- ಕನ್ನಡದ ಧೀಮಂತ ದೀಪಧಾರಿಯನು ನೆನೆಯುತ್ತ… - ಅಕ್ಟೋಬರ್ 28, 2024
- ಗಟ್ಟಿ ವ್ಯಕ್ತಿತ್ವದ ವಿಶಿಷ್ಟ ಲೇಖಕ - ಫೆಬ್ರುವರಿ 26, 2024
[ರಂಗ ಕರ್ಮಿ ,ಸಂಘಟಕ , ಸಾಧಕ ಶ್ರೀ ಕೆರೋಡಿ ಗುಂಡೂರಾವರ ಬಗ್ಗೆ ಸುಮತಿ ನಿರಂಜನರು ಸಂಪಾದಿಸಿದ ಪುಸ್ತಕದಿಂದ ಆಯ್ದ ಬರಹ.]
ಗುಂಡೂರಾಯರ ‘ದೀಪಾವಳಿ ಮತ್ತು ಇತರ ನಾಟಕಗಳು’ ಸಮಗ್ರ ಸಂಪುಟದ ಲೋಕಾರ್ಪಣೆಯ ಸಂದರ್ಭದಲ್ಲಿ ಡಾ. ವೈದೇಹಿಯವರ ಉಪನ್ಯಾಸದ ಕೆಲವು ಸಾಲುಗಳು :
“…ಈ ನಾಟಕ ಸಂಕಲನದ ಹಸ್ತಪ್ರತಿಯನ್ನು ಗುಂಡೂರಾಯರ ಪುತ್ರ ಮತ್ತು ಸೊಸೆ, ನಿರಂಜನ ಮತ್ತು ಸುಮತಿ ದಂಪತಿಗಳು ತಂದು ತೋರಿಸಿದಾಗ ನನಗೊಮ್ಮೆ ರೋಮಾಂಚನವಾಯ್ತು. ಯಾವಾಗಲೋ ಆಗಬೇಕಿದ್ದ ಇದರ ಪ್ರಕಟಣೆ ಇನ್ನೂ ಯಾಕೆ ಆಗಿಲ್ಲವೆಂತ ಖೇದವೂ ಆಯ್ತು. ೧೯೬೮ರಲ್ಲಿಯೇ ಗುಂಡೂರಾಯರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ‘ಕನ್ನಡ ನಾಟ್ಯ ರಂಗ’ದ ಚಟುವಟಿಕೆಗಳನ್ನು ಕೇಳಿ ಅಚ್ಚರಿಯೂ. ಉಡುಪಿ ಮೂಲದ ಅವರು ದೂರದ ಹೈದರಾಬಾದಿಗೆ ವೃತ್ತಿ ನಿಮಿತ್ತ ನೆಲೆಸಲು ಬಂದು ಇಲ್ಲಿ ಕನ್ನಡಕ್ಕಾಗಿ ಎಷ್ಟೆಲ್ಲ ಕೆಲಸ ಮಾಡಿದ್ದಾರೆ. ಆದರೆ ಕನ್ನಡನಾಡಲ್ಲಿರುವ ನಮಗೆ ಇದೆಲ್ಲ ಗೊತ್ತೇ ಆಗಿಲ್ಲ ಎಂದರೆ !
