- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ಅಬ್ಬೆ’ ಎಂದರೆ ಅಮ್ಮನ ಕುರಿತಾದ ಕಾದಂಬರಿ ಎಂದು ತಿಳಿದೆ. ಕಾದಂಬರಿಯ ಹಾಲಾಡಿಯವರ ‘ಅಬ್ಬೆ’ ಒಂದು ಕಿರು ಪರಿಚಯ ನಾಲ್ಕನೆ ಭಾಗದ ಅಂತ್ಯದವರೆಗೂ ಅಮ್ಮನ ಪಾತ್ರವೇ ಸುಳಿಯಲಿಲ್ಲ. ಪರ ಊರಿಗೆ ಹೋಗುತ್ತಿರುವ ನಿರೂಪಕರಿಗೆ ಅಮ್ಮನಂಥ ಕಾಳಜಿಯುಳ್ಳ ಪಾತ್ರ ಪ್ರವೇಶವಾಗುತ್ತದೆಯೇನೋ ಎಂಬ ನಿರೀಕ್ಷೆಯಲ್ಲಿದ್ದೆ! ಆಗ ಅಬ್ಬೆಯ ಪ್ರವೇಶವಾಯಿತು ಆದರೆ ನಾನಂದುಕೊಂಡಂತೆ ಅದು ಅಮ್ಮನ ಪಾತ್ರವಲ್ಲ. ಶೀರ್ಷಿಕೆಯೇ ವಸ್ತುವಾಗಿರುವ ಈ ಕೃತಿಯಲ್ಲಿ ‘ಅಬ್ಬೆ’ ಎಂದರೆ ಅತ್ಯಂತ ವಿಷಕಾರಿ ಜೇಡ.
“ಅಬ್ಬೆ ಕಚ್ಚಿದರೆ ಹೆಬ್ಬಾಗಿಲವರೆಗೂ ಬರಲೂ ಸಮಯವಿರಲ್ಲ” ಎಂಬ ವಾಕ್ಯ ಕಾದಂಬರಿಯ ಉದ್ದಕ್ಕೂ ಹರಿಯುತ್ತದೆ. ನಿರೂಪಕರು ಕೆಲಸ ಮಾಡುವ ಬ್ಯಾಂಕಿನ ನಾಗೇಶನ ಅಣ್ಣ ಧರ್ಮ, ಬಿಟ್ಟೇನಹಳ್ಳಿಯ ಕರಿಯ, ಹಂಗಾಮಿ ನೌಕರ ಭಾಸ್ಕರನ ತಂದೆ, ವೃದ್ದರೊಬ್ಬರ ಸಾವು ಈ ಜೇಡವೇ ಕಚ್ಚಿ ಆಗಿದೆ ಎನ್ನುವ ವಾದ ಆದರೆ ನೋಡಿದವರು ಯಾರೂ ಇರುವುದಿಲ್ಲ ಜೇಡ ಕಚ್ಚಿಯೇ ಸಾವಾಗಿದೆ ಎನ್ನುವುದಕ್ಕೆ ಪುರಾವೆಯೂ ಸಿಗುವುದಿಲ್ಲ. ಆ ತಪ್ಪು ಗ್ರಹಿಕೆಯಲ್ಲಿಯೇ ಒಂದಷ್ಟು ಜೇಡಗಳ ಹನನವಾಗುತ್ತಿತ್ತು. ತುಂಬಾ ರೋಮ ಹೊಂದಿರುವ ದೊಡ್ಡ ಗಾತ್ರದ ಜೇಡವೆ ಇಲ್ಲಿ ಅಬ್ಬೆ. ಕೆಲವರ ಪ್ರಕಾರ ಕೆಂಪು ಬಣ್ಣ ಇನ್ನು ಕೆಲವರ ಪ್ರಕಾರ ಕಪ್ಪು ಮಿಶ್ರಿತ ಬೂದು ಬಣ್ಣ. ನಾಣ್ಯದಷ್ಟು ಅಗಲವಿರುವ ಇದರ ಕಾಲುಗಳ ಉದ್ದ ಸೇರಿದರೆ ಎರಡು ಇಂಚು ಎಂಬ ವಿವರ ಸಿಗುತ್ತದೆ. ಕಾದಂಬರಿಯ ಡಾ. ಕಲ್ಲೂರಾಯರು ಹೇಳುವ ಪ್ರಕಾರ ಆಸ್ಟ್ರೇಲಿಯಾ ಬಿಟ್ಟರೆ ಅತ್ಯಂತ ವಿಷಕಾರಿ ಜೇಡಗಳ ಮಾದರಿಗಳು ಭಾರತದಲ್ಲಿ ಇಲ್ಲ ಎಂಬುದು.
‘ಅಬ್ಬೆ’ ಸಾಮಾಜಕ ಕಾದಂಬರಿ ಅನ್ನುವುದಕ್ಕಿಂತ ಪರಿಸರ ಕುರಿತ ಜೀವ ವೈವಿಧ್ಯಗಳ ಕುರಿತು ಅಪಾರ ಆಸಕ್ತಿ ಇರಿಸಿಕೊಂಡ ಆದರ್ಶ ಕಥಾನಾಯಕನ ಕಥೆ. ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದೆ ಎಂದು ಕಲ್ಕೆರೆಗೆ ಬಂದಿಳಿದ ನಾಯಕ ಪ್ರೊಭೆಷನರಿ ಅವಧಿ ಮುಂದೆ ಹೋಗಬಹುದು ಎಂಬ ಅನುಮಾನವಿಟ್ಟುಕೊಂಡೇ ಅಚ್ಚುಕಟ್ಟಾಗಿ ಕೆಲಸ ಮಾಡಿ ಕೇವಲ ನಾಲ್ಕು ತಿಂಗಳಿಗೆ ಅಂಡಮಾನಿಗೆ ವರ್ಗವಾಗಿ ಹೋಗಬೇಕಾದ ಅನಿವಾರ್ಯತೆ ಬರುತ್ತದೆ. ಆ ಅವಧಿಯಲ್ಲಿಯೇ ಪತ್ರಿಕೆಯಲ್ಲಿ ಫೊಟೊ ಸಹಿತ ಪತ್ರ ಬರೆಯುವುದರ ಮೂಲಕ ಸರಕಾರದ ಗಮನ ಸೆಳೆದು ಗರುಡನಗಿರಿ ಅರಣ್ಯಕ್ಕೆ ಬೇಲಿ ಮಾಡಿಸುವ, ಖಾಕಿ ಕಾವಲುಗಾರರು ಕಾವಲು ಕಾಯುವಂತೆ ಮಾಡಿದ ಹೆಗ್ಗಳಿಕೆ ನಿರೂಪಕರದ್ದು. ಬ್ಯಾಂಕ್ ನೌಕರರು ಎಂದರೆ ಅಂಕಿಗಳ ಅಂಕೆಯಲ್ಲಿಯೇ ಬಂಧಿಯಾಗಬೆಕೆಂದೇನಿಲ್ಲ!
ನಿರೂಪಕರು ಹವ್ಯಾಸಿ ಕ್ರಿಕೆಟಿಗರಾಗಿ ,ಛಾಯಾ ಚಿತ್ರಗ್ರಾಹಕರಾಗಿ, ಜೀವವೈವಿಧ್ಯಗಳ ಕಡೆ ಕುತೂಹಲಿಗನಾಗಿಯೂ ತನ್ನ ವರ್ಚಸ್ಸನ್ನು ಸ್ಥಾಪಿಸಿಕೊಂಡಿದ್ದಾರೆ. ಪ್ರಾಣಿ ಕಳ್ಳಸಾಗಾಣಿಕೆದಾರರು, ನಿಧಿ ಕಳ್ಳರ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಾರಾದರೂ ಸಂಪೂರ್ಣ ಪತ್ತೆ ಮಾಡುವಲ್ಲಿವರೆಗೆ ಹೋಗುವುದಿಲ್ಲ. ಬ್ಯಾಂಕ್ ನೌಕರರ ವೃತ್ತಿಧರ್ಮ ಎಂದರೆ ಗ್ರಾಹಕರ ಅಕೌಂಟಿನಲ್ಲಿ ಎಷ್ಟು ಹಣ ಇದೆ?… ಮುಂತಾದ ಮಾಹಿತಿಗಳನ್ನು ಸಾರ್ವಜನಿಕವಾಗಿಸದೇ ಇರುವುದು. ಅಂತೆಯೇ ಕಾದಂಬರಿಯ ನಿರೂಪಕ ಕೆಂಚಪ್ಪ ಹಿತರಕ್ಷಣೆಗೆ ನಿಲ್ಲುವುದು ಸಮಂಜಸವಾಗಿದೆ. ಸಾಲ ನೀಡುವಲ್ಲಿ ಆಗುವ ಕಮಿಷನ್ ದಂಧೆ,ಲೋನ್ ನೀಡಿದಾಗಲೆ ಖರ್ಚಾಗುವ ಸಾರಾಯಿ ಇವೆಲ್ಲವೂ ಪೂಜಾರಿ ಸಾಲದ ಪರಿಣಾಮವೇ ಆಗಿದೆ. ಪಡೆದ ಸಾಲವನ್ನು ಹೋಟೆಲ್ ಭಟ್ಟರಾದಿಯಾಗಿ ಕೆಲವರು ಮನೆ ನಿರ್ಮಾಣ ಮಾಡಿಕೊಳ್ಳುವುದು ಹೇಗೋ ಹಣ ಸದ್ವಿನಿಯೋಗವಾದ ಸಮಾಧಾನವನ್ನು ಕೊಡುತ್ತದೆ. ಅಗತ್ಯವಿಲ್ಲದೆ ಇದ್ದವರಿಗೂ ಸಾಲ ಸಂದಾಯವಾಗುವುದು ಇಂದಿನ ಸರಕಾರಿ ಯೋಜನೆಗಳು ಅಪಾತ್ರದಾನವಾಗುತ್ತಿರುವುದನ್ನು ಪ್ರತಿನಿಧಿಸುತ್ತದೆ. ಹೊಸ ನೌಕರರನ್ನು ಪರಿಚಯ ಮಾಡಿಕೊಳ್ಳುವ ಪರಿ ಎಲ್ಲವೂ ಸಹಜವಾಗಿ ಬಂದಿದೆ.
