- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
“ಮಮತೆಯ ಹಣತೆ ಸಮತೆಯ ಬೆಳಕನ್ನು ಹರಡಲಿ”
ಸ್ನೇಹಿತರಾದ ಜಯಂತ್ ಕಾಯ್ಕಿಣಿ ಅವರು ನಾನು ಕಳುಹಿಸಿದ ದೀಪಾವಳಿ ಶುಭಾಶಯಗಳಿಗೆ ಸ್ಪಂದಿಸುತ್ತಾ, ತಾವು ಸಂಪಾದಿಸುತ್ತಿದ್ದ ‘ ಭಾವನಾ’ ಪತ್ರಿಕೆ ಯ ನವೆಂಬರ್ ,೨೦೦೦ ದ ದೀಪಾವಳಿ ಸಂಚಿಕೆಯ ಮುಖಪುಟವನ್ನು ವಾಟ್ಸ್ ಆಪ್ ಮೂಲಕ ಕಳುಹಿಸಿ ಅದರ ಜೊತೆ ಉದಾತ್ತ ವಿಚಾರವನ್ನು ಬಿಂಬಿಸುವ ಮೇಲಿನ ತಮ್ಮ ಸಾಲನ್ನು ಸೇರಿಸಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ವ್ಯಕ್ತ ಪಡಿಸಿದಾಗ, ಅವರ ಅನನ್ಯವಾದ ರೀತಿಗೆ ನಾನು ಬೆರಗಾದೆ. ಇಂದಿನ ದೀಪಾವಳಿ ಸಂದರ್ಭಕ್ಕೆ ಅನ್ವಯವಾಗುವ ವರ ಕವಿ ಬೇಂದ್ರೆ ಅವರ ಸಂದೇಶವನ್ನು ಹೊತ್ತ ೨೦ ವರ್ಷಗಳ ಹಿಂದಿನ ಸಂಚಿಕೆಯನ್ನು ಹೆಕ್ಕಿ ತೆಗೆದು, ಅದಕ್ಕೆ ಸರಿದೂಗುವ ಸಾಲುಗಳನ್ನು ಸೇರಿಸಿ ಕಳುಹಿಸಿದ ಜಯಂತ್ ಅವರ ವಾಟ್ಸ್ ಆಪ್ ಸಂದೇಶ ನನಗೆ ಚಿಂತನೆ ಮಾಡಲು ಪ್ರಚೋದಿಸಿತು. ಸುತ್ತಲೂ ನಡೆಯುತ್ತಿರುವ ಹಬ್ಬದ ಅಬ್ಬರದ ನಡುವೆ ಹಿತವಾದ ಭಾವನೆ ಮೂಡಿಸಿತು.
‘ ಹೋಲಿಯರ್ ದ್ಯಾನ್ ದೌ – ನಿನಗಿಂತ ನಾನು ಹೆಚ್ಚು ಪವಿತ್ರ ‘ ಎಂಬ ಮಡಿವಂತಿಕೆಯಿಂದ ಈ ಮಾತನ್ನು ನಾನು ಹೇಳುತ್ತಿಲ್ಲ. ದೀಪಾವಳಿ ಪರ್ವದ ದಿನದಂದು ನಾವೆಲ್ಲರೂ ಸಂಭ್ರಮದಿಂದ ಮನೆಗಳ ಎದುರಿಗೆ ಹಣತೆಗಳಲ್ಲಿ ದೀಪಗಳನ್ನು ಬೆಳಗಿ, ಅಮಾವಾಸ್ಯದ ಕತ್ತಲನ್ನು ಹೋಗಲಾಡಿಸುವ ಈ ಸುಂದರವಾದ ಪ್ರಕ್ರಿಯೆ ಸಾಂಕೇತಿಕವಾಗಿದ್ದು, ಬೇಂದ್ರೆ ಅಜ್ಜನವರು ಹೇಳಿದಂತೆ ಅಂತರಂಗವನ್ನು ಶೋಧಿಸಿ ಆತ್ಮಾವಲೋಕನೆಯನ್ನು ಮಾಡಿಕೊಳ್ಳಲು ಪ್ರೆರೇಪಣೆ ನೀಡುತ್ತದೆ.
