ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವೆ ನಮ್ಮ ಬದುಕು-೫

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

“ಮಾನವ ಜನ್ಮ ದೊಡ್ಡದು
ಇದ ಹಾನಿ ಮಾಡಲು
ಬೇಡಿ ಹುಚ್ಚಪ್ಪಗಳಿರಾ”

ಈ ಪುರಂದರದಾಸರ ವಾಣಿ ಕಿವಿಗಳಿಗೆ ಬಿದ್ದಾಗ, ಈ ಪುರಂದರ ವಾಣಿ ಎಷ್ಟು ಸತ್ವಯುತ ಹಾಗೂ ಎಷ್ಟು ಸತ್ಯ ಎಂಬ ವಿಷಯ ನೇರ ನಮ್ಮ ಹೃದಯಕ್ಕೆ ತಲಪುತ್ತದೆ. ಸಕಲ ಜೀವ ರಾಶಿಗಳ ಉತ್ತುಂಗದಲ್ಲಿ ಇರುವ ಅದ್ಭುತವಾದ ಈ ಶರೀರ ಲಭ್ಯವಾದದ್ದು ಒಂದು ಮಹಾ ವರದಾನ. ಈ ವಿಶಿಷ್ಟವಾದ ದೇಹದಿಂದ ಏನೆಲ್ಲಾ ಮಾಡಲು ಸಾಧ್ಯ!

ಪಂಚೇಂದ್ರಿಯಗಳ ಸಹಾಯದಿಂದ ಸುತ್ತಲಿನ ಪರಿಸರಕ್ಕೆ ಸ್ಪಂದಿಸಲು ಸಾಧ್ಯವಾಗಿ, ಮಾನವರಾದ ನಮಗೆ ಪ್ರಕೃತಿಯು ಬಹಳ ಸೌಲಭ್ಯಗಳನ್ನು ಒದಗಿಸಿದೆ. ನಮ್ಮ ಕಣ್ಣುಗಳು ತಮ್ಮ ದೃಷ್ಟಿಯಿಂದ ಸುಂದರ ದೃಶ್ಯಗಳನ್ನು ವೀಕ್ಷಿಸುತ್ತವೆ. ಕಿವಿಗಳು ಮಧುರವಾದ ಸಂಗೀತವನ್ನು ಆಲಿಸುತ್ತವೆ. ಜಿಹ್ವೆ ರುಚಿ ರುಚಿಯಾದ ಸ್ವಾದಗಳನ್ನು ಸವಿಯುತ್ತವೆ. ಕಾಲುಗಳಿಂದ ನಮಗೆ ಓಡಾಡಲು ಸಾಧ್ಯವಾಗಿ ಚಲನಶೀಲರಾಗುತ್ತೇವೆ. ವಾಹನಗಳ ಸೌಲಭ್ಯ ವಿರದಿದ್ದಾಗ ನಮ್ಮ ಪ್ರಯಾಣಗಳೆಲ್ಲ ಕಾಲ್ನಡಿಗೆಯಲ್ಲೇ ಅಲ್ಲವೇ!

ಇನ್ನು ಕೈಗಳಂತೂ ಮಾಡುವ ಅನೇಕ ಕಾರ್ಯಗಳ ಎಣಿಕೆ ಇಡಲು ಸಾಧ್ಯವೇ ಇಲ್ಲ ; ಇವುಗಳಲ್ಲಿ ಅಗಾಧವಾದ ಕರ್ತೃತ್ವ ಶಕ್ತಿಯಿದ್ದು ಅದರಿಂದ ನಿರ್ಮಾಣಗೊಂಡ ಅನೇಕ ಭವನಗಳು, ರಸ್ತೆಗಳು,ಸೇತುವೆಗಳು, ವೈಜ್ಞಾನಿಕ ಉಪಕರಣಗಳು ಅವುಗಳಿಗೆ ಸಂಬಂಧಿಸಿದ ವಿವಿಧ ಸಾಧನೆಗಳು, ಹೀಗೆ ಬಹುದೊಡ್ಡ ಪಟ್ಟಿ ಮುಗಿಯುವದೇ ಇಲ್ಲ.
ಇವು ಬಾಹ್ಯ ಅಂಗಗಳ ಮಾತಾಯಿತು.

ಶರೀರದ ಸಂಕೀರ್ಣ ರಚನೆಯಲ್ಲಿಯ ಒಳಗಿನ ಅವಯವಗಳಾದ ಹೃದಯ, ಮಿದುಳು, ಯಕೃತ್ತು, ಮೂತ್ರಪಿಂಡಗಳು, ಮೇದೋಜ್ಜೀರಕ ಗ್ರಂಥಿ , ಕರುಳು, ಎಲುಬುಗಳು, ಮಜ್ಜೆ ಹೀಗೆ ವೈವಿಧ್ಯಮಯವಾದ ಅವಯವಗಳು
ದೇಹದ ಬೆಳವಣಿಗೆ ಮತ್ತು ಸಮತೋಲನದ ಕಾರ್ಯಗಳನ್ನು ನಿರ್ವಹಿಸಿ ನಮ್ಮನ್ನು ಜೀವಂತವಾಗಿರಿಸುವದರಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ. ಅದಕ್ಕಾಗಿಯೇ ಅಲ್ಲವೇ ಬಸವಣ್ಣನವರು
‘ಎನ್ನ ಕಾಲೇ ಕಂಬ
ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯಾ’
ಎಂದು ಹಾಡಿದ್ದು.

