- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
————————————————–”—————————————————
ಮಾರ್ಚ್ ೬, ೨೦೨೧ ರಂದು ನಮ್ಮಿಂದ ಭೌತಿಕವಾಗಿ ದೂರವಾದ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಜೊತೆಗಿನ ಒಡನಾಟದ ನೆನಪುಗಳನ್ನು ಶ್ರೀ ಎನ್ ಎಸ್ ಶ್ರೀಧರ ಮೂರ್ತಿಯವರು ಹಂಚಿಕೊಂಡಿದ್ದು ಹೀಗೆ…
————————————————–”—————————————————
ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ ಅವರು ನನ್ನ ಭಾವಲೋಕಕ್ಕೆ ಇಳಿದಿದ್ದು ಭಾವಗೀತೆಗಳ ಮೂಲಕವೇ.. ನನ್ನ ಕಾಲೇಜು ದಿನಗಳಲ್ಲಿಯೇ ‘ಭಾವ ಸಂಗಮ’ ‘ದೀಪಿಕಾ’ ಕ್ಯಾಸೆಟ್ ಹೊರ ಬಂದಿದ್ದು. ಶರೀಫರ ಗೀತೆಗಳು ಮನೆ ಮಾತಾಗಿದ್ದವು. ಅದರ ಹಿಂದಿನ ಒಲವುಗಳ ಕುರಿತು ಲಕ್ಷ್ಮಿನಾರಾಯಣ ಭಟ್ ಅವರೇ ‘ತರಂಗ’ದಲ್ಲಿ ಒಂದು ಲೇಖನ ಬರೆದಿದ್ದರು. ಅದು ನನ್ನ ಮೇಲೆ ಅಪಾರ ಪ್ರಭಾವ ಬೀರಿತ್ತು. ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಆಕಾಶ ವಾಣಿಯಲ್ಲಿ ಲಕ್ಷ್ಮಿನಾರಾಯಣ ಭಟ್ಟರ ಸಂದರ್ಶನ ಪ್ರಸಾರವಾಯಿತು. ಅದರಲ್ಲಿ ಮೈಸೂರಿಗೆ ಬಂದು ವಿದ್ಯಾಭ್ಯಾಸ ಮುಂದುವರೆಸಲು ತಾವು ಟಿಕೇಟ್ ಇಲ್ಲದೆ ರೈಲು ಪ್ರಯಾಣ ಮಾಡಿದ ಪ್ರಸಂಗವನ್ನು ಭಾವಪೂರ್ಣವಾಗಿ ಹೇಳಿದ್ದರು. ಎಲ್ಲವೂ ಸೇರಿ ನನ್ನ ಮನಸ್ಸಿನಲ್ಲಿ ಲಕ್ಷ್ಮಿನಾರಾಯಣ ಭಟ್ಟರ ಚಿತ್ರಣ ಗಂಧರ್ವ ಲೋಕದ ಸಾಧಕರ ಸ್ವರೂಪದಲ್ಲಿ ಇತ್ತು.
ನಾನು ಬೆಂಗಳೂರಿಗೆ ಬಂದ ನಂತರ ಕಾರ್ಯಕ್ರಮಗಳಲ್ಲಿ ಅವರನ್ನು ನೋಡುತ್ತಿದ್ದೆ. ನಮಸ್ಕಾರಗಳಿಗಿಂತ ಹೆಚ್ಚು ಪರಿಚಯ ಬೆಳೆಯಲಿಲ್ಲ. ಅದಕ್ಕೆ ಸೂಕ್ತ ಸಂದರ್ಭವೂ ಸಿಗಲಿಲ್ಲ. ‘ಮಲ್ಲಿಗೆ’ ಮಾಸ ಪತ್ರಿಕೆಗೆ ಬಂದ ಮೇಲೆ ಅವರಿಂದ ಒಂದು ಪದ್ಯ ಬರೆಸುವ ಕನಸು ಮೂಡಿತು. ಕೇಳಿದಾಗ ನಾನು ಬಯಸಿದ ಸಮಯಕ್ಕೆ ಸರಿಯಾಗಿ ಸೊಗಸಾದ ಕವಿತೆಯನ್ನು ಕೂಡ ಕಳುಹಿಸಿದರು. ಆ ಸಂತೋಷ ಬಹಳ ದಿನ ಉಳಿಯಲಿಲ್ಲ. ಗೌರವ ಧನಕ್ಕೆ ಪದೇ ಪದೇ ಬೆನ್ನು ಹತ್ತಿದರು. ನಮ್ಮಲ್ಲಿಯೂ ವಿಶೇಷಾಂಕದ ಗೌರವ ಧನವನ್ನು ಅದರ ಜಾಹಿರಾತಿನ ಹಣ ಬಂದ ನಂತರವೇ ಕೊಡಬೇಕು. ಸ್ವಲ್ಪ ಕಿರಿಕಿರಿ ಭಾವವೇ ಮೂಡಿತು. ಅವರಿಗೆ ಗೌರವ ಧನ ಸಲ್ಲಿಸಿ ಇನ್ನು ಇವರ ಹತ್ತಿರ ಕವಿತೆ ಕೇಳಬಾರದು ಎಂದುಕೊಂಡುಬಿಟ್ಟಿದ್ದೆ. ಇದರ ಜೊತೆಗೆ ಇನ್ನೊಂದು ಕಿರಿಕಿರಿಯ ಸನ್ನಿವೇಶವೂ ಜರುಗಿತು. ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಕವಿಗೋಷ್ಟಿಗೆ ಲಕ್ಷ್ಮಿನಾರಾಯಣ ಭಟ್ ಅವರದ್ದೇ ಅಧ್ಯಕ್ಷತೆ. ಆಗ ತಾನೆ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತ್ತು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಎನ್.ಎಸ್.ಎಲ್ ಜ್ಞಾನಪೀಠದ ಕುರಿತೇ ಕಹಿ ವ್ಯಕ್ತಪಡಿಸಿದರು. ಕೆ.ಎಸ್.ನ, ಪು.ತಿನ ಅಂತಹವರಿಗೆ ಸಿಗದೆ ಲಾಬಿ ಮಾಡುವವರಿಗೆ ಸಿಗುವ ಅದು ಮುಖ್ಯ ಪ್ರಶಸ್ತಿ ಅಲ್ಲವೇ ಅಲ್ಲ ಎಂದು ವಾದಿಸಿದರು. ಇದರ ಜೊತೆಗೆ ‘ಜ್ಞಾನಪೀಠ’ ಎನ್ನುವ ಕವಿತೆ ಕೂಡ ಓದಿದರು. ಅವತ್ತು ರಾತ್ರಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆಗ ನಾನು ಕಟುವಾಗಿಯೇ ಇದನ್ನು ವಿರೋಧಿಸಿದೆ. ‘ನಿಮ್ಮಿಂದ ಜನ ಬೇರೆಯದನ್ನು ನಿರೀಕ್ಷಿಸಿದ್ದರು. ಕನಿಷ್ಟ ಸುಗಮ ಸಂಗೀತದ ಮಹತ್ವವನ್ನಾದರೂ ನೀವು ಮಾತಾಡಬಹುದಿತ್ತು. ಈ ರಾಜಕೀಯ ಇಲ್ಲಿ ತರುವುದು ಬೇಡವಾಗಿತ್ತು’ ಇತ್ಯಾದಿ. ಅವರೂ ತಮ್ಮ ನಿಲುವಿಗೆ ಅಂಟಿಕೊಂಡರು. ಬಿಸಿ ಬಿಸಿ ಚರ್ಚೆಗಳೂ ನಡೆದವು.
