್ಮೂಲಕ ಖರ್ಗೆಯವರ ಆಮೂಲಾಗ್ರ ವಂಶಾವಳಿಯನ್ನು ಸ್ಪಷ್ಟವಾಗಿ ಬರೆದಿದ್ದಾರೆ. ಅಲ್ಲೆಲ್ಲಾ ಜೀವನ ಚರಿತ್ರೆಕಾರರಿಗೆ ಇರಬೇಕಾದ ಸಂಶೋಧನಾ ಪ್ರವೃತ್ತಿಯೂ ಕೆಲಸ ಮಾಡಿದ್ದು ಕಂಡುಬರುತ್ತದೆ. ಖರ್ಗೆಯವರ ಬಾಲ್ಯ ಹೋರಾಟದ್ದು. ಪಟ್ಟ ಪಾಡೂ ಹಲವಾರು!
ಮಲ್ಲಿಕಾರ್ಜುನ ಖರ್ಗೆ 1972ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿ ಕರ್ನಾಟಕದ ಧೀಮಂತ ನಾಯಕನಾಗಿ ಬೆಳೆದು ನಿಂತಿದ್ದು ಪವಾಡವೇ ಸೈ. ನಾಡಿನ ಚುನಾವಣಾ ರಾಜಕೀಯ ಜೀವನದಲ್ಲಿ ಸೋಲನ್ನರಿಯದ ಸರದಾರ ಎಂದರೆ -ನಮ್ಮ ನಲ್ಮೆಯ ಮಲ್ಲಿಕಾರ್ಜುನ ಖರ್ಗೆ ಅವರೇ. ಪ್ರಬಲ ಕೋಮುಗಳ ರಾಜಕಾರಣದ ವಿರುದ್ಧ ತೊಡೆತಟ್ಟಿ ನಿಂತ ಖರ್ಗೆಯವರು ಕನಲಿ ಕೆಂಡವಾಗಿ ಸೆಡ್ಡು ಹೊಡೆದ ಫಲವೇ ಹೈದ್ರಾಬಾದ್ ಕರ್ನಾಟಕದ ರಾಜಕಾರಣದಲ್ಲಿ ಖರ್ಗೆ ಯುಗ ಅರಳಲು ಕಾರಣವಾಯಿತು. ಸಮಾನತೆಯ ಹೊಸ ಸಮಾಜ ನಿರ್ಮಿಸುವ ಕನಸು ಅವರ ಆದರ್ಶವಾಗಿದೆ. ಹೈದ್ರಾಬಾದ್ ಕರ್ನಾಟಕದ ಜನತೆಯಲ್ಲಿ ಆತ್ಮಘನತೆಯನ್ನು, ಸ್ವಾಭಿಮಾನವನ್ನೂ ಉದ್ದೀಪಿಸಿದವರು ಖರ್ಗೆ. ಯಾವುದೇ ಒಂದು ರಾಜ್ಯ, ಪ್ರದೇಶ ಅಥವಾ ಜಿಲ್ಲೆ ಅಭೂತಪೂರ್ವವಾಗಿ ಅಭಿವೃದ್ಧಿ ಸಾಧಿಸಬೇಕೆಂದರೆ ಅಲ್ಲಿನ ಜನರು ಸ್ಥಳೀಯ ಮಟ್ಟದಲ್ಲಿ ಸಮರ್ಥವಾಗಿರುವ ಮತ್ತು ಮುಂದಾಲೋಚನೆ ಹೊಂದಿರುವ ನಾಯಕತ್ವವನ್ನು ಬೆಳೆಸಬೇಕಾಗುತ್ತದೆ. ಹಾಗೆ ಬೆಳೆದ ನಾಯಕತ್ವ ತನ್ನ ದೂರದೃಷ್ಟಿ ಮತ್ತು ದಕ್ಷತೆಯಿಂದ ಅಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗಬಲ್ಲದು. ಅಷ್ಟೆ ಅಲ್ಲದೆ ಆ ಸಮಸ್ಯೆಗಳನ್ನು ಪರಿಹರಿಸಲು ತನ್ನ ರಾಜಕೀಯ ಪ್ರಭಾವವನ್ನು ಪರಿಣಾಮಕಾರಿಯಾಗಿ ಬಳಸಬಲ್ಲದು.
