ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುನ್ನಡೆಯುವ ಹಕ್ಕು ಮಹಿಳೆಯರಿಗೂ ಇದೆ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನ ಮಹಿಳೆಯ ಆತ್ಮ ಗೌರವದಿಂದ ಜೀವನ ನಡೆಸಲಿ ಎಂಬ ಸದುದ್ದೇಶದಿಂದ ವಿಶ್ವಸಂಸ್ಥೆಯು ಘೋಷಿಸಿದ ಈ ದಿನವನ್ನು ಮಹಿಳಾ ದಿನವೆಂದು ಅಂತರಾಷ್ಟ್ರೀಯವಾಗಿ ಆಚರಿಸಲಾಗುತ್ತದೆ.ಈ ದಿನ ಮಹಿಳಾ ಇತಿಹಾಸದಲ್ಲಿ ತನ್ನದೇ ಆದ ಒಂದು ಮಹತ್ವ ವೈಶಿಷ್ಟ್ಯಗಳಿವೆ. ಪುರುಷ ಪ್ರಧಾನ ಸಮಾಜದಲ್ಲಿ ಹಿತಾಸಕ್ತಿಗಳ ಮುಷ್ಟಿಯಲ್ಲಿ ನಲುಗಿ ಹೋದ ಮಹಿಳೆ ಪ್ರಥಮವಾಗಿ ತನ್ನ ಧ್ವನಿಯನ್ನು, ಪ್ರತಿಭಟನೆಯನ್ನು ತೋರಿದ ಪ್ರಮುಖ ದಿನ ಇದು.
ಮೌನವಾಗಿ ಸಹಿಸುವಿಕೆ : ಸಾವಿರಾರು ವರ್ಷಗಳ ಹಿಂದೆ ವಿದೇಶದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಪುರುಷ ಸಮಾಜವು ಅಸಡ್ಡೆ,ಅನಾಸಕ್ತಿ,ದೌರ್ಜನ್ಯ ತೋರುತ್ತಾ ಬಂದಿತ್ತು.ಮಹಿಳೆಯರ ಮೇಲೆ ಸಾಮಾಜಿಕ, ಆರ್ಥಿಕ,ದೈಹಿಕ ಶೋಷಣೆ ಅನ್ಯಾಯ, ಅತ್ಯಾಚಾರಗಳನ್ನು ನಡೆಸುತ್ತಿದ್ದರು. ಪ್ರಪಂಚದ ಎಲ್ಲಾ ಮಹಿಳೆಯರು ಮೂಕರಂತೆ ಅಸಹಾಯಕರಾಗಿದ್ದ ಕಾಲ ಆದಾಗಿತ್ತು. ಹಿಂದೂ ಕೂಡ ಎಷ್ಟೋ ಮಹಿಳೆಯರು ದುಷ್ಟ ಶಕ್ತಿಗಳಿಗೆ ಹೆದರಿ ಅವುಗಳಿಗೆ ಬಲಿಯಾಗಿ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಾ, ತಮ್ಮ ಜೀವನವನ್ನು ಕೊನೆಗಾಣಿಸಿ ಕೊಳ್ಳುತ್ತಾ, ಈ ಜ್ವಲಂತ ಸಮಸ್ಯೆಗಳನ್ನು ಸಮಸ್ಯೆಗಳನ್ನಾಗಿಯೇ ಉಳಿಸಿ ಕರಗಿ ಹೋಗುತ್ತಿರುವುದು ಸುಳ್ಳಲ್ಲ.
ಮಹಿಳಾ ದಿನಾಚರಣೆ: ಮಹಿಳಾ ದಿನಾಚರಣೆ ಪ್ರಥಮ ಪ್ರತಿಭಟನೆಯು ಮಹಿಳಾ ಕೂಗು ಕೇಳಿ ಬಂದಿದ್ದು 1907ರಲ್ಲಿ.ಅಮೆರಿಕಾದ ನ್ಯೂಯಾರ್ಕಿನ ಸಿದ್ಧ ಉಡುಪಿನ ಕಾರ್ಖಾನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಅಲ್ಲಿ ಎಲ್ಲಾ ಜನಾಂಗದ ಮಹಿಳಾ ಕೆಲಸಗಾರರೂ ಸಮಾನ ವೇತನಕ್ಕಾಗಿ ಹಾಗೂ ದಿನಕ್ಕೆ 8 ಗಂಟೆ ದುಡಿಮೆಯ ಹಕ್ಕಿಗಾಗಿ ಸಂಘಟಿತರಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಆಗ ಸರ್ಕಾರ ಅವರ ಮೇಲೆ ಗುಂಡಿನ ಸುರಿಮಳೆ ಸುರಿಸಿದಾಗ ಅಲ್ಲಿನ ಮಹಿಳಾ ಕಾರ್ಮಿಕರು ಯಾರು ಸಾವಿನ ಬಗ್ಗೆ ಧೃತಿ ಗೆಡದೆ ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಕೊನೆಗೆ ಸರ್ಕಾರ ಅವರ ಉಗ್ರ ಹೋರಾಟಕ್ಕೆ ಮಣಿದು ಅವರ ಬೇಡಿಕೆಯನ್ನು ಒಪ್ಪಿಕೊಂಡಿತು. ಮಹಿಳೆಯರ ವಿಷಯಕ್ಕೆ ನಾಂದಿ ಹಾಡಿತು. ಈ ಒಂದು ಘಟನೆ ಪ್ರಪಂಚದ ನಾನಾ ಭಾಗದ ಮಹಿಳೆಯರು ತಮ್ಮಗಾದ ಅನ್ಯಾಯ, ಅತ್ಯಾಚಾರದ ವಿರುದ್ಧ ಹೋರಾಡಲು ಪ್ರೇರಣೆ ನೀಡಿತು. ಆಗ ಈ ದಿನವನ್ನು ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸಲು ಅಂದಿನ ಸಮಾಜದ ನಾಯಕಿಯಾಗಿದ್ದ ಶ್ರೀಮತಿ ಕ್ಲಾರಾ ಜೆಟ್ ಕಿನ್ 1910ರ ಮಾರ್ಚ್ 8 ರಂದು ಮಹಿಳೆಯರಿಗೆ ಸಾರ್ವತ್ರಿಕ ಮತದಾನದ ಹಕ್ಕನ್ನು ಬೇಡಿಕೆ ಯನ್ನಗಿಟ್ಟುಕೊಂಡು ಆ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಿದರು.

ಶ್ರೀಮತಿ ಕ್ಲಾರಾ ಜೆಟ್ ಕಿನ್


ಯಾವ ದಿಕ್ಕಿನಲ್ಲಿದೆ: 23ನೇ ಶತಮಾನದ ಹಾದಿಯಲ್ಲಿ ಸಾಗಿರುವ ಇಂದಿನ ಮಹಿಳೆಯರ ಆಲೋಚನೆ ನಡೆ ಯಾವ ದಿಕ್ಕಿನಲ್ಲಿದೆ? ಹಾಗಂತ ಈ ಆಚರಣೆಯಿಂದ ಘೋಷಣೆಯ ಆಶಯ ಸಾಕಾರ ಕೈಗೊಂಡಿದೆಯೇ? ಈ ಮಹಿಳಾ ದಿನದ ಆಚರಣೆ ಕೇವಲ ಯಾಂತ್ರಿಕವಾಗಿ ನಡೆಯುತ್ತಿದೆಯೇ? ಅಥವಾ ಅರ್ಥಪೂರ್ಣವಾಗಿವಯೇ? ಮಹಿಳೆಯರನ್ನು ಸಬಲರನ್ನಾಗಿಸುವ ದೆಸೆಯಲ್ಲಿ ಹಿಂದಿನ ಈ ಚರಿತ್ರೆ ಎಷ್ಟು ಪೂರಕವಾಗಿದೆ? ಆಕೆ ಸ್ಥಾನಮಾನಗಳಲ್ಲಿ ಬದುಕಿನಲ್ಲಿ ಗಮನೀಯ ಬದಲಾವಣೆಗಳು ಕಂಡು ಬಂದಿದೆಯಾ? ಮುಂತಾದ ಪ್ರಶ್ನೆಗಳು ಎದುರಾಗುತ್ತದೆ.
ಪ್ರಗತಿ ಆಗಿಲ್ಲ:ಎಲ್ಲಿವರೆಗೆ ಮಹಿಳೆಯರನ್ನು ಆಳಿನಂತೆ ನಡೆಸಿಕೊಳ್ಳುತ್ತದೆಯೋ ಅಲ್ಲಿಯವರೆಗೆ ಸಮಾಜದಲ್ಲಿ ದುಃಸ್ಥಿತಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ ಡಾ.ಎಸ್.ರಾಧಾಕೃಷ್ಣನ್. ನಮ್ಮ ದೇಶದಲ್ಲಿಯೇ ನೋಡಿ ಜಾತಿ ಮತ, ಪಂಥದ ಪ್ರಭಾವ,ಅಧಿಕ ಕಂದಾಚಾರ, ಮೂಡನಂಬಿಕೆಗಳಿಂದ ಸಮಾಜ ತತ್ತರಿಸುತ್ತಿದೆ ಪುರುಷ ಸರಿಸಮಾನ ಸ್ಥಾನ, ಸ್ವಾಭಿಮಾನ, ಸ್ವಾವಲಂಬನೆಯಿಂದ ಜೀವಿಸುವಲ್ಲಿ ಸಾಧನೆಯತ್ತ ಸಾಗಿದೆಯಾದರೂ ಪರಿಪೂರ್ಣ ಪ್ರಗತಿ ಹಾಗಿಲ್ಲ.
ಅಸಮತೋಲನ: ಜಗತ್ತಿನಾದ್ಯಂತ ಸ್ತ್ರೀಯರನ್ನು ಕಡೆಗಣಿಸುತ್ತಾ ಸಾಗಿರುವುದು ಆಧುನಿಕ ಪ್ರಪಂಚದ ವಿಪರ್ಯಾಸ. ಭ್ರೂಣಹತ್ಯೆ, ಶಿಶುಹತ್ಯ, ಲೈಂಗಿಕ ಕಿರುಕುಳ ಹಿಂಸೆ ಇವೆಲ್ಲವೂ ನಿರಂತರವಾಗಿ ಸ್ತ್ರೀ ಸಮುದಾಯವನ್ನು ಕಾಡುತ್ತಲೇ ಇದೆ. ಹೀಗಾಗಿ ಪುರುಷ ಸ್ತ್ರೀ ಸಂಖ್ಯೆಯಲ್ಲಿ ಅಸಮತೋಲನ ವ್ಯಾಪಕವಾಗಿದೆ. ಇದನ್ನು ನಿವಾರಿಸಲು ಸರ್ಕಾರ ಕಾಲ ಕಾಲಕ್ಕೂ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಆದಾಗ್ಯೂ ನಿರೀಕ್ಷಿತ ಸುಧಾರಣೆ ಸಾಧ್ಯವಾಗಲಿಲ್ಲ ಶೋಷಣೆ,ತಾರತಮ್ಯ, ಅಸಮಾನತೆ ಇಂದಿಗೂ ಮುಂದುವರೆದಿದೆ.ಆಮಾನವೀಯ ಪದ್ಧತಿ ನಿಂತಿಲ್ಲ. ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ ಕೃತ್ಯ ತಾಯಿ ಗರ್ಭದಲ್ಲಿ ಇರುವಾಗಲೇ ಆರಂಭಗೊಂಡು ಬೆಳೆಯುವ ಹಂತದಲ್ಲೂ ಹತ್ಯ, ಅಸಮಾನತೆಯ ಕಾರ್ಯ ಮುಂದುವರೆಯುತ್ತಲೇ ಇದೆ. ಲೈಂಗಿಕ ಕುರುಗಳ ಮಾನಸಿಕ ದೈಹಿಕ ಹಿಂಸೆ ಯಂತಹ ದುಷ್ಕೃತ್ಯಗಳು ನಡೆಯುತ್ತಲೇ ಇವೆ.
ಕಿರುತೆರೆ ಪಾತ್ರ ಹಿರಿದು: ಮಾಧ್ಯಮಗಳಲ್ಲಿ ಕಿರುತೆರೆಯ ಪಾತ್ರ ಹಿರಿದು. ಮಹಿಳೆಯನ್ನು ಅಲಂಕಾರಿಕ ಗೊಂಬೆಗಳಂತೆ ಪ್ರತಿಬಿಂಬಿಸುವುದು ಜಾಹೀರಾತುಗಳಲ್ಲಿ ಅವಿರತವಾಗಿ ನಡೆದಿದೆ. ಹೆಣ್ಣಿನ ಅವಶ್ಯಕತೆ ಇಲ್ಲದಿದ್ದರೂ ಪುರುಷರ ಒಳಉಡುಪು, ಶೇವಿಂಗ್ ಬ್ಲೇಡ್, ಡಿಯೋಡರೆಂಟ್, ಸೋಪು ಮುಂತಾದ ಜಾಹೀರಾತುಗಳಲ್ಲಿ ಹೆಣ್ಣಿಗೆ ಕಡಿಮೆ ಬಟ್ಟೆ ತೊಡಿಸಿ ಅವರ ಜೊತೆ ನಿಂತು ತೋರಿಸುವುದು ಹಾಗೆಯೇ ಕ್ರಿಕೆಟ್ ಮೈದಾನದಲ್ಲಿ ಕಿಕ್ಕಿರಿದ ಜನಜಂಗುಳಿಯಲ್ಲಿ ಮತ್ತದೆ ಕನಿಷ್ಠ ಉಡುಪಿನ ಯುವತಿಯರು ಗೊಂಬೆ ಕುಣಿವಂತೆ ಹಾಸ್ಯಸ್ಪದವಾಗಿ ತೋರಿಸುತ್ತಾರೆ.
ಹೆಣ್ಣು ಖಳನಾಯಕಿ: ಟಿವಿಗಳಲ್ಲಿ ಬರುವ ದಾರವಾಹಿಗಳು ಹುರುಳಿಲ್ಲದ ಕಥೆಯಾಗಿದ್ದು ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಹಿಂಗೀತವನ್ನೇ ಬಂಡವಾಳವಾಗಿಸಿ ಕೊಂಡು ಖಳನಾಯಕಿಯಾಗಿ ಆಕೆಯನ್ನು ಬಿಂಬಿಸುವುದು ಎಷ್ಟು ಸಮಂಜಸ?.

ಕಡೆಗಣಿಸುವ ಹಕ್ಕಿಲ್ಲ: ಒಂದು ಜನಾಂಗ ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಬೇಕಾದರೆ ಆ ಜನಾಂಗದ ಹೆಣ್ಣು ಮಕ್ಕಳು ಸಾಮಾಜಿಕವಾಗಿ ಎಷ್ಟು ಮುಂದುವರೆಯಲಿದ್ದಾರೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ ಸ್ವಾಮಿ ವಿವೇಕಾನಂದರು. ಅವರ ಮಾತಿನಂತೆ ಹೆಣ್ಣು ಮಕ್ಕಳು ಸುರಕ್ಷಿತ ರಾಗಿ ಸಮಾಜದಲ್ಲಿ ಗೌರವದ ಸ್ಥಾನ ಪಡೆಯುವುದರ ಮೂಲಕ ತಲೆ ಎತ್ತಿ ಬದುಕುವ, ಆತ್ಮಾಭಿಮಾನದಿಂದ ಮುನ್ನಡೆಯುವ ಹಕ್ಕು ಅವರಿಗೂ ಇದೆ. ಅದನ್ನು ಕಸಿಯುವ ಹಕ್ಕುಯಾರಿಗೂ ಇಲ್ಲವೆಂಬ ಸತ್ಯ ಸಂಗತಿ ತಿಳಿದರೆ ಸಮಾಜಕ್ಕೆ ಒಳಿತು.

ಶ್ರೀಮತಿ ರಾಜೇಶ್ವರಿ ವಿಶ್ವನಾಥ್

ಮೊಬೈಲ್ ನಂಬರ್ =9449643706