ಜೀವ ವೈವಿಧ್ಯಗಳ ಕುರಿತ ಅಸ್ಥೆ ಇರುವ ನಿರೂಪಕರನ್ನು ಕುರಿತು “ನಾವು ತೊಂದರೆ ಕೊಟ್ಟರೆ ಮಾತ್ರ ನಮಗೆ ತೊಂದರೆ ಕೊಡುತ್ತವೆ ಎನ್ನುವ ಸಾರ್ವಕಾಲಿಕ ಸತ್ಯದ ಮಾತು ಕೆಂಚಪ್ಪನಿಂದ ಬರುವುದು ಮಾರ್ಮಿಕವಾಗಿದೆ. ಶಾಂತಪ್ಪನವರ ಮನೆ ಬಳಿ ಸರ್ಪವನ್ನು ಹೊಡೆದಾಗ ಆಚರಿಸುವ ಧಾರ್ಮಿಕ ವಿಧಿಯ ಬಗ್ಗೆ ಬರುವ ಮಾತುಗಳು ಪ್ರಾದೇಶಿಕತೆಯ ಭಿನ್ನತೆಯನ್ನು ಕುರಿತಾಗಿವೆ. “ಮಕ್ಕಳು ಮರಿ ಓಡಾಡುತ್ತವೆ ನೋಡಿದ ಕೂಡಲೆ ಹೊಡೆಯಬೇಕು” ಎನ್ನುವುದು ಬಯಲು ಸೀಮೆಯವರ ಮಾತಾದರೆ “ಸತ್ತ ಸರ್ಪಕ್ಕೂ ಯೋಗ್ಯ ಸಂಸ್ಕಾರ ನಡೆಸಿ ಊಟ ಹಾಕಿಸಬೇಕು”ಎನ್ನುವುದು ನಿರೂಪಕರ ವಾದ. ಇಲ್ಲಿ ಅವರಲ್ಲಿದ್ದ ನಾಗಾರಾಧನೆಯ ಶ್ರದ್ಧೆ ಇಲ್ಲಿ ಎದ್ದು ಕಾಣುತ್ತದೆ. ಈ ವೈರುಧ್ಯ ವಾಸ್ತವ ಮತ್ತು ನಂಬಿಕೆಗೆ ಸಾಕ್ಷಿಯಾಗಿವೆ.
ದುಡಿಸಿಕೊಳ್ಳುವ ದರ್ಪ ಮತ್ತು ಎಲ್ಲವು ನನ್ನಣತಿಯಂತೆಯೇ ನಡೆಯಬೇಕು ಎನ್ನುವ ಮ್ಯಾನೇಜರ್ ಇಲ್ಲಿ ಸರ್ವಾಧಿಕಾರಿ. ಪ್ರತಿ ತಿಂಗಳ ವರದಿಯಲ್ಲಿ ತಪ್ಪು ವರದಿ ದಾಖಲಿಸುವ ದುಷ್ಟತನ ಇರುವ ದೂರನ್ನು ನೀಡುವ ಧೋರಣೆ ಅದೂ ಪೂರ್ವಾಗ್ರಹಪೀಡಿತವಾಗಿ ಯೋಚಿಸುವ(ಉದಾಹರಣೆಗೆ ಹೊಸದಾಗಿ ಬಂದಿದ್ದಾರೆ ಅವರ ಅಕ್ಷರ ಓದಲು ಬಾರದು) ಮ್ಯಾನೇಜರ್ ಇಲ್ಲಿನ ಖಳನಾಯಕನೆ ಸರಿ! ಅಧಿಕಾರಿ ಶಾಹಿಯ, ಲಂಪಟರ, ಸರಕಾರಿ ಸವಲತ್ತುಗಳನ್ನು ದುರುಪಯೋಗ(ಟ್ರಂಕ್ ಕಾಲ್ ಸೌಲಭ್ಯ, ಸೋಮವಾರಗಳಲ್ಲಿ ಸರಿಯಾದ ಸಮಯಕ್ಕೆ ಬಾರದೆ ಇರುವುದು) ಪಡಿಸಿಕೊಳ್ಳುವವರ ಪ್ರತಿನಿಧಿಯಾಗಿ ಕಾಣಬರುತ್ತಾನೆ. ಮಹಿಳೆಯೊಬ್ಬರಿಂದ ಪೂರ್ವಯೋಜಿತವಾಗಿ ದುರುದ್ದೇಶದಿಂದ ಕೂಡಿದ ದೂರನ್ನು ಬರೆಸಿಕೊಳ್ಳುವುದು ಅವನ ದುಷ್ಟತನದ ಪರಮಾವಧಿಯಾಗಿರುತ್ತದೆ. ವೃತ್ತಿ ಮತ್ಸರವೋ ?