- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
- ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು - ಆಗಸ್ಟ್ 10, 2022
“ಚಿಕ್ಕಂದಿನಿಂದಲೂ ನನಗೆ ಮುಖವಾಡಗಳೆಂದರೆ ಕುತೂಹಲ, ಭಯ ಮತ್ತು ಆಶ್ಚರ್ಯಕರ . ನನ್ನ ಮೊದಲ ಕವನ ಸಂಕಲನದ ಹೆಸರು ‘ಮುಖವಾಡಗಳು’ ಎಂದೇ..
ಕೆ.ವಿ. ತಿರುಮಲೇಶ್
ಮುಖ ಮತ್ತು ಮನಸ್ಸಿಗೆ ಎಷ್ಟು ಹತ್ತಿರದ ಸಂಬಂಧ. ಎಂದರೆ,ಮುಖವನ್ನು ಮನಸ್ಸಿನ ಕೈಗನ್ನಡಿ ಅನ್ನುವಷ್ಟು . ಮುಖ ಅಭಿವ್ಯಕ್ತಿಯ ಸಾಧನ.
ಜತೆಗೇ ಪರಿಸರದ ಪರಿಸ್ಥಿತಿಯನ್ನು, ಸ್ಪಂದನೆಯನ್ನು, ಸಂವೇದನೆಯನ್ನು, ಸಂವಹನವನ್ನು ಗ್ರಹಿಸುವ ಕಣ್ಣು, ಮೂಗು,ಕಿವಿ,ನಾಲಿಗೆ ಇತ್ಯಾದಿ ಸೂಕ್ಷ್ಮೇಂದ್ರಿಯಗಳು ಮುಖದ ಮುಖ್ಯಾಂಗಗಳು ತಾನೇ.
. ಮನಸ್ಸು ನಮ್ಮ ಕಂಪ್ಯುಟರ್ ನ ಪ್ರಾಸೆಸರ್ ಆದರೆ, ಮುಖ ಅದರ ಇನ್ಪುಟ್ ಮತ್ತು ಔಟ್ ಪುಟ್ ಸಾಧನಗಳು.
ಸಾಹಿತ್ಯದ ದೃಷ್ಟಿಯಿಂದ ನೋಡಿದರೆ, ಕವಿಗೆ,
ಮುಖದಲ್ಲಿ ಹುಬ್ಬುಗಳ ನಾಟ್ಯ ಭಂಗಿಗಳು,
ಕಣ್ಣುಗಳ ನೋಟ ವ್ಯತ್ಯಾಸಗಳು,ದವಡೆಗಳ ಹಿಡಿ ಬಿಡಿಗಳು,ತುಟಿಗಳ ತಿರುವುಗಳು,ನಾಲಗೆ ಹೊರ ಚಾಚುವ ಸಂಜ್ಞೆ ಗಳು,ಕೊರಳ ಸೂಜಿಯ ಮೇಲೆ ತೊನೆಯುವ ಮುಖಭೂಮಿ ಮತ್ತು ಇವುಗಳೆಲ್ಲವೂ ಸೇರಿ, ಕಲೆಕ್ಟಿವ್ ಆಗಿ ದ್ರವಿಸುವ ಅಳು, ಅರಳುವ ನಗು ಅಥವಾ ಇನ್ನಾವುದೋ ಭಾವ ಪ್ರಕಟಣೆ ಎಲ್ಲವೂ ನಾಲಿಗೆಯನ್ನು, ಅಂದರೆ ನುಡಿಯನ್ನು ಬಳಸದೆಯೇ ಅರ್ಥಗಳನ್ನು ಧ್ವನಿಸಬಲ್ಲವು ತಾನೇ!. ಕವಿತೆಯೂ ಪದಗಳಿಗಿಂತ ಹೆಚ್ಚು ಧ್ವನಿಗಳ ಮೂಲಕವೇ ಸಂವಹಿಸುತ್ತವೆ. ಈ ಕಾವ್ಯಾಂಶ ಪದ್ಯದಷ್ಟೇ, ಗದ್ಯದಲ್ಲೂ ಪ್ರಕಟವಾಗುವುದು, ಸಾಹಿತಿ ಎಷ್ಟು ಸೃಜನಶೀಲ ಮತ್ತು ಎಷ್ಟು ಜ್ಞಾನವೃದ್ಧ ಎಂಬುದರ ಮೇಲೆ ಸ್ಥಿತವಾಗಿದೆ.
ಹಾಗಾಗಿ ತಿರುಮಲೇಶ್ ಅವರಂತಹ ಹೊಳಪುಗಣ್ಣಿನ ಕಾವ್ಯಾಸಕ್ತ ಬಾಲಕನಿಗೆ ಬಾಲ್ಯದಲ್ಲಿ ಮುಖ ಮತ್ತು ಮುಖವಾಡಗಳು ಬೆರಗು ಗೊಳಿಸಿದ್ದು ಸಹಜವೇ. ಬಾಲ್ಯದಲ್ಲಿ, ತಮ್ಮ ಮನೆಯ ಹತ್ತಿರದ ಭೂತಸ್ಥಾನದೊಳಗೆ ನೋಡಿದ ವಿವಿಧ ಭೂತಗಳ ಮುಖವಾಡಗಳನ್ನು ಅವರು ನೋಡಿದ್ದರ ಬಗ್ಗೆ ಹೀಗೆ ಬರೆಯುತ್ತಾರೆ.
