- ಶ್ರಮದ ಬೆಲೆ - ಮೇ 1, 2022
- ಬಂಗಾರದ ಮನುಷ್ಯ ಎಂಬ ಅದ್ಭುತ ಚಿತ್ರದ ಕುರಿತು - ಏಪ್ರಿಲ್ 24, 2022
- ಶ್ರೀ ಶಿವಕುಮಾರ ಶಿವಯೋಗಿಗಳ ಜನುಮ ದಿನ - ಏಪ್ರಿಲ್ 1, 2022
ದೇವು ಮಾಕೊಂಡ ಅವರು ನಾಡಿನ ಯುವ ಹಾಗೂ ಪ್ರತಿಭಾವಂತ ಕವಿ.
ಗಾಳಿಗೆ ತೊಟ್ಟಿಲ ಕಟ್ಟಿ ಇವರ ಎರಡನಯ ಕವನ ಸಂಕಲನವಾಗಿದ್ದು. ನೆಲೆ ಪ್ರಕಾಶನದಿಂದ ಮುದ್ರಣಗೊಂಡಿದೆ. ಸಂವೇದನಾಶೀಲ ಹಿರಿಯ ವಿಮರ್ಶಕರಾದ ಡಾ. ಎಂ. ಎಸ್. ಆಶಾದೇವಿ ಅವರ ಮೌಲ್ಯಯುತ ಮುನ್ನುಡಿಯ ಹಾಗೂ ಹಿರಿಯ ಕವಿಗಳೂ ಸಾಂಸ್ಕೃತಿಕ ಚಿಂತಕರೂ ಆದ ಪ್ರೊ. ಹೆಚ್.ಎಸ್. ಶಿವಪ್ರಕಾಶ ಅವರ ಬೆನ್ನುಡಿ ಒಳಗೊಂಡ ಸಂಕಲನ ಇದಾಗಿದೆ. ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಬಾಳಾಸಾಹೇಬ್ ಲೋಕಾಪುರ ರವರ ಹೃನ್ಮನದ ಅಭಿಪ್ರಾಯದೊಂದಿಗೆ 2021ರಲ್ಲಿ ಈ ಹೊತ್ತಿಗೆ ಓದುಗರ ಕೈಸೇರಿದೆ.
ಈ ಗಾಳಿಗೆ ತೊಟ್ಟಿಲು ಕಟ್ಟಿ ಕವನ ಸಂಕಲನ ಒಟ್ಟು 31 ಕವಿತೆಗಳ ಒಂದು ಗುಚ್ಛವಾಗಿದೆ. ದೊರೆಗೊಂದು ಪತ್ರ, ಸೌಹಾರ್ದದ ಕೊನೆಯ ದಿನಗಳು, ಕತ್ತಲೆಯ ಕೂಟ, ವಿಧಾಯ, ದೇವರು ಸತ್ತಿದ್ದಾನೆ, ನಾಲೆಯಾಗಿ ಹರಿಯುತ್ತಿದೆ ಕಣ್ಣೀರು, ಹೊಲಿಯುವವರು, ನರಬಲೀಶ್ವರಲಿಂಗ, ನೆತ್ತರು ಕುಡಿಯುವವರು, ಖಾಲಿ ಬೆಂಚುಗಳ ಪ್ರಶ್ನೆ, ಮಳೆ ಪುರಾಣ, ಶವಗಳು ತೊಟ್ಟಿಲು ಕಟ್ಟಿವೆ, ನಿರ್ಮೋಹಿ, ಮೌನದ ಹಾಡು, ಹಗಲಿಗೂ ಕಣ್ಣು ಕಾಣದು, ಮುಪ್ಪು, ಕನಸುಗಳು ಮಾತನಾಡುತ್ತಿವೆ, ಮಗಳ ಕರೆ, ತೆರೆದ ಬಾಗಿಲ ಕವಿತೆ, ಹಯಾತ್ ಮುಂತಾದವುಗಳು.
ನಮ್ಮ ಮನದ ತಲ್ಲಣಗಳಿಗೆ, ಸಮಾಜದ ಪಲ್ಲಟಗಳಿಗೆ, ಕವಿ ಭಾವ ಪಲ್ಲವಿಸಿದಾಗ ಮತ್ತು ಸ್ಪಂದಿಸಿದಾಗ ಮಾತ್ರ ಕಾವ್ಯಕ್ಕೆ ನೈಜತೆ ದೊರೆತು ಕಾಲಾಂತರದವರೆಗೂ ಉಳಿಯುವ ಸಾಹಿತ್ಯವಾಗುತ್ತದೆ. ಕವಿಗೆ ಸಾವಿರಬಹುದು ಆದರೆ ಅವನ ಕೃತಿಗೆ ಸಾವಿಲ್ಲ .ಅದು ಶತ ಶತಮಾನಗಳವರೆಗೆ ಜೀವಂತ ಇದ್ದು ಸಮಾಜದ ಇತರ ಜನರೊಂದಿಗೆ ಸಾಂದರ್ಭಿಕವಾಗಿ ಉಸಿರಾಡುತ್ತ, ವರ್ತಮಾನವನ್ನು ನೆನಪಿಸುವಂತೆ ಇರಬೇಕು. ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ಚಿಕಿತ್ಸಕ ನಾಗಿರಬೇಕು. ಆ ನಿಟ್ಟಿನಲ್ಲಿ ದೇವು ಮಾಕೊಂಡ ಅವರ ಕವಿತೆಗಳು ಇಲ್ಲಿ ಮೂಡಿಬಂದಿವೆ ಎಂಬುದು ಅವರ ಸಾಹಿತ್ಯವನ್ನು ಓದಿದ ಕಾವ್ಯ ಅಭಿಮಾನಿಗಳ ಅರಿವಿಗೆ ಬರುತ್ತದೆ. ನಮ್ಮ ಒಂದು ಸಾಹಿತ್ಯ ಹೋರಾಟ ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧದ ಅಕ್ಷರ ಪ್ರಹಾರವಾಗಿರಬಾರದು. ಅದು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯವನ್ನು ಎತ್ತಿ ಹಿಡಿಯುವಂತಿರಬೇಕು. ವ್ಯಕ್ತಿಯನ್ನು ,ಸಮಾಜವನ್ನು, ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವಂತಿರಬೇಕು. ಆಗ ಮಾತ್ರ ಭೂಗತವಾಗದೆ ಪ್ರತಿ ಕಾಲಘಟ್ಟದಲ್ಲೂ ಸಕಾಲಿಕ ಬರಹವಾಗಿ ದೃಢವಾಗಿ ನಿಲ್ಲುತ್ತದೆ. ಇಲ್ಲದಿದ್ದರೆ ಕವಿಯೊಂದಿಗೆ ಕಾವ್ಯವೂ ಮಣ್ಣಲ್ಲಿ ಮಣ್ಣಾಗುವುದು. ಅಂತಹ ಸೂಕ್ಷ್ಮ ಗ್ರಹಿಕೆ ಅವರ ಕಾವ್ಯಗಳಲ್ಲಿದೆ ಎಂಬುದು ನನ್ನ ಇಂಗಿತ.