ಮಲ್ಲಿಕರ್ಜುನ ಖರ್ಗೆ ಸಮಾಜದ ಕೆಳಸ್ತರದ ಕುಟುಂಬದಿಂದ ಬಂದವರು. ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳ ಪ್ರಭಾವಕ್ಕೆ ಒಳಗಾದವರು. ಅಂಬೇಡ್ಕರ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಅನೇಕ ಸಾಮ್ಯತೆಗಳಿವೆ. ಅಂಬೇಡ್ಕರ್‍ವರಂತೆ ಖರ್ಗೆಯವರೂ ಕೂಡ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ತ್ಯಾಗ, ರಾಷ್ಟ್ರಭಕ್ತಿಗಳನ್ನು ಮೆರೆದವರು. ಕಾನೂನು ಪದವೀಧರರಾದ ಖರ್ಗೆ ಕಲಬುರಗಿಯಲ್ಲಿ ಕೆಲವು ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದವರು. ಜನರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಮಾಡಿ, ಪ್ರಬಲ ಮತ್ತು ಬಹುಸಂಖ್ಯಾತ ಮೇಲ್ಜಾತಿಯ ನಾಯಕರೊಂದಿಗೆ ರಾಜಕೀಯ ಸ್ಪರ್ಧೆಗಿಳಿದು, ರಾಜ್ಯದ ಸಚಿವರಾಗಿ, ಲೋಕಸಭಾ ಸದಸ್ಯರಾಗಿ, ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಅವಕಾಶವಂಚಿತ, ಅಸಹಾಯಕ, ದಮನಿತ ಮತ್ತು ಹಿಂದುಳಿದ ವರ್ಗದವರ ಸುಧಾರಣೆಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತರುವುದರೊಂದಿಗೆ ಅವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ ಅದ್ಭುತ ನಾಯಕರು. ಅವರು ಜನಸಾಮಾನ್ಯರಿಗಾಗಿ ರಾಜಕಾರಣ ಮಾಡುವುದರೊಂದಿಗೆ ಅನೇಕ ರಾಜಕೀಯ ನಾಯಕರುಗಳನ್ನು ಬೆಳೆಸಿದ ರಾಜಕಾರಣಿ ಖರ್ಗೆ. ಅವರ ಜನಪರ ಆಡಳಿತ ಮತ್ತು ರಾಜಕಾರಣ ಸದಾ ಆದರ್ಶ ಮತ್ತು ಅನುಕರಣೀಯವಾದದ್ದು.
ಖರ್ಗೆಯವರ ಕೌಟುಂಬಿಕ ಜೀವನ ಆದರ್ಶವಾದುದು. ಅವರ ಜೀವನ ಸಂಗಾತಿ ರಾಧಾಬಾಯಿಯವರ ಬಗೆಗೂ ಈ ಕೃತಿ ಬೆಳಕು ಚೆಲ್ಲುತ್ತದೆ. ಖರ್ಗೆಯವರ ಚರಿತ್ರಾರ್ಹವಾದ ಪಯಣದಲ್ಲಿ ರಾಧಾಬಾಯಿ ಖರ್ಗೆಯವರು ನೀಡಿದ ಸಹಕಾರ, ತೋರಿಸಿದ ಪ್ರೋತ್ಸಾಹ ಅನನ್ಯವಾದುದು. ಖರ್ಗೆಯವರ ಐದು ಮಕ್ಕಳಾದ ಡಾ. ಜಯಶ್ರೀ, ಡಾ. ಪ್ರಿಯದರ್ಶಿನಿ, ರಾಹುಲ್, ಪ್ರಿಯಾಂಕ್, ಮಿಲಿಂದ್ ಕುರಿತು ಇಲ್ಲಿ ಆದ್ರ್ರವಾದ ಉಲ್ಲೇಖಗಳಿವೆ.
ರಾಜಕೀಯ ಬಲ್ಲವರಿಗೆ, ರಾಜಕಾರಣದ ಕುರಿತು ಆಸಕ್ತಿ ಇದ್ದವರಿಗೆ ಪೋತೆಯವರ ಈ ಕೃತಿಯಲ್ಲಿನ ‘ಸದನದಲ್ಲಿ ಮಲ್ಲಿಕಾರ್ಜುನ ಖರ್ಗೆ’, ‘ಲೋಕಸಭೆಯ ಚರ್ಚೆಯಲ್ಲಿ ಮಲ್ಲಿಕಾರ್ಜುನ ಖರ್ಗೆ,’ ‘ಲೋಕಸಭೆಯ ಬಜೆಟ್ ಅಧಿವೇಶನದ ಭಾಷಣ,’ ‘ರಾಜ್ಯ ಸಭೆಯ ಸದಸ್ಯರಾಗಿ ಮಾಡಿದ ಮೊದಲ ಭಾಷಣ’ ಎಂಬ ಅಧ್ಯಾಯಗಳು ನಿಜಕ್ಕೂ ಕುತೂಹಲಕರವಾಗಿವೆ. ಈ ಅಧ್ಯಾಯಗಳು ಚಾರಿತ್ರಿಕ ಸಂಗತಿಗಳಿಂದ ಓದುಗರ ಮೈ ನವಿರೇಳಿಸುತ್ತವೆ. ಇಲ್ಲಿನ ಮಾಹಿತಿ, ವಿವರಣೆ ಮತ್ತು ಚರ್ಚೆ ಹೆಚ್ಚು ಉಪಯುಕ್ತ.
ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ಸಂಘಟಕ, ದೂರದೃಷ್ಟಿಯ ನೇತಾರ, ಯುವಕರ ಕಣ್ಮಣಿ, ದೀನ ದಲಿತರ ನಾಯಕ, ಹಿಂದುಳಿದ ವರ್ಗಗಳ ಆಶಾಕಿರಣ, ದಕ್ಷ ಆಡಳಿತಾಗರ, ರಾಜಕೀಯ ಮುತ್ಸದ್ದಿ. ದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಒಂಟಿ ಸಲಗದಂತೆ ನರೇಂದ್ರ ಮೋದಿ ಸರಕಾರದ ನಿದ್ದೆಗೆಡಿಸಿದವರು. ಮಲ್ಲಿಕಾರ್ಜುನ ಖರ್ಗೆ ಅವರು ಜೀವಪರ, ಜನಪರ ರಾಜಕಾರಣಿ ಎನ್ನುವುದಕ್ಕೆ ಹತ್ತಾರು ಸಾಕ್ಷಿಗಳಿವೆ. ಅವರು ಪ್ರಗತಿ ಮತ್ತು ಸರ್ವರನ್ನು ಸಮದೃಷ್ಟಿಕೋನದಿಂದ ನೋಡುವ ನೇತಾರ. ಜಾತ್ಯತೀತ ರಾಜಕಾರಣ, ಪ್ರಗತಿ, ಬದ್ಧತೆ, ಸಿದ್ಧಾಂತಗಳಿಗೆ ಅವರು ಸಾಕ್ಷಿಪ್ರಜ್ಞೆ. ಸ್ವಾತಂತ್ರ್ಯೋತ್ತರ ಕರ್ನಾಟಕ-ಭಾರತದ ಸಾಮಾಜಿಕ-ರಾಜಕೀಯ ಕಥನದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಸಾಧನೆ ಮತ್ತು ಸ್ಥಾನ ಗಮನಾರ್ಹವೆಂದು ಲೇಖಕರು ಈ ಕೃತಿಯಲ್ಲಿ ಎತ್ತಿ ತೋರಿಸಿದ್ದು ಕಂಡುಬರುತ್ತದೆ. ಖರ್ಗೆ ಅಪ್ಪಟ ಭಾರತೀಯ ಮನಸ್ಸಿನ ಅನನ್ಯ ಚಿಂತಕ. ಅವರ ರಾಜಕೀಯ ಸಿದ್ಧಾಂತಗಳು, ಜಾತಿ-ವರ್ಗಗಳ ಪರಿಕಲ್ಪನೆಗಳು ಯಾವಾಗಲೂ ಮುಖ್ಯ ಎನ್ನಿಸುತ್ತವೆ. ಭಾರತೀಯ ಸಮಾಜವನ್ನು ಅತ್ಯಂತ ಸೂಕ್ಷ್ಮವಾಗಿ, ಅದರ ಏರಿಳಿತವನ್ನು ಅರಿತು ವಿಶ್ಲೇಷಿಸುವ ಖರ್ಗೆಯವರಿಗೆ ಇಡೀ ಭಾರತದ ಜನ ನೆಮ್ಮದಿಯಲ್ಲಿ, ಸಮಾನತೆಯಲ್ಲಿ, ಭ್ರಾತೃತ್ವ ಭಾವದಲ್ಲಿ ಮತ್ತು ಶೋಷಣೆರಹಿತ ವ್ಯವಸ್ಥೆಯಲ್ಲಿ ಬದುಕಬೇಕೆಂಬ ಹಂಬಲವಿದೆ.