ಈ ಶರೀರವೇ ನಮ್ಮ ಎಲ್ಲ ಸಾಧನೆಗಳಿಗೆ ಮಾಧ್ಯಮ. ಈ ಉಪಕರಣದಿಂದಲೇ ನಾವು ನಮ್ಮ ಸಮಾಜಕ್ಕೆ ಉಪಯೋಗವಾಗುವಂಥ ಕಾರ್ಯಗಳನ್ನು ಮಾಡಿ ಬಾಳನ್ನು ಸಾರ್ಥಕ ಮಾಡಿಕೊಳ್ಳುವದು; ಜನರ ಒಲುಮೆ ಗಳಿಸಿಕೊಳ್ಳುವದು. ನಮ್ಮ ಅಂಗಾಂಗಗಳಲ್ಲಿ, ಅವಯವಗಳಲ್ಲಿ ಯಾವುದು ಹೆಚ್ಚು ಮಹತ್ವವಾದದ್ದು , ಯಾವುದು ಅಮುಖ್ಯವೆಂದು ಹೇಳಲಾಗುವದಿಲ್ಲ.

ಈ ಅಂಗಾಂಗಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೂ ಬಾಳು ಎಷ್ಟು ದುರ್ಭರವಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಅಂತಹುದರಲ್ಲಿ ಅಪಘಾತಕ್ಕೆ ಈಡಾಗಿ ಅಂಗವಿಹೀನರಾದವರ ಪಾಡು ಹೇಳತೀರದು. ಮೊನ್ನೆ ಶುಕ್ರವಾರದ ದಿನದಂದು ‘ ಕೆಬಿಸಿ- ಕರ್ಮವೀರ ವಿಶೇಷ’ ಕಾರ್ಯಕ್ರಮವನ್ನು ನೋಡುತಿದ್ದೆ.
ಅದರಲ್ಲಿ ಶ್ರೇಯ ಎನ್ನುವ ಬಾಲಕಿ ಅಪಘಾತಕ್ಕೆ ಈಡಾಗಿ ತನ್ನ ಎರಡೂ ಕೈಗಳನ್ನು ಕಳೆದು ಕೊಂಡ ವಿಷಯವನ್ನು ಹೇಳುತ್ತಿರುವಂತೆ ಕರಳು ಕಿವುಚಿದಂತಾಯಿತು. ಡಾಕ್ಟರ್ ಸುನಿಲ್ ಶ್ರಾಫ್ ಅವರು ಸ್ಥಾಪಿಸಿದ ಮೋಹನ್ ಫೌಂಡೇಶನ್ ಅವರ ಸಹಾಯದಿಂದಾಗಿ ಶ್ರೇಯಾಳಿಗೆ ಮತ್ತೊಬ್ಬರ ( ಮಿದುಳು ಮರಣಹೊಂದಿದ ದೇಹದಿಂದ ಪಡೆದ) ಕೈಗಳನ್ನು ಕಸಿ ಮಾಡಿ ಅವಳ ಬಾಹುಗಳಿಗೆ ಜೋಡಿಸಿದ ವಿಷಯವನ್ನು ಪ್ರಸ್ತಾಪಿಸಿದಳು. ಈ ರೀತಿಯಾಗಿ ಅವಳಿಗೆ ಒದಗಿದ ಕೈಗಳ ಸಹಾಯದಿಂದ ಅವಳಿಗೆ ನೀರು ಕುಡಿಯಲು ಸಾದ್ಯವಾದಾಗ ಅವಳ ಸಂತೋಷಕ್ಕೆ ಮಿತಿಯೇ ಇರಲಿಲ್ಲವೆಂದು ಹೇಳಿಕೊಳ್ಳುತ್ತ , ಕೈಗಳಿಂದ ಚಿಕ್ಕ ಚಿಕ್ಕ ಕೆಲಸಗಳನ್ನು ಮತ್ತೊಬ್ಬರ ಸಹಾಯವಿಲ್ಲದೆ ಸಾಧ್ಯವಾದಾಗ ತನಗೆ ದೇವರ ದರ್ಶನದ ಅನುಭವವಾಯಿತು ಎಂದು ಬಿತ್ತರಿಸಿದಾಗ, ಕಾರ್ಯಕ್ರಮ ನಿರ್ವಹಿಸುತ್ತಿದ್ದ ಅಮಿತಾಭ್ ಬಚ್ಚನ್ ಹಾಗೂ ಅದರಲ್ಲಿ ಭಾಗವಹಿಸುತ್ತಿದ್ದ ಡಾಕ್ಟರ್ ಸುನಿಲ್ ಶ್ರಾಫ್ ನತ್ತ ರಿತೇಶ್ ದೇಶಮುಖ್ ಅವರ ಮನ ಆರ್ದ್ರತೆಯಿಂದ ತುಂಬಿ ಬಂದಿತ್ತು.

