- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
———-“.”———-
“What is wonderful about great literature is that it transforms the man who reads it towards the condition of the man who wrote, and brings to birth in us also the creative impulse. ~E.M. Forster“
———-“.”———-
ಬೆಳಗಾಗೆದ್ದು ಕೈಯಲ್ಲಿ ಕಾಫಿ ಕಪ್ಪು ಹಿಡಿದು, ಅಂದಿನ ದಿನ ಪತ್ರಿಕೆ, ತಿರುವಿ ಹಾಕುತ್ತಿದ್ದೇವೆ ಎಂದು ಭಾವಿಸಿಕೊಳ್ಳಿ. ಪುಟ ತಿರುವುತ್ತ ಹೋಗುತ್ತೀದ್ದೀರಿ,ಅಲ್ಲೊಂದು ಕೊಲೆ,ಇಲ್ಲೊಂದು ಸಾವು,ಮಗದೊಂದು ಪುಟದಲ್ಲಿ ಅಪಘಾತ. ಎಲ್ಲದಕ್ಕೂ ನಿರ್ಲಿಪ್ತ ಭಾವ.ಪತ್ರಿಕೆ ಪಕ್ಕಕ್ಕಿಟ್ಟು ಮೊಬೈಲ್ ಕೈಗೆತ್ತಿಗೊಳ್ಳುವಿರಿ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ. ಶ್ರೀ……….. ಯವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ಅನೇಕರ ಮರು ಸಂದೇಶಗಳು.ನೀವು ಸಹ ಒಂದು ಓಂ ಶಾಂತಿ ಎಂದು ಟಂಕಿಸಿ ಮುಂದೆ ಸಾಗುವಿರಿ.ಅಲ್ಲಿಯೂ ನಿರ್ಲಿಪ್ತ ಮನೋಭಾವ ! ಯೋಚಿಸಿ ನೋಡಿ. ಒಂದು ಸಾವಿನ ಸುದ್ದಿ ಮೂರು ವಿಧದ ಪರಿಣಾಮ ಬೀರುತ್ತದೆ ಅಲ್ಲವೆ ? ಸದರಿ ಶ್ರೀ ಯವರ ನಿಧನಕ್ಕೆ ನೇರ ಪರಿಣಾಮ ಹೊಂದಿದವರು ಅವರ ಹತ್ತಿರದ ದೂರದ ಸಂಬಂಧಿಕರು.ಎರಡನೆಯವರು ಆಪ್ತವಲಯ.ಅವರು ಸಾಧ್ಯವಾದರೆ, ದಹನ ಕಾರ್ಯದಲ್ಲಿ ಭಾಗಿಗಳಾಗುವರು. ಅನನುಕೂಲ ಅನಾರೋಗ್ಯದಂತಹ ಬಲವಾದ ಕಾರಣಗಳಿದ್ದರೆ,ದೂರವಾಣಿಗಳ ಮುಖಾಂತರ ಸಂಪರ್ಕಿಸಿ ಸಂತಾಪ ಸೂಚಿಸುವರು.ಈ ಮೂರರನ್ನು ಮೀರಿದವರಿರುತ್ತಾರೆ.ಏನು ಸಂಬಂಧವಿಲ್ಲದವರು. ಪ್ರಪಂಚದ ಒಳಿತು-ಕೆಡುಕುಗಳ ಗೋಜು ಅವರಿಗೆ ಬೇಕಿಲ್ಲ.ತಮ್ಮ ಪಾಡಿಗೆ ತಾವು ಒಂದು ಗುಡ್ ಮಾರ್ನಿಂಗ್, ಗುಡ್ ಇವನಿಂಗ್ ಸಂದೇಶ ಹಾಕುತ್ತ ಹೋಗುತ್ತಿರುತ್ತಾರೆ.ವಿಚಿತ್ರ ಅಲ್ಲವೇ ಯಾಕೆ ಹೀಗೆ ? ಶ್ರೀ ಯವರ ಹೃದಯಾಘಾತದಿಂದ ದಿಂದ ಅವರ ಸಂಬಂಧಿಕರಿಗೆ ಮಾತ್ರ ಕೆಟ್ಟ ಸುದ್ದಿ. ಉಳಿದ ಕೆಲವರಿಗೆ ಅದು ಸುದ್ದಿಯೇ ಅಲ್ಲ.ನಗರದ ಯಾವುದೇ ವಿಸ್ತರಣೆಯಲ್ಲಿ ಉಂಟಾದ ಸಾವಿನ ಸುದ್ದಿ ಅನೇಕರನ್ನು ನಿರ್ಭಾವುಕರನ್ನಾಗಿ ಮಾಡಬಲ್ಲದು.
