ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಮ್ಮ ನಿನಗೊಂದು ನನ್ನ ನಮನ…

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

“ಅಮ್ಮ ಅಪ್ಪ”ಒಂದೇ ನಾಣ್ಯದ ಎರಡು ಮುಖಗಳು. ಜನ್ಮಕೊಟ್ಟು ಲಾಲನೆ-ಪಾಲನೆ ಮಾಡುವುದು ತಾಯಿಯ ಕರ್ತವ್ಯವಾದರೆ, ಆಕೆ ಲಾಲನೆ ಪಾಲನೆಗೆ ಅನುವು ಮಾಡಿಕೊಡುವುದು ತಂದೆಯ ಕರ್ತವ್ಯ. ಮಗುವಿನ ಹೊಟ್ಟೆಯ ಹಸಿವನ್ನು ಹೇಗೆ ಇಂಗಿಸುವುದು ಎಂಬುದರ ಬಗ್ಗೆ ತಾಯಿ ಯೋಚಿಸಿದರೆ, ತಂದೆ ಆ ಮಗುವಿನ ಬೆಳವಣಿಗೆಗೆ ಮತ್ತು ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಾನೆ. ಮಾತೃ ದೇವೋಭವ, ಪಿತೃ ದೇವೋಭವ, ಅತಿಥಿ ದೇವೋಭವ,ಆಚಾರ್ಯ ದೇವೋಭವ ಎಂದ ನಾಡು ನಮ್ಮದು. ತಾಯಿ ತಂದೆ ಗುರು ಅತಿಥಿಗಳನ್ನು ದೇವರಂತೆ ಕಾಣಬೇಕು ಎಂಬುದೇ ಇದರ ಅರ್ಥ. ಇವರಿಬ್ಬರದು ಪ್ರಮುಖ ಪಾತ್ರವಿದೆ.
ಕಾರ್ಮಿಕರ ದಿನ,ಮಹಿಳಾ ದಿನ,ವೃದ್ಧರ ದಿನ ಹೀಗೆ ಎಲ್ಲರಿಗೂ ಒಂದು ದಿನವಿರುವಂತೆ ಅಮ್ಮನಿಗೂ ಒಂದು ದಿನ ಇರಬಾರದೇಕೆ ? ಅಂತೆಯೇ ಮೇ 9 ಎರಡನೇ ಭಾನುವಾರದಂದು ಅಮ್ಮಂದಿರ ದಿನಾಚರಣೆೆ (ಮದರ್ಸ್ ಡೇ) ಆಚರಿಸಲಾಗುತ್ತದೆ.
‌ ಜನುಮ ಕೊಟ್ಟ ತಾಯಿಗೆ ಸಮನಾದ ಇನ್ನೊಂದು ಶಕ್ತಿ ಜಗತ್ತಿನಲ್ಲಿಲ್ಲ. ನಮ್ಮ ಪರಂಪರೆ, ಎಲ್ಲರಿಗಿಂತ ಮೊದಲು ತಾಯಿಗೆ ಗುರುವಿನ ಸ್ಥಾನ ಕೊಟ್ಟಿದೆ. ಮಮತೆಯ ಮಡಿಲಾದ ಮಾತೆಯೊಂದಿಗಿನ ಸಂಬಂಧ ಮಾತಿಗೆ ನಿಲುಕದು. ಅಂತಹ ಮಾತೆಯರನ್ನು ಸ್ಮರಿಸುವ ದಿನವೆ “ವಿಶ್ವ ತಾಯಂದಿರ ದಿನ”.
