ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲೇಖ ಮಲ್ಲಿಕಾ ಕುರಿತು ಕೇಶವ ಮಳಗಿ ಮುನ್ನುಡಿ

ಇಂದು ಬಿಡುಗಡೆಯಾಗುತ್ತಿರುವ ಶ್ರೀಮತಿ ಸುಮಾ ವೀಣಾ ಅವರ ಪುಸ್ತಕ ಲೇಖ ಮಲ್ಲಿಕಾ ಕುರಿತು ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಶ್ರೀ ಕೇಶವ ಮಳಗಿ ಅವರು ಬರೆದ ಮುನ್ನುಡಿ ಇಲ್ಲಿದೆ.

ಸುಮಾ ವೀಣಾ ಅವರು ನವೋದಯದ ಓದಿನ ಪರಂಪರೆಯಿಂದ ಪ್ರಭಾವಿತಗೊಂಡ ಹದುಳ ವ್ಯಕ್ತಿತ್ವದ ಲೇಖಕಿ. ಕನ್ನಡದ ಎರಡು ತಲೆಮಾರುಗಳ ಹಿರಿಯ ವಿದ್ವಾಂಸರು ರೂಪಿಸಿದ ಈ ಓದಿನ ಪರಂಪರೆಯಲ್ಲಿ ಸಾವಧಾನ, ಸೂಕ್ಷ್ಮತೆ, ಪಠ್ಯವನ್ನು ಪೂರ್ವಗ್ರಹದಿಂದ ಮುಕ್ತಗೊಳಿಸಿ ಅಧ್ಯಯನ ಮಾಡುವ ಶಿಸ್ತು, ತಾವು ಅರ್ಥ ಮಾಡಿಕೊಂಡಿದ್ದನ್ನು ತಮ್ಮ ಸಮಕಾಲೀನ ಬದುಕಿನ ಸಂಗತಿಗಳಿಗೆ ಅನ್ವಯಿಸಿ ನೋಡುವ ಕುತೂಹಲದ ಮನಸ್ಸು ಇತ್ಯಾದಿಗಳನ್ನು ಕಾಣುತ್ತೇವೆ. ಇಂಥ ಓದಿನ ಶಿಸ್ತು ಎಲ್ಲ ತಲೆಮಾರುಗಳಿಗೂ ಅಗತ್ಯವಿರುತ್ತದೆ. ಆದರೆ, ಭಾಷೆ, ಸಂಸ್ಕೃತಿ, ಇತಿಹಾಸ, ಹಸ್ತಪ್ರತಿ ಮತ್ತು ಶಾಸನ ಅಧ್ಯಯನದಂತಹ ಮಾನವಿಕ ವಿಷಯಗಳು ಹಿಂದೆ ಸರಿಯುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಈ ಬಗೆಯ ಓದಿನ ಶಿಸ್ತು ಕಣ್ಮರೆಯಾಗುತ್ತಿರುವುದು ಕನ್ನಡ ನುಡಿ ಎದುರಿಸುತ್ತಿರುವ ಬಿಕ್ಕಟ್ಟುಗಳಲ್ಲಿ ಒಂದಾಗಿದೆ.

