- ಮುಂಡಿಗೆಗಳಲ್ಲಿ ಅನುಭಾವ - ಆಗಸ್ಟ್ 9, 2020
‘ಮುಂಡಿಗೆ’ ಎಂಬುದು ದಾಸಸಾಹಿತ್ಯದ ಸಂದರ್ಭದಲ್ಲಿ ಮೂಡಿದ ಸುಲಭವಾಗಿ ಬಿಡಿಸಲಾಗದ ಒಗಟಿನಂತಹ ರಚನೆಗಳು. ಬಿಗಿಯಾಗಿ ಹಿಡಿದ ಮುಷ್ಟಿಕೆಯಲ್ಲಿನ ಪದಾರ್ಥವನ್ನು ಬಿಡಿಸಿಕೊಳ್ಳಲು ಹೇಗೆ ಸುಲಭವಲ್ಲವೋ ಹಾಗೆಯೇ ಮುಂಡಿಗೆಗಳ ಹೂರಣವನ್ನು ಹೊರತೆಗೆಯುವುದು ಅಷ್ಟೇ ಕಷ್ಟಸಾಧ್ಯ. ಮುಷ್ಟಿಕೆ ಎಂಬ ಪದದಿಂದ ಮುಂಡಿಗೆ ಪದ ರೂಪುಗೊಂಡಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಪದ್ಯ ನಿಬದ್ಧವಾಗಿ ‘ಬೆಡಗಿನ ವಚನ’ಗಳನ್ನು ಹೋಲುವ ಮುಂಡಿಗೆಗಳು; ರೂಪಕ, ಸಂಕೇತ, ಪ್ರತಿಮೆಗಳ ಮೂಲಕ, ತತ್ವಸ್ವರೂಪ ಹಾಗೂ ಅನುಭಾವದ ನಿಗೂಢತೆಯನ್ನೂ, ಹೇರಳವಾದ ಪುರಾಣ ಪ್ರಸಂಗಗಳನ್ನೂ ಒಳಗೊಂಡಿರುತ್ತವೆ. ಇವುಗಳು ವಿವಿಧ ಛಂದಸ್ಸಿನಲ್ಲಿದ್ದು ಪಲ್ಲವಿ, ಅನುಪಲ್ಲವಿ ಮತ್ತು 3, 5, 7, 9 ಹೀಗೆ ದಾಸ ಸಾಹಿತ್ಯದ ನಿಯಮದಂತೆ ಬೆಸ ಸಂಖ್ಯೆಯ ಚರಣಗಳನ್ನು ಕೆಲವೊಮ್ಮೆ ಸಮ ಸಂಖ್ಯೆಯ ಚರಣಗಳನ್ನೂ ಹೊಂದಿದ್ದು ತಾಳಬದ್ಧವಾಗಿ ಹಾಡಲೂ ಸಾಧ್ಯವಿರುವುದರಿಂದ ಇವುಗಳನ್ನು ಮುಂಡಿಗೆ ಹಾಡುಗಳು, ಮುಂಡಿಗೆ ಕೀರ್ತನೆಗಳು ಎಂದೂ ಕರೆಯುತ್ತಾರೆ.
“ಕ್ಲಿಷ್ಟ ಮಂತ್ರಭಾಗಗಳಾದ ‘ಬ್ರಹ್ಮೋದ್ಯ’ ಗಳೇ ಮುಂದೆ ಚಿತ್ರ ಕಾವ್ಯಕ್ಕೆ ಸ್ಫೂರ್ತಿಯಾದವು. ಸಂಸ್ಕೃತ ಲೌಕಿಕ ಕಾವ್ಯಗಳಲ್ಲಿನ ಗರ್ಭ ಕವಿತ್ವ. ಶ್ಲೇಷ ಚಿತ್ರ. ಗೂಢ ಚಿತ್ರ, ವರ್ಣಚಿತ್ರ, ಪ್ರಹೇಲಿಕಾ ಮುಂತಾದ ಪ್ರಕಾರಗಳಲ್ಲಿರುವ ಈ ಬೆಡಗು ಕನ್ನಡ ಕಾವ್ಯಗಳಲ್ಲಿಯೂ ಮುಂದುವರಿಯಿತು” ಎಂದು ಬಹುಶ್ರುತ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಅಭಿಪ್ರಾಯಪಡುತ್ತಾರೆ.
ದ್ವಾ ಸುಪರ್ಣಾ ಸಯುಜಾ ಸಖಾಯಾ
ಸಮಾನಂ ವೃಕ್ಷಂ ಪರಿಷಸ್ವಜಾತೇ |
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ
ಅನಶ್ನನ್ನನ್ಯೋ ಅಭಿಚಾಕಶೀತಿ ||
(ಒಂದೇ ಮರದಲ್ಲಿ ಕುಳಿತ ಎರಡು ಪಕ್ಷಿಗಳಲ್ಲಿ ಒಂದು ಹಣ್ಣನ್ನು ಸವಿಯುತಿದ್ದರೆ ಮತ್ತೊಂದು ಅದರ ಗೊಡವೆಯೇ ಇಲ್ಲದೆ ಹಾಯಾಗಿ ಕುಳಿತಿದೆ ಎಂಬುದು ಭಾವ) ಈ ವೇದಮಂತ್ರವೂ ಮೂಂಡಿಗೆಗಳ ರಚನೆಗೆ ಸ್ಪೂರ್ತಿ ಎನ್ನುತ್ತಾರೆ. ವೇದಗಳಲ್ಲಿಯೂ ಉಪನಿಷತ್ತುಗಳಲ್ಲಿಯೂ ಇಂತಹ ಒಗಟುಗಳು ಅಥವಾ ಮುಂಡಿಗೆಗಳು ಸಾಕಷ್ಟು ಕಂಡುಬರುತ್ತವೆ. ಜ್ಞಾನಿಗಳಿಗೆ ಇವುಗಳ ಅಂತರಾಳವನ್ನು ಹೊಕ್ಕು ಅರ್ಥಮಾಡಿಕೊಳ್ಳುವುದು ಬಹಳ ಸುಲಭ. ಸಾಮಾನ್ಯರಿಗೆ ಅದು ಕಬ್ಬಿಣದ ಕಡಲೆ.
ಕಾಡುಕೇದಗೆ, ಗಡುತರವಾದ ದೊಣ್ಣೆ, ಮರದ ದಿಮ್ಮಿ, ಲೋಹಕವಚ, ಒಡಪು ಇತ್ಯಾದಿ ವಿಪುಲಾರ್ಥಗಳೂ ಮುಂಡಿಗೆಗೆ ಇದ್ದು ಒಟ್ಟಿನಲ್ಲಿ ಮಂಡೆ ಬಿಸಿಮಾಡಿ ಬುದ್ಧಿ ಶಕ್ತಿಗೆ ಸವಾಲಾಗಿ, ರಹಸ್ಯಾರ್ಥಗಳನ್ನು ಹೊಂದಿರುವ ಕೃತಿಗಳೇ ಮುಂಡಿಗೆಗಳು.