ಮಲ್ಲಿಕಾರ್ಜುನ ಖರ್ಗೆಯವರು ಚುನಾವಣೆ ಬಗ್ಗೆ ಯೋಚಿಸಿದವರಲ್ಲ. ಸದಾ ಬಡವರ, ಶೋಷಿತರ ಮತ್ತು ಮಹಿಳೆಯರ ಪರವಾಗಿ ಆಲೋಚಿಸಿ ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಯತ್ನಿಸಿದವರು. ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಯಲ್ಲಿ ಮುನ್ನಡೆದ ಮಲ್ಲಿಕಾರ್ಜುನ ಖರ್ಗೆಯವರು ಸದಾ ಸಮಾಜಮುಖಿ ನೆಲೆಯಲ್ಲಿ ಹೆಜ್ಜೆ ಹಾಕಿದವರು. ಅವರು ಯಾವಾಗಲೂ ಅಧಿಕಾರಕ್ಕಾಗಿ ಅಸೆಪಟ್ಟವರಲ್ಲ. ತಮಗೆ ನೀಡಿದ ಖಾತೆಯಲ್ಲಿ ‘ಸರಕಾರದ ಕೆಲಸ, ದೇವರ ಕೆಲಸ’ ಎಂದು ತಿಳಿದು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತ ಬಂದವರು. ಅವರು ರಾಜಕಾರಣದ ಏರು-ಪೇರುಗಳ ನಡುವಿನಲ್ಲಿಯೂ ತಮ್ಮದೇ ಆದ ನಿಲುವನ್ನು ಹೊಂದಿದವರು. ಖರ್ಗೆ ತಮ್ಮ ವ್ಯಕ್ತಿತ್ವಕ್ಕೆ ಯಾವುದೇ ಸುಳಿಯಲ್ಲಿ ಸಿಲುಕದ, ಟೀಕೆಗೆ ಗುರಿಯಾಗದ ಅಪರೂಪದ ಮುತ್ಸದ್ದಿ. ರಾಜ್ಯದಲ್ಲಿ ಕಳೆದ ಐದು ದಶಕಗಳ ಕಾಲ ರಾಜಕಾರಣದಲ್ಲಿ ಜನಪರ ಕೆಲಸಗಳನ್ನು ಮಾಡಿಕೊಂಡು ಸುಧೀರ್ಘ ಕಾಲ ರಾಜಕೀಯದಲ್ಲಿದ್ದವರು ಮಲ್ಲಿಕಾರ್ಜುನ ಖರ್ಗೆ. ಅವರು ಕರ್ನಾಟಕ ಮತ್ತು ದೇಶದ ರಾಜಕಾರಣದಲ್ಲಿ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಖರ್ಗೆ ಅಂಬೇಡ್ಕರ್ ವಿಚಾರಗಳ ಹಿನ್ನೆಲೆಯಿಂದ ಬಂದವರು. ಅಂಬೇಡ್ಕರ್‍ರಂತೆ ದಮನಿತ ವರ್ಗಗಳ ಪರವಾದ ಆಲೋಚನೆ ಉಳ್ಳವರು. ಮಲ್ಲಿಕಾರ್ಜುನ ಖರ್ಗೆಯವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳೆಂಬ ತ್ರಿವಳಿ ಸೈದ್ಧಾಂತಿಕ ತಳಪಾಯಗಳಡಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಜನಹಿತಕ್ಕಾಗಿ ಶ್ರಮಿಸಿದವರು.
ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹಿಂದುಳಿದು ಪ್ರಾದೇಶಿಕ ಅಸಮತೋಲನದಿಂದ ನಲುಗುತ್ತಿದ್ದ ಹೈದ್ರಾಬಾದ್ ಕರ್ನಾಟಕದ ಎಲ್ಲಾ ವರ್ಗದ ಜನತೆಗೆ ಆರ್ಟಿಕಲ್ 371 (ಜೆ) ಎಂಬ ವಿಶೇಷ ಸ್ಥಾನಮಾನ ಜಾರಿಗೆ ತರುವ ಮೂಲಕ ಯುವಜನಾಂಗದ ಬದುಕುವ ದಿಕ್ಕನ್ನೇ ಬದಲಿಸಿದವರು ಖರ್ಗೆ. ಈ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಗಬೇಕೆಂದು ಐವತ್ತು ವರ್ಷಗಳವರೆಗೆ ಹೋರಾಟ ಮಾಡಿದ ಮುಂಚೂಣಿ ನಾಯಕ ದಿವಂಗತ ವೈಜನಾಥ ಪಾಟೀಲರನ್ನು ಮರೆಯಲು ಸಾಧ್ಯವಿಲ್ಲ. ಈ ಹೋರಾಟದಲ್ಲಿ ಅನೇಕ ನಾಯಕರ ಪಾತ್ರವಿದೆ. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಗೃಹಮಂತ್ರಿಯಾಗಿದ್ದ ಎಲ್. ಕೆ. ಅಡ್ವಾಣಿ ಈ ಬೇಡಿಕೆಯನ್ನು ತಿರಸ್ಕರಿಸಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ಆದರೆ ಮನಮೋಹನ್ ಸಿಂಗ್ ಸರಕಾರದಲ್ಲಿ ಖರ್ಗೆಯವರು ಕ್ಯಾಬಿನೆಟ್ ಸಚಿವರಾದ ತಕ್ಷಣವೇ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 371 (ಜೆ) ಅನುಷ್ಠಾನಗೊಳಿಸಿದರು. ಇದೊಂದು ರಾಜಕೀಯ ನಿರ್ಣಯ. ಇದನ್ನು ಸಾಧ್ಯವಾಗಿಸುವಲ್ಲಿ ಖರ್ಗೆಯವರ ಮುತ್ಸದ್ದಿತನದ ಪಾತ್ರ ಇದೆ. ಇದು ಹೈದ್ರಾಬಾದ್ ಕರ್ನಾಟಕದ ಇತಿಹಾದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಸಂಗತಿ.
ಅವರು ಹಿಂದುಳಿದ ಪ್ರದೇಶದಲ್ಲಿನ ಜನರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸೂಕ್ತ ಮೀಸಲಾತಿ ಕಲ್ಪಿಸುವ ಐತಿಹಾಸಿಕ ತೀರ್ಮಾನ ಕೈಗೊಂಡು ತಮ್ಮ ನಿಜವಾದ ಸಾಮಾಜಿಕ ಮತ್ತು ಶೈಕ್ಷಣಿಕ ಕಾಳಜಿಯನ್ನು ಸಾಕಾರಗೊಳಿಸಿದರು. ಹೀಗಾಗಿ ಖರ್ಗೆ ಸಾಮಾಜಿಕ-ಪ್ರಾದೇಶಿಕ ನ್ಯಾಯವನ್ನು ಎತ್ತಿ ಹಿಡಿದ ನಾಯಕ. ಆರ್ಟಿಕಲ್ 371 (ಜೆ) ವಿಶೇಷ ಸ್ಥಾನಮಾನದಿಂದ ಈ ಭಾಗದ ಆರು ಜಿಲ್ಲೆಗಳ ಜನರು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಅನುಕೂಲವಾಗಿದೆ.