ವಿಶೇಷ ಎಂದರೆ ಎನ್.ಎಸ್.ಎಲ್ ನನಗೆ ಹತ್ತಿರವಾಗಿದ್ದೇ ಈ ಘಟನೆಯ ನಂತರ. ಇದಾದ ಕೆಲವೇ ದಿನಕ್ಕೆ ಅವರೇ ಹೇಳಿ ಕಳುಹಿಸಿದರು. ‘ನನ್ನ ನಿಲುವನ್ನು ಬದಲಾಯಿಸಿದ್ದೇನೆ ಎಂದಲ್ಲ. ನಿಮ್ಮ ಮಾತಿಗೂ ಗೌರವ ಕೊಡಬೇಕಿತ್ತು’ ಎಂದರು. ಇದು ಮುಂದಿನ ಮಾತುಗಳಿಗೆ ನಾಂದಿ ಅಷ್ಟೇ! ಸಾಕಷ್ಟು ವಿಚಾರಗಳನ್ನು ಅವರಿಂದ ತಿಳಿದುಕೊಳ್ಳುವ ಅವಕಾಶಗಳು ನನಗೆ ಸಿಗುತ್ತಲೇ ಹೋದವು. ಷೇಕ್ಸಪಿಯರ್, ಎಲಿಯಟ್, ಯೇಟ್ಸ್ ಅವರನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆ ಅವರದು. ಅನುವಾದದ ಕುರಿತು ಅನೇಕ ವಿಚಾರಗಳನ್ನು ಅವರಿಂದ ಕಲಿತೆ. ‘ಚಿನ್ನದ ಹಕ್ಕಿ’ ಸಂಕಲನದ ಅನೇಕ ಕವಿತೆಗಳ ವಾಚನವನ್ನೂ ಕೂಡ ಅವರಿಂದ ಕೇಳಿದಂತಹ ಸೌಭಾಗ್ಯ ನನ್ನದು. ಎನ್.ಎಸ್.ಎಲ್ ಅವರ ಜೊತೆಗೆ ನನಗೆ ಚರ್ಚೆಯಾಗುತ್ತಿದ್ದ ಇನ್ನೊಂದು ವಿಷಯ ಭಾವಗೀತೆಗಳದ್ದು. ಅವರು ನವ್ಯಕವಿತೆಗಳ ವಿರುದ್ದ ನೆಲೆಯಲ್ಲಿಯೇ ಭಾವಗೀತೆ ಅಥವಾ ಸುಗಮ ಸಂಗೀತವನ್ನು ನೋಡುತ್ತಿದ್ದರು. ಗೇಯ ನೆಲೆಯ ಸುಲಭ ಸಂವಹನದ ಕವಿತೆಗಳನ್ನು ಅವರು ಈ ನೆಲೆಯಲ್ಲಿ ತರುತ್ತಿದ್ದರು. ಅವರೇ ಗುರುತಿಸಿ ಕೊಂಡಂತೆ ೪೩೬ ಭಾವಗೀತೆಗಳನ್ನು ಅವರು ಬರೆದಿದ್ದಾರೆ. ಅದರಲ್ಲಿ ಬಹುತೇಕವು ಜನಪ್ರಿಯವಾಗಿವೆ. ಸುಗಮ ಸಂಗೀತ ಕ್ಷೇತ್ರದ ಪ್ರಮುಖ ಗಾಯಕರು ಹಾಡಿದ್ದಾರೆ. ಅವರ ಶೈಲಿ ಸಂಗೀತಕ್ಕೆ ಸುಲಲಿತವಾಗಿ ಒಗ್ಗುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವು ಅಂತರಾಳದ ಭಾವಗಳನ್ನೂ ಕೂಡ ಸಮರ್ಥವಾಗಿ ಹಿಡಿದಿಡುತ್ತಿದ್ದವು. ಸಣ್ಣ ತಕರಾರು ಇದ್ದಿದ್ದು ಅವರ ಟ್ಯೂನ್‍ಗೆ ಬರೆಯುವುದಿಲ್ಲ ಎಂಬ ಹಠದಲ್ಲಿ. ಅದನ್ನು ಅವರು ಹೆಗ್ಗಳಿಕೆಯ ರೀತಿಯಲ್ಲಿ ಹೇಳಿಕೊಳ್ಳುತ್ತಿದ್ದರು. ಏಮಿನಿ ಶಂಕರ ಶಾಸ್ತ್ರಿಗಳು ಆಕಾಶವಾಣಿಗೆ ಲಕ್ಷ್ಮಿನಾರಾಯಣ ಭಟ್ ಅವರ ಕವಿತೆಯೊಂದನ್ನು ಕಂಪೋಸ್ ಮಾಡಲು ಬಯಸಿದರು. ಆದರೆ ಅವರ ಟ್ಯೂನ್‍ಗೆ ಬರೆಯಲು ಎನ್.ಎಸ್.