ಮಾತೃ ದೇವೋಭವ
“ಅಮ್ಮ” ಈ ಎರಡಕ್ಷರದಲ್ಲಿ ಅದೆಂಥ ಅನುಬಂಧ ! ಏನೋ ಸೆಳೆತ ಅಡಗಿದೆ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಈ ಮಾತು ಜನಜನಿತ. ಈ ವಿಶ್ವದಲ್ಲಿ ತಾಯಿಗಿಂತ ಮಿಗಿಲಾದ ದೇವರಿಲ್ಲ. ಆಕೆಗಿಂತಲೂ ಶ್ರೇಷ್ಠರಾದ ಗುರುಗಳಿಲ್ಲ. ತಾಯಿಗಿಂತ ಮಿಗಿಲಾದ ಬಂಧು-ಬಳಗ ವಿಲ್ಲ. ಆದ್ದರಿಂದಲೇ ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ ಎಂಬ ಪ್ರಸಿದ್ಧ ಗಾದೆಯ ಮಾತಿದೆ. ಪರಮಾತ್ಮನೂ ಸಹ ತನ್ನ ಮಾತೆಗೆ ನಮಸ್ಕರಿಸುತ್ತಾನೆ. ತಾಯಿಯೇ ಪ್ರತ್ಯಕ್ಷ ದೈವ ಆದ್ದರಿಂದಲೇ ಮಾತೃ ದೇವೋಭವ ಎಂದು ತಾಯಿಗೆ ಪ್ರಥಮ ಪ್ರಾಶಸ್ತ್ರ. ಆಗಾಗಿ ಅಮ್ಮ ಎಂದರೆ ಅಕ್ಕರೆ, ಮಮತೆ,ಪ್ರೀತಿ.

ಅಮ್ಮ ಸೌಂದರ್ಯದ ಚಿಲುಮೆ
ಅಮ್ಮನ ಸೌಂದರ್ಯದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಮ್ಮನ ನೆಡೆ ಚೆಂದ, ಅಮ್ಮನ ನುಡಿ ಚೆಂದ, ಅಮ್ಮನ ಹಾಡು ಬಲು ಚೆಂದ. ಅಮ್ಮ ಮೈತುಂಬಾ ಸೆರೆಗೊಡ್ಡಿಕೊಂಡು ನಿಂತರೆ ಗೌರಮ್ಮ ತರಹವೇ ಕಾಣುವ, ಎಲ್ಲರ ಹೃದಯದಲ್ಲಿ ಪ್ರತಿಷ್ಠಾಪಿಸಿ ಕೊಳ್ಳಬೇಕಾದ ಸಾಕಾರಮೂರ್ತಿಯಂತಿರುವ ಅಮ್ಮ ಅವಳ ಸಹನೆ ಹಾಗೂ ಸೌಜನ್ಯಕ್ಕೆ ಸಾಕ್ಷಿ ಯಾಗಿದೆ.
ಸಮಾಜದ ಕೇಂದ್ರ ಸಂಸಾರ
ಸಂಸಾರವು ಸಮಾಜದ ಕೇಂದ್ರವಾದರೆ, ತಾಯಿ ಸಂಸಾರದ ಕೇಂದ್ರವಾಗಿರುತ್ತಾಳೆ. ಅಮ್ಮನಿಲ್ಲದ ಮನೆಯು ಗೃಹವೆನಿಸುವುದಿಲ್ಲ. ಎಂಥಾ ಕ್ಲಿಷ್ಟಕರ ಪರಿಸ್ಥಿತಿಯನ್ನು ಲೀಲಾಜಾಲವಾಗಿ ದಾಟಿ ಬಿಡುವ ಅಮ್ಮ, ಎಷ್ಟೇ ಮನೆ ಕೆಲಸ ಕಾರ್ಯಗಳಿದ್ದರೂ ಬೇಸರಿಸದೆ ಚಿಟಿಕೆ ಹೊಡೆಯುವಷ್ಟು ಸಮಯದಲ್ಲಿ ಮಾಡಿ ಮುಗಿಸುವ ಅಮ್ಮ, ಗಂಡ-ಮಕ್ಕಳಿಗೆ ನೋವಾಗದಂತೆ ನಡೆದುಕೊಳ್ಳುವ ಅಮ್ಮ,, ಮನೆಗೆ ಎಷ್ಟು ಜನ ಸಂಬಂಧಿಕರು ಬಂದರೂ, ಬಂದುಹೋದರೂ ಮುಖದಲ್ಲಿ ಸಾಸಿವೆಯಷ್ಟು ಸಿಡುಕು, ಕೋಪ,ಅಸಮಾಧಾನ, ಅಸಹನೆ ವ್ಯಕ್ತಪಡಿಸಿದೆ ಮಂದಸ್ಮಿತರಾಗಿಯೇ ಎಲ್ಲರಿಗೂ ಆದರ ಪೂರಿತವಾದ ಆತಿಥ್ಯ ನೀಡಿ ಗೌರವದಿಂದ ಬೀಳ್ಕೊಡುವ ಅಮ್ಮ…… ನಿನ್ನ ಬಗ್ಗೆ ವರ್ಣಿಸಲಸದಳ !
