ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವೆ ನಮ್ಮ ಬದುಕು – ೨೫

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಮರುಭೂಮಿಯೊಳಗಿನ ಮರೀಚಿಕೆಯೊ?
ಸುಳ್ಳೊ ಗೊಳ್ಳೊ, ನನಗೆ ಮಳ್ಳೊ?

ಕುಸುಮವನು ಸುಕೋಮಲತೆಯಿಂದ ಮುಟ್ಟಿದ ಕರಗಳು
ನೇವರಿಸಬಾರದೆ ಮುಳ್ಳುಗಳ ಎಂದು ಭಂಡ ಧೈರ್ಯವ
ಮಾಡಿದರೆ ಹರಿಯದೆ ನೆತ್ತರು?
ನಾಸಿಕಕೆ ಸೋಂಕಿದ ಕಂಪಿನಿಂದ ಹಸಿರಕ್ತ ನಿಲ್ಲುವದೆ?
ಸಾಯ-ಸಾಂತ್ವನ ದೊರಕಿ ಮಾಯುವದೆ ಗಾಯ?

ಭಾವದಾಳಕೆ ಧುಮುಕಿ ತಡಕುತಿಹೆ ಕ್ಷೇತ್ರಕ್ಕೆ !
ಬಿತ್ತಲು ಮಮತೆಯ ಬೀಜ!
ಇತ್ತು ಬಸಿದ ರುಧಿರದ ತೇವ
ಬೆಳೆಸಬೇಕಿದೆ ಬೆಳೆಯ
ಕಳೆ ಬೆಳೆದ ನೋವನು ಕೀಳಿ
ನಗುವಿನ ಪೈರಿನ ಸುಗ್ಗಿ ತೆಗೆಯಬೇಕಿದೆ

ಆರು ಕಾರುಭಾರು ಮಾಡಿದರೂ ಆಗುವದು ತಡೆಯುವದೆ?
ಇರುವದಿಲ್ಲ ಎಲ್ಲ ಇರುವಂತೆ
ನಡುವೆ ಎಂತು ಎಂತೆಂಬ ಕಂತೆ
ಮುಗ್ಗರಿಸದಿರಲಿ ಬಾಳಿನ ಸಂತೆ!

ಕನ್ನಡ ಸಾಹಿತ್ಯ ಲೋಕದ ಮಹಾನ್ ಕತೆಗಾರರು, ಕಾದಂಬರಿಕಾರರು, ಲೇಖಕರು ಹಾಗೂ ವಿಮರ್ಶಕರೂ ಆದ ಡಾ.ಯು.ಆರ್. ಅನಂತಮೂರ್ತಿ ಅವರ ‘ಪ್ರಜ್ಞೆ ಮತ್ತು ಪರಿಸರ’ ಕೃತಿಯಲ್ಲಿಯ ‘ಸಾರ್ತ್ ಮತ್ತು ಅಸ್ತಿತ್ವವಾದ’ ಲೇಖನದಿಂದ ನನ್ನ ಮನಸಿನಲಿ ಬಂದ ಕೆಲವು ಭಾವಗಳು ಮೂರ್ತವಾಗಿ ಮೇಲಿನ ಸಾಲುಗಳು ಹೊರಬಂದವು. ಮನದಲ್ಲಿ ಎಷ್ಟೋ ವಿಚಾರಗಳು ಮೂಡಿದವು. ಅವುಗಳಿಗೆ ಮತ್ತು ಮಾನವನ ಮಮತೆಯ ನಡುವೆ ಇರುವ ಸಂಬಂಧದ ಎಳೆಯನ್ನು ಅರಸುತ್ತಾ ಹೋದೆ. ಈ ಸಲ ಹಿಡಿದ ಜಾಡಿನ ಬಗ್ಗೆ ನನಗೇ ಅಳುಕು ಇತ್ತು. ಗಂಟಲಕ್ಕೆ ಇಳಿಯಲಾರದ ತುತ್ತು ನುಂಗುತ್ತಿದ್ದೆನೋ ಎನೋ ಎಂದು ಅನಿಸದೆ ಇರಲಿಲ್ಲ-
“ಬೈಟಿಂಗ್ ಮೋರ್ ದ್ಯಾನ್ ಐ ಕ್ಯಾನ್ ಚ್ಯೂ” ಎಂದು ಭಾಸವಾಯಿತು.

