- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
ನಮ್ಮ ಪೂರ್ವಜರದು ಖಚಿತ ಜ್ಞಾನ. ಅದಕ್ಕೆಂದೇ ಶ್ಲೋಕದಲ್ಲಿ ನೋಡಿ. ದಿನಾಲೂ ಅಭ್ಯಂಗ ಮಾಡಿದರೆ, ಮಾಡಬಹುದು ಎಂದು ಹೇಳಿಯೇ ಇಲ್ಲ. ಅಭ್ಯಂಗ ಮಾಡಬೇಕು, ಮಾಡಲೇಬೇಕು ಎಂದು ಖಡಾಖಂಡಿತವಾಗಿ ಹೇಳಿದರು. ಯಾಕೆಂದರೆ ಅಭ್ಯಂಗದ ಫಲಪ್ರದಗಳು ಅವರಿಗೆ ತಿಳಿದಿತ್ತು
ಆಯುರ್ವೇದ ಎನ್ನುವುದೂ ವೇದಚತುಷ್ಟಯಗಳ ಪರಿಯೇ ಅಪೌರುಷೇಯ. ಅದನ್ನು ಯಾರೋ ಬರೆದಿಟ್ಟಿದ್ದಲ್ಲ. ಕೇವಲ ಒಬ್ಬರದೇ ಕೃತಿಯಲ್ಲ. ಅದು ಋಷಿಗಳಿಗಷ್ಟೇ ಋತವಲ್ಲ, ವೈದ್ಯರಿಗಷ್ಟೇ ವೇದ್ಯವಾದದ್ದಲ್ಲ. ಅದು ಸಾಮಾನ್ಯ ಜನಪದಕ್ಕೂ ಜನಾನುನಯವಾದುದು.
ಆಯುರ್ವೇದವೆಂಬ ಉಪವೇದ ಎಲ್ಲ ದೇಶ, ಕಾಲ, ಜಾತಿ (ಮನುಷ್ಯಾದಿ) ಗಳಿಗೂ ಅನ್ವಯವಾಗುವಂಥದು. ಅಂದಿಗೆ ಹೇಳಿದ್ದೂ ಇಂದಿಗೂ ಪ್ರಸ್ತುತ, ಎಂದಿಗೂ ಪ್ರಸ್ತುತ. ಆಧುನಿಕ ಭೌತಿಕ ವಿಜ್ಞಾನಿಗಳಿಗೆ ಈಗೀಗ ವೇದ್ಯವಾದ ನಿಜಸಂಗತಿಗಳನ್ನು ಭಾರತೀಯ ಋಷಿಗಳು, ಧೀರರು ಎಂದೋ ಹೇಳಿದ್ದಾರೆ. ಆಯುರ್ವೇದದಲ್ಲಿ ಹೇಳಿದ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಲು ಭೌತವಿಜ್ಞಾನಿಗಳು ಇನ್ನೂ ತಿಣುಕಾಡುತ್ತಿದ್ದಾರೆ.
ಅಸಲಿಗೆ ಹೊಸದಾಗಿ ಕಂಡುಹಿಡಿಯುವಂಥದು ಏನೂ ಇಲ್ಲ, ವೇದದಲ್ಲಿ ಎಲ್ಲವೂ ಇದೆ, ಎಲ್ಲವೂ ಇರುವಂಥದೇ ವೇದ. ನಾವೇನಿದ್ದರೂ ಅದನ್ನು ನಮ್ಮ ಜೀವನಕ್ಕೆ ಅಳವಡಿಸಿ, ರೂಢಿಸಿ ಜೀವಿಸುವುದೊಂದೆ ದಾರಿ.
ಆಯುರ್ವೇದವು ರೋಗರುಜಿನಗಳು ಜನ್ಮಿಸಿದ ನಂತರ ಅವುಗಳಿಗೆ ಸಮಾಧಾನದ ಪ್ರಕ್ರಿಯೆಗಳನ್ನು ಹೇಳುವುದಕ್ಕಿಂತ ಹೆಚ್ಚು ರೋಗಗಳ ಆಗಮನವೇ ಆಗದ ರೀತಿಯನ್ನು ಹೇಳಿರುವುದು ಅತ್ಯಂತ ವಿಶಿಷ್ಟವಾಗಿದೆ. “Precaution is better than cure” ಅನ್ನೋದು ಆಯುರ್ವೇದವು ಜಗತ್ತಿಗೆ ಕೊಟ್ಟ ಜ್ಯೇಷ್ಠ, ಶ್ರೇಷ್ಠ ಕಾಣಿಕೆ.