ಎಲ್ ಒಪ್ಪಲಿಲ್ಲ. ‘ಬೇಂದ್ರೆ, ಕುವೆಂಪು ಅಂತಹವರು ಕೂಡ ಇದನ್ನು ಮಾಡಿಲ್ಲ, ಯಾವತ್ತೂ ಕವಿತೆಗೇ ಟ್ಯೂನ್ ಮಾಡಬೇಕು’ಎನ್ನುವುದು ಅವರ ವಾದ. ಕೊನೆಗೂ ಆಕಾಶವಾಣಿಯ ಲೈಬ್ರರಿಯಲ್ಲಿ ಇದ್ದ ಭಟ್ಟರ ಸಂಕಲನ ತಂದು ಅದರಲ್ಲಿನ ‘ಶರಣಾದೆ ತಾಯೆ’ ಕವಿತೆಗೆ ಟ್ಯೂನ್ ಮಾಡಲಾಯಿತು ಎನ್ನುವುದು ಒಂದು ಪ್ರಸಂಗ. ಇನ್ನೊಂದು ‘ಬಾಳೊಂದು ಭಾವಗೀತೆ’ ಚಿತ್ರಕ್ಕೆ ಹಂಸಲೇಖ ಕವಿಗಳಿಂದಲೇ ಗೀತೆಗಳನ್ನು ಬರೆಸಬೇಕು ಎಂದು ತೀರ್ಮಾನಿಸಿದ್ದರು. ಎಚ್.ಎಸ್.ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್, ಎಂ.ಎನ್.ವ್ಯಾಸ ರಾವ್ ಅವರಿಂದ ಬರೆಸಿದರು. ಆದರೆ ಎನ್.ಎಸ್.ಎಲ್ ಮಾತ್ರ ಅದೇ ಪಟ್ಟು ಬರೆದ ಕವಿತೆಗೆ ಟ್ಯೂನ್ ಮಾಡಿ ಅಂತ. ಸಮಸ್ಯೆ ಎಂದರೆ ಅವರು ಬರೆದ ಕವಿತೆಗಳು ಸಿನಿಮಾದ ಸನ್ನಿವೇಶಕ್ಕೆ ಒಗ್ಗುತ್ತಿರಲಿಲ್ಲ. ಇದರಿಂದ ನನಗೇನು ನಷ್ಟವಿಲ್ಲ ಎನ್ನುವುದು ಎನ್.ಎಸ್.ಎಲ್. ಅವರ ಮಾತು. ಅವರ ಜೊತೆಗೆ ನನ್ನ ಪ್ರತಿವಾದ ಎಂದರೆ ‘ಕುವೆಂಪು ಟ್ಯೂನ್‍ಗೆ ಬರೆದಿಲ್ಲ ನಿಜ, ಆದರೆ ಬೇಂದ್ರೆ ಬರೆದಿದ್ದಾರೆ. ಭಕ್ತ ರಾಮದಾಸ, ವಿಚಿತ್ರ ಪ್ರಪಂಚ ಸಿನಿಮಾಗಳಿಗೆ ಅವರು ಟ್ಯೂನ್‍ಗೇ ಬರೆದಿದ್ದಾರೆ ಎನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆ. ಸಂಗೀತಗಾರನಿಗೆ ಸಾಹಿತ್ಯದ ಬಗ್ಗೆ ಗೌರವವೇ ಇಲ್ಲದ ಕಡೆ ನೀವು ಹೋಗಬೇಡಿ, ಆದರೆ ಸಂಗೀತಗಾರ ಸಾಹಿತ್ಯದ ಬಗ್ಗೆ ಗೌರವ ಇಟ್ಟು ಕೊಂಡ ಕಡೆ, ನೀವು ಹೀಗೆ ಹಠ ಮಾಡುವುದು ಸರಿ ಅಲ್ಲ. ಎರಡೂ ಪೂರಕವಾಗಿದ್ದರೆ ಕ್ಷೇತ್ರ ಬೆಳೆಯುವುದು ಸಾಧ್ಯ’ ಇದೇ ಚರ್ಚೆ ಬಹಳ ಸಲ ನಡೆದಿದೆ. ನನಗೂ ಈ ವಾದ ಎಷ್ಟರ ಮಟ್ಟಿಗೆ ಸರಿ ಎನ್ನುವ ಗೊಂದಲ ಇದ್ದೇ ಇದೆ. ಏಕೆಂದರೆ ಟ್ಯೂನ್‍ಗೆ ಬರೆಯುವ ರಾಜಿಗೆ ಒಪ್ಪಿದ ‘ಚಿನ್ನಾರಿ ಮುತ್ತ’ದಂತಹ ಅದ್ಭುತವನ್ನು ಸೃಷ್ಟಿಸಿದ ಎಚ್.ಎಸ್.ವಿ ಅಂತಹವರನ್ನು ಚಿತ್ರರಂಗ ಎಷ್ಟು ಗೌರವದಿಂದ ನೋಡಿತು ಎನ್ನುವ ಉದಾಹರಣೆ ನಮ್ಮ ಮುಂದೆಯೇ ಇದೆ. ಆಗೆಲ್ಲಾ ಎನ್.ಎಸ್.ಎಲ್ ಅವರ ವಾದವೇ ಸರಿಯೇನೋ ಅನ್ನಿಸಿದ್ದೂ ಇದೆ.