ಡಾ. ಯು ಆರ್ ಅನಂತಮೂರ್ತಿ

ಎಗ್ಜಿಸ್ಟೆನ್ಶಿಯಲಿಜಂ- ಅಸ್ತಿತ್ವವಾದ ದ ಬಗ್ಗೆ ಸುದೀರ್ಘವಾದ ಅಧ್ಯಯನ ಮಾಡದೆ ಅದರ ಕುರಿತಾಗಿ ಮಾತನಾಡುವದು ಸರಿಯೇ? ಆದರೂ ಅನಂತಮೂರ್ತಿ ಅವರ ಲೇಖನ ಮಿದುಳಿಗೆ ಗ್ರಾಸ ಒದಗಿಸಿ ವಿಚಾರ ಮಾಡಲು ಪ್ರಚೋದನೆ ನೀಡಿತು.

ಅಸ್ತಿತ್ವವಾದದ ವಿರುದ್ಧ ಕಮ್ಯೂನಿಸ್ಟರು ಮತ್ತು ಕ್ಯಾಥಲಿಕ್ ರು ಹೂಡಿದ ಪ್ರತಿವಾದವನ್ನು ಉಲ್ಲೇಖ ಮಾಡುತ್ತ, ಅಸ್ತಿತ್ವವಾದಿಗಳು ಮಾನವಜನಾಂಗದ ಅನ್ಯೋನ್ಯತೆಯನ್ನು ಮರೆತು, ಒಬ್ಬ ವ್ಯಕ್ತಿಯ ಅರಿವಿನಲ್ಲೇ ಅವನ ಲೋಕದ ಇತಿಮಿತಿ ಇದೆ ಎಂದು ಪ್ರತಿಪಾದಿಸಿ, ವ್ಯಕ್ತಿಯನ್ನು ಮಾನವ ಸಮಷ್ಟಿಯ ಹೊರಗಿಟ್ಟು ಅವನನ್ನು ಅನಾಥ ಏಕಾಂಗಿಯನ್ನಾಗಿ ಮಾಡಿ ನೋಡುತ್ತಾರೆ ಎಂಬ ಅವರ ವಿಚಾರವನ್ನು ನಮ್ಮ ಮುಂದೆ ಪ್ರಸ್ತುತ ಪಡೆಸುತ್ತಾರೆ.

‘ ನಾನು ಅರಿಯುವದರಿಂದ ನಾನು ಇದ್ದೇನೆ –ಐ ಥಿಂಕ್ ದೇರ್ಫೋರ್ ಐ ಯಾಮ್’
ಎಂಬ ಕಾರ್ಟೀಸಿಯನ್ ವಾದ ಹೂಡಿ, ಎಲ್ಲ ತಿಳಿವಳಿಕೆ, ಭಾವನೆ, ಅನುಭವ, ಆತ್ಮ ನಿಷ್ಠವೆಂದು ಹಠತೊಟ್ಟರೆ ಮಾನವ ಕುಟುಂಬದ ಜೊತೆ ಯಾವ ಸಂಪರ್ಕ ಸಾಧ್ಯ? ನಾನು ನನ್ನಲ್ಲಿ ನನಗೋಸ್ಕರ, ನೀನು ನಿನ್ನಲ್ಲಿ ನಿನಗೋಸ್ಕರ-ಎಂದು ಹೇಳಿದ ಹಾಗೆ ನಿಮ್ಮ ವಾದ.

