ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಿರುಪತಿ ಭಂಗಿ ಅವರ ಸುಲಲಿತವಾದ ನಿರೂಪಣೆ, ಪಾತ್ರ ಕಟ್ಟಿಕೊಡುವ ನೈಜತೆ ಜೊತೆಗೆ ಬಾಗಲಕೊಟೆಯ ಢಾಳಾದ ಭಾಷೆ, ಶೈಲಿ.. ಅವರ ಈ "ಇಜ್ಜೋಡು" ಕಥೆಯನ್ನೇ ನೋಡಿ.. ಕಥೆಯು ಸ್ಟಿರಿಯೋ ಟೈಪ್ ಆಗಿ ಇರದೇ ಹೊಸ ಆಯಾಮವನ್ನು ಕಂಡು ಕೊಳ್ಳುತ್ತದೆ.. ನಿಮ್ಮ ಓದಿಗಾಗಿ..
ತಿರುಪತಿ ಭಂಗಿ
ಇತ್ತೀಚಿನ ಬರಹಗಳು: ತಿರುಪತಿ ಭಂಗಿ (ಎಲ್ಲವನ್ನು ಓದಿ)

ಅಪ್ಪ ಎಷ್ಟ ಚಲೋ ಮನಸ್ಯಾ, ಯಾವಾಗ್ಲೂ ನಂದ ಚಿಂತಿ ಮಾಡ್ತಿರ್ತಾನ, ಅವ್ವನ ಪ್ರೀತಿನೂ ಅಂವ್ನ ಕೊಡ್ತಾನ, ಹುಟ್ಟಿದ ನಾಕ ತಿಂಗಳಕ ಅವ್ವ ಮಲಿ ಕುಡಿಸೂದ ವಲ್ಯಾ.. ಭಾಳ ಮಲಿ ಕುಡಿಸಿದ್ರ, ಮೋತಿ ಮ್ಯಾಲಿ ಕಳೆ ಹೊಕ್ಕೈತಿ ಅಂತ ಹಟಾ ಹಿಡದ ಕುಂತಾಗ, ತನಗ ಆಡಿನ ಹಾಲ ಕುಡಿಸಿ ಜ್ವಾಕಿ ಮಾಡಿದ್ದ ಕಥಿ ಇಡೀ ಊರಿಗೆ ಊರ ಹೇಳಿದ್ದು ಮಂದ್ಯಾನ ಮನಸನ್ಯಾಗ ಅಚ್ಚ ವತ್ತಿದಂಗ ಆಗಿತ್ತು.

ತಿರುಪತಿ ಭಂಗಿ ಅವರ “ಇಜ್ಜೋಡು” ಕಥೆಯಿಂದ…


“ಇತ್ತಿತ್ತಲಾಗ ಮಗಾ ನಿಂತಲ್ಲಿ ನಿಲ್ಲಂಗಿಲ್ಲ, ಕುಂತಲ್ಲಿ ಕುದ್ರಂಗಿಲ್ಲ, ಕೆಲಸಿಲ್ಲ ಬಗಸಿಲ್ಲ ಉಡಾಳ ಹುಡಗರ ಸಂಗ ಕಟಗೊಂದ ಪಿರಿಪಿರಿ ಕಾಲಾಗ ನಾಯಿ ಗೆರಿ ಇದ್ದರಾಗತೆ ಊರ-ಕೇರಿ ಸುತಗೋತ ಗುಂಡರಗೂಳಿಗತೆ ಅಡ್ಡಾಡಕೋತ ಹೊಂಟಾನ; ಹಿಂಗಾದ್ರ ಮುಂದಿನ ಗತಿಯೇನು?” ಅಂತ ತನ್ನ ಬೋಳದೆಲಿಮ್ಯಾಲ ನಾಕೈದ ಸಾರಿ ಕಯ್ಯಾಡಸ್ಕೋತ ಅಮರಪ್ಪ ಒಲಿಮಂದ ಕುಂತ ಟಬಾಟಬಾ ರೊಟ್ಟಿಬಡಿತಿದ್ದ ಹೆಂಡತಿಗೆ ಮಗನ ಪಿರ್ಯಾದಿ ಹೇಳತಿದ್ದ. ಗಂಡನ ಮಾತ ನನಗೇನ ಸಮಂದಿಲ್ಲ, ಕಿವಿಯಾಗ ಹೋಗಿಯೇ ಇಲ್ಲ ಅನ್ನು ಹಂಗ ತೆವಿಯಾಗಿನ ರೊಟ್ಟಿ ಹೊಳಸಿ ಹಾಕಿ, ಮತ್ತ ಒಂದ ಮುಟಗಿ ಹಿಟ್ಟ ತಗೊಂದ, ಅದರ ಮ್ಯಾಲ ಒನಾ ಹಿಟ್ಟ ಉದರ್ಸಿ, ಕಮಲಿ ‘ಟಬುಟುಬು’ ರೊಟ್ಟಿ ಬಡಿಯಾಕ ಸುರುಮಾಡಿದ್ಳು. “ನಾ ಇಲ್ಲಿ ದನದ ಗತೆ ಒದ್ರಾಕತ್ತಿನಿ, ನೀ ನಿನ್ನ ಪಾಡಿಗೆ ರೊಟ್ಟಿ ಮಾಡಾಕತ್ತಿ..ಮಗನ ಬಗ್ಗೆ ಒಂದ ತಟಗರಾ ಚಿಂತಿ ಮಾಡ್ತಿಯಾ ನೀನು?” ಹೆಂಡತಿ ತನ್ನ ಮಾತಿಗೆ ಕಿಮ್ಮತ್ ಕೊಡಲಾರ್ಕ ಅಮರಪ್ಪ ಕಣ್ಣ ಕೆಂಪಗ ಮಾಡ್ಕೊಂಡ, ಕೈ ಹಿಚಗಕೋತ ಪಡಸಾಲಿ ತುಂಬ ಅತ್ತಿಂದ ಇತ್ತ..ಇತ್ತಿಂದ ಅತ್ತ ಬಾಲಾ ಸುಟ್ಟಗೊಂದ ಬೆಕ್ಕಿನಗತೆ ಅಡ್ಡಾಡಾಕತ್ತಿದ. ಅಷ್ಟಾದ್ರೂ ಕಮಲಿ ತಾನು ಮತ್ತೊಂದು ಗ್ರಹದಲ್ಲಿ ಇದ್ದಿನಿ, ಅಲ್ಲಿಗೆ ಯಾವ ದ್ವನಿನೂ ಕೇಳುದಿಲ್ಲ, ಅನ್ನುವ ಮುಖಭಾವ ಹೊತ್ತು ರೊಟ್ಟಿ ಬಡೆಯುತ್ತಿದ್ಳು. “ಕ್ವಾಣಿನ ಮುಂದ ಕಿನ್ನೂರಿ ಭಾರ್ಸಿದಂಗಾತ ನನ್ನ ಕಥಿ, ನಿನ್ನ ಮುಂದ ಹೇಳುಕಿನ ಹೋಗಿ ಕಲ್ಲ ಬಂಡಿ ಮುಂದ ನಿಂತಕೊಂಡ ಹೇಳಿದ್ರ ಅದಾದ್ರೂ ಮಾತಾಡ್ತಿತ್ತೇನೋ..? ನಿನಗ ಸೊಕ್ಕ ಬಂದೈತಿ, ನಿಮ್ಮ ಅಪ್ಪನ ಸಿರಿಮಂತಿಗೆ ನಿನ್ನ ಹಂಗ ಮಾಡಸ್ತೈತಿ, ಇಂತಾ ಆಟಾ ನಮ್ಮ ಮನಿಯಾಗ ತೋರ್ಸಿದ್ರ ನೆಡಿತೈಂತ ನೀ ಅನಕೊಂಡ್ರ ಎಷ್ಟಕಾಲಕ್ಕೂ ಸಾದ್ಯ ಇಲ್ಲ” ಅಮರಪ್ಪ ಎಲ್ಲೋ ಇದ್ದ ಮಾತಿನ ಲಹರಿ, ಪೂರ್ತಿ ಬದಲಿಸಿದ. ಮಗನ ಬಗ್ಗೆ ಚಿಂತಿ ಮಾಡ್ತಿದ್ದವನು, ಏಕಾಏಕಿ ಪಟಕ್ನ ಹೆಂಡತಿ ತೌರ ಮನಿ ಕಡೆ ತನ್ನ ಮಾತಿಗೆ ಜಿಗಿತ ಕೊಟ್ಟ. ಒಲಿಮುಂದ ಕುಂತ ಕಮಲಿ ಗಂಡನ ಮಾತ ಕಿವಿಯಾಗ ಬಿದ್ದಾಗ ಒಲೆಯಲ್ಲಿ ಬೆಂಕಿ ಉರಿದಂತೆ ಅಕಿ ಮೈಯಲ್ಲ ಉರಿಯತೊಡಗಿತು. “ದಿನಾ ಒಂದಕ್ಕೂ ನಮ್ಮ ತೌರಮನಿಯವರ ಚಪ್ಪಲಿ ಕಡಿಲಿಕಂದ್ರ ಮನಸಿಗೆ ಹೆಂಗ ಸಮಾಧಾನ ಸಿಕ್ಕಿತ ನಿನಗ?” ಎಂದು ಕಮಲಿ ಒಲಿಮ್ಯಾಲಿನ ರೊಟ್ಟಿನ, ಬೆಂಕಿಯಲ್ಲಿ ಬಿಸಿಮಾಡಿದಂಗ ಒಂದ ಮಾತ ಬಿಸಿಮಾಡಿ ಹೊರಚಲ್ಲಿದಳು. ಹೆಂಡತಿಯ ಮಾತ ಅಮರಪ್ಪನ ಮೈ-ಕೈ ಚುರಗುಟ್ಟುವಂತೆ ಮಾಡಿದಾಗ, ಸಿಟ್ಟನೆತ್ತಿಗೇರಿ, ಕೈಯಾಗಿದ್ದ ಹದಿನೈದನೂರ ರೂಪಾಯ ಚೀನಾ ಮೊಬೈಲ್ ತಗೊಂದ ಜಗ್ಗಿನಿಂತ ರೊಟ್ಟಿ ಮಾಡಕೋತ ಒಲಿಮುಂದ ಕುಂತ ಕಮಲಿಯತ್ತ ಬೀಸಿದ. ‘ಪಡ್’ ಅಂತ ಬೊಬೈಲ್ ಅಕಿ ತೆಲಿಗೆ ಬಡದದ್ದ ತಡಾ, ಕಮಲಿ ತೆಲ್ಯಾಗಿಂದ ಚಿಲ್ಲನೇ ರಕ್ತ ಪುಟಿಯ ತೊಡಗಿತು. ನೋವಿನ ಸಂಕಟಾ ತಾಳಲಾರ್ದಕ್ಕ “ಅಯ್ಯೋ.. ನನ್ನ ಕೊಂದ್ನೋ.. ನನ್ನ ಹಾಟ್ಯಾನ ಗಂಡ, ಇವನ ಮೋತಿಗೆ ಮಣ್ಣ ಹಾಕ್ಲಿ, ಯಾವ ಜನ್ಮದ ಶತೃನೋ.. ಈ ಜನ್ಮದಾಗ ನನಗ ಗಂಡ ಆಗಿ, ನನ್ನ ಗುಂಡಗಿ ಮುನಗಸಾಕತ್ಯಾನೋ..” ಎಂದು ‘ಲಬೋ ಲಬೋ’ ಹೊಯ್ಯಕೋತ ದೊಡ್ಡ ದನಿಮಾಡಿ ಕಿರಚಿಕೊಂಡ್ಳು. ಹೆಂಡತಿ ಆಡಿದ ಕೆಟ್ಟಕೆಟ್ಟ ಮಾತ ಕೇಳಿ ಅಮರಪ್ಪನ ಸಿಟ್ಟು ಮತ್ತ ನೆತ್ತಿಗೇರಿತು. “ನಾ ಇರಾಕಲೇನ ನನ್ನ ಮೋತಿಮ್ಯಾಲ ಮಣ್ಣ ಹಾಕತಿಯಾ ಬಿದ್ದಾಡಿ” ಅಂತ ಲುಂಗಿ, ಎತ್ತಿ ಮ್ಯಾಲ ಕಟಗೊಂದ ಹೆಂತಿ ದುಬ್ಬದ ಮ್ಯಾಲ ಹಿಗ್ಗಾಮುಗ್ಗಾ ಬಲ್ಲಂಗ ಥಳಿಸಿದ. ಒಲಿಮುಂದೆ ಕುಂತವಳನ್ನು ದರದರ ತುರಬಾ ಹಿಡದ ಎಳಕೊಂಡ, ನಡು ಪಡಸಾಲೆಗೆ ತಂದು, ಕಾಲಿನಿಂದ ಒದಿಯಾಕ ಹತ್ತಿದ. ಆಗಂತು ಕಮಲಿ ಮುಗಿಲ ಹರದ ಬೀಳುವಂಗ ಕಿರಚತಿದ್ದಳು. ಅದರ ಜೋಡಿ ಬೈಗಳಾ ಸಣ್ಣಂಗ ಸುರು ಇದ್ದು. ಮಗ್ಗಲ ಮನಿಯವ್ರು ಒಂದ ವ್ಯಾಳೆ ಬರಲಿಲ್ಲಂದ್ರ, ಅವತ್ತ ಕಮಲಿ ಹೆಣ ಅಕ್ಕಿದ್ಳು. ಅಮರಪ್ಪನ ರಟ್ಯಾಗ ಕೈಹಾಕಿ ಮಗ್ಗಲ ಮನಿ ಸುಂಕಪ್ಪ ತಳ್ಳಕೊಂಡ ಮನಿ ಅಂಗಳಕ ತಂದ, ಕಮಲಿ ತೆಲಿ ಒಡದ ರಾಮಾರಗತ ಆಗಿತ್ತು, ಪಡಸಾಲಿ ತುಂಬ ರಗತ ಚಿತ್ತಾರ ಬಿಡಿಸಿದಂಗ ಆಗಿತ್ತು. ಭಾರತೆಕ್ಕ, ಸಿದ್ದಮ್ಮ,ಮಗ್ಗಲ ಮನಿ ಹೆಣಮಕ್ಕಳು ಕಮಲಿ ತೆಲಿಯಿಂದ ದಳದಳ ಸೋರು ರಗತಾ ನೋಡಿ “ಅಯ್ಯ ಯವ್ವಾ.. ದೊಡ್ಡ ಅನಾಹುತಾ ಆಗೇತಿ” ಅಂತ ಕಮಲಿಗೆ ಒಂದ ಗುಟಕ ನೀರ ಕುಡಿಸಿದ್ರು. ಕಮಲಿ ಹಂಗ ಗಂಡನ ಬೈತಾನೇ ಇದ್ಳು. “ಲಗೂನ ದವಾಖಾನಿಗೆ ಒಯ್ಯಬೇಕ ಇಲ್ಲಂದ್ರ ಜೀವಕ್ಕ ಆಪತ್ತ ಕಟ್ಟಿ ಇಟ್ಟದ್ದ” ಎಂದು ಮಗ್ಗಲ ಮನಿ ಹೆಂಗಸ ಭಾರತೆಕ್ಕ ಕೂಗಿದ್ಳು. ಓಣ್ಯಾಗಿದ್ದ ಅಮರಪ್ಪನ ಸಂಬಂದಿಕರು ಹನಮ್ಯಾ ಮತ್ತ ಕಲ್ಯಾ, ಒಂದ ಟಮ್ ಟಮ್ ಕರಸಿ, ಕಮಲಿನ ಅದರಾಗ ಹಕ್ಕೊಂಡ ಬಾಗಲಕೋಟಿ ದವಾಖಾನಿಗೆ ಕರ್ಕೊಂಡ ಹ್ವಾದ್ರು. ಅಂಗಳದಾಗ ಕುಂತ ಅಮರಪ್ಪ ಹೆಂತಿನ ತಗೊಂದ ಹೊಂಟದ್ದ ನೋಡಿ, “ಹಾಳಾಗಿ ಹೋಗ್ಲಿ ಪೀಡಾ” ಎಂದು ಅನಕೋತ ಅಂಗಳದಾಗಿಂದ ಮೆಲ್ಲಕಾಸ ಎದ್ದ ಬಂದು ಪಡಸಾಲಿಯಲ್ಲಿ ಮೈಚಲ್ಲಿ ಕುಂತ. ಬಾಗಲಕೋಟಿ ದಾವಾಖಾನಿಗೆ ಹೋಗ ಹೋಗತ ಕಮಲಿ ನೆಡದ ಘಟನೆ ಕಲ್ಲಪ್ಪನ ಪೋನ್‍ನಿಂದ ಕಾಲ್ ಮಾಡಿಸಿ ತನ್ನ ಅಣ್ಣಂದಿರ ಕಿವಿಗೆ ಹಾಕಿದ್ಳು.


ಮಂದ್ಯಾ ಒಂದ ಮುಂಜಾನೆ ತಂಬಗಿ ಹಿಡಕೊಂಡ ಹ್ವಾದಂವ ಅವರ ಅವ್ವ ಅಪ್ಪನ ಜಗಳಾದ ಎರಡ ತಾಸಿಗೆ ಮನಿಕಡೆ ಮುಖಾಮಾಡಿದ್ದ. “ಇಟ್ಟೊತನಕಾ ಎಲ್ಲಿ ಹೋಗಿದ್ದೋ ಬೇಬರ್ಸಿ, ನಿಮ್ಮ ಅಪ್ಪ ನಿಮ್ಮ ಅವ್ವನ ಬಲ್ಲಂಗ ಬಡದ ಹಣ್ಣಗಾಯ ನೀರಗಾಯ ಮಾಡ್ಯಾನ, ನೀ ನೋಡಿದ್ರ ಕುಂಟ ಎತ್ತಿನಗತೆ, ಮೆಲ್ಲಕಾಸ ದಟ್ಟೆದಟ್ಟೆ ಅಂತ ನೆಡ್ಕೋತ ಬರಾಕತ್ತಿಯಲ್ಲ” ಎಂದು ಮಗ್ಗಲ ಮನಿ ಭಾರತೆಕ್ಕ ಮಂದ್ಯಾಗ ಎರಡಮೂರ ತಾಸಿನ ಹಿಂದಾದ ಘಟನೆಯನ್ನು ಚುಟುಕಾಗಿ ಬೈಕೋತ ಹೇಳಿ ಮುಗಿಸಿದ್ಳು. ಮಂಡ ಚೆಡ್ಡಿ ಹಕ್ಕೊಂದಿಂದ ಮಂದ್ಯಾ ಬಡಬಡಾ ಮನಿ ಒಳಗ ಹ್ವಾದ. ಅಮರಪ್ಪ ತಪಸ್ಸಿಗೆ ಕುಂತ ಋಷಿಗಳಂತೆ ಪಡಸಾಲಿಯೊಳಗ ಕುಂತಿದ್ದ. ಜಗಳದಾಗ ಅಪ್ಪನ ಕಡೆ ಎಂದೂ ತಪ್ಪ ಇರಾಂಗಿಲ್ಲ ಅನ್ನೂದು ಹುಟ್ಟಿನಿಂದ ಮಂದ್ಯಾ ನೋಡ್ಕೊಂಡ ಬಂದಿದ್ದ. ಹಿಂಗಾಗಿ ಅವರಪ್ಪನ ಮೆಲ್ಲಕ ನೋಡಿದ, ಅಮರಪ್ಪ ಪ್ರಶಾಂತವಾಗಿ ಕುಳತಿದ್ದ. ಮೆಲ್ಲಕ ಅಮರಪ್ಪನ ಹಂತೇಕ ಹೋಗಿ, “ಅಕಿ ಜೋಡಿಯಾಕ ತಳಕಿಗೆ ಬಿದ್ದಿಯಪ್ಪಾ ನೀನು? ಕಲ್ಲ ಒಗದ ಸಿಡಸ್ಕೋಬಾರ್ದ ಅಂತಾರಲ್ಲ, ಅದ ನಿನಗ ಗೊತ್ತಿಲ್ಲೇನ?” ಎಂದು ಮಂದ್ಯಾ ಅವರಪ್ಪಗ ಎರಡ ಅಂದರ ಎರಡ ಮಾತ ಹೇಳಿದ. ಅದಕ್ಕ ಅಮರಪ್ಪ ನನ್ನ ಕ್ಷಮಸಪ್ಪ ನಿನ್ನ ಶ್ರಿಮಂತ ತಾಯಿ ಮ್ಯಾಲ ಕೈ ಮಾಡಬಾರದಾಗಿತ್ತು ಮಾಡಿಬಿಟ್ಟೆ ಅಂತ ಅಮರಪ್ಪ ಸಣ್ಣ ಹುಡಗುರಗತೆ ಗಳಗಳ ಅಳಾಕ ಸುರುಮಾಡಿದ. ಅವರಪ್ಪನ ಜೋಡಿ ಮಂದ್ಯಾನೂ ಕಣ್ಣೀರ ಹಾಕತೊಡಗಿದ. “ನೀ ಬಾಗಲಕೋಟಿಗೆ ಕಲ್ಲಪ್ಪ ಕಾಕಾಂದ ಬೈಕ್ ತಗೊಂದ ಹೋಗು, ಅಕಿ ತೆಲಿಗೆ ಪೆಟ್ಟ ಆಗೇತಿ, ಈಗ ಅಕಿನ ತಗೊಂದ ಹೋಗ್ಯಾರ , ನೀನು ಅಲ್ಲೆ ನಿಂತ ತೋರಸ್ಕೊಂಡ ಬಾ.. ಮನ್ನೆ ಎತ್ತಗೊಳ ಮಾರಿದ ಹದಿನೈದ ಸಾವಿರೂಪಾಯಿ ಆ ಸಂದಕದಾಗ ಅದಾವ ತಗೊಂದ ಹೋಗ” ಅಂತ ನಡುನ್ಯಾಗ ಇದ್ದ ಸಂದಕದ ಚ್ಯಾವಿ ಅಮರಪ್ಪ ಮೆಲ್ಲಕ ಬಿಚ್ಚಿ ಮಂದ್ಯಾಗ ಕೊಟ್ಟ. ನೀನ ಕೊಡಪೋ ಅಂದ..ಅಮರಪ್ಪಾ ಈಗಾ ಹಿಡ್ಕೋ ಇನ್ನಮ್ಯಾಲ ನೀನ ಯಜಮಾನ ಅಂತ ವ್ಯಂಗೆದಲ್ಲಿ ಅಂದರೂ ಆ ಮಾತಲ್ಲೊಂದಿಷ್ಟು ಪ್ರೀತಿ ಇತ್ತು. ಮಂದ್ಯಾ ಮೆಲ್ಲಕ ಹೋಗಿ, ಮೂಲ್ಯಾಗಿದ್ದ ಸಂದಕ ಚಾಯಿ ತಗದ ರೊಕ್ಕಾ ತಗೊಂದ, ಅಲ್ಲೆ ಇದ್ದ ಒಂದ ಪ್ಯಾಂಟ ಸಿಗಸ್ಕೊಂಡ, ಮ್ಯಾಲೊಂದ ಕಪ್ಪ ಅಂಗಿ ಹಕ್ಕೊಂಡ, ಕೊಕ್ಕಾ ಪ್ಯಾಂಟಿನ ಕಿಸೇದಾಗ ಜ್ವಾಕಿಲೇ ಇಟಗೊಂದ. ಕಲ್ಲಪ್ಪ ಕಾಕಾಂದ ಬೈಕ್ ಮ್ಯಾಲ ಕುಂತ ಕಿಕ್ಕ ಹೊಡ್ಯಾಕತ್ತಿದ. ಅಮರಪ್ಪ ದುಡುದುಡು ಪಡಸಾಲ್ಯಾಗಿಂದ ಬಂದವ್ನ “ನಿದಾನ್ಕ ಹೋಗಪಾ..ರೋಡನ್ಯಾಗ ಜ್ವಾಕಿ” ಎಂದು ಮಂದ್ಯಾಗ ತೆಲಿಮ್ಯಾಲ ಕೈಯಿಟ್ಟು ಅಂವನ ಗೇನುದ್ದ ಕುದಲ ಮ್ಯಾಲೆ ಕೈಯಾಡಿಸಿದ. ಮಂದ್ಯಾ ಪಿಕಿಪಿಕಿ ಅವರಪ್ಪನ ಮೋತಿ ನೋಡಿದ. “ಅಪ್ಪ ಎಂದೂ ಇಲ್ಲದಂವ ಇಂದ ಹಿಂಗತಿಯಾಕ ನನ್ನ ತಲಿ ಕೈಯಾಡಿಸಿದ..?” ಅಂತ ಹಳಹಳಿ ಮಾಡ್ಕೋತ ಬೈಕ್ ಚಲು ಮಾಡಿದ.


