- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಆಡೋದು ಒಂದು ಮಾಡೋದು ಮತ್ತೊಂದು
ಒಂದಕ್ಕೊಂದು ಇಲ್ಲ ತಾಳ-ಮ್ಯಾಳ
ನೋಡಿ ಅಳತಾವ ಶಬ್ದ ಗಳ ಗಳ
ಅರ್ಥ ಕಳಕೊಂಡು ವ್ಯರ್ಥ ಬಳಕೆ ಆಗಿ
ಕೊರಗತಾವ ಮರಗತಾವ ತಮ್ಮ ಸ್ಥಿತಿಗೆ
ನಲಗತಾವ ಮಾನವನ ಸ್ವಾರ್ಥ ಮತಿಯಲಿ ಸಿಕ್ಕಿ
ಅಂತರಂಗಕೆ ತಕ್ಕ ದಿರಿಸಾಗಲು ಅರಸತಾವ ಭಾವಗಳ
ಸಿಗದೆ ಸುರಿಸತಾವ ಕಂಬನಿ!
ಕಳೆ ಕಳೆದು ತೇಲತಾವ ಕಳೇಬರಗಳಾಗಿ!
ಸೋಗು ಹಾಕ್ಯಾರ ಮಾಯಾವಿಗಳು ಮಾನವೀಯತೆಯ
ಜನರ ಅಳಲಿನ ಮರಳಿನ ಮೇಲೆ ತಮ್ಮ ಸುಖದ ಸೌಧಗಳ ಕಟ್ಟ್ಯಾರ
ಹುರುಳಿಲ್ಲದ ಹುಲು ಮಾನವರು ಬಗೆದಾರ ನೊಂದವರ ಕರಳು
ಸುರುಳಿ ಮಾಡಿ ಸುಪ್ಪತ್ತಿಗೆಯ ಮೇಲೆ ಮೆರಿತಾವ ಅಟ್ಟಹಾಸ
ಏನಿದು ಆಭಾಸ –ವಿಪರ್ಯಾಸ!
ವೇದನೆ-ರೋದನೆಗಳನೆ ಮಾಡಿ ಬಂಡವಾಳ
ಪಡೆದು ಲಾಭ ನಿವ್ವಳ
ಉಸಿರಗಳನು ಹೊಸಕಲು ಹೇಸದೆ
ಕಾಸಿಗಾಗಿ ಲಿಲಾವು ಮಾಡಿ ಸಂವೇದನೆಯ
ಮರಗಟ್ಟಿದರೂ ಗಟ್ಟಿಯಾಗಿ ಕೂಗಿ ಕೇಕೆ ಹಾಕಿ
ಮೆರಿತಾರ ತಮ್ಮ ಇರುವ
ಆಗ್ಯಾರ ಜನರ ಬದುಕಿಗೆ ದುಃಸ್ವಪ್ನ!
ಯಾವ ದುಬಾರಿ ಚುಚ್ಚು ಮದ್ದು ಕೈಗೆ ಸಿಕ್ಕಿತೋ ಇವರ
ಕಲಬೆರಿಕೆ ಮಾಡಿ ಚಿರನಿದ್ದಿ ಕೊಟ್ಟಾರ ಜನಕ
ಮನಕ ತಿವಿದಾರ ಈಟಿ ಘಾಸಿಮಾಡ್ಯಾರ ಮರ್ಮಕ
ಹೊದ್ದಾರ ಮನುಷ್ಯನ ಚರ್ಮ ಆದರೆ ಎಸುಗುವದು ಬೇರೆ ಧರ್ಮ
ಇಂತಿಷ್ಟೂ ಇಲ್ಲ ನಾಚಿಕೆ- ಶರಮ
ಆಕ್ರಂದನ ದುಗುಡ ದುಮ್ಮಾನಗಳು ಮಾತುಗಳಿಲ್ಲದೆ ಮೂಕ ಆಗ್ಯಾವ
ಸಾಂತ್ವನದ ನುಡಿಗಳೂ ಆಗ್ಯಾವ ಬರಡು
ಕಾಂಚಾಣ ಕುರುಡು
ಹೂಡಿರುವ ಆಟವ ನೋಡಿ
ಅನಿಸ್ತದ ಮನುಷ್ಯ ಎಷ್ಟು ಖೋಡಿ ಎಷ್ಟು ಕೇಡಿ
ತಪ್ಪ್ಯದ ನಾಡಿಯ ಲಯ ನಾಡಿನ
ಪಾಡು ಕೇಳಿವರಿಲ್ಲ, ಜಾಡು ಸಿಗದೆ ಮನ
ಚಿಂತೆಗಳ ಕಾಡುಗಳಲಿ ಅಲೆದು ಬೆಂಡಾಗ್ಯಾವ
ಪೇರಿಸಿಟ್ಟ ಚಿತೆಯ ಮೇಲೆ ಹೇರಿದ ಮತ್ತೊಂದು ಮರದ
ತುಂಡಾಗಿ ಹೋಗ್ಯಾನ ಮಾನವ
ಅಂತಿಲ್ಲ ಗೋಳಿಗೆ ಬೆಲೆ ಇಲ್ಲ ಬಾಳಿಗೆ
ಸುತ್ತಲೂ ಕಾಳಸಂತೆಯ ಸೈತಾನರು ಗಹಗಹಿಸಿ
ಮಾಡುತಿರುವರು ದೈತೈ ನೃತ್ಯ
ಎಸಗುತಿರುವರು ಹೇಯ ಕೃತ್ಯ
ಮರ್ತ್ಯ ಮಾನವ!
ಮಾನವೀಯತೆಯ ಉಸಿರೂ ಕಟ್ಟಿತೆ?
ತನುವಿಗೆ ಸೋಂಕಿದ ವೈರಾಣುವಿಗೆ ಇವೆ ಲಸಿಕೆ- ಮದ್ದು
ಅಂತರಾತ್ಮದಲಿ ಹೊಕ್ಕ ಸೂಕ್ಷ್ಮಾಣು ಹರಡಿ
ಛಿದ್ರಗೊಳಿಸುತಿದೆ ಭಾವಗಳ
ಅರ್ಥಹೀನತೆ ಕಬಳಿಸಿದೆ ಬೆಳಕನ್ನು
ಹೊಳೆಯದಾಗಿದೆ ಏನೂ
ಈ ಇರುಳು ಉರುಳುವದೆ ಎಂಬ ಪ್ರಶ್ನೆಗೆ
ಸಿಗುವುದೆ ಉತ್ತರ?
ಅಂತರ ಭೌತಿಕವಿದ್ದರೆ ಕ್ಷೇಮ
ಆದರೆ ಪಸರಿಸಿ ಎಲ್ಲೆಡೆ ಆಗದಿರಲಿ ಅಂತಃಕರಣದ ಕ್ಷಾಮ!
ಒಲವಿನ ಕುಸುಮಗಳು ಜೀ
ವನದಲಿ ಅರಳಲು ಮರೆತು
ಹೃದಯಗಳು ಮರುಭೂಮಿಯಾಗುವ ಮುನ್ನ
ಬೆಳಕು ಮೂಡಿಸಿ ಮಾರ್ದವತೆಯ ಕೊನರಿಸಿ
ನೋವನು ಹಿಂಗಿಸುವ
ಒಂದು ಮಾರ್ದನಿಗಾಗಿ ಕಾಯುತಿರುವೆ!
