- ಪಾತ್ರದೊಳಗಿನ ಕಲೆಗಳು - ಅಕ್ಟೋಬರ್ 28, 2024
- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
ಇರುವೆ- ನಡಿಗೆ – ೩
ಇಳಿದು ಬಂದಳು ಹರಿದು ಬಂದಳು
ತೊರೆದು ತೊರೆಯಾಗಿ ಬಂದಳು
ಇನಿಯನ ಜತೆಗೆ ಜುಳು ಜುಳು ಪಿಸುಗುಟ್ಟಿ ರಮಿಸುತ್ತ
ಏನು ವೈಯಾರ, ತಿರುವಿನ ಬಿನ್ನಾಣವೇನು
ಹರಿಯಲು ಬಿಡದ ಬಂಡೆ ಪುಂಡರನು
ಭೋರ್ಗರೆದು ಬೆದರಿಸುತ್ತ
ಕಾಡಿರಲಿ, ನಾಡಿರಲಿ, ಬೆಟ್ಟ ಬಯಲುಗಳಿರಲಿ
ಹರಿದಳೇ ಹರಿದಳು
ತೊರೆ ಹರಿದು ಹರಿ ತತ್ವ
ಮಳೆಗಾಲದಲ್ಲಿ ಬಿದ್ದ ಮಳೆಹನಿ, ಇತರ ಹನಿಗೆಳೆಯರ ಜತೆಗೂಡಿ ಒಂದಾಗಿ ಹರಿಯುವುದನ್ನು ನೋಡುವುದೇ ಚಂದ. ಕಡು ಬಿಸಿಲಿನ ಝಳದ ನಡುವೆ, ಸ್ನಾನದ ಕೋಣೆಯಲ್ಲಿ ಎತ್ತರದಿಂದ ತುಂತುರು ತುಂತುರು ಷವರ್ ಗೆ ಮೈಯೊಡ್ಡಿದಾಗಲೂ ತಂಪು ತರುವುದು ಹರಿವ ನೀರ ಬಿಂದುಗಳೇ.
ಪ್ರಕೃತಿಯಲ್ಲಿ, ಅನಾಯಾಸವಾಗಿ, ಸದಾ ಕಾಣಲು ಸಿಗುವುದು ನೀರ ಹರಿವು. ಯಾಕೆ ಹರಿಯುತ್ತಾಳೆ, ನೀರೇ?!! ಹರಿವಿನ ಹಿಂದಿನ ಹರಿಗೋಲು ಮತ್ತು ಅಂಬಿಗ ಯಾರು?
ಪ್ರಪಂಚದಲ್ಲಿ ಹಲವು ಚಲನ ಕ್ರಿಯೆಗಳು ಅವುಗಳಷ್ಟಕ್ಕೇ ನಡೆಯುತ್ತಲೇ ಇರುತ್ತವೆ. ಹಾಗಂತ ಆ ಚಲನಶೀಲತೆಯ ಹಿಂದೆ ತತ್ವಗಳಿಲ್ಲವೇ?. ಖಂಡಿತವಾಗಿ ಇದೆ. ನೀರಿನ ಹರಿವು ಯಾವಾಗಲೂ ಎತ್ತರದಿಂದ ತಗ್ಗಿನ ಕಡೆಗೆ. ಎತ್ತರದಲ್ಲಿ ಯಾವಾಗಲೂ ಗುರುತ್ವಾಕರ್ಷಣ ಪೊಟೆನ್ಶಿಯಲ್ ಹೆಚ್ಚು. ತಗ್ಗಿನಲ್ಲಿ ಗ್ರಾವಿಟೇಷನಲ್ ಪೊಟೆನ್ಷಿಯಲ್ ಕಡಿಮೆ. ಹೆಚ್ಚು ಪೊಟೆನ್ಶಿಯಲ್ ನಿಂದ ಕಡಿಮೆ ಪೊಟೆನ್ಶಿಯಲ್ ನತ್ತ ನೀರಿನ ಹರಿವು.
