ಮನಸ್ಸು ವಯಸ್ಸು ಪರಿಪಕ್ವವಾದರೆ ಮಾನವ ಬಾಗುತ್ತಾನೆ.
ಡಾ. ಪ್ರಕಾಶ್ ಕೆ. ನಾಡಿಗ್ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ಕವಿತಾಕೃಷ್ಣ ಅಭಿಮತ.
ದೇವರು ಮನುಷ್ಯರಿಗೆ ಅಪೂರ್ವವಾದ ಎರಡು ವರಗಳನ್ನು ನೀಡಿದ್ದಾನೆ . ಒಂದು ವರ ಅತ್ಯಂತ ಅಪೂರ್ವವಾದ ಮನಸ್ಸು, ಇನ್ನೊಂದು ಅತ್ಯಂತ ಅಪೂರ್ವವಾದ ವಯಸ್ಸು, ಈ ಮನಸ್ಸು ವಯಸ್ಸು ಪರಿಪಕ್ವವಾದರೆ ಮಾನವ ಬಾಗುತ್ತಾನೆ ಇಲ್ಲದಿದ್ದರೆ ಮಾನವ ದಾನವನಾಗುತ್ತಾನೆ. ಈ ಮನಸ್ಸು ವಯಸ್ಸನ್ನು ಪರಿಪಕ್ವಗೊಳಿಸುವ ಶಕ್ತಿ ಜಗತ್ತಿನಲ್ಲಿ ಕಲೆ ಸಾಹಿತ್ಯ ಸಂಗೀತ ನೃತ್ಯ ಲಲಿತ ಕಲೆ ಜನಪದ ಕಲೆ ಇವುಗಳಿಗೆ ಮಾತ್ರ ಇದೆ. ಇದರಿಂದ ಮಾನವ ಕತ್ತಲಿನಿಂದ ಬೆಳಕಿನ ಕಡೆಗೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ ನಡೆಯಬಲ್ಲ. ಹಾಗಾಗಿ ನಡೆಯುವ ದಾರಿಗೆ ಇಂದಿನ ಕಾಲದಲ್ಲಿ ಕವಿಯಾಗುವವನಿಗೆ ಯಾವ ಗುಣಧರ್ಮ ಇರಬೇಕೆಂದರೆ ಪ್ರತಿಭೆ, ಅಭ್ಯಾಸ, ವಿದ್ವಜನ ಸೇವೆ ಇದ್ದರೆ ಪರಿಪಕ್ವ ಕವಿಯಗಬಲ್ಲ. ಅಂಥಹ ಎಲ್ಲರೊಳಗೊಂದಾಗಿ ಬೆರೆಯುವ ಗುಣವಿರುವ ನಾಡಿಗ್ ಅವರು ಅಭಿನಂದನಾರ್ಹರು ಎಂದು ಡಾ. ಕವಿತಾಕೃಷ್ಣ ತಿಳಿಸಿದರು.
ಅವರು ಬೆಂಗಳೂರು ಕೀರ್ತನಶ್ರೀ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಯೋಗ ವಿಶ್ವಾವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಪ್ರಕಾಶ್ ಕೆ. ನಾಡಿಗ್ ಅವರಿಗೆ ತುಮಕೂರಿನ ಕವಿತಾ ಕೃಷ್ಣ ಸಾಹಿತ್ಯ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರಕಾಶ್ ಅವರದ್ದು ಹನುಮಂತನ ಬಗ್ಗೆ ಬರಿ ಪಕ್ಷಿನೋಟವಲ್ಲ, ಸಿಂಹಾವಲೋಕನ, ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಜಾಗೃತ ಹನುಮ ಕ್ಷೇತ್ರಗಳೇ ಅಲ್ಲದೇ ಹನುಮಂತನ ಉಗಮ ವಿಕಾಸದ ಗುಣ ಧರ್ಮಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಬೆಳಕು ಚೆಲ್ಲಿ ಮಹಾ ಪ್ರಭಂದವನ್ನು ರಚಿಸಿರುವ ನಾಡಿಗ್ ನಿಜಕ್ಕೂ ಅಭಿನಂದನಾರ್ಹರು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ನಾಡಿಗ್ ಅವರನ್ನು ಅಭಿನಂದಿಸಿ ಮಾತನಾಡಿದ ಖ್ಯಾತ ಕಾದಂಬರಿಕಾರರಾದ ಡಾ. ಸುರೇಶ್ ಪಾಟೀಲ್ ವೃತ್ತಿ ಪ್ರವೃತ್ತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರು ಸಾಹಿತ್ಯದಲ್ಲಿ ಸಾಧನೆ ಮಾಡಿರುವ ಪ್ರಕಾಶ್ ಅಭಿನಂದನಾರ್ಹರು ಎಂದು ತಿಳಿಸಿದರು. ಕರ್ನಾಟಕ ಸಂಸ್ಕೃತಿಯಲ್ಲಿ ಹನುಮನಿಗೆ ಮಹತ್ತರ ಪಾತ್ರವಿದೆ. ಹನುಮನ ಬಗ್ಗೆ ಸಂಶೋಧನೆ ನಡೆಸಿರುವುದು ಹಾಗೂ ಸಾಹಿತ್ಯದಲ್ಲಿನ ಅವರ ಆಸಕ್ತಿ ನಿಜಕ್ಕೂ ಶ್ಲಾಘನೀಯ.