‘ಪರೋಪಕಾರಮ್ ಇದಮ್ ಶರೀರಮ್’ ನಮ್ಮ ಬಾರತೀಯ ಸಂಸ್ಕೃತಿಯ ಮುಖ್ಯ ಧಾರೆ. ಈ ಸದ್ವಿಚಾರ ಯುಗಗಳಿಂದಲೂ ನಮಗೆ ಪರಂಪರಾಗತವಾಗಿ ಬಂದ ದೃಷ್ಟಾಂತಗಳು ನಮ್ಮ ಪುರಾಣಗಳಲ್ಲಿವೆ.

ಪಾಂಡವರನ್ನು ಯುದ್ಧದಲ್ಲಿ ಸೋಲಿಸಿ ಅವರ ಅಶ್ವಮೇಧ ಯಾಗದ ಕುದುರೆಯನ್ನು ಬಂಧಿಸಿದ ತಾಮ್ರಧ್ವಜನ ತಂದೆ ಮಯೂರ ಧ್ಜಜನ ಜೊತೆ ಯುದ್ಧಕ್ಕೆ ಧರ್ಮರಾಜನು ಅಣಿಯಾದಾಗ, ಶ್ರೀಕೃಷ್ಣ ಪರಮಾತ್ಮನು ಧರ್ಮರಾಜನನ್ನು ತಡೆದು, ಮಯೂರಧ್ವಜನನ್ನು ಯುದ್ಧದಲ್ಲಿ ಸೋಲಿಸಲು ಸರ್ವಥಾ ಸಾಧ್ಯವಿಲ್ಲ, ಅವನನ್ನು ಉಪಾಯದಿಂದಲೇ ಗೆಲ್ಲಬೇಕು ಎಂದು ಹೇಳುತ್ತಾನೆ. ಅಂತೆಯೇ ಶ್ರೀ ಕೃಷ್ಣನು ಬ್ರಾಹ್ಮಣನ ವೇಷದಲ್ಲಿ ಮಯೂರಧ್ಜಜನ ಬಳಿಗೆ ಹೋಗಿ ತನ್ನ ಮಗನನ್ನು ಸಿಂಹ ಹಿಡಿದುಕೊಂಡಿದ್ದಾಗಿ ತಿಳಿಸಿ, ಮಗನನ್ನು ಬಿಡಬೇಕಾದರೆ ಸಿಂಹ ಇನ್ನೊಂದು ಮಾನವನ ಅರ್ಧ ಶರೀರ ಇತ್ತಾಗ ಬಿಡುವದಾಗಿ ಹೇಳಿದೆ ಎಂಬ ವೃತ್ತಾಂತ ರಾಜನಿಗೆ ತಿಳಿಸುತ್ತಾನೆ. ಅದನ್ನು ಕೇಳಿದ ಮಯೂರದ್ವಜ ರಾಜನು ತನ್ನ ಶರೀರವನ್ನೇ ಇಬ್ಭಾಗವಾಗಿ ಸೀಳಿ ಬ್ರಾಹ್ಮಣವೇಷಧಾರಿಯಾದ ಕೃಷ್ಣನಿಗೆ ಕೊಡುತ್ತಾನೆ. ರಾಜನ ಈ ತ್ಯಾಗಕ್ಕೆ ಮೆಚ್ಚಿದ ಶ್ರೀ ಕೃಷ್ಣನು ತನ್ನ ನಿಜರೂಪದ ದರ್ಶನ ರಾಜನಿಗೆ ಇತ್ತು ಮತ್ತೆ ಅರ್ಧದೇಹವನ್ನು ಹಿಂತಿರುಗಿಸಿದ ‘ ತ್ಯಾಗ ಗಾಥೆ’ ಯನ್ನು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ.

ಅದೇ ರೀತಿಯಾಗಿ, ಪಾರಿವಾಳವೊಂದನ್ನು ಹದ್ದು ಬೆಂಬತ್ತಿ ಬಂದಾಗ,ಆ ಪಾರಿವಾಳ ಶಿಬಿ ಚಕ್ರವರ್ತಿಯ ತೊಡೆಯ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಪಾರಿವಾಳಕ್ಕೆ ಅಭಯವಿತ್ತ ಶಿಬಿ ಚಕ್ರವರ್ತಿಗೆ ಹದ್ದು ಬಂದು ಆಹಾರ ಕೇಳಿದಾಗ, ಚಕ್ರವರ್ತಿ ತನ್ನ ತೊಡೆಯ ಮಾಂಸವನ್ನೇ ಅದಕ್ಕೆ ಆಹಾರವಾಗಿ ನೀಡಿ ತನ್ನ ತ್ಯಾಗವನ್ನು ಮೆರೆಯುತ್ತಾನೆ. ಇದನ್ನು ನೋಡಿ ಸಂತುಷ್ಟಿ ಹೊಂದಿ, ಹದ್ದು ರೂಪದಿಂದ ಬಂದ ಅಗ್ನಿ ಪ್ರಕಟವಾಗಿ ಶಿಬಿ ಚಕ್ರವರ್ತಿಗೆ ವರವನ್ನು ನೀಡಿದ ಕಥೆ ಎಷ್ಟು ಧನಾತ್ಮಕ!