‘ವ್ಯಕ್ತಿಪ್ರಜ್ಞೆಗೆ ಹೊರತಾದ, ಅದನ್ನು ಮೀರಿದ, ಸಾರ್ವತ್ರಿಕ ಸತ್ಯಗಳು ಇಲ್ಲವೆಂದು ಭಾವಿಸಿದರೆ ನಿರಾಸೆ, ಕಿಂಕರ್ತವ್ಯಮೌಢ್ಯ ಮಾತ್ರ ಸಾಧ್ಯ’ ಎಂಬ ಅವರ ಮಂಡನೆಯನ್ನು ನಮ್ಮ ಮುಂದೆ ಇಡುತ್ತಾರೆ. ಈ ದೂರುಗಳು ತಪ್ಪು ತಿಳವಳಿಕೆಯಿಂದ ಹುಟ್ಟಿದವು ಎಂದು ಸಾರ್ತ್ ವಾದ:
“ ಸ್ಥಿತಿ” ಮೊದಲು “ತತ್ವ” ಆಮೇಲೆ ; ನೀನು ಮೊದಲು “ ಇರುತ್ತಿ” ಆಮೇಲೆ “ ಆಗುತ್ತಿ” ಎಂಬ ಅವರ ಅವರ ಅಸ್ತಿತ್ವವಾದದ ಸಮರ್ಥನೆಯನ್ನು ನಮ್ಮ ಎದುರಿಗೆ ಇಡುತ್ತಾರೆ, ಅನಂತಮೂರ್ತಿಯವರು.

ಈ ವಿಚಾರವಾಹಿನಿಯ ಪರಿಣಾಮವಾಗಿ, ಒಬ್ಬ ವ್ಯಕ್ತಿ ತನ್ನ ನಿರ್ಮಾಣದ ಸಮಸ್ತ ಹೊಣೆಯನ್ನು ಹೊತ್ತು ಏನಾಗಬೇಕೆಂದು ನಿಶ್ಚಯಿಸಿ ಏನಾಗುತ್ತಾನೋ ಅದಕ್ಕೆ ಮಾನವ ಸಂಪೂರ್ಣ ಜವಾಬ್ದಾರ ಎಂಬುದು. ಆದರೆ ಈ ನಿಶ್ಚಯ ಆತ್ಮಸ್ಥವಾದರೂ ಆತ್ಮ ಪರಿಮಿತವಲ್ಲ. ತನ್ನ ಸ್ವಂತ ನಿಶ್ಚಯದ ಮೂಲಕ ವ್ಯಕ್ತಿ ಸಮಗ್ರ ಮಾನವತೆಯ ಪರವಾಗಿಯೂ ನಿಶ್ಚಯಿಸುತ್ತಾನೆ.

ನಾನು “ ಹೀಗೆ” ಆಗಲೆ “ ಹಾಗೆ” ಆಗಲೆ ಎಂದು ನೂರು ದಾರಿಗಳಲ್ಲಿ ಒಂದನ್ನು ನಿಶ್ಚಯಿಸುವ ಸಂದರ್ಭದಲ್ಲಿ , ತಾನು ಪಡೆಯುವ ಸ್ಥಿತಿ ಮಾನವ ಕುಟುಂಬಕ್ಕೆ ಸಮರ್ಪಕ ಹೌದೆ ಅಲ್ಲವೆ ಎನ್ನುವ ಒಳತೋಟಿಯ ಸಂಕಟದಿಂದ ತಪ್ಪಿಸಿಕೊಳ್ಳುವದು ಸಾಧ್ಯವಿಲ್ಲ. ತನ್ನ ದೃಷ್ಟಿಯಲ್ಲಿ ಅಯೋಗ್ಯವಾದದ್ದನ್ನು ಮನುಷ್ಯ ಎಂದೂ ಆರಿಸಿಕೊಳ್ಳಲಾರ; ಆದ್ದರಿಂದ ‘ಇದ’ ನಲ್ಲದೆ “ಅದ” ನ್ನು ಆರಿಸಿಕೊಳ್ಳುವಾಗ ತನಗೆ ಯೋಗ್ಯವಾದ್ದು ಮಾನವತೆಗೂ ಯೋಗ್ಯವೆ ಎಂಬ ಸಂದಿಗ್ಧ ಏಳುತ್ತದೆ.

