ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ: Valentino Lombardi

ಒಲವೆ ನಮ್ಮ ಬದುಕು – ೧೭

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ನಂದಿ ಹೋದವೇ ದೀಪ ಹಣತೆ ಹಚ್ಚಿದ ಚಣಕೆ
ಆಗದೇ ಇನ್ನೂ ಬಾಳಿನ ಆಘ್ರಾಣ
ಭ್ರೂಣದಲ್ಲಿಯೇ ಕಳೆದವು ಪ್ರಾಣ!

ಯಾವ ವಿಷಮ ಜ್ವಾಲೆ ಆರಿಸಿತು ದೀಪಗಳ?
ಯಾವ ವಿಷಾನಿಲ ಬೀಸಿ ಕಮರಿಸಿ ಚಿವುಟಿ ಬಿಸುಟಿತು ಮೊಗ್ಗೆಗಳ?
ಹುಳ ಹುಪ್ಪಡಿಗಳಿಗಿಂತ ಕೀಳಾಯಿತೆ ಶೈಶವ ಜೀವ?
ಕಾವರೇ ಕೊಂದರೆ ರಕ್ಷಣೆಗೆ ಎಲ್ಲಿದೆ ಠಾವ!

ಉಸಿರು ಬಸಿರಿಗೆ ಸೇರಿ ಹಸಿರಾಗಿ ಮೊಳಕೆಯೊಡೆದು
ಬೆಳಕ ಕಾಣುವ ಪವಾಡಕೆ ಸಮವಿಲ್ಲ ಲೋಕದೊಳು
ಹುಟ್ಟಿನ ಗುಟ್ಟನು ಮೆಟ್ಟಿ ಮತ್ತೆ ತಮದ ಕೂಪದಲಿ
ಅಟ್ಟಿದವರಾರು ನಿಶ್ಪಾಪಿ ಜೀವಿಗಳ!
ಅರಳದೆ ತೆರಳಿದವು ಮರಳಿ ಬಾರದಂತೆ!

ಎರವಾಯಿತೇ ಅಭಯ ಹಸ್ತದ ಲೋಕ ( ತೀವ್ರ ನಿಗಾ ಘಟಕ)
ಮುನ್ನೆಚ್ಚರಿಕೆಯನ್ನು ಮೂಸದ ರಕ್ಕಸ ಸೊಕ್ಕು ಬಲಿತು
ಮೂಗು – ಕಂಗಳ ಮುಚ್ಚಿ , ಮನದ ಸಂವೇದನೆಗೆ ಅರವಳಿಕೆ ಕೊಟ್ಟು
ಮಾರಣ ಹೋಮಗೈದ ಕ್ರೂರ ರಕ್ತಸಿಕ್ತ ಕೈಗಳು
ತೊಳೆದು ಕಲೆಗಳು ಮಾಯವಾದರೂ
ತಾಯಂದಿರ ಮನದ ಗಾಯ ಮಾಯುವದೇ?
ಬರಿ ಮಡಿಲ ತಾಯಂದಿರ ರೋದನೆ
ಅವರ ಆಕ್ರಂದನ ವೇದನೆಗೆ
ಏನಿದೆ ಉತ್ತರ!

ಇತ್ತೀಚೆಗೆ ಮುಂಬೈ ನಗರದ ಭಂಡಾರಾ ಆಸ್ಪತ್ರೆಯ ರೋಗಗ್ರಸ್ತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಅಗ್ನಿ ಅಪಘಾತಕ್ಕೆ ಬಲಿಯಾದ ಶಿಶುಗಳ ವಾರ್ತೆ ಕಿವಿಗಳಿಗೆ ಬಿದ್ದಾಗ ಮನಸಿನಲ್ಲಿ ಬಿರುಗಾಳಿ ಬೀಸಿದಂತಾಯಿತು ; ಎಲ್ಲವೂ ಅಲ್ಲೋಲ ಕಲ್ಲೋಲ! ಯಾಕೆ ಹೀಗಾಯಿತು? ಈ ಅಪಘಾತಕ್ಕೆ ಏನು ಕಾರಣ? ಯಾರ ಅಲಕ್ಷ್ಯದಿಂದಾಗಿ ಇದು ಸಂಭವಿಸಿತು? ಇದನ್ನು ತಡೆಯಬಹುದಿತ್ತೆ? ಎಂಬ ನೂರಾರು ಪ್ರಶ್ನೆಗಳು ಒಮ್ಮೆಲೇ ತಲೆಯಲ್ಲಿ ತಾಂಡವವಾಡತೊಡಗಿದವು.