ಇಲ್ಲ ಹೊಸಬರು ನಾನು ಹೇಳಿದ ಹಾಗೆ ಕೇಳಬೇಕೆಂಬ ನಿಲುವೋ? ತಿಳಿಯದು! ಆದರೆ ಕಾದಂಬರಿಯುದ್ದಕ್ಕೂ ಬಂದು ತಾನೇ ತೋಡಿದ ಹಳ್ಳಕ್ಕೆ ತಾನೆ ಬಿದ್ದು ಕಲ್ಕತ್ತದಂಥ ದೂರದ ಊರಿಗೆ ವರ್ಗವಾಗಿ ಹೋಗುತ್ತಾನೆ.“ನಾನು ಇಲ್ಲಿ ಕ್ಲರ್ಕ್ ನೀನು ಧಫ್ತರಿ ನನಗೇ ಬೆದರುಸ್ತೀಯಾ?” ಎನ್ನುವ ಮಾತು ಅಧಿಕಾರಿಶಾಹಿಯ ಬೇರನ್ನೇ ಸಾಕ್ಷೀಕರಿಸುತ್ತದೆ. ಅರಿವಿಲ್ಲದಂತೆ ಬ್ಯಾಂಕಿನ ವ್ಯವಹಾರಗಳು ಇಡೀ ಊರನ್ನು ತಲುಪುವುದು ಕಾದಂಬರಿಯಲ್ಲಿ ಸಂಚಲನವನ್ನುಂಟು ಮಾಡುತ್ತದೆ. ಇಬ್ಬರ ಬೀಳ್ಕೊಡುಗೆ ಒಂದೇ ದಿನ ಇರುವಾಗ ಅರಸೀಕೆರೆಯಿಂದ ಬಂದ ಅಧಿಕಾರಿ ಆಡುವ “ ಭವಿಷ್ಯ ಕಟ್ಟಿಕೊಳ್ಳಲು ಎಲ್ಲಾ ಊರುಗಳಲ್ಲೂ ಅವಕಾಶ ಇದ್ದೇ ಇದೆ” ಎನ್ನುವ ಸಮನ್ವಯದ ಮಾತುಗಳು ಮಾರ್ಮಿಕವಾಗಿವೆ.
ಉದ್ಯೋಗ ಖಾತ್ರಿಯಿಲ್ಲದೆ ಎಂದೋ ಆಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಐದಾರು ದಿನದ ಸಂಬಳಕ್ಕೆ ದಿನವೆಲ್ಲಾ ದುಡಿಯುವ ಭಾಸ್ಕರ ಪಾತ್ರ ನಿರುದ್ಯೋಗಿಗಳನ್ನು ಪ್ರತಿನಿಧಿಸುತ್ತದೆ. ಎಲ್ಲರ ಒಳಿತನ್ನೆ ಬಯಸುವ ನಿರೂಪಕ ಭಾಸ್ಕರನಿಗೆ ಡಿಗ್ರಿ ಪಾಸು ಮಾಡಿಸಲೇಬೇಕೆಂಬ ಹಠಕ್ಕೆ ನಿಲ್ಲುವುದು ನಾಯಕನೊಬ್ಬರ ಉದಾತ್ತವನ್ನು ಹೇಳುತ್ತದೆ. ಭಾಸ್ಕರ ತಾಯಿ ನಿರೂಪಕರಿಗೆ ಫೊಟೊಗ್ರಾಫಿ ಹವ್ಯಾಸ ಇದೆ ಎಂದು ತಿಳಿದ ಕೂಡಲೆ ಅದನ್ನು ಬಿಟ್ಟು ಬಿಡುವಂತೆ ಆಡುವ ಮಾತುಗಳು ಆಕೆಯ ಅನುಭವಜನ್ಯವಾಗಿವೆ.
ಮಾತಿನ ನಡುವೆ ಇಲ್ಲಿನ ನೀರಿನಲ್ಲಿ ಬೇಳೆ ಬೇಯುವುದಿಲ್ಲ ಎನ್ನುವುದೂ ಪ್ರಾದೇಶಿಕ ವೈವಿಧ್ಯವೇ ಆಗಿದೆ ಬಯಲು ಸೀಮೆ ಎಂದರೆ ಗಡಸು ನೀರು, ಮಲೆನಾಡು ಎಂದರೆ ಮೃದು ನೀರು ವಿಚಾರ ಹೊಳೆಯುತ್ತದೆ. ನಿರೂಪಕರು ಮುದ್ದೆಯನ್ನು ಕಚ್ಚಿ ತಿನ್ನುವ ಪ್ರಸಂಗ ತಿಳಿಹಾಸ್ಯದಿಂದ ಕೂಡಿದೆ. ಕರಾವಳಿ ತೀರ ಮತ್ತು ಬಯಲು ಸೀಮೆಯ ಆಹಾರವೈವಿಧ್ಯದ ಕುರಿತ ಕ್ವಚಿತ್ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಮಲೆನಾಡಿನಲ್ಲಿ ಮೂರ್ನಾಲ್ಕು ತಿಂಗಳು ಮಳೆ ಬಂದರೂ ಅಂತರ್ಜಲ ಕುಸಿಯುತ್ತದೆ ಆದರೆ ಇಲ್ಲಿ ಮಳೆಯೇ ಇಲ್ಲವಲ್ಲ ಎನ್ನುವ ಕಳವನ್ನು ನಿರೂಪಕರು ವ್ಯಕ್ತಪಡಿಸಿದಾಗ ಮಲೆನಾಡಿನಂತೆ ಮಳೆ ಬಂದರೆ ಮನೆಗಳೆಲ್ಲಾ ಬಿದ್ದು ಹೋಗುವವು ಎಂಬ ಮಾತೂ ಬರುತ್ತದೆ. ರೈನ್ ಶೇಡೆಡ್ ಊರು ಕಲ್ಕೆರೆ ಎನ್ನುವ ನಿರೂಪಕರ ಮಾತು ಅವರ ಅಧ್ಯನಾಸಕ್ತ ಮನಸ್ಸನ್ನು ಬಿಂಬಿಸುತ್ತದೆ.
ಪೆಂಗೊಲಿನ್, ಸರ್ಪ, ಕೊಳಕುಮಂಡಲ, ಪುತ್ರಮ್ಜಾಜಿ, ಅಬ್ಬೆ ಎನ್ನುವ ಜೇಡದ ಹೆಸರು ಮತ್ತೆ ಮತ್ತೆ ಕೇಳಿ ಬರುವ ಪದಗಳು. ನೆಗಡಿ ವಿಚಾರವಾಗಿ ಕೆಂಚಪ್ಪನಲ್ಲಿ ವಿಚಾರಿಸಿದಾಗ “ನಮಗೆಲ್ಲಿ ನೆಗಡಿಯಾಗುತ್ತದೆ?”ಎನ್ನುವುದು,“ಒಂದು ಚೆಂಬು ನೀರು ಕೊಡಿ!”ಎಂದು ಹತ್ತಾರು ಕಿಲೋಮೀಟರ್ ಹೊರೆ ಹೊತ್ತು ತಂದು ಇಳುಹಿ ಹೇಳುವುದು ಅವನ ದೈಹಿಕ ಕ್ಷಮತೆಯನ್ನು ಹೇಳುವುದು ಹಿರೇಕಲ್ಲುಗುಡ್ಡ, ಪಾಳುಬಂಗಲೆ, ಮುಕುಂದೂರು ಸ್ವಾಮೀಜಿ ಇತ್ಯಾದಿಗಳೆಲ್ಲವೂ ಕಾದಂಬರಿಯ ಓಘಕ್ಕೆ ಸಾಕ್ಷಿ ಎನ್ನಬಹುದು. ಹಣದಾಸೆಗೆ ಚಿಪ್ಪು ಹಂದಿ, ಹಾವುಗಳನ್ನ ಹಿಡಿದು ಒಪ್ಪಿಸುವ ಮಾಡುವ ಕೆಂಚಪ್ಪ ಇಲ್ಲಿ ಸೌಮ್ಯನಾಗಿ ಕಂಡರೂ ಕತ್ರನಾಕ್ ಅನ್ನಿಸುತ್ತದೆ. “ಜ್ವರ ಬಂದು ಅಪ್ಪ -ಅಮ್ಮ ತೀರಿದರು” ಎನ್ನುವಲ್ಲಿ ,“ತಂಗಿ ಇದ್ದಾಳೆ ಅವಳಿಗೆ ಮದುವೆ ಮಾಡಬೇಕು”, “ನಮ್ಮೂರು ಬಳ್ಳಾರಿ”ಎನ್ನುವಲ್ಲಿ ಅವನಿಗಿದ್ದ ವೈಯುಕ್ತಿಕ ಜವಾಬ್ದಾರಿಗಳು ಮನನವಾಗುತ್ತವೆ.
“ಹೊಲದಲ್ಲಿರುವ ಹಾವನ್ನು ಹೊಡೆದು ಹಾಕಬಹುದು ನಮ್ಮೊಂದಿಗೆ ಇರುವ ವಿಷಜಂತುವನ್ನು ಹೇಗೆ ದೂರಸರಿಸುವುದು” ಅನ್ನುವ ತುಕಾರಾಮನ ಹಿತಶತ್ರುವಿನ ವ್ಯಾಖ್ಯಾನ ಇಲ್ಲಿ ಅತ್ಯಂತ ಮಾರ್ಮಿಕ. ಬ್ಯಾಂಕಿನ ನೌಕರರೆಲ್ಲರೂ ಒಂದು ಪಕ್ಷವಾದರೆ ಮ್ಯಾನೇಜರ್ ಒಂದು ಕಡೆ ನಿಲ್ಲುವ ಪರಿ ಅಧಿಕಾರಶಾಹಿ ಮತ್ತು ಪ್ರಜಾಪ್ರಭುತ್ವವನ್ನು ತುಲನೆ ಮಾಡಿದಂತಿದೆ.