(ಈ ಪೊಟೆನ್ಶಿಯಲ್ ಎಂಬ ಪದಕ್ಕೆ ಕನ್ನಡದಲ್ಲಿ ಸುಪ್ತಶಕ್ತಿ, ಅಂತಃಶಕ್ತಿ, ಒಳಹುರುಪು, ಒಳಕಸುವು ಅಂತೆಲ್ಲಾ ಸಮಾನಾರ್ಥಕ ಪದಗಳು ಸಿಕ್ಕವು. ಒಟ್ಟಿನಲ್ಲಿ ಇದು ಸ್ಥಿತಿಚೈತನ್ಯದ ಒಂದು ರೂಪ ಅಂತಿಟ್ಟುಕೊಳ್ಳಬಹುದು) ಎರಡು ಬಿಂದುಗಳ ನಡುವೆ ಪೊಟೆನ್ಶಿಯಲ್ ಗ್ರೇಡಿಯಂಟ್ ಇದ್ದರೆ ಅದು ನೀರಿನ ಹರಿವಿಗೆ ಕಾರಣವಾಗುತ್ತದೆ. ಗುಡ್ಡದ ತುದಿಯಿಂದ ಬಂಡೆಯನ್ನು ಉರುಳಿಬಿಟ್ಟರೆ, ಅದೂ ಕೂಡಾ, “ಗುಡುಗುಡು ಗುಮ್ಮಟ ದೇವರಿಗೆ ದಾರಿಬಿಡೀ..” ಅಂತ ತಗ್ಗಿನತ್ತ ಉರುರುಳಿ ಬರುತ್ತದೆ. ನೀರಿನ ಹರಿವಿಗೂ ಕಲ್ಲುರುಳುವಿಕೆಗೂ ಕಾರಣ ಒಂದೇ, ಅದು ಗ್ರಾವಿಟೇಷನಲ್ ಪೊಟೆನ್ಶಿಯಲ್ ಗ್ರೇಡಿಯಂಟ್.
ಕಡಲತೀರದಲ್ಲಿ ಸಾಯಂಕಾಲ ಸೂರ್ಯಾಸ್ತಮಾನದ ಅಂದ ಸವಿಯಲು ಹೋದಿರಾ, ಕಡಲನೀರಲೆಗಳನ್ನು ಮುತ್ತಿಕ್ಕುತ್ತಾ ಮಂದ ಮಾರುತ ನಿಮ್ಮ ಮೈಮನಗಳನ್ನು ನೇವರಿಸಿ ಹಾಯ್ ಎನ್ನುತ್ತಾ ಬೀಸುತ್ತಾನೆ.
ಪೂರ್ವ ಕರಾವಳಿಯ ವಾತಾವರಣದಲ್ಲಿ ಕಡಿಮೆ ಒತ್ತಡ ನಿರ್ಮಾಣವಾಗಿದೆ, ಅದು, ಮಚಲೀಪಟ್ಟಣಂನಿಂದ ೨೦ ಕಿ.ಮೀ.ದೂರದಲ್ಲಿ ಸಮುದ್ರ ದಲ್ಲಿ ಕೇಂದ್ರೀಕೃತವಾಗಿದೆ. ನಾಳೆ ಅಪರಾಹ್ನ ಸುಮಾರು ೨ ಗಂಟೆಗೆ ಚಂಡಮಾರುತ ವಿಶಾಖಪಟ್ಟಣಂ ಗೆ ಅಪ್ಪಳಿಸಿ, ಪೂರ್ವೋತ್ತರದಿಕ್ಕಿಗೆ ಪಯಣ ಬೆಳೆಸಲಿದೆ. ಚಂಡಮಾರುತದಿಂದಾಗಿ ಹೈದರಾಬಾದ್ ನಲ್ಲಿ ೮೦ ಕಿ.ಮೀ. ಪ್ರತೀ ಘಂಟೆಗೆ, ವೇಗದಲ್ಲಿ ಗಾಳಿ ಬೀಸಲಿದ್ದು, ಅಲ್ಲಲ್ಲಿ ಮಳೆಯಾಗುವ ಸಂಭವವಿದೆ.