ಆಗಲೇ ಮೌನಕ್ಕೆ ಮಾತು ಬರುತ್ತದೆ. ಆಗ ಕವಿ ಬೇಂದ್ರೆ ಅವರ ‘ ದೀಪದ ಮಲ್ಲಿ’ ( ಅವಳು ಮಾತಿನ ಮಲ್ಲಿ ಅಲ್ಲ ; ಅವಳು ದೀಪದ ಮಲ್ಲಿ, ಬೆಳಕೇ ಅವಳ ನುಡಿ) ಅಂದಂತೆ , ಸ್ನೇಹ , ಪ್ರಣತಿ, ವರ್ತಿಕಾ, ದೀಪ ಶಿಖೆಗಳ ದರ್ಶನವಾಗಿ ಅಂತರಂಗದಲ್ಲಿ ಬೆಳಕು ಸ್ಫುರಿಸುತ್ತದೆ. ಈ ಮಾತಿನ ಮರ್ಮವನ್ನು ಅರಿತು ಆಚರಿಸಿದ ದೀಪಾವಳಿ ಹಬ್ಬಕ್ಕೆ ಒಂದು ಹೊಸ ಅರ್ಥ ದೊರೆತು, ಸಾರ್ಥಕತೆಯನ್ನು ಪಡೆಯುತ್ತದೆ. ಮಿತ್ರ ಜಯಂತ್ ಅವರು ವ್ಯಕ್ತ ಪಡಿಸಿದ ಆಶಯದಂತೆ, ಮಮತೆಯ ಹಣತೆಯಿಂದ ಸಮತೆಯ ಬೆಳಕು ಪಸರಿಸುತ್ತದೆ.
ಆರ್ಥಿಕ ತಾರತಮ್ಯಗಳು ಸಮಾಜದಲ್ಲಿ ಅಡಕವಾಗಿವೆ. ಇದನ್ನು ದಿಢೀರ್ ಆಗಿ ತೊಡೆದು ಹಾಕುವದರ ಕುರಿತು ಹೇಳಿದ್ದಲ್ಲ ಈ ಮಾತು. ಭಾವನಾತ್ಮಕವಾಗಿ ನಾವು ಎಲ್ಲರೂ ಎಲ್ಲರ ಬಗ್ಗೆ ಸಮತಾ ಭಾವ ಹೊಂದಿರಬೇಕು ಎಂಬುದೇ ಈ ಸಂದೇಶದ ಸತ್ವ ಮತ್ತು ಒಳತತ್ವ. ಎಲ್ಲರೂ ನಮ್ಮಂತೆ ಎಂದು ಬಗೆದು ಎಲ್ಲರ ಬಗ್ಗೆ ಪ್ರೇಮ ಭಾವದಿಂದ ವ್ಯವಹರಿಸಿದಾಗಲೇ ಈ ಸಮತೆಯನ್ನು ನಾವು ಸಾಧಿಸಲು ಸಾಧ್ಯ.
ನಮ್ಮ ಹಬ್ಬದ ಆಚರಣೆಯಿಂದ ಮತ್ತೊಬ್ಬರಿಗೆ ತೊಂದರೆ ಆಗದಂತೆ, ಅಟ್ಟಹಾಸದ, ಆಡಂಬರಗಳ, ತೋರಿಕೆಯ ಸ್ತರವನ್ನು ತಗ್ಗಿಸಿ ಎಲ್ಲರಿಗೆ ಮುದ ನೀಡುವಂತೆ ಸಂಭ್ರಮಿಸಬೇಕು. ಇಂದಿನ ದೀಪಾವಳಿ ಸಂದರ್ಭದಕ್ಕೆ ಅನ್ವಯಿಸಿ ಹೇಳಬೇಕೆಂದರೆ, ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಸಲದ ದೀಪಾವಳಿ, ಸದ್ದು ಗದ್ದಲಗಳ ಹಬ್ಬವಾಗದೆ, ನಿಜಕ್ಕೂ ಬೆಳಕಿನ ಭವ್ಯತೆಯನ್ನು ಬೆಳಗುವ ಸದವಕಾಶವಾಗುವದು ಎಂದು ಭಾವಿಸಿದ್ದು ಹುಸಿಯಾಯಿತು.