ನಾವು ಗಂಡ ಹೆoಡತಿ ಇಲ್ಲಿರುವಷ್ಟು ದಿನ ಸಮಾರಂಭದ ಕುರಿತು ಚರ್ಚಿಸಲೆಂದು ಮನೆಗೆ ಬಂದು ಹೋಗುವವರೆಲ್ಲ ಗುಂಡೂರಾಯರನ್ನು ಅವರ ಸಾಧನೆಯನ್ನು ಅತ್ಯಂತ ಗೌರವದಿಂದ, ಒಂದು ವಿಧದ ಕೊಂಡಾಟದಿoದ, ವಿಶೇಷ ಖುಷಿಯಿಂದ ನೆನಪು ಮಾಡಿಕೊಳ್ಳುತಿದ್ದುದು ಗಮನಿಸುತ್ತಲೇ ಇದ್ದೇವೆ. ಇದೆಲ್ಲ ಹೇಗಾಯ್ತು ? ಯೋಚಿಸುತಿದ್ದಂತೆ ನನಗನಿಸಿದ್ದು- ಗುಂಡೂರಾಯರು ಊರಿಂದ ಬರುವಾಗ ಹಿಡಿದುಕೊಂಡು ಬಂದದ್ದು ದುಡ್ಡಿನ ಅಹಂಕಾರವಲ್ಲ, ದೊಡ್ಡ ಮನೆತನ ಎಂಬ ಠೇಂಕಾರವೂ ಅಲ್ಲ. ಅವರು ಜೋಪಾನವಾಗಿ ತಂದಿರುವುದು ತನ್ನ ಹಿರಿಯರ ಮತ್ತು ಆ ಮನೆಯ ಅಂಗಳದ ರಂಗಭೂಮಿಯ, ಅಲ್ಲಿ ಕೇಳಿದ ನಾಟಕ, ಕುಣಿತ, ಹಾಡು, ರಾಗಗಳ ಶ್ರುತಿಯನ್ನು. ಹುಟ್ಟಿದ ನೆಲದಿಂದ ದೂರ ಇದ್ದಾಗ ಸ್ಮೃತಿ ಮತ್ತು ಶ್ರುತಿಗಳು ಹೇಗೆ ನಮ್ಮ ಒಳಗನ್ನು ಕಾಪಾಡುತ್ತವೆ ! ಮನಸ್ಸು ತಾನು ಬಿಟ್ಟು ಬಂದ ಊರನ್ನು, ಭಾಷೆಯನ್ನು, ಜನ ನೆಲ ಜಲ ಗಾಳಿ ಮಳೆಗಳನ್ನು ನೆನೆಸಿಕೊಳ್ಳುತ್ತದೆ, ಅದಕ್ಕಾಗಿ ಹಂಬಲಿಸುತ್ತದೆ, ಸೃಜನಶೀಲ ಮನಸ್ಸುಗಳು ಇಂಥ ಶ್ರುತಿ ಮತ್ತು ಸ್ಮೃತಿಗಳ ಮೂಲಕವೇ ಜಗತ್ತನ್ನು ಗ್ರಹಿಸಲು ಹೊರಡುತ್ತವೆ. ಕುವೆಂಪು ಅವರು ಮಲೆನಾಡು, ಪು.ತಿ.ನರವರು ಮೇಲುಕೋಟೆ ಬಿಟ್ಟು ಬಂದರೂ ಅವುಗಳು ಅವರೊಳಗೇ ಉಳಿದು ಶ್ರೇಷ್ಠ ಕೃತಿಗಳನ್ನು ಬರೆಸಿದವು. ಗುಂಡೂರಾಯರಿಗೆ ಕೂಡಾ ಇಲ್ಲಿ ಬಂದು ರಂಗಭೂಮಿಯನ್ನು ಕಟ್ಟಲು ನೆರವಾಗಿದ್ದು ತನ್ನೊಡನೆಯೇ ಸಾಗಿ ಬಂದ ತನ್ನಲ್ಲಿ ಗಟ್ಟಿಯಾಗಿ ಬೇರೂರಿದ ತನ್ನೂರಿನ ಹಾಗೂ ಅಜ್ಜ ಕೆರೋಡಿ ಸುಬ್ಬರಾವ್ , ತಂದೆ ಕೆರೋಡಿ ನರಸಿಂಗರಾವ್ ಅವರ ಆಸಕ್ತಿ ಚಟುವಟಿಕೆಗಳು, ಅಲ್ಲಿ ಕಿವಿ ಮೇಲೆ ಬಿದ್ದ ಹಾಡು, ರಾಗಗಳ ನೆನಪುಗಳು, ಆಂತರ್ಯದಲ್ಲಿ ಏಳುತಿದ್ದ ಅವುಗಳ ಅನುರಣನಗಳು. ಇವುಗಳ ಸಾಂಗತ್ಯದಲ್ಲಿ ತಮ್ಮ ಹಿರಿಯರನ್ನು, ಕನ್ನಡವನ್ನು ನೆನೆಸಿಕೊಳ್ಳಲು, ತನ್ನ ಸುತ್ತಲಿನ ಜನರಲ್ಲಿ ಒಂದು ಸದಭಿರುಚಿಯನ್ನು ಕಟ್ಟಲು ನಿರಂತರವಾಗಿ ಶ್ರಮಿಸಿದವರು ಗುಂಡೂರಾಯರು.