ಹೀಗೆ ಬಾನುಲಿ ಪ್ರಸಾರ ನೀವು ಕೇಳಿಯೇ ಇರುತ್ತೀರಿ. ಇಲ್ಲಿ ಗಮನಿಸಬೇಕಾದದ್ದು, ಎಲ್ಲೋ ಒಂದುಕಡೆ ಕಡಿಮೆ ಒತ್ತಡದ ಕೇಂದ್ರವಿದೆ. ( ವಾಯುಭಾರ ಕುಸಿತ ಅಂತಲೂ ಹೇಳುತ್ತಾರೆ!) ಹೆಚ್ಚು ಒತ್ತಡದ ಸುತ್ತಲಿನ ಪ್ರದೇಶದಿಂದ ಕಡಿಮೆ ಒತ್ತಡದ ಕೇಂದ್ರದತ್ತ ಗಾಳಿ ಬೀಸುತ್ತದೆ. ಇಲ್ಲಿ ಗಮನಿಸಿ, ಇದು ಪ್ರೆಶರ್ ಗ್ರೇಡಿಯಂಟ್ ( ಒತ್ತಡದ ಗ್ರೇಡಿಯಂಟ್). ಅಂದರೆ ಗಾಳಿಯ ಹರಿವಿಗೆ ಕಾರಣವಾದದ್ದು ಪ್ರೆಶರ್ ಗ್ರೇಡಿಯಂಟ್.
ನಾಗಾರ್ಜುನ ಸಾಗರ್ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್ ನಿಂದ ವಿದ್ಯುತ್ ತಂತಿಯ ಮೂಲಕ ವಿದ್ಯುತ್ ಹರಿದು, ನಿಮ್ಮ ಮನೆಯ ದೀಪ ಬೆಳಗುತ್ತೆ, ಫ್ಯಾನ್ ತಿರುಗಿಸುತ್ತೆ. ಅಲ್ಲಿಂದ ವಿದ್ಯುತ್ ಹೈದರಾಬಾದ್ ಗೆ ಹರಿದು ಬರಲು, ಇಲೆಕ್ಟ್ರಿಕ್ ಪೊಟೆನ್ಶಿಯಲ್ ಕಾರಣ. ನೀವು ಬ್ಯಾಟರಿಯ ಪಾಸಿಟಿವ್ ಪೊಟೆನ್ಶಿಯಲ್ ತುದಿಯನ್ನು , ನೆಗೆಟಿವ್ ಪೊಟೆನ್ಶಿಯಲ್ ತುದಿಗೆ ವಯರ್ ಮೂಲಕ ಜೋಡಿಸಿದರೆ, ಕರೆಂಟ್ ಪ್ರವಹಿಸುತ್ತದೆ. ಅದಕ್ಕೂ ಇಲೆಕ್ಟ್ರಿಕಲ್ ಪೊಟೆನ್ಶಿಯಲ್ ಗ್ರೇಡಿಯಂಟ್ ಕಾರಣ.
ಮೇಲಿನ ಎಲ್ಲಾ ಉದಾಹರಣೆಗಳಲ್ಲಿ ಗಮನಿಸಬೇಕಾದ ಅಂಶ, ಗ್ರೇಡಿಯಂಟ್ ಎಂಬುದು. ಸಮಾಜದಲ್ಲಿಯೂ ಅಷ್ಟೇ, ಗ್ರೇಡಿಯಂಟ್ ಹಲವು ಕ್ರಿಯೆಗಳಿಗೆ ಪ್ರೇರಣೆಯಾಗುತ್ತೆ.
ಜ್ಞಾನಿಗಳು ಮಾತಾಡಿದಾಗ, ಉಳಿದವರು ಕೇಳಿ ಜ್ಞಾನಾರ್ಜನೆ ಮಾಡುತ್ತಾರೆ. ಹೆಚ್ಚು ಜ್ಞಾನದ ಬಿಂದುವಿನಿಂದ, ಕಡಿಮೆ ಜ್ಞಾನದ ಮಿದುಳಿಗೆ ಜ್ಞಾನ ಹರಿಯುತ್ತದೆ! ಅಲ್ಲವೇ..
ಒಂದು ಗ್ಲಾಸ್ ನೀರನ್ನು ನೆಲದ ಮೇಲೆ ಚೆಲ್ಲಿದರೆ, ಅದು ಎಲ್ಲಾ ದಿಕ್ಕುಗಳಲ್ಲಿ ಹರಿಯುತ್ತೆ ( ಎಲ್ಲಾ ದಿಕ್ಕುಗಳಲ್ಲಿ ಸಮಾನವಾಗಿ ಗ್ರಾವಿಟೇಷನಲ್ ಪೊಟೆನ್ಶಿಯಲ್ ಗ್ರೇಡಿಯಂಟ್ ಇದೆ). ಹಾಗೆಯೇ ನಮ್ಮ ಚಿಂತನೆಯೂ, ಯಾವುದೇ ಪೂರ್ವಾಗ್ರಹಗಳಿಲ್ಲದೆ ಹರಿಯ ಬಿಟ್ಟರೆ, ಎಲ್ಲಾ ದಿಕ್ಕುಗಳಲ್ಲಿ ಹರಿದು, ಹೊಸ ಎಕ್ಸ್‌ಪ್ಲೊರೇಷನ್ ಗೆ ಕಾರಣವಾಗುತ್ತೆ.