ದೇಶದಾದ್ಯಂತ ಎಷ್ಟೋ ಶಹರುಗಳಲ್ಲಿ ಉಸಿರಾಡುವ ಗಾಳಿ ಶುದ್ಧವಾಗಿರದೆ, ಗಾಳಿಯ ಗುಣಮಟ್ಟದ ಸೂಚ್ಯಂಕ ಪ್ರದೂಷಣ ಅಪಾಯ ಮಟ್ಟದಲ್ಲಿ ಇದ್ದುದಾಗಿ ಸೂಚಿಸಿ, ಅದನ್ನು ತಡೆಗಟ್ಟಲು ನ್ಯಾಯಾಲಯಗಳು ಪಟಾಕಿಗಳನ್ನು ನಿಷೇಧಿಸಿದರೂ, ಹಗಲೆನ್ನದೆ ರಾತ್ರಿಯೆನ್ನದೆ ಬಾಣಗಳನ್ನು ಬಿಡುವದಷ್ಟೇ ಅಲ್ಲ, ಕಿವಿಗಳ ಪರದೆ ಹರಿದು ಹೋಗುವಂಥ ಅತಿಯಾದ ಹಾಗೂ ಪ್ರಮಾದಕರವಾದ ‘ ಹೈ ಡೆಸಿಬಲ್’ ಪಟಾಕಿಗಳನ್ನು- ಸಿಡಿಮದ್ದುಗಳನ್ನು ಹಾರಿಸಿದ್ದನ್ನು ನೋಡಿದಾಗ ಮನಸಿಗೆ ಬಹಳ ಖೇದವೆನಿಸುತ್ತದೆ.
ಹಾಗೆ ನೋಡಿದರೆ, ನ್ಯಾಯಾಲಯಗಳು ಆದೇಶಿಸುವ ಮುನ್ನವೇ ನಮ್ಮಲ್ಲಿ ಈ ಸಂಯಮ ಧೃಡ ನಿಶ್ಚಯದ ರೂಪು ತಾಳಿ ಹಬ್ಬದ ಆಚರಣೆಯಲ್ಲಿ ಆಡಂಬರ ಅಟ್ಟಹಾಸಗಳ ಅಂಶಗಳು ಪೂರ್ತಿಯಾಗಿ ಅಳಿಯದಿದ್ದರೂ, ಅದರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬೇಕಾಗಿತ್ತು. ಹಾಗಾಗದೇ ಇರುವದು ನಮ್ಮ ದುರದೃಷ್ಟ.
ಉಸಿರಾಟದ ತೊಂದರೆಗಳಿಂದ ಕೊರೋನಾ ಉಲ್ಬಣಗೊಳ್ಳುವ ಚೇತಾವನಿಗಳನ್ನೂ ಲೆಕ್ಕಿಸದೆ, ನಮ್ಮ ರಾಜಧಾನಿಯಾದ ದಿಲ್ಲಿಯಲ್ಲಿ ನಡೆದ ಘಟನೆಗಳು ಇನ್ನೂ ಅಸ್ವಸ್ಥಗೊಳಿಸುತ್ತವೆ. ದಿನೇ ದಿನೇ ಅಲ್ಲಿ ಬೆಳೆಯುತ್ತಿರುವ ರೋಗದ ಮಧ್ಯದಲ್ಲಿ ಅದ್ದೂರಿಯಾದ ಹಬ್ಬದವನ್ನು ಆಚರಿಸುವದು ನನಗೆ ವಿಕೃತವಾಗಿ ಕಂಡಿತು. ‘ ನಿಮ್ಮ ಬಾಲ್ಯದ ದಿನಗಳಲ್ಲಿ ಪಟಾಕಿಗಳನ್ನು-ಹೂಬಾಣಗಳನ್ನು ಬಿಟ್ಟು ದೀಪಾವಳಿಯನ್ನು ಆನಂದಿಸಲಿಲ್ಲವೇ? ‘ ಎಂಬ ಆಕ್ಷೇಪಣೆ ಕೆಲವರು ಮಾಡಬಹುದು. ಆದರೆ, ನಾನು ಈ ಮೊದಲೇ ಒಂದು ಅಂಕಣದಲ್ಲಿ ಉಲ್ಲೇಖಿಸಿದಂತೆ, ಆಗಿನ ನಮ್ಮ ಜೀವನ ಶೈಲಿ ಪರಿಸರಕ್ಕೆ ಮಾರಕವಾಗಿರಲಿಲ್ಲ ಎಂಬುದನ್ನು ಪುನರಾವರ್ತಿಸುವ ಬೆಲೆ ತೆತ್ತಾದರೂ ( ಕಾಸ್ಟ್ ಆಫ್ ರಿಪಿಟೇಶನ್) ಮತ್ತೊಮ್ಮೆ ಅದನ್ನು ನಿಮ್ಮ ಮುಂದೆ ಇಡುತ್ತಿರುವೆ.
