- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
- ನಕ್ಷತ್ರಗಳ ನೆಲದ ನಂಟು - ಅಕ್ಟೋಬರ್ 29, 2021
ಸೆಪ್ಟಂಬರ್ ೩೦,೧೯೯೦ -ಅಪಘಾತದ ಆಘಾತ
ಜಕ್ಕಲಿಯಿಂದ ಕೋಡಿಕೊಪ್ಪದ ವೀರಪ್ಪಜ್ಜನ ವರ ಮಠಕ್ಕೆ ಸಾಂಪ್ರದಾಯಿಕ ವಾಗಿ ಹೋಗಲು ಟ್ರಾಕ್ಟರ್ ಪೂಜೆ ನಡೆಸಿದ್ದೆವು ನಮ್ಮ ಮಿತ್ರ ಬಸವರಾಜ್ ಮುಗಳಿಯವರ ಬಂದವರೆ ..ಶಂಕರ್ ನಾಗ್ ಹೋಗಿ ಬಿಟ್ಟರು.ಡಾವಣಗೇರಿ ಬಳಿ ಬಾಳ ದೊಡ್ಡ ಆ್ಯಕ್ಸಿಡೆಂಟ್ ಆಗಿ.. ಸ್ಪಾಟ್ ಡೆತ್ ಆಗಿದೆ.. ಅವರ ಹೆಂಡ್ತಿ ಮಗಳೂ ಗಂಭೀರವಾಗಿ ಗಾಯಗೊಂಡಿದ್ದಾರೆ.. ಅವರನ್ನು ದವಾಖಾನೆಗೆ ಓಯ್ದಿದಿದ್ದಾರೆ.. ಎಂದು ಒಂದೇ ಉಸಿರಿನಲ್ಲಿ ಹೇಳಿದರು.. ನನಗೆ ಒಂದು ಕ್ಷಣ ಏನು ಹೇಳುವುದು ಎಂದು ತಿಳಿಯದೇ ಗಾಬರಿಯಾದೆ ಕ್ರಮೇಣ ನಮ್ಮ ಸಮೀಪದವರನ್ನು ಕಳೆದು ಕೊಂಡು ದುಗುಡ ಹೃದಯದಲ್ಲಿ ಆವರಿಸಿ ಕಣ್ಣು ಗಳಲ್ಲಿ ನೀರು ತುಂಬಿದವು.ಟಿವ್ಹಿ ಯಲ್ಲಿ ಎಲ್ಲಾ ವಿವರಗಳು ಬರುತ್ತಿದ್ದವು.ಬಹಳ ವ್ಯಥೆ ಎನಿಸಿತು.
ನಮ್ಮ ದೊಡ್ಡಪ್ಪ ದಿ ಜ್ಞಾನದೇವ ದೊಡ್ಡಮೇಟಿ ಯವರು ನಮ್ಮ ಮನೆಗೆ ಬಂದು ನಮ್ಮ ತಂದೆ ದಿ.ಜಂಬುನಾಥ ರೊಂದಿಗೆ ಈ ಭೀಕರ ಅಪಘಾತದ ಮಾತನಾಡುತ್ತ ಶಂಕರನಾಗ್ ರವರಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ದುರಂತದ ಸಾವು ತಮಗೆ ಬಹಳ ಕಳವಳವನ್ನುಂಟು ಮಾಡಿದೆ ಎಂದು ತಮ್ಮ ಸಂಕಟವನ್ನು ತೋಡಿಕೊಂಡರು. ನಮ್ಮ ತಂದೆಯಯವರೂ ರಂಗಭೂಮಿ.. ಸಿನಿಮಾಗಳ ಅಭಿಮಾನವುಳ್ಳವರು.. ಅವರೂ ಸಹ ಇದು ..ದುರ್ದೈವ ತಮಗೂ ಕೂಡಾ ಏನು ಹೇಳುವುದು ತೋಚದಾಗಿದೆ.. ನಮ್ಮೂರಲ್ಲಿಯೇ ನಮ್ಮೂರ ನಮ್ಮವರಿಗೇ ಆದ ಈ ಆಘಾತವಾದಂತದ್ದಾಗಿದೆ ಎನ್ನುವಂತೆ ಎನಿಸಿದೆ ಎಂದು ಭಾವುಕರಾದರು. ನಮ್ಮ ಇಡಿ ಊರಿನಲ್ಲಿ ಅಂದು ದುಃಖದ ಛಾಯೆ ಆವರಿಸಿತು.. ಎಲ್ಲಿ ನೋಡಿದರೂ ಯುವಕರು ಅಲ್ಲಲ್ಲಿ ಇದೇ ಅಪಘಾತ ಕುರಿತು ಮಾತನಾಡುತ್ತಾ ಗುಂಪು ಗುಂಪಾಗಿ ನಿಂತಲ್ಲಿಯೆ ವೇದನೆ ಪಡುತ್ತಿದ್ದರು. ನನಗೊ ಶಂಕರನಾಗ್ ರನ್ನು ನಾನು ಎಲ್ಲೆಲ್ಲಿ ನೋಡಿದ ನೆನಪುಗಳು ಬರತೊಡಗಿದವು.
