ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ರಶ್ಮಿ ಹೆಗಡೆ
ಇತ್ತೀಚಿನ ಬರಹಗಳು: ಡಾ. ರಶ್ಮಿ ಹೆಗಡೆ (ಎಲ್ಲವನ್ನು ಓದಿ)

ದಿನ ಬೆಳಗಾದ್ರೆ ಧಾರ್ವಾಡದ ಚೆನ್ನಮ್ಮ ಹಾಸ್ಟೆಲ್‌ನಲ್ಲಿ ಪ್ರಿಯಾಳ ಕನ್ನಡ ಸಿನಿಮಾ ಹಾಡುಗಳ ಹಳೇ ಮತ್ತು ಹೊಸ ರಿಮಿಕ್ಸ್‌ಗಳ ಮೆಡ್ಲಿ ಚಾಲೂ ಆಗಿ, ನಮ್ಮೆಲ್ಲರನ್ನ ಲವಲವಿಕೆಯಿಂದಿಡುತಿತ್ತು. ಉದಾ: ಸಾಲು ಬಾತ್‌ ರೂಂಗಳ ಮುಂದೆ ಕ್ಯೂ ಹೆಚ್ಚಿ,  ಕ್ಲಾಸ್‌ಗೆ ಲೇಟಾಗುವ ಟೆನ್‌ಶನ್‌ ಮರೆಸಲು ಇವಳ ಪದಗಳು ಹೀಗೆ – ʼನೀನೇ ಸ್ನಾನದಾ ಮಣೆ, ನಾನೇ ಕಾಯುವಾ ಗಿಣೀ…….. ಕಾದ್‌ ಕಾದೂ ಮುದುಕಿಯಾದ್ನಲ್ಲೇ …  ಎಷ್ಟು ಹೈಪಿಚ್ಚ್‌ಗೆ ಹೋದ್ರೂ ಅವಳ ತಾರಕ ಸ್ವರ  ಕೀರಲಾಗದೇ, ನಮ್ಮ ಕನ್ನಡ ಜಾನಪದದ ಸಂಗೀತದ ಎನರ್ಜಿಯನ್ನ ಪ್ರತಿನಿಧಿಸಬಹುದಾದ ಎಲ್ಲ ಖಡಕ್  ಲಕ್ಷಣ ಅವಳ ದನಿಗಿತ್ತು. 

ಹೀಗೆ ಕಾದು ಕಾದು ಮುದುಕಿಯಾಗುವ ಭಯವಿದ್ಯೇನೋ ಎಂಬಂತೇ ಎಂ.ಎ. ಮುಗಿಯೋದ್ರೊಳಗೇ ಅವಳ ಮದುವೆ ನಿಶ್ಚಿಯವಾಗಿ, ರಿಸಲ್ಟು ಬರೋದ್ರೊಳಗೆ ನಮ್ಮ ಬಿಗರ್‌ – ಪಿಜಿ ಗ್ರೂಪಿನ ಎರಡನೇ ‘ಮ್ಯಾರೀಡ್ ಬರ್ಡ್‌’ ಆದಳು. ಎಲ್ಲರಿಗೂ ಪ್ರಿಯವಾದ ಪ್ರಿಯಾ ಎಷ್ಟು ಮೆಚ್ಯೂರ್‌ ಆಗಿದ್ಲೋಳು ಈಗ ಅಮ್ಮನಾಗಿ ಪುಟ್ಟ ಹುಡುಗಿಯಂತೇ ಸಿಡಿಮಿಡಿಗೊಳ್ಳುವುದರ ಜತೆಗೇ ನನಗೊಂದು ಪ್ರಶ್ನೆಯ ಬಾಣ.

ನೀವೇನು ಡಿಂಕ?! ಎಂದು ಕೇಳಿದ ಅವಳಿಗೆ  ಏನೆನ್ನಲಿ ?

ಡಬಲ್‌ ಇನಕಂ ನೋ ಕಿಡ್ ಎಂಬುವ ಫ್ಯಾಶನ್‌ ಸೂತ್ರ  ಮೇಲಿನಿಂದ ಹೆಮ್ಮೆಯ ಹೇಳಿಕೆ ಎನ್ನಿಸಿದರೂ ಮಾಧ್ಯಮ ವರ್ಗದ ಬದುಕಿಗೆ ಇಂಥವೆಲ್ಲ ಸ್ಟಿಕ್ಕರುಗಳು ಬ್ಯಾಡ್ಜ್  ಗಳು  ತಮ್ಮ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಬೇಕಾಗುತ್ತದೆ. ಎನಿಸಿದ್ರೂ ತಕ್ಕಣ ಅದನ್ನ ಕುರಿತಂತೆ ಹೇಳಹೋಗಲಿಲ್ಲ ನಾನು. ಈ ರಸ್ತೆ , ಟ್ರಾಫಿಕ್ಕೂ ಪಾರ್ಕ್‌ಗಳ ಸಮ್ಮೇಳನವು ಪುಟ್ಟ ಮಗಳೆದರು ವಣ ವೇದಾಂತವಾಗ ಬಹುದಾಗಿದ್ದ ನನ್ನ ಅಭಿಪ್ರಾಯಗಳನ್ನ ಕಾದಿರಿಸಿದೆ. ಸಂಜೆ ನಿಂಗೆ ಒಂದು ಪುಟ್ಟ ಕತೆ ಕಳಿಸ್ತೇನೆ ಮೊಬೈಲ್‌ ನೋಡೆಂದೆ ಪ್ರಿಯಾಗೆ……. ಒಂದು ಐಸ್‌ಕ್ರೀಂಗೆ ಅವತ್ತಿನ ನಮ್ಮ ಪುಟ್ಟ ಭೇಟಿ ಚೊಕ್ಕವಾಗಿ ಮುಗೀತು. ಅವಳಿಗೆ ನನ್ನ ಹೊಸ ಆಫೀಸಿಗೆ ನುಗ್ಗಿ ನನ್ನ ಇರವನ್ನ ತನ್ನ ಗೆಳೆತನವನ್ನ ಸಂಭ್ರಮಿಸುವ ಮನಸು ಬಹಳೇ ಇತ್ತು ನಾನು ಹೆದರಿದೆ. ಜೀವಂತ ಬೊಂಬೆಯನ್ನ ಕೈಲಿ ಹಿಡಿದು ತೀರ ಅನೌಪೌಚಾರಿಕವಾಗಿ ಪಾಲ್ಗೋಳ್ಳುವಂಥದ್ದೇನೂ ನನ್ನ ಈ ಹೈಪ್ರೋಫೈಲ್‌ಗಳಿಂದ ತುಂಬಿ ತುಳುಕುವ ಆಫೀಸ್‌ನಲ್ಲಿರಲಿಲ್ಲ. ಅಲ್ಲಿ ಯಾರಿಗಾದ್ರೂ ʼಡಿಸ್ಟರ್ಬ್ʼ ಆಗಿ ತೊಂದರೆ ಪಡುವುದು ಬೇಡ; ನನಗೆ ಅರ್ಥವಾಗದ ಪ್ರೊಫೆಷನಲ್‌ ಬದುಕನ್ನ ಈ ಮೂರೊರ್ಷದ ಮಗಳಿಗೆಲ್ಲಿಂದ ತಿಳಿಹೇಳಲಿ…!? ಎಂದು ಅವರಿಬ್ಬರನ್ನೂ ಅವಾಯ್ಡ್‌ ಮಾಡಿದೆ. 

    ಮನೆಗೋಗಿದ್ದೇ ಮೊಬೈಲ್‌ನಲ್ಲಿ ಅವಳಿಗೊಂದು ಪುಟ್ಟ ಮೆಸೇಜಿಟ್ಟೆ. ಅದರ ಸಾರಾಂಶವೆಂದರೆ; ಕಳೆದ ವರ್ಷ ನಮ್ಮ ಪಿ.ಎಚ್.ಡಿ ಹಾಸ್ಟೆಲ್‌ಗೆ ಹೋಗಿ ನಾಲ್ಕು ದಿನ ಉಳಿದುಕೊಂಡು ಥೀಸಿಸ್ ಇಂಪ್ರೋವ್‌ ಮಾಡಲಿಕ್ಕೆ ನಮ್ಮ  ರೀಸರ್ಚ್‌ ಗೈಡ್‌ ಅವರ ಅಪಾಯಿಂಟ್‌ಮೆಂಟ್‌ಗೆ ಕಾಯುತ್ತ, ಬಿಡುವಲ್ಲಿ ಲೈಬ್ರರಿ ಕೆಲಸಮಾಡಿಕೊಂಡಿದ್ದೆ ಪ್ರಿಯಾ, ಇಷ್ಟು ವರ್ಷ ಹಳೇ ಮಿತ್ರರೆಲ್ಲ ತಂತಮ್ಮ ಕೆಲಸ ಮುಗಿಸಿ ಪಯಣ ಮುಂದುವರೆಸಿದ್ದರು. ಈ ವರ್ಷ- ಅಂದ್ರೆ ನನ್ನ ವಿವಾಹವಾಗಿ, ಒಂದೆರಡು ವಿದೇಶ ಪ್ರಯಾಣಗಳು (ಪತಿಜೊತೆಗೆ), ಇಂಡಿಯಾ ವಾಪಾಸ್ಸಾಗಿ ಒಂದೆರಡು ನೌಕರೀ ಪ್ರಯತ್ನಗಳ ಜತೆಗೆ ಸಂಶೋಧನ ಪ್ರಬಂಧದ ಕೆಲಸ ನನಗರಿವಿಲ್ಲದಂತೇ ನಜ್ಜುಗಜ್ಜಾಗಿತ್ತು; ನಮ್ಮೂರ ಮಳೆಗಾಲದ ರಸ್ತೆಯಲ್ಲಿ ಬಿದ್ದೇಳುವ ಬೈಕ್‌ ಮತ್ತದರ ಸವಾರ ಥರಾ ಈಗ ನನ್ನ ಬದುಕಿನ ಸೂತ್ರ ಮೂರು ಗುಂಪುಗಳಲ್ಲಿ ಸೀಳಿ ಕೊಂಡಿತ್ತು .ಮೊದಲ ಗುಂಪು- ಮದುವೆಯಾಗಿ ಮೂರನೇ ವರ್ಷ ಇದು ಮಗುವಿಗಾಗಿ ನಿಮ್ಮ ತಯಾರಿ ಇರಬೇಕು ಎಂದರೆ ಎರಡನೇ ಗುಂಪು ಸುಮ್ಮನೇ ಥೀಸಿಸ್‌ ಬರೆದು ಮುಗಿಸು, ವಿದೇಶದಲ್ಲಿರೋ ಪತಿ ಅಲ್ಲಿರುವಾಗಲೇ ಈ ಸಂಶೋಧನೆ, ಕ್ಷೇತ್ರಕಾರ್ಯದ ಜಡಕುಗಳನ್ನ ಮುಗಿಸಿ ಫ್ರೀಯಾಗೂ, ಮಾಡ್ತಾ ಇರೋ ಸಣ್ಣ ನೌಕರಿ ಬಿಟ್ಟು ಸುಮ್ಮನೇ ಹಗಲು ರಾತ್ರಿ ಕೂತು ಥೀಸಿಸ್‌ ಬರಿ. ಗೈಡ್‌ ಯಾಕೆ ಡಿಲೇ ಮಾಡ್ತಾರೆ? ನಿಂಗೆ ಟೈಂ ಕೊಟ್ಟೇ ಕೊಡ್ತಾರೆ=ಅಂತಿತ್ತು. ಈ ನಡುವೇ ಪತಿರಾಯರ ಕಂಪನಿಯಲ್ಲಿ ಸಾವಿರ ಜನ ಉದ್ಯೋಗಿಗಳನ್ನ (ಲೇ ಆಫ್)‌ ಆರ್ಥಿಕ ಹಿoಜರಿತದ ಮೊದಲನೇ ಅಲೆಯಲ್ಲಿ ಕೆಲಸದಿಂದ ವಜಾ ಮಾಡಲಾಗಿತ್ತು. ನನಗೆ ಇರುವ (ಪುಟ್ಟ) ನೌಕರಿಯನ್ನ ವರುಷ ತುಂಬುವೊಳಗೇ ಬಿಡುವ ಧೈರ್ಯವಿರಲಿಲ್ಲ. ನನ್ನ ಆತ್ಮ ಮೂರನೇ ಗುಂಪಿನಲ್ಲಿತ್ತು ಜತೆಗೆ ಯಾರಿದ್ದರು ಅಂತ ಲೆಕ್ಕ  ಮಾಡುವ ವ್ಯವಧಾನವಾಗಲೇ ಸತ್ತು  ಮೂರ್ಕಾಲವಾಗಿತ್ತು. 

ಅಂದು ಬೆಳಬೆಳಗ್ಗೆ ಹಾಸ್ಟೆಲ್‌ನಲ್ಲಿ ಮೆಸ್‌ ಆಂಟೀ ಜತೆ ಉಭಯ ಕುಶಲ ಮಾತಾಡ್ತ  ಉಪ್ಪಿಟ್ಟು ನಾಷ್ಟಾ ತಗೋಳ್ತಿದ್ದಾಗ ಒಂದು ಇನಿದನಿಯ ಸಂಶೋಧಕಿ ನನ್ನ ಪಕ್ಕವೇ ಉಪಹಾರ ಸೇವಿಸುತ್ತಿದ್ದುದು, ನನ್ನ ಪರಿಚಯ ಕೇಳಿದರು. ಸಹಜವಾಗಿ ಶುರುವಾದ ಮಾತುಕತೆ ನಿಮ್ಮ ಸಂಶೋಧನೆ ಎಲ್ಲಿವರೆಗೆ ಬಂತು? ಎಂಬಲ್ಲಿಗೆ, ನಾನು ಹೇಳಿದೆ ಮಹಾಪ್ರಬಂಧದ ಮುಖ್ಯ ವಿಷಯದ ಮೂರು ವಿಭಾಗಗಳು ಬಹುತೇಕ ಮುಗಿದಿವೆ. ಪಂಚಾಯಾತ್ಮಕವಾದ ಮೊದಲೆರಡು ಅಧ್ಯಾಯಗಳನ್ನ ಬರಿಯಬೇಕಿದೆ. ಸರಳ ಅಂದ್ಕೊಂಡಿದ್ದು ಸಿಕ್ಕಾಕೊಂಡಿದೆ. ನೀವೆಲ್ಲಿರೋದು, ನಿಮ್ಮನ್ನ ನೋಡಿರಲಿಲ್ಲ ಈ ಮೊದಲು ಎಲ್ಲಿ ಎಂದಾಗ, ಅವರೆಂದರು:

 ಊರು ಮಂತ್ರಾಲಯದ ಹತ್ತಿರ ಸಂಶೋಧನೆಗಾಗಿ ಮಂಗಳೂರು ಕಡೆಗೆಲ್ಲ ಓಡಾಡಿಕೊಂಡು, ಕಳೆದ ವರ್ಷ ಮಾಹಿತಿಗಳನ್ನೆಲ್ಲ ಕಲೆ ಹಾಕಿ ಸ್ಪೈರಲ್ ಬೈಂಡ್ಮಾಡಿಸಿದ್ದೆ. ರಾಯಚೂರಿನ ಪದವಿ ಕಾಲೇಜಿನಲ್ಲಿ ಸೋಶಿಯಲ್‌ ವರ್ಕ್‌ ಗೆಸ್ಟ್‌ ಲೆಕ್ಚರರ್‌ ಆಗಿ ಕೆಲಸ ಮಾಡ್ತಿದ್ದೆ. ಈಗ ಈ ವರ್ಷ ಮತ್ತೆ ಡೇಟಾ ಸಂಗ್ರಹಿಸುವಂತಾಯ್ತು ಕೆಲ ತಿಂಗಳು ಬ್ರೇಕ್‌ ತಗೊಂಡಿದ್ದೆ……. ಎಂದಾಗ ಸಹಜ ಕುತೂಹಲಕ್ಕೆ ಕೇಳಿದೆ ಯಾಕೆ ಏನಾಯಿತು? ಕ್ಷೇತ್ರಾಕಾರ್ಯ ಮುಗೀತಂದಲ್ಲವ? ಅವರು ಕಣ್ಣಲ್ಲಿ ಕಣ್ಣಿಟ್ಟು ಒಮ್ಮೆ ನೋಡಿ ಒ oದು ಖಂಡಕಾವ್ಯವನ್ನ “ಸರಳೀಕರಿಸಿ ಕೊಟ್ಟರು ನನಗೆ…….! ಈಗ್ಗೆ ನಾಲ್ಕು ವರ್ಷಗಳಿಂದ ಅರೆಕಾಲಿಕ ಸಂಶೋಧನೆ ಮತ್ತು ಗೆಸ್ಟ್‌ ಲೆಕ್ಚರರ್‌ ಕೆಲಸ ತೂಗಿಸಿಕೊಂಡು ಹೋಗ್ತಿದ್ದರಂತೆ. ಈಗೊಂದು ನಾಲ್ಕು ತಿಂಗಳ ಹಿಂದೆ ಮಂಗಳೂರಲ್ಲಿ ಮಾಡಿದ್ದ ಹಂಗಾಮೀ ವಾಸ್ತವ್ಯವನ್ನ ತೆರವುಗೊಳಿಸಿಕೊಂಡು ಲಗ್ಗೇಜುಗಳೊಂದಿಗೆ ರಾಯಚೂರಿಗೆ ಮರಳುವಾಗ ಅವರ ಮುಖ್ಯ ಸೂಟ್‌ಕೇಸು ಕಳುವಾಯ್ತಂತೆ, ಕ್ಷೇತ್ರಕಾರ್ಯದ ದತ್ತಾಂಶಗಳು, ಅಂಕಿಅಂಶಗಳ ವಿವರ, ಮಾರ್ಕ್ಸ್‌ಕಾರ್ಡುಗಳು ಮತ್ತು ಕೆಲ ಮೂಲ ಸರ್ಟಿಫಿಕೇಟುಗಳೂ ಜತೆಗಿದ್ದ ಸೂಟ್‌ಕೇಸದು. ಊರಿಗೆ ಮರಳಿ ಕಂಪ್ಲೇಟು ಕೊಟ್ಟು, ಸರ್ಟಿಫೀಕೇಟುಗಳ ಎರಡನೇ ಕಾಪಿಗಳಿಗೆಲ್ಲ ಅರ್ಜಿ ಬರಕೊಂಡು ಕೂತಿರುವಾಗ ಜತಗೇ ಎರಡನೇ ಹಂತದ ಕ್ಷೇತ್ರಕಾರ್ಯವನ್ನು ಮುಗಿಸೋ ಗಡಿಬಿಡಿಯಲ್ಲಿದ್ದಾಗ ಬೆಂಗಳೂರು, ರಾಯಚೂರು  ಮಂಗಳೂರು ಧಾರವಾಡ ಅಂತ ಸಿಕ್ಕಾಪಟ್ಟೆ ಬಸ್‌ ಪ್ರಯಾಣಗಳು ಜಾಸ್ತಿಯಾಗಿದ್ದೇ, ಅರಿವಾಗಲಿಲ್ಲ ನೋಡಿ- ಎರಡು ವರ್ಷಗಳಿಂದ ಮಗುವಿಗಾಗಿ ಹoಬಲಿಸಿದ್ದೇ ಒಂದು ಕಮಿಟ್‌ ಮೆಂಟಿತ್ತು, ನಾಲ್ಕೂವರೆ ತಿಂಗಳ ಪ್ರೆಗ್ನೆoಟು ಇದ್ದೆ ಅನ್ನೋದೇ  ಗೊತ್ತಾಗಲಿಲ್ಲ ಸಡನ್ನಾಗಿ ಅಬಾರ್ಶನ್ನಾಯ್ತು……… ಒಂದೆರಡು ತಿಂಗಳು ರೆಸ್ಟ್‌ ಮಾಡಿದೆ. ಈಗ ಮತ್ತೆ ಯೂನಿವರ್ಸಿಟಿ, ಲೈಬ್ರರಿ ಅಂತ ಅರ್ಧಕ್ಕೆ ನಿಂತ ಥಿಸೀಸ್  ( ಮಹಾಪ್ರಬಂಧ ಪರಿಷ್ಕರಣೆ ) ಇಂಪ್ರಾವೈಸ್‌ ಮಾಡ್ಬೇಕಿದೆಯಲ್ಲ ಅಂತ ಬಂದೆ…… ಅವರ ಮಾತು ಮುಗಿದಿದ್ದರೂ ನಾನು ದಿಟ್ಟಿಸುತ್ತಲೇ ಇದ್ದೆ….. “ಇನ್ನೆನೂ ಉಳಿದಿಲ್ಲ ತಾನೆ”  ಎನ್ನುವಂತ ಆರ್ತ ಕ್ಷಣ ಅದು. ಕ್ಷಣ ಮರಗಟ್ಟಿದೆ..

 “ಇದಲ್ಲವೇ ಹೆಣ್ಣೆಂದರೆ…..!? ಇದಲ್ಲವೇ ನಿಜವಾದ ಸಂಶೋಧನೆಯೆಂದರೆ………? ನೀನೇ ಹೇಳು ಪ್ರಿಯಾ ಇನ್ನೊಂದೂ ವೃತ್ತಿಯ ಸೋಲಿಗೆ, ಪ್ರವೃತ್ತಿಯ ಹಂಬಲಕ್ಕೆ ಕೈಯಲ್ಲಿರೋ ಮಗುವನ್ನ ಮುಂದಿರಿಸಬೇಕಾ ಅಡ್ಡಕೊಕ್ಕೆಯಂತೆ, ಪ್ರಪಂಚದ ಎಲ್ಲ ಸುಖಕ್ಕೂ ಮಿತಿಯಾದ ತಕ್ಕಡಿಯಿದೆ. ಜ್ಞಾನಾರ್ಜನೆಯಿಂದ ಪಡೆವ ಸತ್ವಕ್ಕೆ ಎಲ್ಲಿದೆ ಮಿತಿಯೆಂಬುದು? ಸುಮ್ಮನೇ ಖುಷಿಯನಿಸಿದ್ದನ್ನ ಕೈಗೆಟುಕುವ ಸಮಯದಲ್ಲಿ ಸ್ಟಡೀ ಮಾಡಿಕೊಂಡಿರು. ಒಂದಿಲ್ಲೊಂದಿನ ನಿನ್ನ ಜನಪದ ಗೀತೆಗಳನ್ನ ಯೂಟ್ಯೂಬ್‌ನಲ್ಲಿ ನಿನ್ನ ದನಿ,ಮುಖಾಂತ್ರ ನೋಡ್ತೇನೆ ಅನ್ನೋ ವಿಶ್ವಾಸ  ನನಗಿದೆ..” ಎಂದು ಮೆಸೇಜಿಸಿದೆ. ನನ್ನ ದನಿಯ ಇಷ್ಟುದ್ದದ ಕತೆ ಕೇಳಿರ್ತಾಳೋ ಎನ್ನುವ ಅಳುಕಿತ್ತು ನಂತ್ರಾ ಪರಿಹಾರವಾಯ್ತು.

***********