ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಟ್ಟಿ ವ್ಯಕ್ತಿತ್ವದ ವಿಶಿಷ್ಟ ಲೇಖಕ

ವೈದೇಹಿ
ಇತ್ತೀಚಿನ ಬರಹಗಳು: ವೈದೇಹಿ (ಎಲ್ಲವನ್ನು ಓದಿ)

     ಗಟ್ಟಿಯವರ ಮತ್ತು ನಮ್ಮ ನಡುವಿನದು ಕೇವಲ ಸಾಹಿತ್ಯಿಕ ಸಂಬಂಧವಲ್ಲ. ನನ್ನ ಮಗಳು ಮತ್ತು ಅವರ ಮಗಳು ಕ್ಲಾಸ್ಮೇಟ್ಸ್ . ನಾವು ಅವರ ಮನೆಗೆ ಅವರು ನಮ್ಮ ಮನೆಗೆ ಆಗಾಗ ಬಂದು ಹೋಗುವುದಿತ್ತು. ಅವರು ಉಜಿರೆಗೆ ಹೋಗುವವರೆಗೂ.
 ಅವರ ಪತ್ನಿ ಯಶೋದಾ ಅನುರೂಪದ ಪತ್ನಿ. ಗಂಡನೆಡೆಗಂತೂ ಅವರಿಗೆ ಆರಾಧನಾ ಭಾವ. ಅದು ಅವರ ಕಣ್ಣಲ್ಲಿ ತೋರುತ್ತಿತ್ತು.
     ಆ ವೇಳೆಯಲ್ಲೇ ಅವರ ಪ್ರಥಮ ಕಾದಂಬರಿ ‘ಶಬ್ದಗಳು ‘ಬಂತು. ಅದರ ಕುರಿತು ಚರ್ಚೆ ನಮ್ಮ ನಡುವೆ ನಡೆಯುತ್ತಿರುತ್ತಿತ್ತು.
     ಅವರು ನಿರಂತರವಾಗಿ ತಮ್ಮ ಮನೋನೆಲೆಯನ್ನು ಅರಸುತ್ತಿದ್ದರು ಅನಿಸುತ್ತದೆ. ಮೊದಲು ಹೈಸ್ಕೂಲ್ ಮೇಷ್ಟ್ರು, ಆಮೇಲೆ ಕಾಲೇಜು ಪ್ರಾಧ್ಯಾಪಕರು, ಇಥಿಯೋಪಿಯಾ ವಾಸ, ಮರಳಿ ಮಣಿಪಾಲಿಗೆ ಬಂದು ನಂತರ ಉಜಿರೆಯಲ್ಲಿ ನಿಂತರು. ಉದ್ಯೋಗಕ್ಕೆ ರಾಜಿನಾಮೆ ಕೊಟ್ಟು ಪೂರ್ಣ ಪ್ರಮಾಣದ ಲೇಖಕರಾದರು. ತಮ್ಮ ಮನೋನೆಲೆಯನ್ನು ಕಂಡುಕೊಂಡರು.
       ಅವರು ಉಜಿರೆಗೆ ಹೋದಮೇಲೆ ನಮ್ಮ ಸಂಪರ್ಕವೂ ವಿರಳವಾಯ್ತು. ಆದರೆ ಉಡುಪಿಗೆ ಬಂದರೆ ನಮ್ಮನೆಗೆ ಬಂದು ಹೋಗುತ್ತಿದ್ದರು. ಆ ಭಾಗಕ್ಕೆ ಹೋದಾಗ ಅವರ ಮನೆಗೆ ನಾವೂ ಸಂಭ್ರಮದಿಂದ ಹೋಗುತ್ತಿದ್ದೆವು. ಅವರ ಸಾಹಿತ್ಯ ಕೃಷಿ ಎಷ್ಟು ಹುಲುಸಾಗಿತ್ತೋ ಅಷ್ಟೇ ಹಸಿರು ಕೃಷಿಯೂ ಹುಲುಸಾಗಿತ್ತು. ಸಾಹಿತ್ಯದಷ್ಟೇ ಆಸ್ಥೆಯಿಂದ ತೋಟವನ್ನೂ ಬೆಳೆಸಿದರು. ಅವರ
ತೋಟಕ್ಕೆ ಹೋದರೆ ಕಣ್ಣು ತುಂಬುತ್ತಿತ್ತು.
 ಹಲಸು, ಮಾವು, ದಾಲ್ಚಿನ್ನಿ ಯಾವ ಗಿಡ ಇಲ್ಲವೆಂದಿಲ್ಲ ಎಲ್ಲವನ್ನೂ ನಮಗೆ ಪ್ರೀತಿಯಿಂದ ತೋರಿಸುತ್ತಿದ್ದರು. ತೋಟ ಅವರ ಮನಸಿನ ಇನ್ನೊಂದು ನೆಲೆ.
        ಭಾಷೆಯ ಕುರಿತೂ ಅವರಿಗೆ ಪರಮ ಆಸ್ಥೆ . ಅದರಲ್ಲೂ ಇಂಗ್ಲಿಷ್ ಭಾಷೆಯ ಕುರಿತು ಸಾಕಷ್ಟು ಕೆಲಸ ಮಾಡಿದವರು. ಆತಿಥ್ಯ, ಸಾಹಿತ್ಯ, ಭಾಷೆ, ತೋಟ ಎಲ್ಲವೂ ಅವರ ಮನಸಿನ ಬೇರೆ ಬೇರೆ ನೆಲೆಗಳಾಗಿದ್ದು ಸಮರ್ಥವಾಗಿ ಅವುಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.       
 ಗಟ್ಟಿ ಎನ್ನುವ ಹೆಸರು ಅವರಿಗೆ ಅನ್ವರ್ಥಕವೆಂಬಂತೆ ಗಟ್ಟಿ ವ್ಯಕ್ತಿತ್ವದವರಾಗಿದ್ದರು. ತಮಗೆ ಏನನ್ನಿಸುತ್ತದೋ ಅದನ್ನು ನೇರವಾಗಿ ಹೇಳುತ್ತಿದ್ದರು. ಯಾರಿಗೂ ಯಾವುದಕ್ಕೂ ಅಂಜದೆ ನೇರವಾಗಿ ಹೇಳುವ ಧೈರ್ಯವಂತ. 
       