ಕನ್ನಡದ ಕವಿರಾಜಮಾರ್ಗಕಾರನಾದ ಶ್ರೀವಿಜಯನಲ್ಲದೆ, ಪಂಪನಾದಿಯಾಗಿ ಚಂದ್ರರಾಜ, ಗುರುಲಿಂಗವಿಭು, ಗೋವಿಂದ, ಮುರಿಗೆ ದೇಶಿಕೇಂದ್ರ, ಸರ್ವಜ್ಞ, ಚಿಕ್ಕುಪಾಧ್ಯಾಯ, ಕುಮಾರವ್ಯಾಸ ನಿಜಗುಣ ಶಿವಯೋಗಿ ರತ್ನಾಕರವರ್ಣಿ ಹೀಗೆ ಹಲವಾರು ಕವಿಗಳು ಚಿತ್ರಕವಿತ್ವದ ಈ ಒಂದು ಬಗೆಯ ವೈಶಿಷ್ಟ್ಯಕ್ಕೆ ಮಾರುಹೋಗಿ ಅದನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ವಚನ ಸಾಹಿತ್ಯದ ಸಂದರ್ಭದಲ್ಲಿ ಮೂಡಿದ ಅಲ್ಲಮನ ಬೆಡಗಿನ ವಚನಗಳೂ ಮುಂಡಿಗೆಗಳೆ. ಅಲ್ಲದೆ ಪುರಂದರ ದಾಸ, ಕನಕದಾಸ, ಮಹೀಪತಿ ದಾಸರು. ಪ್ರಸನ್ನ ವೆಂಕಟದಾಸರು, ಭಾಗಣ್ಣದಾಸರು, ಪ್ರಾಣೇಶದಾಸರು, ಕಾಖಂಡಕೀ ಕೃಷ್ಣರಾಯರು ಮುಂತಾದವರೆಲ್ಲ ಮುಂಡಿಗೆಗಳನ್ನು ರಚಿಸಿದ್ದರೂ ಕನಕದಾಸರ ಮುಂಡಿಗೆಗಳು ಸಂಖ್ಯೆಯಲ್ಲಿಯೂ(ಸುಮಾರು 50), ಸ್ವಾರಸ್ಯದಲ್ಲಿಯೂ, ತಿಣುಕಿಸುವುದರಲ್ಲಿಯೂ ಉಳಿದವರೆಲ್ಲದಕ್ಕಿಂತ ವೈಶಿಷ್ಟ್ಯಪೂರ್ಣವಾಗಿರುವುದರಿಂದಲೇ, ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ ಎಂಬ ನುಡಿಗಟ್ಟೇ ಪ್ರಸಿದ್ಧವಾಗಿದೆ. ಅದೂ ಒಂದು ಕಾರಣವಾಗಿ ಕನಕದಾಸರನ್ನು ಮುಂಡಿಗೆಗಳ ಜನಕ ಎಂದೂ ಕರೆಯುತ್ತಾರೆ.
ಮುಂಡಿಗೆಗಳಿಗೆ ನಮ್ಮ ದೇಶದಲ್ಲಿ ಒಂದು ಪರಂಪರೆಯೇ ಇದೆ. ಭೀಮನನ್ನು ಸುತ್ತಿಕೊಂಡ ಅಜಗರನ(ಶಪಿತನಾಗಿ ಹೆಬ್ಬಾವಿನ ರೂಪದಲ್ಲಿದ್ದ ನಹುಷ)ಪ್ರಶ್ನೆ, ಯಕ್ಷಪ್ರಶ್ನೆ, ಪ್ರಶ್ನೋತ್ತರ ಮಾಲಿಕಾ, ಬೇತಾಳನ ಪ್ರಶ್ನೆಗಳು ಇವೆಲ್ಲಾ ನಮ್ಮಲ್ಲಿ ಯಾವತ್ತಿನಿಂದಲೂ ಪ್ರಚಲಿತವಾಗಿವೆ. ಇಲ್ಲಿ ಬರುವ ಪ್ರಶ್ನೆಗಳು ಗೂಢವಾಗಿರುವುದರಿಂದ ಇವುಗಳನ್ನೂ ಮುಂಡಿಗೆಗಳ ಗುಂಪಿಗೆ ಸೇರಿಸಬಹುದಾಗಿದೆ. ಮುಂಡಿಗೆಯ ಸಾಹಿತ್ಯದಲ್ಲಿ ಪೌರಾಣಿಕ ವಾವೆವರಸೆಯ ಮುಂಡಿಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೂ ಅನುಭಾವದ, ತತ್ವಾರ್ಥ ಚಿಂತನೆಯ ಮುಂಡಿಗೆಗಳು ಸಾಕಷ್ಟಿವೆ.
ಮುಂಡಿಗೆಗಳಲ್ಲಿ ಹುದುಗಿಸಿರುವ ಪುರಾಣ ಪ್ರಸಂಗಗಳನ್ನು, ಪಾತ್ರಗಳನ್ನು ಬಿಡಿಸುತ್ತಾ ಹೋದಂತೆ ಕೊಡುವ ಖುಷಿಯೇ ಬೇರೆ. ಕಷ್ಟವಾದೊಂದು ಪ್ರಶ್ನೆ ಪತ್ರಿಕೆಯನ್ನು ಯಶಸ್ವಿಯಾಗಿ ಉತ್ತರಿಸಿದಷ್ಟೇ ಗೆಲುವಿನ ಸಂತೋಷವನ್ನೂ ಕೊಡುವುದು ಸುಳ್ಳಲ್ಲ. ಅದರೆ ಅವುಗಳಿಗೆ ಬೇಕಾದದ್ದು ನಮ್ಮ ರಾಮಾಯಣ ಮಹಾಭಾರತ, ಭಾಗವತ, ಶಿವಪುರಾಣ, ಇತ್ಯಾದಿ ಪುರಾಣಗಳ ವಿಸ್ತೃತ ಅರಿವು.
ಇನ್ನು ಅನುಭಾವ ಎಂಬುದಕ್ಕೆ ವಿ. ಎಸ್. ಆಪ್ಟೆಯವರ ಸಂಸ್ಕೃತ –ಇಂಗ್ಲೀಷ್ ನಿಘಂಟುವಿನಲ್ಲಿ(ಂಟಿ exಣeಡಿಟಿಚಿಟ mಚಿಟಿiಜಿesಣಚಿಣioಟಿ oಡಿ iಟಿಜiಛಿಚಿಣioಟಿ oಜಿ ಚಿ ಜಿeeಟiಟಿg- ಭಾವ – bಥಿ ಚಿಠಿಠಿಡಿoಠಿಡಿiಚಿಣe sಥಿmಠಿಣoms) ಸಂಕೇತಗಳ ಮೂಲಕ ತಿಳಿಯುವ ಭಾವನೆ ಎಂಬ ಅರ್ಥವಿದೆ. ಹೀಗೆ ಪ್ರತಿಮಾತ್ಮಕ ವಿಧಾನದಿಂದ ಭಗವಂತನ ಕುರಿತ ಪಾರಮಾರ್ಥಿಕ ಜ್ಞಾನವನ್ನು ತಿಳಿಯುವವರು ಅನುಭಾವಿಗಳು.
ಅನುಭವ ಇಂದ್ರಿಯಗಮ್ಯವಾದುದು. ಅಥವಾ ಇಂದ್ರಿಯಗಳಿಂದ ದೊರಕುವ ಸಂವೇದನೆ ಅನುಭವ. ಭವವನ್ನು ಅನುಸರಿಸಿಕೊಂಡು ಹೋಗುವುದು ಅನುಭವ. ಇಂದ್ರಿಯಾತೀತವಾದ ಅನುಭವವನ್ನು ಅನುಭಾವ ಎನ್ನಲಾಗುತ್ತದೆ. ತತ್ವಜ್ಞಾನವನ್ನು ಈ ಕಾರಣದಿಂದಲೇ ಅನುಭಾವ ಎನ್ನುತ್ತಾರೆ.
