- ಮಹಾನ್ ರಂಗಕರ್ಮಿ ‘ಆರ್ ಡಿ ಕಾಮತ್’ ರ ಕುರಿತು - ಜುಲೈ 7, 2020
- ಪು.ಲ.ದೇಶ ಪಾಂಡೆಯವರ ಕುರಿತು - ಜೂನ್ 13, 2020
ಸುಮಾರು ಎಪ್ಪತ್ತು ಕನ್ನಡ ಮತ್ತು ಕೊಂಕಣಿ ನಾಟಕಗಳನ್ನು ರಚಿಸಿದ, ಮುಂಬಯಿಯ ಕನ್ನಡ ರಂಗಭೂಮಿಗೆ ನವಚೈತನ್ಯ ನೀಡಿದ ಒಬ್ಬ ವ್ಯಕ್ತಿಯ ಒಂದು ಫೋಟೋ ಕೂಡ ಗೂಗಲ್ಲಿನಲ್ಲಿ ಹುಡುಕಿದರೂ ಸಿಗೋದಿಲ್ಲ ಅನ್ನೋದು ಎಂಥ ಅನ್ಯಾಯವಲ್ಲವೇ!!
ಅವಿನಾಶ್, ಲೇಖಕರು
ನಿನ್ನೆ ಡಾ. ಜಯಂತ್ ಕಾಯ್ಕಿಣಿಯವರ ಜೊತೆಗೆ ವಾಟ್ಸಾಪ್ ಚಾಟ್ ಮಾಡುತ್ತಿದ್ದಾಗ ಹಿರಿಯ ನಾಟಕಕಾರರೊಬ್ಬರ ಉಲ್ಲೇಖ ಬಂತು. ಆ ಹೆಸರು ಓದಿಯೇ ನಾನು ಬಾಲ್ಯದ ನಮ್ಮ ಧಾರವಾಡದ ಮನೆಯ ನೆನಪುಗಳಿಗೆ ಪಯಣಿಸಿದ್ದೆ. ಎಂಭತ್ತರ ದಶಕದಲ್ಲಿ ಆ ಹಿರಿಯರು ಮುಂಬಯಿಯಿಂದ ವರ್ಷಕ್ಕೊಮ್ಮೆ ಧಾರವಾಡಕ್ಕೆ ಬರುತ್ತಿದ್ದರು. ಬಂದಾಗ ನಮ್ಮ ಮನೆಗೆ ಖಂಡಿತ ಬರುತ್ತಿದ್ದರು. ನಮಗಾಗಿ ಮುಂಬಯಿಯ ಮಿಠಾಯಿ ಡಬ್ಬ ತರುತ್ತಿದ್ದರು. ಅವರು ನಮ್ಮ ಮನೆಗೆ ಬಂದಾಗಲೆಲ್ಲ ದೊಡ್ಡ ಸಂಭ್ರಮ. ದಿನನಿತ್ಯಕ್ಕಿಂತ ಭಿನ್ನವಾದ ಅಡುಗೆ ಇರುತ್ತಿತ್ತು. ಕೆಲವೊಮ್ಮೆ ಮುಂಜಾನೆಯಿಂದ ರಾತ್ರಿಯವರೆಗೆ ಉಳಿದುಕೊಳ್ಳುತ್ತಿದ್ದರು, ಕೆಲವೊಮ್ಮೆ ಸಂಜೆ ಬಂದು ಬೆಳಗ್ಗಿನವರೆಗೂ ಇರುತ್ತಿದ್ದರು. ತಾವು ಬರೆದ ಹೊಸ ನಾಟಕ ಮತ್ತು ಕೊಂಕಣಿ ಹಾಡುಗಳನ್ನು ವಾಚಿಸುತ್ತಿದ್ದರು.
ಹೀಗೊಂದು ದಿನ ಅವರು ಮನೆಗೆ ಬಂದಾಗ ಪಂಡಿತ್ ವಸಂತ್ ಕನಕಾಪುರರೂ ಮನೆಯಲ್ಲಿದ್ದರು. ಮುಂಬಯಿ ಅತಿಥಿ ಒಂದು ಕೊಂಕಣಿ ಹಾಡನ್ನು ಬರೆದಿದ್ದರು. ಕನಕಾಪುರರು ತಕ್ಷಣ ಅಲ್ಲಿಯೇ ರಾಗ ಸಂಯೋಜನೆ ಮಾಡಿಬಿಟ್ಟರು. “ಯೋರೆ ಪೋರಾ ಆಮ್ಗೆಲ್ ಘರಾ ಪುರಂದರಾ, ಯೋರೆ ಯೋರೆ ತೂ ನಂದಕುಮಾರಾ” ಎಂಬ ಆ ಹಾಡು, ಆನಂತರ ಅದೆಷ್ಟು ಜನಪ್ರಿಯವಾಯ್ತು ಎಂದರೆ ಬಹುಶಃ ಕೊಂಕಣಿ ಭಾಷೆಯ ಸಾಂಸ್ಕೃತಿಕ ವಲಯದಲ್ಲಿ-ಸಾಹಿತ್ಯ ವಲಯದಲ್ಲಿ ಅತ್ಯಂತ ಜನಪ್ರಿಯ ಹಾಡುಗಳಲ್ಲೊಂದು ಎಂಬ ಹೆಗ್ಗುರುತು ಪಡೆದು ನನ್ನ ತಂದೆಗೆ ದೊಡ್ಡ ಮಟ್ಟದ ಜನಪ್ರಿಯತೆ ನೀಡಿತು. ಇವತ್ತಿಗೂ ಅದನ್ನು ಹಲವು ಕೊಂಕಣಿ ಸಂಗೀತ ಕಾರ್ಯಕ್ರಮಗಳಲ್ಲಿ ಕೇಳಬಹುದು. ಕನ್ನಡದ ಖ್ಯಾತ ಗಾಯಕಿ Mahalaxmi Shenoy ತಮ್ಮ ಸಂಗೀತ ಕಛೇರಿಗಳಲ್ಲಿ ಈ ಹಾಡನ್ನು ಬಹಳ ಅದ್ಭುತವಾಗಿ ಹಾಡುತ್ತಾರೆ. (ಹಾಡನ್ನು ಯೂ ಟ್ಯೂಬ್ ಲಿಂಕ್ ನಲ್ಲಿ ಕೇಳಬಹುದು-)
ಅಂದ ಹಾಗೆ ಆ ಹಿರಿಯರ ಹೆಸರು ರಾಮಚಂದ್ರ ದೇವೇಂದ್ರ ಕಾಮತ್ (ಆರ್ ಡಿ ಕಾಮತ್).
ದುರದೃಷ್ಟವಶಾತ್ ಕನ್ನಡದ ರಂಗಭೂಮಿಯ ಮೂಲಕ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟ ಒಬ್ಬ ಮಹಾನ್ ರಂಗ ಕರ್ಮಿ ಆರ್ ಡಿ ಕಾಮತರು. ಈ ದಿನಗಳಲ್ಲಂತೂ ಕನ್ನಡ ರಂಗಭೂಮಿಯು ಅವರನ್ನು ಸಂಪೂರ್ಣವಾಗಿ ಮರೆತೇಬಿಟ್ಟಿರುವುದು ಕನ್ನಡ ರಂಗಭೂಮಿಯ ದೌರ್ಭಾಗ್ಯ ಮತ್ತು ದುರಂತ. ಇಂದಿಗೂ ಹೊರನಾಡ ಕನ್ನಡ ರಂಗಕರ್ಮಿಗಳಿಗೆ ಕರ್ನಾಟಕದ ರಂಗ ಭೂಮಿಯು ಕೊಡಬೇಕಾದಷ್ಟು ಮನ್ನಣೆ ಮತ್ತು ಆಪ್ತತೆಯನ್ನು ಕೊಟ್ಟಿಲ್ಲ, ಆ ದಿನಗಳಲ್ಲೂ ಕೊಟ್ಟಿರಲಿಲ್ಲ.