ಪ್ರೀತಿ ಸ್ಪರಿಸುವ ಅಮ್ಮ
ಪ್ರೀತಿಗೆ ಗರಿಷ್ಠಮಟ್ಟದ ಸಂಕೇತ ಅಮ್ಮ. ಸಕಲ ಮಾನವ ರಾಶಿಯಲ್ಲಿ ಪ್ರೀತಿ ಹುಟ್ಟಿಸುವುದು ಅಮ್ಮ ತಾನು ಸವೆಯುತ್ತಾ,ಮೇಣದಬತ್ತಿ ಕರಗಿ ಬೆಳಕು ನೀಡುವಂತೆ ಜಗತ್ತಿಗೆ ಬೆಳಕನ್ನು ನೀಡುತ್ತಾಳೆ. ಅಮ್ಮ ತಾನು ಶ್ರಮಪಟ್ಟರು ಮಕ್ಕಳಿಗೆ ಸುಖವನ್ನೀಯುತ್ತಾಳೆ.ಅದೆಂಥ ಅನುಭೂತಿ ನಿನ್ನಲ್ಲಡಗಿದೆ.
ಸಹನಾಮೂರ್ತಿ ಅಮ್ಮ
ಅಮ್ಮ ಗೃಹ ಜೀವನದ ಕಾರ್ಯಗಳನ್ನು ಸಿಟ್ಟಿನಿಂದಾಗಲಿ,ಬೇಸರದಿಂದಾಗಲಿ ಮಾಡದೆ ಪವಿತ್ರ ಕರ್ತವ್ಯವೆಂಬ ಭಾವನೆಯಿಂದ ಮಾಡುತ್ತಾಳೆ.ತಾನು ಜೀವನದಲ್ಲಿ ಬೇಕಾದಷ್ಟು ಕಷ್ಟವನ್ನು ಅನುಭವಿಸಿದರೂ ಯಾವುದೇ ದುಃಖವನ್ನು ಮುಖದಲ್ಲಿ ತೋರ್ಪಡಿಸಿದೆ ಮಕ್ಕಳನ್ನು ನಿಭಾಯಿಸುತ್ತಾಳೆ. ನಿಸ್ವಾರ್ಥತೆಯಿಂದಲೂ, ಶಾಂತಿಯಿಂದಲೂ ಗಂಡ ಮಕ್ಕಳ ಯೋಗಕ್ಷೇಮ ನೋಡುವುದು ಆಕೆಯ ರಕ್ತದಲ್ಲೇ ಬಂದಿದೆ.
ಕೇಂದ್ರ ಶಕ್ತಿ ಅಮ್ಮ
ಗೃಹ ಸಂಸಾರಗಳಲ್ಲಿ ಅಮ್ಮನೇ ಮುಖ್ಯ ಕ್ಷೇತ್ರ ಎಂದು ಹೇಳಬೇಕಾಗುತ್ತದೆ. ಆಕೆಯೇ ಕೇಂದ್ರ ಶಕ್ತಿ. ಬೆಳೆಯುವ ಮಕ್ಕಳ ಮೇಲೆ ಅಮ್ಮನ ಸ್ವಂತ ಪ್ರೀತಿ, ಸೇವೆಗಳಿಂದ ಆಗುವ ಅದ್ಭುತ ಪರಿಣಾಮವು ಇತರರ ಸೇವೆಯಿಂದಾಗದು ಎಂಬುದನ್ನು ಎಂದಿಗೂ ಮರೆಯಬಾರದು. ನಮ್ಮಚರಿತ್ರೆಯ ಅನೇಕ ಮಹಾಪುರುಷರು ಚಿಕ್ಕಂದಿನಲ್ಲಿ ತಮ್ಮ ತಾಯಂದಿರು ಪ್ರೀತಿ-ವಿಶ್ವಾಸ ಪೂರಿತ ಸೇವೆ ಇಲ್ಲದಿದ್ದರೆ ಮಹಾಪುರುಷ ರಾಗುತ್ತಿದ್ದರೋ ಇಲ್ಲವೋ ಅದೇ ಸಂದೇಹ. ಆದುದರಿಂದಲೇ ನಮ್ಮ ಉಪನಿಷತ್ತುಗಳು ‘ಮಾತೃದೇವೋಭವ’ಎಂದು ಸಾರುತ್ತಿರುವುದು.ಭಾರತದ ಸಂಸ್ಕೃತಿಯು ಇಂದಿಗೂ ಉಳಿದುಕೊಂಡು ಬಂದಿದ್ದರೆ ಅದು ಇಂಥ ತಾಯಿಂದಿರ ಪ್ರಭಾವದಿಂದಲೇ ಎನ್ನಬಹುದು.