ಇವರ ಬರಹ ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತ್ರ ಸಾಗದೆ, ಪ್ರಸಕ್ತ ವಿದ್ಯಮಾನಗಳಿಂದ, ಭವಿಷ್ಯದ ಭರವಸೆಯೆಡೆಗೆ ಸಾಗುತ್ತವೆ .ದೋಷಗಳನ್ನು ವ್ಯಕ್ತಿಗತವಾಗಿ ಸರಿಪಡಿಸಲು ಇಡಿ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಸಮಾಜ ಸುಧಾರಣೆ ಮಾಡಬೇಕಿದೆ ಎಂಬುದು ಇವರ ಲೇಖನಿಯ ಪ್ರಬಲವಾದ ಆಶಯವಾಗಿದೆ. ಇವರ ಪ್ರತಿ ಕಾವ್ಯವು ಸಾಮಾಜಿಕ ಕಾಳಜಿ ಮತ್ತು ವೈಪರೀತ್ಯಗಳ ಸುಧಾರಣೆ ಕಡೆಗೆ ಹೆಚ್ಚು ಗಮನ ವಹಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಸಮಾಜ ಜೀವಿಯಾಗಿ ಸಮಾಜದ ನೋವು,ದುಃಖ ಕಷ್ಟಗಳಿಗೆ ಸ್ಪಂದಿಸುವ ಮನೋಗತ ಕವಿಗಿದ್ದಾಗ ಮಾತ್ರ ಕಾವ್ಯ ಸೃಷ್ಟಿಯಿಂದ ಹೊಸ ಸಂದೇಶ ಲಭಿಸಿ ನವ ನಾಡಿನ ನಿರ್ಮಾಣ ಸಾಧ್ಯವಾಗುತ್ತದೆ.
ಆ ನಿಟ್ಟಿನಲ್ಲಿ ಜೀವಂತಿಕೆ ಪಡೆದ ಸಾಲುಗಳು ಎಲ್ಲರನ್ನು ಚಿಂತನಾಶೀಲರನ್ನಾಗಿ ಮಾಡುತ್ತವೆ. ಕವಿಯಾಗುವುದು ಸರಳ ಆದರೆ ಜಗಮೆಚ್ಚುವ ಕವಿಯಾಗುವುದು ಕಠಿಣ ಎಂಬ ಕವಿವಾಣಿಯನ್ನು ನಾವು ಮರೆಯುವಂತಿಲ್ಲ. ಜನಮೆಚ್ಚುವ, ಮನವೊಪ್ಪುವ ಕವಿಯಾಗುವುದು ಕೇವಲ ಸಾಮಾಜಿಕ ತುಡಿತ, ಮಿಡಿತ ಮತ್ತು ಸ್ಪಂದನೆಯನ್ನು ಹೊಂದಿರುವ ಭಾವನಾಜೀವಿಗಳಿಂದ ಮಾತ್ರ ಸಾಧ್ಯ. ಅಂತಹ ದಿಕ್ಕಿನಲ್ಲಿ ಸಾಗುತ್ತಿರುವ ಈ ಕವಿಯ ಕವನಗಳು ಅವರೊಬ್ಬ ಸಮರ್ಥ ಕವಿ ಎಂಬುದನ್ನು ಸಾಬೀತು ಪಡಿಸುವಂತೆ ಮೂಡಿಬಂದಿವೆ.
ಶತಮಾನಗಳಿಂದಲೂ ನಮ್ಮ ಸಮಾಜದಲ್ಲಿ ಬೇರು ಬಿಟ್ಟ ಮೂಲಭೂತ ಜಾಡ್ಯಗಳನ್ನು ತೊಲಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಮಹನೀಯರುಗಳು ಅನೇಕ. ಆದಾಗ್ಯೂ ಆ ನಿಟ್ಟಿನಲ್ಲಿ ತೃಪ್ತಿಕರವಾದ ಪರಿವರ್ತನೆಯಾಗದಿರುವುದು ವಿಪರ್ಯಾಸ ಎನ್ನುವ ಕವಿ ಅವರ ಆದರ್ಶಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಮತ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಸಂವೇದನಾಶೀಲ ಗುಣವಿರುವ ಹೃದಯಗಳಿಗೆ ಮಾತ್ರ ತನ್ನ ಸುತ್ತಮುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಅಂತಹ ಸ್ಪಂದನೆಯನ್ನು ಇವರ ಬರಹಗಳಲ್ಲಿ ಕಾಣಬಹುದು. ಇಡಿ ವ್ಯವಸ್ಥೆಯೇ ಕವಿಯ ಕಾವ್ಯವಸ್ತುವಾಗಿದ್ದು. ದೊರೆ ಎಂಬುವನು ಅಧಿಕಾರ ಹೊಂದಿದ ವ್ಯಕ್ತಿಯ ಪ್ರತಿನಿಧಿಯಾಗಿದ್ದಾನೆ. ವ್ಯವಸ್ಥೆ ಮತ್ತು ಅಧಿಕಾರ ಎರಡರ ಜವಾಬ್ದಾರಿಗಳು, ಸಾಮರ್ಥ್ಯಗಳ ಜೊತೆಗೆ ಲೋಪದೋಷಗಳನ್ನು ತಮ್ಮ ಮಾರ್ಮಿಕವಾದ ಬರಹ ಮೂಲಕ ಅದ್ಭುತವಾದ ರೂಪಕಗಳಲ್ಲಿ ಕಟ್ಟಿಕೊಡುವ ಮೂಲಕ ಕಾವ್ಯ ಹೆಣೆಯುತ್ತ ಹೋಗಿದ್ದಾರೆ.