ಮದವಿ ಆಗಾಕ ಒಬ್ಬರಿಗೊಬ್ಬರಿಗೆ ಮನಸ ಇರಲಿಲ್ಲಂದ್ರ ಮದವಿ ಯಾಕ ಆಗ್ಬೇಕ..? ಆದ್ರೂ ಆಗವಲ್ಲಕಂತ.. ಮನಸಿಲ್ಲಂದ್ರ ಮತ್ತ ಯಾಕ ಕೂಡಿ ಮಕ್ಕೊಬೇಕು..? ನನ್ಯಾಕ ಹಡಿಬೇಕು..? ಮದವಿ ಆಗಿ ಇಪ್ಪತೈದ ವರ್ಷ ಆದ್ರೂ ಇನ್ನ ಈ ಅವ್ವ-ಅಪ್ಪಂದೂ ಜಗಳ ಕಮ್ಮಿ ಆಗವಲ್ದು ಅಂದ,್ರ ಇದ ಈ ಜಗತ್ತಿಗೆ ಒಂದ ಸವಾಲ..! ಬರೀ ಇವರ ಜಗಳಾ ಕೇಳಿ ಕೇಳಿ ಸಾಕಾಗಿ ಹೋಗೈತಿ. ಒಂದ ದಿನಾನೂ ಮನ್ಯಾಗ ನಕ್ಕೊಂತ ಉಂಡಿಲ್ಲ,ತಿಂದಿಲ್ಲ. ಒಂದೊಂದ ಸಲ ಅಂತೂ ಉಂಡರ ಉಂಡ್ಯಾ.. ಉಣಲಿಕ ಇಲ್ಲಾ. ಸಾಲಿಗೆ ಹ್ವಾದ್ರೂ ಇವರ ಜಗಳ ಕಣ್ಣ ಮುಂದ ಬಂದಂಗ ಆಗಿ, ಕಣ್ಣ ಕತ್ತಲ ಆದಂಗ ಅಕೈತಿ, ಮಾಸ್ತರ ಪಾಠ ಹೇಳತಿದ್ರೂ ಒಂದ ಚೂರು ತೆಲಿಯಾಗ ಹೋಗಂಗಿಲ್ಲ. ನಾ ಹಿಂತವ್ರ ಹೊಟ್ಯಾಗ ಯಾಕ ಹುಟ್ಟಿದ್ನೋ ಅಂತ ರಗಡ ಸಲ ಕಣ್ಣೀರ ಹಾಕಿನಿ, ಏನ್ ಮಾಡೂದೈತಿ ಹಣೆಬರಾ ದೇವ್ರ ಹೆಂಗ ಬರ್ದನೋ ಹಂಗ ನಡಿಬೇಕಲ್ಲಾ? ಮಂದ್ಯಾ ಬೈಕ್ ಓಡಸ್ಕೋತ ತಾನೊಬ್ನೇ ತನ್ನೊಂದಿಗೆ ಮಾತಾಡುತ್ತಿದ್ದ. ಇವರ ಆಡಿದ ಜಗಳ ನೆನಪಿಗೆ ಬಂದ ಇಡೀ ಮನಸ್ಸಿನ ನೆಮ್ಮದಿನ ಹಾಳಮಾಡತೈತಿ. ಅವ್ವ ತನ್ನ ತೌವರೂರಿನವ್ರು ಭಾಳ ಶ್ರೀಮಂತರ ಅದಾರಂತ ಡೌಲ ಮಾಡತಾಳ.. ಅಪ್ಪಾ ಬಡವ ಅದಿನಂತ ಅಸಮಾಧಾನ ಪಡ್ತಾನ. ಈ ಇಜ್ಜೋಡ ಸಂಬಂಧ ಕುಡ್ಸಿದ ಸುಳಿಮಕ್ಕಳ್ನ ಮೊದಲ ಒದಿಬೇಕು ಅಂತ ಮಂದ್ಯಾ.. ದವಾಖಾನಿ ಮುಟ್ಟುತನಕ ಅವ್ವ ಅಪ್ಪನ ಚಿಂತಿ ಮಾಡ್ಕೊಂತ ಹ್ವಾದ.
ದವಾಖಾನಿ ಸುತ್ತಮುತ್ತ ಬೈಕಾ, ಕಾರಾ,ಜೀಪಾ, ಹೆಂಗಬೇಕಾದಂಗ ತರ್ಬಿದ್ರು. ದವಾಖಾನಿ ಸುತ್ತಮುತ್ತ ಗಿಜಿಗಿಜಿ ಗದ್ದಲಿತ್ತು. ಮಂದ್ಯಾ ಮೆಲ್ಲಕ ಬೈಕ್ ಒಂದ ಕಡೆ ತುರಕಿ ದವಾಖಾನಿ ಒಳಗ ಹ್ವಾದ. ಅಲ್ಲಿ ದವಾಖಾನಿ ತುಂಬ ಕಮಲಿ ತೌವರೂರವರ ಮಂದಿ ತುಂಬಿ ತುಳಕತಿತ್ತು. ಕಮಲಿ ಸುತ್ತ ಜನಾಜಾತ್ರಿ ಆಗಿತ್ತು. ಕಮಲಿಯ ಇಬ್ರು ಅಣ್ಣಂದಿರು ಅಲ್ಲಿಯೇ ಇದ್ರು. ನೋಡಾಕ ದೊಡ್ಡ ಆಳಗೊಳು, ದಪ್ಪದಪ್ಪ ಮೀಸೆ, ಅಗಲವಾದ ಎದಿ, ಕುಸ್ತಿ ಪೈಲವಾನರಗತೆ ಮೈಕಟ್ಟು. ಅವರನ ನೋಡಿದ್ರ ನಾಕ ಮಂದಿ ಹೊಡಿಯುವ ತಾಕತ್ತು ಎದ್ದ ಕಾಣತಿತ್ತು. ಅವರ ಬೆನ್ನ ಹಿಂದ ಹುಟ್ಟಿದ ಕಮಲಿ ಸಬೂಳ ಮೈಕಟ್ಟಿ, ಚೂಪಮೂಗಿನ ಚಲುವೆ. ಒಬ್ಬಾಕಿನ ತಂಗಿ ಅಂತ ಇಬ್ಬರೂ ಅಣ್ಣಂದಿರಗೆ ಇಕಿನ ಕಂಡ್ರ ಭಾಳ ಪ್ರೀತಿ. ಮಂದ್ಯಾ ಬಂದದ್ದ ಗೊತ್ತಿದ್ರೂ ಅವರ್ಯಾರೂ ಇಂವಗ ಕ್ಯಾರೇ ಅನಲಿಲ್ಲ. ಮಂದ್ಯಾನ ಅವ್ವನ ಅಣ್ಣಂದಿರು ಅಮರಪ್ಪನ ಮ್ಯಾಲ ಕಟಾಕಟಾ ಹಲ್ಲ ಕಡಿಯಾಕ ಹತ್ತಿದ್ರು. “ಇವತ್ತ ಅಂವ್ನ ತೆಲಿ ಕಡ್ದ ಬಿಡೂನು ಸುಳಿಮಂಗಂದ, ನಮ್ಮ ತಂಗೇನ ನಮಗ ವಜ್ಜಿ ಅಲ್ಲ, ಅಂತ ಮಾತಾಡ್ತಿದ್ರು. “ಜೀವಾಪಾವ ತಗಿಬ್ಯಾಡ್ರಿ ಕೈಕಾಲ ಮುರದ ಮೂಲಿಗೆ ಕುಂದ್ರಸ್ರೀ” ಅಂತ ಕಮಲಿಗೆ ಜನ್ಮಾ ಕೊಟ್ಟ ಅವರಪ್ಪ ಗಂಡ ಮಕ್ಕಳಿಗೆ ಉಪದೇಶ ಮಾಡ್ತಿದ್ದ. ಮಂದ್ಯಾ ಅವರಾಡು ಮಾತ ಕೇಳಿ ತಾನೇನಾದ್ರೂ ದಿಕ್ಕ ತಪ್ಪಿ ಬ್ಯಾರೆ ಗ್ರಹಕ್ಕ ಏನಾದ್ರೂ ಬಂದಗಿಂದನೇನೋ.. ಅಂತ ಅನುಮಾನಿಸಿದ. ಅವರಾಡುವ ಮಾತು ಅಕ್ಷರ ಸಹ ಸತ್ಯ ಇದ್ದವು. ಇವ್ರು ಮೊದಲ ಬುದ್ದಿಗೇಡಿ ಸೂಳಿಮಕ್ಳು, ತಂಗಿ ಗಂಡನ ಕೊಂದ ಅಕೀನ ರಂಡಿ ಮಾಡಿ ಕುಂದ್ರಸೂ ವಿಚಾರ ಮಾಡ್ತಾರಂದ್ರ ಇವ್ರೆಷ್ಟರ ಜಾಣರ ಇರ್ಬೇಕು..? ಯಾವ ಗಂಡ-ಹೆಂಡಿರ ಜಗಳಾ ಆಡಂಗಿಲ್ಲಾ..? ಒಡದ ಮನಸ್ಸು ಹೆಂಗಾರ ಮಾಡಿ ಬೆಸದ ಒಂದ ಮಾಡೂದ ಬಿಟ್ಟ, ಕೊಲ್ಲತೀವಂತಾರಲ್ಲಾ ಈ ಕ್ವಾಣಸೂಳಿಮಕ್ಕಳು.? ಈ ಬುದ್ದಿಗೇಡಿ ಜನ್ರು ಹೇಳಿದಂಗ ಮಾಡ್ತಾರೆ, ಮೊದಲ ರೊಕ್ಕ ಇದ್ದ ಕುಳಾಗೋಳು ಅಂತ ಮಂದ್ಯಾ ಭಾಳ ಎಚ್ರರಗೊಂಡ. ಅಪ್ಪ ಏನಾರ ಜರಗಡತಾ ಇವರ ಕೈಯಾಗ ಸಿಕ್ಕರ ಅಂವ್ನ ಕಥಿ ಮುಗಸ್ತಾರ, ಏನ್ಮಾಡೂದು? ಅಂತ ಮಂದ್ಯಾ ಕೆಂಡತುಳಿದವ್ರಗತೆ ಚಡಪಡಿಸತಿದ್ದ. “ಲೇ ಮೂಳಸೂಳಿಮಗನ ಎದಿ ಉದ್ದ ಬೆಳದಿ ನಿಮ್ಮ ಅಪ್ಪನ ಹಿಡದ ನಾಕ ಒದಿಯಾಕ ನಿನಗೇನ ಗೂದಿ ಆಗೇತ್ಲೆ” ಮಂದ್ಯಾನ ಅವ್ವನ ಹಿರಿ ಅಣ್ಣ ಪೆದ್ದರ ತರಾ ಇದ್ದ ಮಂದ್ಯಾನ ನೋಡಿ ಗುಡಗಿದ. ಮಂದ್ಯಾ ಅಡಕೊತ್ತನ್ಯಾಕ ಅಡಕಿ ಸಿಕ್ಕವ್ರಗತೆ ಮೋತಿ ಸಪ್ಪಗ ಮಾಡಕೊಂಡ ನಿಂತಕೊಂಡ. ಇವತ್ತ ನಿಮ್ಮ ಅಪ್ಪನ ಹರಾಹರಾ ಅನಸ್ತಿವ ಅಂತ ಮಂದ್ಯಾನ ಅವ್ವನ ಕಿರಿ ಅಣ್ಣ ಸಡ್ಡ ಹೊಡದಂಗ ಹೇಳಿದ. ಸಂಬಂಧಗಳ ಅರಿವು ಇಲ್ಲದ ಈ ಕೊಗ್ಗಮಂದಿ ಏನ್ಮಾಡಾಕೂ ಹೇಸವರಲ್ಲ ಅಂತ ಮಂದ್ಯಾ ತಿಳಕೊಂಡ. ಮುಂದೇನಕ್ಕತೋ.. ಅಪ್ಪನ ಕೊಂದ ಬಿಡ್ತಾರಾ? ಅವ್ವಗ ಒಂದ ತಟಗೂ ಕಣಿಕರಣ ಇಲ್ಲಾ? ಮಂದ್ಯಾನ ಕಾಲ ಥರಥರಾ ನಡಗಾಕ ಹತ್ತಿದ್ದು.


ಕಮಲಿಗೆ ಸಲಾಯಿನ್ ಹಚ್ಚಿದ್ರು. ತೆಲಿಗೆ ಐದಾರ ಹೊಲಿಗಿ, ಬಿದ್ದಿದ್ವು. ತಲಿಗೆ ಬ್ಯಾಂಡೆಜ್ ಸುತ್ತಿದ್ರು. ಅಕಿ ಪ್ರಜ್ಞಾ ತಪ್ಪಿರಲಿಲ್ಲ. ದವಾಖಾನ್ಯಾಗ ಕಾಟಾದಮ್ಯಾಲ ಮಲಗಿ ಗಂಡನ ಒಂದ ಸಮನ ಸಣ್ಣಂಗ ಬೈತಾನೇ ಇದ್ಳು. ಮಂದ್ಯಾ ಹೋಗಿ ಅಕಿ ಮುಂದ ನಿಂದ್ರೂದ ತಡಾ.. ಗಂಡನ ಬೈಗುಳಗಳೆಲ್ಲಾ.. ಮಗನಕಡೆ ತಿರುಗಿದವು.
“ಲಾ.. ಬಡವ್ರ ನಾಯಗೋಳ ನಿಂವ, ತಿನ್ನಾಕ ಗತಿ ಇಲ್ಲದಾವ್ರು, ನನಗ ಯಾವ ಜನ್ದಾಗ ಶನಿಯಾಗಿ ಕುಂತಿದ್ರಿ, ಗಿಳಿ ಹಂಗ ಇದ್ದಾಕಿ ನಾನು, ಹಾಳಾದ ಆ ಬಡಮೂಳಗ ಕಟ್ಟಿ ಕಾಗಿ, ಗೂಗಿ ಹಂಗಾದೆ” ಎಂದು ಮಂದ್ಯಾನ ಕಂಡು ಕಮಲಿ ಬೈಗುಳ ಸುರುಮಳಿ ಸುರಿಸಿದ್ಳು. “ನೀ ನನ್ನ ಇಷ್ಟಕ್ಕ ಹುಟ್ಟಿದ ಮಗಾ ಅಲ್ಲ. ನಿಮ್ಮ ಅಪ್ಪನ ತಿಂಡಿಗೆ ಹುಟ್ಟಿದ ಮಗಾ” ಅಂತ ಮಂದ್ಯಾ ತನ್ನ ಮಗಾನ ಅಲ್ಲ ಅನ್ನುವ ಧಾಟಿಯಲ್ಲಿ ಕಮಲಿಯ ಬೈಗಳಗಳು ಅಂದು ಅರ್ಥ ನೀಡುತ್ತಿದ್ದವು. ತಾಯಿ ದೇವ್ರು ಅನ್ನುವ ಲೋಕರೂಢಿ ಮಾತು ಅಪರ್ಥವಾಗಿ ಮಂದ್ಯಾಗ ತೋರತೊಡಗಿತು. ನಾಯಿ ಹೊಟ್ಯಾಗ ಹುಟ್ಟಬೇಕಾಗಿತ್ತು. ಹಿಂತಾ ತಾಯಿ ಹೊಟ್ಟ್ಯಾಗ ಹುಟ್ಟಬಾರ್ದಾಗಿತ್ತು. ಆ ಪರಮಾತ್ಮ ನನ್ಯಾಕ ಹುಟ್ಟಿಸಿದ್ನೋ ಎಂದು ಮಂದ್ಯಾ ಕೊರಗತೊಡಗಿದ.