ಮನದ ಆರೋಗ್ಯಪಾಲಕ ಯೋಗದರ್ಶನದಲ್ಲಿ ಅಷ್ಟಾಂಗಗಳಿರುವ ಪರಿಯೇ ತನುವಿನ ಆರೋಗ್ಯಪಾಲಕ ಆಯುರ್ವೇದ ದರ್ಶನದಲ್ಲೂ ಅಷ್ಟಾಂಗಗಗಳಿವೆ. ಅದರಲ್ಲಿ ಮೊದಲನೆಯ ಅಂಗವಾದ ಕಾಯ ಚಿಕಿತ್ಸೆಯಲ್ಲಿ ಉಲ್ಲೇಖಿಸಿರುವ ದಿನಚರ್ಯೆ, ಋತುಚರ್ಯೆಗಳಲ್ಲಿ ನಮ್ಮ ಸ್ವಾಸ್ಥ್ಯ ಜೀವನದ ಆಚರಣೆಗಳ ಬಗ್ಗೆ ಕೆಲವು ಮಹತ್ವದ ಉಲ್ಲೇಖಗಳಿವೆ.
ದಿನಚರ್ಯೆಯ ಪೂರ್ವಾರ್ಧದಲ್ಲಿ ನಾವು ಮಾಡಲೇಬೇಕಾದ ಕಾರ್ಯಗಳಲ್ಲಿ ಅಭ್ಯಂಗವೂ (ತೈಲಾಭ್ಯಂಗ) ಒಂದು. ಅದರ ಮಹತ್ತತೆಯ ಬಗೆಗೆ ಒಂದೆರಡು ಭದ್ರ ವಾಕ್ಯಗಳು (ಆಯುರ್ವೇದ ಸಂಹಿತೆಗಳಾದ ಚರಹ, ಶುಶ್ರುತ, ಅಷ್ಟಾಂಗ ಸಂಗ್ರಹಗಳಲ್ಲಿ ಉಲ್ಲೇಖಿತ).
ಅಭ್ಯಂಗಮಾಚರೇನಿತ್ಯಂ ಸ ಜರಾಶ್ರಮವಾತ ಹಾ |
ದೃಷ್ಟಿಪ್ರಸಾದಪುಷ್ಟ್ಯಾಯುಃಸ್ವಪ್ನಸುತ್ವಕ್ತ್ವದಾರ್ಢ್ಯಕೃತ್ || ಅಷ್ಟಾಂಗ ಹೃದಯ ೨.೮ ||
ಭಾವಾರ್ಥ: ದಿನಾಲೂ ಅಭ್ಯಂಗವನ್ನು (ಮೈಗೆ ಎಣ್ಣೆ ಹಚ್ಚಿ ತಿಕ್ಕುವುದು) ಮಾಡಬೇಕು. ಅದು ಮುಪ್ಪು ಶ್ರಮ ವಾತಗಳನ್ನು ಕಳೆಯುವುದು. ದೃಷ್ಟಿಯನ್ನು ಸ್ವಚ್ಛ ಮಾಡುವುದು. ದೇಹಕ್ಕೆ ಪುಷ್ಟಿ, ನಿದ್ದೆ, ಆಯಸ್ಸು, ತ್ವಚೆಗೆ ಗಟ್ಟಿತನ ಇವುಗಳನ್ನು ಕೊಡುವುದು.