ಪ್ರೀತಿಯ ಅಮೃತಧಾರೆ
ಭೂದೇವಿಗಿರುವಷ್ಟು ಸಹನೆ ನಾವು ಅಮ್ಮನಲ್ಲಿ ಕಾಣುತ್ತೇವೆ. ಸಾಗರದಷ್ಟು ವಿಶಾಲ ಮಾತೃಪ್ರೇಮ. ಅದಕ್ಕೆ ಆಕೆ ‘ಕ್ಷಮೆಯಾಧರಿತ್ರಿ’. ಅನುಕ್ಷಣವೂ ಮಕ್ಕಳ ಜವಾಬ್ದಾರಿಯನ್ನು ವಹಿಸುವ ಅಮೃತಮೂರ್ತಿ ಅಮ್ಮ.ಪ್ರೀತಿಯ ಅಮೃತ ಧಾರೆ ಎರೆಯುವ ಅಮ್ಮನಿಗೆ ಅಮ್ಮನೇ ಸಾಟಿ. ಹೀಗೆ ಪ್ರೀತಿಗೆ,ತ್ಯಾಗಕ್ಕೆ, ಸಹನೆಗೆ, ಭಾಧ್ಯತೆಗೆ ತಾಯಿಯ ಕೊಡುಗೆ ಅಪಾರ.
ತಾಯಿ ಮೊದಲ ಪೋಷಕಿ. ಗರ್ಭಿಣಿಯಾದ ಮೊದಲ ದಿನದಿಂದ ಹಿಡಿದು ಅನೇಕ ಕಷ್ಟಗಳನ್ನು ಅನುಭವಿಸಿ ಮಗುವನ್ನು ಕಾಪಾಡುತ್ತಾಳೆ. ತಾನು ಸೇವಿಸುವ ಆಹಾರವನ್ನು ತನ್ನ ರಕ್ತ ಮಾಂಸಗಳನ್ನು ಮಗುವಿಗೆ ಹಂಚಿ, ಮಗುವನ್ನು ಬೆಳೆಸುತ್ತಾಳೆ. ಕರುಳು ಕತ್ತರಿಸಿಕೊಂಡು ಉದರದಿಂದ ಮಗು ಹೊರಗೆ ಬರುವವರೆಗೂ ಪಾಲನೆ ಮಾಡಿ ತನ್ನ ಅಮೃತದಾರೆ ಎರೆಯುತ್ತಾಳೆ. ನಾನು ತಿನ್ನಿ ತಿನ್ನದಿರಲಿ ಮಗುವಿಗೆ ಹೊಟ್ಟೆ ತುಂಬಾ ಉಣಿಸುತ್ತಾಳೆ. ಹಾಗಾಗಿ ತಾಯಿಯನ್ನು ಮೀರಿಸುವ ದೈವ ಮತ್ತೊಂದಿಲ್ಲ. ತನ್ನ ಮಮತೆಯ ಕೈ ತುತ್ತು ನೀಡುವ ಅಮ್ಮನ ಒಲುಮೆಗೆ ಬೆಲೆಕಟ್ಟಲಾಗದು.