ಹಂಗಾಮಿ ನೌಕರ ಭಾಸ್ಕರ ಓನರ್ ಶಾಂತಪ್ಪ ಪಟೇಲ್ ನರಸಿಂಹಯ್ಯ ‘ಅಬ್ಬೆ’ಯ ಪ್ರಮುಖ ಪಾತ್ರಗಳು. ನರಸಿಂಹಯ್ಯನವರು ಮಗ ಈ ಊರಿಗೆ ಬರುವುದೆ ಇಲ್ಲ ಬಾಂಬೆಯಲ್ಲಿ ಉಳಿಯುವುದು ಇಷ್ಟ ಅವನಿಗೆ ಎಂದಾಗ ಕಾರಂತರ ‘ಬೆಟ್ಟದ ಜೀವ ‘ಕಾದಂಬರಿಯ ನಿರೂಪಕ ಶಿವರಾಮಯ್ಯ ಮತ್ತು ಗೋಪಾಲಯ್ಯ ಪಾತ್ರಗಳು ನೆನಪಾಗುತ್ತವೆ. ಹಳ್ಳಿಯ ಮದುವೆಯೊಂದರಲ್ಲಿ ಹಾಡುವ ತಮ್ಮ ಪ್ರತಿಭೆಯನ್ನು ಸಾಬೀತು ಮಾಡುವ ವಾಂಛೆ ತಿಳಿ ಹಾಸ್ಯದಿಂದ ಮತ್ತು ಕುದಿಯುವ ಎಣ್ಣೆಯಿಂದ ಪೂರಿ ತಿನ್ನುವ ಕೋತಿಯ ಪ್ರಯತ್ನ ತಿಳಿ ಹಾಸ್ಯದೊಂದಿಗೆ ಜೊತೆಗೆ ವಿಷಾದದಿಂದ ನಿರೂಪಣೆಯಾಗಿದೆ.
ಪರಿಸರ ಪ್ರೇಮಿ ನಿರೂಪಕ ಆನೆಗೆರೆಯಲ್ಲಿ ಆಹಾರವನ್ನು ಹುಡುಕುವ ಫ್ಲೆಮಿಂಗೊ ಮರ ಕತ್ತರಿಸಿ ಗೂಡು ಸಮೇತ ಬೀಳುವ ಬಿದ್ದಾಗ ಅಳುವ ಕೊಕ್ಕರೆಗಳ ಬಳಿ ಹೋಗಲು ನಿರಾಕರಿಸುವುದು ಅವರ ಮೃದು ಮನಸ್ಸನ್ನು ಹೇಳುತ್ತದೆ. ರನ್ನನ ‘ಗದಾಯುದ್ಧ’ದ ಭೀಮಸೇನಾಡಂಬರದಲ್ಲಿ ಬರುವ “ಬಂದದೊಳೆ ಪಾರಿ ಪೋದುವು ನಿಂದಿರದೆ ಉರವಣಿಸಿ” ಎಂಬ ಸಾಲುಗಳು ಕಾಡಿದವು. ಮರ ಕಡಿದರೂ ಪರವಾಗಿಲ್ಲ ಚಿಗುರುತ್ತದೆ ಆದರೆ ಮೇಕೆಗಳನ್ನು ಮೇಯಿಸಲು ಬಿಡಬಾರದು ಅನ್ನುವ ಮಾತು ಕಲ್ಲೂರಾಯರಿಂದ ಪರಿಸರ ಪ್ರಜ್ಞಾಪೂರ್ವಕವಾಗಿಯೇ ಬಂದಿವೆ. ಈತನೂ ಹಲವೆಡೆ ಅರೆಕಾಲಿಕ ವೃತ್ತಿಯನ್ನು ನಿರ್ವಹಿಸಿ ಕಲ್ಕೆರೆಯಲ್ಲಿ ಪ್ರಾರಂಭವಾಗುವ ಕಾಲೇಜಿನ ಪ್ರಾಂಶುಪಾಲರಾಗಿ ನಿಯೋಜಿತಗೊಂಡು ಬರುವುದು ತಂದೆ ತಾಯಿಯರನ್ನು ಹೆಂಡತಿಯನ್ನು ಕರೆಸಿಕೊಳ್ಳುವೆ ಎನ್ನುವುದು ಜೀವನದಲ್ಲಿ ನೆಲೆನಿಲ್ಲಬೇಕು ಎನ್ನುವವರ ಪ್ರತಿನಿಧಿಯಾಗಿದ್ದಾರೆ.