ನೋಡಲೇಬೇಕೆoದು ಹಂಬಲಿಸಿ ನಾನು ಅವರ ಹಳೆ ಮನೆಗೆ ಹೋಗಿ ಬಂದೆ. ನೋಡಿದರೆ ಅದೆಷ್ಟು ಪುಟ್ಟ ಮನೆ. ಅಲ್ಲಿಯೇ ನಾಟಕಗಳ ರೀಡಿಂಗ್ , ರಿಹರ್ಸಲ್ ಆಗುತಿದ್ದವು. ಅಲ್ಲಿಯೇ ನಟನಟಿಯರು ಸೇರುತಿದ್ದರು. ಅಲ್ಲಿ ಅವರಿಗೆಲ್ಲ ಮನೆಯದೇ, ಪತ್ನಿ ಸುಕನ್ಯಾ, ಮತ್ತೆ ಮತ್ತೆ ಸೊಸೆಯಂದಿರ ಕೈರುಚಿಯದೇ ಊಟ ಉಪಾಹಾರವೆಲ್ಲ ನಡೆಯುತಿತ್ತು, ಎಂದರೆ ಕ್ಷಣ ನಂಬಲೇ ಆಗಲಿಲ್ಲ ನನಗೆ. ಅಷ್ಟು ಪುಟ್ಟ ಸ್ಪೇಸ್ ನಾಟಕ ಚಟುವಟಿಕೆಯ ದೊಡ್ಡ ಕೇಂದ್ರವಾಗಿತ್ತೆ ! ಸ್ಪೇಸ್ ಎಂಬುದು ಏನು ಕೊನೆಗೂ ? ಭೌತಿಕ ಸ್ಪೇಸ್ ಅಷ್ಟೇ ಏನು ? ಆಂತರ್ಯದಲ್ಲಿ ಜಾಗವಿರದೇ ಹೋದಲ್ಲಿ ಹೊರಗೆ ಎಷ್ಟು ದೊಡ್ಡ ಸ್ಪೇಸ್ ಇದ್ದರೂ ದಂಡವಷ್ಟೆ ? ಸಾಕಷ್ಟು ಪಿತ್ರಾರ್ಜಿತ ಆಸ್ತಿ ಇದ್ದು, ಹೆಂಡತಿಯೂ ಚೆನ್ನಾಗಿ ದುಡಿಯುತಿದ್ದರೂ ಗುಂಡೂರಾಯರು ಮನಸ್ಸು ಮಾಡಿದ್ದರೆ ದೊಡ್ಡ ಮನೆಯೊಂದನ್ನು ಕಟ್ಟಿಕೊಂಡು ಆರಾಮವಾಗಿ ಇರಬಹುದಿತ್ತು. ಆದರೆ ಪ್ರಾಯಶಃ ಅವರಿಗೆ ಅತ್ತ ಕಡೆ ಗೋಚರವೇ ಇರಲಿಲ್ಲ. ಜೀವನದುದ್ದಕ್ಕೂ ಅವರಿಗೆ ಕಾಣುತಿದ್ದದ್ದು- ರಂಗಭೂಮಿ. ನಾಟಕ, ನಾಟಕ, ನಾಟಕ. ಅವರೊಬ್ಬರಿಗೇ ಅಲ್ಲ, ಅವರೊಡನೆ ಪಲ್ಲವಿ ಜೊತೆ ಅನುಪಲ್ಲವಿಯಂತೆ ಅನುಸರಿಸಿಕೊಂಡು ಬಂದ ಸುಕನ್ಯಾ ಅವರಿಗೂ. ಇಬ್ಬರನ್ನೂ ನಾಟಕರಂಗ ಈ ರೀತಿ ಆವರಿಸಿಕೊಂಡಿದ್ದರಿoದ ಹುಸಿ ದೊಡ್ಡಸ್ತಿಕೆ ಅವರನ್ನು ಕಾಡಲೇ ಇಲ್ಲ. ಅಥವಾ ದೊಡ್ಡಸ್ತಿಕೆಯ ನಿಜ ಅರ್ಥ ಅವರಿಗೆ ತಿಳಿದಿತ್ತು. ಒಟ್ಟೊಟ್ಟಿಗೇ ಹೆಜ್ಜೆ ಹಾಕಿ ಇಲ್ಲಿ ಕನ್ನಡ ರಂಗಭೂಮಿಯನ್ನು ಕಟ್ಟ ಹೊರಟ ಅವರೊಡನೆ ಹೈದರಾಬಾದಿನಲ್ಲಿದ್ದ ಕರ್ನಾಟಕದ ಎಲ್ಲಾ ಪ್ರಾಂತ್ಯಗಳ, ಎಲ್ಲಾ ಮತಗಳ ಮಂದಿಯೂ ಸೇರಿಕೊಂಡರು. ಕೆಲವೊಮ್ಮೆ ತೆಲುಗು ನಟನಟಿಯರನ್ನು ಕರೆದುಕೊಂಡು ಅವರಿಗೆ ತೆಲುಗಿನಲ್ಲಿ ಕನ್ನಡ ಸಂಭಾಷಣೆಯನ್ನು ಬರೆದುಕೊಟ್ಟು ಬಾಯಿಪಾಠ ಮಾಡಿಸಿ ನಾಟಕ ಆಡಿಸುತಿದ್ದರಂತೆ ಗುಂಡೂರಾಯರು. ಅವರ ಸಾಹಸಕ್ಕೆ ಕೈ ಮುಗಿಯಬೇಕು.