ಸುಮಾರು ಎಪ್ಪತ್ತು ಕನ್ನಡ ಮತ್ತು ಕೊಂಕಣಿ ನಾಟಕಗಳನ್ನು ರಚಿಸಿದ, ಮುಂಬಯಿಯ ಕನ್ನಡ ರಂಗಭೂಮಿಗೆ ನವಚೈತನ್ಯ ನೀಡಿದ ಒಬ್ಬ ವ್ಯಕ್ತಿಯ ಒಂದು ಫೋಟೋ ಕೂಡ ಗೂಗಲ್ಲಿನಲ್ಲಿ ಹುಡುಕಿದರೂ ಸಿಗೋದಿಲ್ಲ ಅನ್ನೋದು ಎಂಥ ಅನ್ಯಾಯವಲ್ಲವೇ!!
ಕೊನೆಗೂ ಅವರ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿ, ಅತೀವ ಶ್ರಮ ಮತ್ತು ಶ್ರದ್ಧೆಯಿಂದ, ಧಾರವಾಡ-ಹುಬ್ಬಳ್ಳಿ-ಬಿಜಾಪುರ-ಇಳಕಲ್ ಹೀಗೆ ಊರೂರು ಸುತ್ತಾಡಿ ಕಾಮತರ ಬಗೆಗೆ ಹಲವು ಮಾಹಿತಿಗಳನ್ನು ಕಲೆಹಾಕಿ, ಅದನ್ನು ತಮ್ಮ ಪಿ.ಎಚ್.ಡಿ ಸಂಪ್ರಬಂಧವಾದ ‘ಮುಂಬಯಿ ಕನ್ನಡ ರಂಗಭೂಮಿ’ ಎಂಬ ಮಹತ್ತರ ಗ್ರಂಥದಲ್ಲಿ ಪ್ರಕಟಿಸಿರುವುದು ಮುಂಬಯಿಯ ಇನ್ನೊಬ್ಬ ಶ್ರೇಷ್ಠ ರಂಗ ಕರ್ಮಿ, ನನ್ನ ಗುರುಗಳಾದ ಡಾ. Bharatkumar Polipu. ಭರತ್ ಸರ್ ಅವರು ಅಷ್ಟು ಪ್ರಯತ್ನ ಪಡದೇ ಇರುತ್ತಿದ್ದರೆ ಬಹುಶಃ ಆರ್ ಡಿ ಕಾಮತರ ಹೆಸರು ಇತಿಹಾಸದ ಪುಟಗಳಿಂದ ಮಾಯವಾಗಿಬಿಟ್ಟಿರುತ್ತಿತ್ತು. ಕಾಮತರ ಬಗ್ಗೆ ಸಂಶೋಧನೆ ಮಾಡುತ್ತಿದ್ದ ಸಮಯದಲ್ಲಿ ಭರತ್ ಸರ್ ಸ್ವತಃ ನನಗೆ “ಎಂಥ ಅದ್ಭುತ ಮನುಷ್ಯ ಆರ್ ಡಿ ಕಾಮತರು.ರಂಗಭೂಮಿಗಾಗಿ ಜೀವವನ್ನೇ ತೇಯ್ದುಕೊಂಡ ಅಪರೂಪದಲ್ಲಿ ಅಪರೂಪ ವ್ಯಕ್ತಿ ಅವರು. ಅವರನ್ನು ಮರೆಯುವುದು ರಂಗಭೂಮಿಗೇ ಮಾಡಿದ ಅಪಚಾರ” ಎಂದು ಭಾವುಕರಾಗಿ ಹೇಳಿದ್ದಿದೆ. ಭರತ್ ಸರ್ ಅವರ ಗ್ರಂಥದಲ್ಲಿ ಆರ್ ಡಿ ಕಾಮತರ ಬಗ್ಗೆ ಇರುವ ಭಾಗದಿಂದ ಕೆಲವನ್ನು ಆಯ್ದು ಇಲ್ಲಿ ಬರೆದಿದ್ದೇನೆ.