ದೇವು ಮಾಕೊಂಡ ಅವರ ಕವಿತೆಗಳ ಗೂಡಾರ್ಥವನ್ನು ಸೂಕ್ಷ್ಮವಾಗಿ ಅರಿಯಬೇಕು. ಯಾವುದನ್ನು ಅವರು ನೇರವಾಗಿ ಹೇಳುವುದಿಲ್ಲ. ಬದಲಾಗಿ ವಿಶಿಷ್ಟವಾದ ರೂಪಕಗಳ ಮೂಲಕ ತಲುಪಿಸಬೇಕಾದ ಸಂದೇಶವನ್ನು, ತುಂಬಾ ಜಾಗರೂಕತೆಯಿಂದ ತಲುಪಿಸುತ್ತಾರೆ. ಇವರ ಬರಹಗಳು ಹೆಚ್ಚಾಗಿ ಶಬ್ದ ಚಮತ್ಕಾರಿಕೆಯಿಂದ ಕೂಡಿದ್ದು, ಕಾವ್ಯದ ವಸ್ತು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳನ್ನು ಒಳಗೊಂಡಂತೆ ಮಹತ್ತರವಾದ ಮಜಲುಗಳಲ್ಲಿ ತೆರೆದುಕೊಳ್ಳುತ್ತ ಸಾಗುತ್ತವೆ. ಇವು ಎಲ್ಲ ಕಾಲದಲ್ಲೂ ಪ್ರಸ್ತುತವೆನಿಸುತ್ತವೆ. ಗಾಳಿಗೆ ತೊಟ್ಟಿಲು ಕಟ್ಟಿ ಕವನ ಸಂಕಲನ ಓದಿದಾಗ ಇವು ಕವಿಯ ಧ್ಯಾನದಿಂದ, ಹೊಸತನದ ಹುಡುಕಾಟದಿಂದ, ವಿಶಿಷ್ಟವಾದ ಶೋಧನೆಯಿಂದ, ಅಧ್ಯಯನಶೀಲತೆಯಿಂದ ಅನುಸಂಧಾನಗೊಂಡಿವೆ ಎಂಬ ಭಾವ ಓದುಗರಿಗೆ ಮೂಡುತ್ತದೆ.
ಮುಷ್ಟಿಯಲ್ಲಿ ಸಮಷ್ಠಿಯನ್ನು ತೋರಿಸುವ ಚತುರತೆ ಹಾಗೂ ಕಲೆಗಾರಿಕೆ ಕವಿಗಿದೆ. ಪರಿಮಿತ ಶಬ್ದಗಳಲ್ಲಿ ಅಪರಿಮಿತವಾದ ಸಂದೇಶಗಳನ್ನು, ಭಾವಗಳನ್ನು ಕಟ್ಟಿಕೊಡುವ ಸೃಜನಶೀಲತೆ ಇವರಿಗೆ ಕರಗತವಾಗಿದೆ.
ಇವರ ಕವನಗಳು ಹೆಚ್ಚಾಗಿ ಜಾಗತೀಕರಣ, ವ್ಯವಸ್ಥೆಯ ಅಸಹಾಯಕತೆ, ಖಾಸಗೀಕರಣ, ಅಧಿಕಾರ ಹೊಂದಿದ ಕೈಗಳ ಮೌನ ಮೆರವಣಿಗೆ, ಮತಾಂಧತೆ, ರಾಜಕೀಯ ಅರಾಜಕತೆ, ಭ್ರಷ್ಟತೆ, ಅಸಮಾನತೆ, ವಿರಹ, ಪ್ರೇಮ, ಸರ್ವಾಧಿಕಾರಿ ಧೋರಣೆ, ಸಮಾಜವಾದಿ, ಜಾತ್ಯತೀತ ಅಂಶಗಳು ಹಾಗೂ ಪ್ರಜಾಸತ್ತಾತ್ಮಕ ಕಲ್ಪನೆಯಲ್ಲಿ ಮೂಡಿಬಂದಿದ್ದು ಅವುಗಳ ಮೇಲೆ ವಿಶೇಷವಾದ ಬೆಳಕು ಚೆಲ್ಲುತ್ತವೆ. ಇವುಗಳಲ್ಲಿ ಕೆಲವು ವಿಡಂಬನೆ, ವ್ಯಂಗ್ಯದ ರೂಪದಲ್ಲಿ ಮೂಡಿ ಬಂದಿದ್ದರೆ, ಮತ್ತೆ ಕೆಲವು ಆಕ್ರೋಶ, ವಿಷಾದ, ಹತಾಶೆ, ನಿರಾಶಾವಾದವನ್ನು ಪ್ರತಿನಿಧಿಸುವ ರೀತಿಯಲ್ಲಿ ರೂಪುಗೊಂಡಿವೆ. ಮಗದಷ್ಟು ಹೊಸ ಭರವಸೆ ಮೂಡಿಸುವ ಆಶಾ ಕಿರಣಗಳಂತೆ ಭಾಸವಾಗುತ್ತವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದರೂ, ಅದು ಇನ್ನು ತಳಹಂತದ ಪ್ರಜೆಗಳವರೆಗೂ ತಲುಪುವಲ್ಲಿ ಅಧಿಕಾರಶಾಹಿಗಳ ವ್ಯಾಮೋಹ, ಧನಗ್ರಾಹಿತನ ಭ್ರಷ್ಟಾಚಾರವು ತಡೆಗೋಡೆ ಯಾಗಿರುವುದು ಎಂಬ ಆತಂಕದಲ್ಲಿ ಕವಿಭಾವ ಮಿಡಿದಿರುವುದು ಅವರ ಸಮಾಜವಾದಿ ಹಾಗೂ ಜಾತ್ಯತೀತ ಕಲ್ಪನೆಯ ಕುರುಹು ಆಗಿದೆ.
ಆಳುವ ವರ್ಗ ಸಮರ್ಥವಾಗಿದ್ದು, ಅನ್ಯಾಯ ಅನಾಚಾರಗಳನ್ನು ಪ್ರತಿಭಟಿಸಿದಾಗ ತನ್ನ ಜನರಿಗೆ ನ್ಯಾಯ ಒದಗಿಸಲು ಸಾಧ್ಯ. ಅದಕ್ಕಾಗಿ ಅವರು ನಿರ್ಮೋಹಿಗಳಾಗಿ, ಸೇವಾಮನೋಭಾವದ ದೀಕ್ಷೆ ತೊಟ್ಟು, ಅಭಿವೃದ್ಧಿಯ ಸಂಕಲ್ಪಗೈಯಬೇಕು ಎನ್ನುವ ಆಶಾವಾದ ದೇವು ಅವರ ಕವಿತೆಗಳ ಸಾರವಾಗಿದೆ.