ಹದಿನೇಳು ಶಿಶುಗಳಿದ್ದ ತೀವ್ರ ನಿಗಾ ಘಟಕದಲ್ಲಿ, ಏಳು ಶಿಶುಗಳನ್ನು ಮಾತ್ರ ಉಳಿಸಲು ಸಾಧ್ಯವಾಯಿತು. ಉಳಿದ ಹತ್ತು ನಿಶ್ಪಾಪಿ ಶಿಶುಗಳು ಅಪಘಾತಕ್ಕೆ ಆಹುತಿಯಾದರು. ಈ ಅಪಘಾತಕ್ಕೆ ಯಾರು ಜವಾಬ್ದಾರರು ಎಂಬ ವಿಷಯದಲ್ಲಿ ದೂಷಣೆಗಳು- ಪ್ರತಿದೂಷಣೆಗಳು, ಆರೋಪ- ಪ್ರತ್ಯಾರೋಪಗಳು ಈ ತನಕವೂ ನಡೆಯುತ್ತಲೇ ಇವೆ. ಆದರೆ, ಇವು ಯಾವುದೂ ಸತ್ತ ಶಿಶುಗಳಿಗೆ ಪ್ರಾಣ ತುಂಬಿ ಮತ್ತೆ ಬದುಕಿಸಲಾರವು.

ವಾರ್ತೆ ಬಿಸಿ ಬಿಸಿಯಾಗಿದ್ದಾಗ ಇಂತಹ ಪ್ರಶ್ನೆಗಳು ಏಳುವದು ಸಹಜ. ತನಿಖೆ, ಆರೋಪಿಗಳಿಗೆ ತಕ್ಕ ಶಿಕ್ಷೆ, ಈ ರೀತಿ ಅಪಘಾತದ ಹಲವಾರು ಮಗ್ಗಲುಗಳ ಬಗ್ಗೆ ಮಾಧ್ಯಮದಲ್ಲಿ ಚರ್ಚೆಯಾಗಿ, ಆಮೇಲೆ ಕೆಲವು ದಿನಗಳ ಬಳಿಕ ಅವೂ ಸತ್ತು ಹೋಗುವವು. ಪ್ರತಿ ಪ್ರಾಣಕ್ಕೆ ಇಂತಿಷ್ಟು ಬೆಲೆ ಎಂದು ನಿರ್ಧರಿಸಿ, ಸಂತ್ರಸ್ತರಿಗೆ ಪರಿಹಾರ ನೀಡಿ, ಕೃತಾರ್ಥ ಭಾವನೆ ತಾಳಿದ ಆಡಳಿತ ವರ್ಗ ಎಲ್ಲದಕ್ಕೂ ಮಂಗಳ ಹಾಡಿ, ಏನೂ ಆಗಿಯೇ ಇಲ್ಲವೇನೋ ಎಂಬ ಭಾವನೆ ತರಿಸಿ, ಎಲ್ಲವನ್ನು ಮರೆಸಿ ಮರೆಮಾತಿಗೆ ಹಾಕುವದು.

ಈ ಕರಾಳ ಅಪಘಾತದಲ್ಲಿ ಒಂಭತ್ತು ಶಿಶುಗಳ ತಂದೆ ತಾಯಂದಿರ ಬಗ್ಗೆ ವಿವರಗಳು ಗೊತ್ತಿದ್ದು, ಒಂದು ಶಿಶುವಿನ ತಂದೆಯಾಗಲೀ, ತಾಯಿಯಾಗಲೀ, ಅದರ ಕುರಿತು ಯಾವುದೇ ಸುಳಿವಿಲ್ಲ. ಆ ಅನಾಥ ಶಿಶುವನ್ನು ಹೇಳ ಹೆಸರಿಲ್ಲದ ಒಬ್ಬ ನಿರ್ದಯಿ ತಾಯಿ ಕೈ ಬಿಟ್ಟು, ಕೈ ಚೆಲ್ಲಿ, ಅದನ್ನು ಬೀದಿಪಾಲಾಗಿ ಮಾಡಿದ ಶಿಶು ಎಂದು ತಿಳಿದು ಬಂದಾಗ, ಮನಸಿನಲ್ಲಿ ಆದ ತುಮುಲ ಹೇಳತೀರದು.