(ಅಭ್ಯಂಗವೆಂದರೆ ಮೈಗೆ ಎಣ್ಣೆ ಹಚ್ಚುವ ಕ್ರಮ)
ವಾಚಕರಿಗೆಲ್ಲ ತಮ್ಮ ಶೈಶವದ ದಿನಗಳಲ್ಲಿ ಮನೆಯ ಹಿರಿಯರು ಪ್ರತಿದಿನ ಅಭ್ಯಂಗವನ್ನು ಮಾಡಿಸಿರುವುದು ನೆನಪಿರಬಹದು ಅಥವಾ ಈಗಲೂ ತಾವು ಮನೆಯಲ್ಲಿ ಎಳೆಕೂಸಿಗೆ ಎಳ್ಳೆಣ್ಣೆಯಿಂದ ಮಾಡಿಸಿರುವುದನ್ನು ನೋಡಿರಬಹುದು. ಅದಕ್ಕೆಲ್ಲ ಇವೇ ಮೇಲೆ ಹೇಳಿರುವ ಮಾತುಗಳೇ ಆಧಾರಕಾರಣ.
ಅಭ್ಯಂಗವು ಮುಪ್ಪನ್ನು (ಜರಾ) ತಡೆಯುವುದಿಲ್ಲ ಆದರೆ ಅದನ್ನು ಮುಂದೂಡುವ ಕಾರ್ಯ ಮಾಡುತ್ತದೆ. ಕೆಲವು ಹಿರಿಕರಿಗೆ ೮೦-೯೦ ವಯಸ್ಸಾದರೂ ಅವರ ದೇಹವು ಅವರ ವಯೋಸಹಜ ಕುರುಹುಗಳನ್ನು ತೋರ್ಪಡಿಸುವುದಿಲ್ಲ.
ದಿನಾಲೂ ಅಭ್ಯಂಗ ಮಾಡುವುದರಿಂದ ದೈಹಿಕ ಶ್ರಮವು ಕಡಿಮೆಯಾಗುತ್ತದೆ ಅಥವಾ ಶ್ರಮದ ಭಾನವೇ ಆಗುವುದಿಲ್ಲ. ಅಭ್ಯಂಗವು ತ್ರಿದೋಷಗಳಲ್ಲೊಂದಾದ ವಾತದ ಅಂಶವನ್ನು ನಿಯಂತ್ರಿಸುತ್ತದೆ. ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ನಾನಾತ್ಮಜ (ಕೇವಲ ಒಂದೇ ದೋಷದಿಂದ) ೧೫೦ ರೋಗಗಳು ಬಂದೊದಗುತ್ತವೆ ಎಂದು ಖಡಾಖಂಡಿತವಾಗಿ ಹೇಳಿದೆ. ಆ ೧೫೦ ರಲ್ಲಿ ೮೦ ರೋಗಗಳು ಈ ವಾತದ ಏರುಪೇರಿನಿಂದ ಆಗುವಂಥವು. ಅಭ್ಯಂಗವು ವಾತವನ್ನು ಸಮತೋಲನ ಮಾಡುವುದರಿಂದ ದೇಹಕ್ಕೆ ಭವಿಷ್ಯತ್ತಿನಲ್ಲಿ ಒದಗಬಹುದಾದಂತ ಬಹುಪಾಲು ರೋಗಗಳನ್ನು ತಡೆಯುತ್ತದೆ. ವಾತಸಂಬಂಧಿತ ರೋಗಗಳಿಗೆ ಅಭ್ಯಂಗವು ರಾಮಬಾಣವಿದ್ದಂತೆ.
ದಿನಾಲೂ ಅಭ್ಯಂಗವನ್ನು ಮಾಡುವುದರಿಂದ ಕಣ್ಣಿನ ದೃಷ್ಟಿಯನ್ನು ಸ್ವಚ್ಛಗೊಳಿಸಿ, ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ (ಕೂದಲಿನ ಹಾಗೂ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳ ಬಯಸುವವರು ತಲೆಗೆ ಮಾತ್ರ ಬಿಸಿನೀರಿನಿಂದ ಸ್ನಾನ ಮಾಡಬಾರದು, ಯಾವಾಗಲೂ ಸಹಜವಾಗಿ ದೊರೆತ ನೀರಲ್ಲೇ ತಲೆಯನ್ನು ಶುಚಿಗೊಳಿಸಬೇಕು). ನಲವತ್ತಕ್ಕೂ ಮುಂಚೆಯೇ ಚಾಳೀಸು ಬರಬಾರದೆಂದರೆ ಅಭ್ಯಂಗದ ಅಭ್ಯಾಸ ನಿರಂತರವಾಗಿರಬೇಕು.