ಕೇರಳದಲ್ಲಿ ಜನಸಂಖ್ಯೆಯ ಸಾಂದ್ರತೆ ತುಂಬಾ ಹೆಚ್ಚು. ಉದ್ಯೋಗ ಕಡಿಮೆ. ಆಗ ಜನಸಂಖ್ಯೆ, ಕೇರಳದಿಂದ, ಇತರ ಜಾಗಗಳಿಗೆ ಹರಿದು ಬರುತ್ತದೆ. ಜನಸಂಖ್ಯೆಯ ಸಾಂದ್ರತೆಯ ಗ್ರೇಡಿಯಂಟ್, ಜನರ ಹರಿವಿಗೆ ಕಾರಣ.
ನೇಪಾಳದಲ್ಲಿ ಕೊರೊನಾ ವ್ಯಾಕ್ಸಿನ್ ಇರಲಿಲ್ಲ, ಭಾರತದಲ್ಲಿ ಸಾಕಷ್ಟು ಉತ್ಪಾದನೆ ಆದಾಗ, ಕೊರೊನಾ ವ್ಯಾಕ್ಸೀನ್, ಭಾರತ ದಿಂದ, ನೇಪಾಳ, ಭೂಟಾನ್, ಬಾಂಗ್ಲಾದೇಶಗಳಿಗೆ ಹರಿಯಿತು.
ಇರುವಲ್ಲಿಂದ ಇಲ್ಲದಿರುವತ್ತ ಪಯಣ ಸಾಮಾನ್ಯ ತತ್ವ ಅಂತ ನಿಮಗೆ ಅನಿಸಿರಬಹುದು. ಶ್ರೀಮಂತನಿಂದ ಬಡವನಿಗೆ ಸಹಾಯರೂಪದಲ್ಲಿ ಹಣ ಹರಿಯುತ್ತೆ.
ಎರಡು ರಾಜ್ಯಗಳ ಗಡಿ ಪ್ರದೇಶದಲ್ಲಿ ಭಾಷೆಯ ಗ್ರೇಡಿಯಂಟ್ ಇರುತ್ತದೆ, ಸಂಸ್ಕೃತಿಗಳ ಗ್ರೇಡಿಯಂಟ್ ಇರುತ್ತದೆ. ಅಂತಹಾ ನೆಲದ ಚಿಂತನೆ ಸದಾ ಚಲನಶೀಲವೂ ಹೊಸತಿನತ್ತ ತುಡಿಯುವಂಥದ್ದೂ ಆಗಿರುತ್ತದೆ. ಬಹುಭಾಷೆ, ಬಹುಸಂಸ್ಕೃತಿಯಲ್ಲಿ ಬೆಳೆದ, ಬೇಂದ್ರೆ, ಮಾಸ್ತಿ, ರಾಜರತ್ನಂ ನಂಥವರ ಯೋಚನೆ ಅಷ್ಟೊಂದು ಸೃಜನಶೀಲ ಮತ್ತು ಅಪೂರ್ವ ಆಗಿದ್ದಕ್ಕೆ, ಈ ಸಂಸ್ಕೃತಿಗಳ ಗ್ರೇಡಿಯಂಟ್ ನ ಕೊಡುಗೆ ಮುಖ್ಯವಲ್ಲವೇ.