ಕವಿಯ ಪಂಚೇಂದ್ರಿಯಗಳು ಸಮಾಜಕ್ಕೆ ಹೇಗೆ ಸ್ಪಂದಿಸುತ್ತದೆ ? ಸಂವೇದನೆಗಳು ಹೇಗೆ ತೆರೆದುಕೊಳ್ಳುತ್ತವೆ ? ಎಂಬುದನ್ನು ರುಜುವಾತು ಮಾಡುವಂತೆ ಕವಿತೆಗಳು ಜನ್ಮತಾಳಿದಾಗ ಸಮರ್ಥ ಕವಿಯೊಬ್ಬನ ಜನನವಾಗುತ್ತದೆ .ಅದಕ್ಕಾಗಿ ಕವಿ ಅರಿವಿನ ಜಾಡಿನಲ್ಲಿ ಸಾಗಿ ಭಾವನೆಗಳನ್ನು ವ್ಯಕ್ತಪಡಿಸಬೇಕು. ಜನಸಾಮಾನ್ಯರ ಮನೋಗತವನ್ನು ಬಿಂಬಿಸಬೇಕು. ಈ ನಿಟ್ಟಿನಲ್ಲಿ ಕವಿಯ ಲೇಖನಿಯ ಯಶಸ್ವಿಯಾದ ಹೆಜ್ಜೆಯಿಟ್ಟಿದೆ ಎನ್ನಬಹುದು. ಕವಿಯಾದವನು ಯಾವಾಗಲೂ ಹರಿವ ನೀರಿನಂತೆ ಚಲನ ಶೀಲನಾಗಿರಬೇಕು. ಹರಿವ ನೀರು ಪ್ರತಿ ಚಲನೆಯಲ್ಲೂ ಹೊಸತನ ಪಡಯುವಂತೆ ಕವಿಯಾದವನು ತನ್ನ ಪ್ರತಿ ಕವನದಲ್ಲೂ ಹೊಸ ಹೊಸದನ್ನು ತುಂಬುತ್ತ ಹೋದಾಗ ಓದುಗನಿಗೆ ಉಲ್ಲಾಸ ದೊರೆತು ವಿಭಿನ್ನ ಬರಹಗಳು, ಕಾವ್ಯವಸ್ತು ಸಿಕ್ಕಿ ಓದಿದ ಹೃದಯಕೆ ಸಂತೃಪ್ತಿ ಸಿಗುವುದು. ಅಂತಹ ಪ್ರಯೋಗವನ್ನು ಇವರ ಕವಿತೆಗಳಲ್ಲಿ ಕಾಣಬಹುದು
ಅತಿ ಗಂಭೀರ ಮತ್ತು ಅತಿಸೂಕ್ಷ್ಮ ಎನಿಸಿದ ವಿಚಾರಗಳನ್ನು ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ, ಯಾವುದೇ ಹಿಂಸೆ ,ಆವೇಶ, ಆಕ್ರೋಶಗಳಿಗೆ ಎಡೆ ಮಾಡಿಕೊಡದಂತೆ ಓದಗನಿಗೆ ತಲುಪಿಸುವ ಇವರ ಜಾಣ್ಮೆ ಶ್ಲಾಘನೀಯ. ಇವರ ಕವಿತೆಗಳು ಮಾನವೀಯತೆಯ ನೆಲೆಯಲ್ಲಿ ಮೂಡಿ ಬಂದಿದ್ದು, ಜನರಲ್ಲಿ ಜ್ಞಾನದ ದೀಪಹಚ್ಚಿ, ಚಿಂತನಶೀಲರನ್ನಾಗಿ ಮಾಡುತ್ತೇವೆ. ಇವರ ಕಾವ್ಯಗಳು ಭೂತಕಾಲದ ಘಟನೆಗಳನ್ನು ಪ್ರಸ್ತಾಪಿಸುತ್ತ, ವರ್ತಮಾನದೊಂದಿಗೆ ಸಮೀಕರಿಸುತ್ತ, ಭವಿಷ್ಯದೊಂದಿಗೆ
ಪ್ರಶ್ನಿಸುತ್ತ, ವಿಮರ್ಶಿಸುತ್ತ, ಸಾಗುತ್ತವೆ. ಕಾವ್ಯವಸ್ತುವಿನೊಂದಿಗೆ ಮುಖಾಮುಖಿಯಾಗಿ ಮಾತಿಗಿಳಿಯುವ ಕವಿ ತನ್ನದೇ ಆದ ಧಾಟಿಯಲ್ಲಿ ಕೆಟ್ಟದ್ದನ್ನು ಪ್ರತಿಭಟಿಸುತ್ತ, ಒಳ್ಳೆಯದನ್ನು ಸ್ವೀಕರಿಸುತ್ತ ಸಾಗುತ್ತಾರೆ. ಇವರ ಧ್ವನಿಪೂರ್ಣ ಸಾಲುಗಳು ಅವರ ಅಗಾಧ ಚಿಂತನೆ ಹಾಗೂ ಅಭಿವ್ಯಕ್ತಿಯ ಪ್ರತೀಕಗಳಾಗಿವೆ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ರೂಪಿಸಿದ ಕವಿತೆಗಳು ಓದುಗರ ಮನಸ್ಸನ್ನು ಗಾಢವಾಗಿ ಆವರಿಸಿಕೊಂಡು ಪದೇಪದೇ ಓದಿಸಿಕೊಳ್ಳುತ್ತ ಹೋಗುವುದು ಇವರ ಕವಿತೆಗಳ ಉತ್ಕೃಷ್ಟತೆಯನ್ನು ಸಂಕೇತಿಸುತ್ತವೆ.
ಮಾನವ ಜನಾಂಗದ ಪ್ರಗತಿಗೆ ಒಬ್ಬ ವ್ಯಕ್ತಿಯು ಬದಲಾದರೆ ಸಾಗದು ಅದಕ್ಕಾಗಿ ಮೂಲದಿಂದ ಇಡಿ ವ್ಯವಸ್ಥೆಯನ್ನೆ ಹೊಸದಾಗಿ ಕಟ್ಟಬೇಕೆಂಬ ಕವಿಯ ಆಶಯವು ಬಲು ಸೊಗಸಾಗಿ ಮೂಡಿಬಂದಿದೆ. ಆದರೆ ಅದು ಪ್ರಸ್ತುತ ಕಾಲಮಾನದಲ್ಲಿ ಅದೊಂದು ಅಂಬರದ ಹೂವಾಗದಿರಲಿ ಎಂಬ ಆಶಯ ನಮ್ಮದಾಗಿದೆ. ಕವಿಯ ಮಹತ್ವಾಕಾಂಕ್ಷೆಯು ಅಭಿನಂದನಾರ್ಹವಾದುದು.