ನಿತ್ಯಾಭ್ಯಂಗವು ಇಡಿಯ ದೇಹಕ್ಕೆ ಪುಷ್ಟಿಯನ್ನು ನೀಡುವುದು, ರಾತ್ರಿ ಹಿತವಾದ ನಿದ್ದೆಗೆ ಅನುವು ಮಾಡಿಕೊಡುವುದಲ್ಲದೇ ತ್ವಚೆಗೆ ಗಟ್ಟಿತನವನ್ನೂ ಕೊಡುತ್ತದೆ. ಅಭ್ಯಂಗದಿಂದ ಆಯಸ್ಸು ನಿಸ್ಸಂಶಯವಾಗಿ ವೃದ್ಧಿಯಾಗುತ್ತದೆ.
ಅಭ್ಯಂಗದಿಂದ ಇಷ್ಟೆಲ್ಲ ಲಾಭಗಳಿದ್ದರೂ ನಾವು ಅದನ್ನು ದಿನನಿತ್ಯ ಆಚರಿಸುವುದಿಲ್ಲ. ನಮ್ಮ ಹಿರಿಯರು ನಿಧಾನವಾಗಿ ಬಿಡುತ್ತಾ ಬಂದರು, ನಾವು ಅದನ್ನು ಅನ್ಯದೇಶಗಳಿಗೆ ದಾನವಾಗಿ ಕೊಟ್ಟು ನಾವು ಮಾಡುವುದನ್ನು ಬಿಟ್ಟೆವು. ಹೊರದೇಶಗಳಲ್ಲಿ ಅಭ್ಯಂಗವು ಇತ್ತೀಚಿನ ಕೆಲವು ವರ್ಷಗಳಲ್ಲಿ oil massage ರೂಪದಲ್ಲಿ ಪ್ರಸಿದ್ಧಿಯಾಗಿದೆ, ಮೊದಲೇ ಹೇಳಿದ ಹಾಗೆ ವಾತಸಂಬಂಧಿತ ರೋಗಗಳಿಗೆ ಬಹುತೇಕ ರೋಗನಿಧಾನ ಕೇಂದ್ರಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ನಾವು ಎಲ್ಲಿದ್ದೇವೆ ? ಅದನ್ನು ನಾವೆಲ್ಲ ಈಗ ಕೇಳುವುದು beauty parlour ಗಳಲ್ಲಿ, ಪಂಚಕರ್ಮ ಚಿಕಿತ್ಸಾ ಕೇಂದ್ರಗಳಲ್ಲಿ ಮಾತ್ರ. ವಿಡಂಬನೆ !!!
ಅಭ್ಯಂಗಕ್ಕೆ ಅತ್ಯಂತ ಪ್ರಸೂಕ್ತವಾದುದು ಎಳ್ಳೆಣ್ಣೆ (ತಿಲತೈಲ). ನಾನಾ ಪ್ರಕಾರದ ತೈಲಗಳು ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತವೆ, ಅನುಕೂಲವಾಗಿದ್ದನ್ನು ಬಳಸಬಹುದು ಆದರೆ ಎಳ್ಳೆಣ್ಣೆಯ ಆಯ್ಕೆ ಸರ್ವಕಾಲಿಕವಾಗಿ ಶ್ರೇಷ್ಠವಾದುದು. ಅದಕ್ಕೆ ಅದು ಜನಪದದಲ್ಲಿ ಒಳ್ಳೆಣ್ಣೆ ಎಂದು ಹೆಸರುವಾಸಿ. ಆಯಸ್ಸನ್ನು ವೃದ್ಧಿ ಮಾಡುವುದರಲ್ಲಿ ಈ ಎಳ್ಳೆಣ್ಣೆಯ ಪಾತ್ರ ಅನನ್ಯವಾದುದು, ಏಕೆಂದರೆ ಎಳ್ಳೆಣ್ಣೆಯ ಉತ್ಕರ್ಷಣ ಪ್ರಕ್ರಿಯೆ (oxidation process) ತುಂಬಾ ನಿಧಾನವಾದುದು.