ಹೇಗೆ ಪ್ಲಾಸ್ಟಿಕ್ ಬಳಕೆ ಕಮ್ಮಿಯಾಗಿದ್ದು, ಹಾಲು ಬಾಟಲುಗಳಲ್ಲಿ ಬರುತ್ತಿದ್ದು, ಮತ್ತೆ ಅಡಿಗೆ ಎಣ್ಣೆ ಖರೀದಿಸಲು ಉಪಯೋಗಿಸುತ್ತಿದ್ದ ಕ್ಯಾನ್ಗಳ ಕುರಿತು ಪ್ರಸ್ತಾಪ ಮಾಡಿದ್ದೆ. ಇನ್ನು ಪಟಾಕಿಗಳ ಸಂದರ್ಭದಲ್ಲಿ ಹೇಳಬೇಕಾದರೆ, ನಾವು ಹಾರಿಸುತ್ತಿದ್ದ ಕೆಲವು ಪಟಾಕಿಗಳನ್ನು ನೆಲಕ್ಕೆ ಅಪ್ಪಳಿಸುತ್ತಿದ್ದ, ತುದಿಯಲ್ಲಿ ಮದ್ದಿನಿಂದ ಕೂಡಿದ ಕಡ್ಡಿಗಳಾಗಿದ್ದವು, ಅಥವಾ ಕೆಲವೊಂದು ಪಟಾಕಿಗಳನ್ನು ನೆಲಕ್ಕೆ ತಿಕ್ಕಿದಾಗ( ತಿಗಣೆಗಳನ್ನು ಒರೆದಂತೆ), ಅವು ಮಾಡುವ ಶಬ್ದ ಕ್ಷೀಣವಾಗಿದ್ದು, ಪಕ್ಕದ ಮನೆಯವರಿಗೂ ಕೇಳಿಸುತ್ತಿರಲಿಲ್ಲ.
ಇನ್ನು ಸುರ್ ಸುರ್ ಬತ್ತಿ ( ಹೂ ಬಾಣಗಳು), ಭೂಚಕ್ರ – ವಿಷ್ಣು ಚಕ್ರಗಳಲ್ಲಿ ಅಮಿತವಾದ ಆನಂದವನ್ನು ಅನುಭವಿಸುತ್ತದ್ದೆವು. ಅವುಗಳನ್ನು ಸಹ ನಮ್ಮ ಹಿರಿಯರು ಮಕ್ಕಳಲ್ಲಿ ಮಿತವಾಗಿ ಹಂಚಿ, ನಿಗದಿತ ಸಮಯದಲ್ಲಷ್ಟೇ ಪಟಾಕಿಗಳನ್ನು ಹಾರಿಸಬೇಕೆಂದು ತಾಕೀತು ಮಾಡುತ್ತಿದ್ದರು. ಇದರಿಂದ ಹೊತ್ತಿಲ್ಲದ ಹೊತ್ತಿನಲ್ಲಿ –ಅಪರಾತ್ರಿಗಳಲ್ಲಿ ಇವುಗಳ ಹಾವಳಿ ಇರದೆ, ಹಿರಿಯರು, ವೃದ್ಧರು, ಚಿಕ್ಕ ಮಕ್ಕಳು, ಜಡ್ಡು ಜಾಪತ್ರೆಗಳಿಂದ ಬಳಲುವವರು ರಾತ್ರಿ ಇಡೀ ಬೆಚ್ಚಿ ಬೀಳುವಂತಾಗಿ ನಿದ್ದೆಗೆಡದೆ ನೆಮ್ಮದಿಯಿಂದ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಈಗ, ಪಟಾಕಿಗಳನ್ನು-ಸಿಡಿಮದ್ದುಗಳನ್ನು , ‘ ನಾ ಹೆಚ್ಚು- ನೀ ಹೆಚ್ಚು’ ಎಂಬ ಸ್ಪರ್ಧಾತ್ಮಕ ಪೈಪೋಟಿಯಿಂದ ಹಾರಿಸುತ್ತಿರುವ ವಿದ್ಯಮಾನವನ್ನು ನೋಡಿದಾಗ, ನಮ್ಮ ಸಂವೇದನೆ ಯಾಕೆ ಇಷ್ಟು ದಡ್ಡು ಬಿದ್ದಿದೆ ಎಂಬ ವಿಚಾರ ಮನದಲ್ಲಿ ಮೂಡದೆ ಇರದು.