ಕಂಪನಿ ನಾಟಕ, ಹವ್ಯಾಸಿ ರಂಗಭೂಮಿ ಹಾಗೂ ಮರಾಠಿ, ಇಂಗ್ಲಿಶ್, ಗುಜರಾತಿ ಭಾಷಾ ರಂಗಭೂಮಿಗಳ ನಿಕಟ ಪರಿಚಯದಿಂದಾಗಿ, ಅವುಗಳಿಂದ ಉತ್ತಮಾಂಶಗಳನ್ನು ಪಡೆದುಕೊಂಡು ಹೊಸ ರಂಗಮಾದರಿ ರೂಪಿಸಿಕೊಟ್ಟವರು ಆರ್ ಡಿ ಕಾಮತ್. ಇಂಥ ಉದಾಹರಣೆಗಳು ಕರ್ನಾಟಕ ರಂಗಭೂಮಿಯಲ್ಲಿ ಸಿಗುವುದಿಲ್ಲ. ಕನ್ನಡಿಗರು ಮತ್ತು ಅನ್ಯ ಭಾಷಾ ವಲಯದಲ್ಲಿ ಸೌಹಾರ್ದಮಯ ವಾತಾವರಣ ನಿರ್ಮಿಸಲು ಮತ್ತು ಭಾಷಾ ಸಂಸ್ಕೃತಿ ಬೆಳೆಯಲು ಶ್ರಮಿಸಿದವರು. ಅಂತರ್ ಭಾಷಾ ಸ್ಪರ್ಧೆಗಳಲ್ಲಿ ಇವರ ನಾಟಕಗಳು ಹೆಚ್ಚಿನಾಂಶ ಪ್ರಥಮ ಬಹುಮಾನವನ್ನೇ ಗಳಿಸುತ್ತಿದ್ದರಿಂದ ಈ ನಾಟಕಗಳು ಅನ್ಯ ಭಾಷೆಗಳಲ್ಲೂ ಅನುವಾದಗೊಂಡು ಅವರೂ ಕಾಮತರ ಶೈಲಿಯಿಂದ ಪ್ರೇರಣೆ ಪಡೆದರು. ಇದು ಕಡಿಮೆ ಸಾಧನೆ ಅಂತೂ ಅಲ್ಲ. ಕಾಮತರ ನಾಟಕಗಳು ರಂಗಕೃತಿಯಾಗಿ-ಸಾಹಿತ್ಯ ಕೃತಿಯಾಗಿ ಉತ್ತಮ ಗುಣಮಟ್ಟದ್ದಾಗಿರುತ್ತಿದ್ದವು. ಸಂಪೂರ್ಣ ರಂಗಭೂಮಿಯ ಕಲಾತ್ಮಕ ಅನುಭವ ಈ ನಾಟಕಗಳಿಂದ ಸಿಗುತ್ತಿದ್ದವು. ಜಾನಪದ ಪರಂಪರೆ, ಸಂಸ್ಕೃತ ರಂಗಭೂಮಿ, ಶೇಕ್ಸಪಿಯರಿಯನ್ ರಂಗಭೂಮಿ, ಪಾರ್ಸಿ ರಂಗಭೂಮಿ ಅಂಶಗಳನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿ ರಂಗಕೃತಿಯ ಅಪೂರ್ವ ರಸಾನುಭೂತಿ ಸೃಷ್ಟಿಯಾಗುವಂತೆ ಬರೆಯುತ್ತಿದ್ದರು.
ಕಾಮತರ ನಾಟಕಗಳು ವೀಕ್ಷಣೆಯಲ್ಲಿ ಎಷ್ಟು ವಿಶಿಷ್ಟ ರಸಾನುಭವವನ್ನು ನೀಡುತ್ತವೋ, ಸಾಹಿತ್ಯ ಕೃತಿಯಾಗಿ ಓದುವಾಗ ಅನನ್ಯ ಅನುಭವ ನೀಡುತ್ತದೆ. ಕಾವ್ಯಮಯ ಭಾಷೆ, ಧನ್ಯಾರ್ಥಕ ಮಾತುಗಳು, ರೂಪಕಗಳ-ಉಪಮೆ-ದೃಷ್ಟಾಂತಗಳ ಬಳಕೆ, ಆಡುಮಾತಿನ ನೈಜ ಭಾಷೆಯ ಬಳಕೆ, ಪೌರಾಣಿಕ, ಐತಿಹಾಸಿಕ ನಾಟಕಗಳಿಗೆ ಅನುಗುಣವಾಗಿ ಗ್ರಾಂಥಿಕ ಶೈಲೀಕೃತ ಭಾಷೆಯನ್ನು ಬಳಸುತ್ತಿದ್ದರು. ಸ್ವತಃ ಅದ್ಭುತ ನಿರ್ದೇಶಕರಾಗಿದ್ದ ಕಾಮತರು ಮುಂಬಯಿಯಲ್ಲಿ ಹಲವಾರು ರಂಗಕರ್ಮಿಗಳಿಗೆ ತರಬೇತಿ ನೀಡಿದವರು. ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರೂ ಸಾಹಿತ್ಯಕವಾಗಿ ಸಿರಿವಂತರಾಗಿದ್ದವರು. ಲೋಕಾನುಭವದಲ್ಲಿ, ರಂಗಾನುಭವದಲ್ಲಿ ಪ್ರಬುದ್ಧರಾಗಿದ್ದರು, ಸೃಜನಶೀಲರಾಗಿದ್ದರು.
ಕಾಮತರ ಅತ್ಯಂತ ಪ್ರಮುಖ ಏಕಾಂಕ ನಾಟಕಗಳೆಂದರೆ:
ಹೃದಯ ದೇಗುಲ, ತಾಯಿ, ಕನಕನ ಕಿಂಡಿ, ಸಹೋದರಿ, ಸಾಕ್ರೆಟಿಸ್, ಕಾಮನ ಬಿಲ್ಲು, ಸಹ್ಯಾದ್ರಿಯ ಸ್ವಾಭಿಮಾನ, ಪೋಸ್ಟ್ ಮಾಸ್ಟರ್ ಇತ್ಯಾದಿ.
ಪ್ರಮುಖ ಪೂರ್ಣಾಂಕ ನಾಟಕಗಳು:
ಟಿಪ್ಪು ಸುಲ್ತಾನ, ಮಾತೃ ದೇವೋಭವ, ಹಿಮಾಚಲದ ಹಿಂದೆ, ದೇವರ ಕಣ್ಣು, ಇನ್ನಿಲ್ಲದವರು, ಮಾನವತಿ, ದುರ್ಗದ ಕೋಗಿಲೆ ಇತ್ಯಾದಿ.
ಅವರ ಅತ್ಯಂತ ಪ್ರಸಿದ್ಧ ಕೊಂಕಣಿ ನಾಟಕವೆಂದರೆ- ಬುಕ್ಕೂಲು ಸನ್ಯಾಸಿ. (ಅನಂತ್ ನಾಗ್ ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಸ್ವತಃ ಆರ್ ಡಿ ಕಾಮತರೇ ಒಂದು ಹಾಸ್ಯ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು).
ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಧಾರಾವಾಹಿಯ ಒಂದು ಪ್ರಸಂಗದಲ್ಲಿ (ರೋಮನ್ ಇಮೇಜ್) ಅವರು ಅಭಿನಯಿಸಿದ್ದೂ ಇದೆ.