****
ಹುಟ್ಟಿದಾಗಿನಿಂದ ಅಮರಪ್ಪ ಕಷ್ಟದಾಗ ಕೈತೊಳಕೋತ ಬಂದಿದ್ದ. ಊರ ಜಮೀನ್ದಾರು, ಸಾವಕಾರ ತ್ವಾಟದಾಗ ದುಡಕೋತ, ಒಂದ ಜೋಡ ಎತಗೋಳ ಮಾಡ್ಕೊಂಡ ಬಾಡಗಿ ಹೊಡಕೋತ ಹೊಂಟಿದ್ದ. ಅವರಿವರನ್ನದ ಯಾರ ಕರಿತಾರ ಅವರ ಹೊಲಕ್ಕ ನಕ್ಕೋತ ಹೋಗಿ ಬಿತ್ತುದ ಇದ್ರ, ಬಿತ್ತಿ, ಗಳೆ ಹೊಡಿಯುದಿದ್ರ ಹೋಡದ ಅವರಿಂದ ಸೈ ಅನಸ್ಕೊಂಡ ಬರ್ತಿದ್ದ. ಹನಿ ಹನಿ ಕೂಡಿದ್ರ ಹಳ್ಳ ಆದಂಗ, ದುಡ್ಡಿಗೆ ದುಡ್ಡ ಕೂಡಿಸಿ, ಎರಡ ಎಕರೆ ಹೊಲಾ ಮಾಡ್ಕೊಂಡಿದ್ದ. ಅಮರಪ್ಪ ಬಾಳ ಸ್ಯಾಣ್ಯಾ.. ಅನ್ನುವ ಸುದ್ದಿ ಸುತ್ತ ಮುತ್ತ ಊರಾಗಿನ ಮಂದಿ ಬಾಯಿಗಳಿಗೆ ಬಾಯಪಾಠ ಆಗಿತ್ತು. ಆಗ ಕವಡಿ ಸ್ವಾಮಿ ಏನೇನೋ ಗದ್ದಲಾ ಮಾಡಿ ನೂರ ಸುಳ್ಳ ಹೇಳಿ ಮದವಿ ಮಾಡಿದಂಗ ಅಮರಪ್ಪನ ಮದವಿ ಮಾಡಿ ಮುಗಿಸಿದ್ದ. ಅಮರಪ್ಪನ ಕೈ ಹಿಡದ ಬಂದ ಕಮಲಿಗೆ ಅಮರಪ್ಪಂದ್ರ ಅಷ್ಟ ಅಲ್ಲ ಮದುವಿ ಆಗೂದಂದ್ರ ಮನಸ್ ಇರ್ಲಿಲ್ಲ. ಅವರಪ್ಪ ನೀ ಮದವಿ ಆಗಲಿಲ್ಲಂದ್ರ. ಉರಲ ಹಕ್ಕೊಂಡ ಸಾಯಿತಿನಿ ನೋಡ ಅಂದದ್ದಕ್ಕ ಅಮರಪ್ಪನ ಮುಂದ ಕುತಗಿ ಒಡ್ಡಿದ್ಳು.
ಅಪ್ಪಂದ ಒಂದ ತಟಗೂ ತಪ್ಪ ಇರುದಿಲ್ಲ. ತಪ್ಪೆಲ್ಲ ಅವ್ವಂದ ಅಂತ ಮಂದ್ಯಾ ತನಗ ಬುದ್ಧಿ ಬಂದಾಗಿಂದು ತಿಳಕೊಂಡಿದ್ದ. ಕಡ್ಡಿ ಓದ ಗುಡ್ಡಾ ಮಾಡು ಹೆಣಮಗಳು ತಮ್ಮ ಅವ್ವ ಅಂತ ಬಲ್ಲವನಾಗಿದ್ದ. ಬರೀ ಸಿರಿಮಂತಿಕೆ ಬಡಿಯಾರದಲ್ಲಿ ಮುಳಗಿದವಳು. ಅಪ್ಪನ ಬೋಳುದೆಲಿ, ದಪ್ಪ ಹೊಟ್ಟೆ, ಗಿಡ್ಡ ಶರೀರವನ್ನು ತನ್ನವ್ವ ಎಂದು ಇಷ್ಟಪಟ್ಟವಳಲ್ಲ ಎಂದು ಮಂದ್ಯಾ ಅರಿತುಕೊಂಡಿದ್ದ. ಅಕಿ ತೌರೂರಲ್ಲಿ ಶಿವಲಿಂಗಪ್ಪ ಅನ್ನುವನ ಜೋಡಿ ದೇಹ ಸಂಬಂಧ ಇದ್ದದ್ದಕ್ಕೆ, ಅಪ್ಪನನ್ನು ಹಾಸಿಗೆಗೆ ಕರೆದುಕೊಳ್ಳುತಿರಲಿಲ್ಲ ಅನ್ನುವ ವಿಚಾರವೂ ಮಂದ್ಯಾನಿಗೆ ಅರ್ಥವಾಗಿತ್ತು. ಅಪ್ಪನ ಪರಸ್ಥಿತಿ ಕಂಡು ಮಂದ್ಯಾ ಮರಗುತ್ತಿದ್ದ. ಹಿಂತ ರಾಕ್ಷಸಿಯ ಜೋಡಿ ಅಪ್ಪ ಇಪ್ಪತ್ತುವರ್ಷ ಸಂಸಾರ ಮಾಡಿದ್ದು ಸಣ್ಣ ಮಾತಲ್ಲ ಅಂತ ಅಚ್ಚರಿಪಟ್ಟಿದ್ದ.
ಮದವಿ ಆಗುವ ಮೊದಲೆ ಕಮಲಿ ಹೊಟ್ಟೆತುಂಬಿಸಿಕೊಂಡಿದ್ದು, ಅಕಿನ ಬಾಗಲಕೋಟಿ ದವಾಖಾನಿಯಲ್ಲಿ ಹೊಟ್ಟಿ ತೊಳಸಿದ್ದು, ಶಿವಲಿಂಗಪ್ಪ ಮಾಡುದೆಲ್ಲಾ ಮಾಡಿ, ನಾಕ ವರ್ಷ ಪತ್ತೆ ಇಲ್ಲದಂಗ ಊರಬಿಟ್ಟ ಪರಾರಿ ಆದದ್ದು, ನಿರ್ವಾ ಇಲ್ಲದಕ್ಕ ಕವಡಿ ಸ್ವಾಮಿ ಮಾತ ಕೇಳಿ ಅಪ್ಪನ ಬದುಕಿಗೆ ಮನೆಮುರಕಿ ಅವ್ವನ ಜೋಡಮಾಡಿದ್ದು ಊರತುಂಬೆಲ್ಲ ಸುದ್ದಿಯಾಗಿದ್ದು ಮಂದ್ಯಾ ಅವರಿವರು ಆಡುವಾಗ ತಿಳಿದುಕೊಂಡಿದ್ದ. “ಇಂತಾ ತಿಪ್ಪಿವಳಗ ನಾ ಹುಟ್ಟಿದಿನಲ್ಲಾ ದೇವ್ರೆ” ಅಂತ ಮಂದ್ಯಾ ಎಷ್ಟೋ ಸಾರಿ ಮರಮರಾ ಮರಗಿದ್ದ.
ಅಪ್ಪ ಎಷ್ಟ ಚಲೋ ಮನಸ್ಯಾ, ಯಾವಾಗ್ಲೂ ನಂದ ಚಿಂತಿ ಮಾಡ್ತಿರ್ತಾನ, ಅವ್ವನ ಪ್ರೀತಿನೂ ಅಂವ್ನ ಕೊಡ್ತಾನ, ಹುಟ್ಟಿದ ನಾಕ ತಿಂಗಳಕ ಅವ್ವ ಮಲಿ ಕುಡಿಸೂದ ವಲ್ಯಾ.. ಭಾಳ ಮಲಿ ಕುಡಿಸಿದ್ರ, ಮೋತಿ ಮ್ಯಾಲಿ ಕಳೆ ಹೊಕ್ಕೈತಿ ಅಂತ ಹಟಾ ಹಿಡದ ಕುಂತಾಗ, ತನಗ ಆಡಿನ ಹಾಲ ಕುಡಿಸಿ ಜ್ವಾಕಿ ಮಾಡಿದ್ದ ಕಥಿ ಇಡೀ ಊರಿಗೆ ಊರ ಹೇಳಿದ್ದು ಮಂದ್ಯಾನ ಮನಸನ್ಯಾಗ ಅಚ್ಚ ವತ್ತಿದಂಗ ಆಗಿತ್ತು.