ಎಪ್ರಿಲ್ ೧,೧೯೮೯ – ರಂಗಭೂಮಿಯ ಝಲಕ್
ಬೆಂಗಳೂರಿನ ಚಿತ್ರ ಕಲಾ ಪರಿಷತ್ ನಲ್ಲಿ ನಾಗಮಂಡಲ ನಾಟಕ ನೋಡಲು ಹೋಗಿದ್ದೆ.. ಅಲ್ಲಿನ ಸಹಜ ದೊಡ್ಡ ಮರದ ಕೆಳಗೆ ನಾಗಮಂಡಲ ನಾಟಕದ ರಂಗಸಜ್ಜಿಕೆ ಯನ್ನು ನಿರ್ಮಿಸಿದ್ದರು..ಈ ನಾಟಕಕ್ಕೆ ಬೇಕಾದ ಹಳ್ಳಿ ಯ ಗುಡಿಸಲು.. ಮತ್ತು ದೊಡ್ಡ ಮನೆ..ನಾಗಪ್ಪನ ಹುತ್ತ ಎಲ್ಲವೂ ಅತ್ಯಂತ ಸಹಜವಾಗಿ ಕಾಣುವಂತೆ ಮಾಡಿದ್ದರು.. ಅವರು ನಾಯಕ ಪಾತ್ರದಲ್ಲಿ ಅಭಿನಯಿಸಿ ದ್ದರು.. ನಾಯಕಿಯಾಗಿ ಅವರ ಪತ್ನಿ ಅರುಂಧತಿ ನಾಗ್..ಕೂಡಾ ಬಹಳ ಚೆನ್ನಾಗಿ ಅಭಿನಯಿಸಿದರು.. ನಾಟಕವು ಪ್ರತಿ ದಿನವೂ ಯಶಸ್ವಿ ಯಾಗಿ ನಡೆದು ಬೆಂಗಳೂರಿನ ರಂಗಭೂಮಿ ಪ್ರಿಯರಿಗೆ ಬಹಳ ವಿಶೇಷ ಅನುಭೂತಿ ಯನ್ನು ಕೊಟ್ಟಿದ್ದು ಶಂಕರ್ ನಾಗ ದಂಪತಿಗಳ ರಂಗಭೂಮಿಯನ್ನು ನಾವೀನ್ಯತೆ ಯತ್ತ ತಂದದುದ್ಯೋಕವಾಗಿತ್ತು..
ಈ ನಾಟಕದ ಬಿಡುವಿನ ಸನ್ನಿವೇಶ ಗಳಲ್ಲಿ ಶಂಕರ್ ನಾಗ ನಮ್ಮ ಮುಂದಿನ ಸಾಲಿನ ಪ್ರೇಕ್ಷಕರೊಡನೆ ಪಾತ್ರದ ಉಡುಪಿನಲ್ಲಿ ಯೇ ಕಾಫಿ ಹೀರುತ್ತಾ ನಾಟಕದ ಪರಿಣಾಮ ಗಳನ್ನು ಚರ್ಚಿ ಸುತ್ತಿದ್ದರು.. ಸಲಹೆಗಳನ್ನು ಕೇಳುತ್ತಿದ್ದರು..ನಾವು ಅವರಿಗೆ ಮೆಚ್ಚುಗೆ ನಗೆಯ ತೋರಿದೊಡನೆ ಅವರು ಒಂದು ಕ್ಷಣ ತಮ್ಮ ಗೆಲುವಿನ ನಗೆ ಬೀರಿದರು.. ತಮ್ಮ ಪ್ರವೇಶ ಬಂದ ತಕ್ಷಣವೇ ತಮ್ಮ ಭಾಗದ ಮಾತುಗಳನ್ನಾಡುತ್ತ ರಂಗವನ್ನು ಪ್ರವೇಶಿಸುತ್ತಿದ್ದರು ಎಲ್ಲವೂ ಅಂದಿನ ಲೈಟ್ ಎಫೆಕ್ಟ್ಸ್ ನಲ್ಲಿ ಅವರು ನಮಗೆ ಮಿಂಚು ಹೊದ್ದು ಕೊಂಡವರಂತೆ ಕಂಡರು ಅಷ್ಟೊಂದು ಚುರುಕು..ಅಲ್ಲಿ ಎಲ್ಲವೂ ಲವಲವಿಕೆ.. ಅದು ಶಂಕರ್ ನಾಗ್..