ಮನಸ್ಸಿಗೆ ಆಪ್ತವಾದ ಕೃತಿಗಳನ್ನು ಕುರಿತು ಯೋಚಿಸುವಾಗ, ಉದಾಹರಣೆಗೆ ಮಹಾಭಾರತ,ರಾಮಾಯಣ ಕಾವ್ಯಗಳಲ್ಲಿ, ಕುಂತಿ ಬೀರಿದ ಪ್ರಭಾವ ಮಾದ್ರಿ ಬೀರಲಿಲ್ಲ. ಸೀತೆ, ದ್ರೌಪದಿ, ಪ್ರಾಮುಖ್ಯರಾದಷ್ಟು ಊರ್ಮಿಳೆ, ಮಾಂಡವಿ,ಶೃತಕೀರ್ತಿ ಆಗಿಯೇ ಇಲ್ಲ. ಊರ್ಮಿಳೆಯ ಹೆಸರು ಅಲ್ಲಿ ಇಲ್ಲಿ ಒಂದಷ್ಟು ಚರ್ಚಿತವಾಗಿದ್ದರೆ, ಮಾಂಡವಿ ಶೃತಕೀರ್ತಿ ಹೆಸರು ಬಹಳಷ್ಟು ಜನ ಕೇಳಿಯೂ ಇರಲಿಕ್ಕಿಲ್ಲ. ಅಭಿಮನ್ಯುವಿನ ಸಾವಿನಷ್ಟು ಘಟೋತ್ಕಚನ ಸಾವು ಕಾಡಿಲ್ಲ. ಉಪಕಾರ್ ಚಿತ್ರದ ನಾಯಕ ಮನೋಜ ಕುಮಾರನ ಮೇಲೆ ತೋರಿದ ಪ್ರೀತಿ ಅನುಕಂಪ ನಮ್ಮ ಊರಿನ ರೈತನ ಮೇಲೆ ತೋರಿದ್ದೇವೆಯೇ ? ಸಂದೇಹಗಳ ಸರ ಮಾಲೆ !!
ಬೇಂದ್ರೆಯವರ ಕವಿತೆ ‘ರಾಮಾಯಣ’ದ ಈ ಸಾಲುಗಳನ್ನು ನೋಡಿ.
ಲಕ್ಷ್ಮಣನಿಗೆ ವನವಾಸವು,ಉರ್ಮಿಳೆ ಕುರುಡುಗಳೆದ ಕ್ಷಣಕ್ಷಣಾ |
ಬರಲಿಲ್ಲವು ಲೆಕ್ಕಕ್ಕೆ ವರುಷಗಳು ಹದಿನಾಲ್ಕು ಭಣಭಣಾ|
ಭರತನು ಕಣ್ಣಿಗೆ ಕಾಣುವ ಅಳತೆಯೊಳಿದ್ದನು ತಾ ದಿನದಿನಾ|
ತಪವು ಭರತಗೂ ಮಾಂಡವಿಗೂ ತಪ, ವಿರಹವೇ ಪಾರಾಯಣಾ |
ಶತೃಘ್ನನು ಅರಮನೆಯೊಳಗಿದ್ದರೂ ಶೃತಕೀರ್ತಿಗೂ ರಣರಣಾ |
ರಾಮನ ವಿರಹವು ಸೀತಾವಿರಹವು ತುಂಬಿದೆ ರಾಮಾಯಣಾ ||
ಸಣ್ಣವರತ್ತರೆ ಎಣಿಕೆಗೆ ಬಾರದು ಅಯ್ಯೋ ನಾರಾಯಣಾ ||
ಸಾಹಿತ್ಯ ಸಂಜೀವಿನಿ ಬೇಂದ್ರೆ. ನಮ್ಮೆಲ್ಲರ ಪ್ರತಿ ಸಂದೇಹಗಳಿಗೆ, ಬೇಂದ್ರೆಯವರಲ್ಲಿ ಮದ್ದಿದೆ.ಅದು ಬೇಂದ್ರೆ ತಾಕತ್ತು. ಸಾಹಿತ್ಯದ ತಾಕತ್ತು.ನಮ್ಮ ನೋವಿನ ಸಂಗತಿಗಳು ನಮಗೆ ಯಾವಾಗಾದರೂ ಸುಖವಾಗಿ, ಸುಂದರವಾಗಿ ಕಂಡಿವೆಯಾ ? ಅಥವಾ ಅವುಗಳನ್ನು ನಾವು, ಸುಖಿಸಿದ ನೆನಪಿದೆಯೇ ? ಇಲ್ಲವೆಂದಾದಲ್ಲಿ ಭಾರತದ ದ್ರೌಪದಿ, ರಾಮಾಯಣದ ಸೀತೆ ,ಭಾಗವತದ ಕಯಾದು ನಮಗೆ ಯಾಕೆ ಹತ್ತಿರವಾಗುತ್ತಾರೆ. ಈ ಕತೆಗಳು ಸಾಹಿತ್ಯಿಕವಾಗಿ ಸುಂದರ ಎನಿಸಿಕೊಂಡು ಓದಿಸಿಕೊಂಡು ಹೋಗುತ್ತವೆ. ಯಾಕಿದ್ದೀತು? ಅದು ಸಾಹಿತ್ಯಕ್ಕಿರುವ ಸಶಕ್ತ ಪದಜಾಲ.