ಮುಂಡಿಗೆಗಳಲ್ಲಿ ಸಂಕೇತ, ರೂಪಕಗಳ ಮೂಲಕ ತಾತ್ವಿಕ ಜಿಜ್ಞಾಸೆಯನ್ನು ಹಲವು ಸಾಧಕರು ಮಾಡಿದ್ದಾರೆ. ಕನಕದಾಸರ,
ಓಹೋ ಎನ್ನ ಜೀವ ಮೈಯೆಲ್ಲ ನವಗಾಯ, *ಅಂಗಡಿ ಬೀದಿಯಲ್ಲೊಂದು ಆಕಳ ಕರು ನುಂಗಿತು, ಪಕ್ಕಿಯ ಕುರುಹ ಬಲ್ಲರು ಪೇಳಿರಿ;
ಪುರಂದರದಾಸರ,
“ಆರು ತೆರೆಯ ನೋಡಂಬಿಗ, ಅದು ಮೀರಿ ಬರುತಲಿದೆ ಅಂಬಿಗ”, “ಶುಕನೆಂಬ ಪಕ್ಷಿ ಹೇಳುತದಪ್ಪ” ಮತ್ತು ಸುಪ್ರಸಿದ್ಧವಾದ “ತಾರಕ್ಕ ಬಿಂದಿಗೆ” ಮುಂತಾದವು ಅನುಭಾವದ ಮುಂಡಿಗೆಗಳ ಗುಂಪಿಗೆ ಸೇರುತ್ತವೆ. ಒಟ್ಟಿನಲ್ಲಿ ಅನುಭಾವದ ವಿಚಾರಗಳನ್ನು ಪ್ರತಿಮಾ ವಿಧಾನದಲ್ಲಿ ಹೇಳುವುದು ಸುಲಭ ಎನ್ನುವುದು ಅನುಭಾವಿಗಳ ಮತ.
ಈ ಹಿನ್ನೆಲೆಯಲ್ಲಿ ಮೊದಲಿಗೆ ಕನಕದಾಸರ ಅನುಭಾವದ ಕೆಲವು ಮುಂಡಿಗೆಗಳನ್ನು ಅವಲೋಕಿಸಬಹುದು.
ಓಹೋ ಎನ್ನ ಜೀವ ಮೈಯೆಲ್ಲ ನವಗಾಯ ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ. || ಪ ||
ಮಾಡಿಲ್ಲ ಮಳಿಯಿಲ್ಲ ಮರದ ಮ್ಯಾಲೆ ನೀರ ಕಂಡೆ ಕಾಡು ಸುಡುವುದ ಕಂಡೆ ಬೂದಿಯ ಕಾಣಲಲಿಲ್ಲ ||1||
ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರು ತೋರಲಿಲ್ಲ ಹೊತ್ತುಕೊಂಡು ತಿರುಗಿದೆ ರೊಕ್ಕದ ಪ್ರಾಣಿಯನ್ನು ||2||
ಕನಕದಾಸರ ಮುಂಡಿಗೆ
ಪಲ್ಲವಿ : ಭಗವದ್ಗೀತೆಯಲ್ಲಿ ಬರುವ ‘ನವದ್ವಾರೇ ಪುರೇ’ ಎಂಬ, ‘ಒಂಭತ್ತು ಬಾಗಿಲ ಮನೆ’ ಎಂದು ದಾಸರು ಹೇಳುವ ನವರಂಧ್ರಗಳೇ(ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ, ಗುದದ್ವಾರ) ನವ ಗಾಯಗಳು. ಅಲ್ಲದೆ ಈ ಸ್ಥೂಲ ಶರೀರ ದೊರೆತಾಗ ಹೊಸದಾಗಿ ಬಂದು ಸೇರಿಕೊಂಡವಾದ್ದರಿಂದ ನವಗಾಯವೂ ಹೌದು. ಗಾಯ ಕಟ್ಟುವುದು ಎಂದರೆ ನಿಯಂತ್ರಿಸುವುದು. ಇವು ಇಂದ್ರಿಯಗಳ ದ್ವಾರಗಳಾದ್ದರಿಂದ ನಿಯಂತ್ರಣಕ್ಕೆ ಸಿಕ್ಕದೆ ಹತ್ತೂ ದಿಕ್ಕಿಗೆ ಹೊರಚಾಚಿಯೇ ಇರುತ್ತವೆ. ಗಾಳಿ ಹಾಕುವುದು ಎಂದರೆ ಪ್ರಾಣಾಯಾಮದ ಮೂಲಕ ಪ್ರಾಣಶಕ್ತಿಯ ಗಾಳಿ ಹಾಕುವವರೂ ಇಲ್ಲ.
“ಮಾಡು ಇಲ್ಲ, ಮಳೆಯೂ ಇಲ್ಲ ಆದರೂ ಮರದ ಮೇಲೆ ನೀರ ಕಂಡೆ”.ಈ ದೇಹವೆಂಬ ಮರದ(ಏಷೋಶ್ವತ್ಥಃ ಸನಾತನಃ)ತುತ್ತ ತುದಿ ಶಿರ. ಅಲ್ಲಿರುವ ಸಹಸ್ರಾರ ಚಕ್ರದಲ್ಲಿ ಅಮೃತ ರಸ ತೊಟ್ಟಿಕ್ಕುತ್ತದೆ ಎಂಬ ಯೋಗಶಾಸ್ತ್ರದ ಅರ್ಥವನ್ನಿಲ್ಲಿ ಕನಕದಾಸರು ಹುದುಗಿಸಿದ್ದಾರೆ. ಇನ್ನು ‘ಕಾಡು ಸುಡುವುದು ಕಂಡೆ, ಬೂದಿಯ ಕಾಣಲಿಲ್ಲ’, ಎಂದರೆ ಸತತ ಯೋಗಾನುಸಂಧಾನದಿಂದ, ಧ್ಯಾನದಿಂದ ಪಾಪ ರಾಶಿಯು ನಿಶ್ಶೇಷ ದಗ್ಧವಾಗಿ ಹೋದರೆ ಕಲ್ಮಷ ರೂಪವಾದ ಯಾವ ಬೂದಿಯೂ ಉಳಿಯುವುದಿಲ್ಲ ಎಂದರ್ಥ.
‘ಬಿತ್ತಲಿಲ್ಲ ಬೆಳೆಯಲಿಲ್ಲ, ನೆಟ್ಟು ನೀರು ತೋರಲಿಲ್ಲ’: ಭಗವಚ್ಚಿಂತನೆಯ, ಭಗವಂತನ ಧ್ಯಾನವೆಂಬ ಬೀಜವನ್ನು ಬಿತ್ತಲಿಲ್ಲ, ಸಾಧನೆಯ ನೀರು ಹಾಕಿ ಪೋಷಿಸಲಿಲ್ಲ. ಬದಲಿಗೆ ದುಡ್ಡಿನ ಮೋಹವೆಂಬ ರೊಕ್ಕದ ಪ್ರಾಣಿಯನ್ನು ಹೊತ್ತುಕೊಂಡು ತಿರುಗಿದೆ ಎಂದರೆ ಹೆಚ್ಚು ಹೆಚ್ಚು ಹಣಗಳಿಸುವ ಮೋಹದಿಂದ ಭಗವನ್ನಾಮವೆಂಬ ಸಿರಿಯಿಂದ ಚ್ಯುತನಾಗಿ ಬಿಟ್ಟೆ ಎಂಬ ಪರಿತಾಪ. ಹೀಗೆ 10 ಚರಣಗಳಲ್ಲಿ ಸಾಗುತ್ತದೆ ಕನಕದಾಸರ ಈ ಅನುಭಾವದ ಮುಂಡಿಗೆ.