ಇಲ್ಲಿ ‘ನೀ ಬಿಟ್ಟು ಹೋದ ದಾರಿಗಳ ಮೇಲೆ’ ಕವನ ಗಾಂಧೀಜಿ ಕುರಿತಾಗಿದೆ. ಇಲ್ಲಿ ಕವಿ ಗಾಂಧಿಯನ್ನು ಪಕೀರನೆಂದು ಸಂಭೋಧಿಸುತ್ತಾರೆ. ವಿಶೇಷವೆಂದರೆ ಇಡೀ ಕವಿತೆಯುದ್ದಕ್ಕೂ ಎಲ್ಲಿಯೂ ಗಾಂಧಿ ಹೆಸರು ಪ್ರಸ್ತಾಪವಾಗದು. ಇದರ ಬದಲಾಗಿ ಗಾಂಧಿಯವರ ಸಮಗ್ರ ವ್ಯಕ್ತಿತ್ವವನ್ನು, ತತ್ವ ಆದರ್ಶಗಳನ್ನು, ಆಶಯಗಳನ್ನು, ಅವರ ಕನಸುಗಳನ್ನು, ರೂಪಕಗಳ ಮೂಲಕವೇ ಬಿಂಬಿಸಿದ್ದಾರೆ. ಇದನ್ನು ಓದಿದಾಗ ಓದುಗರಿಗೆ ಗಾಂಧಿಯನ್ನು ನೋಡಿದ ಅನುಭವವಾಗುತ್ತದೆ. ಇವರ ಎಲ್ಲ ಕವಿತೆಗಳಲ್ಲೂ ಕೂಡ ಇಂತಹ ವಿಶೇಷತೆಯನ್ನು ನಾವು ಕಾಣಬಹುದು. ಈ ಕವಿತೆಯ ಕೆಲವು ಸಾಲುಗಳನ್ನು ಉಲ್ಲೇಖಿಸುವುದಾದರೆ
‘ಬಾ ಪಕೀರ ನಿನ್ನದೇ ಸ್ವರ್ಗದಲ್ಲಿ ನರಕ ತೋರಿಸುವೆ
ನಿನಗೂ ಜನ್ಮಕೊಟ್ಟ ನನ್ನವ್ವ
ಋತುಮತಿಯಾಗದೆ ಕುಳಿತಿದ್ದಾಳೆ
ಹಣೆಗೊಂದು ಹೊಟ್ಟೆಗೊಂದು ಕೈಯಿಟ್ಟು
ಶಿವನ ದಾರಿಯ ಹರಕೆಗೆ ಮೊರೆಯಿಟ್ಟು’
ಈ ಸಾಲುಗಳು ಗಾಂಧಿ ಕಂಡ ಕನಸಿನ ಪ್ರಗತಿಪರ ಭಾರತದ ಕಲ್ಪನೆಯು ಕನಸು ನನಸಾಗದೆ ಉಳಿದಿರುವುದನ್ನು ಪ್ರಶ್ನಿಸುತ್ತವೆ. ಇಲ್ಲಿ ಸತ್ಯ ಶಾಂತಿ ಅಹಿಂಸೆಯ ನಾಡಿನಲ್ಲಿ ಇಂದು ರಕ್ತಪಾತವಾಗುತ್ತಿರುವುದನ್ನು, ಜನರ ನಡುವಿನ ಸಂಘರ್ಷವನ್ನು ಪ್ರಸ್ತಾಪಿಸುತ್ತ, ಗಾಂಧಿಯ ಅಭಿಲಾಷೆಗಳನ್ನು ಸ್ತೂಪಗಳಲ್ಲಿ ಮಿನಾರುಗಳ ಮೇಲೆ ಶಾಶ್ವತವಾಗಿ ಕೆತ್ತಿ ಅಮರವಾಗಿಸಿದ್ದೇವೆ. ವಾಸ್ತವದಲ್ಲಿ ಅನುಪಾಲನೆ ಮಾಡುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸುವ ಜೊತೆಗೆ ವ್ಯಂಗ್ಯ ಹಾಗೂ ವಿಡಂಬನೆಯ ರೂಪದಲ್ಲಿ ಈ ಕವಿತೆ ಮೂಡಿಬಂದಿದೆ. ನಿನ್ನದೇ ಸ್ವರ್ಗದಲ್ಲಿ ಅಂದರೆ ಪ್ರತಿಯೊಬ್ಬರಿಗೂ ಅವರವರ ದೇಶವೇ ಸ್ವರ್ಗ ವಾಗಿರುತ್ತದೆ. ಆದರೆ ಈ ಭೂಮಿಯಲ್ಲಿ ನರಕ ಸದೃಶ ಘಟನೆಗಳು ಸಂಭವಿಸುತ್ತವೆ .ಅದನ್ನು ನಿನಗೆ ತೋರಿಸುವೆ ಬಾ ಪಕೀರ ಎನ್ನುವ ಕವಿ ನಿನಗೂ ನನಗೂ ಜನ್ಮಕೊಟ್ಟ ನನ್ನವ್ವ ಅಂದರೆ ಭಾರತಾಂಬೆ ಋತುಮತಿಯಾಗದೆ ಕೂತಿದ್ದಾಳೆ ಅಂದರೆ ಅಭಿವೃದ್ಧಿಯನ್ನು ಕಾಣದೆ ಪ್ರಗತಿಯಿಲ್ಲದೆ ಕುಳಿತಿದ್ದಾಳೆ. ಹಣೆಗೊಂದು ಹೊಟ್ಟೆಗೊಂದು ಕೈಯಿಟ್ಟು ಅಂದರೆ ಭಿನ್ನವಾದ ಸಮಸ್ಯೆಗಳ, ಸವಾಲುಗಳ ಎಂಬ ಅರ್ಥದಲ್ಲಿ ಮೂಡಿಬಂದಿದ್ದು.
ಕವನ ಸಂಕಲನದ ಶೀರ್ಷಿಕೆಯನ್ನೇ ತಲೆ ಬರಹವಾಗಿ ಹೊಂದಿರುವ
ಗಾಳಿಗೆ ತೊಟ್ಟಿಲು ಕಟ್ಟಿ ಕವನವು ಸರ್ವಾಧಿಕಾರಿ ಧೋರಣೆಯ ವಿರುದ್ಧ ಕವಿಯ ಆಕ್ರೋಶದ ಪ್ರತಿಧ್ವನಿಯಾಗಿದೆ.