ಮತ್ತೆ ನಮ್ಮ ಕಾಲೇಜಿನ ದಿನಗಳಲ್ಲಿ 1978
79ರಲ್ಲಿ ಶ್ರೀ ಅನ್ನದಾನೇಶ್ವರ ಕಾಲೇಜ್ ನರೇಗಲ್ ನಲ್ಲಿ ಬಿ ಎ ಎರಡನೇಯ ವರ್ಷ ದ ವಿದ್ಯಾರ್ಥಿಗಳು.. ಈ ವರ್ಷ ನಮ್ಮ ವಾರ್ಷಿಕ ಸ್ನೇಹ ಸಮ್ಮೇಳನ ದ ಮುಖ್ಯ ಅತಿಥಿಗಳಾಗಿ ಶಂಕರನಾಗ್ ರನ್ನು ಆಮಂತ್ರಿಸ ಬೇಕೆಂದು ತೀರ್ಮಾನಿಸಿದ್ದೆವು.
ಅದಕ್ಕೆ ಪ್ರೊ ಅರವಿಂದ ಸಜ್ಜನ ರವರು ಸಹ ಒತ್ತಾಸೆ ಯಿಂದ ನಮ್ಮ ಕಾಲೇಜ್ ನ ವಿದ್ಯಾರ್ಥಿ ಕಾರ್ಯದರ್ಶಿ ಗಂಗಾಧರ ಹಲಗೇರಿ ಯವರು ಶಂಕರ್ ನಾಗ್ ರನ್ನು ಕರೆದು ಕೊಂಡು ಬರಲು ಬೆಂಗಳೂರಿಗೆ ಹೋದರು. ಆಗ ಶಂಕರ್ ನಾಗ್ ರವರು ರಾಮನಗರ ಬಳಿ ಅವರ ಎರಡನೆಯ ಸಿನಿಮಾ ಸೀತಾರಾಮು ಸಿನಿಮಾ ಶೂಟಿಂಗ್ ನಲ್ಲಿದ್ದರು. ಅಲ್ಲಿ ಅವರನ್ನು ಭೇಟಿಯಾಗಿ ನಮ್ಮ ಕಾಲೇಜಿನ ಪ್ರಾಂಶುಪಾಲ ರು ಬರೆದ ಆಮಂತ್ರಣ ಪತ್ರವನ್ನು ಗಂಗಾಧರ್ ಹಲಗೇರಿಯವರು ಕೊಟ್ಟರು.. ಅವರು ಓದಿ ಬಹಳ ಸಂತೋಷ ಗೊಂಡು ಕೃತಜ್ಞತೆಗಳನ್ನು ಪ್ರಾಂಶುಪಾಲರಿಗೆ ಹೇಳಿದರು. ಅಲ್ಲದೇ ತಮಗೆ ಇದು ಎರಡನೇ ಸಿನಿಮಾ ಇದ್ದು ಶೂಟಿಂಗ್ ನ ದಿನಾಂಕ ಗಳು ನಿಮ್ಮ ಸ್ನೇಹ ಸಮ್ಮೇಳನ ದಿನವೂ ಇದ್ದು ಬರಲು ಸಾಧ್ಯವಾಗದ್ದಕ್ಕೆ ಅಸಹಾಯಕತೆ ವ್ಯಕ್ತಪಡಿಸಿದರು. ಮತ್ತೊಮ್ಮೆ ಬರುವೆ ಎಂದರು ದಯಮಾಡಿ ತಪ್ಪು ತಿಳಿಯಬೇಡಿ ಎಂದೂ ವಿನಂತಿಸುವ ಸೌಜನ್ಯ ದ ಆತ್ಮೀಯತೆ ತೋರಿದ್ದರು.
ಚುನಾವಣಾ ಗಲಾಟೆ
ಬೆಂಗಳೂರಿಗೆ ಹೋಗಿ ಬಂದ ನಮ್ಮ ಸ್ನೇಹಿತರು ಅವರೊಂದಿಗೆ ಭೇಟಿಯ ನೆನಪುಗಳನ್ನು ಅವರ ಅತಿಥಿ ಸತ್ಕಾರಗಳನ್ನು ಬಹಳ ಅಭಿಮಾನ ದಿಂದ ಹೇಳಿದ್ದರು.. ಅದೇ ಶಂಕರ್ ನಾಗ್ ರೆನ್ನುವದು.
