- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
” ಮೂಕವಾಯಿತೆ ಗಾನ ಕೋಗಿಲೆ
ಉಣಿಸಿ ಗಾನ ಸುಧೆಯ ವಿಶ್ವಕೆ
ತಣಿಸಿ ಮನಗಳ ದಣಿಯಿತೆ ?
ಅಥವಾ ರೆಂಬೆ ಕಳಚಿ ಬಿದ್ದಿತೆ!
ಬೇಸರ ಬಂದಿತೆ ಇಂಚರವ ಪಸರಿಸಿ
ಸ್ವರಗಳಲಿ ಜೀವದ ಮಂತ್ರವನುಸಿರಿಸಿ
ಮರದ ಋಣವು ತೀರಿತೆ, ಗಾನ ಲಹರಿಯ ಹರಿಸಲು
ಬಾಡದ ಮರವೊಂದು ಎಲ್ಲಿಯೋ ಕಂಡಿತೆ
ಆಗಸದ ಎಲ್ಲೆಗಳ ಮೀರಿ ಇಂಚರ
ಸೇರಿತೇ ಗಂಧರ್ವ ಸೀಮೆಗೆ
ನಲುಮೆ ಒಲುಮೆ ಬೆರೆತ ದನಿಗೆ
ಭುವಿಯು ಸಾಕಾಗದಾಯಿತೆ
ಲೀನವಾಯಿತೆ ಪ್ರಕೃತಿಯ ‘ಸರಿಗಮ’ ಗಳಲಿ
ರಿಂಗಣಿಸಲು ಬಿಟ್ಟು ಮನಮನಗಳಲಿ
ಮಧುರ ಸ್ವರ ತರಂಗಗಳ
ತೇಲಿ ಹೋಯಿತೆ ಸಮಯದ ಅಲೆಗಳಲಿ
ಅಬ್ಬರವನು ತಾಳದೆ
ನಶಿಸಿತು ಶರೀರ; ಶಾರೀರ ಹೊಮ್ಮಿಸಿದು ಬಾಳದೆ
ಹರಿಯದೆ ಹೊನಲಾಗಿ ಎಲ್ಲೆಡೆ
ತಂಪನೆರೆಯದೆ ಎಲ್ಲರ ಎದೆಗಳಲಿ
ಕದಗಳ ತೆರೆದು ಒಲವಿನ ನೀಡಿ ಮುದವ
ಹಸನ ಮಾಡದೆ ಬಾಳನು ಮನಗಳ
ಶಾಖೆ ಮೇಲೆ ಕುಳಿತು ಹಾಡದೆ!
ಉಲಿದ ಗೀತೆಗಳೀಗ ಸೇರಿವೆ ಅಂತರಂಗಕೆ
ಆತುಮಗಳಲಿ ಬೆಸೆದು ಹೊಸೆಯುತಿದೆ ಹೊಸ ರಾಗಗಳನು
ರಾಗರಹಿತ ಅನುರಾಗ ಭರಿತ ಗಾನ ಕೇಳಿಯ ನಡೆಸುತ
ಮನಮನಗಳಲಿ ಮನೆ ಮಾಡಿ ಸಾಗಿದೆ ಅಮೃತವರ್ಷವ ಸುರಿಸುತ “
ಸಂಗೀತದ ಒಲವು, ಭಾಷೆಗಳ ಒಲವು, ಜನರ ಮೇಲಿನ ಒಲವು, ಅಂತರಂಗದಲ್ಲಿ ಒಲವಿನ ಸ್ರೋತ ಹೊತ್ತು ಅದರ ಸೆಲೆಯನ್ನು ಹೊನಲಾಗಿ ಹರಿಸಿ, ನಮ್ಮನ್ನು ಅಗಲಿದ ಪ್ರೀತಿಯ ‘ ಬಾಲು ಸರ್’ ಅವರಿಗೆ ಇಂದಿನ ‘ ಒಲವೆ ನಮ್ಮ ಬದುಕು’ ಅಂಕಣ ಅರ್ಪಿತ. ಆ ಮಹಾ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಮೇಲಿನ ‘ ನುಡಿ ನಮನ’ ದಿಂದ ಪ್ರಾರಂಭಿಸಿದೆ.
” ನಾ ಪ್ರೇಮಕೆ ಸೆಲವು
ನಾ ದಾರಿಕೆ ಸೆಲವು
ಕಾಲಾನಿಕೇ ಸೆಲವು
ದೈವಾನಿಕೇ ಸೆಲವು
ಈ ಶೂನ್ಯಮ್ ನಾ ಗಮ್ಯಮ್
ಈ ಜನ್ಮಕೇ ಸೆಲವು “
ದಿ. ಎಸ್. ಪಿ. ಬಾಲಸುಬ್ರಮಣ್ಯಮ್ ಅವರು ಹಾಡಿದ ಈ ಹಾಡನ್ನು ತೆಲುಗು ಟಿವಿ ವಾಹಿನಿ ಯವರು ಪದೇ ಪದೇ ಬಿತ್ತರಿಸುತ್ತಿರುವಾಗ ಕರುಳು ಕಿತ್ತು ಬಂದಿತು. ಅದರ ಸ್ಥೂಲ ಕನ್ನಡ ಅನುವಾದವನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.
