- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
- ದೇವರು, ಭೂತ, ಭಯ ಇತ್ಯಾದಿ - ಮೇ 23, 2021
ಮಾತು-೧ ಮತ್ತು ಮಾತು-೨ ರ ಬಗ್ಗೆ ಬರೆದ ಮೇಲೆ ಅದೇಕೋ ಮಾತಿಗಿಂತ ಮೌನ ಪ್ರಿಯವಾಗುತ್ತಿದೆ. ದೂರವಾಣಿಯಲ್ಲಿ ಒಂದು ನಿಮಿಷ ಹಾಗೂ ಮುಖಾಮುಖಿಯಾಗಿ ಹತ್ತು ನಿಮಿಷ ಮಾತನಾಡಿದರೆ ದಣಿವಾಗುತ್ತದೆ. ಈಗೀಗ ಬಹುಶಃ ದಿನವಿಡೀ ಒಂದು ಗಂಟೆಯೂ ಮಾತನಾಡುತ್ತಿಲ್ಲವೇನೋ!
ಮಾತು ಎಂದರೆ ಬರೀ ಶಬ್ದಗಳ ಸಮೂಹ. ಅವೇ ಮಾತುಗಳು ಭಾವನೆಗಳ ಬಣ್ಣ ಹಚ್ಚಿಕೊಂಡು ಬಂದಾಗ ನಮ್ಮನ್ನು ವಶಕ್ಕೆ ತೆಗೆದುಕೊಳ್ಳುತ್ತವೆ. ಇನ್ನೊಬ್ಬರ ತಾಳಕ್ಕೆ ಕುಣಿಯುವುದು ದಣಿವುಂಟುಮಾಡುತ್ತದೆ.
ಮಾತಿಗೆ ಚೂರು ವಿಷಾದ
ದ ಬಣ್ಣ ಅಂಟಿಸಿ ಬಿಟ್ಟರೆ
ಇಡೀ ಮೈಯನ್ನು ಆವರಿಸಿಬಿಡುತ್ತದೆ
ಅದೇ ಬಣ್ಣ ಅದೇ ವಾಸನೆ
ಅಲ್ಲವೇ ಮತ್ತೆ? ಸ್ವಲ್ಪ ಯೋಚಿಸಿ ನೋಡಿ; ದುಃಖಿತರ ಮಾತು ಕೇಳುವಾಗ ಅವರ ದುಃಖ ನಮ್ಮನ್ನೂ ಆವರಿಸಿಕೊಳ್ಳುತ್ತದೆಯಲ್ಲವೆ? ದುಃಖಿತರು ತಮ್ಮ ಹೃದಯದ ವೇದನೆಗಳನ್ನು ಮಾತುಗಳ ಮೂಲಕ ಹರಿಯ ಬಿಡುತ್ತಾರೆ.
ಅವರಿಗೆ ಸಾಂತ್ವನ ಹೇಳೋಣವೆಂದು ಆಡುವ ಮಾತುಗಳು ಎಷ್ಟು ಕೃತಕವಾಗಿ ಕಾಣಿಸುತ್ತವೆ! ಅವೆಲ್ಲ ಕಡ ತಂದ ಮಾತುಗಳು. ಕೇವಲ ಬಾಯುಪಚಾರಕ್ಕೆ ಹೇಳುವ ಮಾತುಗಳಿವೆ. ಚಿತ್ರಕಾರನೊಬ್ಬ ಹಕ್ಕಿಯ ಚಿತ್ರವೊಂದನ್ನು ಎಷ್ಟೇ ನೈಜವಾಗಿ ಬರೆದರೂ ಅದು ಚೌಕಟ್ಟಿನಲ್ಲಿ ಬಂಧಿಸಿದ ಚಿತ್ರವೇ. ಎಷ್ಟು ಕಲ್ಪಿಸಿಕೊಂಡರೂ ಅದು ಗರಿ ಉದುರಿದ ಹಕ್ಕಿ.
ಮತ್ತೆ ಕಡತಂದು ಮಾತುಗಳ
ಸಿಂಗರಿಸಿ ಚೌಕಟ್ಟಿನಲ್ಲಿಟ್ಟು ಯಾವ
ಗೋಡೆಗೆ ತೂಗಿದರೂ
ಗೋಡೆ ಫ್ರೇಮುಗಳ ನಡುವೆ
ಗಡಿಗೆರೆ ಅಳಿಸಿ
ಗಡಿಗೆರೆ ಅಳಿಸಿ ನೈಜತೆಯನ್ನು ಕಾಣುತ್ತೇನೆಂದರೂ ಅದು ಗರಿ ಉದುರಿದ ಹಕ್ಕಿ! ಹಾರದೆ ಖಿನ್ನವಾಗಿ ರೆಂಬೆಯ ಮೇಲೆ (ಕುಳಿತು ಬಿಡುತ್ತದೆ). ಕೃತಕ ಮಾತುಗಳು ಆಡಿದವನಿಗೂ ಕೇಳಿದವನಿಗೂ ತ್ರಾಸದಾಯಕವಾಗಿರುತ್ತವೆ.