ಮತ್ತೆ ಶಂಕರ್ ನಾಗ್ ನನ್ನೆದುರೆ ನನ್ನೊಡನೇ ನೇರವಾಗಿ ಮಾತನಾಡುವ ಸನ್ನಿವೇಶ ವನ್ನು ನಾನು ಹೇಳದೇ ಇರಲಾರೆ.. 1989ರ ದಿನಗಳವು. ನಮ್ಮ ಕರ್ನಾಟಕದ ಲ್ಲಿ ಚುನಾವಣೆ ಗಳು ನಡೆದಿದ್ದವು.. ರೋಣ ಮತಕ್ಷೇತ್ರದಲ್ಲಿ ನಮ್ಮ ದೊಡ್ಡಪ್ಪ ಜ್ಞಾನದೇವ ದೊಡ್ಡಮೇಟಿ ಜನತಾಪಕ್ಷದ ಅಭ್ಯರ್ಥಿಯಾಗಿದ್ದರು. ಆ ಚುನಾವಣಾ ಪ್ರಚಾರಕ್ಕಾಗಿ ಶಂಕರ್ ನಾಗ್ ರವರ ಭೇಟಿಯನ್ನು ಗಜೇಂದ್ರಗಡದಲ್ಲಿ ಸಾರ್ವಜನಿಕ ಸಭೆಯನ್ನು ನಿಗದಿಪಡಿಸಲಾಯಿತು…
ಶಂಕರ್ ನಾಗ್ ರವರನ್ನು ಬದಾಮಿಯಿಂದ ಗಜೇಂದ್ರಗಡ ಕ್ಕೆ ಕರೆಯಲು ನಮ್ಮ ಸ್ನೇಹಿತರಾದ ನಮ್ಮ ರೋಣದ ಜನತಾ ಪಕ್ಷ ದ ಅಧ್ಯಕ್ಷ ರಾದ ಕಳಕಪ್ಪ ಗಡಿಯಪ್ಪನವರು ಮತ್ತು ಚೆನ್ನು ಪಾಟೀಲರೊಂದಿಗೆ ಬದಾಮಿಗೆ ಪ್ರಯಾಣ ಬೆಳೆಸಿದೆವು.. ಶಂಕರ್ ನಾಗ್ ರವರು ಅಲ್ಲಿ ಭಾಷಣ ಮುಗಿಸಿದ ತಕ್ಷಣ ಜನರೊಂದಿಗೆ ಮಾತನಾಡುತ್ತ ಬಂದು ತಮ್ಮ ಮೆಟಡೊರ್ ನಲ್ಲಿ ಕುಳಿತರು. ರೋಣ ತಾಲೂಕಿನ ಗಜೇಂದ್ರಗಡ ಕ್ಕೆ ಹೋಗುವದು.. ಅಲ್ಲಿ ಗೆ ಹೋಗಲು ಕರೆಯಲು ಬಂದರಿರುವರು ಎಂದು ಅವರ ಸಹಾಯಕರು ಹೇಳಿದಾಗ ಶಂಕರನಾಗ ತಮ್ಮ ವಾಹನದಲ್ಲಿ ಬರುವಂತೆ ನಮ್ಮ ಮೂವರನ್ನು ಕರೆದರು.ಬನಶಂಕರಿ..ಬೇಲೂರು ಸರ್ಜಾಪುರ ಶಾಂತಗಿರಿ ಮಾರ್ಗದ ಮೂಲಕ ಗಜೇಂದ್ರಗಡ ಕ್ಕೆ ಹೊರಟೆವು.. ಬಿಳಿ ಕುರ್ತಾ ಮತ್ತು ಬಿಳಿ ಪ್ಯಾಂಟ್.. ಎಂದಿನ ಚಿಕ್ಕ ದಾಡಿ ಇರುವ ನಗುವ ಮೊಗದ ಶಂಕರ್ ನಾಗ್ ಈಗ ನಮ್ಮೆದುರು ಕುಳಿತಿದ್ದರು. ಅವರ ಹಣೆಗೆ ಬ್ಯಾಂಡೇಜು ಕಟ್ಟಿ ಕೊಂಡಿದ್ದರು. ಚುನಾವಣಾ ಪ್ರಚಾರ ದಲ್ಲಿ ಮಂಡ್ಯ ಬಳಿ ಕಲ್ಲೇಟಿನಿಂದ ಅವರ ಹಣೆಗೆ ಗಾಯವಾಗಿತ್ತು.. ಬ್ಯಾಂಡೇಜ್ ಮೇಲೆ ರಕ್ತದ ಕಲೆ ಇದ್ದವು .ಹೇಗಾಯಿತು ಸರ್ ನಿಮ್ಮ ಹಣೆಗೆ ಈ ಗಾಯ ಎಂದು ಕೇಳಿದಾಗ.. ಚುನಾವಣೆ ಗಲಾಟೆ ಯಾರೋ ಕಲ್ಲೆಸದರು ನನಗೇ ಬಿತ್ತು.. ಇದೆಲ್ಲಾ ಇರೋದೆ ಸರ್.. ಲಘುವಾಗಿ ಎಂದರು.. ಈಗೇನು ನೋವು ಕಡಿಮೆಯಾಗಿದೆ. ಚೆನ್ನು ಪಾಟೀಲರು ಅವರಿಗೆ ನನ್ನ ಮತ್ತು ಗಡಿಯಪ್ಪನವರ ಪರಿಚಯ ಮಾಡಿಸಿದರು.
ಜಾನಪದ ಕಥೆ, ಬಯಲುಸೀಮೆ ಇತ್ಯಾದಿ
ನಾನು ಅವರೊಂದಿಗೆ ಅವರು ಚಿತ್ರ ಕಲಾ ಪರಿಷತ್ ನಲ್ಲಿ ಯ ನಾಗಮಂಡಲ ನೋಡಿದ ಬಗ್ಗೆ ಹೇಳಿದೆ.. ಆಗ ಅವರು ಕಣ್ಣರಳಿಸಿ ಕೇಳಿದರು.. ಆ ನಾಟಕ ದ ಅನುಭವಗಳ ಬಗ್ಗೆ ನಾನು ಹೇಳಿದೆ.. ಉತ್ತರ ಕರ್ನಾಟಕದ ರಂಗಭೂಮಿ ಯ ಬಗ್ಗೆ ಮಾತನಾಡಿದರು. ನಾವು ಸಹ ಈ ಬನಶಂಕರಿ ಜಾತ್ರೆ ಯ ಸಮಯದಲ್ಲಿಮೂರು ನಾಲ್ಕು ತಿಂಗಳು ನಾಟಕಗಳು ನಡೆಯುತ್ತವೆ ಜನರೂ ನಾಟಕಗಳನ್ನು ನೋಡತಾರೆ ಎಂದು ಹೇಳಿ ದಾಗ ಅವರು ನಿಮ್ಮ ಭಾಗದ ರಂಗಭೂಮಿ ಪ್ರಿಯರೆಂದರು.. ತಮಗೂ ಇಲ್ಲಿ ನಡೆಯುವ ವೃತ್ತಿ ಪರ ನಾಟಕಗಳನ್ನು ನೋಡುವಾಸೆ ಕರೆಯಿರಿ ನಮ್ಮನ್ನೂ ಎಂದರು. ಮೂಡಲ ಪಾಯ ದೊಡ್ಡಾಟಗಳ ಬಗ್ಗೆ ಯೂ ವಿಚಾರಿಸಿದರು .ಈ ಚುನಾವಣಾ ಗದ್ದಲಗಳ ನಡುವೆಯೂ ಸ್ಥಳೀಯ ವಿಷಯಗಳನ್ನು ತಿಳಿಯುವ ಆಸಕ್ತಿ ಗೆ ನನಗೆ ಬಹು ಅಚ್ಚರಿ ಮೂಡಿಸಿತ್ತು. ನಾಗೇಂದ್ರಗಡ ಹೊಗರಿಕೆರೆಯ ಹೊಂಬಾಳೆಯ ನಾಟಕ ದ ಬಗ್ಗೆ ನಾನು ಹೇಳಿದೆ… ಆ ನಾಟಕದಲ್ಲಿ ಆ ಊರಿಗೆ ಬರುವ ದೊರೆ ಬೇಟೆಗೆ ಬಂದಾಗ ಅಲ್ಲಿ ಒಬ್ಬಳನ್ನು ಪ್ರೀತಿಸುತ್ತಾನೆ ಕೊನೆಗೆ ಅವಳ ತಾಯಿ ತನ್ನ ಪ್ರೇಯಸಿ ಎಂದು ತಿಳಿದು.. ಈಗ ತಾನು ಅನುರಕ್ತ ರಾದವಳು ತನ್ನ ಮಗಳೆಂದು ಗೊತ್ತಾದಾಗ ಘೋರವಾಗಿ ಪರಿತಪಿಸುತ್ತಾನೆ..ಎಂದು ನಾನು ಸಂಕ್ಷಿಪ್ತ ವಾಗಿ ಈ ಜಾನಪದ ಹಿನ್ನಲೆಯ ಕಥೆ ಹೇಳಿದಾಗ ಅವರು ಬೆರಗಿನಿಂದ ನೋಡಿ ಸರ್ ನಮ್ಮ ಜಾನಪದ ಕಥೆಗಳಲ್ಲಿ ಈಡಿಪಸ್ ಅಂಶಗಳು ಇರುವ ಬಗ್ಗೆ ಅಚ್ತರಿಗೊಂಡರು.. ಇದು ಒಳ್ಳೆಯ ಜನಫದ ನಾಟಕವಾಗುವದು ಎಂದರು..