ಹೀಗೆ ಸ್ವಂತ ಜೀವನಕ್ಕೆ ಸ್ಪಷ್ಟ ಆಕೃತಿ ರಚಿಸುವ ಘಟನೆಯಲ್ಲಿ ಮಾನವ ಕುಟುಂಬವನ್ನೂ ನಾವು ಒಳಪಡಿಸುತ್ತೇವೆ ಎಂದು ಅನಂತಮೂರ್ತಿಯವರು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಪೂರಕವಾಗಿ ಅವರು ಒಂದು ಉದಾಹರಣೆ ಕೊಟ್ಟು ವಿಷಯವನ್ನು ಮತ್ತಷ್ಟು ವಿಶದವಾಗಿ ತಿಳಿಸುತ್ತಾರೆ. ಆದರೆ ನಾನು ಅದರ ವಿವರಗಳಲ್ಲಿ ಹೋಗಲು ಇಚ್ಛಿಸುವದಿಲ್ಲ. ಈ ವಿಚಾರ ವಾಹಿನಿಯಿಂದ ನಿಷ್ಪನ್ನವಾದ ಕೆಲವು ಸಂಗತಿಗಳನ್ನು ನಿಮ್ಮ ಮುಂದೆ ಇಡಲು ಬಯಸುವೆ.

ವ್ಯಕ್ತಿಯ ಈ ಆಯ್ಕೆ ಸುಲಭವಾದುದಲ್ಲ ಎಂದು ಹೇಳುತ್ತ ಇದು ಒಂದು ‘ತಪ್ತ ಸ್ಥಿತಿ’ ಎಂದು ವರ್ಣಿಸುತ್ತ ವಿಷಾದಯೋಗದಲ್ಲಿ ಅಪ್ರತಿಭನಾದ ಅರ್ಜುನನ ಸ್ಥಿತಿಗೆ ಇದನ್ನು ಹೋಲಿಸಿದ್ದಾರೆ. ‘ ಆದರೆ ಇಲ್ಲಿ ಕೃಷ್ಣನೂ ಇಲ್ಲ, ವಿಶ್ವರೂಪದ ಮಾರ್ಗದರ್ಶನವೂ ಇಲ್ಲ; ದಿವ್ಯಂ ದದಾಮಿ ತೆ ಚಕ್ಷುಃ ಎಂದು ಹೇಳುವವನೂ ಇಲ್ಲ ಎನ್ನುತ್ತಾರೆ ಅನಂತಮೂರ್ತಿಯವರು.

ಪ್ರಾಣಿ ಜಗತ್ತಿನಲ್ಲಿ ಮಾನವನ ಮಿದುಳು ಉಳಿದ ಜೀವಿಗಳಿಗಿಂತ ಭಿನ್ನವಾಗಿ ವಿಕಸಿತಗೊಂಡು ಗಾತ್ರದಲ್ಲೂ ಬೆಳೆದು ಅದರ ತತ್ಪರಿಣಾಮವಾಗಿ ಮಾನವನ ವರ್ತನೆಯಲ್ಲಿ ಸಂಭವಿಸಿದ ಬದಲಾವಣೆಗಳ ಕುರಿತಾಗಿ ಇದ್ದ ವೈಜ್ಞಾನಿಕ ಆಧಾರದ ಮೇಲಿನ ಅಂಶಗಳನ್ನು ಹಿಂದೊಮ್ಮೆ ಈ ಅಂಕಣದ ಅಡಿ ಚರ್ಚಿಸಿದ್ದೆ.