ದುಷ್ಟರ ದಮನಕ್ಕಾಗಿ ಅಸ್ತ್ರಗಳನ್ನು ಬೇಡಿದ ದೇವತೆಗಳಿಗೆ ದಧೀಚಿ ಋಷಿಗಳು ತಮ್ಮ ಶರೀರವನ್ನು ಪರಿತ್ಯಾಗ ಮಾಡಿ ತಮ್ಮ ಎಲುಬುಗಳಿಂದ ವಜ್ರಾಯುಧ ಮಾಡಿ ಕೊಟ್ಟ ಸಂಗತಿ ಪರೋಪಕಾರದ ಪರಾಕಾಷ್ಠೆ ಅಲ್ಲವೆ.

ಅಂಗ ದಾನದ ವಿಷಯಕ್ಕೆ ಅನುಷಂಗಿಕವಾಗಿ ನಮ್ಮ ಪೂರ್ವಜರ ತ್ಯಾಗಗಳ ಕುರಿತು ಮೇಲೆ ಉಲ್ಲೇಖಿಸಿದ ಪ್ರಸಂಗಗಳಿಗೆ ಹೋಲುವ ಎಷ್ಟೋ ದೃಷ್ಟಾಂತಗಳು ನಮಗೆ ತಿಳಿದಿದ್ದರೂ ಅದು ನಮ್ಮ ಜನ ಮಾನಸದಲ್ಲಿ ಹಾಸು ಹೊಕ್ಕಾಗಿಲ್ಲ ಎಂಬ ವಿಷಯ ಮೊನ್ನೆ ನಡೆದ ‘ ಕೆಬಿಸಿ – ಕರ್ಮವೀರ ವಿಶೇಷ’ ಕಾರ್ಯಕ್ರಮದಿಂದ ತಿಳಿದು ಬಂದಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋಹನ್ ಫೌಂಡೇಶನ್ ನ ಡಾ.ಸುನಿಲ್ ಶ್ರಾಫ್ ಅವರು ಈ ಮಾಹಿತಿಯನ್ನು ಹಂಚಿಕೊಂಡರು.
ನಮ್ಮ ದೇಶದಲ್ಲಿ ಅಂಗ ದಾನ ಮಾಡುವರ ಸಂಖೈ ೦.೦೧% ಇರುವದಾಗಿ ತಿಳಿಸಿದಾಗ ಬಹಳ ಆಶ್ಚರ್ಯವಾಯಿತು. ಜಗತ್ತಿನ ಇತರ ದೇಶಗಳ ಜೊತೆ ತುಲನೆ ಮಾಡಿದಾಗ ನಮ್ಮ ದುಃಸ್ಥಿತಿಯ ಅರಿವು ಮನಸನ್ನು ಕದಡುತ್ತದೆ. ಸ್ಪೇನ್ ದೇಶ ದಲ್ಲಿ ಅಂಗ ದಾನ ಮಾಡುವರ ಪ್ರಮಾಣ ೮೦% ಇದ್ದು ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ.

ಈ ನಿಟ್ಟನಲ್ಲಿ, ನಮ್ಮ ದೇಶದ ಜನರಲ್ಲಿ ಅಂಗ ದಾನದ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆಯೆಂದು ಡಾ.ಶ್ರಾಫ್ ಅವರು ಅಭಿಪ್ರಾಯ ಪಟ್ಟರು ; ಅಷ್ಟೇ ಅಲ್ಲ ,ಅದರ ತುರ್ತು ಇರುವದಾಗಿ ತಿಳಿಸುತ್ತ ತಮ್ಮ ‘ಎನ್. ಜಿ. ಒ. ಸಂಸ್ಥೆ ‘ ಮೋಹನ್ ಫೌಂಡೇಶನ್ ‘ ಕಾರ್ಯಪ್ರವೃತ್ತವಾಗಿ ಈ ದಿಸೆಯಲ್ಲಿ ಕೈಕೊಂಡ ಪ್ರಣಾಳಿಕೆಗಳ ಬಗ್ಗೆ ಹಾಗೂ ಸಾಧನೆಗಳ ಕುರಿತು ವಿವರವಾಗಿ ಹಂಚಿಕೊಂಡರು. ೧೯೯೭ ರಲ್ಲಿ ಅವರಿಂದ ಸ್ಥಾಪಿತವಾದ ಮೋಹನ್ ಫೌಂಡೇಶನ ಇಲ್ಲಿಯ ತನಕ ೧೨೦೦೦ ಕ್ಕೂ ಹೆಚ್ಚು ಜನರಿಗೆ ಅಂಗ ದಾನಗಳನ್ನು ಒದಗಿಸಲು ಸಫಲವಾಗಿದೆ. ಇವರ ಮಹತ್ ಸಾಧನೆಗಳನ್ನು ಗುರ್ತಿಸಿದ ಭಾರತ ಸರ್ಕಾರ ಈ ಸಂಸ್ಥೆಗೆ ‘ ಬೆಸ್ಟ್ ಪರ್ಫಾರ್ಮಿಂಗ್ ಎನ್ ಜಿ ಓ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅಂಗ ದಾನ ಪವಾಡ ಸದೃಶ ಎಂದು ಹೇಳುತ್ತ, ಒಬ್ಬ ಮಿದುಳು ಮೃತ ( ಬ್ರೇನ್ ಡೆಡ್) ನ ಶರೀರದ ಸುಮಾರು ೧೫ ಅಂಗಗಳನ್ನು/ ಅವಯವಗಳನ್ನು ಅವಶ್ಯವಿದ್ದವರಿಗೆ ಕೊಟ್ಟು ಕನಿಷ್ಟ ೯ ಜನರಿಗೆ ಜೀವ ದಾನ ಮಾಡಲು ಸಾಧ್ಯವೆಂದು ಹೇಳಿ, ಈ ರೀತಿಯಾಗಿ ಮಾನವ ಶರೀರದ ರಿಸೈಕ್ಲಿಂಗ್- ಮರುಬಳಕೆ ಯಾಗುವದು ಎಂದಾಗ, ಮೃತರ ಅಂಗ ದಾನದಿಂದ ಹಲವರು ನವ ಜೀವನ ( ೯ ಜನರಿಗೆ ಜೀವ ದಾನ ಮಾಡಿ) ಪಡೆದಂತೆ ಅಲ್ಲವೇ ಎಂದು ಅನಿಸಿತು. ಮತ್ತೊಬ್ಬರ ಎದೆಯಲ್ಲಿ ನಿಮ್ಮ ಹೃದಯ ಬಡಿದುಕೊಂಡು ( ದಿಲ್ ಧಡಕೇಗಾ) ಅಂಗ ದಾನ ಮಾಡಿದವರು ಬಾಳಿನ ಸಂಭ್ರಮವನ್ನು ಆಚರಿಸುತ್ತಾರೆ ಎಂದು ಆಡಿದ ಡಾ. ಸುನಿಲ್ ಶ್ರಾಫ್ ಅವರ ಮಾತು ಅಕ್ಷರಶಃ ನಿಜ.

ಈ ಕೈಂಕರ್ಯಕ್ಕೆ ಡಾ. ಜೋಸೆಫ್ ಮಾರೆ ಅವರಿಂದ ಪ್ರಭಾವಿತರಾದ ಅವರು, ‘ ಅಂಗ ದಾನದ ಮೂಲಕ ಸಮಾಜದ ಋಣವನ್ನು ನಾವು ತೀರಿಸುತ್ತಿದ್ದೇವೆ’ ಎಂದು ಹೇಳಿದ ಅವರ ಮಾತನ್ನು ಭಾವ ಪರವಶರಾಗಿ ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ‘ ಮೋಹನ್ ಫೌಂಡೇಶನ್ ‘ ಅವರು ಕೆಲವು ವರ್ಷಗಳ ಹಿಂದೆ ಜೈಪುರ್ ನಲ್ಲಿ ಆಯೋಜಿಸಿದ ನೇತ್ರ ದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಿತಾಭ್ ಬಚ್ಚನ್ – ಜಯಾ ಬಚ್ಚನ್ ದಂಪತಿಗಳು ಮರಣೋತ್ತರ ತಮ್ಮ ನೇತ್ರಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡಿದ ವಿಷಯವನ್ನು ನೆನಪಿಸಿ ಅವರ ಈ ನಿರ್ಧಾರವನ್ನು ಕೊಂಡಾಡಿದರು. ಈ ರೀತಿಯ ಪ್ರಜ್ಞೆ ಎಲ್ಲ ಭಾರತೀಯರಲ್ಲಿ ಮೂಡಲಿ ಎಂಬ ಆಶಾಭಾವ ವ್ಯಕ್ತ ಪಡಿಸಿದರು. ಮೂತ್ರ ಪಿಂಡ ದ ರೋಗದಿಂದ ಬಳಲುವವರಿಗೆ ಕಸಿ ಮಾಡಲು ಮೂತ್ರ ಪಿಂಡಗಳ ಬೇಡಿಕೆ ಸದ್ಯ ೧.೫ ಲಕ್ಷ ಇರುವದಾಗಿ ತಿಳಿಸಿ, ಆದರೆ ೧೦ ರಿಂದ ೧೧ ಸಾವಿರ ದಾನಿಗಳೇ ತಮ್ಮ ಮೂತ್ರ ಪಿಂಡಗಳನ್ನು ದಾನ ಮಾಡಿರುವದಾಗಿ ಹೇಳಿ ಈ ದುಃಸ್ಥಿತಿ ಆದಷ್ಟು ಬೇಗ ಸುಧಾರಿಸಿದರೆ ಒಳಿತು ಎಂದು ತಮ್ಮ ಮನದ ಅಳಲನ್ನು ಹಂಚಿಕೊಂಡರು.

ಸಂತೋಷ್ ಯಾದಿ ಎನ್ನುವ ಏರ್ ಕ್ರಾಫ್ಟ್ ಇಂಜಿನಿಯರ್ ಒಬ್ಬರು ಕೆಬಿಸಿ- ಕರ್ಮವೀರ್ ವಿಶೇಷ ದಲ್ಲಿ ಪಾಲ್ಗೊಳ್ಳುತ್ತ, ೨೦೦೬ ರಲ್ಲಿ ತಮ್ಮ ಮೂತ್ರ ಪಿಂಡ ಕೆಲಸ ಮಾಡದಿರಲು, ಅವರ ತಾಯಿಯವರೇ ಮೂತ್ರ ಪಿಂಡ ದಾನ ಮಾಡಿ ಅವರನ್ನು ಉಳಿಸಿದ ವಿಷಯವನ್ನು ಮನ ಬಿಚ್ಚಿ ಹೇಳಿಕೊಳ್ಳುವಾಗ ಅವರ ಕಣ್ಣಂಚಿನಲ್ಲಿ ಕಂಬನಿ ಒಸರಿತ್ತು. ತಾಯಿಯಿಂದ ಪಡೆದ ಮೂತ್ರ ಪಿಂಡ ಮತ್ತೆ ೨೦೧೬ ರಿಂದ ಕಾರ್ಯ ನಿರ್ವಹಿಸಲು ವಿಫಲವಾಗಿ, ೨೦೧೮ ರಿಂದ ಡೈಯಾಲಿಸಿಸ್ ಆಧಾರದ ಮೇಲೆ ಇರುವದಾಗಿ ಹೇಳಿಕೊಂಡರು.’ ಮೂತ್ರ ಪಿಂಡಕ್ಕೆ ಅರ್ಜಿ ಸಲ್ಲಿಸಿ ದಾನಿಗಳಿಗಾಗಿ ಕಾಯುತ್ತಿರುವೆ, ದೊರಕಿದರೆ ಇನ್ನೂ ೧೫ ವರ್ಷ ಗಳ ವರೆಗೆ ಬಾಳ ಬಹುದು, ಇರದಿರೆ..’ ಎಂದು ಮನದ ಅಳಲು ಗಂಟಲಕ್ಕೆ ಬಂದಾಗ, ಅದು ಅಲ್ಲಿಯೇ ಸಿಕ್ಕು ಗದ್ಗದಿತರಾದರು.

ಈ ವೃತ್ತಾಂತವನ್ನು ಕೇಳಿ, ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಗವಹಿಸುತ್ತಿದ್ದ ಪ್ರಖ್ಯಾತ ನಟ ರಿತೇಶ್ ದೇಶಮುಖ್ ಅವರು ಅತಿ ಭಾವುಕರಾಗಿ ಕಣ್ಣೀರಿನ ಕೋಡಿಯನ್ನು ಹರಿಸಿದರು. ಅವರನ್ನು ಅಮಿತಾಭ್ ಬಚ್ಚನ್ ಹಾಗೂ ಇತರರು ಬಹಳ ಸಂತೈಸಿದ ಮೇಲೆ ಸ್ವಲ್ಪ ಸುಧಾರಿಸಿಕೊಂಡ ಮೇಲೆ ತಮ್ಮ ಅನುಭವವನ್ನು ಹೇಳಿಕೊಂಡರು.

ರಿತೇಶ್ ಅವರ ತಂದೆ ವಿಲಾಸ್ ರಾವ್ ದೇಶಮುಖ್ ( ಮಹಾರಾಷ್ಟ್ರದ ಪೂರ್ವ ಮುಖ್ಯಮಂತ್ರಿ) ಮರಣ ಶಯ್ಯೆ ಮೇಲೆ ಇದ್ದಾಗ ‘ ಯಕೃತ್ತ’ ದ ದಾನಿಗಳು ದೊರೆಯದೇ ಹೆಗೆ ಸಾವನ್ನು ಅಪ್ಪಿದರು ಎಂದು ಹೇಳುವಾಗ ಮತ್ತೆ ಧಾರಾಕಾರವಾಗಿ ಅವರ ಕಣ್ಣುಗಳಿಂದ ನೀರು ಹರಿದವು. ಅವರು ತಮ್ಮ ತಂದೆಗೆ ತಮ್ಮ ಯಕೃತ್ತನ್ನು ನೀಡಲು ಸಿದ್ಧರಾಗಿದ್ದರು, ಆದಾಗ್ಯೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ನೊಂದು ನುಡಿದರು. ಅಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಲು ಸಾಧ್ಯ ಎಂದು ಮನಗಂಡ ಅವರು, ಅವರು ಹಾಗೂ ಅವರ ಪತ್ನಿ ಜೆನೇಲಿಯಾ ಮರಣೋತ್ತರ ಶವ ದಾನದ ನಿರ್ಧಾರವನ್ನು ಕೈಕೊಂಡು ಆ ರೀತಿ ಪ್ಲೆಡ್ಜ್ ತೆಗೆದು ಕೊಂಡ ವಿಷಯವನ್ನು ಹಂಚಿಕೊಂಡರು.

ಈ ಮಾತನ್ನು ಹೇಳುವಾಗ ಡಾ. ಮಹಾಂತೇಶ್ ರಾಮಣ್ಣನವರ್ ಅವರು ತಮ್ಮ ತಂದೆ ಡಾ. ಬಸವಣ್ಣೆಪ್ಪಾ ರಾಮಣ್ಣನವರ್ ಅವರ ಮರಣಾನಂತರ, ರಾಸಾಯಿನಿಕಗಳಿಂದ ಸಂರಕ್ಷಿತವಾದ ದೇಹವನ್ನು ೨೦೦೮ ರಲ್ಲಿ , ಗಣ್ಯರ, ಮಾಧ್ಯಮದವರ ಮತ್ತು ವಿದ್ಯಾರ್ಥಿ ಗಳ ಸಮಕ್ಷಮದಲ್ಲಿ ಪರಿಚ್ಛೇದಿಸಿದ್ದು ( ಡಿಸೆಕ್ಟ್) ಇಲ್ಲಿ ಉಲ್ಲೇಖನೀಯವಾದದ್ದು. ಈ ಐತಿಹಾಸಿಕ ಘಟನೆ ನಡೆದದ್ದು ಕೆ ಎಲ್ ಇ ವಿಶ್ವ ವಿದ್ಯಾಲಯದ ಬಿ ಎಮ್ ಕೆ ಆಯುರ್ವೇದದ ವೈದ್ಯಕೀಯ ಕಾಲೇಜಿನ ಪ್ರಾಂಗಣದಲ್ಲಿ. ಈ ಘಟನೆಯನ್ನು ಎಲ್ಲ ಟಿವಿ ವಾಹಿನಿಗಳು ‘ಲೈವ್’ ಪ್ರಸಾರ ಮಾಡಿದವು. ಇದನ್ನು ಯಾವ ದಾಖಲೆಗಾಗಿ ಮಾಡಿದ್ದಲ್ಲ, ಅಂಗ ರಚನಾ ಶಾಸ್ತ್ರದ ಅಧ್ಯಯನಕ್ಕೆ ಸಹಾಯವಾಗಲು ತಮ್ಮ ತಂದೆಯವರ ಇಚ್ಛೆಯಂತೆ ದೇಹದಾನ ಮಾಡಿದ್ದು ಎಂದು ಡಾ. ಮಹಾಂತೇಶ್ ರಾಮಣ್ಣನವರ್ ಅವರು ವಿವರಣೆ ನೀಡಿದರು. ಇದು ಉಳಿದವರಿಗೆ ಪ್ರೇರಣೆಯಾಗಲೆಂದು ಮಾಡಿರುವದಾಗಿ ತಮ್ಮ ಮನದ ಇಂಗಿತವನ್ನು ಸ್ಪಷ್ಟ ಪಡಿಸಿದ ವಿಷಯ ಜಗಜ್ಜಾಹೀರಾಯಿತು.

ಮಹಾಂತೇಶ್ ಅವರ ತಂದೆಯವರಾದ ಡಾ. ಬಸವಣ್ಣೆಪ್ಪಾ ಅವರು ನಿಧನರಾದಾಗ ಅವರಿಗೆ ೮೮ ವರ್ಷ ವಯಸ್ಸು. ಅವರು ತಮ್ಮ ಜೀವ ಮಾನದಲ್ಲಿ ಸುಮಾರು ೧೧೩ ಉಚಿತ ದಂತ ಚಿಕಿತ್ಸಾ ಶಬಿರಗಳನ್ನು ಏರ್ಪಡಿಸಿ ಬಹಳಷ್ಟು ಬಡ ಜನರಿಗೆ ನೆರವು ನೀಡುದ್ದರು. ಅವರ ಸಮಾಜಮುಖಿಯಾದ ಸೇವೆಗಳನ್ನು ಗುರ್ತಿಸಿ ಕರ್ನಾಟಕ ಸರ್ಕಾರ ಅವರಿಗೆ ಧನ್ವಂತರಿ ಸುವರ್ಣ ಪದಕದಿಂದ ಸನ್ಮಾನ ಮಾಡಿತ್ತು. ಮೃತ ವಾದ ಮೇಲೂ ಮತ್ತೊಬ್ಬರ ಒಳಿತಿಗಾಗಿ ತಮ್ಮ ಶರೀರದ ಉಪಯೋಗವಾಗಬೇಕು ಎನ್ನುವ ಆಶಯ ಹೊತ್ತ ಇಂತಹ ಮಹನೀಯರಿಗೆ ಎಷ್ಟು ವಂದನೆಗಳನ್ನು ಸಲ್ಲಿಸಿದರೂ ಕಡಿಮೆಯೇ.

ಇದೇ ಆಶಯವನ್ನು ಹೊತ್ತ ಮೋಹನ್ ಫೌಂಡೇಶನ್ ಅವರಿಗೆ ಸಾಮಾಜಿಕ ಸಂಶೋಧನೆಗಾಗಿ ಹಾಗೂ ತೀವ್ರ ನಿಗಾ/ ಚಿಕಿತ್ಸೆ ಘಟಕಗಳನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ೧೦೦೦೦ ಚದರು ಅಡಿಗಳ ಸ್ಥಳವನ್ನು ಅನುದಾನವಾಗಿ ನೀಡಿದ್ದಾರೆ. ಇಲ್ಲಿ ನಿರ್ಮಾಣವಾಗುವ ಭವನಕ್ಕೆ ಡಾ. ಸುನಿಲ್ ಶ್ರಾಫ್ ಅವರು ‘ ಗಿಫ್ಟ್ ಆಫ್ ಲೈಫ್ ‘ ಎಂದು ನಾಮಕರಣ ಮಾಡುವದಾಗಿ ಕೆಬಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.

ಅಂಕಿತ ಭಾವದಿಂದ ಮಾಡುತ್ತಿರುವ ಈ ಕಾರ್ಯಗಳ ಹಿಂದೆ ಡಾ. ಶ್ರಾಫ್ ಅವರ ಮತ್ತೊಬ್ಬರ ಬಾಳನ್ನು ಹಸನು ಮಾಡುವ ಅದಮ್ಯವಾದ ಒಲುಮೆಯ ದರ್ಶನವಾಗುತ್ತದೆ. ಅಳಿದರೂ ಉಳಿಯ ಬಲ್ಲೆವು ಎಂಬ ಮಾತನ್ನು ಅವರು ಸಾರಿ ಸಾರಿ ಹೇಳುತ್ತಾರೆ.
ಅಂಗದಾನ ಹಾಗೂ ನೇತ್ರದಾನಗಳ ಕುರಿತು ಬರೆಯುವಾಗ ನನ್ನ ಸ್ಮರಣೆಗೆ ಬಂದ ಇನ್ನೊಂದು ವಿಷಯ: ಸುಮಾರು ವರ್ಷಗಳ ಹಿಂದೆ ಅವರ ತಂದೆಯವರು ನಿಧನರಾದಾಗ ನನ್ನ ಮಿತ್ರ ಅರವಿಂದ್ ಸಂಗಮ್ ಮತ್ತು ಅವರ ಕುಟುಂಬದ ಸದಸ್ಯರೆಲ್ಲರೂ ಅವರ ತಂದೆಯವರ ಇಚ್ಛೆಯಂತೆ ಅವರ ನೇತ್ರಗಳನ್ನು ದಾನ ಮಾಡಿ, ದುಃಖದ ಗಳಿಗೆಯಲ್ಲೂ ಮಾನವತೆಯ ಪ್ರತಿ ತಮಗಿರುವ ಒಲವನ್ನು ಮರೆಯಲಿಲ್ಲ ಎಂಬುದನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಹೃದಯ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಮೂತ್ರ ಪಿಂಡಗಳು, ಕರಗಳು , ಮೊಗ ಹೀಗೆ ಹಲವಾರು ಅಂಗಗಳನ್ನು ದಾನ ಮಾಡಿ , ನಾವು ಮತ್ತೊಬ್ಬರ ಬಾಳಿನಲ್ಲಿ ಬಾಳ ಬಹುದು. ಅವರಲ್ಲಿದ್ದ ಕಂಗಳಿಂದ ಜಗದ ಅಂದವನ್ನು ವೀಕ್ಷಿಸಬಹುದು.

ಎಲ್ಲಕ್ಕಿಂತ ಹೆಚ್ಚಾಗಿ ಅವರ’ ಮೊಗವಾಗಿ’ ಒಲುಮೆಯ ನಗೆಯನ್ನು ಜಗಕೆಲ್ಲಾ ಬೀರಬಹುದು.

ಅಮಾನ್ ಎನ್ನುವ ಒಂದು ಕೂಸು ತನ್ನ ಎರಡೂ ವರೆ ವರ್ಷಗಳ ವಯಸ್ಸಿನಲ್ಲೇ ಅಸು ನೀಗಿದ ವಿಷಯವನ್ನು ನೆನಪಿಸಿಕೊಂಡು ಆ ಮಗುವಿನ ತಾಯಿ ಕಾರ್ಯಕ್ರಮದ ಸಮಯದಲ್ಲಿ ವರ್ಚುವಲ್ ಆಗಿ ಜೋಡಣೆಗೊಂಡು ಹೇಳುತ್ತಿದ್ದಂತೆ ಅವಳ ಕಣ್ಣಾಲಿಗಳು ಒದ್ದೆ ಆದವು. ಆದರೂ ಮುಂದುವರಿದು, ತನ್ನ ಮಗುವಿನ ಅಂಗಗಳನ್ನು ದಾನ ಮಾಡಿದ ವಿಷಯವನ್ನು ತಿಳಿಸುತ್ತಾ, ತನ್ನ ಮಗುವಿನ ಅಂಗಗಳು ಮತ್ತೊಬ್ಬರಲ್ಲಿ ಇದ್ದು, ಮಗು ಇನ್ನೂ ಜೀವಂತವಾಗಿದೆ ಎಂದು ಭಾಸವಾಗುತ್ತದೆ ಎಂದು ಹೃದಯ ವಿದ್ರಾವಕ ಮಾತನ್ನು ಹೇಳಿದಾಗ ಕೇಳಿದವರ ಮನಗಳಲ್ಲಿ ಅನುಕಂಪದ ಅಲೆಗಳು ಎದ್ದು ಹೊಯ್ದಾಡಿದ ಅನುಭೂತಿ ಆಗಿರಲೇ ಬೇಕು.
ತಬ್ಬಿಕೊಳ್ಳಲು ತನ್ನ ಎದುರಿಗೆ ಮಗುವಿಲ್ಲ ಆದರೆ ಅದು ಎಲ್ಲಿಯೋ ಬಾಳುತ್ತಿದೆ ಎಂಬ ಉದಾತ್ತ ವಿಚಾರದಿಂದ ತನಗೆ ತಾನು ಸಾಂತ್ವನ- ಸಮಾಧಾನ ಹೇಳಿಕೊಂಡ ಆ ಮಹಾಮಾತೆಗೆ ಶತ್ ಶತ್ ಪ್ರಣಾಮಗಳು.

“ಅಳಿದರೇನಾಯಿತು ಹೆಸರು,
ಸೇರಿ ನಿಮ್ಮ ಉಸಿರಲಿ
ಕೊನರುವೆ ಹಸಿರಾಗಿ’

ವಂದನೆಗಳು.