ಮತ್ತದರಲ್ಲಿ ಅಡಕವಾಗಿರುವ ಸತ್ಯ.ಸ್ಪಷ್ಟವಾಯಿತಲ್ಲ ! ಒಂದು ಕೃತಿ ಅದು ಗದ್ಯ ಪದ್ಯ ವಿಮರ್ಶೆ ನಾಟಕ ಏನೇ ಆಗಿರಲಿ.ನಮ್ಮನ್ನು ಸೆಳೆಯುವ ಶಕ್ತಿ ಅದಕ್ಕಿದೆ ಅದೇ ಸಾಹಿತ್ಯದ ಕಾಣ್ಕೆ ಮತ್ತು ಅದರಲ್ಲಿರುವ ನೈಜತೆಗೆ ಹತ್ತಿರವಿರುವ ಪಾತ್ರ, ಪರಿಸರ,ಕಟ್ಟಿಕೊಡುವ ಕಲೆ,ಹಿಡಿದಿಟ್ಟ ಭಾಷೆ. ನೈಜತೆ ಅಥವಾ ನಾವು ಕರೆಯುವ ನಿರ್ಮಲಾಂತಃಕರಣ ಮತ್ತು ಅಷ್ಟೇ ಶುದ್ಧವಾದ ಮನಕ್ಕೆ ನೀಡುವ ಪ್ರೀತಿ. ಈ ರೀತಿಯ ಪ್ರೀತಿಗೆ ಸಮಾನವಾದದ್ದು ಏನಾದರೂ ಇದ್ದೀತೆ ?ಖಂಡಿತ ಇರಲಾರದು.ಒಬ್ಬ ಲೇಖಕ ಬರೆಯುತ್ತಿರುವುದು ನೈಜತೆಯಿಂದ ಕೂಡಿಲ್ಲ ಎದು ಓದುಗನ ಅರಿವಿಗೆ ಬಂತೆಂದು ತಿಳಿಯಿರಿ ಅದು ನಮ್ಮ ನೆನಪಿನಿಂದ ಮಾಯ. ಅದು ಆ ಕೃತಿಯ ಲೇಖನದ ಸೋಲು ಹೌದು. ಒಂದು ಪುಸ್ತಕ ಓದುತ್ತಿದ್ದೇವೆ.ಅದರ ಚೌಕಟ್ಟು, ವಸ್ತು, ಪಾತ್ರಗಳು ನಮ್ಮನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುತ್ತ ತನ್ಮಯತೆ ಮೂಡಿಸಿದರೆ ಅ ಪುಸ್ತಕ ಯಶಸ್ಸು ಕಾಣಬಲ್ಲದು. ನಾಲ್ಕು ಜನರ ಬಾಯಲ್ಲಿ ಅದರ ಮಾತು ಬರಬಹುದು ಚರ್ಚೆಗೆ ಒಳಗಾಗಬಹುದು. ವಿಮರ್ಶಕ ಅದನ್ನು ತನ್ನ ಲೇಖನಗಳಲ್ಲಿ ಮಾದರಿ ಪುಸ್ತಕವಾಗಿ ಬಳಸಬಹುದು. ಎಲ್ಲದಕ್ಕೂ ಮೀರಿ ಒಳ್ಳೆಯ ಮಾರುಕಟ್ಟೆ ಪಡೆಯಬಹುದು. ಒಂದು ವೇಳೆ ಅದೇ ಪುಸ್ತಕದ ಪಾತ್ರಗಳ ಮಿತಿಯನ್ನು ದಾಟಿ ಲೇಖಕನೇ ಮಾತಾಡಿದ್ದರೆ ಅಂತಹ ಕೃತಿಗಳು ಅಪಮೌಲ್ಯ ಹೊಂದುತ್ತವೆ. ಇಲ್ಲಿ ಒಬ್ಬ ಬರಹಗಾರ/ಕವಿ ಹೇಳುತ್ತಿರುವುದು ಸ್ವಯಂ ಅವನವೇ ಆಗಿರಬೇಕೆ ? ಅವನ ಕಲ್ಪನೆ, ಪ್ರಯತ್ನಗಳಿಗೆ ಬೆಲೆ ಇಲ್ಲವೇ ? ಅಂತಹ ಕಲ್ಪನೆಯಲ್ಲೂ ಪ್ರಾಮಾಣಿಕತನ ಇದ್ದಾಗಲೇ ಸೃಜನಶೀಲತೆ ಗರಿಗೆದರಲು ಸಾಧ್ಯ. ಇಲ್ಲವಾದರೆ, ಅದು ಒಂದು ರೂಪಾಯಿಗೆ ಒಂದು ಆನೆಯ ಕಥೆ !
ಅದು ಓದು,ಸಿನೆಮಾ ಧಾರಾವಾಹಿ ಇನ್ನಾವುದೇ ಕಲೆ ಮತ್ತೊಂದು ಏನೇ ಆಗಿರಲಿ ಆನಂದ, ಸಾಮಾನ್ಯ ಜ್ಞಾನ ಅಥವಾ ಏನೋ ಒಂದು ಸಾಹಿತ್ಯ ಪರ ಸಂದೇಶ ಒದಗಿಸಬೇಕು ಕಾವ್ಯಕಲೆಯ ಸದ್ಯ ಪ್ರಯೋಜನ ಕವಿ ಸಹೃದಯರಿಬ್ಬರಿಗೂ ಏಕಕಾಲಕ್ಕೆ ಉಂಟಾಗಬೇಕು ಹಾಗಾದಾಗ ಮಾತ್ರವೇ ಸೌಂದರ್ಯದ ಅನುಭೂತಿ ಮತ್ತು ಸಾಹಿತ್ಯದ ಕೊನೆಯ ಮಜಲನ್ನು ತಲುಪಿದ ತೃಪ್ತಿ. ಇವೆಲ್ಲ ಒಂದು ಕೃತಿ/ಲೇಖಕನಿಂದ ಸಿಗದೇ ಹೋದಾಗ, ಅದು ಸಾರಸ್ವತ ವಲಯದಲ್ಲಿ ಕಳೆದು ಹೋಗುತ್ತದೆ. ಒಂದು ಕೃತಿಯಲ್ಲಿರುವ ಒಂದು ಪಾತ್ರ ನಮ್ಮನ್ನು ಸಂವೇದನೆಗೆ ಒಳಪಡಿಸುತ್ತದೆ ಅದರಲ್ಲಿ ನಾವೂ ಒಂದು ಪಾತ್ರವಾಗಿ ಹೋಗುತ್ತೇವೆ. ಯಾವುದೋ ದೃಶ್ಯ/ಪ್ಯಾರಾ ನಮ್ಮ ಕಣ್ಣನ್ನು ಹನಿಗೂಡಿಸುವ ತಾಕತ್ತು ಹೊಂದಿರುತ್ತದೆ.ಜೀವಂತವಿರುವ ಮತ್ತು ಸನಿಹದ ಸಂಪರ್ಕ ಇರುವ ಸ್ನೇಹಿತನಿಗಿಂತ, ಕಾರಂತರ ಚೋಮ, ಅನಂತಮೂರ್ತಿಯವರ ಪ್ರಾಣೇಶಾಚಾರ್, ತ್ರಿವೇಣಿ ಯವರ ಕಾವೇರಿ ನಮಗೆ ಬಹಳ ಹತ್ತಿರವಾಗುತ್ತಾರೆ.ಇದು ಹೇಗೆ ?ಒಂದು ಅನಿಸಿಕೆಯ ಪ್ರಕಾರ ನಮ್ಮ ಮನಸ್ಸು ಇದಕ್ಕೆ ಕಾರಣ.ಕಾಲ್ಪನಿಕ ಪಾತ್ರಗಳು,ನಮ್ಮೊಂದಿಗೆ, ಯಾವುದೇ ರೀತಿಯ ಪೈಪೋಟಿಗೆ ಇಳಿಯಲಾರವು ಎನ್ನುವ ಧೈರ್ಯ.ಇನ್ನೂ ಒಂದು ವಿಶಿಷ್ಟ ಲಕ್ಷಣ ಎಂದರೆ ಆ ಪಾತ್ರ ನಾವೂ ಆಗುವ ಸದವಕಾಶ ಇಲ್ಲಿದೆ.ಕನಿಷ್ಠ ಕೆಲವು ಸಮಯವಾದರೂ ನಮ್ಮನ್ನು ನಮ್ಮಿಂದ ದೂರ ಕರೆದೊಯ್ಯುವ ತಾಕತ್ತು ಇರುವುದು.ಇದು ಒಂದು ರೀತಿಯ ಬಯಲು ಆಲಯದೊಳಗೋ ಆಲಯವು ಬಯಲೋಳಗೋ ಎನ್ನುವ ಉಭಯ ರೀತಿಯ ಲೋಕ. ಬದುಕಿನ ಲಕ್ಷಣ.ಸಾಹಿತ್ಯ ಕಲಿಸುವ ಬದುಕು,ಬದುಕು ಕಲಿಸುವ ವಿದ್ಯೆ .