******
ದವಾಖಾನ್ಯಾಗ ಬಿದ್ದ ವಟಗುಡತಿದ್ದ ಕಮಲಿ ಮ್ಯಾಲ ಒಂದ ತಟಗೂ ಮಂದ್ಯಾಗ ಕರುಣ್ಯಾ ಬರಲಿಲ್ಲ. ಅಪ್ಪನ ಈ ಮಳ್ಳ ಸೂಳಿಮಕ್ಕಳ ಏನಾರ ಮಾಡಿದ್ರ ಹೆಂಗ ಅನ್ನುವ ಚಿಂತಿ ಒಂದ ಸಮನ ಕಾಡಾಕ ಹತ್ತಗೊಂತು. ಪಟಕ್ನ ದವಾಖಾನಿಯಿಂದ ಕಡ್ಯಾಕ ಆಗಿ ಹೋಗಿ ಅಪ್ಪನ ಕಾಪಾಡ್ಬೇಕು ಅಂತ ಮಂದ್ಯಾ ಅಲ್ಲಿಂದ ಮೆಲಕಾಸ ಸರಕೊಂದ ಸರಕೊಂದ ಹೊರಗ ಬಂದ.
ಬೈಕ ಮ್ಯಾಲ ಕಾಲ ಹಾಕಿ ಕುಂದ್ರೂಕ ಅವರ ಅವ್ವನ ಅಣ್ಣಂದಿರು “ಆ ಸೂಳಿಮಗಾ ಎಲ್ಲಿ ಅದಾನ ಹುಡುಕಿ ಅಂವಗೊಂದ ಗತಿ ಕಾಣಸೇ ಬಿಡೂನು” ಅಂತ ದವಾಖಾನಿ ಹೊರಗ ಒಳಗ ಅಡ್ಡಾಡ್ಕೋತ ಮಾತಾಡುದ ಕೇಳಿ, ಮಂದ್ಯಾ ಥರಾಥರಾ ನಡಗಿದ. ಅವ್ರ ಮಾತ ಕೇಳಿದಕ್ಕ ಬೈಕ್ ಕಿಕ್ ಒದಿಯುಷ್ಟು ಶಕ್ತಿ ಇಲ್ಲದಂಗ ಆಗಿತ್ತು. ದಡಗ್ನ ಅವರಪ್ಪನ ಮೋತಿ ಕಣ್ಣ ಎದರ ಬಂದದ್ದ ತಡಾ ಜೋರ್ಸೆ ಬಲಗಾಲಿಂದ ಕಿಕ್ಕ ಮುರದ ಹೋಗುವಂಗ ಒದ್ದ. ಆಗ ಬೈಕ್ ‘ಸತ್ನೋ ಎಪ್ಪಾ’ ಅನ್ನುವಂಗ ಬರ್ ಬರ್ ಅವಾಜ್ ಮಾಡ್ಕೋತ ವಂಯ್ಯಗೂಡ್ಕೋತ ಓಡತೊಡ್ಗಿತು.


ಅವ್ವನ ತೌರ ಮನಿಯವರ ಕಟಕರಂತವ್ರು ಮನುಷತ್ವದ ಕಬರು ಇಲ್ಲದವ್ರು. ಅದಕ್ಕ ಕಾರಣ ಅವರ ಸಿರಿತನ. ಹೆಣ್ಣಕೊಟ್ಟವರಂದ್ರ ಬೆನ್ನ ಕೊಡತಾರ ಅನ್ನು ಮಾತು ಈಗಲೂ ಲೋಕರೂಢಿಯಲ್ಲಿ ಇದೆ. ಆದ್ರ ಹೆಣ್ಣ ಕೊಟ್ಟವ್ರ ಹೊಡದ ಹೆಣಾ ಮಾಡು ಸಂಪ್ರದಾಯ ಇದು ನಮ್ಮ ಕುಟಂಬಕ ಅಷ್ಟ ಐತಿ ಅಂತ ಅಂದ್ಕೊಂಡ ಮಂದ್ಯಾ ಕಣ್ಣೀರ ಸುರಸ್ಕೋತ ಬೈಕ್ ಓಡಸ್ತಿದ್ದ. ಅಪ್ಪ ಮನ್ಯಾಗ ಕುಂತಾನೋ..? ಇಲ್ಲಾ..ಸಾವಕಾರ ತ್ವಾಟಕ ಕೆಲಸಕ ಹೋಗ್ಯಾನೋ.? ಮಂದ್ಯಾ ಮನದಾಗ ಬರೀ ಅವರ ಅಪ್ಪನದೇ ದ್ಯಾನ.


ಬರ್ ಬರ್ ಬೈಕ್ ವದ್ರಸ್ಕೋತ ಮನಿ ಮುಂದ ಬಂದ ನಿಂತಾಗ, ಓನ್ಯಾಗಿನ ಮಂದೆಲ್ಲ ಮಂದ್ಯಾನ ನೋಡಿದವ್ರ “ಹೆಂಗದಾಳ ನಿಮ್ಮ ಅವ್ವಾ?” ಅಂತ ಒಬ್ಬರಾದ ಮ್ಯಾಲ ಒಬ್ರ ಕೇಳಿದ್ರು. “ಅಕಿಗೇನ ದಾಡಿ ಆಗೇತಿ, ಕ್ವಾಣಗಳ್ಳಿನ ಹೆಂಗಸಗ” ಅಂತ ಮನಸ್ಸು ಒಳಗೆ ದ್ವನಿಸಿದ್ರೂ ಮ್ಯಾಲನೋಟಕ ಮಂದ್ಯಾ “ಆರಾಮದಾಳ.. ಏನೂ ಆಗಿಲ್ಲಾ. ನಾಳೆ ಮುಂಜಾನೆ ಊರಿಗೆ ಬರ್ತಾಳ” ಅಂತ ಸುಳ್ಳು, ತಗಲು ಹೇಳಿ, ಅವ್ರ ತಾಯಿ ಯೋಗಕ್ಷೇಮ ಕೇಳಿದವ್ರ ಬಾಯಿ ಮುಚ್ಚಸಿದ.
ಮನಿ ಕೀಲಿ ಹಾಕಿತ್ತು. ಹೊತ್ತಬ್ಯಾರೆ ಮುಳಾಗಾಕ ಹತ್ತಿತ್ತು. ಅಪ್ಪ ಸಾವಕಾರ ಹೊಲಕ್ಕ ಹೋಗಿರ್ಬೇಕಂತ ನಿಂತ್ರಿಕಿಲೇ ಬೈಕ್ ಓಡಿಸ್ಕೊಂಡ ಸಾವಕಾರ ತ್ವಾಟಕ ಹ್ವಾದ. ಅವ್ರ ಅಪ್ಪನ ಜೋಡಿ ದಿನಾ ಕೆಲಸಕ್ಕ ಹೊಕ್ಕಿದ್ದ ಮೆಟಗುಡ್ಡಪ್ಪನ ವಿಚಾರಿಸಿದ. ನಿಮ್ಮ ಅಪ್ಪ ಇಂದ ಕೆಲಸಕ ಬಂದಿಲ್ಲ ಎಲ್ಲಿ ಹೋಗ್ಯಾನ.? ಸಾವಕಾರ ಅಂವನ ಮ್ಯಾಲ ಸಿಟ್ಟ ಮಾಡ್ಕೊಂಡ ಒದರಾಡಿ, ಹೋಗ್ಯಾರ. ಇವತ್ತ ಸಿಕ್ಕಾಪಟಿ ಕೆಲಸ ಇತ್ತು. “ಕೆಲಸ ಇದ್ದಾಗ ಇಂವ ಕೈ ಎತ್ತಿ ಹೋಗ್ಯಾನಲ್ಲಾ ಮಂಗ್ಯಾಸೂಳಿಮಗಾ ಅಂತ ಬೈದೂ ಬೈದಾರ” ಅಂತ ಮೆಟಗುಡ್ಡಪ್ಪ ಇನ್ನ ಏನೇನೋ ಹೇಳಾಕತ್ತಿದ್ದ. ಮಂದ್ಯಾ ಪಟಕ್ನ ಅಂವನ ಬೈಕ್ ಚಲೂ ಮಾಡ್ಕೊಂಡ್ ಅಂವ ಎಲ್ಲಂದರಲ್ಲಿ ಊರ ಸುತ್ತಮುತ್ತ ಬೈಕ್ ಓಡ್ಸಾಡಿ ಅಪ್ಪನ ಹುಡಕ್ಯಾಡಿದ. ಎಲ್ಲೂ ಕಾಣಲಿಲ್ಲ. ಅಪ್ಪ ಯಾವ ಸಂಬಂಧಿಕರ ಮನಿಗೂ ಹೋಗಾಂವ ಅಲ್ಲಾ. ಯಾವ ಸಂಬಂಧಿಕರೂ ಅಪ್ಪನಂತ ಬಡುವನ ಕರೆದು ಅಂವನ ಅನುತನು ವಿಚಾರಿಸುವವರು ಇರಲಿಲ್ಲ. ಇದ್ದವರೆಲ್ಲ ತಮ್ಮ ದೊಡ್ಡಸ್ತಿಕೆಯನ್ನು ತೋರ್ಪಡಿಸುವವರೇ ಇದ್ರು.