ಖರ್ಗೆಯವರು ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಮಂತ್ರಿಯಾದ ನಂತರ ಕಲಬುರಗಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ, ಪೊಲೀಸ್ ಭವನ, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಪೊಲೀಸ್ ತರಬೇತಿ ಶಾಲೆ, ರೈಲು ಕೋಚ್ ತಯ್ಯಾರಿಕಾ ಘಟಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್‍ಐ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ ನಿರ್ಮಾಣ, ಆರ್ಟಿಕಲ್ 371 (ಜೆ) ವಿಶೇಷ ಸ್ಥಾನಮಾನ, ಕೃಷಿಗೆ ನೀರಾವರಿ ಸೌಲಭ್ಯ-ಹೀಗೆ ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಅಭಿವೃದ್ಧಿಯ ಹರಿಕಾರರೆಂದು ಗುರುತಿಸಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಖರ್ಗೆ ಕೊಡುಗೆ ಗಮನಾರ್ಹವಾಗಿದೆ. ಆದರೆ ಕಲಬುರಗಿಯ ಜನ ಇದನ್ನು ಮರೆತಿದ್ದಾರೆ. ಹೈದ್ರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ಸೌಲಭ್ಯದಿಂದ ಈ ಪ್ರದೇಶದಲ್ಲಿನ ಹಿಂದುಳಿದ, ಕಡುಬಡವರ ಮಕ್ಕಳು ಈಗ ವೈದ್ಯಕೀಯ, ಎಂಜಿನಿಯರಿಂಗ್, ಅಗ್ರಿಕಲ್ಚರ್ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಅಷ್ಟೆ ಅಲ್ಲದೆ ಸರಕಾರಿ ಉದ್ಯೋಗವನ್ನು ಸರಳವಾಗಿ ಪಡೆಯುತ್ತಿದ್ದಾರೆ.
ಇಷ್ಟೆಲ್ಲಾ ನೂರಾರು ಮಹತ್ವದ ಕೆಲಸ ಮಾಡಿರುವ ಹೈದ್ರಾಬಾದ್ ಕರ್ನಾಟಕದ ಪ್ರಬಲ ನಾಯಕ ಖರ್ಗೆಯವರನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು ಇದೇ ನಮ್ಮ ಕಲಬುರಗಿಯ ಜನರು. ಇದು ಕೇವಲ ಖರ್ಗೆಯವರ ಸೋಲಲ್ಲ, ಪ್ರಜಾಪ್ರಭುತ್ವದ ಸೋಲು. ಲೋಕ ಉಪಕಾರವನ್ನು ಅರಿಯದು. ಆದರೆ ಸತ್ಯ ಯಾವಾಗಲೂ ಗಾಳಿಯಲ್ಲಿ ತೇಲಾಡುತ್ತಲೇ ಇರುತ್ತದೆ. ಜನ ಗಾಳಿಯನ್ನು ಮೂಗಿಗೆ ಏರಿಸಿಕೊಳ್ಳಲೇಬೇಕಲ್ಲ. ಆಗ ಸತ್ಯದ ಅರಿವೂ ಆಗುತ್ತದೆ. ತಡವಾಗಿಯಾದರೂ ಒಬ್ಬ ಸಂತನನ್ನು, ಕನಸುಗಾರ ಕ್ರಾಂತಿಕಾರಿಯನ್ನು ಕಾಲ ನೆನಪಿಸಿಕೊಳ್ಳುತ್ತದೆ. ಕಲಬುರಗಿಯ ಜನರು ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿ ಭವಿಷ್ಯದಲ್ಲಿ ನಡೆಯಬೇಕಾಗಿದ್ದ ಹಲವಾರು ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳು ಖರ್ಗೆಯವರಲ್ಲಿವೆ. ಆದರೆ ಇಂತಹ ಮಹಾನ್ ನಾಯಕನಿಗೆ ರಾಜಕೀಯ ನ್ಯಾಯ ಸಿಕ್ಕಿಲ್ಲ. ಖರ್ಗೆಯವರು ಮುಖ್ಯಮಂತ್ರಿಯಾಗಲೇಬೇಕೆಂಬುದು ಅವರ ಬೆಂಬಲಿಗರ ಆಸೆ. ಅವರ ಜ್ಞಾನ, ಅನುಭವ, ಮುತ್ಸದ್ದಿತನ ಆಧರಿಸಿ ಯಾವುದೇ ಹುದ್ದೆ ನೀಡಿದರೂ ನಿಭಾಯಿಸುವ ಸಾಮಥ್ರ್ಯ ಖರ್ಗೆಯವರಲ್ಲಿದೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಗೃಹ-ಗ್ರಾಮೀಣಾಭಿವೃದ್ಧಿ-ಕಂದಾಯ ಸಚಿವರಾಗಿ, ಕೇಂದ್ರ ರೈಲ್ವೆ ಸಚಿವರಾಗಿ, ರಾಷ್ಟ್ರೀಯ ಕಾಂಗ್ರೆಸ್‍ನ ಸಂಸದೀಯ ನಾಯಕರಾಗಿ ಬೆಳೆದ ಖರ್ಗೆಯವರ ಹಾದಿ ಎಂಥವರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ಕೇವಲ ರಾಜ್ಯಕ್ಕೆ ಸೀಮಿತವಾದ ನಾಯಕರಲ್ಲ, ರಾಷ್ಟ್ರಕ್ಕೆ ಸೀಮಿತವಾದ ನಾಯಕ. ಅವರಲ್ಲಿ ರಾಷ್ಟ್ರ ನಾಯಕನ ಅದ್ಭುತ ಗುಣಗಳಿವೆ. ಆದ್ದರಿಂದ ಅವರು ರಾಷ್ಟ್ರದ ಆಸ್ತಿ. ರಾಜ್ಯಸಭಾ ಸದಸ್ಯತ್ವದ ಹೊಣೆಗಾರಿಕೆ, ಕಾಂಗ್ರೆಸ್ ಪಕ್ಷದ ಉಸ್ತುವಾರಿ, ವಿರೋಧ ಪಕ್ಷದ ನಾಯಕರಾಗಿ- ಹೀಗೆ ನಿತ್ಯ ನಿರಂತರ ಗಡಿಯಾರದಂತೆ ದಿನದ 24 ಗಂಟೆಗಳ ಕಾಲ ಚಿಂತನೆ ಮಾಡುವ, ಮಾರ್ಗದರ್ಶನ ನೀಡುವ ಮಲ್ಲಿಕಾರ್ಜುನ ಖರ್ಗೆ ವಜ್ರದಷ್ಟು ಕಠೋರವೆನಿಸಿದರೂ ಅವರ ಮನಸ್ಸು ಹೂವಿನಂತೆ ಮೃದುವಾದುದು. ಪೂರ್ವಾಗ್ರಹ ಪೀಡಿತರಾಗದೆ ಮುಕ್ತ ಮನಸ್ಸಿನಿಂದ ಖರ್ಗೆಯವರ ಸಾಧನೆಗಳನ್ನು ಗಮನಿಸಿದರೆ ಅವರ ಯೋಗ್ಯತೆ ಏನು? ಸಾಮಥ್ರ್ಯ ಏನು? ಶಕ್ತಿ ಏನು? ಸಾಧನೆಗಳೇನು ಎನ್ನುವುದು ಮನದಟ್ಟಾಗುತ್ತದೆ. ಈ ತಲೆಮಾರಿನ ದಂತಕಥೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಏರಿದ ಎತ್ತರಕ್ಕೆ ಈ ಪ್ರದೇಶದ ಮತ್ತೊಬ್ಬರು ಬೆಳೆಯುವುದು ಕಷ್ಟ. ಒಂದು ಪ್ರಬಲ ನಾಯಕತ್ವ ಇದ್ದರೆ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಬಹುದು ಎನ್ನುವುದಕ್ಕೆ ಖರ್ಗೆ ಒಂದು ಜೀವಂತ ಉದಾಹರಣೆಯಾಗಿ ನಮ್ಮೆದುರಿಗಿದ್ದಾರೆ.