ಚಲನೆಗೆ, ಆಕರ್ಷಣೆ ಮತ್ತು ವಿಕರ್ಷಣೆಯೂ ಕಾರಣವೇ. ಮಾವಿನ ಮರದಿಂದ ಮಾವಿನ ಹಣ್ಣು ತೊಟ್ಟು ಕಳಚಿ ಕೆಳಮುಖವಾಗಿ ಚಲಿಸಲು ಕಾರಣ ಗುರುತ್ವಾಕರ್ಷಣ ಶಕ್ತಿ. ಅಯಸ್ಕಾಂತದ ನಾರ್ತ್ ಮತ್ತು ಸೌತ್ ಪೋಲ್ ನಡುವೆಯೂ ಆಕರ್ಷಣೆಯಿದೆ. ಆ ಆಕರ್ಷಣೆ, ಅಯಸ್ಕಾಂತದ ತುಂಡಿನ ಚಲನೆಗೆ ಕಾರಣವಾಗಬಹುದು. ಆಕರ್ಷಣೆ ಮತ್ತು ವಿಕರ್ಷಣೆ, ಎಷ್ಟರಮಟ್ಟಿಗೆ ಚಲನೆಗೆ ಸಹಾಯಕವಾಗಬಲ್ಲುದೋ, ಅಷ್ಟೇ ತಡೆಯೂ ಆಗಬಲ್ಲುದು. ಉದಾಹರಣೆಗೆ, ಭೂಮಿಯ ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ದಿಕ್ಕಿನಲ್ಲಿ ಚಲಿಸಲು, ಅದು ಬಿಡುವುದಿಲ್ಲ. ಹಾಗಾಗಿ, ನಾವು ನಿಂತ ನೆಲದಲ್ಲಿ ಮೇಲಕ್ಕೆ ಹಾರಿದರೆ, ಪುನಃ ನೆಲಕ್ಕೇ ವಾಪಸ್ ಬೀಳುತ್ತೇವೆ. ಆಗಸಕ್ಕೆಸೆದ ಚೆಂಡು ಹಿಂತಿರುಗಿ ನೆಲಕ್ಕೆ ಬೀಳುತ್ತದೆ.
ಹಾಗೆಯೇ ಸಮಾಜದಲ್ಲಿ ಹುಡುಗ ಮತ್ತು ಹುಡುಗಿಯರ ನಡುವಿನ ಆಕರ್ಷಣೆಯೂ ಅತ್ಯಂತ ಚಲನಶೀಲ, ಸೃಜನಶೀಲ ಕ್ರಿಯೆಗೆ ಕಾರಣ ತಾನೇ.
ಅಯಸ್ಕಾಂತದ ತತ್ವದಲ್ಲಿ, ಸಮಾನ ಕಾಂತೀಯ ಧ್ರುವಗಳು ವಿಕರ್ಷಿಸುತ್ತವೆ. ಹಾಗೆಯೇ ಇಲೆಕ್ಟ್ರಿಕಲ್ ಚಾರ್ಜ್ ಗಳ ಸಂದರ್ಭದಲ್ಲಿ, ಋಣವಿದ್ಯುತ್ ಕಣಗಳು ಅಥವಾ ಧನವಿದ್ಯುತ್ ಕಣಗಳು ಪರಸ್ಪರ ವಿಕರ್ಷಿಸಿ ದೂರ ಹೋಗುತ್ತವೆ. ವಿಕರ್ಷಣೆಯ ಪ್ರಯೋಜನ ಪಡೆದು ಹಲವು ಚಲನೆಗಳನ್ನು ಸಾಧಿಸಲೂ ಬಹುದು, ನಿಯಂತ್ರಿಸಲೂ ಬಹುದು.
ಸಮಾಜದಲ್ಲಿ ಕೆಲವೊಂದು ವ್ಯಕ್ತಿ ನಮಗೆ ಇಷ್ಟವಿಲ್ಲದಿದ್ದರೆ, ನಾವು ಅವರಿಂದ ದೂರ ಓಡಿಹೋಗುತ್ತೇವೆ, ವಿಕರ್ಷಣೆಯೂ ಸಾಮಾಜಿಕ ಚಲನೆಗೆ ಕಾರಣವಾಗುತ್ತೆ ಎಂಬುದು ವಿಚಿತ್ರವಾದರೂ ಸತ್ಯ.
“ಓಂ ಅಸತೋಮಾ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ”
ಗಮನಿಸಿ!, ಈ ‘ಗಮನ’ದ ಎರಡು ಕೊನೆ ಬಿಂದುಗಳು ವಿರುದ್ಧ ಧ್ರುವಗಳು ಮತ್ತು ನಡುವೆ ಗ್ರೇಡಿಯಂಟ್ ಅಲ್ಲವೇ!!
ಅಂಕಣದಿಂದ ನಿರ್ಗಮಿಸಲೇ!
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