‘ಇಡಿ ಜಗತ್ತು ಅಮಾನತ್ತಿನಲ್ಲಿದೆ
ಎಲ್ಲರೂ ಸಾಲಾಗಿ ಚಲಿಸಬೇಕು
ತಲೆಯೆತ್ತಿ ನೋಡಬೇಡಿ
ಯಾರಿಗೂ ಕಣ್ಣು ಕಾಣಿಸುವುದಿಲ್ಲ ಇಲ್ಲಿ
ನೆನಪಿಡಿ
ಭಾರಹೊತ್ತ ಕತೆಗಳಂತೆ ಚಲಿಸಬೇಕು
ಬರಿ ಕಿವಿಗಳ ಅಲುಗಾಡಿಸುತ್ತ’
ಈ ಸಾಲುಗಳಲ್ಲಿ ಕಾರ್ಪೊರೇಟ್ ವ್ಯವಸ್ಥೆಯು ರೂಪಿಸಿದ ನಿಯಮಗಳನ್ನು ಸಾಮಾನ್ಯ ಜನತೆ ತುಟಿಬಿಚ್ಚದೆ ಮೌನವಾಗಿ ಸ್ವೀಕರಿಸಬೇಕಾದ ಅನಿವಾರ್ಯತೆಯ ಸಾಲುಗಳು ಮನಮಿಡಿಯುವಂತೆ ಮೂಡಿಬಂದಿವೆ. ಇಲ್ಲಿ ಎಲ್ಲವೂ ಕಂಟ್ರೋಲ್ ನಲ್ಲಿದೆ ಎಂದು ವಿವರಿಸುತ್ತಾರೆ.ಇಲ್ಲಿ ಸಾಮಾನ್ಯ ಜನರ ನೋವಿನ ಬಗ್ಗೆ ವಿಷಾದವಿದೆ, ವ್ಯವಸ್ಥೆಯ ವಿರುದ್ಧ ಪ್ರತಿರೋಧವಿದೆ, ಅಸಹಾಯಕತೆಯಿದೆ, ಜನರ ಆಕ್ರಂದನವಿದೆ, ಹತಾಶೆಯಿದೆ, ನಿರಾಸೆಯಿದೆ. ಅಂದರೆ ಪ್ರಬಲ ಕೈಗಳು ನಡೆಸುವ ದಬ್ಬಾಳಿಕೆಯಲ್ಲಿ, ಶೋಷಿತರ ಕಣ್ಣೀರಿಗೆ ಬೆಲೆ ಇಲ್ಲ. ಅದನ್ನು ಒರೆಸುವ ಕೈಗಳು ಮೌನವಹಿಸಿವೆ. ಬಡವರ ಭರವಸೆಗಳು ಛಿದ್ರಗೊಂಡು ಬಲಿಷ್ಠರ ಹುನ್ನಾರದ ಮುಂದೆ ಹರಕೆಯ ಕುರಿಗಳಾಗಿದ್ದಾರೆಂಬ ಚಡಪಡಿಕೆಯನ್ನು ಇವರ ಬರಹದಲ್ಲಿ ಕಾಣಬಹುದು.
ಇತಿಹಾಸ ಓದಿದ ಎಲ್ಲರನ್ನೂ ಕಾಡುವ ಚರಿತ್ರಾರ್ಹ ವ್ಯಕ್ತಿತ್ವದ ಧೀಮಂತ ನಾಯಕನಾದ ಇಟಲಿಯ ಸ್ವಾತಂತ್ರ ಹೋರಾಟಗಾರ ಗ್ಯಾರಿಬಾಲ್ಡಿ . ಇವರನ್ನು ಥೇಟ್ ಬುದ್ಧನಂತೆ ಎಂದು ಅವರ ಪರಿತ್ಯಾಗದೊಂದಿಗೆ ಹೋಲಿಸಿ ಬರೆದ ಸಾಲುಗಳು ಸುಂದರವಾಗಿ ಮೂಡಿ ಬಂದಿವೆ. ಗ್ಯಾರಿಬಾಲ್ಡಿ ಎಂಬ ಇತಿಹಾಸ ಪುರುಷನ ಕುರಿತಾಗಿದೆ ಈ ಕವಿತೆ ಎಲ್ಲರನ್ನೂ ಕಾಡುತ್ತದೆ. ಹಾಗೂ ಅಶೋಕ ಚಕ್ರವರ್ತಿಯನ್ನು ನೆನಪಿಸುತ್ತದೆ.
‘ಗೆದ್ದುದೆಲ್ಲ ಬಿಟ್ಟು
ಆನೆ ಕುದುರೆ ಹತ್ತಿ ಮತ್ತೂ
ಗುಲಾಬಿ ಕೊಟ್ಟ
ರಕ್ತ ಮೆತ್ತಿದ ಅಂಗಿ
ಎದಿರೇಟಿಗೆ ಕತ್ತರಿಸಿ ಬಿದ್ದ ಗಡ್ಡ ಹಿಡಿದು ಹೊರಟ
ಇರುಳಿನಲಿ
ಕಪಿಲವಸ್ತು ತೊರೆದ ಬುದ್ಧನಂತೆ
ಬುದ್ಧ ಹೊರಟ ಕಾಡಿಗೆ
ಬೋಧಿವೃಕ್ಷದ ಬೀಡಿಗೆ
ಗ್ಯಾರಿಬಾಲ್ಡಿ ನಡೆದ ಹೊಲಗದ್ದೆಯೆಡೆಗೆ
ಉತ್ತಿ ಬಿತ್ತುವ ತನ್ನೂರಿಗೆ’
‘ಇಳಿಸಂಜೆಯ ಒಬ್ಬಂಟಿತನದಲಿ
ಮೈನೆರೆದು ನಿಂತಿವೆ ಮುಳ್ಳು ಕಂಟಿಗಳು
ನಡುವೆ ಬೆಣ್ಣೆ ಉಂಡೆಯಾಗಿದ್ದೇನೆ
ಹೆಪ್ಪುಗಟ್ಟಿದ ಕ್ರಿಯೆಗಳು ಬಂಡೆಗಲ್ಲಿನ ಹಾಗೆ
ಪತರಗುಟ್ಟುತ್ತಿವೆ ಭಾವಗಳು ಚಪ್ಪರದಂತೆ
ನಿಷ್ಕ್ರಿಯಗೊಂಡಿದೆ ಚಲನೆ ಸೀಮೆಗಲ್ಲಿನಂತೆ’
ಇವು ಮೌನದ ಹಾಡು ಕವಿತೆಯ ಸಾಲುಗಳಾಗಿದ್ದು ಅದ್ಭುತ ರೂಪಕಗಳಲ್ಲಿ ಜೀವ ಪಡೆದು ಬದುಕಿನ ಅವಸ್ಥೆ ಮತ್ತು ಮೌನ ವಹಿಸಿದರೆ ಆಗುವ ಅನಾಹುತಗಳ ಕುರಿತು ವಿವರಿಸುತ್ತದೆ.