ಈ ಕೃತಿ ಮಲ್ಲಿಕಾರ್ಜುನ ಖರ್ಗೆಯವರ ಜೀವನಕಥನ ಮಾತ್ರವಾಗದೆ, ಆಧುನಿಕ ಕರ್ನಾಟಕ-ಭಾರತದ ಕಥಾಮಂಜರಿಯೂ, ಪ್ರಜಾಪ್ರಭುತ್ವದ ತಾತ್ವಿಕ ಮತ್ತು ಪ್ರಾಯೋಗಿಕ ನಿರೂಪಣೆಯೂ ಆಗಿದೆ. ಖರ್ಗೆಯವರ ಹೋರಾಟ, ಸರಳ ನಡತೆ, ಗಂಭೀರತೆ, ಪ್ರಾಮಾಣಿಕತೆ, ಸಾಮಾಜಿಕ-ಶೈಕ್ಷಣಿಕ ಕಾಳಜಿ, ವೈಚಾರಿಕ ಪ್ರಜ್ಞೆ, ನಿಷ್ಠಾವಂತ ಗುಣಗಳು ಯುವ ಪೀಳಿಗೆಗೆ ಆದರ್ಶವಾದವುಗಳು. ಹೊಳಪು ಕಾಗದ ಮತ್ತು ವಿಶಿಷ್ಟ ವಿನ್ಯಾಸದಿಂದಾಗಿ ಈ ಕೃತಿ ಮೊದಲ ನೋಟಕ್ಕೆ ಓದುಗರ ಗಮನ ಸೆಳೆಯುತ್ತದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ- ಮೊದಲಾದ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಮಲ್ಲಿಕಾರ್ಜುನ ಖರ್ಗೆಯವರ ವ್ಯಕ್ತಿತ್ವ ಪರಿಚಯಿಸುವ ಲೇಖಕರ ಪ್ರಯತ್ನ ಯಶಸ್ವಿಯಾಗಿದೆ. ಎಚ್. ಟಿ. ಪೋತೆಯವರು ಖರ್ಗೆಯವರ ಜೀವನದ ಏರಿಳಿತಗಳನ್ನು ಇಲ್ಲಿ ಆದ್ರ್ರವಾಗಿ ಮತ್ತು ವಸ್ತುನಿಷ್ಠವಾಗಿ ಚಿತ್ರಿಸಿದ್ದಾರೆ. ಸರಳವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಪಡೆದ ಈ ಕೃತಿ ಪ್ರತಿಯೊಬ್ಬರ ವೈಯಕ್ತಿಕ ಗ್ರಂಥ ಭಂಡಾರದಲ್ಲಿ ಇರಲೇಬೇಕಾದ ಮಹತ್ವದ ಗ್ರಂಥವಾಗಿದೆ.
-ಸಿ. ಎಸ್. ಭೀಮರಾಯ (ಸಿಎಸ್ಬಿ)
ಆಂಗ್ಲ ಉಪನ್ಯಾಸಕರು
ಅ/ಔ. ಎನ್ .ಎಸ್. ಜಾಗಿರದಾರ್
ಲಕ್ಷ್ಮೀ ನಗರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ,
ಶಹಾಪುರ, ಜಿ|| ಯಾದಗಿರಿ-585223
ಮೊ. ನಂ: 9741523806/9008438993.
ಇ-ಮೇಲ್: csbhimaraya123@gmail.com
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