ಸುತ್ತ ಮುತ್ತಲೂ ಇರುವ ಆಸ್ಪತ್ರೆಗಳ ಕುರಿತಾಗಿಯೂ ಇವರಿಗೆ ಎಳ್ಳಷ್ಟೂ ಕಾಳಜಿ ಇರಲಾರದ್ದು ಬೇಸರ ತರಿಸುವಂಥ ಸಂಗತಿ. ಪಟಾಕಿಗಳನ್ನು ಬರೀ ದೀಪಾವಳಿಯ ಸಮಯದಲ್ಲಿ ಹಾರಿಸುವ ವಾಡಿಕೆಯಿತ್ತು. ಈಗ ಹಾಗಲ್ಲ; ಕುದುರೆ ಸವಾರ ಗಂಡ್- ಗಬರೂ ಮದುಮಗನ ಮೆರವಣಿಗೆಗಳಲ್ಲೂ ಪಟಾಕಿ- ಸಿಡಿಮದ್ದುಗಳನ್ನು ಹಾರಿಸಿ, ಅದರ ಮುಂದೆ ತಾಸುಗಟ್ಟಲೆ ಕುಣಿದು, ರಸ್ತೆಗಳ ಮೇಲಿನ ವಾಹನ ಸಂಚಾರಕ್ಕೂ ಸಂಚಕಾರ ತರುವದನ್ನು ನಾವು ಎಷ್ಟು ಸಲ ನೋಡಿಲ್ಲ. ಇದರಿಂದಾಗಿ, ಆಂಬ್ಯುಲೆನ್ಸುಗಳಲ್ಲಿ ತುರ್ತಾಗಿ ಸಾಗಿಸಬೇಕಾದ ಎಷ್ಟೋ ರೋಗಿಗಳು ಸಿಕ್ಕಿ ಹಾಕಿಕೊಂಡಿದ್ದನ್ನು ಬಹಳಷ್ಟು ಸಲ ನಾವು ಕಣ್ಣಾರೆ ಕಂಡಿದ್ದೇವೆ.
ಮೊನ್ನೆ ನಾನು ಬಾಲ್ಕನಿಯಲ್ಲಿ ಕುಳಿತುಕೊಂಡು ಚಹಾ ಆಸ್ವಾದಿಸುತ್ತಿರುವಾಗ , ಪಟಾಕಿಗಳ ಶಬ್ದಕ್ಕೆ ಬೆದರಿ, ಹೌಹಾರಿ ಬೆಚ್ಚಿ ಬಿದ್ದು ಆವರಣದಲ್ಲಿರುವ ಪಾರಿವಾಳಗಳು ಅತ್ತಿಂದಿತ್ತ ಹಾರುವದನ್ನು ನೋಡಿದಾಗ ಬಹಳ ಖೇದವಾಯಿತು. ಪ್ರತಿ ಸಲ ಪಟಾಕಿಗಳ ಸದ್ದು ಆದಾಗ, ಗಲಿಬಿಲಿಗೊಳ್ಳುತ್ತಿದ್ದ ಹಕ್ಕಿಗಳನ್ನು ನೋಡಿ, ‘ಈ’ ಧರಣಿ’ ಬರೀ ಸ್ವಾರ್ಥ ಮಾನವರ ಸೊತ್ತೇ?; ಇಲ್ಲಿ ಬೇರೆ ಪಶುಪ್ರಾಣಿಗಳಿಗೆ ನೆಮ್ಮದಿಯಿಂದ ಬಾಳಲು ಎಡಯಿಲ್ಲವೇ? ‘ ಎಂಬ ಭಾವನೆ ನನ್ನನ್ನು ಕಾಡತೊಡಗಿತು.
ಮತ್ತೆ ಈ ವಿಚಾರದಗುಂಟ ಸಾಗುತ್ತಾ ಹೋದಂತೆ ನನಗೆ ಸಿಕ್ಕಿದ್ದು, ಈಗಾಗಲೇ ಅಂಕಣಗಳಲ್ಲಿ ಉಲ್ಲೇಖಿಸಿದ ಮುಗ್ಧ ಬಿಶ್ನೋಯಿ ಜನಾಂಗದ, ಪರಿಸರದ ಜೊತೆ ಹಾಸುಹೊಕ್ಕಾಗಿ ಬಾಳಿ, ಪಶು- ಪ್ರಾಣಿಗಳನ್ನೂ ಮಮತೆಯಿಂದ ಕಾಣುವ ಅವರ ಉದಾತ್ತ ಧೋರಣೆ. ಜನರು ಕೈಬಿಟ್ಟು ನಿರ್ಲಕ್ಷ್ಯಕ್ಕೆ ಗುರಿಯಾದ ಪ್ರಾಣಿಗಳ ಬಗ್ಗೆ ಅನುಕಂಪ- ಅನುಭೂತಿಗಳನ್ನು ತೋರಿ ಅವುಗಳಿಗೆ ಆಶ್ರಯ ನೀಡ ಬೇಕು ಎಂದು ಸಾರುವ ಅವರ ಪ್ರಮುಖವಾದ ತತ್ವ ‘ ಅಮರ್ ರಖಾವೇ ಥತ್’ ಮತ್ತೆ ಮನಸಿನಲ್ಲಿ ಹಾಯ್ದು ಹೋಯಿತು. ನಾಗರೀಕರು ಎಂದು ಎನಿಸಿಕೊಳ್ಳು ನಾವು,ಬಿಶ್ನೋಯಿ ಜನಾಂಗದಿಂದ ಇನ್ನೂ ಬಹಳಷ್ಟು ಕಲಿಯಬೇಕಾಗಿದೆ ಎಂಬ ವಿಚಾರ ಮನಸ್ಸಿನಲ್ಲಿ ದಟ್ಟವಾಗುತ್ತಾ ಹೋಯಿತು.
ಮತ್ತೆ ಈ ಸಂದರ್ಭದಲ್ಲಿ ಥಟ್ಟನೆ ಹೊಳೆದದ್ದು, ಮಾನವ ಹಕ್ಕುಗಳಿಗಾಗಿ ಅಷ್ಟೇ ಅಲ್ಲ, ಪಶು ಪ್ರಾಣಿಗಳ ವೇದನೆಗೂ ಮಿಡಿದು, ಅವುಗಳ ಬಗೆಗಿನ ತುಡಿತದ ಫಲವಾಗಿ ನಿರ್ಮಾಣವಾದ ಅಂಜಲಿ ಗೋಪಾಲನ್ ಅವರ ‘ ಆಲ್ ಕ್ರೀಚರ್ಸ್ ಗ್ರೇಟ್ ಎಂಡ್ ಸ್ಮಾಲ್ – ಸಕಲ ಜೀವಿಗಳು, ದೊಡ್ಡ – ಚಿಕ್ಕ ಎಲ್ಲವನ್ನೂ ಒಳಗೊಂಡಂತೆ’ : ಎಲ್ಲರೂ ಕೈ ಬಿಟ್ಟ ಮೂಕ ಜೀವಿಗಳಿಗೆ ಸುರಕ್ಷಾ ಧಾಮವನ್ನು ಒದಗಿಸಿದ ಸಂಸ್ಥೆ. ಅವರ ಕುರಿತಾಗಿ ಮತ್ತು ಅವರ ಸ್ವಯಂ ಸೇವಾ ಸಂಸ್ಥೆಯ ಬಗ್ಗೆ ಮುಂದಿನ ಅಂಕಣದಲ್ಲಿ ವಿಶದವಾಗಿ ತಿಳಿಸುವೆ.
ವರಕವಿ ಬೇಂದ್ರೆ ಅವರು ಅಂದಂತೆ, ಅಂತರಾಳದ ಮೌನದಲ್ಲಿ ಬೆಳಕಿದೆ. ಅದು ಪ್ರಕಟವಾದಾಗ ಎಲ್ಲವೂ ನಿಚ್ಚಳವಾಗುತ್ತದೆ; ಮತ್ತೊಬ್ಬರ ನೋವು- ನಲಿವುಗಳಿಗೆ ಸಂವೇದನಾ ಶೀಲರಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ.
ನಮ್ಮ ವೈದ್ಯ ವೃಂದ, ಇತರ ಅನೇಕ ಆರೋಗ್ಯ ಕಾರ್ಯಕರ್ತರು ತಮ್ಮನ್ನು ತಾವು ಹಗಲೂ ರಾತ್ರಿ ಉರಿಸಿಕೊಂಡು ಸರ್ವರಿಗೆ ಬೆಳಕು ನೀಡುತ್ತಿರುವ ವಿದ್ಯಮಾನವನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಅದರಂತೆಯೇ, ಕೊರೋನಾ ಮಹಾಮಾರಿ ನಿವಾರಣೆಗಾಗಿ ಲಸಿಕೆಯನ್ನು ಕಂಡುಕೊಳ್ಳಲು, ದೀಪಗಳಂತೆ ಉರಿಯುತ್ತಿದ್ದಾರೆ ನಮ್ಮ ವಿಜ್ಞಾನಿಗಳು.
ಅವರ ಈ ತಪ ಪ್ರತಿಫಲಿಸಿ, ಆದಷ್ಟು ಬೇಗನೆ ಈ ಮಹಾಮಾರಿಗೆ ಪರಿಹಾರ ದೊರೆತು, ಅವರ ಹೃದಯದ ಹಣತೆಗಳಿಂದ ಆಶಾಭಾವದ ಬೆಳಕು ಎಲ್ಲೆಡೆ ಪಸರಿಸುವಂತಾಗಲಿ; ಅದುವೇ ನಿಜವಾದ ಅರ್ಥದಲ್ಲಿ ‘ ದೀಪಾವಳಿ’ .
ಈ ಅಂಕಣವನ್ನು ವಿನಯಪೂರ್ವಕವಾಗಿ ಈ ಮಹನೀಯರುಗಳಿಗೆ ಸಮರ್ಪಿಸುತ್ತಿದ್ದೇನೆ.
‘ ನಾನು ನಂದು ಎಂದು ನಂದಿಸದಿರು ದೀಪವ
ನೊಂದವರ ದನಿ ಆಲಿಸು
ಅವರ ಉಸಿರಿನ ಧಗೆ ಸೋಂಕಿ
ಹೊತ್ತಲಿ ಪ್ರಣವದ ಹಣತೆ
ಬತ್ತದ ಸ್ನೇಹ- ಒಲವುಗಳ ತೈಲದಲಿ ಬೆಳಗಲಿ
ಪ್ರದೀಪ್ತಗೂಳ್ಳಲಿ ಅಂತಃಕರಣ
ಶರಣು ಶರಣು ನಿಮಗೆ
ಬನ್ನಿ ಎಲ್ಲರು ಸೇರಿ
ಹಚ್ಚೋಣ ದೀಪಗಳ
ಒಲವಿನ ಕಾಂತಿಯಲಿ ಮಿಂದು
ಸಂಭ್ರಮಿಸಿದಂದು ಅದುವೇ ದೀಪಾವಳಿ
ಅದುವೇ ದೀಪಾವಳಿ!!
ದೀಪಾವಳಿಯ ಶುಭಾಶಯಗಳೊಂದಿಗೆ ಎಲ್ಲರಿಗೂ ವಂದನೆಗಳು. ??
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