‘ಮಧು ಕುಡಿದು ಎದೆಚುಚ್ಚುವ
ರಣಹದ್ದುಗಳಂತೆ ಕಾರುಬಾರು ಇಲ್ಲಿ
ಕ್ರೂರ ಬೆಳಕಿಗಂಜಿದ ಹೂವುಗಳು
ರಾತ್ರಿ ಎದ್ದು ಹಗಲು ಮಲಗುತ್ತವೆ
ಹೆಪ್ಪುಗಟ್ಟಿದ ಬೆಳಕಿಗೆ ನೆರಳಾಡಿಸುವ
ಹಗಲು ರಾತ್ರಿಗಳ ವಿಭೇದಿಸುವ ರೂಪುರೇಷೆ’
ತೆರೆದ ಬಾಗಿಲು ಕವಿತೆಯ ಸಾಲುಗಳು
‘ಬಾಗಿಲು ಮುಚ್ಚಿ
ಆಜಾದಿ ಮಂತ್ರ ಪಠಿಸುತ್ತ ಒಡಲಗೀತೆ ಬರೆಯತೊಡಗಿದೆ
ಕರಾಳ ಕೊಠಡಿಯಲಿ ಮಲಗಿ’
ಇಲ್ಲಿ ಮನುಜ ಸಹಜ ಗುಣಗಳಾದ ಭಾವನೆಗಳ ವ್ಯಕ್ತಪಡಿಸುವಿಕೆಗೆ ಕವಿತೆಗಳ ಅಭಿವ್ಯಕ್ತಿಗೆ ನಿರ್ಬಂಧದ ಕೌದಿ ಹೊದಿಸಿ ಅವು ಹೊರಬರದಂತೆ ತಡೆಹಿಡಿಯುವರೆಂಬ ವಿಚಾರವಂತಿಕೆಯನ್ನು ಕಾಣಬಹುದು.
ಮಧುರ ಮರಣ ಕವನದ ಸಾಲುಗಳ ಕಡೆಗೆ ನಾವು ಗಮನ ನೀಡಿವುದಾದರೆ
‘ಅಲ್ಲಿ ಏನೋ ಆಗುತ್ತಲೆ ಇದೆ
ಬಾಯಿ ಮುಚ್ಚಿಕೊಂಡವರಿಗೆ
ಅಲ್ಲಿ ಸ್ವಲ್ಪ ಉಸಿರಾಡುತ್ತಿದ್ದಾರೆ ನೋಡಿ
ಇಜಂಗಳ ಸಿಲೆಂಡರ್ ನಿಂದ
ನೋಡಿ ಅಲ್ಲೊಬ್ಬ ನಿಂತಿದ್ದಾನೆ
ಗಾಳಿಯಲ್ಲೆ ಬದುಕಿಸುತ್ತಿದ್ದಾನೆ ಎಲ್ಲರನ್ನು’
ಈ ಮೇಲಿನ ಸಾಲುಗಳು ಓದಲು ಸರಳವೆನ್ನಿಸಿದರೂ ಅವು ಹೊತ್ತು ತರುವ ವಿಚಾರಗಳು ಅಮೋಘವಾಗಿವೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಅದರ ಮೌಲ್ಯ ಅರಿಯದೆ, ಜಾಣ ಕುರುಡರಂತೆ ವರ್ತಿಸುತ್ತ, ಅನ್ಯಾಯವಾದ ಸಂದರ್ಭದಲ್ಲಿ ಮೌನ ವಹಿಸುವ ಕುರಿತು ಪ್ರಸ್ತಾಪಿಸುತ್ತ ,ಜನರು ಸ್ವಲ್ಪ ಮಟ್ಟಿಗೆ ಇಜಂಗಳ ಸಿಲಿಂಡರ್ ನಿಂದ ಅಂದರೆ ತತ್ವ, ಜಾತಿ, ಮತ, ಧರ್ಮಗಳ ಸಾರವನ್ನು ಕುಡಿದು ಉಸಿರಾಡುತ್ತಿದ್ದಾರೆ. ಅಲ್ಲೊಬ್ಬ ಇದು ತಪ್ಪು ಎಂದು ಜನರಿಗೆ ಹೇಳಿ ಸರಿದಾರಿಗೆ ತರದೆ ಅವರು ಅನುಸರಿಸುವ ಮೌಡ್ಯಕ್ಕೆ ಕುಮ್ಮಕ್ಕು ನೀಡುತ್ತ, ತನ್ನ ಭಾಷಣ, ಪ್ರವಚನಗಳಿಂದಲೇ ಗಾಳಿಯಲ್ಲಿ ಎಲ್ಲರನ್ನೂ ತೇಲಿಸುತ್ತಿರುವ ನೇತಾರನ ಕುರಿತು ವ್ಯಂಗವಾಗಿ ವಿಭಿನ್ನ ರೂಪಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.
ಚರಿತ್ರೆಯ ಚಿರ ನಿದ್ದೆ ಎಂಬ ಕವನದ ಸಾಲುಗಳ ಕಡೆ ನಾವು ಕಣ್ಣಾಡಿಸುವುದಾದ್ರೆ…
‘ದಿನ ದಿನ ನಂಬಿಕೆಗಳ ಬೋಣಿಗೆ ಮಾಡುವಾಗ
ಬೋಧಿಗೆ ಶಾಸನ
ಮೌನ ಮಾತಾಗಿದೆ
ಮಹಾಸತಿ ಕಲ್ಲುಗಳು ಮನಸು ತೇವ ಮಾಡಿ ನಕ್ಕು
ಮತ್ತೆ ಮತ್ತೆ ಶರಣಾಗುತ್ತಿವೆ
ಅಂಧ ಗೋಪುರಕ್ಕೆ ಹೆದರಿ
ನೀರವ ರಾತ್ರಿ ಧಮನಿತ ದೀಪಗಳ ಉರಿಸುವಾಗ
ವಿಲೋಮ ಗಾಳಿ ಜನ ಜನಿತ
ಅವಮಾನಿತ’
ಶಿಲೆಯಾಗಿ ನಿಲ್ಲು ಕವನವು ಅಂತರಾಳದ ನೋವುಗಳನ್ನು, ಎದೆಯೊಳಗಿನ ಬೇಸರವನ್ನು, ಮಳೆ ಹನಿಯೊಂದಿಗೆ ಹಂಚಿಕೊಳ್ಳೊಣ ಎಂಬ ಸಂದೇಶವನ್ನು ನೀಡುತ್ತದೆ. ಹನಿಯೊಂದಿಗೆ ಕಣ್ಣೀರು ಬೆರೆತು ಯಾರಿಗೂ ಕಾಣದಾಗಲಿ ಎಂಬುದು ಕವಿಯ ಭಾವ. ಜೊತೆಗೆ ಜನರ ಮುಂದೆ ಅಂಜದೆ, ಅಳುಕದೆ, ಗಟ್ಟಿಯಾಗಿ ನಿಲ್ಲು, ಶಿಲೆಯಾಗಿ ನಿಲ್ಲು, ಶಾಸನವಾಗು, ನಿನ್ನ ಆಲಾಪ ಗಳಿಗೆ ಶಾಶ್ವತ ನೆಮ್ಮದಿ ಸಿಗುವವರೆಗೆ ಎನ್ನುವ ಭರವಸೆಯ ಬಿತ್ತುವ ಕವಿತೆಯ ಸಾಲುಗಳು ಸಂಕಲದಲ್ಲಿ ಜೀವ ಪಡೆದಿವೆ.