ಈ ಅಪಘಾತಕ್ಕೆ ಯಾರು ಹೊಣೆ? ಯಾರಿಗೆ ಆಗಬೇಕು ಶಿಕ್ಷೆ? ಎನ್ನುವ ಮಾತುಗಳಿಗಿಂತ ಮುಖ್ಯವಾದದ್ದು, ಈ ರೀತಿಯ ನಿರ್ಲಕ್ಷ್ಯ ಧೋರಣೆ ಹೊಂದಿದ ಮನುಜರು ಸಂವೇದನಾ ಹೀನರೆ? ಅವರಲ್ಲಿ ಮನಸ್ಸು ಇಲ್ಲವೆ? ಅಂತರಾತ್ಮದ ದನಿ ಕ್ಷೀಣಗೊಂಡಿದೆಯಾ, ಅಥವಾ ಸತ್ತಿದೆಯಾ? ಅವರ ಮನೆಗಳಲ್ಲಿ ಮಕ್ಕಳಿಲ್ಲವೇ? ಎಂಬ ಮೂಲಭೂತ ಪ್ರಶ್ನೆಗಳು. ದಡ್ಡು ಬಿದ್ದು ಕೊರಡಾದ ಒಳವ್ಯಕ್ತಿಯಲ್ಲಿ ಮತ್ತೆ ಸಂವೇದನೆ ಮತ್ತು ಅನುಭೂತಿಗಳನ್ನು ಕೊನರಿಸಲು ಸಾಧ್ಯವೇ ಎಂಬುದು ಬಹಳ ಮಹತ್ವ ಪಡೆಯುತ್ತದೆ.

ಈ ಹಿನ್ನೆಲೆಯಲ್ಲಿ, ನನ್ನ ಆಲೋಚನೆಗಳು ಸಾಗುತಿದ್ದಂತೆ, ಒಂದು ಕ್ಷಣ ನನ್ನ ವಿಚಲಿತ ಮನಸ್ಸು ಒಲವಿನ ಬಗೆಗಿರುವ ತನ್ನ ವಿಶ್ವಾಸವನ್ನು ಎಲ್ಲಿ ಕಳೆದುಕೊಳ್ಳುವದೋ ಎಂದು ಅನಿಸಿ, ನನ್ನ ಅಂತರಾತ್ಮ ಕಂಪಿಸಿತು. ಇನ್ನೇನು, ಮಾನವನ ಒಳ್ಳೆಯತನದ ಬಗ್ಗೆ ನಂಬಿಕೆ ಪೂರ್ಣವಾಗಿ ನಶಿಸಿ ನನ್ನಲ್ಲಿ ಸಿನಿಕತನದ ಬೀಜದ ಅಂಕುರವಾಗುವದು ಎಂದು ಅನಿಸಿ ಗಾಬರಿಗೊಂಡಾಗ, ನನಗೆ ನಮ್ಮ ಸುತ್ತ ಮುತ್ತಲಿರುವ ಕೆಲವರು ಅಗಾಧ ಚೇತನರು ಕಣ್ಣ ಮುಂದೆ ಬಂದು, ಹಾಗೆ ಆಗುವ ಅಪಾಯದಿಂದ ಪಾರುಮಾಡಿದರು. ಬತ್ತದ ಒಲವಿನ ಸ್ರೋತ ಅವರಲ್ಲಿ ಕಂಡಿತು. ಮತ್ತೆ ನನ್ನಲ್ಲಿ ಆಶಾಭಾವನೆ ಮೂಡಿತು. ಆ ಮಹಾನ್ ವ್ಯಕ್ತಿಗಳ ಬಗ್ಗೆ ಹಾಗೂ ಅವರು ಮಾಡುತ್ತಿರುವ ಅಪಾರವಾದ ಸಮಾಜ ಸೇವೆಯ ಕುರಿತು ಈ ಅಂಕಣದಲ್ಲಿ ಹಂಚಿಕೊಳ್ಳುವೆ.