ಅಭಿನಂದನಾ ನುಡಿಗಳನ್ನಾಡಿದ ಬೆಂಗಳೂರಿನ ವಿಜಯ ಕಾಲೇಜಿನ ಉಪನ್ಯಾಸಕರಾದ ಡಾ. ಆರ್.ವಾದಿರಾಜು ಅವರು ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ಪ್ರಕಾಶ್ ನಾಡಿಗ್ ಔಷದ ತಯಾರಿಕಾ ಕಂಪೆನಿಯಲ್ಲಿ ಗುಣಮಟ್ಟಖಾತ್ರಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುವ ನಡುವೆಯೂ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಇದುವರೆಗೂ ಕನ್ನಡದ ದಿನಪತ್ರಿಕೆಗಳಲ್ಲಿ ಸಾವಿರರು ಲೇಖನಗಳನ್ನು, ಹಲವಾರು ಕೃತಿಗಳನ್ನು ರಚಿಸಿರುವ ಇವರಿಗೆ ಪಿಹೆಚ್ ಡಿ ಮಾರ್ಗದರ್ಶನ ಮಾಡಿದ್ದು ನನಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ವಿಜ್ಞಾನದ ವಿದ್ಯಾರ್ಥಿಯಾದರೂ ಸಾಹಿತ್ಯದ ಸಹೃದಯರಾಗಿದ್ದಾರೆ. ಗುರುವಿಗೆ ಬೆಳಕು ಬರಬೇಕು ಎಂದರೆ ಶಿಷ್ಯನ ಪ್ರೀತಿವಾತ್ಸಲ್ಯ ಹಾಗೂ ಸ್ನೇಹ ಇರಬೇಕು. ಅಂತಹ ಸಾಲಿನಲ್ಲಿ ನಿಲ್ಲುವವರು ಪ್ರಕಾಶ್ ಕೆ ನಾಡಿಗ್ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಕಮಲಾ ಬಡ್ಡಿಹಳ್ಳಿ ಮಾತನಾಡಿ ಕನ್ನಡ ಸಾರಸ್ವತ ಲೋಕಕ್ಕೆ ನಿದ್ದೆಗೊಂದು ಕಥೆ, ಯೂರೋಪ್ ಯಾನದಂತಹ ಉತ್ಕೃಷ್ಟ ಕೃತಿಗಳನ್ನು ನೀಡಿದ ಪ್ರಕಾಶ್ ನಾಡಿಗ್ ಅವರು ಹನುಮಂತನ ಬಗ್ಗೆ ವಿಶೇಷ ಸಂಶೋಧನೆ ನಡೆಸಿ ಮಹಾಪ್ರಭಂದ ಮಂಡಿಸುವ ಮೂಲಕ ಯೋಗಾ ವಿಶ್ವಾವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವುದು ತುಮಕೂರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಕೀರ್ತನಶ್ರೀ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಾ. ಚೌಡಯ್ಯನವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ವಿಶ್ರಾಂತ ನಿರ್ದೇಶಕರಾದ ನಾಡೋಜ ಮಹೇಶ್ ಜೋಷಿ, ಸಾಹಿತಿ ಜಿ.ಕೆ ಕುಲಕರ್ಣಿ, ಆಶ್ವಿನಿ ಪಿ ನಾಡಿಗ್. ಸಾಹಿತಿ ಸಂಜೀವಪ್ಪ ಎನ್ ಮುಂತಾದ ಗಣ್ಯರು ಹಾಜರಿದ್ದರು.
ಹೆಚ್ಚಿನ ಬರಹಗಳಿಗಾಗಿ
ವಿವೇಕ ದರ್ಶನ
ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘ ರಚನೆ
‘ರತಿಯ ಕಂಬನಿ’ ಉದುರುವ ಸಂಭ್ರಮ