ಸಂಶೋಧನಾ ಮನಸ್ಸು ಕಲ್ಲೂರಾಯರದ್ದು ಹಾಗಿ ಪ್ರಕೃತಿಯ ಕೊಂಡಿಗಳ ಬಗ್ಗೆ ಮಾತನಾಡುತ್ತಾನೆ.,ಜೊತೆಗೆ ನಿರೂಪಕರಿಗೆ ತಿಳಿದು ಹೇಳುವೆ ಅನ್ನುವ ಸೌಜನ್ಯಭರಿತ ಮಾತುಗಳನ್ನು ಹೇಳುತ್ತಾನೆ. ಕೆಂಚಪ್ಪ ತಂದ ಅಪರೂಪದ ಸಸ್ಯಗಳನ್ನು ಸ್ಪೆಸಿಮನ್ ಮಾಡಿ ಬೆಂಗಳೂರಿನವರೆಗೂ ಕಳುಹಿಸುತ್ತಾರೆ. ನಿರೂಪಕರು ಹೋಗುವ ಮನೆಗಳಲ್ಲೆಲ್ಲಾ ಪೀಟೋಪಕರಣಗಳ ಬಗ್ಗೆ ಬರೆಯುತ್ತಾರೆ ಅಂದರೆ ಬೆಲೆ ಬಾಳುವ ಮರಗಳ ಹನನ ಎಂದೇ ಪರೋಕ್ಷವಾಗಿ ಹೇಳುತ್ತಾರೆ. ಕೆಂಚಪ್ಪ ಜೇನು ತೆಗೆದು ಮೇಟಿಕುರ್ಕೆ, ಪಂಚನಹಳ್ಳಿ ಮಾರುತ್ತೇನೆ ಎನ್ನುವ ಮೂಲಕ ಹಲವು ಊರುಗಳ ಪರಿಚಯ ಮಾಡಿಸುತ್ತಾನೆ.ಗಡಿ ಗ್ರಾಮಗಳು ಎಂದಿಗೂ ನಿರ್ಲಕ್ಷ್ಯವೆ ಎಂಬ ಸತ್ಯವನ್ನು ಮೂರು ಜಿಲ್ಲೆಗಳಿಗೂ ಹೊಂದಿಕೊಂಡ ಸ್ಥಳವಾದ ಕಲ್ಕೆರೆ ಮತ್ತು ಅಲ್ಲಿನ ವಿದ್ಯುತ್ ಸಮಸ್ಯೆಯ ಬಗ್ಗೆ ಚರ್ಚಿಸಿ ನಿರೂಪಕರು ನಿರೂಪಿಸುತ್ತಾರೆ. ಗರುಡನಗಿರಿಗೆ ‘ಬರುಡನಗಿರಿ’ ಎಂಬ ಅಣಕದ ಹೆಸರನ್ನು ಕೊಡುವುದು ರಕ್ಷಿತಾರಣ್ಯ ಎಂಬ ಫಲಕ ಸವಕಲಾಗಿರುವುದು ಅರಣ್ಯದ ವಸ್ತು ಸ್ಥಿತಿಯನ್ನು ದಾಖಲಿಸುವಂಥದು. ಸಹ್ಯಾದ್ರಿ ಪರ್ವತ ಶ್ರೇಣಿಗಳಿಗೂ ಈ ಬೆಟ್ಟಗಳಿಗೂ ಹೋಲಿಸುವುದು ಸಾಧ್ಯವಿಲ್ಲ ಎನ್ನುತ್ತಾ ಅಲ್ಲಿ ಮಲಗಿರುವ ಹೆಬ್ಬಂಡೆಗಳನ್ನು ಕುರುಚಲು ಪೊದೆಗಳನ್ನು ಇಲ್ಲಿ ವಿವರಿಸುತ್ತಾರೆ. ಬಯಲು ಸೀಮೆಯ ಎಣ್ಣೆ ಕಾಳು ಬೆಳೆಗೆ ಇಬ್ಬನಿಯೇ ಆಹಾರ ಎಂದಿರುವುದು ಗಮನಿಸಬೇಕಾದದ್ದು. ಅಂತಹ ಹಳ್ಳಿಯಲ್ಳೂ ಪುಸ್ತಕ ಪ್ರೀತಿ ಇರಿಸಿಕೊಂಡಿದ್ದ ನರಸಿಂಹಯ್ಯ ಮತ್ತು ಭಾಸ್ಕರನ ತಂದೆ ಇಲ್ಲಿ ಅನನ್ಯ ಎನ್ನಬಹುದು. ಕುಡಿಯೋದು ಎಂದರೆ ‘ಸ್ಟೇಟಸ್ ಸಿಂಬಲ್’ ಎನ್ನುವ ರಾಜೇಶನ ಮಾತು ಹೌದ?ಎನ್ನುವ ಮರುಪ್ರಶ್ನೆಯನ್ನು ಹಾಕಿ ತಾನು ಕಲಿತ ಚಟವನ್ನು ಹವ್ಯಾಸ ಎಂದು ವಾದಿಸುವ ಮನಃಸ್ಥಿತಿ ಯ ಬಗ್ಗೆ ನೋಡಬಹುದಾದರು ಅವರನ್ನು ಅವರ ಪಾಡಿಗೆ ಬಿಡಬೇಕು ಎನ್ನುವ ತುಕಾರಾಮರ ವಾದ ಸಮಂಜಸವಾಗಿದೆ. ನಿರೂಪಕರು ಮತ್ತು ಕಲ್ಲೂರಾಯರ ಚಾರಣದಲ್ಲಿ ರಾಮಸ್ವಾಮಿ ಕರೆಯದೆ ಬಂದು ಸೇರಿಕೊಳ್ಳುವು ಕಾದಂಬರಿ ಪಾತ್ರಧಾರಿಗಳಿಗೆ ಇರಿಸು ಮಿರಿಸು ತರಿಸುವುದಾದರೂ ತೇಜಸ್ವಿಯವರ ಮಂದಣ್ಣನ ಪಾತ್ರವನ್ನು ನೆನಪಾಗಿಸುತ್ತದೆ.
ಬಿ.ಜಿ.ಎಲ್ ಸ್ವಾಮಿಯವರ ‘ಹಸಿರು ಹೊನ್ನು’ ಕೃತಿಯ ನೆನಪು ಡಾ.ಕಲ್ಲೂರಾಯರು ಬಂದಾಗಾಗುತ್ತದೆ. ಸುಧಾರಿತ ಕ್ಯಾಮೆರಾವನ್ನು ಭಟ್ಕಳ ಸ್ಮಗ್ಲರ್ಗಳಿಂದ ಪಡೆಯುವ ಹಂಬಲವನ್ನು ವ್ಯಕ್ತಪಡಿಸುವುದು ಅನಿವಾರ್ಯತೆ ಹಾಗು ಹಣದ ಅಭಾವ ಅವರಿಗಿದ್ದುದನ್ನು ಸೂಕ್ಷ್ಮವಾಗಿ ಮನಗಾಣಬಹುದು.
ಕಲ್ಕೆರೆ ಕ್ರಿಕೆಟಿಗರು ಹೊಸ ಬ್ಯಾಟ್ ಉಡುಗೊರೆ ನೀಡಿ . ಸಾರ್ ಅಂಡಮಾನ್ ಅದರೇನು ನಿಕೋಬಾರ್ ಅದರೇನು ನೀವು ಬೇಸರ ಮಾಡಿಕೊಳ್ಳಬೇಡಿ ಅಲ್ಲೂ ಕ್ರಿಕೆಟ್ ಆಡಿ.ಅಲ್ಲೂ ಗರುಡನಗಿರಿ ತರ ಬೆಟ್ಟ ಇದಾವೆ. ಬೆಟ್ಟ ಹತ್ತಿ ಎಂದು ಉತ್ಸಾಹ ತುಂಬುವ ತುಂಬಾ ಪರಿ ಆಪ್ತವಾಗಿದೆ. ಕಲ್ಕೆರೆ ಪ್ರವೇಶದೊಂದಿಗೆ ಕಥೆ ಆರಂಭವಾಗಿ ನಿರೂಪಕರು ಕಲ್ಕೆರೆಯಿಂದ ನಿರ್ಗಮಿಸುವವರೆಗೆ ಕಥೆ ಹರಡಿಕೊಂಡಿದೆ. ಕೆಲವೇ ಅಕ್ಷರಸ್ಥರು ಹಾಗೂ ಹಣವಂತರಿಂದ ಕತೆ ಮುಂದುವರೆದು ಅಂಡಮಾನ್ಗೆ ಹೊರಡುವ ನಾಲ್ಕು ತಿಂಗಳ ಅವಧಿಗೆ ಈ ಕಾದಂಬರಿ ಹರಡಿಕೊಂಡಿದೆ. ವೃತ್ತಿಧರ್ಮ ಮತ್ತು ಪ್ರಕೃತಿಧರ್ಮ ಎರಡನ್ನೂ ಪಾಲಿಸುವ ಇಲ್ಲಿಯ ನಿರೂಪಕನ ಪಾತ್ರ ಅನನ್ಯ ಹಾಗೂ ಆದರ್ಶಪ್ರಾಯನಾಗಿ ಓದುಗರನ್ನು ಕಾಡುವುದರ ಜೊತೆಗೆ ನಿರಾಡಂಬರ ,ಸಹಜ, ಸರಳ ನಿರೂಪಣೆಯಿಂದ ಓದುಗರನ್ನು ಹಿಡಿದಿಡುವಲ್ಲಿ ‘ಅಬ್ಬೆ’ ಯಶಸ್ವಿಯಾಗಿದೆ.
ಸುಮಾವೀಣಾ
ಹಾಸನ
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