ಲೇಖಮಲ್ಲಿಕಾ’ ದ ಲೇಖಕರು ಶ್ರೀಮತಿ ಸುಮಾ ವೀಣಾ

ಕನ್ನಡ ಅಧ್ಯಾಪಕಿಯಾಗಿರುವ ಸುಮಾವೀಣಾ ಅವರು ಈ ಬಗೆಯ ಕಂದಕವನ್ನು ತುಂಬುವ ಅಗತ್ಯವನ್ನು ಕಂಡುಕೊಂಡಿದ್ದಾರೆ. ಮತ್ತು ನವೋದಯದ ಓದಿನ ಪರಂಪರೆಯ ಸೊಬಗನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಹೊಣೆಯೆಂದು ಕಂಡುಕೊಂಡಿದ್ದಾರೆ. ಆ ದೆಸೆಯಲ್ಲಿಯೇ, ಸದ್ಯದ ವೈಚಾರಿಕ ಲಹರಿ ಬರಹಗಳ ಸಂಗ್ರಹ, `ಲೇಖ ಮಲ್ಲಿಕಾ’ ರೂಪುಗೊಂಡಿದೆ. ಸಂಕ್ಷಿಪ್ತತೆ, ಆಕರ್ಷಕ ನಿರೂಪಣೆ, ಮುಖ್ಯವಿಷಯವನ್ನು ಬೇರೆಬೇರೆ ಸಂಗತಿಗಳೊಂದಿಗೆ ಜೋಡಿಸುವ ಜಾಣ್ಮೆ, ಸುಲಲಿತ ಭಾಷಾ ಬಳಕೆ ಇಂತಹ ಲಹರಿ ಬರಹಗಳ ಗುಣ. ಈ ರೀತಿಯ ಬರಹಗಳ ಉದ್ದೇಶ ವಿದ್ವತ್‌ಲೋಕವನ್ನು ತಲುಪುವುದಕ್ಕಿಂತ ಹೆಚ್ಚಾಗಿ, ಸಾಹಿತ್ಯಾಸಕ್ತ ಸಾಮಾನ್ಯರು, ಈಗಾಗಲೇ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿರುವ ಹೊಸ ತಲೆಮಾರಿನ ತರುಣ-ತರುಣಿಯರು ಮತ್ತು ವೈಚಾರಿಕ ಬರಹಗಳ ಓದಿಗೆ ಕುತೂಹಲದಿಂದ ತೆರೆದುಕೊಳ್ಳುವ ಓದುಗರನ್ನು ತಲುಪುವುದಾಗಿರುತ್ತದೆ. ಆಧುನಿಕ ಸನ್ನಿವೇಶದಲ್ಲಿ ಕಳಚುತ್ತಿರುವ ಪರಂಪರೆಯ ಕೊಂಡಿಗಳನ್ನು ಬೆಸೆಯಲು ಇಂತಹ ಪ್ರಯತ್ನಗಳು ಅತ್ಯಗತ್ಯವೆಂದು ಯಾರೂ ಒತ್ತಿ ಹೇಳಬೇಕಿಲ್ಲ. ಆರಂಭ ಕಾಲದ ನವೋದಯ ಲೇಖಕರು ಕನ್ನಡಿಗರಿಗೆ ಹೊಸ-ಹಳೆಯದರ ನಡುವೆ ಸಂಬಂಧ ಕಲ್ಪಿಸಿದ್ದು ಇಂತಹ ಉಪಕ್ರಮಗಳಿಂದಲೇ.

ಶ್ರೀ ಕೇಶವ ಮಲಗಿ, ಖ್ಯಾತ ಲೇಖಕ ಹಾಗೂ ವಿಮರ್ಶಕರು

ತಾವು ಪಡೆದುದನ್ನು ಮುಂದಿನವರಿಗೆ ದಾಟಿಸುವ ಈ ಕೆಲಸಕ್ಕೆ ಅಪಾರವಾದ ಓದು, ಮನನ ಮತ್ತು ಅದನ್ನು ಒಂದು ಸಂದರ್ಭಕ್ಕೆ ಹೊಂದಿಸಿ ಪ್ರಸ್ತುತಪಡಿಸುವ ಕೌಶಲ ಬೇಕಾಗುತ್ತದೆ. ಹಳಗನ್ನಡ-ಹೊಸಗನ್ನಡದ ಕೃತಿಗಳು, ಜಾನಪದ, ಸಮಕಾಲೀನ ಸಾಹಿತ್ಯದ ಅಧ್ಯಯನದೊಂದಿಗೆ, ಈಗಾಗಲೇ ಆ ಕುರಿತು ಕೆಲಸ ಮಾಡಿರುವ ವಿದ್ವಾಂಸರ ಬರಹಗಳನ್ನು ಗಮನಿಸುವ ಅಗತ್ಯವಿರುತ್ತದೆ. ಸುಮಾವೀಣಾ ಅವರು ಈ ಕುಶಲತೆಯನ್ನು ಕರಗತ ಮಾಡಿಕೊಂಡ ಉತ್ತಮ ಅಧ್ಯಾಪಕಿ ಎಂದು ಇಲ್ಲಿನ ಎಲ್ಲ ಲೇಖನಗಳೂ ಹೇಳುತ್ತವೆ.