ಅವರು ಕಿಡಕಿಯಲ್ಲಿ ಹೊರಗೆ ನೋಡುತ್ತಾ ಇಲ್ಲಿ ಮರಗಳು ಬಹಳ ಕಡಿಮೆ. ಬರಿ ಬಯಲು ಹೊಲಗಳೆಂದು ನಕ್ಕರು.. ಅದಕ್ಕೆ ಸರ್ ನಮ್ಮ ಭಾಗವನ್ನು ಬಯಲು ಸೀಮೆ ಎನ್ನುವುದು.. ಎಂದಾಗ ಬಹಳ ಉತ್ಸಾಹದಿಂದ ನಕ್ಕರು.. ಮತ್ತೆ ರಾಜಕೀಯ ವಿಚಾರ ಗಳ ಬಗ್ಗೆ ಮಾತನಾಡುತ್ತಾ ಜನತಾ ಪಕ್ಷ ವಿಭಜನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು ..ಜನರು ರಾಮಕೃಷ್ಣ ಹೆಗಡೆಯವರ ಪರ ನಿಲವು ತಾಳಬೇಕು.. ಜನತಾ ಪಕ್ಷ ಬಲವಾಗಿ ನಿಲ್ಲಬೇಕು.. ರೈತರಿಗೆ ಬೇಕಾಗುವ ಕೆಲವು ಕೆಲಸಗಳನ್ನು ಮಾಡಿದ್ದಾರೆ.. ನೀವು ಎಲ್ಲರೂ ಚೆನ್ನಾಗಿ ಕೆಲಸಮಾಡಿರಿ ಎಂದು ಹೇಳಿದರು..
ಗಜೇಂದ್ರ ಗಡ ಬಂದಿತು… ಈಗಿರುವ ಕಾಲ ಕಾಲೇಶ್ವರ ಸರ್ಕಲ್ ಬಳಿ ಬಹಳ ಜನ ಸೇರಿದ್ದರು.. ಕುಷ್ಟಗಿ ರಸ್ತೆಯಲ್ಲಿ ವಿಶಾಲವಾದ ಬಯಲಿನಲ್ಲಿ ಸುಮಾರು ಹತ್ತು ಸಾವಿರ ಜನರು ನೆರೆದಿದ್ದರು. ಗಜೇಂದ್ರ ಗಡ ಊರಿನ ಹಿರಿಯರು ವೀರಭದ್ರಪ್ಪ ನೂಲ್ವಿ.. ಅಯ್ಯಪ್ಪ ಅರಿಕೇರಿ ಬಾಬೂರಾವ್ ಶಿರೋಡ್ಕರ್.. ಅಜಿತ್ ಸಿಂಹ ಘೋರ್ಪಡೆ..ಶ್ರೀ ಶೈಲಪ್ಪ ಬಿದರೂರ ಮಾಜಿ ಶಾಸಕರು.. ಕಳಕಪ್ಫ ಬಂಡಿಯವರು ಈಗಿನ ಶಾಸಕರು.. ಬಿ ಎಮ್ ಸಜ್ಜನರ ವಕೀಲರು ಈಶಣ್ಣ ಸೊನ್ನದ, ಶರಣಪ್ಪ ರೇವಡಿ.. ತೇಜೂ ಬಾಗಮಾರ, ಕೋರಧಾನ್ಯಮಠ, ಪುರ್ತಗೇರಿ ಮೋಹಿತೆಯವರು ಮತ್ತು ನಾಗೇಂದ್ರಗಡದ ಶಿವಾನಂದ ಮಠದ ಎಲ್ಲರೂ ಸಭೆಯನ್ನು ಸಂಘಟಿಸಿದ್ದರು. ಸ್ವಾತಂತ್ರ್ಯ ಯೋಧರಾದ ಹುಲ್ಲೂರ ವೆಂಕನಗೌಡರು ರೋಣದ ಈಶಣ್ಣ ಗಡಗಿ, ಶ್ರೀಪಾದ ರಾವ್ ಕುಲಕರ್ಣಿ ಸೋಮಣ್ಣ ಹರ್ಲಾಪೂರ. ವೆಂಕಣ್ಣ,ಬಂಗಾರಿ.. ಗುರುರಾಜ ಕುಲಕರ್ಣ ಜಕ್ಶಲಿಯ ಸುರೇಶ ಬಾಬು ಅರಹುಣಸಿ,ಶಾವಪ್ಪ ಜಂಗಣ್ಣವರ ಬಸವರಾಜ ರಂಗಣ್ಣವರ ಬಂದಿದ್ದರು ಶಂಕರ ನಾಗ್ ರವರನ್ನು ಅಧ್ಯಕ್ಷರಾದ ಕಳಕಪ್ಪ ಗಡಿಯಪ್ಪನವರು ಮತ್ತು ಬಿ ಎಮ್ ಸಜ್ಜನರವರು ಶಿವಾನಂದ ಮಠದ ರವರು ಕರೆದು ಕೊಂಡು ವೇದಿಕೆ ಏರಿದರು.. ಜ್ಞಾನದೇವ ದೊಡ್ಡಮೇಟಿಯವರು ಮೊದಲು ಮಾತನಾಡಿದರು..
ನಂತರದಲ್ಲಿ ಶಂಕರನಾಗ ಮಾತನಾಡಿ ಜನತಾ ಪಕ್ಷದ ಪರವಾಗಿ ಮತ ಚಲಾಯಿಸಿ ಎಂದು ಹೇಳಿ ಜನತಾ ಪಕ್ಷದ ರೈತರ ಗ್ರಾಮೀಣ ಅಭಿವೃದ್ಧಿಯಲ್ಲಿನ ವಿಚಾರ ಗಳನ್ನು ಪ್ರಸ್ತಾಪಿಸಿದರು.ಜನರೂ ಶಂಕರನಾಗ್ ರ ಮಾತುಗಳನ್ನು ಆಸಕ್ತಿಯಿಂದ ಆಲಿಸಿದರು..ನಂತರ ಅವರು ಯಲಬುರ್ಗಾಕ್ಕೆ ಪ್ರಯಾಣ ಬೆಳೆಸಿದರು. ಹೋಗುವಾಗ ಎಲ್ಲರಿಗೂ ನಗು ನಗುತ್ತ ಹಸ್ತ ಲಾಗವ ಕೊಡುತ್ತ ತಮ್ಮ ವಾಹನದಲಿ ಕುಳಿತರು.. ಕೆಲವು ಯುವಕರು,ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಅವರಿಂದ ಅಟೋಗ್ರಾಫ್ ಪಡೆಯುತ್ತಿದ್ದರು.. ಶಂಕರನಾಗ್ ರವರು ಎಲ್ಲರೊಡನೆ ಮಾತನಾಡುತ್ತ ಯಲಬುರ್ಗಾ ಊರಿಗೆ ಪ್ರಯಾಣ ಬೆಳೆಸಿದರು. ಅವರು ಪ್ರಯಾಣಿಸಿದ ವಾಹನ ಹೋಗುತ್ತಿದ್ದಂತೆ, ನನಗೆ ಅವರ ಮೊದಲನೇ ಸಿನಿಮಾ ಚಿತ್ರದುರ್ಗ ಬಸವೇಶ್ವರ ಟಾಕೀಸ್ ನಲ್ಲಿ ನೋಡಿದ ಒಂದಾನೊಂದು ಕಾಲದಲ್ಲಿನ ಹುರಿಗಟ್ಟಿದ ಮೈಕಟ್ಟಿನ ವೀರಯೋಧನ ಪಾತ್ರಧಾರಿ..ಮಿಂಚಿನ ಓಟದ ಸೀತಾರಾಮು,ನೋಡಿ ಸ್ವಾಮಿ ನಾವಿರೋದೆ ಹೀಗೆ,ಸಾಂಗ್ಲಿಯಾನ,ಮೂಗನ ಸೇಡು,ಆರದಗಾಯ,ಗೀತಾ ಈ ಸಿನಿಮಾಗಳ ನಾಯಕನೊಡನೆ ಮಾತನಾಡಿದ್ದು, ಈ ಪಾತ್ರಗಳು ನನ್ನ ಕಣ್ಮುಂದೆ ಬಂದು ಹೋದವು…
ಮಾಸದ ನೆನಪು
ಇಂದಿಗೆ ಸರಿಯಾಗಿ ಮೂವತ್ತೊಂದು ವರ್ಷಗಳ ಜರುಗಿ ಹೋದವು. ಈಗಲೂ ಅವರ ಅಟೋ ರಾಜ ಇಮೇಜ್ ಇನ್ನೂ ಮಾಸಿಲ್ಲ.. ರಾಜ್ಯಾದ್ಯಂತ ಅವರ ಹೆಸರಿನಲ್ಲಿ ಆಟೋ ಸ್ಟಾಂಡ್ ಗಳಿವೆ.. ರಿಕ್ಷಾಗಳಲ್ಲಿ ಅವರ ಚಿತ್ರ ಗಳು ಅಲಂಕರಿಸಿವೆ.. ಇದು ಅವರ ಮೇಲಿನ ಅಭಿಮಾನ ದ್ಯೋತುಕವಾಗಿದೆ. ಶಂಕರನಾಗರವರು ಬಹಳ ಸೃಜನಾತ್ಮಕ ಮನೋಭಾವದವರು. ಅವರ ಕಿರುತೆರೆಯ ಲ್ಲಿ ಆರ್ ಕೆ ನಾರಾಯಣ್ ರವರ ಸ್ವಾಮಿ ಮತ್ತು ಅವರ ಗೆಳೆಯರು…. ಮಾಲ್ಗುಡಿ ದಿನಗಳು ಧಾರಾವಾಹಿಯಲ್ಲಿ ನೋಡಬಹುದು ಜನರು ಬಹಳ ಸಂತೋಷ ದಿಂದ ನೋಡಿದರು.