“ಇವನ್ನು ನೋಡಿದಾಗಲೇ ಮೈ ನಡುಕ ಬರುತ್ತಿತ್ತು. ಕಣ್ಣು ಬಾಯಿಗಳಿರುವಲ್ಲಿ ಅವುಗಳ ಸೂಚನೆಗಳು ಮಾತ್ರ ಇರುವಂಥ ತೂತುಗಳು, ಆದರೆ ಕೆಲವಕ್ಕೆ ಬಾಯಿಯಲ್ಲಿ ಹೊರಚಾಚಿದ ನಾಲಿಗೆಗಳು ಕೂಡಾ ಇದ್ದುವು. ಹಣೆಯ ಮೇಲಿಂದ ಕಿರೀಟದಂತೆ ಕಾಣಿಸುತ್ತಿದ್ದುವು”
ಮುಖದಂತೆಯೇ ಮುಖವಾಡವೂ ಮುಖ್ಯ ಎಂಬುದು ಅವರಿಗೆ ಅನುಭವಜನ್ಯ.
ಅವರ ಹುಟ್ಟೂರಾದ ಕಾಸರಗೋಡಿನ ಕಾರಡ್ಕ ಎಂಬ ಊರು, ಹಲವು ರೀತಿಯಲ್ಲಿ, ಒಂದು ಸಂಧಿಬಿಂದು. ಭಾಷೆಯ ನಿಟ್ಟಿನಲ್ಲಿ, ಕನ್ನಡ, ತುಳು ಮತ್ತು ಮಲೆಯಾಳಂ ಭಾಷೆಗಳು ಇಲ್ಲಿ ಸಂಧಿಸುತ್ತವೆ. ಬಾಲ್ಯದಲ್ಲಿ ಬಹುಭಾಷಾಸಕ್ತಿ ಸಹಜವಾದಷ್ಟೇ ಭಾಷೆಯಿಂದ ಭಾಷೆಗೆ ಬದಲಾಗುವ ಮತ್ತು ಆಗದ ಅಭಿವ್ಯಕ್ತಿ ಮತ್ತು ಅದರ ತಂತ್ರ ಸೌಂದರ್ಯ ಮನಸ್ಸೊಳಗೆ ತನ್ನ ಛಾಪನ್ನು ಒತ್ತುತ್ತೆ.
“ಯಾವುದೇ ಚಲನಶೀಲ ವಿದ್ಯಮಾನಕ್ಕೆ, ಗ್ರೇಡಿಯೆಂಟ್ ಅತ್ಯಗತ್ಯ”
ಇದು ಭೌತಶಾಸ್ತ್ರದಲ್ಲಿ ಇರುವ ಒಂದು ಸಾಮಾನ್ಯ ತತ್ವ. ಉದಾಹರಣೆಗೆ, ನೀರು ಎತ್ತರದಿಂದ ತಗ್ಗಿಗೆ ಪ್ರವಹಿಸಲು ಗ್ರಾವಿಟೇಷನಲ್ ಪೊಟೆನ್ಶಿಯಲ್ ಗ್ರೇಡಿಯಂಟ್ ( ಗುರುತ್ವಾಕರ್ಷಣ ಚೇತನದ ಗ್ರೇಡಿಯಂಟ್) ಕಾರಣವಾದರೆ, ವಿದ್ಯುತ್ ಶಕ್ತಿ ಪ್ರವಹಿಸಲು ಕಾರಣ ಇಲೆಕ್ಟ್ರಿಕ್ ಪೊಟೆನ್ಶಿಯಲ್ ಗ್ರೇಡಿಯಂಟ್.
ಹಾಗೆಯೇ, ಭಾಷೆ, ಸಂಸ್ಕೃತಿ ಒಂದರಿಂದ ಇನ್ನೊಂದಕ್ಕೆ ಬದಲಾಗುವ ಸಂಧಿಪ್ರದೇಶದಲ್ಲಿ ( ಇಂಟರ್ಫೇಸ್), ಪ್ರಜ್ಞೆಗೆ ಗ್ರೇಡಿಯಂಟ್ ಸಿಕ್ಕಿ ಅದು ಚಲನಶೀಲತೆಯನ್ನು ಸಹಜವಾಗಿಯೇ ಪಡೆಯುತ್ತೆ. ತೆರೆದ ಕಣ್ಣು ಮಾತ್ರ ಅದಕ್ಕೆ ಅಗತ್ಯ. ತಿರುಮಲೇಶ್ ಅವರಿಗೆ ಉಗಮದಲ್ಲಿಯೇ ಅದು ಪ್ರಾಪ್ತವಾಯಿತು.
ಭೌಗೋಳಿಕವಾಗಿ ನೋಡಿದರೆ, ಕಾರಡ್ಕದಿಂದ ೫೦ ಕಿಲೋಮೀಟರ್ ಪೂರ್ವದಲ್ಲಿ ಪರ್ವತಶ್ರೇಣಿ, ( ಪಶ್ಚಿಮ ಘಟ್ಟ) ೨೦ ಕಿಲೋಮೀಟರ್ ಪಶ್ಚಿಮ ದಲ್ಲಿ ಅರಬ್ಬೀ ಸಮುದ್ರ. ಒಂದು ಬದಿ ಸಮುದ್ರ ಮತ್ತು ಇನ್ನೊಂದು ಬದಿ, ಪರ್ವತ ಸಾಲುಗಳು. ಇವುಗಳನ್ನು ಸಂಧಿಸುವ ೭೦ ಕಿ.ಮೀ.ಅಗಲದ ಗಮ್ ಟೇಪ್ ನಂತಹ ಭೂಭಾಗ ಕಾಸರಗೋಡು. ಆ ಊರಲ್ಲಿ ಸಮತಟ್ಟಾದ ಜಾಗಗಳು ಕಡಿಮೆ, ಎತ್ತರ ತಗ್ಗುಗಳು, ಗುಡ್ಡಗಳು ಅತ್ಯಂತ ಸಾಮಾನ್ಯ. ಇವನ್ನು ನಾನು ಹೇಳಲು ಒಂದು ಕಾರಣವಿದೆ. ಬಾಲ್ಯದಲ್ಲಿ ನೋಡುವ ಎತ್ತರ, ತಗ್ಗುಗಳು, ( uneven ness) ಮನಸ್ಸಿಗೆ, ಕಲ್ಪನೆಗೆ ಮತ್ತು ಚಿಂತನೆಗೆ ಥ್ರೀ ಡೈಮೆನ್ಷನ್ ನ ಪ್ರೊಜೆಕ್ಷನ್ ನ ಸಾಧ್ಯತೆಯನ್ನು ಒದಗಿಸಿಕೊಡುತ್ತೆ.
ಈ ಪರ್ವತದ ಅಗಾಧತೆ, ಸಮುದ್ರದಂಚಿನ ಕಣ್ಣಳತೆಗೆಟುಕದ ದಿಗಂತ, ಹಳ್ಳಿಯ ಶುಭ್ರ ಪರಿಸರದಲ್ಲಿ ನೀಲಗಗನದ ವ್ಯಾಪ್ತಿ ಮತ್ತು ಎಣಿಕೆಗೆ ಸಿಗದ ನಕ್ಷತ್ರಗಳು ದಿನ ನಿತ್ಯದ ನೋಟಗಳು.
ಇವುಗಳು ಮುಗ್ಧ ಮನಸ್ಸಿಗೆ, ವಿನಮ್ರತೆ, ಪಾರದರ್ಶಕತೆ ಮತ್ತು ಪ್ರಕೃತಿಯತ್ತ ಚಕಿತ ದೃಷ್ಟಿ , ಎಲ್ಲಕ್ಕಿಂತ ಮುಖ್ಯವಾಗಿ ಕನಸು ಕಟ್ಟುವ ಪರಿಯನ್ನು ಹೇಳಿಕೊಡುತ್ತೆ.
ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ ತಿರುಮಲೇಶ್, ಸ್ವತಂತ್ರ ಮತ್ತು ಬಡ ಮಗು ಭಾರತ ತನ್ನ ಸಾಮಾಜಿಕ, ಆರ್ಥಿಕ,ರಾಜಕೀಯ ವ್ಯವಸ್ಥೆಯನ್ನು ಬೆಳೆಸುವ ಹೊತ್ತಲ್ಲೇ ಅದರ ಜತೆ ಜತೆಗೇ ತಾನೂ ಬೆಳೆಯುವಾಗ, ಅನುಭವಕ್ಕೆ ಎಟುಕಿದ ಸಂಕಷ್ಟಗಳು, ಬಹುಷಃ ಸಾಮಾಜಿಕ, ರಾಜಕೀಯ ದರ್ಶನಕ್ಕೆ ಆಳವನ್ನೂ ವ್ಯಾಪ್ತಿಯನ್ನೂ ಒದಗಿಸಿದ್ದು ಅವರು ಬರೆದ ಹಲವು ಕವಿತೆಗಳಲ್ಲಿ ಕಾಣಬಹುದು.
ಹಾಗೆ, ಅವರ ಮುಖಕ್ಕೆ ದೊರಕಿದ ಸ್ವರೂಪದ ಹಿಂದೆ ಮೇಲೆ ಹೇಳಿದ ಅಷ್ಟೂ ಅಂಶಗಳು ಎರಕವಾಗಿ, ಕುಂಚವಾಗಿ ಮತ್ತು ಬಣ್ಣವಾಗಿ, ಕೆಲಸ ಮಾಡಿರುವುದೂ ಅವರ ಕತೆ, ಕವನ ಮತ್ತು ಪ್ರಬಂಧಗಳಲ್ಲಿ ಪ್ರಕಟವಾಗಿವೆ.
ಅವರು ತಮ್ಮ ಸುತ್ತುಮುತ್ತಲಿನ ವಿದ್ಯಮಾನಗಳಲ್ಲಿ ಮುಖಗಳನ್ನು ಕಾಣುತ್ತಾರೆ. ಮುಖ ಮುಖಗಳ ಮುಖಾಮುಖಿ ಕಾಣುತ್ತಾರೆ,ಸಂವಾದ ,ಸಂಘರ್ಷಗಳನ್ನೂ ಕಾಣುತ್ತಾರೆ.
ಮುಖ ಮರೆಸಿದ ಮುಖವಾಡಗಳು ಅವರೆದುರು ಕಳಚುತ್ತವೆ.
ಅವರ ಮುಖಾಮುಖಿ, ಇನ್ನೊಂದು ಮುಖಾಮುಖಿ ಇತ್ಯಾದಿ ಕವಿತೆಗಳಲ್ಲದೆಯೇ ಸಾಕಷ್ಟು ಕವಿತೆಗಳು ಅವರು ಆವಿಷ್ಕರಿಸಿದ ಈ ಅಭಿವ್ಯಕ್ತಿಯ ತಂತ್ರಜ್ಞಾನದ ಮೂರ್ತ ರೂಪಗಳು.
ಮುಖತಂತ್ರಾವಿಷ್ಕಾರದಿಂದ ಮುಂದುವರೆದು ತಿರುಮಲೇಶ್ ಅವರು ತಮ್ಮ ಬದುಕಿನ ಗುಬ್ಬಿ ಗೂಡು ಕಟ್ಟಿದ ಬಗೆ ನೋಡಿ..
* *
ಸಣ್ಣ ಕಸಕಡ್ಡಿಗಳಿಂದ
ಸಣ್ಣ ಕಸಕಡ್ಡಿಗಳಿಂದ ಗುಬ್ಬಿ ಕಟ್ಟಿ ಕೊಳ್ಳುತ್ತದೆ ಗೂಡು
ಹಲಸು ಬೀಟಿ ಸಾಗುವಾನಿ ಮರಮಟ್ಟು ಅದಕ್ಕೆ ಬೇಡ
ಕಸಕಡ್ಡಿಗಳೇ ಅದಕ್ಕೆ ದೊಡ್ಡ ತೊಲೆಗಳು ಕಾಡಿನ
ಮರಗಳನ್ನದು ನೋಡುತ್ತದೆ ನೋಡಿ
ಆಶ್ಚರ್ಯಗೊಳ್ಳುತ್ತದೆ
ಬಾವಿ ಕಟ್ಟೆಯ ನೀರು ಯಾರೋ ಕೊಡದಲ್ಲಿ
ತುಂಬಿಟ್ಟ ನೀರು ಕುಡಿಯಲು ಅದಕ್ಕೆ ಸಾಕು ದೊಡ್ಡ
ಸರೋವರಗಳು ನಾಲೆಗಳು ಕಾಲುವೆಗಳು
ಬೇಕಿಲ್ಲ ದೊಡ್ಡ
ಸರೋವರಗಳನ್ನು ನೋಡಿ ಅವುಗಳ
ಉಪಯೋಗವೇನೆಂದು ಬೆರಗಾಗುತ್ತದೆ.
ಆದರೆ ಗುಬ್ಬಿ ಗೂಡಿಗೆ ಬೆರಗುಗೊಳ್ಳುತ್ತವೆ
ಸರೋವರಗಳು ಸಮುದ್ರಗಳು ವೃಕ್ಷಗಳು ಬೆಟ್ಟಗಳು
**** ****** ******
ಈ ಕವಿತೆಯ ಪ್ರತಿಮೆಗಳನ್ನು ನಾನು ವಿಸ್ತರಿಸಲು ಹೋಗಲಾರೆ
ಆದರೆ, ಭಾಷೆಯಿರಲಿ, ಬರಹವಿರಲಿ, ಬದುಕಿರಲಿ ಅಥವಾ ಅಧ್ಯಯನ, ಅಧ್ಯಾಪನವಿರಲಿ, ಛುಪ್ ಛಾಪ್ ಆಗಿ ಛಾಪು ಮೂಡಿಸಿ, ಕಸಕಡ್ಡಿಗಳಿಂದಲೇ ಗೂಡುಕಟ್ಟಿ, ಸರಳ ಪದಗಳಿಂದ ಕವನ ಕಟ್ಟಿ, ನಿತ್ಯ ವಿದ್ಯಮಾನದ ಪ್ರತಿಮೆ ಕೆತ್ತಿದವರು ತಿರುಮಲೇಶ್.
ಕರ್ನಾಟಕದ ಭೌಗೋಳಿಕ ವ್ಯಾಪ್ತಿಯ ಹೊರಗೆ, ದೂರವೂ ಅಲ್ಲದ, ಹತ್ತಿರವೂ ಅಲ್ಲದ ಹೈದರಾಬಾದ್ ನಲ್ಲಿ, ಈ ಗುಬ್ಬಚ್ಚಿ ಐದು ದಶಕಗಳಿಂದ ಗೂಡು ಕಟ್ಟುತ್ತಲೇ ಇದೆ!. ಪುಟ್ಟ ಗೂಡಿನೊಳಗಿನ ಸ್ಥಾಯೀಭಾವದಿಂದ ವಿಶ್ವ ಪರ್ಯಟನೆಯ ಸಂಚಾರೀ ಭಾವದತ್ತ ರೆಕ್ಕೆ ಬೀಸಿ ಹಾರಬಲ್ಲ ಗುಬ್ಬಿ ಹಕ್ಕಿ ಇವರು.
ಹಾಗೇ ಮದುವರೆದು ಅವರ “ಭೂತ ಭವಿಷ್ಯಗಳ ನಡುವೆ” ಕವನ ಗಮನಿಸಿ
*
ಭೂತ ಭವಿಷ್ಯಗಳ ನಡುವೆ
ಅಡಿಗರಿಂದಲು ಕಲಿತೆ ನಾಡಿಗರಿಂದಲು ಕಲಿತೆ
ಅಡಿಗಡಿಗೆ ಕಲಿತುದನು ನುಡಿಯಲ್ಲಿ ಮರೆತೆ
ರತಿಯ ಬಗ್ಗೆಯು ಬರೆದೆ ಆರತಿಯ ಬಗ್ಗೆಯು ಬರೆದೆ
ಮತಿಯ ಪರಿಧಿಗೆ ತೋರಿದಂತೆ ಒರೆದೆ
ಹರಿದ ಕಾಗದದ ಚೂರು ಮಹಾಯುದ್ಧಗಳ ಜೋರು
ಧರೆಯೊಳಗೆ ಸಕಲವನು ತಿಳಿದವರು ಯಾರು?
ಎಲ್ಲವನು ತಿಳಿದ ಜನ ವಹಿಸಿಕೊಳ್ಳುವರು ಮೌನ
ತಲ್ಲಣದಲೊದಗುವುದು ಸದಾ ವರ್ತಮಾನ
ಮಾತು ಕೊಡುವುದು ಯುಗ ಮಾತು ಕೊಳ್ಳುವುದು ಯುಗ
ಭೂತ ಭವಿಷ್ಯಗಳ ನಡುವೆ ಎಂಥ ಆವೇಗ!
*
ಇಲ್ಲಿ ಅವರು ಅಡಿಗರಿಂದಲು ಕಲಿತೆ, ನಾಡಿಗರಿಂದಲೂ ಕಲಿತೆ ಅನ್ನುತ್ತಾರೆ. ಇದು ಗೋಪಾಲಕೃಷ್ಣ ಅಡಿಗರಿಂದ ಕಲಿತ ನವ್ಯ ಕಾವ್ಯ ಸೂತ್ರವೇ, ಸುಮತೀಂದ್ರ ನಾಡಿಗರಿಂದ ಪ್ರಭಾವಿತರಾದ ವಿಮರ್ಶೆಯೇ? . ಅಥವಾ ಉದಯವಾಣಿ ಪತ್ರಿಕೆಯಲ್ಲಿ ಪ್ರಸಿದ್ಧವಾದ ‘ನಾಡಿಗ್’ ವಂಗ್ಯಚಿತ್ರಕಾರರಿಂದ ಕಲಿತ ಚಿಕಿತ್ಸಕ ಅಸಾಂಪ್ರದಾಯಿಕ ಚಿಂತನಾವಿಧಾನವೇ?. ಹೀಗಂದರೆ ಬಹಳ ಸರಳವಾದೀತು.
ಅಡಿಗರಿಂದ ಕಲಿತದ್ದು ಇರಲಿ. ನಾಡಿಗರು ಅಂದರೆ ನಾಡಿನಲ್ಲಿ ನೆಲೆಸಿದವರು ಎಂದು ಅರ್ಥ ಮಾಡಿಕೊಳ್ಳಬೇಕಾದೀತು. ಅಂದರೆ, ಅಡಿಗರಂತಹ ಕವಿಗಳಿಂದಲೂ, ಸಾಮಾನ್ಯ ಜನರಿಂದಲೂ ಬೇಧವಿಲ್ಲದೆ ಕಲಿತದ್ದೇ?.
ನಾಡಿಗ ಅನ್ನೋ ಪದವನ್ನು (ನ+ ಅಡಿಗ) ಎಂದು ವಿಂಗಡಿಸಿದರೆ, ಅಡಿಗರಿಂದಲೂ ಅಡಿಗರಲ್ಲದವರಿಂದಲೂ ಅಂತ ಅರ್ಥ ಮಾಡಿಕೊಳ್ಳಲು ಬರುತ್ತೆ. ಅಡಿಗರ ಕಾವ್ಯವಿಧಾನ ಮತ್ತು ಅದಕ್ಕೆ ವಿರುದ್ಧ ವಾದ ( ನ+ ಅಡಿಗ) ಕಾವ್ಯವಿಧಾನ,ಎರಡರಿಂದಲೂ ಕಲಿತೆ ಎಂದು ಅರ್ಥ ಮಾಡಿಕೊಳ್ಳಲೂ ಬಹುದೇನೋ.
ಇನ್ನು, ಅಡಿಗ ಎಂಬ ಪದದಲ್ಲಿ,ಅಡಿ ಎಂದರೆ ಹೆಜ್ಜೆ. ಅಡಿಗ ಎಂದರೆ ಹಜ್ಜೆ ಹಾಕುವವ,ಚಲನಶೀಲ ಎನ್ನ ಬಹುದೇ?. ಅಡಿ ಎಂದರೆ foot, ಉದ್ದದ ಮಾನಕ. ಅಡಿಗ ಎಂದರೆ ಉದ್ದವನ್ನು ಅಳೆಯುವವನು ಎಂದಾಗಬಹುದೇ?
ಇದು ಭಾಷಾ ವಿಜ್ಞಾನದ ಸಂಗತಿ. ತಿಳಿದವರು ಹೇಳಬೇಕು.
ಏನಿದ್ದರೂ, “ಮತಿಯ ಪರಿಧಿಗೆ ತೋರಿದಂತೆ ಒರೆದೆ” ಎನ್ನುತ್ತಾ ಅವರು ಕಲಿಕೆ, ಚಿಂತನೆ ಮತ್ತು ಒರೆಗಲ್ಲಿಗೆ ಹಚ್ಚುವ ಸಂಶೋಧನೆ ಈ ಮೂರನ್ನೂ ಅನುಸರಿಸಿದ್ದು ತಿಳಿಯುತ್ತದೆ. ಇಲ್ಲಿ,ಬರೆದೆ ಪದದ ಬದಲು ಒರೆದೆ ಎಂಬ ಪದ ಬಳಸುವ ಮೂಲಕ, ಸಂಶೋಧನಾತ್ಮಕ ಬರವಣಿಗೆಗೆ ಒತ್ತು ಕೊಡುವುದು ಮತ್ತು ಎಲ್ಲವನ್ನೂ ಒರೆಗಲ್ಲಿಗೆ ಹಚ್ಚುವ ವೈಜ್ಞಾನಿಕ ಮನೋಭಾವದ ದಾರಿಯನ್ನು ಪ್ರತಿಪಾದಿಸುತ್ತಾರೆ.
ಹಲವು ಭಾಷೆ ಮತ್ತು ಸಂಸ್ಕೃತಿಗಳ ಅವಿಯಲ್ ಆದ ಕಾಸರಗೋಡಿನಿಂದ, ಅಂತಹುದೇ ಬಹುಭಾಷಾ ಧರ್ಮ ಸಂಸ್ಕೃತಿಯ ಹೈದರಾಬಾದ್ ಗೆ ಬಂದು ನೆಲೆಸಿದ ತಿರುಮಲೇಶ್ ಅವರ ಹಲವು ಕವಿತೆಗಳಲ್ಲಿ, ( ಸೀತಾಫಲ ಮಂಡಿ, ಹೈದರಾಬಾದಿಗೆ, ಹೈದರಾಬಾದ್ ನಲ್ಲಿ ಜೂನ್, ಹೈದರ್ ಗುಡದಲ್ಲೊಬ್ಬ ಹೈದ ಇತ್ಯಾದಿ ) ಹೈದರಾಬಾದ್ ನ “ಚಾರ್ ಮಿನಾರ್” ಸಂಸ್ಕೃತಿಯ ದಸ್ತಕತ್ ಕಾಣಬಹುದು.
ಕತೆ,ಕವನ ವಿಮರ್ಶೆ, ಪ್ರಬಂಧ,ಮಕ್ಕಳ ಕವಿತೆ ,ಭಾಷಾ ಶಾಸ್ತ್ರ ಇವುಗಳಲ್ಲೆಲ್ಲಾ ಕೈಯಾಡಿಸಿ ಸವ್ಯಸಾಚಿಯಾದ ಇವರು, ವಿಜ್ಞಾನದ ಬಗೆಗೆ ಹಲವು ಪುಸ್ತಕ ಬರೆದಿರುವುದು ಅವರ ಕ್ರೀಸ್ ಬಿಟ್ಟು ಆಡುವ ಪರಿ.
ಬಹುಷಃ ಕನ್ನಡದಲ್ಲಿ ಇವಿಷ್ಟರ ಮೇಲೂ ಬರೆದ ಸಾಹಸಿ,ಶಿವರಾಮ ಕಾರಂತರ ನಂತರ, ತಿರುಮಲೇಶ್ ಅವರೇ ಎಂದು ನನ್ನ ಭಾವನೆ. ಭೌತಶಾಸ್ತ್ರದಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್ ನ ರೂವಾರಿ, uncertainty principle ಎಂಬ ಥಿಯರಿಗಾಗಿ ನೋಬೆಲ್ ಅವಾರ್ಡ್ ಪಡೆದ, ಹೈಸನ್ ಬರ್ಗ್ ಅವರ ನೋಬೆಲ್ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ್ದು, ತಿರುಮಲೇಶ್ ಅವರ ಭೌತಶಾಸ್ತ್ರದ ಕ್ಲಿಷ್ಟಕರ ವಿಷಯಗಳನ್ನು ತಿಳಿಯುವ ಬುದ್ಧಿಮತ್ತೆ ಮತ್ತು ಕುತೂಹಲದ ಪರಿಚಯ ಮಾಡಿಸುತ್ತೆ (ಲೋಕಜ್ಞಾನಕ್ಕಾಗಿ ವಿಜ್ಞಾನ: ಹೈಸೆನ್ಬರ್ಗ್ ಭಾಷಣ ತಿರುಮಲೇಶ್ ಅನುವಾದ)
ಇಂತಹ ಸಾಹಸೀ ಮನೋಭಾವವನ್ನು ಬಿಂಬಿಸುವ ಅವರ ಕವಿತೆ “ಆನೆಗಳಲ್ಲಿ ಎರಡು ವಿಧ”
ಈ ಕವನದಲ್ಲಿ, ನೀರಲ್ಲಿ ಮಾತ್ರ ಇದ್ದ ನೀರಾನೆಗಳ ಗುಂಪಿಂದ ಕೆಲವು ಸಾಹಸೀ ಆನೆಗಳು ದಡ ಏರಿ ಮೇಲೆ ಬಂದು ಕಾಡಿಗೆ ನುಗ್ಗಿ ವಿಕಸಿತವಾಗುತ್ತವೆ.
ಹಾಗೆ ವಿಕಸಿತವಾಗುವ ಆನೆಗಳು ಕೊನೆಗೆ ಮನುಷ್ಯರ ಅಂಕುಶಕ್ಕೆ ಒಳಗಾಗುವ ಚಿತ್ರ ನಮ್ಮನ್ನು ಚಿಂತನೆಗೆ ಹಚ್ಚಿದರೂ, ನೀರೊಳಗೇ ಉಳಿದ ನೀರಾನೆಗಳನ್ನೂ,ಸಾಹಸ ಮತ್ತು ವಿಕಾಸದತ್ತ ದಡ ಏರಿ ಬಂದ ಆನೆಗಳನ್ನೂ ಚಿತ್ರಿಸುವಾಗ, ತಿರುಮಲೇಶ್ ಅವರು,ದಡವೇರಿದ ಸಾಹಸೀ ಆನೆಗಳ ಪರವೇ ನಿಂತಂತೆ ನನಗೆ ಭಾಸವಾಗುತ್ತದೆ.
ಕವಿತೆಯ ಪೂರ್ಣ ಪಾಠ ಹೀಗಿದೆ.
*
ಆನೆಗಳು ಎರಡು ವಿಧ
ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ-
ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ-
ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ
ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು
ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು
ಪ್ರೀತಿ ಜಗಳ ಹೋರಾಟ ಜನನ ಮರಣ ಎಲ್ಲವೂ ಅಲ್ಲಿಯೇ
ಆಗ ಕೆಲವಾನೆಗಳೆಂದುವು-ಛೇ ಇದೆಂಥ ಬಾಳು!
ಕೇವಲ ಮೀನು ಕಪ್ಪೆಗಳಂತೆ ನಾವು ಯಾವಾಗಲೂ
ನೀರೊಳಗೆ ಅಡಗುವುದೇ ?! ಇಷ್ಟು ಭಾರೀ ದೇಹವನು
ಹೊತ್ತಿದ್ದು ಮಳೆಗೆ ನೆರೆಗೆ ಝಂಝಾವಾತಕ್ಕೆ
ಗುರಿಯಾಗಿ! ಆನೆಯ ವಂಶದವರೇ! ದಂಡೆಯೇರಲು
ಧೈರ್ಯವಿದ್ದವರೆಲ್ಲ ಬನ್ನಿ ಮುಂದೆ! ಅದೋ ಬಯಲು
ಅದೋ ಅರಣ್ಯ! ಅದೋ ಘಟ್ಟ! ಅದೋ ಅದೋ
ಪರ್ವತದ ಶಿಖರಗಳು!
ದೊಡ್ಡಾನೆ ಸಣ್ಣಾನೆ ಮರಿಯಾನೆಗಳೆಂದು ಅನೇಕ
ಆನೆಗಳು ತಾ ಮುಂದೆ ತಾ ಮುಂದೆ ಎನ್ನುತ್ತ
ಹತ್ತಿದುವು ದಂಡೆ ಹಾದುವು ಬಯಲು ಹೊಕ್ಕವು ಅರಣ್ಯ
ಏರಿದುವು ಘಟ್ಟ ಅಲೆದುವು ಪರ್ವತದ ಶಿಖರಗಳ
ಮೊದಮೊದಲು ತುಸು ಕಷ್ಟವೇ ಆಯಿತು ಅವಕ್ಕೆ
ಉಸಿರುಗಟ್ಟಿದಂತಾಯಿತು ದೇಹ ತೂಗಿ ತೊನೆ-
ದಂತಾಯಿತು ಎಲ್ಲ ಕೇವಲ ಕೆಲವೇ ವರ್ಷಗಳು
ಕ್ರಮೇಣ ಕಿವಿಗಳು ಗೆರಸೆಗಳಾದುವು ಪಾದಗಳು
ಗೊರಸೆಯಾದುವು ಎಲ್ಲಕ್ಕಿಂತ ಮುಖ್ಯ ಮೂಗು
ಮಹಾಸೊಂಡಿಲಾಯಿತು ಹಲ್ಲುಗಳು ಉಕ್ಕಿನ ಖಡ್ಗ –
ದಂತಾದುವು ಇಂಥ ಕಾಡಾನೆಗಳಿಗೆ ಮೃಗರಾಜನೆಂಬ
ಬಿರುದೂ ಬಂತು. ಅವು ಘೊಳ್ಳನೆ ಘೀಳಿಟ್ಟು
ನೀರಾನೆಗಳನ್ನು ಹಂಗಿಸಿದುವು. ನೀರಾನೆಗಳು ಪಾಪ!
ಹುಟ್ಟಾ ಆಲಸಿಗಳು ಇದ್ದಲ್ಲಿ ಇರುವಂಥ ಧಡ್ಡರು
ಯಾವ ಸಾಹಸವನ್ನೂ ಕೈಗೊಳ್ಳದ ದಪ್ಟಚರ್ಮದ
ಮೈಗಳ್ಳರು.
ಕಾಡಾನೆಗಳು ತಾನೆ ಎಷ್ಟು ಕಾಲ ಸ್ವೇಚ್ಛೆಯಿಂದ
ಇದ್ದಾವು? ಅವು ಖೆಡ್ಡಾದಲ್ಲಿ ಬಿದ್ದುವು. ಮನುಷ್ಯರ
ಕೈಯಲ್ಲಿ ಸಿಕ್ಕಿದುವು. ಮಾವುತರೆಂಬ ಜನರಿಂದ
ಅಂಕುಶದ ತಿವಿತ ಅನುಭವಿಸುತ್ತ ಭಾರವಾದ
ವಸ್ತುಗಳನ್ನು ಎಳೆಯತೊಡಗಿದುವು. ಜಾತ್ರೆಯಲ್ಲಿ
ದೇವರನ್ನು ಹೊರತೊಡಗಿದುವು ಈಗೀಗ ಅವು
ಸರ್ಕಸ್ಸಿನಲ್ಲಿ ಎಗರಾಡುತ್ತವೆ ಪಾರ್ಕುಗಳಲ್ಲಿ ಮಕ್ಕಳಿಗೆ
ಅಶ್ಚರ್ಯದ ಪ್ರಾಣಿಗಳಾಗಿ ನಿಲ್ಲುತ್ತವೆ-ಇತ್ತ ನೀರಾನೆಗಳು
ಜೀವವಿಕಾಸವನ್ನೆ ಧಿಕ್ಕರಿಸಿವೆಯೊ ಮರೆತಿವೆಯೊ
ಜಲದೊಳಗಿನ ನಾದಜಗತ್ತಿನಲ್ಲಿ ಮೈಮಮರೆತಿವೆಯೊ
ಹೇಳುವುದು ಹೇಗೆ ? ಅವುಗಳ ನಡುವೆ ಈಚೆಗೆ
ಮುಂದಾಳುಗಳು ಯಾರೂ ಬಂದಿಲ್ಲ!
ತಿರುಮಲೇಶ್ ಅವರ ಬಹುತೇಕ ಕವನಗಳಲ್ಲಿ ವಿಶ್ವದ ಹಲವು ಘಟನೆಗಳು, ಬಿಂಬವಾಗಿವೆ. ಅವರ ಲೇಖನಗಳಲ್ಲಿ, ಜಗತ್ತಿನ ಮೂಲೆ ಮೂಲೆಗಳ ವಿಚಾರಗಳನ್ನು ಕಲೆಹಾಕಿದ ನಿಷ್ಠೆ ಎದ್ದು ಕಾಣುತ್ತೆ.
ಅವರ ಮುಖದಲ್ಲಿ ಕಣ್ಣುಗಳು ( ದರ್ಶನ) ಭಾರತೀಯ, ಉಳಿದಂತೆ, ಕಿವಿ ಲ್ಯಾಟಿನ್ ಅಮೆರಿಕಾದ್ದು, ಮೂಗು ಯುರೋಪ್ ನದ್ದು, ಕಿವಿ ಆಫ್ರಿಕಾದ್ದು, ಹಣೆ ಜಪಾನ್ ನದ್ದು. ಅವರ
ಮುಖದ ಬಣ್ಣ ಕಪ್ಪು ಮಿಶ್ರಿತ ಬಿಳಿ ಅಂತ ಹೇಳೋಣವೇ!.
ಬದುಕಿನ ಎಂಭತ್ತನೇ ಮಹಡಿ ಹತ್ತಿರುವ ತಿರುಮಲೇಶ್ ಮೆಟ್ಟಿಲುಗಳನ್ನು ತಾವೇ ಕಟ್ಟಿ, ಒಂದೊಂದಾಗಿ ಹತ್ತಿದವರು. ಪ್ರತೀ ಮೆಟ್ಟಿಲಲ್ಲಿ,ತನ್ನ ಹೆಜ್ಜೆ ಗುರುತು ಮೂಡಿಸಿದವರು. ಅಧ್ಯಾಪನ,ಸಂಶೋಧನೆ ಜತೆಗೇ ಕನ್ನಡದ ಹಲವು ಸಾಹಿತಿಗಳನ್ನು ಜತೆಗೇ ಮೆಟ್ಟಿಲು ಹತ್ತಿಸಿದವರು.
ನೂರನೇ ಮಹಡಿ ಅವರಿಗೆ ಎತ್ತರವೂ ಅಲ್ಲ, ಕಷ್ಟವೂ ಅಲ್ಲ. ನೀರಾನೆ ದಡ ಏರಿ ವಿಕಸಿತವಾಗುವ ಸಾಹಸ ಮಾಡಬಹುದಾದರೆ, ನೂರು ಮೆಟ್ಟಿಲು ಹತ್ತುವುದು ತಿರುಮಲೇಶ್ ಅವರಿಗೆ ಏನು ಮಹಾ!.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