ದೇಹದ ಅವಸ್ಥಾತ್ರಯಗಳನ್ನು ತಿಳಿಸುವ ಈ ಮುಂಡಿಗೆ:
ಮೂವರೇರಿದ ಬಂಡಿ
ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬ
ಓಡಾಡಿದವನೊಬ್ಬ ಈ ಮೂವರು
ಆಡಿದವಗೆ ಕಿವಿಯಿಲ್ಲ ನೋಡಿದನ ಮಗ ಪಾಪಿ
ಓಡಾಡಿದವನೊಬ್ಬ ಓಡನಯ್ಯ
ಬಾಲ್ಯವೆಂಬುದು ಅತ್ಯಂತ ಚಟುವಟಿಕೆಯ ಕಾಲ. ಬಾಲಕ ಆಡಿ ಪೊತ್ತವನು. ಯೌವನ ತಾರುಣ್ಯವೆಂಬುದು ಹೊಸ ಹೊಸ ನೋಟಗಳನ್ನು ಚೆಲುವಿನ ದೃಶ್ಯಗಳನ್ನು, ಚೆಲುವನ್ನು ನೋಡಿ ನೋಡಿ ಅನುಭವಿಸಿ ಆಸ್ವಾದಿಸಲು ಹಪಹಪಿಸುವ ವಯಸ್ಸು. ಆದ್ದರಿಂದ ನೋಡಿ ತಿರುಗಿದವನು ತರುಣ. ಇದು ತಾರುಣ್ಯಾವಸ್ಥೆಯನ್ನು ಬಿಂಬಿಸುವ ಸಾಲು. ಆಡಿದವಗೆ ಕಿವಿಯಿಲ್ಲ. ಬಾಲ್ಯದಲ್ಲಿ ಮಕ್ಕಳು ಯಾವುದನ್ನೂ ಯಾರನ್ನೂ ಕೇಳುವುದಿಲ್ಲ. ಆದ್ದರಿಂದ ಬಾಲಕನಿಗೆ ಕಿವಿಯಿಲ್ಲ. ಬಾಲಕ ತರುಣನಾದಂತೆ ತಪ್ಪು ಸರಿಗಳ, ಪಾಪ ಪುಣ್ಯಗಳ ವಿವೇಚನೆಯುಂಟಾಗಿರುತ್ತದೆ. ಆದರೂ ಅವನಿಂದ ಪಾಪಗಳು ಘಟಿಸುತ್ತಲೇ ಇರುತ್ತವಾದ್ದರಿಂದ ಅವನು ಪಾಪಿ. ಓಡಾಡಿದವನು ಎಂದರೆ ತನ್ನ ಜೀವನವನ್ನು ಕೆಲಸ ಕಾರ್ಯ ಆಸೆ ಆಕಾಂಕ್ಷೆಗಳ ಹಿಂದೆ ಓಡಾಡುತ್ತಲೇ ಕಳೆಯುತ್ತಾ ಬಂದು ಈಗ ವೃದ್ಧಾಪ್ಯದಲ್ಲಿರುವವನು. ಆದರೆ ಹಣ್ಣಾಗಿ ಜೀರ್ಣವಾಗಿರುವ ಅವನೀಗ ಓಡಲಾರದವನಾಗಿದ್ದಾನೆ.
ಮಾಯಾಕಾರನು ಒಬ್ಬ ಕಾಯ ಬಡಲಿಗನೊಬ್ಬ ಕಾಯಗಿರಿ ಪೊತ್ತೊಬ್ಬ ಈ ಮೂವರು ಮಾಯಕಾರನಿಗೆ ರೂಪ ಕಾಯಬಡಿಗ ಚೆಲ್ವ ಕಾಯಗಿರಿ ಪೊತ್ತವನು ಕಡು ಧರ್ಮಿಯು
ಬಾಲ್ಯ ತಾರುಣ್ಯ ವೃದ್ಧಾಪ್ಯದಲ್ಲಿ ಮನುಷ್ಯರು ಹೇಗಿರುತ್ತಾರೆ, ಹೇಗೆ ಕಾಣುತ್ತಾರೆ, ಯಾವ ಸ್ಥಿತಿಯನ್ನು ಹಾಯುತ್ತಿರುತ್ತಾರೆ ಎಂಬುದನ್ನು ಬಲು ಮಾರ್ಮಿಕವಾಗಿ ಈ ಚರಣದಲ್ಲಿ ಕನಕದಾಸರು ಹೀಗೆ ಹೇಳುತ್ತಾರೆ:
ಎಳೆಯ ವಯಸ್ಸಿನ ಮಕ್ಕಳು ಬಲು ಮುದ್ದಾಗಿರುತ್ತಾರೆ. ಅದರಲ್ಲೂ ಅವರ ಮೊಗ, ಮಾತು ನಗು ಎಲ್ಲವೂ ಅತಿ ಮೋಹಕ. ಅದಕ್ಕೇ ಶಿಶು ಮಾಯಕಾರ. ತಾರುಣ್ಯದಲ್ಲಿ ಅವನು ಕಾಯಬಡಲಿಗ. ತನಗಾಗಿ ತನ್ನ ಪರಿವಾರಕ್ಕಾಗಿ ಸದಾ ದುಡಿಮೆಯಲ್ಲಿ ತನ್ನ ದೇಹವನ್ನು ತೊಡಗಿಸಿಕೊಂಡಿರುತ್ತಾನೆ. ಆದರೆ ಮೊದಲಿನ ಈ ಎರಡು ಅವಸ್ಥೆಗಳನ್ನು ದಾಟುವ ಹೊತ್ತಿಗೆ ಅವನ ದೇಹ ಬಾಳಿನ ಹೊರೆಯನ್ನು ಹೊತ್ತು ಸೋತಿರುತ್ತದೆ. ಬದುಕಿನ ನಿಸ್ಸಾರತೆಯು ಅರಿವಾಗುತ್ತಾ ಹೋಗಿ ಜೀವನದಲ್ಲಿ ಧರ್ಮಶ್ರದ್ಧೆಯ ಅಧ್ಯಾತ್ಮದ ಪ್ರವೇಶವಾಗಿರುತ್ತದೆ.
ಯಾವ ಹಕ್ಕಿ ಇದು ಎಂದು ಯೋಚಿಸಿ ತಿಣುಕುವಂತೆ ಮಾಡುವ ಕನಕದಾಸರ ಈ ಮತ್ತೊಂದು ಮುಂಡಿಗೆ ನೋಡಿ:
ಪಕ್ಕಿಯ ಕುರುಹು ಬಲ್ಲರು ಹೇಳಿರಿ ಪಕ್ಕಿಯ ಕುರುಹು ಬಲ್ಲರು ಹೇಳಿರಿ || ತನ್ನ ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ || ಪ || ಬಣ್ಣಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು ತಣ್ಣನೆ ಹೊತ್ತಲಿ ತವಕಗೊಂಬುವುದು || 1 ||
ಪಕ್ಕಿಯ ಕುರುಹು…………… ಇದು ಓಂಕಾರ ಸ್ವರೂಪವೆಂಬ ಜ್ಞಾನದ ಪಕ್ಷಿ. ಆದರೆ ಪ್ರಪಂಚದ ಜನರು ಭಗವಂತನ ಜ್ಞಾನದ ಬಗ್ಗೆ ಆಸಕ್ತಿ ಇಲ್ಲದೆ ಲೌಕಿಕ ಸುಖವನ್ನು ಪಡೆಯುವುದರಲ್ಲೇ ಮಗ್ನರಾಗಿರುವುದರಿಂದ ತನ್ನ ಮಕ್ಕಳಿಗೇ ಹಿತವೆನಿಸದೆ ದೂರವಾದ ಜ್ಞಾನ ಅವರಿಗೆ ವೈರಿಯ ಸ್ವರೂಪ ಬಣ್ಣ ಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು………ಜ್ಞಾನವು ಅಪರಂಪಾರ.
ಅದರ ಹರಹು ಬಹಳ ವಿಸ್ತಾರವಾಗಿ ವೈವಿಧ್ಯಮಯವಾದ ಶಾಖೋಪಶಾಖೆಗಳಲ್ಲಿ ಹರಡಿರುವುದರಿಂದ ಅದು ಬಣ್ಣಬಣ್ಣದ ಪಕ್ಷಿ. ಜ್ಞಾನೋಪಾಸನೆ, ಧ್ಯಾನೋಪಾಸನೆ ಮಾಡುವ ಸಾಧಕ ಅರ್ಧನಿಮೀಲಿತ ನೇತ್ರನಾಗಿ ಧ್ಯಾನಸ್ಥನಾಗಿರುವುದರಿಂದ ಅವನ ಕಣ್ಣು ಮುಚ್ಚಿದಂತೆಯೂ ಅಲ್ಲ ತೆರೆದುಕೊಂಡಿರುವಂತೆಯೂ ಅಲ್ಲ. ಇನ್ನು ಹುಣ್ಣಿಮೆಯನ್ನು ವೃದ್ಧಾಪ್ಯಕ್ಕೆ ಸಂವಾದಿಯಾಗಿ ಬಳಸುವ ಕನಕದಾಸರು, ತಣ್ಣನೆ ಹೊತ್ತಲ್ಲಿ ಅಂದರೆ ದೇಹ ಪ್ರಾಣವಿಹೀನವಾಗಿ ತಣ್ಣಗಾಗುವ ಕಾಲ ಹತ್ತಿರವಾದಂತೆ ಮನುಷ್ಯನಿಗೆ ತಾನು ಇಷ್ಟು ಕಾಲ ಜ್ಞಾನಾರ್ಜನೆ ಮಾಡಲಿಲ್ಲ, ಬದುಕು ವ್ಯರ್ಥವಾಯಿತು ಇನ್ನೇನು ಗತಿ ಎಂಬ ಕಳವಳ, ಭೀತಿ, ತವಕ ಉಂಟಾಗುವುದನ್ನು ಈ ಸಾಲುಗಳಲ್ಲಿ ಬಿಂಬಿಸುತ್ತಾರೆ.
ತನ್ನ ಕಾಲದಲ್ಲೇ ನವಕೋಟಿ ನಾರಾಯಣನೆನಿಸಿದ್ದ ಎಂಜಲು ಕೈಯಲ್ಲಿ ಕಾಗೆಯನ್ನೂ ಹೊಡೆಯದಷ್ಟು ಜಿಪುಣಾಗ್ರೇಸರನ ಕಣ್ಣು, ಪತ್ನಿಯ ಕಾರಣದಿಂದ ತೆರೆದಾಕ್ಷಣಕ್ಕೆ ಎಲ್ಲವನ್ನೂ ದಾನ ಮಾಡಿ ದಂಡಿಗೆ ಬೆತ್ತ ಜೋಳಿಗೆ ಹಿಡಿದ ಶೀನಪ್ಪ ನಾಯಕ, ಪುರಂದರ ವಿಟ್ಠಲ ದಾಸನಾಗಿ, ಪುರಂದರದಾಸನಾಗಿಬಿಟ್ಟ. ಲಕ್ಷಾಂತರ ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳಲ್ಲದೆ ಮುಂಡಿಗೆಗಳನ್ನು ರಚಿಸಿರುವ ಪುರಂದರದಾಸರ ಕೆಲವು ಮುಂಡಿಗೆಗಳು ಹಾಡುಗಳಾಗಿಯೂ ಅತ್ಯಂತ ಜನಪ್ರಿಯವಾಗಿವೆ. ಅವುಗಳಲ್ಲಿ ಒಂದೆರಡನ್ನು ಅವಲೋಕಿಸೋಣ: ಸರಿಯಾದ ಅರ್ಥ ತಿಳಿಯದಿದ್ದರೂ ಪದ ಚಮತ್ಕಾರದಿಂದ ನಾದವೈಭವದಿಂದ ಎಲ್ಲರನ್ನೂ ಸೆಳೆದಿರುವ ಜನಪ್ರಿಯ ಕೀರ್ತನೆ:
ತಾರಕ್ಕ ಬಿಂದಿಗೆ
ತಾರಕ್ಕ ಬಿಂದಿಗೆ ನಾನೀರಿಗ್ಹೋಗುವೆ | ತಾರೆ ಬಿಂದಿಗೆಯ ಬಿಂದಿಗೆ ಒಡೆದರೆ ಒಂದೇ ಕಾಸು | ತಾರೆ ಬಿಂದಿಗೆಯ ರಾಮನಾಮವೆಂಬ ರಸವುಳ್ಳ ನೀರಿಗೆ | ತಾರೆ ಬಿಂದಿಗೆಯ ಕಾಮಿನಿಯರ ಕೂಡೆ ಏಕಾಂತವಾಡೆನು | ತಾರೆ ಬಿಂದಿಗೆಯ ಗೋವಿಂದನೆಂಬ ಗುಣವುಳ್ಳ ನೀರಿಗೆ | ತಾರೆ ಬಿಂದಿಗೆಯ ಆವಾವ ಪರಿಯಲ್ಲಿ ಅಮೃತದ ಪಾನಕ್ಕೆ | ತಾರೆ ಬಿಂದಿಗೆಯ ಬಿಂದು ಮಾಧವನ ಘಟ್ಟಕ್ಕೆ ಹೋಗುವೆ | ತಾರೆ ಬಿಂದಿಗೆಯ ಪುರಂದರವಿಠಲಗೆ ಅಭಿಷೇಕ ಮಾಡುವೆ | ತಾರೆ ಬಿಂದಿಗೆಯ
ಮನೆಯ ಬಳಕೆಗೆ ನೀರನ್ನು ತರಲು ಕೆರೆಗೋ, ಬಾವಿಗೋ ಹೊಳೆಗೋ ಹೋಗುತ್ತಿರುವವಳು ಬಿಂದಿಗೆಯನ್ನು ತೆಗೆದುಕೊಂಡು ಬಾ ಎಂದು ತನ್ನ ಅಕ್ಕನನ್ನು ಎಂದು ಕರೆಯುತ್ತಿರುವುದೇನೋ ಎಂದು ಮೊದಲ ನೋಟಕ್ಕೆ ಅನ್ನಿಸಿದರೂ ಇದರಲ್ಲಿರುವ ಅರ್ಥ ಬಹಳ ವಿಶೇಷವಾಗಿದೆ. ಈಕೆ ಕರೆಯುತ್ತಿರುವುದಾದರೂ ಯಾವ ಅಕ್ಕನನ್ನು!? ಪ್ರಕೃತಿರೂಪಿಣಿಯಾದ ಮಹಾಲಕ್ಷ್ಮೀ ದೇವಿಯೇ ಈ ಅಕ್ಕ. ಹಲವು ಲಕ್ಷ ಯೋನಿಗಳಲ್ಲಿ ಬಂದು ಸಧ್ಯ ನರ ಶರೀರವನ್ನು ಪಡೆದಿರುವ ಈ ದೇಹವೇ ಬಿಂದಿಗೆ. ಸತ್ತ ಮೇಲೆ ಈ ‘ಬಿಂದಿಗೆ’ ಕೊಳೆತು ನಾರುತ್ತಾ, ಅಂದರೆ ದೇಹ ಬಿದ್ದು ಮರಣವನ್ನಪ್ಪಿದರೆ ಯಾವ ಕೆಲಸಕ್ಕೂ ಬಾರದೆ. ಇದರ ಬೆಲೆ ಒಂದು ಕಾಸೂ ಇರದೆ, ಎಷ್ಟು ಬೇಗ ಸಾಧ್ಯವಾದರೆ ಅಷ್ಟು ಬೇಗ ಸ್ಮಶಾನಕ್ಕೆ ಸಾಗಿಸಿ ವಿಸರ್ಜಿಸಿ, ಅದರ ಅಂತ್ಯಕ್ತಿಯೆ ಮುಗಿಸಿಬಿಡಬೇಕು. ಆದ್ದರಿಂದ ಸತ್ತ ನಂತರ ಯಾವ ಪ್ರಯೋಜನಕ್ಕೂ ಬರದ ಈ ದೇಹ ವೆಂಬ ‘ಬಿಂದಿಗೆ ಒಡೆದರೆ ಒಂದೇ ಕಾಸು. ಈ ಬಿಂದಿಗೆಯೊಳಗೆ ತುಂಬಿಕೊಳ್ಳಬೇಕಾದ ನೀರೇ ‘ನಾರಾಯಣ’ (‘ನಾರ’ ಅಂದರೆ ನೀರು ‘ಅಯನ’ ಅಂದರೆ ವಾಸಸ್ಥಾನ. (‘ಆಪೋ ನಾರಾಃ ಇತಿ ಪ್ರೋಕ್ತಾಃ, ಅಪೋ ವೈ ನರ ಸೂನವಃ, ಅಯನಂ ತಸ್ಯ ತಾಃಪೂರ್ವಂ ತೇನ ನಾರಾಯಣಃ ಸ್ಮತಃ’). ಜಲಧಿಶಯನನಾದ ನಾರಾಯಣ ಭಗವಂತನನ್ನು ಹೃದಯದಲ್ಲಿ ತುಂಬಿಸಿಕೊಂಡು ಭಕ್ತಿಭಾವದಲ್ಲಿ ಶರೀರ ಮನಸ್ಸುಗಳನ್ನು ಮುಳುಗಿಸಿಬಿಡುವುದು ಎಂಬ ಅರ್ಥ. ‘ಕಾಮಿನಿಯರ ಕೂಡೆ ಏಕಾಂತವಾಡೆನು’ ಎನ್ನುವುದನ್ನು ಸ್ತ್ರೀಯರೊಂದಿಗೆ ಕಾಮಕೇಳಿಯಲ್ಲಿ ಸರಸಸಲ್ಲಾಪದಲ್ಲಿ ನಿರತನಾಗುವುದನ್ನು ಎಂಬಷ್ಟೇ ಅರ್ಥಕ್ಕೆ ಸೀಮಿತಗೊಳಿಸದೆ ಇಂದ್ರಿಯಗಳ ಚಾಪಲ್ಯಕ್ಕೆ ಒಳಗಾಗದೆ ಭಗವನ್ನಾಮ ಸಂಕೀರ್ತನೆಯಲ್ಲಿ ಮೈಮರೆಯುವೆ ಎಂಬ ಲಕ್ಷಿತಾರ್ಥ.
‘ಗೋವಿಂದನೆಂಬೊ ಗುಣವುಳ್ಳ ನೀರಿಗೆ………..’ ಆದ್ದರಿಂದ ಪರಮ ಶ್ರೇಷ್ಠವಾದ ಸಾಧನೆಗೆ ಸಾಧನವಾದ ಈ ಮಾನವ ಶರೀರವನ್ನು ಪಡೆದ ಮೇಲೆ ರಸಭರಿತವಾದ ಅಮೃತ ಸದೃಶವಾದ ರಾಮನಾಮವನ್ನು ಈ ದೇಹದ ಕಣಕಣವೂ ಜಪಿಸುವಂತಹ ರೀತಿಯಲ್ಲಿ ತುಂಬಿಕೊಳ್ಳಬೇಕು. ‘ಗೋವಿಂದೇತಿ ಸದಾ ಸ್ನಾನಂ, ಗೋವಿಂದೇತಿ ಸದಾ ಜಪಂ, ಗೋವಿಂದೇತಿ ಸದಾ ಧ್ಯಾನಂ, ಸದಾ ಗೋವಿಂದ ಕೀರ್ತನಂ.’ ಹೀಗೆ ಮುಂಜಾವಿನಿಂದ ಎಲ್ಲ ಕಾರ್ಯಗಳಲ್ಲೂ ಎಲ್ಲಾ ಸಂದರ್ಭದಲ್ಲೂ ಅಜಪಾಮಂತ್ರದಂತೆ ಗೋವಿಂದ ನಾಮ ನಮ್ಮ ಕಣಕಣದಲ್ಲೂ ತುಂಬಿರಬೇಕು. ‘ಬಿಂದು ಮಾಧವನ ಘಟ್ಟಕ್ಕೆ ಹೋಗುವೆ’’ ಪರಮ ಪವಿತ್ರವಾದ ಮೋಕ್ಷದಾಯಕವಾದ ಸ್ನಾನವನ್ನು ಮಾಡಲು ಕಾಶಿಯಲ್ಲಿರುವ ಬಿಂದು ಮಾಧವನ ಘಟ್ಟಕ್ಕೆ ಹೋಗಬೇಕು, ಅಲ್ಲಿ ತ್ರಿಲೋಕಪಾವನೆಯಾದ ಗಂಗೆಯಲ್ಲಿ ಮಿಂದು, ಬಿಂದುಮಾಧವನ ದರ್ಶನವನ್ನು ಪಡೆದು, ಕರ್ಮವೆಂಬ ಅಮಲ ಜಲದಿಂದ ಅವನಿಗೆ ಅಭಿಷೇಕ ಮಾಡುವೆ. ಮಾಡಬೇಕು. ಇಂಥಹ ವಿಸ್ಮಯಕರವಾದ ಮೋಕ್ಷಸಾಧನೆಗೆ ನೆರವಾಗುವ ಸತ್ಕರ್ಮಸಾಧನೆಗೆ ನೆರವಾಗುವ ಶರೀರವನ್ನು ನೀಡೆಂದು ಲಕ್ಷ್ಮೀದೇವಿಯನ್ನು ಬೇಡಿಕೊಳ್ಳುವುದೇ ಅತ್ಯಂತ ಜನಪ್ರಿಯವಾದ ಈ ಕೀರ್ತನೆಯು ಗರ್ಭೀಕರಿಸಿಕೊಂಡಿರುವ ಅರ್ಥ.
ಪುರಂದರ ದಾಸರ ಮತ್ತೊಂದು ಜನಪ್ರಿಯ ಕೀರ್ತನೆ,
‘ಮಾಡು ಸಿಕ್ಕದಲ್ಲಾ’
ಮಾಡು ಸಿಕ್ಕದಲ್ಲಾ – ಮಾಡಿನ,
ಪುರಂದರ ದಾಸರು
ಗೂಡು ಸಿಕ್ಕದಲ್ಲಾ
ಜೋಡು ಹೆಂಡಿರಂಜಿ ಓಡಿಹೋಗುವಾಗ
ಗೋಡೆ ಬಿದ್ದುಬಯಲಾಯಿತಲ್ಲಾ
ದಾಸರುಗಳು, ಅನುಭಾವಿಗಳೆಲ್ಲಾ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ನರದೇಹದ ನಶ್ವರತೆಯನ್ನು ಕುರಿತಾಗಿ ಎಚ್ಚರಿಸುವವರೆ. ಅತಿ ದುರ್ಲಭವಾದ ಮಾನವ ಜನ್ಮ ದೊರೆತಮೇಲೆ ಲೋಲುಪತೆಯಿಂದ, ದುಶ್ಚಟ ದುರ್ಗುಣಗಳನ್ನು ತುಂಬಿಕೊಂಡು, ಸಾಧನೆಗೆ ಒದಗುವ ಈ ಶ್ರೇಷ್ಠ ಜನ್ಮವನ್ನು ಹಾಳು ಮಾಡಿಕೊಳ್ಳದೆ ಸತ್ಕರ್ಮ, ಸಚ್ಚಾರಿತ್ರ, ಸದುಪಾಸನೆಗಳ ಮಾರ್ಗ ಹಿಡಿದು ಅಕ್ಷಯವಾದ ಕೈವಲ್ಯವನ್ನು ಪಡೆಯುವುದೇ ಪರಮವಾದ ಮತ್ತು ಏಕಮೇವ ಗುರಿಯಾಗಬೇಕು ಎಂದು ಸಾರಿ ಸಾರಿ ಹೇಳುತ್ತಾರೆ. ಅಜ್ಞಾನವಶರಾಗಿ ಅಡ್ಡಹಾದಿ ಹಿಡಿದು ಈ ಅಮೂಲ್ಯ ಜೀವನವನ್ನು ಹಾಳುಮಾಡಿಕೊಂಡು ಕಡೆಯಲ್ಲಿ ಪರಿತಪಿಸುವುದರಿಂದ ಪ್ರಯೋಜನವೇನು ಎಂದು ನಮ್ಮನ್ನು ಪದೇ ಪದೇ ಎಚ್ಚರಿಸುತ್ತಾರೆ.
‘ಮಾಡು’ ಎಂಬುದು ಕರ್ಮ ಮೋಕ್ಷಸಾಧನೆಗೆ ಕಾರಣವಾದ ಕರ್ಮ ಜ್ಞಾನಗಳ ಭಕ್ತಿಮಾರ್ಗ. ‘ಮಾಡಿನ ಗೂಡು’ ನಿಶ್ಚಲ ಭಕ್ತಿಗೆ ನಿಲುಕುವ ಭಗವಂತ. ಆದರೆ ಆ ಮಾಡನ್ನು ಹಿಡಿದು, ಮಾಡಿನ ಗೂಡನ್ನು(ಪರಮಾತ್ಮನನ್ನು) ಸೇರುವುದು ಅಷ್ಟು ಸುಲಭವಲ್ಲ. ಆ ಸಾಧನೆ ಇನ್ನೂ ತನ್ನಿಂದ ಸಾಧ್ಯವಾಗಿಲ್ಲವೆಂಬ ಕೊರಗು ಇದೆ. ‘ಜೋಡು ಹೆಂಡಿರು’ ಎಂದರೆ ಅನ್ಯಥಾಜ್ಞಾನ (ಭಗವದ್ ಸ್ವರೂಪವನ್ನು ಅರಿಯಲು ಬೇಕಾದ ಜ್ಞಾನದ ಕಡೆ ಮನಸ್ಸನ್ನು ಹರಿಸದೆ, ಬರೀ ಪ್ರಾಪಂಚಿಕ ಜ್ಞಾನ ಸಂಪಾದನೆಗಾಗಿ ಹಪಹಪಿಸುವುದು) ಮತ್ತು ಭಗವಂತನ ಬಗೆಗಿನ ಮರೆವು, ವಿಸ್ಮೃತಿ. ನಮ್ಮ ಜೀವನದಲ್ಲಿ ಈ ಅನವಶ್ಯಕವಾದ ಜ್ಞಾನ ಮತ್ತು ಅವಶ್ಯಕ ವಿಷಯಗಳ ಬಗ್ಗೆ ಮರೆವು ಹೇರಳವಾಗಿ, ಈ ನೆನಪು-ಮರೆವುಗಳ ವಿಷ ಚಕ್ರದಲ್ಲಿ ಸುತ್ತುತ್ತಿರುತ್ತೇವೆ. ಈ ಮೂಲಕ ಭಗವಂತನಿಂದ ದೂರವಾಗುತ್ತಿರುವ ಅರಿವೂ ಇಲ್ಲದೆ, ಅನ್ಯಥಾಜ್ಞಾನ ವಿಸ್ಮೃತಿಗಳೆಂಬ ಹೆಂಡಿರೊಂದಿಗೆ ನಮ್ಮ ಸಂಸಾರ ನಡೆಯುತ್ತಿರುತ್ತದೆ. ಯಾವಾಗ ನಾವು ಇಟ್ಟಿರುವ ತಪ್ಪು ಹೆಜ್ಜೆಯ ಅರಿವಾಗುತ್ತದೋ ಆಗ ಬಹಳವಾಗಿ ಪರಿತಪಿಸುತ್ತೇವೆ. ಕ್ಲೇಶಪಡುತ್ತೇವೆ. ಆಗ ಇವೆರಡರ ಬಗೆಗಿನ ಭ್ರಮೆ ಅಳಿದು, ಸತ್ಯದ ಸಾಕ್ಷತ್ಕಾರವಾಗುವುದೇ ಜೋಡುಹೆಂಡಿರಂಜಿ ಓಡಿ ಹೋಗುವುದು. ಅಲ್ಲಿಗೆ ಅದುವರೆಗೂ ಇದ್ದ ಈ ಸಂಸಾರವೇ ಶಾಶ್ವತವೆಂಬ ಭ್ರಮೆ ಹರಿದು ಹೋಗುವುದೇ ‘ಗೋಡೆಬಿದ್ದು ಹೋಗುವ’ ಪ್ರತಿಮೆ. ನಂತರದ ಸತ್ಯದರ್ಶನವೇ ‘ಬಯಲಾಗುವುದು’. ಒಳಗಿನ ಬಯಲು ಅನಂತವಾದ ಹೊರಗಿನ ಬಯಲನ್ನು(ಜೀವನು ದೇವನನ್ನು ಸೇರುವ), ಆಲಯವು ಬಯಲಾಗಿ ಬಿಡುವ ಪಾರಮಾರ್ಥಿಕ ಜ್ಞಾನ.
ಹೀಗೆ ಅಪರೋಕ್ಷಜ್ಞಾನಿಗಳಾದ ಈ ಮಹಾನ್ ದಾಸರುಗಳ ಮುಂಡಿಗೆಗಳು ಮೊಗೆದಷ್ಟೂ ಅಧ್ಯಾತ್ಮದ ಸಿಹಿನೀರನ್ನುಕ್ಕಿಸುವ ಪರಮಾತ್ಮನ ಜ್ಞಾನದ ಅಕ್ಷಯ ಚಿಲುಮೆ. ಅಕ್ಷಯ ಸ್ರೋತ.