ಕೆರಿ ದಂಡಿ, ಊರ ಮುಂದಿನ ಬಸಪ್ಪನ ಕಟ್ಟಿ, ಮಡ್ಡಿಮನಿ ಮಲಕಾಜಿ ಕಟ್ಟಿ, ಎಲ್ಲಾ ನೋಡಿದ್ರೂ ಅಪ್ಪನ ಸುಳಿವೇ ಸಿಗದಾಗ ಮಂದ್ಯಾ ಗಾಬರಿಯಾದ.
ಅವ್ವನ ಅಣ್ಣಂದಿರು ಏನಾದ್ರೂ ಯಾರನನ್ನಾದ್ರೂ ಕಳಿಸಿ ಅಪ್ಪನ ಯತ್ಗೊಂಡ ಹ್ವಾದ್ರಾ? ಅವ್ವಳೆಂಬ ರಾಕ್ಷಿ ಅಪ್ಪನೊಂದಿಗೆ ಚೆನ್ನಾಗಿದ್ರೆ ಎಷ್ಟೊಂದು ಚಂದಾಗಿರ್ತಿತ್ತಲ್ಲಾ ನಮ್ಮ ಬದುಕು.? ಅಂತ ಊರ ಹೊರಗ ಇದ್ದ ಗರಡಿ ಮನಿ ಕಟ್ಟಿಗೆ ಕುಳಿತು ಮಂದ್ಯಾ, ಮನದಲ್ಲಿ ಮೂಡಿದ ಭಾವಗಳೊಂದಿಗೆ ಮಾತಾಗತೊಡಗಿದ.
ರಾತ್ರಿಯಾದರೂ ಅಪ್ಪನ ಸುಳಿವು ಕಾಣಲಿಲ್ಲ. ಮನಿ ಕದಾ ಹಾಕಿತ್ತು. ಮನಿ ಕೀಲಿ ಅಪ್ಪನ ಹತ್ರಾನೇ ಇತ್ತು. ಕೀಲಿ ಮುರಿದು ಒಳಗೆ ಹೋಗಬೇಕಂದ್ರ ಮನಸ್ಸು ಒಪ್ಪಲಿಲ್ಲ. ಓಣಿಯ ಜನರೆಲ್ಲ ಮಲಗಿದ್ದರು. ಅಪ್ಪ ಬರಬಹುದೆಂಬ ನಿರಿಕ್ಷೇಯಲ್ಲಿ ಮಂದ್ಯಾ ಮನೆಮುಂದಿರುವ ಕಟ್ಟಿಯ ಮೇಲೆ ಮೈಚಲ್ಲಿದ. ನಿದ್ದಿ ಹತ್ತಿದ್ದೆ ಗೊತ್ತಾಗಿರಲಿಲ್ಲ. ಬೆಳಿಗ್ಗೆ ಕಣ್ಣು ಬಿಟ್ಟಾಗ ಮನೆಯ ಬಾಗಿಲಿಂದ ಎಂಥದ್ದೋ ಒಂದು ವಾಸನಿ ಮೂಗಿಗೆ ಬಂದು ಅಡರಿತು. ಎಷ್ಟೊಂದ ಗಬ್ಬವಾಸನಿಯೋ ಮರಾಯಾ ಇದು, ಅವ್ವನ ತಲೆ ಒಡೆದು ಸೋರಿದ ರಕ್ತದ ವಾಸನಿ ಇರಬಹುದೆಂದು ಊಹಿಸಿಕೊಂಡ. ಅದು ಅಲ್ಲ ಅನಿಸಿತು. ಕೀಲಿ ಮುರಿದು ಒಳಗೆ ಹೋಗಬೇಕೆಂದು ಮನಸ್ಸು ಒಂದೇ ಸಮನೆ ಚಿಟಬುಡಿಸುತ್ತಿತ್ತು. ದೊಡ್ಡದೊಂದು ಹಿಡಿಗಲ್ಲು ತಗೆದುಕೊಂಡು ಕೀಲಿ ಮೇಲೆ ಡಬ್ ಡಬ್ ನಾಕು ಏಟು ಹಾಕಿದ, ಕೀಲಿ ಪಟಕ್ನ ಬಾಯಿ ತಗೆಯಿತು. ಬಾಗಿಲ ತಗೆದ. ಅಮರಪ್ಪ ಒಳಗೆ ಹೆಣವಾಗಿ ಜೋತಾಡುತ್ತಿದ್ದ. ಮಂದ್ಯಾ ಉರಲು ಹಾಕಿಕೊಂಡ ಅವರಪ್ಪನ ನೋಡಿದ್ದೇ ತಡಾ .. “ಯಪ್ಪಾ.. ನನ್ನ ಪರದೇಸಿ ಮಾಡಿ ಹ್ವಾದೇನೋ..” ಎಂದು ಕುಂತಲ್ಲೆ ಖುಷಿದು, ನೆಲದ ಮ್ಯಾಲೆ ಬಿದ್ದು, ಪೆಟ್ಟು ತಿಂದ ಹಾವು ಒದ್ದಾಡಿದಂತೆ ಉರಳಾಡತೊಡಗಿದ. ಮಂದ್ಯಾನ ದನಿ ಕೇಳಿದ್ದೆ ತಡಾ ನೆರಿಹೊರಿ ಮಂದಿಮಕ್ಕಳು ಗುಬಗುಡುತ್ತ ಬಂದ್ರು. ಅಮರಪ್ಪನ ಹೆಣ ನಾರುತ್ತಿತ್ತು ಬಂದವರೆಲ್ಲ ಮೂಗು ಮುಚ್ಚಿಕೊಂಡು ಮಂದ್ಯಾನನ್ನು ಸನ್ಮಂತ ಮಾಡತೊಡಗಲು ಹರಸಹಾಸ ಮಾಡುತ್ತಿದ್ದರು. ಅಷ್ಟೊತ್ತಿಗೆ ಮಂದ್ಯಾನ ತಾಯಿಯ ಅಣ್ಣಂದಿರು, ಬುಲೋರೋ ಜೀಪ ಹತ್ತಿ ಕಟಕಟ ಹಲ್ಲು ಕಡೆಯುತ್ತ ಯಮವೇಗದಲ್ಲಿ ಬಂದು ಅಮರಪ್ಪನ ಮನೆ ಬಾಗಿಲು ಮುಟ್ಟಿದ್ರು. ಹೆಣದ ಮುಂದೆ ಮಂದ್ಯಾ ಬಿಕ್ಕಿ ಬಿಕ್ಕಿ ಅಳುತ್ತಿರುವುದು ನೋಡಿದರು. ಅವರಲ್ಲಿದ ಕೋಪ ಸಣ್ಣಗೆ ಮಂಜುಗಡ್ಡೆಯಂತೆ ಕರಗತೊಡಗಿತು. ಮಂದ್ಯಾ ಅವ್ರನ್ನು ನೋಡಿದ್ದೇ ತಡ ಅವರನ್ನು ಜೋರಾಗಿ ಹಿಂದಕ್ಕ ತಳ್ಳುತ್ತ, “ನಮ್ಮ ಅಪ್ಪನ ಹೊಡಿಬ್ಯಾಡ್ರೋ.. ಅಂವನ ಕೊಲ್ಲಬ್ಯಾಡ್ರೋ..” ಎಂದು ಬಿಕ್ಕಿ ಬಿಕ್ಕಿ ಅಳುತ್ತ ಮೂಛೇಹೋದ. ಇಡೀ ಊರೇ ಅಮರಪ್ಪನ ಸಾವು ಕಂಡು ತಮ್ಮ ಮನೆಯಲ್ಲಿಯೇ ಸಾವಾಗಿದೆ ಅನ್ನುವ ಭಾವದಲ್ಲಿ ಕಣ್ಣೀರಡುತ್ತಿದ್ದರು.