         ಮಕ್ಕಳನ್ನೂ ಚೆನ್ನಾಗಿ ಬೆಳೆಸಿದ್ದರು. ಓದಿಸಿದರು. ಅವರೊಬ್ಬ ಅಪರೂಪದ ಸಾಹಿತಿ ಅಷ್ಟೇ ಅಲ್ಲ, ಬೆಸ್ಟ್ ಗಂಡ, ಬೆಸ್ಟ್ ಅಪ್ಪ,ಬೆಸ್ಟ್ ಸ್ನೇಹಿತ. ನನಗೆ ಕಂಪ್ಯೂಟರಿನ ಹಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದರು. ನಾನು ನನ್ನ ಗಂಡನೊಂದಿಗೆ ಹೇಳುವುದಿದೆ, ಅವರೊಬ್ಬ ಬೆಸ್ಟ್ ಟೀಚರ್ ಕೂಡ ಅಂತ.
      ನಮಗವರು ಸಾಹಿತ್ಯದಿಂದ, ಅವರ ಕುಟುಂಬದಿಂದ, ಸರಳತೆಯಿಂದ , ಅವರು ನಂಬಿದ ಆದರ್ಶಗಳಿಂದ ಹತ್ತಿರಾದವರು. ನಮ್ಮ ನಾಡಿನ ಹೆಮ್ಮೆ ಅವರು.
           ನನ್ನ ಬಲಗೈಗೆ ಪೆಟ್ಟಾಗಿ ಬರೆಯುವುದು ಕಷ್ಟವಾಗುತ್ತಿದೆ.ಅವರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ತನ್ನ ಕನಸುಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ನನಸು ಮಾಡಿಕೊಂಡ ಕನ್ನಡದ ದೊಡ್ಡ ಲೇಖಕ ಅವರು.