ಪ್ರಪ್ರಥಮವಾಗಿ , ಉಡುಪಿಯ ರವಿ ಕಟ್ಪಾಡಿ. ಅವರು ತಮ್ಮ ಉಪಜೀವನಕ್ಕಾಗಿ ನಿತ್ಯ ಜೀವನದಲ್ಲಿ, ಮನೆ ಕಟ್ಟಡಗಳ ( ಉಪ್ಪಾರ ವೃತ್ತಿ- ಮೇಸನ್) ಕಾಯಕದಲ್ಲಿ ತೊಡಗಿದ ೩೭ ವರ್ಷದ ಯುವಕ. ೨೦೧೩ ರಲ್ಲಿ ಟಿ. ವಿ. ಮಾಧ್ಯಮದ ಮೂಲಕ, ಒಬ್ಬ ಅಸಹಾಯಕ ತಾಯಿಯೊಬ್ಬಳು, ಹೆರಿಗೆಯ ಸಮಯದಲ್ಲಿ ಅವಳ ಮಗುವಿನ ಕೈ ಊನವಾದ ವಿಷಯದ ಬಗ್ಗೆ ಹೇಳಿ, ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗಾಗಿ ಧನ ಸಹಾಯ ಕೋರಿದ ಜಾಹೀರಾತು ನೋಡಿದ ರವಿ ಕಟ್ಪಾಡಿ ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರಿತು. ಅದರಿಂದ ಅವರ ಜೀವನಕ್ಕೆ ಒಂದು ಉದ್ದೇಶ ದೊರೆತಂತಾಗಿ, ಆ ಮಗುವಿನ ಕೈಯನ್ನು ಗುಣಪಡಿಸಲು ತಾವು ಹೇಗಾದರೂ ನೆರವಾಗಬೇಕೆಂಬ ಛಲ ಅವರಲ್ಲಿ ಹುಟ್ಟಿಕೊಂಡಿತು.

ಚಿತ್ರ ಕೃಪೆ : milaap

ಅವರು ತಮ್ಮ ಏಳು ಜನ ಮಿತ್ರರ ಜೊತೆ ಸೇರಿಕೊಂಡು, ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಪೌರಾಣಿಕ ವೇ಼ಷಗಳನ್ನು ಧರಿಸಿ, ಊರೂರು ತಿರುಗಿ , ಜನರನ್ನು ರಂಜಿಸಿ ಧನವನ್ನು ಶೇಖರಿಸಬೇಕೇಂದು ನಿರ್ಧಾರ ಮಾಡಿದರು. ಅದರಲ್ಲೂ, ದೈತ್ಯರ , ರಕ್ಕಸರ, ಭೂತಗಳ ವೇಷಗಳು ಮಕ್ಕಳನ್ನು ಹಾಗೂ ಜನರನ್ನು ಹೆಚ್ಚು ಆಕರ್ಷಿಸುವದರಿಂದ, ರವಿ ಅವರು ಅಂತಹ ವೇಷಗಳನ್ನೇ ಧರಿಸಲು ನಿಶ್ಚಯಿಸಿದರು.

ಚಿತ್ರ ಕೃಪೆ : https://www.thenewsminute.com/

ಇವರ ಮೊದಲ ಪ್ರದರ್ಶನದಿಂದ ರೂ. ೧೦೪೮೧೦/ – ಶೇಖರಣೆಯಾಗಿ, ಆ ಮೊತ್ತವನ್ನೆಲ್ಲಾ ಅವರು ಸಹಾಯ ಕೋರಿದ ತಾಯಿಗೆ ನೀಡಿದಾಗ, ಆ ತಾಯಿಗೆ ನಂಬಲಾಗದೇ ಅವಳ ಕಂಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿದವು. ಆ ಧನ ಸಹಾಯದಿಂದ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಜರುಗಿ, ಈಗ ಆ ಮಗು ತನ್ನ ಗುಣಮುಖವಾದ ಕೈಗಳಿಂದ ಕೇಕ್ ಕಟ್ ಮಾಡಿ ರವಿ ಅವರಿಗೆ ತಿನಿಸಿದಾಗ, ಅವರ ಆನಂದ ಹೇಳತೀರದು.