ತಾಯಿಯೇ ಮೊದಲ ಗುರು
ಮಗುವಿಗೆ ಮೊದಲಕ್ಷರ ಬರುವುದು ‘ಅಮ್ಮ’ ಎಂದು.ಮಗು ತಾಯಿಯ ಗರ್ಭದಲ್ಲಿರುವ ವಾಗಲಿಂದಲೂ ,ತಾಯಿ ಅನೇಕ ವಿಷಯಗಳನ್ನು ಮಗುವಿಗೆ ಕಲಿಸುತ್ತಾಳೆ. ಮಕ್ಕಳು ಪುಟ್ಟ ಹೆಜ್ಜೆಗಳನ್ನು ಹಾಕುವಾಗ ಮುದ್ದು ಮಾತುಗಳು, ಅಕ್ಷರಗಳನ್ನು ಕಲಿಸುತ್ತಾಳೆ.ಮಕ್ಕಳಿಗೆ ನಡಿಗೆಯ ಜೊತೆಗೆ ನೆಡತೆಯನ್ನು ಕಲಿಸುತ್ತಾಳೆ. ವಿದ್ಯಾಶಾಲೆ ಕಲಿಸುವುದರ ಜೊತೆಗೆ ಮನೆಯಲ್ಲಿ ಅನೇಕ ವಿದ್ಯೆಗಳನ್ನು ಹೇಳಿಕೊಡುತ್ತಾಳೆ.ಅದಕ್ಕೆ ಹೇಳುವುದು ಪ್ರತಿ ವ್ಯಕ್ತಿಗೂ ತಾಯಿಯೇ ಪ್ರಥಮಗುರು. ಆದ್ದರಿಂದ ನಮ್ಮ ಕವಿಗಳು “ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ
ಮೊದಲ ಗುರುವು”,ಜನನಿಯಿಂದ ಪಾಠ ಕಲಿತ ಜನರು ಧನ್ಯರು “ಎಂದು ಹಾಡಿದ್ದಾರೆ. ಆದ್ದರಿಂದ ನಮ್ಮ ಜನ್ಮ ಭೂಮಿಯನ್ನು’ ಮಾತೃ ಭೂಮಿ’ ಅನ್ನುವುದು ವಾಡಿಕೆ.
ಅಮ್ಮನಿಗೆ ಬೇಕಾಗಿರೋದು ಮಕ್ಕಳ ಪ್ರೀತಿ ವಿಶ್ವಾಸ.
ತಾಯಂದಿರು ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರವರ ವ್ಯಕ್ತಿತ್ವ ರೂಪಿಸಿ ಮನುಷ್ಯರನ್ನಾಗಿ ಮಾಡುತ್ತಾಳೆ. ತಾಯಿ ಮಕ್ಕಳಿಂದ ಏನನ್ನು ಅಪೇಕ್ಷಿಸುವುದಿಲ್ಲ. ಮಕ್ಕಳಿಗೆ ಒಳ್ಳೆಯದಾಗಲೆಂದೆ ಅವಳ ಹೃದಯ ಮಿಡಿಯುತ್ತಿರುತ್ತದೆ. ಮಕ್ಕಳ ಒಳಿತಿಗಾಗಿ ಅವಳು ಬೇಡಿದ ದೇವರಿಲ್ಲ, ಮಾಡಿದ ಪೂಜೆಯಿಲ್ಲ.ಅದಕ್ಕೆ ಹೇಳುವುದು ಕಣ್ಣಿಗೆ ಕಾಣುವ ದೇವರು ಅಮ್ಮ ಅಲ್ಲವೇ! ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಎಂದಿಗೂ ಕೆಟ್ಟ ತಾಯಿ ಸಿಗಲಾರಳು. ಜಗತ್ತಿನಲ್ಲಿ ಸಮಯಕ್ಕೆ ತಕ್ಕಂತೆ ಎಲ್ಲರೂ ಬದಲಾಗುತ್ತಾರೆ. ಆದರೆ ತಾಯಿ ಮಾತ್ರ ಎಂಥ ಸಮಯದಲ್ಲೂ ಬದಲಾಗುವುದಿಲ್ಲ. ತಾಯಿದ್ದರೆ ತವರು ತಂಪಾಗಿರುತ್ತದೆ. ತಾಯಿಲ್ಲದ ಮನೆ ಅದು ಮನೆಯೇ ಅಲ್ಲ. ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಾಣ್ಣುಡಿ ನಿತ್ಯ ಸತ್ಯ.ದೇವರು ಎಲ್ಲಾ ಕಡೆಯಲ್ಲೂ ಇರಲು ಆಗುವುದಿಲ್ಲ ಎಂದು ತಾಯಂದಿರನ್ನು ಸೃಷ್ಟಿ ಮಾಡಿದ್ದಾನೆ.ಆಕೆ ನಮ್ಮನ್ನು ಸ್ಪರ್ಶಿಸಿದರೆ ಸಾಕು ನಾವು ಪುನೀತರಾಗುತ್ತೇವೆ.
