ಇತ್ತೀಚಿನ ಬರಹಗಳು: ಕು| ನಿವೇದಿತಾ ಮಂಗಳೂರು (ಎಲ್ಲವನ್ನು ಓದಿ)
- ಸಾಲು ಹಣತೆಗಳ ಬೇಡಿಕೆ - ನವೆಂಬರ್ 3, 2021
ಅದೇ ಹಳೆಯ ನೀಲ ಲಂಗದಾವಣಿ;
ಉಟ್ಟು ತರಾತುರಿಯಲ್ಲಿ ಓಡಾಡುತ್ತಿಹಳು ರಮಣಿ,
ಮೊಗದಲ್ಲಿ ಉದಿಸಿದೆ ಮಂದಹಾಸದ ಗಣಿ,
ಉಲಿಯುತ್ತಿಹುದು ಅವಳ ಭಾವಗಳ ಗಿಣಿ!
ಕ್ಷಣ ಎಣಿಸುತ್ತಿಹಳು, ಜಾರಲೆಂದು ರವಿ;
ಇರುಳಿನಲಿ ಕಣ್ತುಂಬಿಕೊಳಲು ಮಾಧವನ ಛವಿ!
ದೀಪವುರಿಸಿ ಅಲಂಕರಿಸುತ್ತಿದ್ದಾಳೆ ಬೃಂದಾವನದ ಬುವಿ;
ದೂರದ ವೇಣುಗಾನಕೆ ನವಿಲಾದ ಮಾಧವಿ!
ಹಾಡಿ ಕೂಗಿದಳು ದುಂಡು ಚಂದ್ರಮನ,
ಉಯ್ಯಾಲೆ ತೂಗುವಳು ಕಂಡಂತೆ ಮೋಹನನ,
ಹೆರಳ ಸೋಕುತಿದೆ ನಯವಾಗಿ ಪವನ,
ಪುಳಕಗೊಂಡ ದೀಪದ ಹೂವಿಗೂ ನರ್ತನ!
ಹೊತ್ತು ಉರುಳುತಿದೆ, ಇರುಳು ಕರಗುತಿದೆ,
ತೈಲವಿಂಗುವ ಭೀತಿಯಲಿ ದೀಪಗಳೆಲ್ಲವೂ ಬಳಲುತಿದೆ!
ಶಾಂತ ಯಮುನೆಯೊಳು ಉಬ್ಬರವು ಏರುತಿದೆ,
ಕ್ರೋಧದಲಿ ಗಾಳಿಯೂ ಅಬ್ಬರವನು ಎಬ್ಬಿಸಿದೆ!
ಆದರೂ ಧೃತಿಗೆಡಲಿಲ್ಲ ವೃಜದ ರಾಧಿಕೆ;
ಕಾದಳು, ಶ್ಯಾಮನಲ್ಲಿಟ್ಟು ಅಗಾಧ ನಂಬಿಕೆ..
ಕಾರ್ತಿಕವೂ ಚೆಲ್ಲಿದ್ದು, ಭ್ರಮೆಯ ಬೆಳಕೆ?
ಉತ್ತರಕ್ಕಾಗಿ ಸಾಲು ಹಣತೆಗಳಿಟ್ಟಿವೆ, ಬೇಡಿಕೆ!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