“ ವಿದಾಯ ನನ್ನ ಪ್ರೇಮಕೆ
ವಿದಾಯ ನನ್ನ ದಾರಿಗೆ
ಕಾಲಕ್ಕೆ ವಿದಾಯ
ದೈವಕ್ಕೆ ವಿದಾಯ
ಈ ಶೂನ್ಯವೇ ನನ್ನ ಗಮ್ಯ,
ವಿದಾಯ ಈ ಜನುಮಕೆ”
ಮನವನ್ನು ಕಲಕುವ ಈ ಹಾಡು ಅವರ ಕೊರಳಿಂದ ಹೊರಟದ್ದಲ್ಲ ಎಂದೆನಿಸಿತು. ಈ ಹಾಡೇ ಏಕೆ, ಅವರು ಹಾಡಿರುವ ಎಲ್ಲ ಹಾಡುಗಳು ಅವರ ಆತ್ಮದ ಆಳದಿಂದ ಹೊಮ್ಮಿ, ಅವರ ವ್ಯಕ್ತಿತ್ತ್ವದ ಮೃದುತ್ವ, ಅಗಾಧ ಪ್ರೀತಿ, ನಲಿವು, ನೋವುಗಳನ್ನೆಲ್ಲಾ ಉಂಡು ಕೊರಳಲಿ ಹರಿದು, ಅಲ್ಲಿ ಎಲ್ಲ ಭಾವಗಳು ಹದಗೊಂಡು ನಮ್ಮ ಮನಗಳಿಗೆ ನೇರವಾಗಿ ಮುಟ್ಟಿತ್ತಿರುವಂತೆ ಭಾಸವಾಗುತ್ತದೆ. ಅವರು ಮಾತನಾಡಿದರೂ ಸಂಗೀತವೇ; ನಕ್ಕರೂ ಸಂಗೀತವೇ. ಅವರು ಸಂಗೀತಮಯವಾಗಿದ್ದರು.
ಸಾಹಿತ್ಯ ಸಂಗೀತಗಳ ಸಾಂಗತ್ಯದಿಂದೇ ಅಲ್ಲವೆ ಹಾಡು ಹೊಮ್ಮುವದು ;ಒಲವಿಲ್ಲದೆ ಸಾಂಗತ್ಯವಿಲ್ಲ, ಸಾಹಿತ್ಯವಿಲ್ಲ, ಸಂಗೀತವಿಲ್ಲ, ಹಾಡಿಲ್ಲ, ನಮ್ಮನ್ನು ಕಾಡುವ ಪಾಡು ಮನದಲ್ಲಿಯೇ ಹುಗಿದು ಹೋಗುವದು. ಅದು ಕಲೆಯಾಗಿ ಅಭಿವ್ಯಕ್ತಗೊಳ್ಳಬೇಕೆಂದರೆ ಕಲಾವಿದನ ತೀವ್ರವಾದ ಒಲವು ಮತ್ತು ತಪಸ್ಸಿನ ಪರುಷದ ಸ್ಪರ್ಷ ಆಗಲೇ ಬೇಕು. ಶಾಸ್ತ್ರ ಬದ್ಧವಾಗಿ ಸಂಗೀತವನ್ನು ಎಸ್ಪಿಬಿ ಅವರು ಕಲಿಯದಿದ್ದರೂ , ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟವಾದ ಸಿದ್ಧಿಯನ್ನು ಅವರು ತಮ್ಮ ಅವಿರತವಾದ ತಪಸ್ಸಿನಿಂದ ಸಾಧಿಸಿದ್ದರು. ಅವರ ಮಾತಿನಲ್ಲೇ ಹೇಳುವದಾದರೆ ‘ ಸಂಗೀತಕ್ಕೆ ಪದಾರ್ಪಣೆ ಮಾಡಿದ್ದು ಒಂದು ದೈವೀ ಯೋಗ’. ಚಲನ ಚಿತ್ರಗಳಲ್ಲಿ ನೇಪಥ್ಯ ಗಾಯಕನಗುತ್ತೇನೆ ಎಂದು ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ, ಅದು ತಮಗೆ ವೃತ್ತಿಯಾಗಿ ಒದಗಿ ಬಂದದ್ದು ಯೋಗಾಯೋಗದಿಂದ ಅವರು ಹೇಳಿಕೋಂಡಿದ್ದಾರೆ.