ಗರಿ ಉದುರಿದ ಹಕ್ಕಿ ಹಾರದೆ
ರೆಂಬೆಯ ಮೇಲೆ ಖಿನ್ನ
ಹಾರುವಾಗ ಸುಂದರವಾಗಿ ಕಂಡ ಗಾಳಿಪಟ ಬಯಲಲ್ಲೇ ಉಳಿದರೆ ಮಾಗಿಯ ಹನಿಗೆ ಒದ್ದೆಯಾಗಿ ಎತ್ತಿದರೆ ಹಿಸಿದು ಹೋಗುವಂತಿರುತ್ತದೆ. ನಮ್ಮ ಮಾತುಗಳೂ ಹಾಗೆಯೇ. ಆಡುವಾಗ ಸುಂದರವಾಗಿ ಕಂಡುಬಂದರೆ ಕಾಲಕ್ರಮದಲ್ಲಿ ಅವೇ ಮಾತುಗಳು ದುರ್ಬಲವಾಗಿ ಕಾಣಿಸುತ್ತವೆ.
ಎಲ್ಲೋ ಬೋರಲಾಗಿ ರಾತ್ರಿಯಿಡಿ
ಬಿದ್ದು ಈ ಮಾಗಿಯ ಹನಿಯಲ್ಲಿ
ಒದ್ದೆ ಗಾಳಿಪಟ
ಸಂಜೆ ಗಾಳಿಪಟ ಹಾರಿಸಿ ಸಂತೋಷದಿಂದ ಮಲಗಿದವರಿಗೆ ಸುಂದರವಾದ ನವಿರಾದ ಕನಸುಗಳು. ಆದರೆ ಕಣ್ಣು ತೆರೆದರೆ ಗಾಳಿಪಟ ಒದ್ದೆಯಾಗಿ ಕನಸುಗಳು ಭಗ್ನವಾಗುತ್ತವೆ. ಮಾತುಗಳೂ ಅದೇರೀತಿ ಅಂದಂದಿಗೆ ಸಂತೋಷ ಕೊಟ್ಟರೂ ಕಾಲಕ್ರಮದಲ್ಲಿ ಅವೆಲ್ಲ ಅರ್ಥಹೀನವಾಗಿ ಕಾಣಿಸುತ್ತವೆ.
ಬೆಳಗಿನ ಕನಸಿಗೂ ಅದಕ್ಕೂ
ಸಂಬಂಧವೇ ಕಾಣದೆ
ಹೀಗನ್ನಿಸಿದಾಗ ನನ್ನ ಮಾತುಗಳನ್ನು ನಾನು ಮತ್ತೊಮ್ಮೆ ಭೇಟಿಯಾದರೆ ಹೇಗಿರಬಹುದು?
ಕನ್ನಡಿಯ ಎದುರಿಗೆ ನಿಂತು
ಕಂಡೆ ಎನ್ನುತ್ತ ಹಲ್ಕಿರಿದರೆ ಮಾತು
ಅದರದು ಬೇರೆಯದೇ ಲೋಕ
ಬಿಂಬ ಕನ್ನಡಿಗೇ ಸ್ವಂತ
ಆದರೂ ತೋರುತ್ತದೆ ಅದು
ಹಳೆಯ ಗಾಯ ಉಳಿಸಿದ
ಕಂಡೂ ಕಾಣದ ಗುರುತುಗಳ
ಮೇಲಿನ ಚರಣ ತುಂಬ ಸಂಕೀರ್ಣವಾಗಿದೆ. ಕನ್ನಡಿಯೊಳಗೆ ಕಾಣಿಸುವ ಬಿಂಬ ನಮ್ಮದೇ. ಆದರೆ ಅದನ್ನು ಕನ್ನಡಿ ಗ್ರಹಿಸಿರುವುದರಿಂದ ಅದು ಕನ್ನಡಿಯ ಸ್ವಂತವಾಯಿತು. ನಮ್ಮದಾಗಿದ್ದರೆ ನಮ್ಮ ಕೈಗೆ ಸಿಗಬೇಕಾಗಿತ್ತು. ಕನ್ನಡಿಯದ್ದೇ ಸ್ವಂತವಾದರೂ ಆ ಬಿಂಬದಲ್ಲಿಯೂ ನಾನು ಬಾಲ್ಯದಲ್ಲಿ ಆಡುವಾಗ ಬಿದ್ದು ಮಾಡಿಕೊಂಡ ಗಾಯದ ಗುರುತು, ಬೇರೆಲ್ಲೋ ಮಾಡಿಕೊಂಡ ಗಾಯದ ಗುರುತು ಎಲ್ಲವುಗಳನ್ನೂ ಕನ್ನಡಿ ಎತ್ತಿ ತೋರಿಸುತ್ತದೆ. ಅದೇ ರೀತಿ, ಮಾತು ಕನ್ನಡಿಯ ಮುಂದೆ ನಿಂತರೆ ಹೇಗಿರಬಹುದು?
ನಮ್ಮ ಮನಸ್ಸಿನ ಕನ್ನಡಿಯಲ್ಲಿ ಎಂದೋ ಆಡಿದ ಮಾತುಗಳು ಪ್ರತಿಫಲಿಸುವಾಗ ಆ ಮಾತುಗಳು ಮೂಡಿಸಿದ ಗಾಯಗಳನ್ನೂ ಬಿಡದೆ ಪ್ರತಿಫಲಿಸುತ್ತದೆ. ಹಿಂದಿನ ಮಾತುಗಳನ್ನು ನೆನೆಸಿಕೊಳ್ಳುವಾಗ ಅವು ನೀಡಿದ ನೋವೂ ಎದ್ದು ಕಾಣುತ್ತವೆ.
ನಾವು ಈಗ ಬಾಡಿಗೆ ಯುಗದಲ್ಲಿದ್ದೇವೆ. ಸೋಗಿನ ಮಾತುಗಳಲ್ಲಿಯೇ ಕಾಲ ಕಳೆಯುತ್ತಿದ್ದೇವೆ.
ಬಾಡಿಗೆ ಮನೆ ವಾಹನ ಮಗು ತಾಯಿ
ತಂದೆ ಎಂದೆಲ್ಲ ಬಾಡಿಗೆಗೆ ತಂದು
ತಂದು ಸ್ವಂತದ ಮಾತಿಗೂ ಅಪರಿಚಿತ ಮುಖ
ಮಾತು ಎಲ್ಲವನ್ನೂ ಸಂವಹನ ಮಾಡಬಲ್ಲದು ಎಂದು ತಿಳಿದುಕೊಂಡರೆ ತಪ್ಪು. ಮಾತು, ಮಾತು, ಮಾತು…… ಮಾತು ಅತಿಯಾಗಿ ಆಡಿದವರಿಗೇ ಭಾರವಾಗುತ್ತದೆ.
ಮಾತು “ಹೋಲ್ಡ್ ಆಲ್” ಹೇಳಿದ್ದು ಯಾರು
ಕಂಡಿದ್ದನ್ನೆಲ್ಲ ತುರುಕಿ ಸ್ವಂತದ್ದು
ಬೇಕಾದ್ದು ಬೇಡದ್ದು ಎಲ್ಲ
ತುರುಕಿ ತುರುಕಿಸಿ ಎದೆಭಾರ
ಹೊಟ್ಟೆ ಬಿರಿದು ತುಂಬಿದ್ದೆಲ್ಲ
ಇಷ್ಟೆಲ್ಲ ಚಿಂತನೆ ನಡೆಸಿದಾಗ ಅಂತರಂಗದ ದನಿ ಹೇಳುತ್ತದೆ, ಮಾತುಗಳಿಗೆ ಅರ್ಥವಿಲ್ಲ. ಅದನ್ನು ತುಂಬಿದ ಬಣ್ಣ ವಾಸನೆಗಳು ನಿಮ್ಮ ವರ್ತನೆಯನ್ನು ಪ್ರಭಾವಿಸುತ್ತವೆ. ಈ ಬಣ್ಣ ವಾಸನೆಗಳನ್ನು, ಭಾವನೆಗಳನ್ನು ಕ್ಷಮಿಸಿಬಿಡುವುದೇ ಮುಕ್ತಿಮಾರ್ಗ ಎಂದು ಹೇಳುತ್ತದೆ.
ಎಲ್ಲಿಂದ ಬಂದ ದನಿಯದು
ಕ್ಷಮಿಸಿಬಿಡು ದೊರೆ. ಮಾತನ್ನು ತುಂಬಿದ ಬಣ್ಣ,ವಾಸನೆಗಳ
ಹಾಗೆ ಮಾಡದಿದ್ದರೆ ಮಾತನ್ನು ತುಂಬಿದ ಬಣ್ಣ ವಾಸನೆಗಳು ನಮ್ಮ ಮೈಯನ್ನೂ ಮೆತ್ತಿಕೊಳ್ಳುತ್ತವೆ. ಹಾಗೆ ಮಾಡದಿದ್ದರೆ ನಮ್ಮ ಪ್ರತಿಕ್ರಿಯೆಗಳೂ ಕೃತಕವಾಗುವ ಅಪಾಯವಿದೆ. ಕೇವಲ ಬಾಯಾಡಂಬರದ ಮಾತುಗಳಾಗುತ್ತವೆ.
ಮಾತಿಗೆ ಬಣ್ಣ ವಾಸನೆ ತುಂಬಿದವರು ಯಾರು? ಅವರನ್ನು ಕ್ಷಮಿಸದಿದ್ದರೆ ಅವರ ಮಾತುಗಳು ಉಂಟು ಮಾಡಿದ ಗಾಯ ಶಾಶ್ವತವಾಗಿ ಯಾವಾಗೆಂದರೆ ಆಗ ತಲೆ ತೂರಿಸುತ್ತಿರುತ್ತವೆ.
ಕೆ. ಜನಾರ್ದನ ತುಂಗ
ಮಾತು-೩
ಮಾತಿಗೆ ಚೂರು ವಿಷಾದ
ದ ಬಣ್ಣ ಅಂಟಿಸಿ ಬಿಟ್ಟರೆ
ಇಡೀ ಮೈಯನ್ನು ಆವರಿಸಿಬಿಡುತ್ತದೆ
ಅದೇ ಬಣ್ಣ ಅದೇ ವಾಸನೆ
ಮತ್ತೆ ಕಡತಂದು ಮಾತುಗಳ
ಸಿಂಗರಿಸಿ ಚೌಕಟ್ಟಿನಲ್ಲಿಟ್ಟು ಯಾವ
ಗೋಡೆಗೆ ತೂಗಿದರೂ
ಗೋಡೆ ಫ್ರೇಮುಗಳ ನಡುವೆ
ಗಡಿಗೆರೆ ಅಳಿಸಿ
ಗರಿ ಉದುರಿದ ಹಕ್ಕಿ ಹಾರದೆ
ರೆಂಬೆಯ ಮೇಲೆ ಖಿನ್ನ
ಎಲ್ಲೋ ಬೋರಲಾಗಿ ರಾತ್ರಿಯಿಡಿ
ಬಿದ್ದು ಈ ಮಾಗಿಯ ಹನಿಯಲ್ಲಿ
ಒದ್ದೆ ಗಾಳಿಪಟ
ಬೆಳಗಿನ ಕನಸಿಗೂ ಅದಕ್ಕೂ
ಸಂಬಂಧವೇ ಕಾಣದೆ
ಕನ್ನಡಿಯ ಎದುರಿಗೆ ನಿಂತು
ಕಂಡೆ ಎನ್ನುತ್ತ ಹಲ್ಕಿರಿದರೆ ಮಾತು
ಅದರದು ಬೇರೆಯದೇ ಲೋಕ
ಬಿಂಬ ಕನ್ನಡಿಗೇ ಸ್ವಂತ
ಆದರೂ ತೋರುತ್ತದೆ ಅದು
ಹಳೆಯ ಗಾಯ ಉಳಿಸಿದ
ಕಂಡೂ ಕಾಣದ ಗುರುತುಗಳ
ಬಾಡಿಗೆ ಮನೆ ವಾಹನ ಮಗು ತಾಯಿ
ತಂದೆ ಎಂದೆಲ್ಲ ಬಾಡಿಗೆಗೆ ತಂದು
ತಂದು ಸ್ವಂತದ ಮಾತಿಗೂ ಅಪರಿಚಿತ ಮುಖ
ಮಾತು “ಹೋಲ್ಡ್ ಆಲ್” ಹೇಳಿದ್ದು ಯಾರು
ಕಂಡಿದ್ದನ್ನೆಲ್ಲ ತುರುಕಿ ಸ್ವಂತದ್ದು
ಬೇಕಾದ್ದು ಬೇಡದ್ದು ಎಲ್ಲ
ತುರುಕಿ ತುರುಕಿಸಿ ಎದೆಭಾರ
ಹೊಟ್ಟೆ ಬಿರಿದು ತುಂಬಿದ್ದೆಲ್ಲ
ಎಲ್ಲಿಂದ ಬಂದ ದನಿಯದು
“ಕ್ಷಮಿಸಿಬಿಡು ದೊರೆ
ಮಾತನ್ನು ತುಂಬಿದ ಬಣ್ಣ,ವಾಸನೆಗಳ”
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