ಸಂಗೀತ, ಸಾಹಿತ್ಯ, ನಾಟ್ಯ ಹೀಗೆ ಸೃಜನಾತ್ಮಕ ಕಲೆಗಳ ಬಗ್ಗೆ , ಮನುಷ್ಯನಲ್ಲಿ ಆಸಕ್ತಿ ಜನಿಸಿದ್ದು ( ಮಾನವನ ಮಿದುಳು ವಿಕಾಸಗೊಂಡಂತೆ), ಅಲ್ಲದೆ ವಿಕಸನದ ವಿವಿಧ ಹಂತಗಳಲ್ಲಿ ಮನುಷ್ಯನಲ್ಲಿ ಮೃಗೀಯ ಪ್ರವೃತ್ತಿಗಳಲ್ಲಿ ಇಳಿಮುಖವಾಗುತ್ತ ಅವನಲ್ಲಿ ಮಾನವೀಯತೆ ಉದ್ದೀಪನೆಗೊಂಡ ( ಪರರ ಸಂತಸದಲ್ಲಿ ಸುಖ ಕಂಡು ಅದರ ಸಲುವಾಗಿ ಶ್ರಮಿಸುವದು ಇತ್ಯಾದಿ..) ಬಗೆಯ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ರೀತಿಯ ಮಾನವನ ಮಿದುಳಿನ ವಿಕಸನಕ್ಕೆ ಕೆಲವು ಮಿಲಿಯ ವರ್ಷಗಳೇ ಬೇಕಾದವು- ಇದು ಕೂಡ ‘ ಇರು’ ವಿಕೆಯಿಂದ ‘ ಆಗು’ವಿಕೆಗೆ ಕ್ರಮಿಸಿದ ದಾರಿಯಲ್ಲವೇ?; ಮಾನವ ಹುಟ್ಟಿದ ಮೇಲೆ ಸ್ವತಂತ್ರವಾಗಿ ತನ್ನ ದಾರಿಯನ್ನು ನಿರ್ಧರಿಸುವಾಗ ಈ ಅಂಶದ ಪ್ರಭಾವ ಎಷ್ಟು? ಮಾನವನ ಮಿದುಳಿನ ವಿಕಾಸ ತನ್ನ ಗರಿಷ್ಠ ಮೇರೆ ತಲುಪಿದೆಯಾ ಅಥವಾ ಮನುಷ್ಯನ ಸ್ವಪ್ರಯತ್ನದಿಂದಾಗಿ ಅಥವಾ ಮಿದುಳಿನ ಗಾತ್ರ-ರಚನೆಗಳಲ್ಲಿ ಬದಲಾವಣೆಗಳಾಗಿ ಇನ್ನೂ ಸಂಸ್ಕರಣೆಗಳಾಗುವ ಸಾಧ್ಯತೆಗಳಿವೆಯಾ ಎಂಬುದರ ಕುರಿತು ಪ್ರಶ್ನೆಗಳು ಏಳುತ್ತವೆ.

ವೀರ್ಯಾಣು ಅಂಡಾಣುಗಳು ಒಂದಾಗಿ ಭ್ರೂಣ ತಳೆದು ಹೊರ ಬರುವತನಕ ನಡೆಯುವ ಪ್ರಕ್ರಿಯೆ
‘ ಇರು’ ವಿಕೆಯಿಂದ ‘ಆಗು’ವಿಕೆಗೆ ಸಾಗುವ ಒಂದು ರೀತಿಯ ಪಯಣವಲ್ಲವೆ? ; ಈ ಹಂತದಲ್ಲಿ ತಾಯಿಗೆ ಸಿಗುವ ಆಹಾರ- ಆರೈಕೆಗಳಿಂದ ಹಿಡಿದು ಅವಳಿಗೆ ಸಿಗುವ ಪರಿಸರವೂ ಸಹ ಮಹತ್ತರವಾದ ಪಾತ್ರವನ್ನು ಒದಗಿಸುತ್ತದೆ.

ನಮ್ಮ ಪೌರಾಣಿಕ ಕತೆಗಳಲ್ಲಿ ಅಭಿಮನ್ಯು ಚಕ್ರವ್ಯೂಹದ ಬಗ್ಗೆ ಗರ್ಭದಲ್ಲಿದ್ದಾಗಲೇ ತಿಳಿದುಕೊಂಡದ್ದು, ಭಕ್ತ ಪ್ರಹ್ಲಾದ ಗರ್ಭದಲ್ಲಿರುವಾಗಲೇ ದೇವರ್ಷಿ ನಾರದರಿಂದ ಶ್ರೀ ಹರಿಯ ಮಹಿಮೆಗಳ ಕುರಿತು ಆಲಿಸಿ ಅದನ್ನು ಮೈಗೂಡಿಸಿಕೊಂಡ ಸಂಗತಿಗಳ ವಿಷಯವಾಗಿ ಉಲ್ಲೇಖವಿದೆ. ತಾಯಿ ಗರ್ಭಿಣಿಯಾಗಿರುವಾಗ ಅವಳ ಮೇಲೆ ಮಧುರವಾದ ಸಂಗೀತ ಧನಾತ್ಮಕವಾದ ಪ್ರಭಾವ ಬೀರುವದರ ಬಗ್ಗೆ ವೈಜ್ಞಾನಿಕ ಪುರಾವೆಗಳಿರುವದಾಗಿ ಇತ್ತೀಚೆಗೆ ತಿಳಿದು ಬಂದ ಸಂಗತಿ. ಅಷ್ಟೇ ಅಲ್ಲ, ಸುತ್ತಲಿನ ವಾತಾವರಣ ಅಷ್ಟು ಹಿತದಾಯಕವಾಗಿರದಿದ್ದರೆ, ಅದು ಭ್ರೂಣದ ಪೂರ್ಣವಿಕಾಸಕ್ಕೆ ಮಾರಕ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವ ಸಂಗತಿ ವಿದಿತವಾದದ್ದೇ. ಹೀಗಿರುವಾಗ, ಮಾನವ ಜನ್ಮ ತಾಳಿ, ಸಮಾಜದ ಒಳಿತು ಹಾಗೂ ತನ್ನ ಒಳಿತು ಎರಡನ್ನೂ ಸಮನ್ವಯಿಸಿ ದಾರಿ ಆಯ್ಕೆ ಮಾಡಿಕೊಳ್ಳುವ ಸುಸಂಧಿ ಬಂದಾಗ , ಈ ಎಲ್ಲ ಹಿನ್ನೆಲೆಗಳ ಪ್ರಭಾವಗಳು ಅವನ ನಿರ್ಧಾರಕ್ಕೆ ನೇಪಥ್ಯ ಒದಗಿಸುವದು ಸಹಜವೆಂದು ಅನಿಸಿ, ಈ ನನ್ನ ಅನುಮಾನಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.

ಎರಡನೇ ಜಾಗತಿಕ ಮಹಾಯುದ್ಧದಲ್ಲಿ ನಡೆದ ಕ್ರೌರ್ಯ- ಹಿಂಸಗಳಿಂದ ತಲ್ಲಣಗೊಂಡ ಮಾನವ, ಅವನ ಅಸ್ತಿತ್ವಕ್ಕೆ ಸವಾಲು ಎಸೆದಾಗ ; ಮನುಷ್ಯನ ಇರುವಿಕೆಯೇ ಅಳಿವಿನಂಚಿಗೆ ತಲುಪಿದಾಗ ಹುಟ್ಟಿಕೊಂಡದ್ದು ‘ಅಸ್ತಿತ್ವವಾದ- ಎಗ್ಜಿಸ್ಟೆನ್ಶಿಯಲಿಜಂ’ . ನಾಟ್ಸಿ ಜರ್ಮನಿ ಎಸಗಿದ ದುಷ್ಕೃತ್ಯಗಳ​ ಬಗ್ಗೆ ಓದಿದಾಗ ಮನಸು ವಿಚಲಿತಗೊಂಡು ಮಾನವನ ಮಾನವೀಯತೆಯ ಬಗೆಗಿರುವ ವಿಶ್ವಾಸ ಆವಿಯಾಗಿ ಹೋಗುತ್ತದೆ. ಇಂತಹ ಒಂದು ‘ ಭ್ರಮ ನಿರಸನ’ ದಿಂದಲೇ ಅಸ್ತಿತ್ವವಾದದ ಉತ್ಪತ್ತಿಯಾದದ್ದು.

ಈಗಾಗಲೇ, ಇದರ ಪ್ರಮುಖ ರೂವಾರಿಗಳಾದ ಸಾರ್ತ್ ಅವರ ಬಗ್ಗೆ ಕೆಲವು ಮಾತುಗಳನ್ನು ಉಲ್ಲೇಖ ಮಾಡಿದ್ದೇನೆ. ವ್ಯಕ್ತಿಯ ಸ್ವತಂತ್ರ ಆಯ್ಕೆ ಸಮಷ್ಟಿಯ ಜೊತೆ ಮುಖಾಮುಖಿಯಾದಾಗ, ಅವೆರಡರ ನಡುವಣ ತಿಕ್ಕಾಟಗಳಿಂದ ಆಗುವ ಪರಿಣಾಮಗಳು ಎಂತಹವು ಎಂಬ ಅವಲೋಕನೆಗೆ ತೊಡಗಿಸಿಕೊಳ್ಳುವ ಪ್ರಯತ್ನ ಈ ಅಂಕಣದ್ದಾಗಿದೆ.

ಸಾರ್ತ್

ದ್ವೇಷ, ಹಿಂಸೆ- ಕ್ರೌರ್ಯಗಳ ಜಾಡು ಹುಡುಕಿಕೊಂಡು ಹೋಗಿ ಅದನ್ನು ಸಮಾಜದಿಂದ ಪೂರ್ಣ ನಿರ್ಮೂಲ ಮಾಡಲು ಸಾಧ್ಯವಾಗದಿದ್ದರೂ, ಅದನ್ನು ಅದುಮಿಟ್ಟು, ಸಂಯಮದಿಂದ ನಿಯಂತ್ರಣ ಮಾಡುವ, ಹತೋಟಿಯಲ್ಲಿಡುವ ಯತ್ನವಾಗಬೇಕು. ಆಗಲೇ ಎಲ್ಲೆಡೆ ‘ ಒಲವು ರಾರಾಜಿಸಲು ಸಾಧ್ಯ. ಗಾಂಧೀಜಿ ಅವರ ಕನಸಿನ ‘ ರಾಮ ರಾಜ್ಯ” ವನ್ನು ಸಾಕಾರಗೊಳಿಸಲು ಅದಕ್ಕೆ ಬಾಧಕವಾದ ತತ್ವಗಳನ್ನು ಮೆಟ್ಟಲೇ ಬೇಕು; ಅವುಗಳನ್ನು ಹೊರಗೆ ಅಟ್ಟಬೇಕು; ಅವು ನಮ್ಮ ಮನಗಳಲ್ಲಿ ಮನೆಮಾಡಿದ್ದರೆ ಮನಗಳಿಂದ ದುಷ್ಟ ಶಕ್ತಿ- ಪ್ರವೃತ್ತಿಗಳ ಉಚ್ಚಾಟನೆಯಾಗಬೇಕು.

ಅಂಕಣದ ಮೂಲ ಪ್ರೇರಣೆ ಅನಂತಮೂರ್ತಿ ಅವರ ಲೇಖನವಾದ್ದರಿಂದ , ಈ ನಿಟ್ಟಿನಲ್ಲಿ ಭಾರತೀಯ ಮೀಮಾಂಸಕಾರರು, ದಾರ್ಶನಿಕರು ಏನನ್ನುತ್ತಾರೋ ಅದರ ಬಗ್ಗೆ ತಯಾರಿ ಮಾಡಿಲ್ಲ. ಅದರೂ, ಪಾಶ್ಚಾತ್ಯ ದೇಶಗಳಲ್ಲಿ ವ್ಯಕ್ತಿ ನಿಷ್ಠತೆ ಹಾಗೂ ಇತರ ಸಂದಿಗ್ಧಗಳು ನಮ್ಮ ದೇಶಕ್ಕೆ ಹೊಸತಲ್ಲ ಎಂದು ಅವರ ಅಭಿಪ್ರಾಯ.

ಏನೇ ಆಗಲಿ, ಸಸಿ-ಮರಗಳನ್ನು ಹೊರಗಿನ ಹಾವಳಿಯಿಂದ ಕಾಪಾಡಲು ಮುಳ್ಳುಗಳು ಇರುವಂತೆ, ‘ ಒಲವಿ’ ನ ಸುಕೋಮಲ ಕುಸುಮಗಳನ್ನು ರಕ್ಷಿಸಲು ಕಠಿಣವಾದ ಮುಳ್ಳುಗಳು ( ಧೃಡ ನಿಶ್ಚಯಗಳು) ಬೇಕಾಗಬಹುದೇನೊ.

ಮನ ಬಿಚ್ಚಿ ನನಗೆ ಸ್ಫುರಿಸಿದ ಅನೇಕ ವಿಷಯಗಳನ್ನು ಮುಕ್ತವಾಗಿ ನಿಮ್ಮ ಜೊತೆ ಹಂಚಿಕೊಂಡಿರುವೆ; ಅವುಗಳು ಪ್ರಬುದ್ಧವೋ ಅಲ್ಲವೋ ನನಗೆ ತಿಳಿಯದು.
ಆದರೆ ದ್ವೇಷವನ್ನು ಹೊರತೆಗೆದು ತೆರವು ಮಾಡಿದಾಗಲೇ ಬದುಕನ್ನು ಒಲವಿನಿಂದ ತುಂಬಲು ಸಾಧ್ಯ.
ಅಲ್ಲವೇ?

ವಂದನೆಗಳು..