ಜೀವನುದ್ದಕ್ಕೂ ಎಲೆಮರೆ ಕಾಯಿಯಂತೆ ದುಡಿಯುವ ಈ ಮಾತೆಗೆ ನಾವೇನು ಕೊಡಬೇಕು. ಅಮ್ಮನ ದಿನದಿಂದಾದರೂ ಪ್ರಿಯವಾದದ್ದನ್ನು ನೀಡಿದರೆ ಅದೊಂದು ಮರೆಯಲಾಗದ ಅನುರಾಗದ ಅನುಬಂಧ ಆಗುತ್ತದಲ್ಲವೆ.! ಅದರೆ ಅಮ್ಮನಿಗೆ ಬೇಕಾಗಿರುವುದು ಮುಖ್ಯವಾಗಿ ಮಕ್ಕಳ ಪ್ರೀತಿ-ವಿಶ್ವಾಸ.
ಅಮ್ಮನಿಗೆ ನಾನು ಚಿರಋಣಿ
ಅಮ್ಮನ ಒಂದು ಒಳ್ಳೆಯ ಆಶೀರ್ವಾದದಿಂದ ನಾವು ಎಲ್ಲೇ ಹೋದರೂ ಜಯಗಳಿಸಬಹುದು. ನಮ್ಮ ಜೀವಕ್ಕೆ ಜೀವ ಕೊಟ್ಟವರು, ಜೀವನವನ್ನು ಕಲಿಸಿದವರು,ನಮ್ಮ ಬದುಕಿಗೆ ಅರ್ಥ ಕೊಟ್ಟವರು,ಅವರ ಬಗ್ಗೆ ಎಷ್ಟು ಬರೆದರೂ ಕಡಿಮೆ. ನನ್ನ ತಾಯಿ ಕೂಡ ಅನಕ್ಷರಸ್ತೆ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಕಷ್ಟಪಟ್ಟು ನಮ್ಮನ್ನು ಓದಿಸಿದರು. ನಾನು ಅವರ ಆಶೀರ್ವಾದದಿಂದ ಇಷ್ಟು ಬರೆಯಲು ಕಲಿತ್ತಿದ್ದೇನೆ. ನನ್ನ ಮಗನಿಗೆ ಒಳ್ಳೆಯ ಸಂಸ್ಕಾರ ಕಲಿಸಲು ಹೇಳಿಕೊಟ್ಟ ಆ ನನ್ನ ತಾಯಿಗೆ ಚಿರಋಣಿ ಯಾಗಿರುತೇನೆ.
ಸಂಸಾರದಲ್ಲಿ ಬಂದ ಕಷ್ಟಗಳನ್ನು ತಾಳ್ಮೆಯಿಂದ ಸಹಿಸಿ,ಬದುಕನ್ನು ನಗುನಗುತ್ತಾ ಸಾಗಿಸಲು ನನಗೆ ಹೇಳಿ ಕೊಟ್ಟ ಆ ನನ್ನ ತಾಯಿಗೆ ಈ ಮೂಲಕ ಶತಕೋಟಿ ಪ್ರಣಾಮಗಳು. ನನ್ನಿಂದ ಕೆಲವು ಸಲ ತಾಯಿಗೆ ಬೇಸರವಾಗಿರಲೂಬಹುದು. ಈ ಮೂಲಕ ನಾನು ಅವರಿಗೆ ಕ್ಷಮೆ ಕೋರುತ್ತೇನೆ.