ಮನಸ್ಸಿನಿಂದ ಹೊರಗೆ ತಳ್ಳಿಹಾಕಬೇಕೆಂದರೂ ಸಾಧ್ಯವಾಗುತ್ತಿಲ್ಲ; ಮತ್ತೆ ‘ಕೊರೋನಾ’ ಧುತ್ತೆಂದು ಎದ್ದು ಕಾಡುತ್ತಿದೆ. “ಮೈಮೇಲೆ ಬಂದವರಂತೆ’ ನಾನು ಈ ವಿಷಯದ ಬಗ್ಗೆ ಮಾತನಾಡುತ್ತಿರುವೆ. ಇದರಿಂದ ಪೊಜೆಸ್ಸೆಡ್” ಆದವರಂತೆ ಅನಿಸಹತ್ತಿದೆ. ಇದರ ಹಾವಳಿಯ ಕುರಿತು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಲಾಗುತ್ತಿರುವ ಸಂಗತಿಗಳನ್ನು ನೆನೆದರೆ ಈ ರೀತಿ ಆಗುವದು ಸಹಜವೇನೋ? ಈ ಮೊದಲ ಅಂಕಣಗಳಲ್ಲಿ ನಾನು ಇದನ್ನು ತಡೆಗಟ್ಟಲು ಹೋರಾಡುತ್ತಿರುವ, ಹೆಣಗುತ್ತಿರುವ ಕೋವಿಡ್ ಯೋಧರ ಕುರಿತಾಗಿ ಪ್ರಸ್ತಾಪ ಮಾಡಿ ಅವರಿಗೆ ನಮ್ಮ ನಮನಗಳನ್ನು ಸಲ್ಲಿಸಿದ್ದೆ – ವಿಜ್ಞಾನಿಗಳು, ವೈದ್ಯರು, ಆರೋಗ್ಯ ಕರ್ಮಿಗಳು, ಸಫಾಯಿ ಕರ್ಮಚಾರಿಗಳು, ಪೋಲೀಸರು ಹೀಗೆ ಸಮಾಜದ ಅನೇಕ ವರ್ಗದವರು ಸಮಾಜದ ಹಿತಕ್ಕಾಗಿ ಸಲ್ಲಿಸುತ್ತಿರುವ ನಿಃಸ್ವಾರ್ಥ ಸೇವೆಯ ಬಗ್ಗೆ ಪ್ರಸ್ತಾಪಿಸಿ ಅವರನ್ನು ಶ್ಲಾಘಿಸಿ ಅವರ ಋಣವನ್ನು ಎಂದೆಂದಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಕೃತಜ್ಞತಾ ಭಾವನೆಗಳ ಕುಸುಮಗಳನ್ನು ಎಲ್ಲರ ಪರವಾಗಿ ಅರ್ಪಿಸಿದ್ದೆ. ಆದರೆ, ಈ ಸಲ ನಮ್ಮನ್ನೆಲ್ಲ ತಲ್ಲಣಗೊಳಿಸುವ, ಎದೆಗಳನ್ನು ಝಲ್ಲೆನಿಸುವ ಕೆಲವು ಅಮಾನುಷ ಕೃತ್ಯಗಳು ನಮ್ಮ ನಡುವೆ ನಡೆದು ಮಾನವೀಯ ಮೌಲ್ಯಗಳನ್ನೇ ಬುಡಮೇಲಾಗಿ ಮಾಡಿದ ವಿದ್ಯಮಾನಗಳ ಬಗ್ಗೆ ಮಾತನಾಡಲೂ ನಾಚಿಕೆಯಾಗುತ್ತಿದೆ, ಹೇಸಿಗೆ ಎನಿಸುತ್ತಿದೆ.
ಕೊರೋನಾ ದ ಎರಡನೇ ಅವತರಣಿಕೆ- ಎರಡನೇ ಅಲೆ ಮತ್ತಷ್ಟು ಭೀಕರ, ಬೀಭತ್ಸ, ಕರಾಳವಾಗಿದೆ. ಅದಕ್ಕಿಂತ, ಸಮಾಜದಲ್ಲಿ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅಕ್ರಮವಾಗಿ ದುಡ್ಡು ಮಾಡುತ್ತಿರುವ ದುಷ್ಕರ್ಮಿಗಳ ಕೃತ್ಯಗಳು ರೋಗದ ಕರಾಳ ಮುಖಕ್ಕಿಂತ ಹೆಚ್ಚು ವಿಕೃತವಾಗಿದೆ. ಇಂತಹ ದುಷ್ಟ ಶಕ್ತಿಗಳು ಎಸಗುತ್ತಿರುವ ಘಾತಕ ಕಾರ್ಯಗಳಿಂದ ಕೋವಿಡ್ ಯೋಧರು ಮಾಡಿದ ಸಾಧನೆಗಳು ವಿಫಲಗೊಳ್ಳುತ್ತಿವೆ – ನಮ್ಮಲ್ಲಿರುವ ನಾಣ್ಣುಡಿಯಂತೆ “ ಎಲ್ಲ ಒಳ್ಳೆಯ ಕಾರ್ಯಗಳು ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆ “ ಅನಿಸಹತ್ತಿದೆ. ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟಮಾಡುವದಲ್ಲದೆ, ನಕಲಿ ಮದ್ದುಗಳನ್ನು ಸಹ ವ್ಯಾಪಾರ ಮಾಡುವವರನ್ನು ಕಂಡಾಗ , ಮಾನವನ ಅಂತರಾತ್ಮಕ್ಕೆ ವೈರಾಣು ಸೇರಿ ಮಾನವೀಯತೆಯ ಕುತ್ತಿಗೆಯನ್ನು ಹಿಸುಕಿ ಹಾಕುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ದುಡ್ಡಿನ ದುರಾಸೆ ಕೆಲವರನ್ನು ಪ್ರಪಾತಕ್ಕೆ ತಳ್ಳುತ್ತಿರುವ ರೀತಿಯನ್ನು ನೆನೆದರೆ ಇದು ಹೇಗೆ, ಯಾವ ರೀತಿಯಲ್ಲಿ ಪರ್ಯಾವಸಾನಗೊಳ್ಳುವದೋ ಎಂಬ ಭೀತಿ ದುಃಸ್ವಪ್ನವಾಗಿ ( ನೈಟ್ ಮೇರ್) ನಮ್ಮ ನೆಮ್ಮದಿ ಸಮಾಧಾನಗಳನ್ನು ಕಸಿದುಕೊಂಡಿದೆ. ರೋಗಿಗಳಿಗೆ ಅತ್ಯವಶ್ಯಕವಾದ ಆಕ್ಸೀಜನ್( ಆಮ್ಲ ಜನಕ) ದ ಸಿಲಿಂಡರಗಳನ್ನು ಅಕ್ರಮವಾಗಿ ಶೇಖರಿಸಿ ರೊಗಿಗಳಿಗೆ ಮನಸಿಗೆ ಬಂದಂತೆ ದರ ಏರಿಸಿ ಮಾರುತ್ತಿರುವದು ಬಹಳ ಶೋಚನೀಯ ಸಂಗತಿ. ಇಂತಹ ರಾಕ್ಷಸೀ ಜನರು ತಮ್ಮ ಕೈಯಲ್ಲಿದ್ದರೆ ಗಾಳಿಯನ್ನೂ ವಶಪಡಿಸಿಕೊಂಡು ಅದನ್ನು ಮಾರಲು ಹೇಸುತ್ತಿರಲಿಲ್ಲ. ಧನಕ್ಕಾಗಿ ಪಂಚಭೂತಗಳಿಂದಲೂ ಜನರನ್ನು ವಂಚಿತಗೊಳಿಸುತ್ತಿದ್ದರು. ಆಸ್ಪತ್ರೆಯಲ್ಲಿ ಬೆಡ್ ಗಳನ್ನು, ಮಾರುಕಟ್ಟೆಯಲ್ಲಿ ತಯಾರಾದ ಅತ್ಯವಸರವಾದ ಪ್ರಾಣ ಸಂಜೀವನಿಗಳನ್ನು ( ಔಷಧಿಗಳನ್ನು) ಜನರಿಗೆ ಎಟುಕದಂತೆ ಮಾಡಿ , ಸಮಯಾವಕಾಶದ ಲಾಭವನ್ನು ಪಡೆದು ಸಮಯ ಸಾಧಕರಾಗಿ ಜನರ ಪ್ರಾಣಗಳಿಗೆ ಕಂಟಕ ಪ್ರಾಯವಾಗಿದ್ದಾರೆ ( ಲಿಟರಲ್ಲಿ ದೆ ಅರ್ ಮೇಕಿಂಗ ಎ ಕಿಲ್). ಅಷ್ಟೇ ಅಲ್ಲ ಪ್ರಾಣಗಳನ್ನು ಉಳಿಸಲು ಅತಿಶೀಘ್ರವಾಗಿ ಆಸ್ಪತ್ರೆಗಳಿಗೆ ಸಾಗಿಸಬೇಕಾದ ಆಂಬುಲೆನ್ಸ್ ಗಳು ಮನಸ್ಸಿಗೆ ಬಂದಂತೆ ಜನರನ್ನು ಸುಲಿಗೆ ಮಾಡುತ್ತಿರುವ ರೀತಿ ಅಸಹ್ಯವನ್ನು ಹುಟ್ಟಿಸುತ್ತದೆ. ಇದು ಸಾಲದು ಎಂಬಂತೆ , ರುದ್ರಭೂಮಿಯಲ್ಲೂ ಚಿತೆಗೆ ಬೇಕಾದ ಕಟ್ಟಿಗೆಯನ್ನು ಸಹ ಬ್ಲಾಕ್ ಮಾರ್ಕೆಟ್ ಮಾಡುತ್ತಿರುವ ಲೋಭಿಗಳ ಬಗ್ಗೆ ಕೇಳಿದಾಗ, ಧನವೇ ಸರ್ವಸ್ವವಾಗಿ ಮಾನವತನವನ್ನು ಮೂಲೆಗುಂಪು ಮಾಡಿದ ರಕ್ಕಸರ ಮೇಲೆ ಆಕ್ರೋಶ ಉಕ್ಕಿ ಬರುತ್ತದೆ. ಎಳ್ಳಷ್ಟೂ ಕರುಣೆ ಇಲ್ಲದ ಈ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ‘ ವಸುಧೈವ ಕುಟುಂಬಕಮ್’ ಎಂದು ಸಾರಿದ ದೇಶದಲ್ಲಿ ಇವೆಲ್ಲ ನಡೆಯುತ್ತಿವೆಯಾ? ಎಂಬ ಬಲವಾದ ಸಂಶಯ ಮನದಲ್ಲಿ ಉದ್ಭವಿಸುತ್ತದೆ.
“ಏ ಪೂರಬ್ ಹೈ ಪೂರಬ್ ವಾಲೇ ಹರ್ ಜಾನ್ ಕಿ ಕೀಮತ್ ಜಾನತೆ ಹೈ- ಇದು ಪೌರಾತ್ಯ ದೇಶ, ಈ ದೇಶದ ವಾಸಿಗಳು ಪ್ರತಿ ಪ್ರಾಣದ ಬೆಲೆಯನ್ನು ಬಲ್ಲರು’ ಎಂಬ ಮಾತು ಹುಸಿಯಾಯಿತೆ ? ಈ ಸಂದರ್ಭದಲ್ಲಿ ಕೆಲವು ಯುವಕ- ಯುವತಿಯರನ್ನು ಬಂಧಿಸಿ ದೋಷಿಗಳೆಂದು ಮಾಧ್ಯಮಗಳು ಪ್ರಸ್ತುತ ಪಡೆಸುತ್ತಿದ್ದಾವೆ. ಮುಸುಕುಹಾಕಿಕೊಂಡು ಸಾರ್ವಜನಿಕವಾಗಿ, ಬಹಿರಂಗವಾಗಿ ಎಲ್ಲರ ಕಣ್ಣುಗಳಿಗೆ ಬೀಳುತ್ತಿರುವ ಇವರ ಹಿಂದೆ ಕಾಣಿಸದ ದುಷ್ಟ, ಬಲಾಢ್ಯ, ಪ್ರಭಾವಶಾಲಿ ಶಕ್ತಿಗಳ ಜಾಲವೇ ಇರುವ ಸಂಗತಿ ಊಹಿಸಲು ಅಸಾಧ್ಯವೇನೂ ಅಲ್ಲ. ಈ ದುಷ್ಕೃತ್ಯಗಳಿಗೆ ಪ್ರೇರಕವಾದ ಅಂತಹ ಪ್ರಬಲ ಶಕ್ತಿಗಳನ್ನು ಪತ್ತೆ ಹಚ್ಚಿ ಆ ಅಸುರಿ ಶಕ್ತಿಯನ್ನು ಸೆದೆಬಡಿದು ದಮನಿಸುವ ಕಾರ್ಯ ಬಹಳ ಆದ್ಯವಾದದ್ದು. ದೊಡ್ಡ ಪಾತ್ರೆಯಲ್ಲಿರುವ ಕ್ಷೀರವನ್ನು ಒಂದು ಹನಿ ಹುಳಿ ಕೆಡಿಸುವಂತೆ, ಇಂತಹ ದುಷ್ಕರ್ಮಿಗಳು ಅಲ್ಪ ಸಂಖ್ಯೆಯಲ್ಲಿ ಇದ್ದರೂ ಇಡೀ ಸಮಾಜವನ್ನೇ ಕಲುಷಿತ ಮಾಡುತ್ತಾರೆ. ಸಾತ್ವಿಕ ಶಕ್ತಿಗಳ ಬಲವನ್ನು ವರ್ಧಿಲು ( ಎಂಪವರ್ ) ಇಂತಹ ಪಾಶವೀ ಪ್ರವೃತ್ತಿಗಳನ್ನು ಅಣಗಿಸುವದು ಬಹಳ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ನಮ್ಮ ಕಾನೂನು ವ್ಯವಸ್ಥಾಪಕರು ದಿಟ್ಟ ಹೆಜ್ಜೆಗಳನ್ನು ಹಾಕಿ ಸರಿಯಾದ ಕ್ರಮಗಳನ್ನು ಕೈಕೊಳ್ಳಬೇಕಾದ ತುರ್ತು ಬಹಳಷ್ಟಿದೆ. ಆಗಲೇ ಮಾನವೀಯತೆಯನ್ನು, ಒಲವನ್ನು, ಅಂತಃಕರಣ- ಪ್ರೇಮಗಳನ್ನು ನಮ್ಮ ನಡುವೆ ಮತ್ತೆ ಸ್ಥಾಪಿಸಿ ಸುತ್ತಲೂ ಕವಿದ ಕತ್ತಲೆಯನ್ನು ಹೋಗಲಾಡಿಸಬಹುದು. ಕೊರೋನಾ ಮಹಾಮಾರಿಗೆ ಬಲಿಯಾಗುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ನನಗೆ ಪರಿಚಿತವಿರುವ ಅನೇಕ ಮಿತ್ರರು ಇದಕ್ಕೆ ಇತ್ತೀಚೆಗೆ ತುತ್ತಾಗಿರುವ ವಿಷಯ ತಿಳಿದು ಬಂದು ಮನಸಿಗೆ ಮಂಕು ಕವಿದಂತಾಗಿದೆ.
ಆದರೂ ಎಲ್ಲವೂ ಮುಳುಗಿ ಹೋಗಿದೆ ಎಂಬ ಹತಾಶ ಭಾವನೆ ನಾನು ತಾಳಿಲ್ಲ. ಈ ಅಂಕಣ ಬರೆಯುತ್ತಿದ್ದಂತೆ, ಡಿಆರ್ಡಿ ಓ ಸಂಸ್ಥೆ ಕೊರೋನಾ – ಕೋವಿಡ್ -೧೯ ರ ಪೂರ್ಣ ನಿವಾರಣೆಗಾಗಿ ಔಷಧಿಯನ್ನು ಕಂಡುಕೊಂಡಿದೆ ಎಂಬ ಸುವಾರ್ತೆ ಕೇಳಿಬರುತ್ತಿದೆ. ಇದಕ್ಕೆ ಡಿಸಿಜಿಐ ಮನ್ನಣೆ- ಅನುಮೋದನೆಯೂ ದೊರಕಿದೆ ಎಂಬುದು ಬಹಳ ಸಂತೋಷದ ವಿಷಯ. ಲಸಿಕೆಯನ್ನು ಕಂಡುಹಿಡಿಯಲು, ರೋಗದ ನಿವಾರಣೆಗಾಗಿ ಮದ್ದುಗಳ ಉಪಾಯಗಳ ಅನ್ವೇಷಣೆಯನ್ನು ಕಂಡುಕೊಳ್ಳಲು ಜಗತ್ತಿನ ಎಲ್ಲ ವಿಜ್ಞಾನಿಗಳು ಅಹರ್ನಿಶಿ ಶ್ರಮಿಸುತ್ತಿದ್ದಾರೆ- ಪರಿತಪಿಸುತ್ತಿದ್ದಾರೆ; ಇವರ ಈ ಯತ್ನಗಳನ್ನು ಋಷಿಮುನಿಗಳ ತಪಸ್ಸಿಗೆ ಹೋಲಿಸಬಹುದು. ಇವರ ಜೊತೆಗೂಡಿ ವೈದ್ಯರು, ಆರೋಗ್ಯ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಔಷಧಿಗಳ ವಿತರಕರು ಮತ್ತು ವ್ಯಾಪಾರಸ್ಥರು ಸಮಾಜಕ್ಕೆ ತಮ್ಮ ಅಮೋಘವಾದ ಸೇವೆಯನ್ನು ಸಲ್ಲಿಸಿ ನಮ್ಮಲ್ಲಿಯ ನಿರಾಶಾಭಾವವನ್ನು ಹೋಗಲಾಡಿಸಲು ಹೋರಾಡುತ್ತಿದ್ದಾರೆ. ಇವರು ನಮ್ಮ ಆಶಾಕಿರಣಗಳು.
ಹಿರಿಯರಾದ ಸಂಪತ್ ಸುಳಿಭಾವಿ ಅವರು ಹೇಳಿದಂತೆ ಡಾ. ರಾಜೇಂದ್ರ ಭಾರುದ್, ಮಹಾರಾಷ್ಟ್ರದ ನಂದೂರಬಾರ್ ಜಿಲ್ಲಾ ಕಲೆಕ್ಟರ್ ತಮ್ಮ ದಕ್ಷ ಆಡಳಿತದಿಂದ ಸಂತ್ರಸ್ತರಿಗೆ ಸಹಾಯ ಒದಗಿಸುತ್ತಿರುವ ರೀತಿ ಬಹಳ ಅಮೋಘವಾದದ್ದು. ಬೃಹನ್ ಮುಂಬೈ ಕಾರ್ಪೋರೇಷನ್ ನ ಮುಖ್ಯಸ್ಥರಾದ ಚಾಹಲ್ ಮತ್ತು ಅವರ ನಿಷ್ಠಾವಂತ ತಂಡ ಸಕಾಲ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ತೆಗೆದುಕೊಂಡು ಕೊರೋನಾ ಸಂಕ್ರಮಣವನ್ನು ಹದ್ದುಬಸ್ತಿನಲ್ಲಿ ತಂದ ಅನನ್ಯವಾದ ಯೋಜನೆಗಳನ್ನು ನಮ್ಮ ಸರ್ವೋಚ್ಚ ನ್ಯಾಯಾಲವೂ ಅನುಕರಣೀಯ ಎಂದು ಶ್ಲಾಘಿಸಿದೆ. ಇಂಥವರಿಗೆ ನಾವು ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಮ್ಮಿಯೇ.
ಆಗಸದ ಎತ್ತರಕೆ ಜಿಗಿದು ರವಿಯನ್ನು ಆವರಿಸಿದ ಮೋಡಗಳನ್ನು ಸರಿಸಿ ಇಳೆಗೆ ಬೆಳಕಿನ ಮಳೆ ಸುರಿಸುವಂತೆ ಮಾಡುವ ಸತ್ವ ಇವರಿಗಿದೆ. ಇವರ ಕೈಗಳನ್ನು ಬಲಪಡಿಸಿ ಸಾತ್ವಿಕ ಶಕ್ತಿಗಳ ಮೇಲುಗೈ ಆಗುವಂತೆ ಮಾಡುವ ಹೊಣೆ ನಮ್ಮೆಲ್ಲರ ಮೇಲೂ ಇದೆ.
ಆಗಲೇ ಈ ಇರುಳು ಉರುಳಿ ಹಗಲು ಮರಳಲು ಸಾಧ್ಯ!
“ ವೊ ಸುಬಹ್ ಜರೂರ್ ಆಯೆಗಿ” ಎಂಬ ನಂಬಿಕೆಯೊಂದಿಗೆ
ವಂದನೆಗಳು..
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..