ಈ ತನಕ ಅವರು ಸುಮಾರು ೫೫ ಲಕ್ಷ ರೂಪಾಯಿಗಳನ್ನು ಈ ರೀತಿ ಜಮೆ ಮಾಡಿ, ರೋಗಗಳಿಂದ ಬಳಲುವ ೨೮ ಚಿಕ್ಕ ಮಕ್ಕಳ ಚಿಕಿತ್ಸೆಗಾಗಿ ಸಹಾಯವನ್ನು ಒದಗಿಸಿದ್ದಾರೆ. ಆದರೆ, ತಮ್ಮ ಅಕ್ಕನ ಮಗಳೇ ಕ್ಯಾನ್ಸರನಿಂದ ಬಳಲುತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ಅಸು ನೀಗಿದಾಗ, ಜನರಿಂದ ಒಟ್ಟುಮಾಡಿದ ಧನವನ್ನು ಅಕ್ಕನಿಗೆ ಸಹಾಯವಾಗಿ ಕೊಡಲು ನಿರಾಕರಿಸಿದರು. ಹಾಗೆ ಮಾಡಿದಲ್ಲಿ, ಅದರ ದುರುಪಯೋಗ ಪಡೆದಂತೆ ಆಗುವದು ಎಂದು ಅವರ ನಂಬಿಕೆ.

ಮನರಂಜನೆ ಮಾಡಿ ಗಳಿಸಿದ ದುಡ್ಡಿನಲ್ಲಿ ಅವರು ಒಂದು ಕಾಸೂ ತಮಗಾಗಿ ಬಳಸುವುದಿಲ್ಲ. ತಮ್ಮ ಉಪ ಜೀವನಕ್ಕೆ ವೃತ್ತಿಯಿಂದ ಬಂದ ಆದಾಯವೇ ಅವರಿಗೆ ಆಧಾರ. ಆದರೂ, ತಮ್ಮನ್ನು ತಾವು ಎಂದಿಗೂ ನಿರ್ಧನಿಗಳು ಎಂದು ಅಂದುಕೊಂಡಿಲ್ಲ.

“ಧೃಡ ಕಾಯವೇ ನನ್ನ ಬಂಡವಾಳ, ನಾನು ಸಿರಿವಂತ”

ಎಂದೇ ಅವರು ತಮ್ಮ ಕುರಿತಾಗಿ ಹೇಳಿಕೊಳ್ಳುತ್ತಾರೆ. ಆದರೂ, ಕೆಲವೊಂದು ವೇಷಗಳನ್ನು ಧರಿಸಲು ಪ್ರಸಾಧನಕ್ಕೆ ಕನಿಷ್ಟ ೨೪ ಗಂಟೆಗಳು ಬೇಕಾಗುತ್ತದೆ ಎಂದು ವಿವರಿಸುತ್ತಾರೆ. ವೇಷಗಳ ತಯಾರಿಕೆಯ ಪ್ರಸಾಧನದಲ್ಲಿ ಶರೀರದ ತುಂಬ ಅವರು ತೈಲದ ಲೇಪನ ಮಾಡಿಕೊಳ್ಳಬೇಕಾಗಿ ಬರುವದು, ಅದರಿಂದ ಅವರ ತ್ವಚೆಗೆ ಅಲರ್ಜಿ ಆದರೂ ಅದನ್ನು ಲೆಕ್ಕಿಸದೆ, ಭೂತಗಳ, ದೆವ್ವಗಳ, ದೈತ್ಯರ ವೇಷಗಳನ್ನು ಧರಿಸುತ್ತಲೇ ಇದ್ದಾರೆ. ಇಂತಹ ಕರುಣಾನುಭೂತಿಯಿಂದ ಕೂಡಿದ ದ್ಯತ್ಯ ಭೂತ-ದೆವ್ವಕ್ಕೆ ನಮ್ಮ ಅನೇಕ ಪ್ರಣಾಮಗಳು.