ಸುಚಿತ್ರ ಫಿಲಂ ಸೊಸೈಟಿಯಲ್ಲಿ ಒಂದು ಕಾರ್ಯಕ್ರಮ. ಸಂಗೀತದ ಬೆಳವಣಿಗೆ ಹೀಗೇನೋ ಅದರ ಶೀರ್ಷಿಕೆ ಇದ್ದ ನೆನಪು. ಅವತ್ತು ರಂಗ ಗೀತೆಗಳ ಬಗ್ಗೆ ಬಿ.ಜಯಶ್ರೀ ಭಾವ ಗೀತೆಗಳ ಕುರಿತು ಎನ್.ಎಸ್.ಲಕ್ಷ್ಮಿನಾರಾಯಣ ಭಟ್ ಅವರು ಮಾತನಾಡಿದ್ದರು. ಈ ಇಬ್ಬರು ದಿಗ್ಗಜರ ಜೊತೆ ನಾನು ಚಿತ್ರಗೀತೆಗಳ ಕುರಿತು ಮಾತಾಡಬೇಕಿತ್ತು. ಅವರಿಬ್ಬರ ಭಾಷಣ ಹಿಟ್ ಆಗುತ್ತೆ ಎಂದು ನನಗೆ ಗೊತ್ತಿತ್ತು. ಹೀಗಾಗಿ ನಾನು ಚಿತ್ರಗೀತೆಗಳಲ್ಲಿ ರಾಗಗಳ ಬಳಕೆ, ಅದರನ್ನು ಚಿತ್ರೀಕರಿಸುವ ಕ್ರಮ, ಅದು ಫಿಲಂ ಗ್ರ್ಯಾಮರ್‍ಗೆ ನೀಡುವ ಕೊಡುಗೆ ಹೀಗೆ ತೀರಾ ಹೊಸದು ಅನ್ನಿಸುವ ನೆಲೆಯಲ್ಲಿ ಮಾತನಾಡಿದೆ. ಅದನ್ನು ಬಹಳ ಜನ ಇಷ್ಟಪಟ್ಟರು. ಈ ಕಾರ್ಯಕ್ರಮ ಮುಗಿದ ಮೇಲೆ ನನ್ನ ಜೊತೆ ಮಾತನಾಡುತ್ತಾ ಲಕ್ಷ್ಮಿನಾರಾಯಣ ಭಟ್ ಅವರು ಹೇಳಿದರು ‘ನಿಮ್ಮ ಮಾತು ತುಂಬಾ ಚೆನ್ನಾಗಿತ್ತು. ಆದರೆ ಚಿತ್ರಗೀತೆಗೆ ಸಹಜವಾಗಿಯೇ ಜನಪ್ರಿಯತೆ ಇದೆ, ಹಣ ಬೆಂಬಲವೂ ಇದೆ. ಆದರೆ ಸುಗಮ ಸಂಗೀತ ದುರ್ಬಲ ಕ್ಷೇತ್ರ ಈಗಂತೂ ಪೈರಸಿಯ ಕಾಟದಿಂದ ಹೊಸ ಸಿಡಿಗಳನ್ನೂ ತರುವುದು ಆಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ನೀವು