ಒಂದು ಮುತ್ತಿನ ಕಥೆ.. ಮೀನುಗಾರರ ಬದುಕಿನ ಕಥೆ ಮಾಲ್ಡೀವ್ಸ ನಲ್ಲಿ ನೀರಿನೊಳಗೆ ಚಿತ್ರೀಕರಣ ಮಾಡಿದರು.. ಡಾ ರಾಜಕುಮಾರ್ ರ ನಾಯಕ ರಾಗಿ ಅಭಿನಯಿಸಿದ್ದರು. ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಅದರಲ್ಲಿಅವರು ಕನ್ನಡ ದ ಬೆಳ್ಳಿ ತೆರೆಯ ಮೇಲೆ ವಿಭಿನ್ನ ರೀತಿಯ ಕಥೆಯನ್ನು ಪರಿಣಾಮ ಕಾರಿಯಾಗಿ ಹೇಳಿದ್ದರು. ಸಿನಿಮಾ ಮಾಧ್ಯಮವು ಒಂದು ಜನಾಂಗದ ನೋವು ನಲಿವುಗಳ ಜನಪದ ಮೂಲಗಳನ್ನು ತೋರಿಸುವ ಕಲೆಯ ಅಭಿವ್ಯಕ್ತಿ ಎಂದು ನಂಬಿದ್ದರು.
ನಮ್ಮ ನಾಡಿನ ನುಡಿಗಾಗಿ ನಡೆದ ಭಾಷಾ ಚಳವಳಿ ಗೋಕಾಕ್ ವರದಿಯ ಜಾರಿಗೆ ನಡೆದ ಹೋರಾಟ ದ ಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿನಿಮಾ ದಲ್ಲಿ ನವನವೀನ ತೆ ಹಾತೊರೆಯುತಿದ್ದ ಶಂಕರ್ ನಾಗ್ ರವರು ನಮ್ಮ ರಾಜ್ಯದಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ ..ಬೆಂಗಳೂರು ನಗರಕ್ಕೆ ಈಗಿರುವ ಮೆಟ್ರೋ ಅಳವಡಿಸುವ ಯೋಜನೆಯನ್ನು ಕನಸು ಶಂಕರ್ ನಾಗರವರದು.. ನಂದಿ ಬೆಟ್ಟಕ್ಕೆ ರೋಪ್ ವೇ ಮಾಡಿ ಅದನ್ನು ಜನಪ್ರಿಯ ಪ್ರವಾಸಿ ತಾಣಮಾಡುವ ಬಗ್ಗೆ ತಮ್ಮ ವಿಚಾರಗಳನ್ನು ಪತ್ರಿಕೆ ಗಳ ಲ್ಲಿ ಬರೆದಿದ್ದರು… ಒಂದೇ ಎರಡೇ ಅವರ ಎಡಬಿಡದ ಸಿನಿಮಾ ಗಳ ನಡುವೆಯೂ ಜನರ ಬಗ್ಗೆ ಯೂ ಚಿಂತಿಸಿದ ಪ್ರಜ್ಞಾವಂತ ಪ್ರತಿಭಾವಂತ ನಟ. ನಿರ್ದೇಶಕ.. ರಂಗಕರ್ಮಿ.. ಸಿನಿಮಾ ತಂತ್ರಜ್ಞ.. ಬಹುಮುಖ ಪ್ರತಿಭೆಯ ವ್ಯಕ್ತಿ.ಅಲ್ಲದೆ..ಅವರು ತಮ್ಮ ವೃತ್ತಿ ಬದುಕಿನಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದರೂ ಎಲ್ಲರೊಂದಿಗೂ ಬೆರೆತು ಬಾಳಿದ ಸರಳ ಮನುಷ್ಯ ಶಂಕರ್ ನಾಗ್ ರವರು.
ಈ ಎಲ್ಲಾ ನೆನಪುಗಳು ಅವರ ಸಾವಿನ ದಿನ ಬಂದು ಹೋದವು.. ನನ್ನ ರೂಮಿನಲ್ಲಿ ಗೋಡೆಯ ಮೇಲೆ ಹಚ್ಚಿದ್ದ ಒಂದಾನೊಂದು ಕಾಲದಲ್ಲಿ ನ ಖಡ್ಗ ಹಿಡಿದು ನಿಂತ ಯೋಧ ಶಂಕರ್ ನಾಗ್.. ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತು..ಎನ್ನುವ ಹಾಡು.. ಅವರ ಇರುವಿಕೆ ನಮಗೆ ಮುದವಾಗಲು ಇನ್ನೂ ಬೇಕಾಗಿತ್ತು ಎನ್ನುವಂತೆ ಕಾಡುತ್ತದೆ..
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