ನಾಟಕ ಎಂದರೇನೇ ಒಂದು ಗುಂಪು ಚಟುವಟಿಕೆ. ಒಬ್ಬರಿಂದ ಆಗುವ ಮಾತಲ್ಲವಷ್ಟೇ ಅದು. ಅಲ್ಲಿ ಅಪಾರ ಸಹನೆ ಬೇಕು. ಹೊಂದಿಕೊಳ್ಳುವ ಗುಣ ಎಷ್ಟಿದ್ದರೂ ಬೇಕು. ಸಿಟ್ಟು ಬಂದರೂ ಎದುರಿನವರಿಗೆ ಆ ಸಿಟ್ಟಿನ ತಳದಲ್ಲಿ ವ್ಯಕ್ತಿಯ ಮನಸ್ಸಿನ ಮೃದುತ್ವದ ಅನುಭವವಾಗುತ್ತಿರಬೇಕು. ನಮ್ಮ ಶಿವರಾಮ ಕಾರಂತರು ರಿಹರ್ಸಲ್ ಸಮಯ ತನಗೆ ಸರಿ ಕಾಣದಿದ್ದಲ್ಲಿ ಹೊಡೆದೇ ಬಿಡುತಿದ್ದರಂತೆ. ಹಾಗೆ ಹೊಡೆಸಿಕೊಂಡವರು ಅದನ್ನು ಮಹಾಪ್ರಸಾದ ಎಂಬoತೆ ಸ್ವೀಕರಿಸುತಿದ್ದರು ಹೊರತು ದುಃಖಿಸುತ್ತಿರಲಿಲ್ಲ. ಯಾಕೆ ? ಅವರಿಗೆ ಕಾರಂತರು ಏನೆಂದು ಗೊತ್ತಿತ್ತು. ಗುಂಡೂರಾಯರು ಕೂಡಾ ತನಗೆ ಸರಿ ಕಾಣದಿದ್ದಾಗ ಸಿಡಿಮಿಡಿಗೊಳ್ಳುತಿದ್ದರಂತೆ. ಆದರೆ ಅವರ ಜತೆಗಿನವರು (ಹೆಂಡತಿ, ಮಕ್ಕಳೂ ಸೇರಿದಂತೆ) ಅವರ ಒಳಗಿನ ಹೂ ಮನಸ್ಸನ್ನು ಅರ್ಥ ಮಾಡಿಕೊಂಡರು. ಎಂತಲೇ ನಾಟ್ಯರಂಗ ಆರೋಗ್ಯಪೂರ್ಣವಾಗಿ ಬೆಳೆಯಲು ಸಾಧ್ಯವಾಯಿತು. ಇತ್ತ ತನಗೆ ಅನ್ನ ಕೊಟ್ಟ ನಾಡಿನ ಭಾಷೆಯಾದ ತೆಲುಗನ್ನೂ ಪ್ರೀತಿಸಿ ಅತ್ತ ಮಾತೃಭಾಷೆಯನ್ನೂ ಎದೆಗೊತ್ತಿಕೊಂಡು ತೆಲುಗುನಾಡಿನಲ್ಲಿ ಕನ್ನಡದ ಪುಟ್ಟದೊಂದು ನಟನಾಸಾಮ್ರಾಜ್ಯವನ್ನು ಕಟ್ಟಿದರು ಗುಂಡೂರಾಯರು. ತನ್ನ ಹಿರಿಯರು ಬೆಳಗಿಸಿದ್ದ ರಂಗಭೂಮಿಯ ದೀಪವನ್ನು ಇಲ್ಲಿ ಹಚ್ಚುವ ಮೂಲಕ ತನ್ನ ಅಂತರOಗಕ್ಕೆ ನೆಲೆ ಕಂಡುಕೊoಡರು.
ನಾಟಕಗಳನ್ನು ಬರೆದರು ಗುಂಡೂರಾಯರು. ಅವಕ್ಕೆ ಅಗತ್ಯವಿರುವ ಹಾಡುಗಳನ್ನೂ ಬರೆದರು. ಸಂಗೀತಜ್ಞಾನ ಇದ್ದವರಾಗಿ ತನ್ನ ಹಾಡುಗಳಿಗೆ ತಾನೇ ರಾಗವನ್ನು ಹಾಕಿ ನಾಟಕಗಳನ್ನು ನಿರ್ದೇಶಿಸಿದರು.
ಹೊಯ್ಸಳ ವೀರ ಎರೆಯಂಗ- ಅವರ ಒಳದೃಷ್ಟಿಯನ್ನು ಪರಿಚಯಿಸುವ ನಾಟಕ- ಎರೆಯಂಗ- ಬಾಹುಬಲಿ ಮತ್ತು ಭರತ ಈ ಇಬ್ಬರ ಸಮ್ಮಿಶ್ರ ವ್ಯಕ್ತಿತ್ವದವನು. ಯುದ್ಧದಲ್ಲಿ ಗೆದ್ದೂ, ಸಿಂಹಾಸನವನ್ನು ಆಶಿಸದ ವಿರಾಗಿ. ರಾಜ್ಯವು ವಿದ್ರೋಹದ ಸಂಚಿಗೆ ಒಳಗಾಗಿ ಬಳಲುತ್ತಿರುವಾಗ ನಾಡಿನ ಹಿತದೃಷ್ಟಿಯಿಂದ ಅರಸೊತ್ತಿಗೆ ತ್ಯಜಿಸಿಯೂ ಸೇವೆ ಸಲ್ಲಿಸುತ್ತಿರುವವನು. ಸೈನಿಕರು ವಿದ್ರೋಹಿಯೊಬ್ಬನನ್ನು ಹಿಡಿದು ತಂದ ಸಂದರ್ಭದಲ್ಲಿ ಆತನ ಮಾತೊಂದಿದೆ- ನಾವು ದ್ವೇಷಿಸುವುದು ವಿದ್ರೋಹವನ್ನು ಹೊರತು ವ್ಯಕ್ತಿಯನ್ನಲ್ಲ. ಈತ ವಿದ್ರೋಹಿಯೆಂದರೆ ಈತನ ಕುಟುಂಬದವರೂ ಹಾಗೆ ಅಂತಲ್ಲ, ನೆನಪಿಡಿ. ಅವರು ಯಾರಿಗೂ ಅನಗತ್ಯ ಹಿಂಸೆ ಅನ್ಯಾಯ ಪೀಡೆ ಕೂಡದು- ಇತ್ಯಾದಿ.
ಸುಮಾರು ಅರ್ಧ ಶತಮಾನದ ಹಿಂದೆ ಬರೆದ ಕೃತಿಯ ಈ ಮಾತು ಇಂದಿಗೂ ಎಷ್ಟು ಸಂಗತವಿದೆ ! ಇವತ್ತು ಅಪರಾಧಿಯೊಬ್ಬನ ಇಡೀ ಕುಟುಂಬವನ್ನು ಸಮುದಾಯವನ್ನು ಗುಮಾನಿಯಿಂದ ಹೊರಗಿಟ್ಟು ನೋಡುವ ಕಾಯಿಲೆ ದಿನೇ ದಿನೇ ಉಲ್ಬಣಿಸುತ್ತಿದೆ. ಪರಸ್ಪರರ ಗುರುತೇ ಹಿಡಿಯದೇ ಅಪಾರ್ಥದಲ್ಲೇ ಸುಖ ಪಡುವ ಸಮಾಜ ಸೃಷ್ಟಿಯಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಈ ಮಾತು ಎಷ್ಟು ಔಷಧೀಯವಾಗಿದೆ ! ಸಾರ್ವಕಾಲಿಕವಾಗಿದೆ ! ಇಂದು ಆಡಲಿರುವ ಅವರ ಮೈಸೂರ ಮಲ್ಲಿ ನಾಟಕದಲ್ಲಿ ಅವರು ವಿಧವಿಧ ಕನ್ನಡಗಳನ್ನು ಬಳಸಿದ್ದಾರೆ. ಮಹಿಳಾ ಸಂವೇದನೆಯ ದೃಷ್ಟಿಯಿಂದ ನಾಟಕವನ್ನು ರೂಪಾಂತರಿಸಿದ್ದಾರೆ. ಈ ರೀತಿಯಲ್ಲಿ ಗುಂಡೂರಾಯರು ಇವತ್ತಿಗೂ ಸಲ್ಲುವ ಚಿಂತಕರಾಗಿದ್ದಾರೆ.
ಹೆಚ್ಚಿನ ಬರಹಗಳಿಗಾಗಿ
ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ
ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ
ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು