- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
- ದೇವರು, ಭೂತ, ಭಯ ಇತ್ಯಾದಿ - ಮೇ 23, 2021
ಹೂವು ಮೊಗ್ಗು ಮಾತು ಎಂದೆಲ್ಲ
ರಮ್ಯ ಕಲ್ಪನೆಯಲ್ಲಿರುವಾಗ
ಕಾಣಬಯಸುವವಗೆ ಹೂವು
ಎಲ್ಲೆಲ್ಲೂ ಕಾಣುವುದಂತೆ
ಆದರೆ ಈ ಮಾತು ತಪ್ಪಿಸಿಕೊಂಡು
ಬೀದಿಗಿಳಿದು ಈಗ ಜಗಳ
ಮೈಯನ್ನೇ ಬಂಡವಾಳವಾಗಿಸಿಕೊಂಡ
ಅವಳ ಬತ್ತಿದ ಕಣ್ಣುಗಳಲ್ಲಿ
ಹೂವಿನ ಚಿತ್ರವಿಲ್ಲ ಹೊಟ್ಟೆಯ ಪ್ರಶ್ನೆ
ಮಾತು ಕರ್ಕಶ ಕೀರಲು ಅಳು
ಹಿಡಿಶಾಪ
ಮಾತಿನ ನಿಯೋಗಗಳು ಎಷ್ಟೊಂದು
ಮಗ್ನತೆಯಲ್ಲಿ ನುಡಿಸುವ ಸಿತಾರ್
ಝೇಂಕರಿಸುತ್ತ ನುಡಿ ಬೇಡದ
ಆಲಾಪಗಳು ನೀರ ಅಲೆಗಳಂತೆ
ಮಾಲೆಯಾಗುತ್ತ
ಮಾತು ಮೊದಲಿಗೆ ಪದ
ಅರ್ಥದ ಬೆನ್ನು ಹಿಡಿದು ಇಲ್ಲವೇ
ಬರೀ ಸದ್ದು
ಈಗ ಹುಟ್ಟಿ ಈಗ ಸಾಯುವ
ಮಾತಿಗೆ ನೆನಪಿನಲ್ಲೇ ಜೀವ
ಸಂದಣಿಯ ನುಡಿ ಕವಿತೆಯಾಗುತ್ತ
ಕವಿತೆ ಸಂತೆಯಲ್ಲಿ ಅಲೆದು ಕರಗುತ್ತ
ಯಾವುದನ್ನು ಎಲ್ಲಿ ಪೋಣಿಸುವುದು
ಎಲ್ಲಿ ಗುಟುಕು ಕೊಟ್ಟು
ಕಾಯುವುದು ಇನ್ನೂ ಬಾರದ
ರೆಕ್ಕೆಗೆ ತೆರೆಯದ ನೀಲಿಗೆ
ಎಲ್ಲ ಅಳಿಯುತ್ತವೆ
ಈ ನಾನು ಈ ನೀನು
ಈ ಮಾತು ಈ ಜಗತ್ತು
ಆಗ ಇರುವು ಎಲ್ಲಿ ತಂಗುವುದು
ಹೂವು ಮೊಗ್ಗು ಮಾತು
ಯಾರನ್ನು ಎಬ್ಬಿಸುವುದು
ಕನಸಿನಲ್ಲಿ ಎಚ್ಚರದಲ್ಲಿ
*ಡಾ. ಗೋವಿಂದ ಹೆಗಡೆ (೭-೧-೨೦೨೦)
******
ಮೊದಲ ಮೂರು ‘ಮಾತು’ ಕವನಗಳ ನಂತರ ನಾಲ್ಕನೆಯ ಮಾತಿಗೆ ದನಿಕೊಡಲು ಸ್ವಲ್ಪ ಸಮಯ ತಗುಲಿತು. ಈ ನಾಲ್ಕನೆಯ ಕವನ ಮೊದಲಿನ ಮೂರು ಕವನಗಳಿಗಿಂತ ಸಂಕೀರ್ಣವಾಗಿದೆ.
“ಮಾತು ಮೊದಲಿಗೆ ಪದ
ಅರ್ಥದ ಬೆನ್ನು ಹಿಡಿದು ಇಲ್ಲವೇ
ಬರೀ ಸದ್ದು”
ಮಾತು ಎಂದರೇನು? ನನ್ನ ಮನಸ್ಸಿನಲ್ಲಿರುವುದನ್ನು ಇನ್ನೊಬ್ಬನಿಗೆ ತಲುಪಿಸುವ ಒಂದು ಸಾಧನ. ಅರ್ಥವೆಂದರೇನು? ಮಾತಿನ ಮೇಲೆ ಸವಾರಿ ಮಾಡಿಕೊಂಡು ಸಾಗುವ, ನನ್ನ ಮನಸ್ಸಿನಲ್ಲಿರುವ ಭಾವನೆ ಅಥವ ಕಲ್ಪನೆಗಳೇ ಅರ್ಥ. ಮಾತಿನಲ್ಲಿ ಪದಗಳು ತುಂಬಿಕೊಂಡಿರುತ್ತವೆ. ಪದಗಳು ಅರ್ಥದ ಬೆನ್ನು ಹಿಡಿದಾಗಲೇ ಮಾತು ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಅದು ಬರಿಯ ಸದ್ದಾಗಿ ಉಳಿಯುತ್ತದೆ. ಪದ ಮತ್ತು ಅರ್ಥಗಳು ಪರಸ್ಪರ ಅಗಲಿದರೆ ಎರಡೂ ನಿಷ್ಫಲವಾಗುತ್ತವೆ.
ಹೂವು ಮೊಗ್ಗು ಮುಂತಾದ ಕೋಮಲ ಸುಂದರ ಭಾವನೆಗಳಲ್ಲಿ ಮಾತು ಮಗ್ನವಾಗಿರುವ ಸಂದರ್ಭದಲ್ಲಿಯೇ ಮಾತು ಸುಸಂಗತವಾಗದಿದ್ದರೆ ಗುರಿತಪ್ಪಿ ಜಗಳವಾಗುವುದೂ ಉಂಟು. ಆದರೆ ಕಾಣಬಯಸುವವಗೆ ಹೂವು ಎಲ್ಲೆಲ್ಲೂ ಕಾಣಿಸುವುದಂತೆ! ಈ ನುಡಿಚಿತ್ರದಲ್ಲಿಯೂ ಹೂವು ಕಾಣಿಸುತ್ತಿದೆಯೆ?
“ಮೈಯನ್ನೇ ಬಂಡವಾಳವಾಗಿಸಿಕೊಂಡ
ಅವಳ ಬತ್ತಿದ ಕಣ್ಣುಗಳಲ್ಲಿ
ಹೂವಿನ ಚಿತ್ರವಿಲ್ಲ ಹೊಟ್ಟೆಯ ಪ್ರಶ್ನೆ
ಮಾತು ಕರ್ಕಶ ಕೀರಲು ಅಳು”
ಕವಿ ಈ ದೃಶ್ಯವನ್ನೂ ಸುಂದರ ಕವಿತೆಯಾಗಿಸಬಲ್ಲ, ಕತೆ ಬರೆಯಬಲ್ಲ. ಅವೆಲ್ಲ ಕವಿಯ ಮಾತುಗಳಾದವು. ಆದರೆ ಆಕೆಯ ಮಾತುಗಳು ಅವಳ ಬತ್ತಿದ ಕಣ್ಣುಗಳಲ್ಲಿ ಆಕೆ ಮೈಯನ್ನು ಬಂಡವಾಳವಾಗಿಸಿಕೊಂಡು ದುಡಿಯಬೇಕಾದ ಅಸಹಾಯಕತೆಯನ್ನು ಕಾಣಿಸುತ್ತಿವೆ, ಹೊಟ್ಟೆಯ ಪ್ರಶ್ನೆಯನ್ನು ಪ್ರಕಟಿಸುತ್ತಿವೆ. ಆಕೆಯ ಮಾತುಗಳು ಸುಸಂಬದ್ಧವಾಗಿರುವುದಿಲ್ಲ, ಕೀರಲು ಅಳುವಿನಂತೆ ಕೇಳಿಸುತ್ತದೆ. ಅದೇ ಮಾತು ಎರಡು ರೀತಿಯಲ್ಲಿ ನಿಯೋಜಿತವಾಗಿದೆ.
ಮಾತು ಹುಟ್ಟುವುದೇ ನಿಯೋಗಕ್ಕಾಗಿ, ಸಂದೇಶದ ಸಂವಹನಕ್ಕಾಗಿ. ಮಾತಿನ ನಿಯೋಗಗಳು ಎಷ್ಟೊಂದು! ಮಾತು ಎಲ್ಲೆಲ್ಲಿ ಬಳಕೆಯಾಗುತ್ತವೆ? ಎಲ್ಲೆಲ್ಲಿ ಏನೇನು ಹೇಳಲಿಕ್ಕಿದೆಯೋ ಆ ಎಲ್ಲ ಕಡೆಗಳಲ್ಲಿ ಪದಗಳೇ ಬಳಕೆಯಾಗುತ್ತದೆಂದೇನೂ ಇಲ್ಲ. ಇನ್ನೊಂದು ರೀತಿ ಹೇಳಬೇಕೆಂದರೆ ಪದಗಳಿಲ್ಲದೆಯೂ ಭಾವನೆ ಗುರಿ ತಲುಪಬಹುದು. ಭಾವನೆಗಳು ಪದಗಳ ಬೆನ್ನೇರಿಯೇ ಪ್ರವಹಿಸಬೇಕೆಂದೇನೂ ಇಲ್ಲ.
“ಮಗ್ನತೆಯಲ್ಲಿ ನುಡಿಸುವ ಸಿತಾರ್
ಝೇಂಕರಿಸುತ್ತ ನುಡಿ ಬೇಡದ
ಆಲಾಪಗಳು ನೀರ ಅಲೆಗಳಂತೆ
ಮಾಲೆಯಾಗುತ್ತ”
ಇಲ್ಲಿ ಮಾತು ಬೇಕಾಗಿಲ್ಲ. ನುಡಿಯನ್ನು ಕೇಳದ, ನುಡಿಯ ಅಗತ್ಯವಿಲ್ಲದ ಆಲಾಪಗಳ ಮೂಲಕವೂ ಸಂವಹನ ನಡೆಯುತ್ತದೆ. ಕಡಲ ತೀರದಲ್ಲಿ ಕುಳಿತವನನ್ನು ಅಲೆಗಳು ಮಾಲೆ ಮಾಲೆಯಾಗಿ ತಲುಪುವಂತೆ ಆಲಾಪಗಳೂ ಅಲೆಯಲೆಯಾಗಿ ಕೇಳುಗನನ್ನು ತಲುಪುತ್ತವೆ. ಇದು ಮೌನವೆ? ಇದು ಧ್ವನಿಯೊಳಗಣ ಮೌನವೆ? ಮೌನದೊಳಗಣ ಧ್ವನಿಯೆ?
ಮಾತು ಹುಟ್ಟಿಕೊಳ್ಳುತ್ತದೆ; ಅಲೆ ಹುಟ್ಟಿಕೊಳ್ಳುತ್ತದೆ. ಆದರೆ ಇವುಗಳ ಆಯಸ್ಸೆಷ್ಟು? ಮಾತು ಹುಟ್ಟಿದ ಕ್ಷಣದಲ್ಲಿಯೇ ಸಾಯುತ್ತದೆ. ಅಲೆಯೂ ಹುಟ್ಟಿನ ಜೊತೆಗೇ ಸಾವನ್ನೂ ಕಟ್ಟಿಕೊಂಡು ಬಂದಿರುತ್ತದೆ.
“ಈಗ ಹುಟ್ಟಿ ಈಗ ಸಾಯುವ
ಮಾತಿಗೆ ನೆನಪಲ್ಲೇ ಜೀವ
ಸಂದಣಿಯ ನುಡಿ ಕವಿತೆಯಾಗುತ್ತ
ಕವಿತೆ ಸಂತೆಯಲ್ಲಿ ಅಲೆದು ಕರಗುತ್ತ”
ಆದರೂ ಈ ಮಾತುಗಳು ಪರಭೃತಗಳಾಗಿ ನೆನಪುಗಳಲ್ಲಿ ನೆಲೆಸುತ್ತವೆ. ಭೌತಿಕವಾದ ಮಾತುಗಳು ಈ ರೀತಿಯಾಗಿ ಅತೀಂದ್ರಿಯವಾಗಿ ಸ್ಮೃತಿಯಾಗಿ ಜೀವ ಉಳಿಸಿಕೊಳ್ಳುತ್ತವೆ. ಸಂದಣಿಯ ನುಡಿ ಅಥವ ಜೀವ ಸಂದಣಿಯ ನುಡಿ – ಈ ಸ್ಮೃತಿಗಳು ಸಂದಣಿಸಿ ಅಕ್ಷರಗಳ ಮೂಲಕ ಜೀವ ತಳೆದು, ಜನಪದದ ಸಾಮಾನ್ಯ ಅನುಭವವಾಗಿ ಅಕ್ಷರಗಳಾಗಿ ಮೈದಳೆದು ಕವಿತೆಗಳಾಗುತ್ತವೆ. ಮುಂದಿನದು ದುರಂತ. ಕವಿತೆ ಸಾರ್ವಜನಿಕರ ಸೊತ್ತಾಗುತ್ತದೆ. ಅದಕ್ಕೆ ಪ್ರಾಪ್ತಿಯಿದ್ದರೆ ಸಹೃದಯಿಗಳು ಅದನ್ನು ಗುರುತಿಸಿ ಎತ್ತಿ ಮುದ್ದಾಡಿ ಆನಂದಿಸಬಹುದು. ಸಂತೆಯಲ್ಲಿ ಮಾರಾಟವಾಗದ ಸರಕುಗಳು ಅವೆಷ್ಟೋ ಇರುತ್ತವೆ. ಕವನಗಳ ಸಂತೆಯಲ್ಲಿ ಮಾರಾಟವಾಗದ ಕವನಗಳು ಹಾಗೆಯೇ ಕರಗಿ ಹೋಗಿ ಮರೆಯಾಗಬಹುದು. ಹೀಗೆ ಮಾತು ಭೌತಿಕ ಪ್ರಪಂಚಕ್ಕೆ ಯಾವ ರೂಪದಲ್ಲಿ ಬಂದರೂ ಸಾಯುವುದು ನಿಶ್ಚಿತ! ಅದು ಶಾಶ್ವತವಾಗಿ ಬದುಕುಳಿಯಬಹುದಿದ್ದರೆ ನೆನಪಿನ ಮೌನದಲ್ಲಿ ಮಾತ್ರ.
ಕವನಗಳಾಗುವ ಎಲ್ಲ ಮಾತುಗಳೂ ಸಾಯಬೇಕೆಂದೇನಿಲ್ಲ. ಅವುಗಳ ದೀರ್ಘಾಯುಷ್ಯಕ್ಕೆ ಕವನಗಳ ದೇಹದಿಂದಲೇ ಪೋಷಣೆ ದೊರೆಯಬೇಕಾಗುತ್ತದೆ.
“ಯಾವುದನ್ನು ಎಲ್ಲಿ ಪೋಣಿಸುವುದು
ಎಲ್ಲಿ ಗುಟುಕು ಕೊಟ್ಟು
ಕಾಯುವುದು ಇನ್ನೂ ಬಾರದ
ರೆಕ್ಕೆಗೆ ತೆರೆಯದ ನೀಲಿಗೆ”
ಒಂದು ಕಾವ್ಯ, ಸಂತೆಯಲ್ಲಿ ಬಿಕರಿಯಾಗುವ ಸರಕಾಗಬೇಕಾದರೆ ಅದರಲ್ಲಿ ಜೀವಂತಿಕೆ ಇರಬೇಕು. ಅದು ಬಹುಕಾಲ ಉಳಿಯಬೇಕಾದರೆ ಅದರ ಒಡಲಲ್ಲಿಯೇ ಶಕ್ತಿ ತುಂಬಿರಬೇಕು. ಇದೊಂದು ಕಲೆ. ಪದಗಳನ್ನು ಪೋಣಿಸುವ ಪರಿ, ಅವುಗಳ ನಡುವೆ ಕಾಲವನ್ನು ಗೆಲ್ಲಬಲ್ಲ ಪ್ರತಿಮೆಗಳ ಗುಟುಕು, ಇವೆಲ್ಲಕ್ಕಿಂತ ಹೆಚ್ಚಾಗಿ ಅದು ತಾನೇ ತಾನಾಗಿ ಮೈತಳೆದು ಬರುವ ವರೆಗೆ ಕಾಯುವುದು ಇವೆಲ್ಲ ಕವಿತಾಕೌಶಲದ ಅನಿವಾರ್ಯಗಳು.