ಕೊನೆಯ ಬಾರಿ ಅವರು ನಮ್ಮ ಮನೆಗೆ ಬಂದಾಗ ನನ್ನ ತಂದೆಯ ಮೇಲೆ ವಿಪರೀತ ಸಿಟ್ಟಾಗಿದ್ದರು. ಕಾರಣ- ನಾವು ಮಕ್ಕಳು ಮನೆಯಲ್ಲಿ ಕೊಂಕಣಿಯ ಬದಲು ಕನ್ನಡದಲ್ಲಿ ಮಾತಾಡುತ್ತಿದ್ದದ್ದು. “ನಾನೂ ಕನ್ನಡವನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸ್ತೇನೆ ಆದರೆ ಮಾತೃಭಾಷೆಯಾದ ಕೊಂಕಣಿಯನ್ನೂ ಅಷ್ಟೇ ಪ್ರೀತಿಸುವುದು ನನ್ನ ಧರ್ಮ. ಶ್ರೀನಿವಾಸಾ, ನಿನ್ನ ಮಕ್ಕಳು ಕೊಂಕಣಿಯನ್ನು ಕಲಿಯದವರೆಗೆ ನಿನ್ನ ಮನೆಗೆ ಮತ್ತೆ ಬರೋದಿಲ್ಲ. ಅವರು ಕೊಂಕಣಿ ಕಲಿತ ದಿನ ನನಗೆ ತಿಳಿಸು” ಎಂದು ಹೇಳಿ ಬಿರಬಿರನೇ ನಡೆದುಬಿಟ್ಟರು. ಆಮೇಲೆಂದೂ ಅವರು ನಮ್ಮ ಮನೆಗೆ ಬರಲಿಲ್ಲ. ಕೆಲವೇ ದಿನಗಳಲ್ಲಿ ತೀರಿಕೊಂಡರು. ಅವರ ಮನಸ್ಸಿಗೆ ಘಾಸಿಯಾದದ್ದು ಆಗ ನನಗೆ ಅಷ್ಟು ತಿಳಿದಿರಲಿಲ್ಲವಾದರೂ, ಬುದ್ಧಿ ಬಂದ ಮೇಲಿಂದ ನಾನೆಂಥ ತಪ್ಪು ಮಾಡಿಬಿಟ್ಟೆ ಎಂದು ಅನಿಸತೊಡಗಿತ್ತು. ನನ್ನ ತಂದೆ-ತಾಯಿ ನನಗೆ ಕೊಂಕಣಿ ಕಲಿಸಲು ಬಹಳ ಪ್ರಯತ್ನ ಪಟ್ಟರೂ, ದುರದೃಷ್ಟವಶಾತ್ ನಾನು ಕೊಂಕಣಿಯಿಂದ ದೂರವೇ ಉಳಿದುಬಿಟ್ಟೆ!!
ಮುಂಬಯಿ ಕರ್ನಾಟಕ ಸಂಘದ ವಾರ್ಷಿಕ ಕುವೆಂಪು ನಾಟಕ ಸ್ಪರ್ಧೆಗಳಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿಯ ಜೊತೆ ಒಂದು ಚಿಕ್ಕ ಮೊತ್ತದ ಗೌರವ ಧನ ಹಾಗೂ ಪಾರಿತೋಷಕವನ್ನು ಆರ್.ಡಿ ಕಾಮತರ ಹೆಸರಿನಲ್ಲಿ ಕೊಡಬೇಕೆಂದು ನಿರ್ಧರಿಸಿ, ಸಣ್ಣ ಪ್ರಾಯೋಜಕತ್ವ ನೀಡುತ್ತಿದ್ದೇನೆ. ಆ ಮಹಾನ್ ಚೇತನದ ಬಳಿ ಕ್ಷಮೆ ಯಾಚಿಸುವ ಬೇರೆ ಯಾವುದೇ ಮಾರ್ಗ ನನಗೆ ಕಾಣುತ್ತಿಲ್ಲವಾದುದರಿಂದ…!!
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