ಅವರ ಊರ ಹತ್ತಿರ ನಡೆದ ಹಾಡಿನ ಸ್ಪರ್ಧೆಯಲ್ಲಿ ಪಾಲ್ಗೊಂಡಾಗ, ಅವರಿಗೆ ಎರಡನೇ ಬಹುಮಾನ ಸಿಕ್ಕು, ಸ್ಪರ್ಧೆಗೆ ನಿರ್ಣಾಯಕರಾಗಿ ಬಂದ ಸುಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರ ಸಮ್ಮುಖದಲ್ಲಿ ಮೊದಲನೇ ವಿಜೇತರನ್ನು ಹಾಗೂ ಎಸ್ಪಿ ಅವರನ್ನು ಹಾಡಿಸಿದರಂತೆ. ಆಗ ಇವರ ಪ್ರತಿಭೆಗೆ ಬೆರಗಾದ ಜಾನಕಿ ಅವರು, ಎಸ್ಪಿ ಅವರಿಗೇ ಮೊದಲನೆಯ ಬಹುಮಾನ ನ್ಯಾಯವಾಗಿ ದಕ್ಕಬೇಕು ಎಂದು ತುಂಬಿದ ಸಭೆಯಲ್ಲಿ ಘೋಷಿಸಿದರಲ್ಲದೆ, ಎಸ್ಪಿ ಅವರಿಗೆ ಚಲನಚಿತ್ರಗಳಲ್ಲಿ ಹಾಡುವ ಆಕಾಂಕ್ಷೆಯನ್ನು ಅವರ ಮನದಲ್ಲಿ ಬಿತ್ತಿದರೆಂದು ತಾವು ನೀಡಿರುವ ಎಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಹೀಗೆ ಅಂಕುರವಾದ ಅವರ ಮಹದಾಸೆಗೆ ಇಂಬು ದೊರೆತದ್ದು ಪ್ರಸಿದ್ಧ ಸಂಗೀತಗಾರರಾದ ಎಸ್.ಪಿ.ಕೋದಂಡಪಾಣಿ ಅವರಿಂದ. ಕೋದಂಡ ಪಾಣಿಯವರು ಎಸ್ಪಿ ಅವರು ಗಾಯನದ ಒಂದು ಸ್ಪರ್ಧೆ ಯಲ್ಲಿ ಪಾಲ್ಗೊಂಡು ಹಾಡಿದಾಗ ಇವರ ಗಾಯನವನ್ನು ಕೇಳಿ ಎಸ್ಪಿ ಅವರ ಪ್ರತಿಭೆಯನ್ನು ಗುರುತಿಸಿದರಂತೆ. ಮೊದಲು ಕೋದಂಡ ಪಾಣಿಯವರು ‘ ಚಲನ ಚಿತ್ರಗಳಲ್ಲಿ ಅವಕಾಶ ಸಿಕ್ಕರೆ ಹಾಡುವೆಯಾ ‘ ಎಂದು ಕೇಳಿದ್ದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ, ಆದರೂ 1966 ರಲ್ಲಿ ಕೋದಂಡ ಪಾಣಿಯವರೇ ಎಸ್ಪಿ ಅವರನ್ನು ಅರಿಸಿಕೊಂಡು ಬಂದು ಇವರಿಗೆ ತೆಲುಗು ಚಿತ್ರ ‘ ಶ್ರೀ ಶ್ರೀ ಶ್ರೀಮರ್ಯಾದ ರಾಮನ್ನ’ ದಲ್ಲಿ , ಪಿ.ಬಿ. ಶ್ರೀನಿವಾಸ್ ಮತ್ತು ರಘುರಾಮಯ್ಯ (ತೆಲುಗು ರಂಗ ದಿಗ್ಗಜ) ರಂಥ ಧುರೀಣರ ಜೊತೆ ಹಾಡಲು ಅವಕಾಶ ಕಲ್ಪಿಸಿದ್ದು ಒಂದು ದೈವೀ ಶಕ್ತಿಯ ಕೈವಾಡದಿಂದ ಎಂದು ಎಸ್ಪಿ ಅವರೇ ಹೇಳಿಕೊಳ್ಳುತ್ತಾ, ‘ಸಾಪಾಸಾ’ ದ ಗಂಧವಿರದ ನನಗೆ ಈ ಅಪೂರ್ವ ಘಟನೆ ಸಂಭವಿಸ ಬೇಕೇಂದರೆ, ಇದು ಭಗವಂತನ ಕೃಪೆಯಲ್ಲದೆ ಮತ್ತೇನು ಎಂದು ತಾವು ನೀಡಿದ ಸಂದರ್ಶನಗಳಲ್ಲಿ ಅರುಹಿದ್ದಾರೆ.
1966 ರಲ್ಲಿ ತೆಲುಗು ಚಿತ್ರದಲ್ಲಿ ಬ್ರೇಕ್ ಸಿಕ್ಕ 15 ದಿನಗಳಲ್ಲೇ ಅವರಿಗೆ ಕನ್ನಡ ಚಿತ್ರ ‘ ನಕ್ಕರೆ ಅದೇ ಸ್ವರ್ಗ’ ದಲ್ಲಿ ಹಾಡುವ ಅವಕಾಶ ಸಿಕ್ಕದ್ದೂ ಒಂದು ಯೋಗಾಯೋಗ. ತೆಲುಗು ಚಿತ್ರದ ಹಾಡಿಗೆ ವೀಣೆಯನ್ನು ನುಡಿಸಿದ ರಂಗರಾಯರಿಂದ ಈ ಪ್ರಸ್ತಾಪ ಬಂದಾಗ, ಕನ್ನಡ ಭಾಷೆ ಗೊತ್ತಿರದ ಎಸ್ಪಿ ಅವರು ಮೊದಲು ಹಿಂಜರಿದರಂತೆ. ‘ ನನಗೂ ಕನ್ನಡ ಬರುವದಿಲ್ಲ, ಆದರೆ ಹಾಡಿನ ಬಗ್ಗೆ ತಿಳಿಸಲು ಸಾಹಿತಿಗಳು ಇರುತ್ತಾರೆ, ಏನೂ ಚಿಂತೆಯಿಲ್ಲ’ ಎಂದು ಅವರು ಭರವಸೆ ಕೊಟ್ಟಾಗ ಹಾಡಲು ತಯಾರಾಗಿ, ಮುಂದೆಂದೂ ಹಿಂದಿರುಗಿ ನೋಡದ ಅವರು 21 ಸಾವಿರ ಕನ್ನಡ ಗೀತೆಗಳನ್ನು ಹಾಡಿದ್ದು ಈಗ ಇತಿಹಾಸ.