ದಿನಚರ್ಯೆಯ ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚು ಪ್ರಮುಖವಾದುದು ಈ ಅಭ್ಯಂಗ. ದಿನಚರ್ಯಯೆ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲ, ಆದರೆ ಋತುಚರ್ಯೆಗಳಲ್ಲಿ ಮಾತ್ರ ಆಯಾ ಋತುಗಳಲ್ಲಿ ಆಚರಿಸುವ ಕಾರ್ಯಗಳು ಭಿನ್ನವಾಗಿವೆ. ಒಂದೊಂದು ಋತುವಿಗೆ ಒಂದೊಂದು ಋತಧರ್ಮ.
ಈಗಲೂ ನೀವು ದಿನದರ್ಶಿಕೆಯತ್ತ ಒಮ್ಮೆ ಕಣ್ಣಾಡಿಸಿದರೆ ದೀಪಾವಳಿಯ ನರಕಚತುರ್ದಶಿಯ ದಿನ ‘ಅಭ್ಯಂಗ ಸ್ನಾನ’ ಎಂದು ಉಲ್ಲೇಖಿಸಿರುತ್ತಾರೆ. ಆ ದಿನದ ಅಭ್ಯಂಗಕ್ಕೆ ಒಂದು ವಿಶೇಷ ಕಾರಣವಿದೆ. ವಾತಾವರಣದಲ್ಲಿ ವರ್ಷಾಋತುವಿನಲ್ಲಿ ವಾತಪ್ರಕೋಪ ಹೆಚ್ಚಾಗಿರುವುದರಿಂದ, ವಾತದ ಅಂಶ ದೇಹದಾದ್ಯಂತ ಸ್ವಾಭಾವಿಕವಾಗಿ ಹೆಚ್ಚಾಗಿರುತ್ತದೆ. ವಾತದ ನಿಯಂತ್ರಣಕ್ಕೆ ಅತ್ಯಂತ ಸೂಕ್ತವಾದುದು ಈ ಅಭ್ಯಂಗ.
ಹಾಗಾಗಿಯೇ ವರ್ಷಾಋತುವಿನ ನಂತರದ ಬರುವ ಶರದ್ ಋತುವಿನ ಮೊದಲ ಹಬ್ಬವಾದ ದೀಪಾವಳಿಯ ದಿನದಂದು ಅಭ್ಯಂಗ ಮಾಡಿ ವಾತದ ಅಂಶವನ್ನು ಕಡಿಮೆ ಮಾಡಿಕೊಳ್ಳುವುದು ರೂಢಿಗೆ ಬಂದಿದೆ. ಅದು ಯಾವುದೇ ವ್ರತದ ಸಂಕೇತವಲ್ಲ. ಹಾಗಂತ ಅದೊಂದೆ ದಿನ ಅಭ್ಯಂಸ್ನಾನ ಮಾಡಿ ಕೈತೊಳೆದುಕೊಳ್ಳುವುದಲ್ಲ. ಅದು ಕೇವಲ ಋತುಚರ್ಯೆಯಾಗದೆ ದಿನಚರ್ಯೆಯಾಗಲಿ. ಇದು ಯಾವುದೇ ಆಧುನಿಕ ವೈದ್ಯಪದ್ಧತಿಯಲ್ಲಿ ಕಾಣಸಿಗುವುದಿಲ್ಲ. ಇಂಥ ಅಸಂಖ್ಯ ಆರೋಗ್ಯಲಾಭದಾಯಕ ಸಂಗತಿಗಳನ್ನು ಕೊಟ್ಟವರು ನಮ್ಮ ಪೂರ್ಜರು, ಭಾರತೀಯರು, ಋಷಿಗಳು.