ಇದೇ ಸಾಲಿನಲ್ಲಿ ಬರುವ ಮತ್ತೊಬ್ಬ ಮಹನೀಯರು, “ ಮೈ ಏಂಜಲ್ಸ್ ಅಕೆಡೆಮಿ” ಯ ಸಿಲ್ವೆಸ್ಟರ್ ಅವರು. ಕಳೆದ ೧೩ ವರ್ಷಗಳಿಂದ, ಸಿಲ್ವೆಸ್ಟರ್ ಪೀಟರ್ ಅವರು ಕೊಳಚೆ ಪ್ರದೇಶಗಳಲ್ಲಿ ಕಸವನ್ನು ಹೆಕ್ಕಿ ತೆಗೆಯುವ ಚಿಕ್ಕ ಮಕ್ಕಳು, ಅಡ್ಡ ದಾರಿ ಹಿಡಿದು ಜೇಬುಗಳ್ಳರಾದ ನತದೃಷ್ಟ ಮಕ್ಕಳು ಹಾಗೂ ನಿರ್ಗತಿಕ ಮಕ್ಕಳ ಜೀವನದಲ್ಲಿ ಬದಲಾವಣೆ ತಂದು ಅವರನ್ನು ಸುಧಾರಿಸಿ, ಅವರನ್ನು ಮುಖ್ಯ ಧಾರೆಯಲ್ಲಿ ತರಬೇಕೆಂದು ಸಂಕಲ್ಪ ಮಾಡಿಕೊಂಡು ,ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟು “ ಮೈ ಎಂಜಲ್ಸ್ ಅಕೆಡೆಮಿ – ನನ್ನ ಮುದ್ದು ದೇವತೆಗಳ ಪ್ರೌಢ ಶಾಲೆ” ಯನ್ನು ಸ್ಥಾಪಿಸಿದರು. ಸ್ವ​ತಃ ಫುಟ್ ಬಾಲ್ ಆಟಗಾರರಾದ ಆವರು, ಆಟವನ್ನು ಮಕ್ಕಳಿಗೆ ಹೇಳಿಕೊಡುವುದರ ಮೂಲಕ ಹಾಗೂ ಧನಾತ್ಮಕ ವಿಚಾರಗಳನ್ನು ಅವರಿಗೆ ತಿಳಿಸಿ ಹೇಳಿ, ಒಲುಮೆ ಮತ್ತು ಪ್ರೀತಿಗಳಿಂದ ಅವರನ್ನು ಪ್ರೇರೇಪಿಸಿ, ಅವರಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ವಿಶ್ವಾಸ ಹೊಂದಿದ ಈ ಮಹನೀಯರು, ಎಷ್ಟೋ ಮಕ್ಕಳ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಕಾರಕರಾಗಿದ್ದಾರೆ.

ಚಿತ್ರ ಕೃಪೆ : https://myangelsacademy.org/

ಅವರು ಈ ಯೋಜನೆಗೆ ತಮ್ಮ ಧನವನ್ನು ಹೂಡಿ, ಮತ್ತು ಅವರ ಹಿತೈಷಿಗಳ ಧನ ಸಹಾಯದಿಂದ ಇದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅಲ್ಲದೆ, ಜೀವನದಲ್ಲಿ ಬದಲಾವಣೆ ಕಂಡ ಯಶಸ್ವಿ ಮಕ್ಕಳು ತಮ್ಮ ಸಂಪಾದನೆಯ ೧/೩ ಅಂಶವನ್ನು ಇದಕ್ಕಾಗಿ ಮೀಸಲಿಡುತ್ತಿದ್ದಾರೆ.

ಚಿಕ್ಕಂದಿನಿಂದಲೂ , ಇತರರ ಬಗ್ಗೆ ಪ್ರೀತಿ- ಕಾಳಜಿಗಳನ್ನು ಹೊಂದಿದ ಸಿಲ್ವಸ್ಟರ್ ಪೀಟರ್ ಅವರು, ತಮ್ಮ ಶಾಲಾ ದಿನಗಳಲ್ಲಿ ಅವರ ತಾಯಿ ಕಟ್ಟಿಕೊಟ್ಟ ಬುತ್ತಿಯನ್ನು ಸಂಪೂರ್ಣವಾಗಿ ಅವರ ಬಡ ಸಹಪಾಠಿಗೆ ತಿನಲು ಕೊಟ್ಟು ತಾವು ಉಪವಾಸವಿರುತ್ತಿದ್ದರು. ಹೀಗೆ ಎಷ್ಟೋ ವರ್ಷಗಳ ವರೆಗೆ ನಡೆದ ವಿಷಯವನ್ನು ಸ್ವತಃ ಟಿ ವಿ ಮಾಧ್ಯಮದ ಮೂಲಕ ಹಂಚಿಕೊಂಡರು. ಒಲವಿನಿಂದ ಎಲ್ಲವನ್ನು ಗೆಲ್ಲಲು ಸಾಧ್ಯ ಎಂದು ಅಚಲವಾದ ನಂಬಿಕೆಯುಳ್ಳ ಸಿಲ್ವೆಸ್ಟರ್ ಪೀಟರ್ ಅವರ “ ಮೈ ಎಂಜಲ್ಸ್ ಅಕೆಡೆಮಿ” ಯಲ್ಲಿ, ೩ ರಿಂದ ೨೦ ವಯಸ್ಸಿನ ೩೦೦ ಮಕ್ಕಳಿದ್ದು,ಅವರು ಹೊಸ ದಿಗಂತದೆಡೆಗೆ ಸಾಗಲು ಸನ್ನದ್ಧರಿದ್ದಾರೆ.