ಈ ಹಿನ್ನೆಲೆಯಲ್ಲಿ ಭಗವದನುಗ್ರಹದಿಂದ ಈ ಲೇಖಕಿಯೂ ಮುಂಡಿಗೆಯ ಸಾಹಿತ್ಯದಲ್ಲಿ ಒಂದಿಷ್ಟು ಕೃಷಿ ಮಾಡಿ ಇದುವರೆವಿಗೂ 220 ಕ್ಕೂ ಹೆಚ್ಚಿನ ವೈವಿಧ್ಯಮಯವಾದ ಮುಂಡಿಗೆಗಳನ್ನು(ಅರ್ಥ ವಿವರಣೆಯ ಸಮೇತ. 5 ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಾಭಾರತದಲ್ಲಿರುವ ವೈಜ್ಞಾನಿಕ ವಿಚಾರಗಳು; ವನಸ್ಪತಿ, ರಾಶಿಚಕ್ರ, ರಾಗಮುಂಡಿಗೆ, ಸ್ವರಾಕ್ಷರ, ನಿರ್ದಂತ್ಯ, ನಿರೋಷ್ಠ್ಯ, ಜನಪದಧಾಟಿ, ಗಾದೆಗಳನ್ನುಬಳಸಿರುವ ಮುಂಡಿಗೆ; ಜಗತ್ಸøಷ್ಟಿ ವಿಕಾಸವಾದ, ಸಂಯುಕ್ತಾಕ್ಷರ ರಹಿತ; ಇತ್ಯಾದಿ ಇತ್ಯಾದಿ ಅಪರೂಪದ ವಿಷಯಗಳು ಮತ್ತು ರಾಮಾಯಣ, ಮಹಾಭಾರತಗಳನ್ನು ಸಂಕ್ಷಿಪ್ತವಾಗಿ ಅಲ್ಲದೆ ಖಂಡಖಂಡಗಳನ್ನೂ, ಪರ್ವಪರ್ವಗಳನ್ನೂ – ಶ್ರೀಮದ್ಭಾಗವತ, ಹನುಮಂತನ ಲೀಲಾವಿಲಾಸ, ಶ್ರೀಕೃಷ್ಣ ಲೀಲಾವಿಲಾಸ ಮತ್ತು ಕೇವಲ ಸುಂದರಕಾಂಡವನ್ನು ಮಾತ್ರ) ಹೀಗೆ; ಮತ್ತು 1000 ಕ್ಕೂ ಅಧಿಕ ಸಂಖ್ಯೆಯ ಕೀರ್ತನೆಗಳನ್ನೂ( 3 ಸಂಕಲನಗಳಲ್ಲಿ), 200 ಕ್ಕೂ ಮೀರಿದ ಉಗಾಭೋಗಗಳನ್ನೂ ಬೇಲೂರು ‘ಚೆನ್ನಕೇಶವ’ ನ ಅಂಕಿತದಲ್ಲಿ ರಚಿಸಿ ದಾಸಸಾಹಿತ್ಯದ ಅನಂತ ವಾರಿಧಿಗೆ ತನ್ನ ನಾಲ್ಕಾರು ಬಿಂದುಗಳನ್ನು ವಿನಯದಿಂದ ಸೇರಿಸಿರುವುದುಂಟು. ಇದು ದಾಖಲೆ ಸಂಖ್ಯೆಯ ಮುಂಡಿಗೆ ಎನಿಸಿದರೂ; ಗುಣ ಮಹಿಮೆಯಲ್ಲಿ, ಭಕ್ತಿಭಾವದಲ್ಲಿ, ಭಾಷಾ ರಚನೆಯಲ್ಲಿ ಆ ಮಹಿಮಾನ್ವಿತರಾದ ದಾಸವರೇಣ್ಯರ ಹತ್ತಿರಕ್ಕೂ ಬರಲಾರದೆಂಬ ಸತ್ಯದ ಅರಿವಿದೆ. ಅವರೆಲ್ಲ ಶಿಖರದಲ್ಲಿರುವವರು. ನಾನು ಆ ಗಿರಿಯ ಬುಡದ ಒಂದು ಸಣ್ಣ ಹುಲ್ಲಿನೆಸಳು ಅಷ್ಟೆ. ಅನುಭಾವದ ಮುಂಡಿಗೆಗಳು ಎಂದು ವಿದ್ವಾಂಸರ ಅಭಿಪ್ರಾಯದ ಮುಂಡಿಗೆಗಳಲ್ಲಿ ಎರಡನ್ನು ಕೆಳಗೆ ಕಾಣಿಸಿರುತ್ತೇನೆ. ‘ಅವುಗಳ ಅರ್ಥ ವಿಸ್ತಾರದ ಸಾಧ್ಯತೆಗಳು, ಹೊಸಹೊಸ ಹೊಳಹುಗಳು ಮತ್ತು ಸುಳಿವುಗಳು ಸ್ಫುರಣವಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ಇವುಗಳಿಗೆ ಅರ್ಥ ಕೊಡಬೇಡಿ’ ಎಂದು ಸಲಹೆ ನೀಡಿದವರು ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು’. ಆದ್ದರಿಂದ ಇವುಗಳ ಅರ್ಥಾನುಸಂಧಾನವನ್ನು(‘ವಿನೂತನ ಕವಿತೆಯಿದೆಂದು ಕಡೆಗಣಿಸದೆ) ಸಹೃದಯ ವಿದ್ವಾಂಸರು ಮಾಡಬಹುದು ಎಂದು ಆಶಿಸಿ, ಮಾಡಲಿ ಎಂದು ವಿನಮ್ರತೆಯಿಂದ ನಿರೀಕ್ಷಿಸುತ್ತೇನೆ
ಕಾಸನಿತ್ತು ಕೊಂಡರಾರು ಕಾಸನಿತ್ತು ಕೊಂಡರಾರು ಮಾಸದಂಥ ಸುಕೃತವನ್ನು || ಪ ||
ಈಸು ಬುರುಡೆಯಾಗಬಹುದೇ ಹಸಿದ ಹಾಸು ಭೀಕರ|| ಅಪ ||
ಆರಬೇಡ ಹಾರಬೇಡ | ಭಾರ ಬೇಡ ಹೇರು ಹೊರೆಯು ಮೀರಬೇಡ ಮಾರ ಬೇಡ | ತೋರ ಸುಳಿಯು ಆಸೆಯು ಹರಿವೆನೆನಲು ಅಂಕುಡೊಂಕು|ತೊರೆವೆನೆನಲು ಕೊಂಡಿ ಕುಣಿಕೆ ಮೆರೆವೆನೆನಲು ಮೆರವಣಿಗೆಯು|ಇರುವೆನೆನಲು ಜಾತ್ರೆಯು ಕತ್ತಲಲ್ಲಿ ಕಣ್ಣುಕಟ್ಟಿ | ಬಿತ್ತುತಿರಲು ರಕ್ತ ಬೀಜ ಎತ್ತಿ ನಿಲಿಸೊ ಬೀಳದಂತೆ | ಸತ್ತೆ ಚೆನ್ನಕೇಶವ
ಹೇಗೆ ಹೇಗೆ ಹೇಗೆ ಒಳಗೆ
ಹೇಗೆ ಹೇಗೆ ಹೇಗೆ ಒಳಗೆ ಹೋಗಲೆನಿತು ಗದ್ದಲ
ಸಾಗುತಿರಲು ದೂರ ದೂರ ತಾಗಲೆನಿತು ಹತ್ತಿರ || ಪ ||
ಒಂದು ಎರಡು ಮೂರು ನಾಲ್ಕು ಅರಿವ ಮನವೆ ಬಾರದೆ
ಐದು ಆರು ಏಳು ಎಂಟು ತಂಟೆ ವಶವ ಮಾಡಿದೆ
ನೆಂಟನಂತೆ ಕೊಡವಿ ನಡೆವ ಬಂಟನಲ್ಲ ಸುಳ್ಳದು
ಅಂಟುಗಂಟನೊಂದು ಗಣಿಸೆ ತುಂಟಾಟವು ಸಲ್ಲದು
ಎನಿತು ಬಾಡಿಗೆಯ ಸಲಿಕೆ ದಣಿವು ನೋವು ಬಳಲಿಕೆ
ಸ್ವಂತ ಸೂರು ಕಾಯುತಿರಲು ಮರುಳುತನವು ಗಾಣಕೆ
ವೃತ್ತದೊಳಗು ಚೆಂದವೇನು ದ್ವಾರವಿರದ ತತ್ತಿಯು
ಉದಯವಾಗಲಾವ ತಡೆಯು ಏರಿ ನಿಲುವೆ ಸುತ್ತಿಯು
ಏತ್ತಲಿಲ್ಲ ಬಿತ್ತಲಿಲ್ಲ ಹತ್ತಲಿಲ್ಲ ಏಣಿಯು
ಸುತ್ತಿ ಇಳಿವ ನೆನಕೆ ಸಾಕು ಹತ್ತಿಕೊಳದೆ ಭೀತಿಯು
ಇನ್ನು ಬಿಡದೆ ಕ್ರಮಿಸುತಿರುತ ಮುನ್ನುಡಿಯು ವಿರಾಮಕೆ
ಚೆನ್ನಕೇಶವನ್ನ ಕೂಗು ಒಯ್ಯೊ ಪ್ರಭುವೆ ಸನಿಹಕೆ
* * * * *
ಗ್ರಂಥ ಋಣ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ;
ಕನಕ ಮುಂಡಿಗೆ ಅರ್ಥಾನುಸಂಧಾನ. ಪುರಂದರ ಮುಂಡಿಗೆ ಅರ್ಥಾನುಸಂಧಾನ.
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