ಚಿತ್ರಗೀತೆಗಳನ್ನು ಹೀಗೆ ಮೆರೆಸಿದರೆ ಅದು ಖಂಡಿತಾ ಭಾವಗೀತೆಗಳನ್ನು ನುಂಗಿ ಹಾಕುತ್ತದೆ’ ಈ ವಾದದ ಸತ್ಯಾಂಶದ ಚರ್ಚೆಗೆ ನಾನು ಹೋಗುವುದಿಲ್ಲ. ಆದರೆ ಇದರಲ್ಲಿ ಎನ್.ಎಸ್.ಎಲ್ ಅವರಿಗೆ ಸುಗಮ ಸಂಗೀತ ಕ್ಷೇತ್ರದ ಕುರಿತು ಇದ್ದ ನೈಜ ಕಾಳಜಿ ವ್ಯಕ್ತವಾಗಿತ್ತು. ಅದು ಅಂತರಾಳದಿಂದ ಬಂದಿದ್ದು ಕೂಡ. ಏಕೆಂದರೆ ಅವರು ಸುಗಮ ಸಂಗೀತದ ವೈಭವದ ದಿನಗಳಲ್ಲಿ ಕೂಡ ಬೇರೆ ಕವಿಗಳಂತೆ ಕೇವಲ ತಮ್ಮ ಗೀತೆಗಳನ್ನು ಮೆರೆಸಲು ಹೋಗಲಿಲ್ಲ. ಬೇರೆ ಕವಿಗಳ ಗೀತೆಗಳಿಗೂ ಟ್ಯೂನ್ ಮಾಡಿಸಿದರು. ಅದಕ್ಕಿಂತಲೂ ದೊಡ್ಡ ಕೊಡುಗೆ ಎಂದರೆ ಶರೀಫ ಸಾಹೇಬರ ಗೀತೆಗಳು ನಾಡಿನೆಲ್ಲೆಡೆ ಕೇಳಿ ಬರಲು ಅದು ಸಿನಿಮಾ ಆಗಿ ರಾಷ್ಟ್ರಪ್ರಶಸ್ತಿ ಪಡೆಯಲೂ ಕೂಡ ಕಾರಣರಾದರು. ಮೈಸೂರು ಮಲ್ಲಿಗೆ ಹಕ್ಕುಗಳು ಕೆ.ಎಸ್.ನರಸಿಂಹ ಸ್ವಾಮಿಗಳ ಬಳಿ ಇಲ್ಲದೆ ಅದು ಕ್ಯಾಸೆಟ್ ರೂಪ ಪಡೆಯದ ಸ್ಥಿತಿ ಎದುರಾದಾಗ ಅದಕ್ಕಾಗಿ ಸಂಬಂಧಿಸಿದ ಪ್ರಕಾಶಕರ ಜೊತೆ ಯುದ್ದವನ್ನೇ ಸಾರಿ ಕೊನೆಗೂ ಹಕ್ಕುಗಳು ಕೆ.ಎಸ್.ನ ಅವರಿಗೆ ಮರಳಿ ಬರಲು ಕಾರಣವಾದರು. ಈ ಮೂಲಕ ಮೈಸೂರು ಮಲ್ಲಿಗೆ ಕ್ಯಾಸೆಟ್ ರೂಪ ತಾಳಿ ಮುಂದೆ ಚಲನಚಿತ್ರ ಕೂಡ ಆಗಿ ಯಶಸ್ವಿಯಾಗಲು ಕಾರಣರಾದರು.
ಎನ್.ಎಸ್.ಎಲ್ ಅವರ ‘ನಿಲುವುಗನ್ನಡಿಯ ಮುಂದೆ’ ಆತ್ಮಕಥೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ, ನಾನು ಬರಲಿ ಎನ್ನುವುದು ಅವರ ಒತ್ತಾಸೆಯೇ. ಬಹಳ ಕಾಲಗಳಿಂದ ವಿಳಂಬವಾಗಿದ್ದ ಪುಸ್ತಕ ಒಂದಿಷ್ಟು ರಾಜಿಯೊಂದಿಗೇ ಹೊರ ಬಂದಿತ್ತು. ಅವತ್ತಿನ ತಮ್ಮ ಮಾತಿನಲ್ಲಿ ಕೂಡ ಎನ್.ಎಸ್.ಎಲ್ ‘ಎಪ್ಪತ್ತರೊಳಗೆ ಆತ್ಮಕತೆ ಬರೆಯಬೇಕು’ ಎಂದು ಹೇಳಿ ಕೊಂಡಿದ್ದರು. ಅವತ್ತು ಆತಂಕವಾಗುವಷ್ಟು ಸೋತು ಹೋಗಿದ್ದರು. ಮಡದಿಯೊಂದಿಗೆ ಸನ್ಮಾನ ಕಾರ್ಯಕ್ರಮ ಅವರಿಗೆ ತೃಪ್ತಿ ನೀಡಿತ್ತು. ಹೀಗೆಂದು ನನ್ನ ಪಕ್ಕದಲ್ಲಿಯೇ ಕುಳಿತಿದ್ದ ಅವರು ಮತ್ತೆ ಮತ್ತೆ ಹೇಳಿದರು. ನನಗಂತೂ ಅವರ ದೇಹಸ್ಥಿತಿ ಎಷ್ಟು ಆತಂಕ ತಂದಿತ್ತು ಎಂದರೆ ಅವರು ಕೊಂಚ ಎದ್ದರೂ ಕೈ ಹಿಡಿದು ಕೊಂಡು ಬಿಡುತ್ತಿದ್ದೆ. ವೇದಿಕೆ ಇಳಿಯುವಾಗ ಕೂಡ ಅವರ ಕೈ ಹಿಡಿದು ಕೊಂಡೇ ಇದ್ದೆ. ಅವರ ಜವಾಬ್ದಾರಿ ತಮ್ಮ ಕಡೆ ವರ್ಗಾಯಿಸಿಕೊಂಡ ಅವರ ಮಗಳು ಕ್ಷಮಾ ‘ಇವರು ನಮ್ಮ ಅಪ್ಪ’ ಎಂದು ನನ್ನ ಕಡೆ ನೋಡಿ ನಕ್ಕರು. ಎನ್.ಎಸ್.ಎಲ್ ಆ ಕ್ಷಣ ನನ್ನ ಕಡೆ ನೋಡಿ ನಕ್ಕು.. ‘ಇವನೂ ನನಗೆ ಮಗನೇ’ ಎಂದು ನಕ್ಕಿದ್ದರು. ಒಂದು ರೀತಿಯಲ್ಲಿ ಸಾರ್ಥಕ ಭಾವ ತಂದ ಕ್ಷಣ ಅದು.
ಇದಾದ ಕೆಲವು ದಿನಗಳ ನಂತರ ನಾನು ಮೊನೋಟೈಪ್‍ನಿಂದ ಸುಚಿತ್ರ ಫಿಲಂ ಸೊಸೈಟಿಗೆ ನಡೆದು ಕೊಂಡ ಹೋಗಬೇಕಿತ್ತು. ಆಗ ಎನ್.ಎಸ್.ಎಲ್. ಅವರ ಮನೆಯ ಮುಂದೆ ಕುಳಿತಿದ್ದರು. ಹೋಗಿ ಮಾತನಾಡಿಸಿದೆ. ಲವಲವಿಕೆಯಿಂದಲೇ ಮಾತನಾಡಿ ಒಳಗೆ ಬನ್ನಿ ಎಂದರು. ‘ಸರ್ ಇನ್ನೊಂದು ದಿನ ಬರುತ್ತೇನೆ’ ಎಂದೆ. ಅವತ್ತು ನಿಜಕ್ಕೂ ತುರ್ತು ಇತ್ತು. ಆದರೆ ಆ ಇನ್ನೊಂದು ದಿನ ಬರಲೇ ಇಲ್ಲ. ಎನ್.ಎಸ್.ಎಲ್ ಅವರ ಜೊತೆಗೆ ಅದೇ ಕೊನೆಯ ಭೇಟಿ ಆಯಿತು.
ಎನ್.ಎಸ್.ಎಲ್ ಎಂದರೆ ಹೀಗೆ ನಲಿವು, ಒಲವು, ಹುಸಿ ಮುನಿಸು, ಅಪ್ಪಟ ಪ್ರೀತಿ ಎಲ್ಲವೂ ತುಂಬಿದ ನೀಲಾಂಜನದ ನೆನಪಾಗುತ್ತದೆ. ಹೋಗಿ ಬನ್ನಿ ಸಾರ್. ನಿಮ್ಮ ನೆನಪಿನ ನೀಲಾಂಜನ ಮನದಲ್ಲಿ ಸದಾ ಉರಿಯುತ್ತಲೇ ಇರುತ್ತದೆ.
———o———
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