ಹೊಸ ಓದುಗರಿಗೆ ಇಲ್ಲಿನ ಎಲ್ಲ ಲೇಖನಗಳು ಒಂದಲ್ಲ ಒಂದು ಬಗೆಯ ನವೀನ ದೃಷ್ಟಿಕೋನವನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. ವಿಷಯಗಳ ಆಯ್ಕೆ ಕೂಡ ಸುಮಾವೀಣಾ ಅವರ ಹಲವು ಕ್ಷೇತ್ರಗಳಲ್ಲಿನ ಆಸಕ್ತಿಯನ್ನೇ ಸೂಚಿಸುವಂತಿವೆ. ವಿಷಯ ಯಾವುದೇ ಆದರೂ ಅದಕ್ಕೊಂದು ಕೇಂದ್ರವನ್ನು ನಿರ್ಮಿಸಿ, ಬೇರೆ ಬೇರೆ ಶಿಸ್ತುಗಳನ್ನು ಅದಕ್ಕೆ ಜೋಡಿಸಿ ಹೊಸ ನೆಲೆ ಒದಗಿಸುವುದು ಗಮನಾರ್ಹವಾಗಿದೆ. ಹೂವುಗಳ ಕುರಿತು ಬರೆದ ಲೇಖನ ಹರಿಹರನ ಪುಷ್ಟರಗಳೆಯಿಂದ ಆರಂಭಗೊಂಡು, ಬಗೆಬಗೆಯ ಉಲ್ಲೇಖಗಳನ್ನು ನೀಡುತ್ತಲೇ ಭಾವಲೋಕದಿಂದ ದೇಹಲೋಕಕ್ಕೆ ಜಿಗಿದು ಹೂವು ಮತ್ತು ಆರೋಗ್ಯದ ನಂಟಿನ ಪ್ರಸ್ತಾಪನೆಯನ್ನೂ ಮಾಡುತ್ತದೆ. ಈಡಿಪಸ್ ಕಾಂಪ್ಲೆಕ್ಸ್ನ ಕುರಿತು ಪ್ರಸ್ತಾಪಿಸುವ ಪ್ರಬಂಧ ಕುತೂಹಲಕರ ಮತ್ತು ಸ್ವಾರಸ್ಯಕರ. ಗ್ರೀಕ್‌ನ ಮೂಲಕಥೆಯೊಂದಿಗೆ ವಡ್ಡಾರಾಧನೆ ಕಥೆಯ ಕಾರ್ತೀಕ ಋಷಿ, ಪಿರಿಯಾಪಟ್ಟಣದ ಕಾಳಗದ ಪಾತ್ರಗಳು ಹಾಗೂ ಇತ್ತೀಚಿಗೆ ಕನ್ನಡಕ್ಕೆ ಅನುವಾದಗೊಂಡ ಅರ್ಹಾನ್ ಪಮಾಕ್ ಅವರ ಕಾದಂಬರಿಯೊಂದಿಗೆ ಮುಖಾಮುಖಿಯಾಗಿರುವ ಬಗೆ ನಿಜಕ್ಕೂ ಗಮನಾರ್ಹ.

ಓದಿನ ಅಭಿರುಚಿಯನ್ನು, ಮೂಲ ಕೃತಿಗಳನ್ನು ಹುಡುಕಿಕೊಂಡು ಹೋಗಿ ಓದುವ ಆಸಕ್ತಿ, ಉತ್ಸಾಹವನ್ನು ಮೂಡಿಸಬಲ್ಲ ಇಲ್ಲಿನ ಲೇಖನಗಳು ಹರಹು ಬಹುತ್ವದ್ದು ಎಂದು ಮೊದಲೇ ಹೇಳಿದೆ. ವಾಲ್ಮೀಕಿ ರಾಮಾಯಣ, ನಾಗವರ್ಮನ ಕಾದಂಬರಿಗಳಂತೆಯೇ, ಜಾನಪದ ಸಾಹಿತ್ಯದಲ್ಲಿ ಅಡಗಿರುವ ಒಳನೋಟಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತರುವ ಪ್ರಯತ್ನದ ಲೇಖನಗಳೂ ಇವೆ. ಮಳೆನಕ್ಷತ್ರ, ಗಾದೆ, ರೈತ; ದೇಸಿ ಆಹಾರಗಳ ಕುರಿತು; ಜಾನಪದ ಕಾವ್ಯಗಳಲ್ಲಿ ಮತ್ತೆ ಮತ್ತೆ ಬರುವ ಉತ್ತರದೇವಿಯ ಕುರಿತ ಬರೆದ ಲೇಖನಗಳು ಅಂತಹ ಪ್ರಯತ್ನಗಳಾಗಿವೆ. ಅಂತೆಯೇ, ಸಮಕಾಲೀನ ಸಾಹಿತಿಗಳ ಕುರಿತು ಸಂಕ್ಷಿಪ್ತ ಟಿಪ್ಪಣಿಗಳು ಹೊಸ ಓದುಗರಿಗೆ ಆಸಕ್ತಿ ಮೂಡಿಸುವಂತಿವೆ. ಡಿ.ವಿ.ಜಿ., ಕುಂವೆಂಪು, ಕೆಎಸ್‌ನ, ಜಿ.ಎಸ್.ಎಸ್, ಸಾರಾ, ವೈದೇಹಿಯವರ ಬಗೆಗಿನ ಕಿರುನೋಟಗಳು ಪ್ರಯೋಜನಕಾರಿಯಾಗಿವೆ.

ಹೊಸ ತಲೆಮಾರಿನ ಓದುಗರಿಗೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಪರಂಪರೆಯ ಅರಿವು ಮೂಡಿಸುವ ಕೆಲಸ ಎಷ್ಟಿದ್ದರೂ ಸಾಲದು. ಸುಮವೀಣಾ ಅವರ ಸದ್ಯದ ಪುಸ್ತಕ ಅಂತಹ ಕೆಲಸವನ್ನು ಸಂಯಮಪೂರ್ಣವಾಗಿ ನಿರ್ವಹಿಸುತ್ತದೆ. ಈ ಕೃತಿಯನ್ನು ಹೊಸ ಓದುಗರು ಆಸಕ್ತಿಯಿಂದ ಗಮನಿಸಲಿ.