ನಮ್ಮ ಪೂರ್ವಜರಲ್ಲಿ trial and error ಪದ್ಧತಿ ಇದ್ದದ್ದು ತೀರ ವಿರಳ. ಅದೇನಿದ್ದರೂ ಆಧುನಿಕ ವೈದ್ಯಪದ್ಧತಿಯಲ್ಲಿ, ಯಾರಿಗೆ ಯಾವ ಚಿಕಿತ್ಸೆ ಕೊಡಬೇಕೆಂದು ತಿಳಿದುಕೊಳ್ಳುವುದಕ್ಕಾಗಿಯೇ ಬಹುಪಾಲು ಸಮಯ ತೆಗೆದುಕೊಳ್ಳುತ್ತಾರೆ ಈಗಲೂ. ನಮ್ಮ ಪೂರ್ವಜರದು ಖಚಿತ ಜ್ಞಾನ. ಅದಕ್ಕೆಂದೇ ಶ್ಲೋಕದಲ್ಲಿ ನೋಡಿ. ದಿನಾಲೂ ಅಭ್ಯಂಗ ಮಾಡಿದರೆ, ಮಾಡಬಹುದು ಎಂದು ಹೇಳಿಯೇ ಇಲ್ಲ. ಅಭ್ಯಂಗ ಮಾಡಬೇಕು, ಮಾಡಲೇಬೇಕು ಎಂದು ಖಡಾಖಂಡಿತವಾಗಿ ಹೇಳಿದರು. ಯಾಕೆಂದರೆ ಅಭ್ಯಂಗದ ಫಲಪ್ರದಗಳು ಅವರಿಗೆ ತಿಳಿದಿತ್ತು.
ನಮ್ಮ ದೇಹ ಸಪ್ತಧಾತುಗಳಿಂದ (ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ರ ಕ್ರಮವಾಗಿ) ಸಂಯೋಜಿತವಾಗಿದೆ. ನಾವು ಅಭ್ಯಂಗಿಸಿದ ತೈಲ ಯಾವ ಯಾವ ಧಾತುಗಳಿಗೆ ಎಷ್ಟು ಸಮಯದಲ್ಲಿ ಹೋಗಿ ತಲುಪುತ್ತದೆ ಎಂದು ನಮ್ಮ ಪೂರ್ವಜರು ಖಚಿತವಾಗಿ ಸುಮಾರು ೩೦೦೦ ಸಾವಿರ ವರ್ಷಗಳ ಹಿಂದೆಯೇ ಹೇಳಿದರು (ಸೂಕ್ಷ್ಮದರ್ಶಕ ಇಲ್ಲದಿರುವ ಕಾಲದಲ್ಲಿ). ೫ ರಿಂದ ೬ ನಿಮಿಷಗಳಲ್ಲಿ ಅಭ್ಯಂಗಿಸಿದ ಎಣ್ಣೆ ಎಲ್ಲ ಧಾತುಗಳನ್ನೂ ತಲುಪುತ್ತದೆ.
ಅಭ್ಯಂಗ ಮಾಡಿಕೊಳ್ಳಲು ಬೇಕಾಗುವ ಸಮಯ ೧೦ ನಿಮಿಷ ಅಂತಿಟ್ಟುಕೊಂಡರೂ ದಿನಾಲೂ ಸರಾಗವಾಗಿ ನಾವು ಅಭ್ಯಂಗಸ್ನಾನವನ್ನು ಮಾಡಬಹುದು. ಅಷ್ಟೂ ಸಮಯವಿಲ್ಲವೆಂದವರು ಕೇವಲ ತಲೆಗೆ, ಕಿವಿಗೆ ಹಾಗೂ ಪಾದಕ್ಕೆ ತೈಲಾಭ್ಯಂಗಿಸಿ ಸ್ನಾನವನ್ನ ಮಾಡಬಹುದು (ಶಿರಃಶ್ರವಣಪಾದೇಷು ತಂ ವಿಶೇಷಣ ಶೀಲಯೇತ್) ಎಂದು ಅಷ್ಟಾಂಗ ಹೃದಯದಲ್ಲಿ ಹೇಳಿದೆ.
ಇನ್ನು ಎಣ್ಣೆ ಹಚ್ಚುವ ಕ್ರಮದ ಬಗ್ಗೆ ಒಂದು ವಿಶೇಷ ಉಲ್ಲೇಖವಿದೆ. ಎಣ್ಣೆಯನ್ನು ಮೇಲಿನಿಂದ ಕೆಳಗಿನ ದಿಕ್ಕಿಗೆ ಅಂಗಮರ್ದನ (ಎಣ್ಣೆ ಹಚ್ಚುವಾಗ) ಮಾಡಬೇಕು. ಅಂದರೆ ಭುಜದಿಂದ ಅಂಗೆಯೆಡೆಗೆ, ತೊಡೆಯಭಾಗದಿಂದ ಪಾದದೆಡೆಗೆ. ಹೃದಯ, ಉದರ ಭಾಗ ಹಾಗೂ ಸಂಧಿ (Joints) ಗಳಿರುವ ಜಾಗದಲ್ಲಿ ವೃತ್ತಾಕಾರದಲ್ಲಿ ಅಂಗಮರ್ದನವನ್ನು (ತಿಕ್ಕುವುದು) ಮಾಡಬೇಕು. ಅಭ್ಯಂಗದ ಸಮಯದಲ್ಲಿ ವಿರುದ್ಧ ದಿಕ್ಕಿನಲ್ಲಿ ಅಂಗಮರ್ದನ ಮಾಡಬಾರದು.
ಅಭ್ಯಂಗವು ಕೆಲವರನ್ನು (ವಮನ ವಿರೇಚನಾದಿ ಪಂಚಕರ್ಮಗಳನ್ನು ಮಾಡಿಸಿಕೊಂಡವರು, ಜ್ವರವಿರುವವರು, ಅಜೀರ್ಣತೆ ಇರುವವರು) ಹೊರತುಪಡಿಸಿ ಎಲ್ಲರೂ ನಿತ್ಯವೂ ಮಾಡಲೇಬೇಕಾದ ಚರ್ಯೆ. ದಿನಚರ್ಯೆಗಳ ಬಗ್ಗೆ ವಿಸ್ತಾರವಾಗಿ ಇನ್ನೊಮ್ಮೆ ಮಾತಾಡುವ ಈ ಸಂದರ್ಭವನ್ನು ಪರಿಸಮಾಪ್ತಿಸುವ ಮುನ್ನ ಇನ್ನೊಂದು ಮಾತು. ಅಭ್ಯಂಗದ ನಂತರದ ಚರ್ಯೆ ಸ್ನಾನ. ಸ್ನಾನದ ಬಗ್ಗೆ ಸಂಕ್ಷಿಪ್ತವಾಗಿ ಒಂದು ಭದ್ರೋಕ್ತಿಯನ್ನು ಹೇಳಿಬಿಡೋಣ, ಏನೆಂದರೆ – ಸ್ನಾನವನ್ನು ಯಾವಾಗಲೂ ಉಗುರುಬಿಸಿ ನೀರನ್ನು ಬಳಸಿಯೇ ಮಾಡಬೇಕು. ಅತಿ ಶೀತಜಲ, ಅತಿ ಉಷ್ಣಜಲವನ್ನು ಎಂದಿಗೂ ಉಪಯೋಗಿಸಬಾರದು (ಯಾವುದೇ ಋತುವಿನಲ್ಲಿಯೂ). ಮೊದಲೇ ಹೇಳಿದ ಹಾಗೆ ತಲೆಯ ಕೆಳಗಿನ ಭಾಗಕ್ಕೆ ಉಗುರುಬಿಸಿ ನೀರಿನೊಂದಿಗೆ ಹಾಗೂ ತಲೆಗೆ ವಾತಾವರಣ ಸಹಜ ನೀರನ್ನೇ (Normal temperature) ಉಪಯೋಗಿಸಬೇಕು (ಅಷ್ಟಾಂಗ ಹೃದಯ ೨.೧೭).
ಇಂಥಹ ಕೆಲವಾರು ದಿನಚರ್ಯೆಗಳು, ಋತುಚರ್ಯೆಗಳಂತಹ ಅಮೂಲ್ಯ ಜ್ಞಾನ ಸಂಪ್ರದಾಯಗಳನ್ನು ನಮ್ಮ ಪೂರ್ವಜರು ನಮಗೆ ಹಸ್ತಾಂತರಿಸಿದ್ದಾರೆ. ಸದುಪಯೋಗ ಪಡಿಸಿಕೊಳ್ಳುವುದೊಂದೆ ನಮಗಿರುವ ವಿಕಲ್ಪ.
ಜೀವೇಮ ಶರದಃ ಶತಮ್
ಭೂಯಾಶ್ಚ ಶರದಃ ಶತಮ್ ||
ಅಶ್ವಯುಜ
ಕೃಷ್ಣಪಕ್ಷ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್