ತಾಯಿಯನ್ನು ನಿರ್ಲಕ್ಷಿಸಬೇಡಿ
ಇತ್ತೀಚಿನ ದಿನಗಳಲ್ಲಿ ತಾಯಿಯನ್ನು ದೂರ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಮಕ್ಕಳ ಪ್ರೀತಿ ಆರೈಕೆಯಿಂದ ವಂಚಿತಗೊಂಡ ಅನೇಕ ವೃದ್ಧ ತಾಯಂದಿರು ವೃದ್ಧಾಶ್ರಮ ಸೇರಿ ಬದುಕುವ ದುಸ್ಥಿತಿಯಲ್ಲಿದ್ದಾರೆ.ಇದು ತಾಯಂದಿರ ಬಗ್ಗೆ ಉಂಟಾಗುವ ತೀವ್ರ ನಿರ್ಲಕ್ಷ ಹಾಗೂ ಅವಮಾನವೀಯತೆಗೆ ಸಾಕ್ಷಿ. ಅವರಿಗೆ ಬೇಕಾಗಿರುವುದು ಆಸ್ತಿಯಲ್ಲ, ಪ್ರೀತಿ,-ವಿಶ್ವಾಸ. ಅವರಿಂದ ನಾವು ದೊಡ್ಡ ಸಂಪತ್ತನ್ನೆ ಪಡೆದಿರುವಾಗ,ಅವರಿಗೆ ಬೇಕಾದ ಪ್ರೀತಿ ವಿಶ್ವಾಸ ಕೊಡದಿರುವುದು ನಿಜಕ್ಕೂ ಅವಮಾನದ ಸಂಗತಿ.

ಆಧುನಿಕ ಯುಗದಲ್ಲಿ ಉದ್ಯೋಗದ ನಿಮಿತ್ತ ಬೇರೆ ಊರು ರಾಜ್ಯ ಹೊರದೇಶಗಳಲ್ಲಿ ಇರಬೇಕಾಗುತ್ತದೆ.ಹಾಗಂಥ ತಾಯಿಯನ್ನೇ ಮರೆಯಲಾದೀತೆ,ನಮಗೆ ಬದುಕನ್ನು ನೀಡಿ ಸಕಲ ಸಮೃದ್ಧಿ ಸುಗುಣಗಳನ್ನು ಕೊಟ್ಟ ಆ ತಾಯಿ ಪ್ರೀತಿ,ವಿಶ್ವಾಸದಿಂದ ವಂಚಿತರಾಗದಂತೆ ನೋಡಿಕೊಂಡರೆ ಆನಂದ ಆರೋಗ್ಯ ಕೂಡಾ.ಎಲ್ಲೇ ಇರಿ ತಾಯಿಯ ಬಗ್ಗೆ ಹೃದಯ ಮಿಡಿಯುತಿರಲಿ. ಕಾಣಿಸದೆ ದೈವಕ್ಕಿಂತ ಕಾಣುವ ತಾಯಿಯೇ ದೇವರು.

ನೆನಪಿಟ್ಟುಕೊಳ್ಳಿ ತಾಯಿ ನಮಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟಿರುತ್ತಾರೆ. ಮುದಿತನದಲ್ಲಿ ಅವರು ಎಲ್ಲಾ ರೀತಿಯಿಂದಲೂ ಸಂತೋಷವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜೀವನದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಅಮ್ಮನನ್ನು ವರ್ಷಕ್ಕೆ ಒಂದು ಸಾರಿಯಲ್ಲ ಪ್ರತಿದಿನ ಸ್ಮರಿಸಿಕೊಳ್ಳಬೇಕು. ನಮ್ಮ ಉಸಿರೇ ತಾಯಿ ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿರಬೇಕು.ತಾಯಿಯನ್ನು ನಿರ್ಲಕ್ಷಿಸುವುದು ಬೇಡ, ಪ್ರೀತಿ- ವಿಶ್ವಾಸ,ಅಭಿಮಾನ ತೋರಿಸಿ. ಅದೇ ನಾವು ತಾಯಿಗೆ ಸಲ್ಲಿಸುವ ಹಿರಿದಾದ ಸೇವೆ.
ಹಾಗೇ ಜಗತ್ತಿನ ಎಲ್ಲ ತಾಯಂದಿರಿಗೂ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು.