- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ನಮ್ಮೊಳಗೆ ನಾವು ಮುಳುಗಿರದೆ, ನಮ್ಮ ಬೇಕು-ಬೇಡಗಳ ಜಾಲದಿಂದ ಹೊರಗೆ ಬಂದು, ಹೊರಗೆ ಕಣ್ಣು ಹಾಯಿಸಿ ನಮ್ಮ ‘ಒಲವಿನ’ ಬುತ್ತಿಯನ್ನು ಇತರರ ಜೊತೆ ಹಂಚಿಕೊಂಡು ತೃಪ್ತಿ ಪಡುವ ಮಾನವನ ಅದಮ್ಯ ಆಶಯಕ್ಕೆ ಕಾರಣವೇನು? ಇದರ ಅಗತ್ಯ ಹಾಗೂ ಅವಶ್ಯಕತೆಗಳನ್ನು ಮಾನವನು ಮನಗಂಡದ್ದಾದರೂ ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುತ್ತ ಹೋದಂತೆ, ನಮಗೆ ಎಷ್ಟೋ ಧರ್ಮಶಾಸ್ತ್ರಜ್ಞರು, ದಾರ್ಶನಿಕರು, ಸಾಹಿತಿಗಳು ಇದರ ಕುರಿತು ವ್ಯಕ್ತ ಪಡಿಸಿದ ಅನೇಕ ಅಭಿಪ್ರಾಯಗಳು ದೊರೆಯುತ್ತವೆ. ಆದರೆ,ಇದಕ್ಕೆ ವಿಜ್ಞಾನದ ಆಧಾರವೇನಾದರೂ ಇರಬಹುದೇನು ಎಂದು ಅನುಮಾನಿಸುತ್ತಿದ್ದಂತೆ, ಕೆಲವು ವರ್ಷಗಳ ಹಿಂದೆ ‘ ರೀಡರ್ಸ್ ಡೈಜೆಸ್ಟ’ ಇಂಗ್ಲಿಷ್ ಮಾಸ ಪತ್ರಿಕೆಯಲ್ಲಿ, ಮಿದುಳಿನ ವಿಕಸನದ ಕುರಿತು ಬರೆಯಲ್ಪಟ್ಟ ಒಂದು ಕುತೂಹಲಕಾರಿ ಲೇಖನವೊಂದು ಕಣ್ಣಿಗೆ ಬಿದ್ದಿತು. ಅದರ ಕೆಲವೊಂದು ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳ ಬಯಸುವೆ.
‘ ಮಿದುಳಿನ ಬಗ್ಗೆ ಅರಿತುಕೊಳ್ಳುವದು, ನಮ್ಮ ಶೋಧನೆಯ ಕಟ್ಟಕಡೆಯ ಪಯಣ’ , ಎಷ್ಟೋ ಮಿಲಿಯ ವರ್ಷಗಳಿಂದ ಮಾನವನ ಶರೀರದಲ್ಲಿನ ಈ ಅದ್ಭುತ ಅಂಗ ವಿಕಸನಗೊಳ್ಳುತ್ತಾ ಬರುತ್ತಿದೆ. ಜಾನ್ಸ್ ಹಾಪಕಿನ್ಸ್ ವಿಶ್ವ ವಿದ್ಯಾಲಯದ ಖ್ಯಾತ ನರ ವಿಜ್ಞಾನಿ ಡೇವಿಡ್ ಲಿಂಡನ್, ಐಸ್ ಕ್ರೀಂ ಕೋನಿನಲ್ಲಿ ಸಟುಕದಿಂದ ಐಸ್ ಕ್ರೀಂ ತುಂಬುವದಕ್ಕೆ ಹೋಲಿಸುತ್ತಾರೆ ಈ ಪ್ರಕ್ರಿಯೆಯನ್ನು.
ಬದುಕಿ ಉಳಿಯಲು- ಸಂಬಂಧಪಟ್ಟ ವರ್ತನೆಗೆ ಹಾಗೂ ಲೈಂಗಿಕ ಕ್ರಿಯೆ ಮತ್ತು ಆಹಾರ ಸೇವನೆಗೆ ಸಂಬಂಧಪಟ್ಟ ಕ್ರಿಯೆಗಳನ್ನು ನಿಯಂತ್ರಿಸುವ ಕೆಳಭಾಗಗಳಾದ ಸೆರಿಬೆಲ್ಲಮ್ ಮತ್ತು ಹೈಪೋಥ್ಯಾಲಮಸ್ ಗಳು ಹೆಚ್ಚು ವಿಕಸನಗೊಂಡಿಲ್ಲ, ಇವುಗಳಲ್ಲಿ ನಮಗೂ ಮತ್ತು ಹಲ್ಲಿಗಳ ಮಿದುಳಿನಲ್ಲಿ ಯಾವ ವ್ಯತ್ಯಾಸವಿಲ್ಲ. ವಿಕಸನದ ಪಥದಲ್ಲಿ, ಇದು ಸಟುಕದಿಂದ ತುಂಬಿದ ಮೊದಲನೆಯ ಐಸ್ಕ್ರೀಂ ಮುದ್ದೆ ಎನ್ನುತ್ತಾರೆ ವಿಜ್ಞಾನಿ ಡೇವಿಡ್ ಲಿಂಡನ್.
ಭಾವನೆಗಳ ಸಾಗಣಿಕೆಯನ್ನು ನಿಯಂತ್ರಿಸುವ ಹಿಪ್ಪೊಕ್ಯಾಂಪಸ್ ಹಾಗೂ ಅಮೈಗ್ಡಲಾ, ಇಲಿಗಳಲ್ಲಿ ಹಲ್ಲಿಗಳಿಗಿಂತ ಹೆಚ್ಚು ವಿಸ್ತಾರವಾಗಿದ್ದು, ಇದು ಸಟುಕದಿಂದ ತುಂಬಿದ ಎರಡನೆಯ ಮುದ್ದೆ.
ಇನ್ನೂ ಮೇಲಕ್ಕೆ ಹೋದಂತೆ ಮನುಷ್ಯರಲ್ಲಿ ಕಾಣಿಸಿಕೊಳ್ಳುವದೇ ದೈತ್ಯಾಕಾರದ ಸಂಕೀರ್ಣವಾದ ತೊಗಟೆ( ಕಾರ್ಟೆಕ್ಸ್), ಇದೇ ಎಲ್ಲದರ ಮೇಲೆ ಇರಿಸಿದ ಮುದ್ದೆ, ಇದುವೇ ನಮ್ಮ ಭಾವನೆಗಳಿಗೆ-ಭಾಷೆಗೆ ನಿವಾಸ ಸ್ಥಾನ ಎನ್ನುತ್ತಾರೆ ಡೇವಿಡ್ ಲಿಂಡನ್.
ಇಲ್ಲಿಯ ತನಕ, ನಾನು ಮಾತನಾಡುತ್ತಿರುವದು ಒಲವಿನ ಕುರಿತೋ ಅಥವಾ ಮನುಷ್ಯನ ಅಂಗರಚನೆಯ(ಅನಾಟಮಿ) ಬಗ್ಗೆಯೊ; ಮಿದುಳಿಗೂ ಮತ್ತು ಒಲವಿಗೂ ಏನು ಬಾದರಾಯಣ ಸಂಬಂಧ ಎಂದು ನಿಮಗೆ ಅನಿಸಿರಲಿಕ್ಕೂ ಸಾಕು. ಹಾಗೆ ಅನಿಸಿದ್ದಾದರೆ ಅದು ಸಹಜವೆ. ಆದರೆ, ಭಾವನೆ- ಭಾಷೆಗಳ ಮನೆ ಇರುವದು ಕೇವಲ ಮಾನವನ ಮಿದುಳಿನಲ್ಲಿ ಎಂದು ಗೊತ್ತಾದಾಗ, ಮತ್ತು ಅದು ಎಲ್ಲ ಭಾವನೆಗಳ – ಒಲವೂ ಸೇರಿದಂತೆ ಮತ್ತು ಭಾಷೆಯ ಮೂಲ ಸ್ರೋತವೆಂದಾದ ಮೇಲೆ, ಇದು ನಮ್ಮ ಸಾಹಿತ್ಯ ರಚನೆಯ ಉಗಮಸ್ಥಾನವಾಯಿತಲ್ಲವೆ; ಇದೇ ನನ್ನ ಆಸಕ್ತಿ ಕೆರಳಿಸಿದ್ದು ಮತ್ತು ಇದೇ ನಮ್ಮೆಲ್ಲರನ್ನು ಒಟ್ಟುಗೂಡಿಸಿದ್ದು.
ಮಾನವರಿಗೆ ಹಾಗೂ ಇಲಿಗಳಿಗೆ ಆಹಾರ ಸೇವನೆ ಮತ್ತು ಸಂತಾನ ಉತ್ಪತ್ತಿಗಳಿಂದ ಆನಂದ ಸಿಗುವದು. ಇದು ಅಸ್ತಿತ್ವಕ್ಕೆ ಹಾಗೂ ವಂಶವಾಹಿಗಳನ್ನು ಬಳುವಳಿಯಾಗಿ ರವಾನಿಸಲು ಬೇಕಾದ ಅವಶ್ಯಕ ಅಂಶಗಳು. ಆದರೆ, ವಿಕಾಸದ ದೃಷ್ಟಿಯಿಂದ ಯಾವುದೇ ಲಾಭ-ಅನುಕೂಲತೆಗಳು ಇರದಿರುವ ಉಪವಾಸ ವೃತಗಳನ್ನು, ಬ್ರಹ್ಮಚರ್ಯ ಮುಂತಾದದುವುಗಳನ್ನು ಆಚರಿಸಿ ಆನಂದ ಪಡೆಯುವದು ಮಾನವನಿಗಷ್ಟೇ ಸಾಧ್ಯ.
ಮಾನವನ ವಿಚಾರ ಸರಣಿಯಿಂದ ಪುರಾತನವಾದ ಮಿದುಳಿನ ಆಹ್ಲಾದ ನೀಡುವ ಜಾಲವನ್ನು ಉನ್ನತ ಹಾಗೂ ಸಂಕೀರ್ಣ ಸ್ತರಕ್ಕೆ ಕೊಂಡೊಯ್ದು ಚಾಲನೆ ನೀಡ ಬಲ್ಲ ಸಾಧ್ಯತೆ, ಪವಾಡ ಸದೃಶವಾದುದು ಎಂದು ಅಭಿಪ್ರಾಯ ಪಡುತ್ತಾರೆ ಡೇವಿಡ್ ಲಿಂಡನ್.
‘ ದೆಟ್ ವಿ ಕ್ಯಾನ್ ಟೇಕ್ ಪ್ಲೆಜರ್ ಫ್ರಾಮ್ ಥಿಂಗ್ಸ್ ದೆಟ್ ಆರ್ ಆರ್ಬಿಟ್ರರಿ ಇಸ್ ವಾಟ್ ಎನ್ರಿಚಸ್ ಸೋ ಮಚ್ ಆಫ್ ಅವರ್ ಲೈವೆಸ್- (ಅನಿಯಂತ್ರಿತ ವಿಷಯಗಳಿಂದಲೂ ಖುಷಿ ಪಡುವ ಸಾಧ್ಯತೆ ನಮ್ಮ ಬಾಳಿನ ಸಿರಿಯನ್ನು ಹೆಚ್ಚಿಸುತ್ತದೆ) ’ .
ಈ ಸಾಧ್ಯತೆ ಆಶಾದಾಯಕವಾಗಿದ್ದು, ಇದರ ನೆರವಿನಿಂದ ‘ಒಲವಿನ’ ಪರಿಧಿ ವಿಸ್ತಾರಗೊಳಿಸಿ ಎಲ್ಲೆಗಳನ್ನು ಮೀರಿ ಎಲ್ಲರನ್ನು ಒಳಗೊಳ್ಳಬಲ್ಲ ಸತ್ವಯುತವಾದ ಸಮಾಜದ ನಿರ್ಮಾಣದ ಕನಸು ಅಂಕುರವಾಗುತ್ತದೆ.
‘ ವಿಕಾಸ’ ನೀರ್ಗಲ್ಲು ಕರಗಿದಷ್ಟು ಮಂದ ಗತಿಯಲ್ಲಿ ನಡೆಯುವ ಪ್ರಕ್ರಿಯಯಾದರೂ, ನಮ್ಮ ‘ ವೈಯಕ್ತಿಕ’ ವಿಕಾಸ ನಮ್ಮ ಜೀವಮಾನಗಳಲ್ಲಿ ಸಾಧಿಸಬಹುದು ಎನ್ನುತ್ತಾರೆ ಪ್ರಸಿದ್ಧ ನರ ತಜ್ಞ ಹಾಗೂ ಮನೋವೈಜ್ಞಾನಿಕ, ರಿಕ್ ಹಾನ್ಸನ್. ‘ ಒಟ್ಠಾಗಿ ಉದ್ದೀಪನೆಗೊಂಡ ನರಕೋಶಗಳು ಒಟ್ಟಾಗಿ ಹೆಣೆಯಲ್ಪಡುತ್ತವೆ ‘ ಎಂಬ ಪ್ರಸಿದ್ಧವಾದ ಉಕ್ತಿಯಂತೆ, ಅನುರಣಿತಗೊಂಡ ಭಾವನೆಗಳ ಹಾಗೂ ವಿಚಾರಗಳ ಮಾದರಿಯಿಂದ ನಮ್ಮ ಮಿದುಳಿನ ಸ್ವರೂಪದಲ್ಲಿ ಬದಲಾವಣೆ ಬರುತ್ತದೆ. ಇಂತಹ ಧನಾತ್ಮಕ ಚಿಂತನೆಯನ್ನು ಸಾಮೂಹಿಕವಾಗಿ ನಾವೆಲ್ಲರೂ ಮಾಡಿದರೆ, ನಮ್ಮ ಕನಸಿನ “ಕಲ್ಯಾಣ’ ಸಾಕಾರವಾಗಬಹುದೇನೋ!
ಮಹನೀಯರಾದ ಬಸವಣ್ಣನವರು ಕಲ್ಯಾಣದ ಕನಸು ಕಂಡದ್ದು; ಪೂಜ್ಯ ಬಾಪೂಜಿಯವರು ರಾಮರಾಜ್ಯದ ಕನಸು ಕಂಡದ್ದು; ಕುವೆಂಪು ಅವರು “ ವಿಶ್ವ ಮಾನವ” ಸಂದೇಶ ಸಾರಿದ್ದು, ಮಾನವನ ಉದಾತ್ತ ಆಶಯಗಳ ದ್ಯೋತಕವಲ್ಲವೆ.
ಆದರೆ, ನಮ್ಮನ್ನು ತಲ್ಲಣಗೊಳಿಸುವ ಹಿಂಸೆ, ಕ್ರೌರ್ಯ, ಅತ್ಯಾಚಾರಗಳು ದಿನನಿತ್ಯವೂ ನಡೆಯುವದನ್ನು ನೋಡಿದಾಗ, ನಾವು ಕಾಣುತ್ತಿರುವ ಕನಸು ಕೇವಲ ಒಂದು ಭ್ರಮೆಯೆಂದು ಅನಿಸಿದೆ ಇರಲಾರದು. ನಮ್ಮ ಕನಸುಗಳನ್ನು ನುಚ್ಚು ನೂರು ಮಾಡುವ ನೂರಾರು ಘಟನೆಗಳು ಸುತ್ತಮುತ್ತಲು ಘಟಿಸಿ ಮನಸು ವಿಚಲಿತಗೊಂಡಾಗ, ಒಲವು, ಮಾನವೀಯತೆ ಬರೀ ಶುಷ್ಕ ಶಬ್ದಗಳಂತೆ ಕಂಡು, ಒಲವು ತುಂಬಿದ ಆದರ್ಶ ಸಮಾಜ ಒಂದು ಬೊಗಳೆ ಯಂತೆ ಅನಿಸಿದರೂ ಆಶ್ಚರ್ಯವಿಲ್ಲ.
ಆದರೆ, ನಾವು ನಿರಾಶೆಗೊಂಡು ನಮ್ಮ ಕನಸುಗಳ ಕೈಯನ್ನು ಎಂದೆಂದಿಗೂ ಬಿಡಬಾರದು; ಒಲವಿನ ಬಗ್ಗೆ ನಮಗಿರುವ ನಂಬಿಕೆಯನ್ನು ಸಡಲಿಸಬಾರದು. ಹಾಗೆ ಮಾಡಿದಲ್ಲಿ, ಉನ್ನತ ಮಟ್ಟಕ್ಕೆ ವಿಕಸಿತವಾದ ನಮ್ಮ ಮಿದುಳು ಮತ್ತೆ ಪ್ರಾರಂಭದ ಹಂತಕ್ಕೆ ತೆರಳುವ ಸಾಧ್ಯತೆ ಇದೆ. ನಮ್ಮ ಧನಾತ್ಮಕ ಚಿಂತನೆಗಳಿಂದ ಮಿಲಿಯ ವರ್ಷಗಳಲ್ಲಿ ಸಾಧಿಸಿದ ವಿಕಾಸದ ಸಾಧ್ಯತೆ ಇದೆ ಎಂದು ಅರಿತ ನಾವೆಲ್ಲರೂ ಕಂಕಣಬದ್ಧರಾಗಿ ಆ ನಿಟ್ಟಿನಲ್ಲಿ ಮುನ್ನಡೆಯೋಣ. ಇದಕ್ಕೆ ಅಗತ್ಯವಾದ ಆತ್ಮಾವಲೋಕನೆ ಮಾಡಿಕೊಳ್ಳೋಣ, ವಿಪಥನೆಗಳಿಗೆ ಕಾರಣಗಳನ್ನು ಶೋಧಿಸಿ, ತಕ್ಕ ಪರಿಹಾರ ಮಾರ್ಗಗಳನ್ನು ಹುಡುಕೋಣ. ಆದರೆ, ಎಂತಾದರೂ ಮಾಡಿ ಪರಿಸರವನ್ನು ಒಲವಿನಿಂದ ತುಂಬೋಣ. ಅದುವೇ ನಮ್ಮಯ ಗುರಿ; ನಮ್ಮಯ ಧ್ಯೇಯ!
೧೯೭೭ ರಲ್ಲಿ ಉಡ್ಡಯನಗೊಂಡ ವಾಯೇಜರ್- ೨ ಅಂತರಿಕ್ಷಯಾನಗಳು ಅಮೂಲ್ಯ ಸರಕುಗಳನ್ನು ಹೊತ್ತು ‘ಸೌರ ಮಂಡಲ’ದಾಚೆ ಪಯಣಿಸುತ್ತಿದೆ: ಇತರ ಬಹುಮೂಲ್ಯ ವಸ್ತುಗಳ ಜೊತೆ ಅದರಲ್ಲಿ ಒಂದು ಮೊಜಾರ್ಟ್ ಸಂಗೀತ ಲಹರಿ, ೫೫ ಭಾಷೆಗಳಲ್ಲಿ ಶುಭಾಶಯಗಳು ಮತ್ತು ಹೊಸದಾಗಿ ಪ್ರೇಮದ ಪಾಶದಲ್ಲಿ ಸಿಲುಕಿದ ಒಬ್ಬ ತರುಣಿಯ ಮಿದುಳಿನ ತರಂಗಗಳಿವೆ. ಇದು ಪ್ರಸಿದ್ಧ ಖಗೋಳ ವಿಜ್ಞಾನಿ ಕಾರ್ಲ್ ಸಾಗನ್ ಅವರ ‘ ಸುವರ್ಣ ದಾಖಲೆ ಯೋಜನೆ ‘ಆಗಿದ್ದು, ಅಂತರಿಕ್ಷದಲ್ಲಿ ಪ್ರಾಯಶಃ ಭೇಟಿಯಾಗಬಹುದಾದ ಜೀವರಿಗೆ, ಈ ಅಮೂಲ್ಯ ವಸ್ತುಗಳು ಪೃಥ್ವಿಯನ್ನು ಪ್ರತಿನಿಧಿಸಲಿ ಎಂಬ ಆಶಯದಿಂದ ಕಳುಹಿಸಿದ್ದು. ‘ ಸಂಗೀತ, ಸದ್ಭಾವನೆ ಮತ್ತು ಒಲವು ‘ ನಮ್ಮ ಭೂಲೋಕದ ರಾಯಭಾರಿಗಳು.
ಕಾರ್ಲ್ ಸಾಗನ್ ಹಾಗೂ ಅವರ ಪತ್ನಿ ಆನ್ ದ್ರುಯಾನ್ ಅವರಿಗೆ ತಾವಿಬ್ಬರೂ ಪ್ರೀತಿಸುವದಾಗಿ ತಿಳಿದ ಎರಡು ದಿನಗಳ ಮುಂಚೆ, ದ್ರುಯಾನ್ ಅವರು ‘ಒಲವಿನ ಉತ್ಕಟ’ ಸ್ಥಿತಿಯಲ್ಲಿ ಇರುವಾಗ ಅವರನ್ನು ‘ಇಇಜಿ’ ಗೆ ಒಳಪಡಿಸಿ, ಆ ತರಂಗಗಳನ್ನುಒತ್ತು ಮಾಡಿ ಸಂಕುಚಿತಗೊಳಿಸಿ ಒಂದು ನಿಮಿಷದ ಧ್ವನಿಯಾಗಿ ಪರಿವರ್ತಿಸಿ ಕಳುಹಿಸಿದ ಬಹುಮೂಲ್ಯ ವಸ್ತುವೇ, ನಾನು ಈ ಮೊದಲು ಉಲ್ಲೇಖಿಸಿದ ಅಂತರಿಕ್ಷಕ್ಕೆ ಕಳುಹಿಸಿದ ‘ಬೆಲೆ ಕಟ್ಟಲಾಗದ’ ವಸ್ತು.
ಹೂಬಾಣಗಳು ಬಿಟ್ಟಾಗ ಬರುವ ಶಬ್ದವನ್ನು ಹೋಲುತ್ತದಂತೆ ಈ ‘ ಒಲವಿನ ಗೀತೆ’.
ನಮ್ಮ ಮನೋಬಲದಿಂದ, ಇಚ್ಛಾಶಕ್ತಿಯಿಂದ ಭೂಮಿಯ ಮೇಲೆ ಇಂತಹ ಒಲವಿನ ನಂದನವನವನ್ನು ಸೃಷ್ಟಿಸಲು ಸಾಧ್ಯವಾದರೆ, ಅದಕಿಂತ ಹೆಚ್ಚಿನದೇನು ಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕಂಕಣ ಬದ್ಧರಾಗೋಣ ಎಂದು ಹಾರೈಸುತ್ತ ಇಂದಿನ ಅಂಕಣಕ್ಕೆ ಮಂಗಳ ಹಾಡುವೆ.
ವಂದನೆಗಳು
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