ಚಿತ್ರ ಕೃಪೆ: https://lifebeyondnumbers.com/

ಆಟ, ಯೋಗ, ವಿಪಾಸನೆ, ಹೀಗೆ ಹಲವು ವಿಷಯಗಳನ್ನು ಸಮನ್ವಯಿಸಿ ಅವುಗಳ ಮೂಲಕ ಮಕ್ಕಳನ್ನು ಸುಧಾರಿಸಲು ಇಂದಿಗೂ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ ಕರ್ಮಯೋಗಿ ಸಿಲ್ವೆಸ್ಟರ್. ಅವರಿಗೆ ನಮ್ಮ ಅನೇಕ ನಮನಗಳು.

“ದಾದೀ ಕಿ ರಸೋಯಿ-ಅಜ್ಜಿಯ ಅಡುಗೆ ಮನೆ” , ನೊಯಿಡಾ ದಲ್ಲಿ ತರಕಾರಿ ಮಾರುವವರ, ರಿಕ್ಷಾ ಚಾಲಕರ, ಬಡ ಮಕ್ಕಳ ಮತ್ತು ಇನ್ನೂ ಎಷ್ಟೋ ನಿರ್ಧನಿಗಳ ಹಸಿವನ್ನು ಹಿಂಗಿಸುವ ತಾಣ. ತಮ್ಮ ಸಂಪಾದನೆಯಲ್ಲಿ ಉಳಿಸಿದ ದುಡ್ಡಿನಿಂದ, ಅನೂಪ್ ಖನ್ನಾ ಅವರು ಇದನ್ನು ಪ್ರಾರಂಭಿಸಿ ಹಲವು ವರ್ಷಗಳಾಗಿವೆ. ನೊಯಿಡಾದಲ್ಲಿ ಎರಡು ಸ್ಟಾಲ್ ಗಳನ್ನು ಹೊಂದಿದ ಈ ರಸೋಯಿ, ಬೆಳಗ್ಗೆ ೯ ರಿಂದ ೧೧.೩೦ಯ ತನಕ, ಅಷ್ಟು ಸ್ಥಿತಿವಂತರಲ್ಲದವರಿಗೆ ರೂ ೫/-ರಲ್ಲೇ ಊಟ ಒದಗಿಸುತ್ತಿರುವದು ವಿಶೇಷ. ಯಾರ ಧನ ಸಹಾಯವಿಲ್ಲದೆ, ಆರೋಗ್ಯಕರವಾದ ಮತ್ತು ಪೌಷ್ಟಿಕವಾದ ಆಹಾರವನ್ನು ಅತಿ ಅಲ್ಪ ದರದಲ್ಲಿಯೇ ನೀಡುತ್ತಿರುವ ಈ ಮಹನೀಯರಿಗೆ, ಜನರ ಬಗ್ಗೆ ಇರುವ ಪ್ರೀತಿಯೇ ಪ್ರೇರಕ ಶಕ್ತಿ. ಸಮಾಜಕ್ಕಾಗಿ ಯಾವುದೇ ರೀತಿಯಿಂದ ನೆರವಾಗಬೇಕೆಂಬ ಖನ್ನಾ ಹಾಗೂ ಅವರ ಮಗಳ ತುಡಿತದ ಫಲ ಸ್ವರೂಪವೇ ಜನ್ಮ ತಳೆದು “ ದಾದೀ ಕಿ ರಸೋಯಿ” ಆಗಿ ರೂಪುಗೊಂಡಿದೆ.

ಚಿತ್ರ ಕೃಪೆ : https://wonderfulnewsnetwork.com/

ಸರ್ಕಾರಗಳಿಂದಲೂ ಕಷ್ಟ ಸಾಧ್ಯವಾದ ಕೆಲಸವನ್ನು ಮಾಡಿ ಸಾಧಿಸಿದ್ದಾರೆ ಮಹನೀಯರಾದ ಅನೂಪ್ ಖನ್ನಾ ಅವರು. ಅವರಿಗೆ ನಮ್ಮ ಅನೇಕ ನಮನಗಳು.

ಪ್ರತಿಯೊಂದು ಜೀವ ಅಮೂಲ್ಯವಾದದ್ದು. ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಮುಖ್ಯ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ, ಕೊರೋನಾ ಮಹಾಮಾರಿಯಿಂದ ಜನರನ್ನು ಉಳಿಸಲು, ಜಗತ್ತಿನ ಎಲ್ಲ ವಿಜ್ಞಾನಿಗಳು ಅವಿರತವಾಗಿ ಹೆಣಗಾಡಿ, ಸಾಂಕ್ರಮಿಕ ರೋಗದ ಹಾವಳಿಯನ್ನು ತಡೆಯಲು ಲಸಿಕೆಗಳನ್ನು ಕಂಡು ಹಿಡಿದು, ಇಡೀ ಮಾನವ ಲೋಕಕ್ಕೆ ಉಪಕಾರ ಮಾಡಿದ್ದಾರೆ. ಅವರ ಈ ಸಾಧನೆ ಋಷಿ ಮುನಿಗಳ ತಪಸ್ಸಿನಂತೆ! ನಮ್ಮ ದೇಶದಲ್ಲಿ ತಯಾರಾದ ಲಸಿಕೆಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿಯವರು, ಒಂದು ಹಿನ್ನೋಟ ಹಾಯಿಸುತ್ತ, ಕೊರೋನಾ ಮಹಾಮಾರಿಗೆ ಬಲಿಯಾದ ಅಸಂಖ್ಯಾತ​ ಜನರ ಬಗ್ಗೆ ಪ್ರಸ್ತಾಪಿಸುತ್ತ ಮಮ್ಮಲ ಮರುಗಿದರು. ಎಂದೆಂದಿಗೂ ಕೇಳರಿಯದ ಮಹಾಮಾರಿಯ ಬಗ್ಗೆ ಹೇಳುತ್ತ “ಈ ಸಾಂಕ್ರಾಮಿಕ ರೋಗದಿಂದ ಬಳಲುವ ಮಕ್ಕಳನ್ನು ತಾಯಂದಿರು ಅವರ ಮಡಿಲಿನಲ್ಲಿ ತೆಗೆದುಕೊಂಡು ಆರೈಕೆ ಮಾಡುವ ಹಾಗಿರಲಿಲ್ಲ, ಈ ರೋಗದಿಂದ ಬಳಲುವ ವೃದ್ಧ​ ತಂದೆ-ತಾಯಂದಿರ ಬಳಿ ಮಕ್ಕಳು ಹೋಗುವ ಹಾಗಿರಲಿಲ್ಲ” ಎಂದು ಭಾವುಕರಾಗಿ ನುಡಿಯುತ್ತಿರುವಾಗ ಅವರ ಕಂಠ ಗದ್ಗದಿತವಾಯಿತು, ಕಂಬನಿಗಳಿಂದ ಕಂಗಳು ಒದ್ದೆಯಾದವು. ಅದು ಕೇಳುತ್ತಿದ್ದಂತೆ, ನಮ್ಮ ಕಣ್ಣುಗಳಲ್ಲಿಯೂ ಮಂಜು ಮುಸುಕಿತು.

ಮನುಷ್ಯರಿಂದ ಮನುಷ್ಯರನ್ನು ದೂರ ಮಾಡಿದ, ಪ್ರೀತಿ- ಮಮತೆಗಳಿಂದ ಮಾನವ ಕುಲವನ್ನೇ ವಂಚಿತ ಮಾಡಿದ “ ಕೊರೋನಾ – ಕೋವಿಡ್ -೧೯” ಮಹಾಮಾರಿಗೆ, ಲಸಿಕೆಗಳಿಂದ ಅಪೇಕ್ಷಿತ ಪರಿಹಾರ ಸಿಕ್ಕು, ಮತ್ತೆ ಪರಿಸ್ಥಿತಿ ಹತೋಟಿಗೆ ಬಂದು, ಆರೋಗ್ಯ , ಸುಖ-ಶಾಂತಿ, ನೆಮ್ಮದಿಗಳು ನಮ್ಮೆಲ್ಲರ ಬಾಳಿನಲ್ಲಿ ಮತ್ತೆ ಹಿಂತಿರುಗಲಿ ಎಂದು ಹಾರೈಸೋಣ.

ವಂದನೆಗಳು…