“ಕಾಯುವುದು ಇನ್ನೂ ಬಾರದ ರೆಕ್ಕೆಗೆ”, ಸರಿ. ಆದರೆ ಈ “ರೆಕ್ಕೆಗೆ” ಪದವನ್ನು ಮುಂದಿನ ಸಾಲುಗಳ ಜೊತೆಗೆ “ರೆಕ್ಕೆಗೆ ತೆರೆಯದ ನೀಲಿಗೆ ಎಲ್ಲ ಅಳಿಯುತ್ತವೆ” ಎಂದು ಹೊಂದಿಸಿಕೊಂಡಾಗ ಕವಿತೆ ಇನ್ನೊಂದು ನೆಲೆಗೆ ಜಿಗಿಯುತ್ತದೆ.
“ಎಲ್ಲ ಅಳಿಯುತ್ತವೆ
ಈ ನಾನು ಈ ನೀನು
ಈ ಮಾತು ಈ ಜಗತ್ತು”
ನಾನು ನೀನು ಸೇರಿಕೊಂಡಂತೆ ನೆನಪಿನಲ್ಲಿ ಜೀವವುಳಿಸಿಕೊಂಡಿರುವ ಮಾತು ಕೂಡ ಜೀವ ಕಳೆದುಕೊಳ್ಳುತ್ತದೆ. ಆಗ,
“ಆಗ ಇರುವು ಎಲ್ಲಿ ತಂಗುವುದು”
ನಾನು ನೀನು ಈ ಮಾತು ಈ ಜಗತ್ತು ಎಲ್ಲಿ ಅಳಿದರೂ ಇವುಗಳು ಎಲ್ಲಿ ಇರವು ಉಳಿಸಿಕೊಂಡಿರುತ್ತವೆ, ಅಸ್ತಿತ್ವದಲ್ಲಿರುತ್ತವೆ ಎಂಬುದು ಕುತೂಹಲದ ಪ್ರಶ್ನೆ. ಆಗಲೂ,
“ಹೂವು ಮೊಗ್ಗು ಮಾತು
ಯಾರನ್ನು ಎಬ್ಬಿಸುವುದು.
ಕನಸಿನಲ್ಲಿ ಎಚ್ಚರದಲ್ಲಿ”
ಕನಸಿನಲ್ಲಿ ಮತ್ತು ಎಚ್ಚರದಲ್ಲಿ ಎಂಬುದನ್ನು ಎಲ್ಲ ಕಾಲದಲ್ಲಿಯೂ ಎಂತಲೂ ಬದುಕಿದಾಗಲೂ ಸತ್ತ ಮೇಲೂ ಎಂತಲೂ ಅರ್ಥ ಮಾಡಿಕೊಳ್ಳಬಹುದು. ಹೂವು ಮೊಗ್ಗು ಎಂದೆಲ್ಲ ರಮ್ಯ ಕಲ್ಪನೆಯಲ್ಲಿರುವಾಗ ಮಾತು ಯಾರನ್ನು ಎಚ್ಚರಿಸುತ್ತದೆ? ಸ್ಮೃತಿಯಲ್ಲಿ ಜೀವವುಳಿಸಿಕೊಂಡ ಮಾತು ಸತ್ತ ಮೇಲೆ ಎಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ? ಕವಿತೆಯಾದ ಮಾತು ಕಾಲಾಂತರದಲ್ಲಿ ಹೇಗೆ ಬದುಕುಳಿಯುತ್ತದೆ? ಇವೆಲ್ಲವೂ ಕುತೂಹಲದ ವಿಷಯಗಳು.
ಈ ಕವಿತೆಯ ಬಗ್ಗೆ ಬರೆಯುವಾಗ ಹೃದಯದ ಜೊತೆ ಜೊತೆ ಬುದ್ಧಿಯೂ ಕಸರತ್ತು ಮಾಡಿರುವುದನ್ನು ನೀವು ಗುರುತಿಸಬಹುದು. ಈ ಕವಿತೆಗೆ ಬೇರೆಯೇ ಆಯಾಮವಿರುವುದು, ಬಹು ಆಯಾಮಗಳಿರುವುದು ಸಾಧ್ಯ. ಆದುದರಿಂದ ಸಹೃದಯರೆಲ್ಲರೂ ಕವಿತೆಯ ಬಗ್ಗೆ ತಮ್ಮ ಅನಿಸಿಕೆಗಳನ್ನೂ ಪ್ರತಿಕ್ರಿಯೆಯ ರೂಪದಲ್ಲಿ ಜೋಡಿಸಿದರೆ ಕವಿತೆ ಬಹುಕಾಲ ಬದುಕುಳಿಯಬಹುದೆಂದು ನನ್ನ ಆಶಯ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