ಫ್ಲೋರಿಡಾ ದೇಶದ ಭೌಗೋಳಿಕ ಸಂಗತಿಗಳಿಗಿಂತ, ಅಟ್ಲಾಂಟಿಕ್ ಸಾಗರದ ತೀರ ಪ್ರದೇಶಕ್ಕಿಂತ ಅದನ್ನು ನೋಡಲು ಹೋಗುವ ದಾರಿಯಲ್ಲಿ ಕಂಡ ವಿಶಾಲವಾದ ನದಿ ಮತ್ತು ಅದಕ್ಕಿರುವ ಹೆಸರಾದ ‘ಇಂಡಿಯಾ ರಿವರ’ ಬೋರ್ಡ್ ಓದಿದಾಗ ಧಿಡೀರನೆ ಇಡೀ ಅಮೆರಿಕ ನಮ್ಮದಾಗಿಬಿಡುತ್ತದೆ. ಶ್ರೀಲಂಕಾದ ಮೇಲೆ ಟಿಪ್ಪಣಿ ಬರೆಯಿರಿ ಎಂದಾಗ, ಅದರ ರಾಜಧಾನಿ ಯಾವುದು? ಅಲ್ಲಿಯ ಜನಸಂಖ್ಯೆ ಎಷ್ಟು ? ಅಲ್ಲಿಯ ಉಷ್ಣತಾಮಾನಕ್ಕಿಂತ ಭಾರತೀಯ ಹೆಸರು ಹೊಂದಿದ ಮುತ್ತಯ್ಯ ಮುರಲೀಧರನ ನಮಗೆ ಪ್ರಿಯರಾಗಿಬಿಡುತ್ತಾರೆ.
ಸೇತುಕಟ್ಟಿ ಶ್ರೀಲಂಕೆಗೆ ಹೋದ ರಾಮಾಯಣದಿಂದಾಗಿ ಶ್ರೀಲಂಕಾ ನಮ್ಮದಾಗಿಬಿಡುತ್ತದೆ. ಇದನ್ನು ನಮಗೆ ಬಾಹ್ಯ ಸಂಗತಿಗಳಲ್ಲ ಭಾವನಾ ಪ್ರಪಂಚ ಕಲಿಸುತ್ತದೆ ಅದು ಸಾಹಿತ್ಯ ಎಂದೇ ಧೃಡವಾದ ನಂಬಿಕೆ. ನಂಬಿಕೆ ಹುಸಿಯಾಗಲಾರದು ಎನ್ನುವುದು ಸಹ ನಂಬಿಕೆಯೇ. ಎಲ್ಲ ನಂಬಬೇಕು ಎನ್ನುವ ಹಟವೂ ಸಲ್ಲ.
ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವ ಇಬ್ಬಂದಿ ನೀನು
ಕಂಬದಿನೋ, ಬಿಂಬದಿನೋ ಮೋಕ್ಷ ಅವರಿಂಗಾಯ್ತು.
ಸಿಂಬಳದ ನೊಣ ನೀನು – ಮಂಕುತಿಮ್ಮ.
೦-೦-೦-೦
ಪರಾಮರ್ಶನ ಸೂಚಿ.
ವಿನಯ :- ಬೇಂದ್ರೆಯವರ ಆಯ್ದ ಕವನಗಳು.
ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್