ಅವರ ಈ ಒಪ್ಪಿಗೆಯಲ್ಲಿ ನಾವು ಅವರ ಎರಡು ವಿಶಿಷ್ಟ ಗುಣಗಳನ್ನು ಗುರ್ತಿಸಬಹುದು. ಒಂದನೆಯದು, ಅವರಿಗೆ ತಮ್ಮ ಮಾತೃಭಾಷೆ ಅಲ್ಲದೆ ಇತರ ಭಾಷೆಗಳ ಮೇಲಿದ್ದ ಒಲವು. ಆ ಒಲವು ಕನ್ನಡ ಭಾಷೆಯ ಬಗ್ಗೆ ಗಾಢವಾಗುತ್ತಾ ಹೋಗಿ, ಕನ್ನಡ ನಾಡು ಹಾಗೂ ಕನ್ನಡ ಜನರ ಕುರಿತಾಗಿ ಅತೀವವಾದ ಪ್ರೀತಿಯನ್ನು ಹೊಂದುವಂತಾದರು. ‘ ಮರು ಜನ್ಮವೆಂದು ಎನಾದರೂ ಇದ್ದರೆ, ಕರುನಾಡಿನಲ್ಲಿಯೇ ಕನ್ನಡಿಗನಾಗಿ ಹುಟ್ಟುತ್ತೇನೆ’ ಎಂಬ ತಮ್ಮ ಬಯಕೆಯನ್ನು ಘಂಟಾಘೋಷವಾಗಿ ಸಾರಿದರು; ಇದು ಅವರ ಕನ್ನಡ ಪ್ರೇಮದ ಪರಾಕಾಷ್ಠೆ.
ಭಾಷೆ ತಿಳಿಯದಿದ್ದರೂ ಕನ್ನಡ ಚಿತ್ರದಲ್ಲಿ ಹಾಡಲು ಸಿದ್ಧರಾಗಲು ಎರಡನೆಯ ಕಾರಣ, ಅವರಿಗೆ ಸಾಹಿತಿಗಳಲ್ಲಿ ಮತ್ತು ಗೀತ ರಚನೆಕಾರರಲ್ಲಿ ಇರುವ ಅಪಾರ ನಂಬಿಕೆ, ಗೌರವ ಹಾಗೂ ಪ್ರೀತಿ. ಈ ವಿಷಯವನ್ನು ಅವರ ಜೊತೆ ಒಡನಾಡಿದ ಸಾಹಿತಿಗಳಾದ ಮಿತ್ರ ಜಯಂತ್ ಕಾಯ್ಕಿಣಿ, ಹಂಸಲೇಖ, ದೊಡ್ಡರಂಗೇಗೌಡ ಅವರು ಎಷ್ಟೋ ವೇದಿಕೆಗಳ ಮೇಲೆ ಹಂಚಿಕೊಂಡಿದ್ದಾರೆ. ಮಿತ್ರ ಜಯಂತ್ ಅವರು
ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತ ,’ ಹೆತ್ತರೆ ಹೆಣ್ಣನ್ನೇ ಹೆರಬೇಕು’ ಚಿತ್ರಕ್ಕಾಗಿ ಅವರು ಬರೆದ ಹಾಡಿಗೆ ಎಸ್ಪಿ ಅವರು ತಮ್ಮ ದನಿಯನ್ನು ನೀಡಿ, ಹಾಡನ್ನು ‘ಧನಿ’ ( ಶ್ರೀಮಂತ ) ಮಾಡಿದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳ ಬಯಸುವೆ. ಆ ಸೊಗಸಾದ ಹಾಡನ್ನು ಎಸ್ಪಿ ಅವರು ‘ ಸೋಲ್ ಫುಲ್’ ಆಗಿ ಪ್ರಸ್ತುತ ಪಡೆಸಿದ್ದಾರೆ. ಅದನ್ನು ಕೇಳಿದ ನನಗೆ, ಆ ಹಾಡು ನನ್ನ ಎದೆಯಲ್ಲಿ ಈಗಲೂ ಭಾವ ತರಂಗಗಳನ್ನು ಎಬ್ಬಿಸುತ್ತಿದೆ( ಈ ಅಂಕಣ ಬರೆಯುತ್ತಿದ್ದಂತೆ).
ಅವರು 5 ದಶಕಗಳ ಕಾಲ, ದೇಶದ ಹಲವಾರು ಭಾಷೆಗಳಲ್ಲಿ ಸುಮಾರು 40,000 ಕ್ಕೂ ಮಿಗಿಲಾದ ಗೀತೆಗಳನ್ನು ಹಾಡಿದ್ದಾರೆ. ಈ ಸುದೀರ್ಘವಾದ ‘ಗಾನ ಯಾನ’ ಕ್ಕೆ ಅಮೃತ ಯಾನವೆಂದು ಹೇಳಿದ ಜಯಂತ್ ಅವರ ಮಾತು ಬಹಳ ಸಮರ್ಪಕವಾಗಿದೆ. ಅವರು ಹಾಡಿದ ಎಲ್ಲ ಗೀತೆಗಳಲ್ಲಿ ಎಂದಿಗೂ ಅಳಿಯದ ಅವರ ಛಾಪು ಕಾಣಬಹುದು.
ತೆಲುಗು ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ ಪಾಡುತಾ ತೀಯಗಾ’ ಮತ್ತು ಕನ್ನಡ ಈಟಿವಿ ವಾಹಿನಿಯಲ್ಲಿ ಪ್ರಸಾರಗೊಂಡ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಗಳು ಅಮೋಘವಾದ ಜನಪ್ರಯತೆ ಗಳಿಸಿದ್ದು ಸರ್ವ ವಿದಿತ.
ಅವರ ಮೃದುತ್ವ, ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳನ್ನು ಪ್ರೀತಿಯಿಂದ ಹುರಿದುಂಬಿಸಿ ಪ್ರೋತ್ಸಾಹಿಸುವ ರೀತಿ ಇವುಗಳೇ ಕಾರ್ಯಕ್ರಮ ಎಲ್ಲರಿಗೂ ಪ್ರಿಯವಾಗಲು ಕಾರಣ. ಸ್ನೇಹ ಪರತೆ, ಪ್ರೀತಿ , ಪರರ ಕುರಿತು ಕಳಕಳಿ ಇವುಗಳೆಲ್ಲಾ ಹದವಾಗಿ ಬೆರೆತು ಹರಳುಗಟ್ಟಿ ಅವರ ದನಿ ತಯ್ಯಾರಾದಂತಿತ್ತು. ಅವರು ಬಾಯಿ ಬಿಟ್ಟು ಮಾತು ಶುರು ಮಾಡಿದೊಡನೆ ಈ ಎಲ್ಲ ಭಾವಗಳು ಅವರ ಧ್ವನಿಯಲ್ಲಿ ಸೂಸುತ್ತಿತ್ತು.
ಅವರು ತಮ್ಮ ಹಳೆಯ ಸ್ನೇಹಿತರನ್ನು ಎಂದೂ ಮರೆತವರಲ್ಲ. ಪ್ರಾರಂಭದ ಹಂತದಲ್ಲಿ ಅವರಿಗೆ ನೆರವಾದ ಸ್ನೇಹಿತರ ಸಂಪರ್ಕದಲ್ಲಿ ಅವರು ಸದಾ ಇದ್ದರು. ‘ ವೀಕ್ ಎಂಡ್ ವಿತ್ ರಮೇಶ್’ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ, ನಟ ರಮೇಶ್ ಅವರು ಎಸ್ಪಿ ಅವರನ್ನು ಸಂದರ್ಶಿಸುತ್ತ, ಅಚಾನಕ್ ಆಗಿ ಎಸ್ಪಿ ಅವರ ಹಳೆಯ ಮಿತ್ರರನ್ನು ಅವರ ಮುಂದೆ ಪ್ರಸ್ತುತ ಪಡಸಿ ಸರ್ಪ್ರೈಜ್’ ಕೊಟ್ಟಾಗ, ಎಸ್ಪಿ ಅವರ ಕಣ್ಣುಗಳಲ್ಲಿ ಆನಂದ ಭಾಷ್ಪ ಜಿನಿಗಿ ಗದ್ಗದಿತರಾದ ಅವರ ಚಿತ್ರ ಇನ್ನೂ ಕಂಗಳ ಮುಂದೆ ನಿಂತಿದೆ.ಆ ಕಾರ್ಯಕ್ರಮದಲ್ಲಿ ಭಗವಹಿಸಿದ ಅವರ ಸ್ನೇಹಿತರೊಬ್ಬರು, ತಮ್ಮ ಮಡದಿ ಕ್ಯಾನ್ಸರ್ ನಿಂದ ಬಳಲುವಾಗ, ಎಸ್ಪಿ ಅವರು ಎರಡು ವರ್ಷ ಗಳ ಕಾಲ ಅವರ ಮನೆಯಲ್ಲಿರಿಸಿಕೊಂಡು ಆರೈಕೆ-ಉಪಚಾರ- ಶುಷ್ರೂಶೆಗಳ ಗಳಲ್ಲಿ ಮಾಡಿದ ಸಹಾಯವನ್ನು ಸ್ಮರಿಸಿಕೊಂಡಾಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರ ಕಣ್ಣುಗಳು ತೇವಗೊಳ್ಳದೆ ಇರಲಿಲ್ಲ.
ಸ್ನೇಹಪರತೆ ಅವರ ವ್ಯಕ್ತಿತ್ವದ ಪ್ರಮಾಣಕ ಮುದ್ರೆ( ಹಾಲ್ ಮಾರ್ಕ) ಆಗಿತ್ತು. ಕನ್ನಡ ಚಲನ ಚಿತ್ರ ರಂಗದ ಶ್ರೇಷ್ಠ ನಟರಾದ ವಿಷ್ಣು ವರ್ಧನ್, ಅಂಬರೀಶ್ , ಶ್ರೀನಾಥ್, ಶಿವರಾಜ ಕುಮಾರ್ ಅವರಿಗೆ ಸನ್ನಿಹಿತರಾಗಿದ್ದರು. ಎಸ್ಪಿ ಅವರ ನೆಚ್ಚಿನ ಗಾಯಕರಾದ ಮೊಹಮ್ಮದ್ ರಫಿ ಅವರ ಹಾಡುಗಳನ್ನು ಈ ಗೆಳೆಯರ ಗುಂಪಿಗಾಗಿ ಎಷ್ಟೋ ಸಲ ಹಾಡಿದ ನೆನಪುಗಳನ್ನು ಅವರು ಹಲವೆಡೆ ಹಂಚಿಕೊಂಡಿದ್ದಾರೆ. ಎಸ್ ಪಿ ಅವರು ಎಷ್ಟು ಸ್ನೇಹಪರರೋ ಅಷ್ಟೇ ಹಾಸ್ಯ ಪ್ರವೃತ್ತಿ ಉಳ್ಳವರಾಗಿದ್ದರು.
‘ ವೀಕೆಂಡ್ ವಿತ್ ರಮೇಶ್ ‘ ಅವರ ಕಾರ್ಯ ಕ್ರಮದಲ್ಲಿ ಮಾತನಾಡುತ್ತಾ, ತಮಗೆ ಬಹು ಇಷ್ಟವಾದ ‘ ಸಂಗಮ್” ಚಿತ್ರದ
‘ ಮೆಹರ್ಬಾನ್ ಲಿಖುಂ,
ಯಾ ದಿಲರುಬಾ ಲಿಖುಂ..
ಯೆ ಮೇರಾ ಪ್ರೇಮ್ ಪತ್ರ ಪಢ್ಕರ್..’
ಗೀತೆಯನ್ನು ತನ್ಮಯತೆಯಿಂದ ಹಾಡಿ, ‘ ಈ ಹಾಡನ್ನು ಹಾಡಿದ ರಫಿ ಅವರ ಮೇಲೆ ವೈಜಯಂತಿ ಮಾಲಾ ಅವರು ಫಿದಾ ಆಗಬೇಕಿತ್ತು, ಹೀರೊ ರಾಜೇಂದ್ರ ಕುಮಾರ್ ಅವರ ಮೇಲೆ ಅಲ್ಲ’ ಎಂದು ಅಂದು ಎಲ್ಲರನ್ನು ನಗೆಯ ಹೊನಲಲ್ಲಿ ತೇಲಿಸಿದರು. ‘ ಆದರೆ ನನ್ನ ಹಾಡುಗಳನ್ನು ಕುರಿತು ಆ ರೀತಿ ಯೋಚಿಸದಿರಿ ‘ ಎಂದು ಹೇಳುತ್ತಾ ತುಂಟ ನಗೆ ಬೀರಿ ತಮ್ಮ ಹಾಸ್ಯ ಪ್ರಜ್ಞೆಯನ್ನು ಮೆರೆದರು.
‘ ನನಗೇನು ಗೊತ್ತಿಲ್ಲವೊ ಅದು ನನಗೆ ತಿಳಿದಿದೆ, ನನಗೆ ಏನು ತಿಳಿಯುತ್ತದೆಯೊ ಅದು ನನಗೆ ಗೊತ್ತು’ ಎಂದು ಹೇಳುವ ಎಸ್ಪಿ ಅವರು ವಿನಮ್ರತೆಯ ಸಾಕಾರ ಮೂರ್ತಿಯಾಗಿದ್ದರು. ಕಲ್ಕಿ ಟಿವಿ ವಾಹಿನಿಗೆ ಸಂದರ್ಶನ ಕೊಡುತ್ತಾ ಅವರು ಅಂದ ಒಂದು ಮಾತು ಮನಸನ್ನು ಬಹಳ ತಟ್ಟುವಂತಹುದು. ನಾಲ್ಕು ಭಾಷೆಗಳಲ್ಲಿ ಹಾಡಿದ್ದಕ್ಕೆ 6 ಬಾರಿ ರಾಷ್ಟ್ರ ಪ್ರಶಸ್ತಿಯಿಂದ, ಮತ್ತು ಭಾರತ ಸರಕಾರ ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗುರ್ತಿಸಿ ಸನ್ಮಾನಿಸಲ್ಪಟ್ಟ ಎಸ್ಪಿ ಅವರ ಮುಂದೆ ಭಾರತ ರತ್ನ ಪ್ರಶಸ್ತಿಗಾಗಿ ಹಂಬಲಿಕೆಯಿದೆಯಾ ಎಂದು ವಿಚಾರಿಸಿದಾಗ, ಅವರು ‘ ಸ್ನೇಹಿತರು ಹಾಗೂ ಅಭಿಮಾನಿಗಳ ಪ್ರೀತಿ ನೂರು ಭಾರತ ರತ್ನಗಳಿಗೆ ಸಮ ಎಂದು ಸಾರಿ ಹೇಳುತ್ತ , ಸ್ನೇಹಿತರು ಮತ್ತು ಅಭಿಮಾನಿಗಳ ಮೇಲಿದ್ದ ತಮ್ಮ ಪ್ರೇಮವನ್ನು ಸಾರುತ್ತಾ “ ಹಾಡು ಹಕ್ಕಿಗೆ ಬೇಕೆ ಬಿರುದು ಸಮ್ಮಾನ’ ಎಂದು ಜಿ.ಎಸ್ ಎಸ್ ಅವರ ಪ್ರಸಿದ್ಧ ಸಾಲುಗಳನ್ನು ‘ ಕೋಟ್’ ಮಾಡಿದರು. ಅವರ ಕಣ ಕಣದಲ್ಲಿ ಒಲವು ಇತ್ತು.
ಸಾರ್ವಜನಿಕ ಜೀವನದಲ್ಲಿ ಅವರು ಯಾರಿಗೂ , ಯಾವುದಕ್ಕೂ ‘ಇಲ್ಲ’ ಎನ್ನುತ್ತಿರಲಿಲ್ಲ; ಯಾರನ್ನೂ ನಿರಾಶೆಗೊಳಿಸುತ್ತಿರಲಿಲ್ಲ. ‘ನಾನು ಜನರ ಪ್ರೀತಿಗೆ ಗುಲಾಮ’ ಎಂದು ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳುವಾಗ ಅವರ ಕಣ್ಣಂಚಿನಲ್ಲಿ ನೀರು ತುಂಬಿ ಬಂದಿತು. ಸಾರ್ವಜನಿಕ ಜೀವನವನ್ನು ಸಮರ್ಥವಾಗಿ ನಿಭಾಯಿಸಲು ಅವರ ಮಡದಿ ಹಾಗೂ ಮಕ್ಕಳು ‘ ಸಾಥ್’ ಕೊಟ್ಟ ಬಗ್ಗೆ ಭಾವುಕರಾಗಿ ತೋಡಿಕೊಂಡರು. ಅವರ ತಮ್ಮನಂತಿರುವ ಪ್ರಸಿದ್ಧ ನಟ ಕಮಲಾ ಹಾಸನ್ ಅವರು ಎಷ್ಟೋ ಸಲ ‘ ಅಣ್ಣಾ, ಜನರಿಗೆ ನೀವು ‘ನೋ’ ಅನ್ನುವದನ್ನು ಕಲಿಯಿರಿ’ ಎಂಬ ಸಲಹೆಯನ್ನಿತ್ತ ಅವರ ಮಾತನ್ನು ನೆನಪಿಸಿಕೊಳ್ಳುತ್ತ, ಅದನ್ನು ಅನುಷ್ಠಾನಕ್ಕೆ ತರಲು ತಮಗೆ ಆಗುತ್ತಿರುವ ಕಷ್ಟದ ಬಗ್ಗೆ ಮುಕ್ತವಾಗಿ ಹೇಳಿಕೊಂಡರು.
ಯಾರ ಬಗ್ಗೆಯೂ ಅವರು ಎಂದೂ ಕಹಿ ಮಾತಾಡಿದ್ದೇ ಇಲ್ಲ. ಕೆಲವು ಸ್ನೇಹಿತರು ಅವರಿಗೆ ಮೋಸ ಮಾಡಿ ನೋವು ಉಂಟು ಮಾಡಿದರೂ ಅವರನ್ನು ತಮ್ಮ ದೊಡ್ಡ ಮನಸ್ಸಿನಿಂದ ಕ್ಷಮಿಸಿದ ವಿಷಯದ ಕುರಿತು ಹೇಳುವಾಗ ಅವರಲ್ಲಿ ಆ ಸ್ನೇಹಿತರ ಬಗಗಿನ ‘ ಕಹಿ’ ಲವಲೇಶವೂ ಕಂಡು ಬರಲಿಲ್ಲ.
ದೇವರಲ್ಲಿ ವರ ಕೇಳುವ ಪ್ರಸಂಗ ಒದಗಿ ಬಂದರೆ, ‘ ಎಲ್ಲೆಲ್ಲೂ ಮತ ಸಾಮರಸ್ಯವಿದ್ದು, ಎಲ್ಲರೂ ಸುಖ ಶಾಂತಿಗಳಿಂದ ಬಾಳಲಿ ಎಂದು ದೇವರಲ್ಲಿ ಕೇಳಿಕೊಳ್ಳುವೆ’ ಎಂದು ಅವರ ಮನದಾಳದಿಂದ ಹೊರಟ ಮಾತುಗಳು ಇನ್ನೂ ಎಲ್ಲ ಕಡೆ ರಿಂಗಣಿಸುತ್ತಿವೆ. ಇಂತಹ ಅಗಾಧ ಪ್ರತಿಭೆಯ ಸಂಗೀತಗಾರ , ಮಾನವತಾವಾದಿ, ಸರಳ ಸಜ್ಜನಿಕೆಗಳೇ ಮೂರ್ತಿವೆತ್ತಂತಿದ್ದ
ಮಹಾನ್ ವ್ಯಕ್ತಿ ನಮ್ಮನ್ನು ಇಷ್ಟು ಬೇಗನೆ ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅವರಿಗೆ ನೂರು ವರ್ಷಗಳ ಕಾಲ ಬಾಳುವೆ ಎನ್ನುವ ನಂಬಿಕೆ ಇತ್ತು. ಅದರ ಬಗ್ಗೆ ಪ್ರಸ್ತಾಪಿಸುತ್ತ ಒಮ್ಮೆ, ‘ ನಾನು ನೂರು ವರ್ಷಗಳ ವರೆಗೆ ಬಾಳಿ, ನನ್ನ ಡೈರಿಯಲ್ಲಿ ದಿನಚರಿಗಳನ್ನು ದಾಖಲಿಸುತ್ತ, ಡೈರಿಯ ಕೊನೆಯ ಪುಟದಲ್ಲಿ ನನಗೆ ಎಲ್ಲರ ಪ್ರೀತಿ ದೊರೆತು ನನ್ನ ಜೀವನ ಸಾರ್ಥಕವಾಯಿತು ಎಂದು ಬರೆಯುವೆ’ ಎಂಬ ತಮ್ಮ ಮನದ ಭಾವನೆಗೆ ಮಾತಿನ ರೂಪ ಕೊಟ್ಟಿದ್ದಾರೆ.
ಇತ್ತೀಚೆಗೆ ಅವರು ಹಾಡಿನ ರೆಕಾರ್ಡಿಂಗ್ ಗಾಗಿ ರಾಮೋಜಿ ಫಿಲ್ಮ ಸಿಟಿಗೆ ಬಂದಾಗ ಎಸ್ಪಿ ಅವರು ಅವರ ನಿಕಟವರ್ತಿಯಾದ ಹಾಗೂ ನನ್ನ ಆಪ್ತ ಮಿತ್ರರಾದ ಪವನ್ ಮಾನ್ವಿ ಅವರನ್ನು ಭೇಟಿಯಾಗಿದ್ದರು ಎಂಬ ವಿಷಯ ಮಿತ್ರರಾದ ಮಾನ್ವಿ ಅವರಿಂದ ತಿಳಿದು ಬಂದಿತು. ಆ ಭೇಟಿಯಲ್ಲಿ , ಈ ವಯಸ್ಸಿನಲ್ಲೂ ತಮ್ಮ ಕಂಠ ಸಿರಿಯ ಬಗ್ಗೆ ಹೆಮ್ಮೆ ಮತ್ತು ಖುಷಿಪಡುತ್ತಾ ಇದು ಭಗವಂತನ ಕೃಪೆ ಎಂದು ಹಂಚಿಕೊಂಡ ಮಾತನ್ನು ಮಿತ್ರ ಮಾನ್ವಿ ಅವರು ನನಗೆ ಹೇಳುವಾಗ ಆರ್ದ್ರವಾದರು.
‘ಒಲವೆ ನಮ್ಮ ಬದುಕು’ ನ ಈ ವಿಶೇಷ ಅಂಕಣ, ಒಲವಿನ ಧಾರೆಯನ್ನು ನಿರಂತರ ಹರಿಸಿದ ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಮ್ ಅವರಿಗೆ ಮೀಸಲು ಎಂದು ತಿಳಿಸಿದಾಗ ಮಿತ್ರ ಮಹಾದೇವ್ ಅವರು ಹಾಗೂ ಹಿರಿಯರಾದ ರಾಘವೇಂದ್ರ ಮಾನ್ವಿ ಅವರು ಎಸ್ಪಿ ಅವರ ಬಗ್ಗೆ ವಿಸ್ತೃತ ಮಾಹಿತಿಗಳ ಮೇಲೆ ಬೆಳಕು ಚೆಲ್ಲುವ ಸಂದರ್ಶನಗಳ ‘ ವೀಡಿಯೋ ಕ್ಲಿಪ್’ ಗಳನ್ನು ನನಗೆ ರವಾನಿಸಿ , ಎಸ್ಪಿ ಅವರ ಬಗ್ಗೆ ತಮ್ಮ ಪ್ರೀತಿ ಅಭಿಮಾನಗಳನ್ನು ತೋರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ.
ಇಂತಹ ಮಹಾನ್ ಗಾಯಕರು ನಮ್ಮ ನಡುವೆ ಇಲ್ಲ ಎಂಬ ಕೊರಗು ನೀಗಲು ಬಹಳ ಕಷ್ಟ. ಅವರ ರಿಕ್ತ ಸ್ಥಾನ ತುಂಬಲು ಮತ್ತೆ ಅವರೇ ಹುಟ್ಟಿ ಬರಬೇಕಾಗಬಹುದು! ಟಿವಿ ವಾಹಿನಿ ಯಲ್ಲಿ ಎಸ್ ಪಿ ಅವರ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ, ಯಾಂಕರ್ ವ್ಯಕ್ತ ಪಡಿಸಿದ ಒಂದು ಮಾತು ಅಕ್ಷರಶಃ ಸತ್ಯವೆನಿಸಿತು ; ಎಸ್ಪಿ ಅವರು ಹಾಡಿದ 40,000 ಗೀತೆಗಳನ್ನು ದಿನಕ್ಕೆ ಒಂದರಂತೆ ಕೇಳಿದರೂ ಒಬ್ಬ ಮನುಷ್ಯನಿಗೆ 110 ವರ್ಷಗಳು ಬೇಕಾಗುತ್ತವೆ’ ಎಂದು ಅರಹುವಾಗ, ಎಸ್ಪಿ ಅವರು ತಮ್ಮ ಆತ್ಮವನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಮನಸಿಗೆ ಸಮಾಧಾನವಾಯಿತು.
ಆದರೂ ‘ ನಮ್ಮ ಲಾಸ್ ಈಸ್ ಹೆವೆನ್ ಸ್ ಗೇನ್ ‘ ಎಂದು ಅನಿಸದೆ ಇರಲು ಸಾಧ್ಯವಿಲ್ಲ. ಗಂಧರ್ವಸೀಮೆಯಲಿ ಅವರು ಗಾನ ಕಚೇರಿ ಮಾಡುವಾಗ, ಗುಡುಗು ಮಿಂಚುಗಳ ಪಕ್ಕ ವಾದ್ಯಗಳಲಿ ಇಂಪಾದ ಸ್ವರ ಕೇಳಿ ಬಂದಿತೆಂದರೆ ಅದು ಪ್ರೀತಿಯ ಬಾಲು ಸರ್ ಅವರದೇ ಖಾತ್ರಿ..
‘ ಲೀನವಾದಿರಾ ಪ್ರಕೃತಿಯ ಸರಿಗಮಗಳಲಿ
ಬಿಟ್ಟು ಹೋದಿರಾ ರಿಂಗಣಿಸಲು
ನಿಮ್ಮ ಇಂಪಾದ ದನಿಯನು ನಮ್ಮ ಕಿವಿಗಳಲಿ
ತೇಲಿ ಹೋದಿರಾ ನೀವು ಸೃಷ್ಟಿಸಿದ
ಸಂಗೀತದ ತರಂಗಗಳಲಿ
ಸಮಯದ ಅಲೆಗಳ ಅಬ್ಬರ ತಾಳದೆ
ಶರೀರ ನಶಿಸಿಹುದು
ಶಾರೀರದಿಂದ ಹೊಮ್ಮಿದ್ದು ಬಾಳದೇ
ಹೊನಲಾಗಿ ಹರಿಯದೇ
ತಂಪನೆರಯದೇ ಎಲ್ಲರ ಎದೆಗಳಲಿ”
ಒಲವನ್ನೇ ಉಛ್ವಾಸ – ನಿಶ್ವಾಸಗಳಲ್ಲಿ ತುಂಬಿ ಕೊಂಡು ಕೊನೆಯುಸಿರು ಎಳೆದು ಕಾಣದ ಸೀಮೆಗೆ ತೆರಳಿದ ಪೀತಿಯ ಬಾಲು ಸರ್ ಅವರಿಗೆ ಸಹಸ್ರ ನಮನ ಸಲ್ಲಿಸುತ್ತ..
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್