ಪುನರ್ಮನನ ಕವಿತೆಯಲ್ಲಿ ಕವಿಯು ಮನಸ್ಸಿನ ತಲ್ಲಣಗಳನ್ನು, ಮನುಜನ ಉದ್ವೇಗಗಳನ್ನು, ಆಂತರ್ಯದ ಆಲಾಪಗಳನ್ನು, ಹೆಪ್ಪುಗಟ್ಟಿದ ಚಿಂತೆಗಳನ್ನು, ಹೃದಯ ಕರಗುವಂತೆ ಬಿಂಬಿಸಿದ್ದಾರೆ.
‘ಸಂವೇದನೆಗಳು ಮುಗುಳ್ನಗುತ್ತಿವೆ
ತಮ್ಮೊಳಗೆ ಗುನುಗುತ್ತವೆ
ಪುನರ್ಮನನದ ಛಾಯೆ ಹಿಡಿದು
ವ್ಯರ್ಥ ಶೋಧ ‘!
ಎಂದಿದ್ದಾರೆ.
ಹಾಲಕ್ಕಿ ನೋಡಿದಾವ ಎಂಬ ಕವಿತೆಯು ದೇಶಿಯ ಸೊಗಡಿನಲ್ಲಿ ಮೂಡಿಬಂದಿದ್ದು, ನಮ್ಮ ವ್ಯವಸ್ಥೆಯ ಕುರಿತು, ಭವಿಷ್ಯದ ಆಗು ಹೋಗುಗಳ ಕುರಿತು ಬರೆದಿರುವ ಅಣಕು ಬರಹವಾಗಿದೆ. ಇಲ್ಲಿ ವ್ಯಂಗದ ರೂಪಕಗಳು ಮನೋಜ್ಞವಾಗಿ ಮೂಡಿಬಂದಿದ್ದು ಕಾವ್ಯದ ಮೆರುಗನ್ನು ಇಮ್ಮಡಿಗೊಳಿಸಿವೆ.
ಹಾಲಕ್ಕಿಯವನ ಬಾಯಿಂದ ಸಮಾಜದ ಓರೆಕೋರೆಗಳನ್ನು ಜನರಿಗೆ ಪರಿಚಯಿಸುವುದು,
ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಕವಿಯ ಜಾಣ್ಮೆಯಾಗಿದೆ.
ದಾಹಗಳ ಸೆರಗು ಕವಿತೆಯಲ್ಲಿ,…
‘ಬಾ ಗೆಳತಿ ಹುಚ್ಚಾಗೋಣ ಕವಿತೆಯಲಿ
ನಾಚಿಕೆ ಭಯ ಹಾಸಿಗೆ ಮಾಡಿ
ಮಳೆಹನಿ ಎಣಿಸೋಣ ಬಾ ಒಮ್ಮೆ
ನಕ್ಷತ್ರಗಳ ಸಾಕ್ಷಿಯಾಗಿ’
ಈ ಸಾಲುಗಳು ಓದುಗರ ಮನ ಸೂರೆಗೊಳ್ಳುತ್ತವೆ.
ಒಟ್ಟಾರೆ ಹೇಳುವುದಾದರೆ ಗಾಳಿಗೆ ತೊಟ್ಟಿಲು ಕಟ್ಟಿ ಸಂಕಲನವು ಓದುಗರನ್ನು ಆ ಕಾವ್ಯದ ತೊಟ್ಟಿಲೊಳಗೆ ಕೂಡಿಸಿ ಇಡಿ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಪರಿಚಯಿಸಿ ಜ್ಞಾನದ ಗಾಳಿಯಲ್ಲಿ ತೂಗುತ್ತ, ಕಾಡಿಸಿಕೊಂಡು ಓದಿಸಿಕೊಂಡು ಹೋಗುತ್ತವೆ. ಮುಂದಿನ ದಿನಗಳಲ್ಲಿ ಇವರು ಮತ್ತಷ್ಟು ಭಿನ್ನ ಭಿನ್ನವಾದ ಕಾವ್ಯ ವಸ್ತುಗಳನ್ನು ತಂದು ಓದುಗರಿಗೆ ರಸದೌತಣವನ್ನು ಉಣಬಡಿಸುವರು ಎಂಬ ಆಶಾವಾದ ವ್ಯಕ್ತಪಡಿಸುತ್ತ ಇವರು ಕಾವ್ಯ ರಚನೆಯ ಸಂದರ್ಭದಲ್ಲಿ ಗೇಯತೆಯ ಕಡೆಗೂ ಸ್ವಲ್ಪ ಗಮನ ನೀಡುವ ಮೂಲಕ ವಾಚ್ಯ ವೆನಿಸುವ ಕೆಲವು ಕವಿತೆಗಳಿಗೆ ಕಡಿವಾಣ ಹಾಕುತ್ತಾರೆ ಎಂಬ ಸದಾಶಯ ನನ್ನದು.
ಸಾಹಿತ್ಯ ಕ್ಷೇತ್ರದಲ್ಲಿ ದೇವು ಮಾಕೊಂಡ ಅವರಿಗೆ ಉತ್ತಮ ಭವಿಷ್ಯವಿದೆ ಎಂಬ ಭಾವ ಈ ಕವಿತೆಗಳನ್ನು ಓದಿದವರಿಗೆ ಎನಿಸುತ್ತದೆ. ಇವರ ಸಾಹಿತ್ಯಯಾನ ಉಜ್ವಲವಾಗಿ ಮುಂದುವರೆಯಲಿ, ಅವರ ಸಾಹಿತ್ಯ ಅಭಿಮಾನಿಗಳ ಸಂಖ್ಯೆ ಅಕ್ಷಯವಾಗಲಿ, ಮತ್ತಷ್ಟು ಮಗದಷ್ಟು ಕವಿತೆಗಳು ಕನ್ನಡ ಸಾರಸ್ವತಲೋಕದಲ್ಲಿ ತಳವೂರಲಿ ಎಂದು ಹಾರೈಸುತ್ತ, ಅವರಿಗೆ..
ಅಭಿನಂದನೆಗಳು
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