ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡ ನಾಟ್ಕ ಇನ್ ತೆಲುಗು ದೇಶಂ ..!

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಮೊನ್ನೆ ಶನಿವಾರ ನವೆಂಬರ್ 18 ರಂದು ಪ್ರತಿಷ್ಠಿತ ‘ರವೀಂದ್ರ ಭಾರತಿ’ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ನಾಟಕ ಮಲ್ಲಿಗೆ ಪ್ರದರ್ಶನಲ್ಲಿ ನಾನು ಪ್ರೇಕ್ಷಕನಾಗಿ ಪಾಲ್ಗೊಂಡಿದ್ದು ನನ್ನ ಪಾಲಿಗೆ ಅವಿಸ್ಮರಣೀಯ. ಇದು ಸಾಧ್ಯವಾಗಿದ್ದು ಆಪ್ತ ಮಿತ್ರರಾದ ಮಹಾದೇವ್ ಭಟ್ ಕಾನತ್ತಿಲ ಹಾಗೂ ಶ್ರೀಮತಿ ಸುಮತಿ ನಿರಂಜನ್ ಅವರ ಆತ್ಮೀಯ ಆಹ್ವಾನದಿಂದ.
ಇಂದಿನ ವಿದ್ಯುನ್ಮಾನ ಹಾಗೂ ಓಟಿಟಿ ಯುಗದಲ್ಲಿ, ನಾಟಕ ನೋಡುವ ಅನುಭವ ಹೇಗಿರಬಹುದು ಎಂಬ ಅಳುಕಿನಲ್ಲಿಯೇ ಹೋಗಿದ್ದೆ. ಆದರೆ, ಉತ್ತಮವಾಗಿ ರಚಿಸಿ, ನಿರ್ದೇಶಿಸಿ ಆಡಿದ ನಾಟಕ, ಉಳಿದೆಲ್ಲ ಮಾಧ್ಯಮಗಳಿಗಿಂತ ವಿಭಿನ್ನ ಅಷ್ಟೇ ಅಲ್ಲ ಅತ್ಯಂತ ಪ್ರಭಾವಶಾಲಿ ಎಂಬುದು ಸ್ಪಷ್ಟವಾಗಿ ಮನದಟ್ಟಾಯಿತು. ನಿಮ್ಮ ಮುಂದೆ ಕಾಣುವ ಜೀವಂತ, ಹಾವ-ಭಾವ ಅಭಿನಯಗಳು ಸಿನೆಮಾ ಹಾಲ್ ಗಿಂತಲೂ ಹೆಚ್ಚಿನ ಮಗ್ನತೆಯನ್ನು, ಒಳಗೊಳ್ಳುವಿಕೆಯನ್ನು ಉಂಟು ಮಾಡಲು ಸಾಧ್ಯ ಇದೆ. ಇಲ್ಲಿನ ಪಾತ್ರಗಳು, ಅವರ ಹಾವಭಾವ, ಎಡಿಟ್ ಮಾಡದೆ ಆಡುವ ನೈಜ ಸಂಭಾಷಣೆಗಳು ಉಂಟು ಮಾಡುವ ಅನುಭೂತಿ ನಿಮಗೆ ಯಾವ ಡೀಪ್ ಫೇಕ್ ತಂತ್ರಜ್ನಾನದಿಂದಲೂ ಸಾಧ್ಯವಿಲ್ಲ ಎಂಬುದೇ ಆ ಸಮಯದಲ್ಲಿ ಅನಿಸಿದ್ದು .

ಹಿಂದೆಲ್ಲ ನಾಟಕದಲ್ಲಿ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಹೋಗಬೇಕಾದರೆ ನಡುವೆ ಪರದೆ ಎಳೆಯಲಾಗುತ್ತಿತ್ತು. ಇಂದಿನ ನಾಟಕಗಳಲ್ಲಿ ಆ ಪರದೆ ಬೇಕಿಲ್ಲ. ವೀಕ್ಷಕರಿಗೆ ಸರಿಯಾಗಿ ಕಾಣಿಸದ ಒಂದು ಮಂದ ಹಸಿರು ಬೆಳಕು ಆ ಕೆಲಸ ಮಾಡುತ್ತದೆ. ಕೆಲವು ಪ್ರಾಪ್ಸ್ ಗಳ ಜೊತೆಗೆ ಬೇಕಾದ ಸನ್ನಿವೇಶ ಕಟ್ಟಿ ಕೊಡುವುದು ಇಂದು ಲೀಲಾಜಾಲ. ನಾನು ನೋಡಿದ ಮಲ್ಲಿಗೆ ನಾಟಕದಲ್ಲಂತೂ ಅತ್ಯಂತ ಪ್ರಮುಖವಾಗಿದ್ದು ಬೆಳಕು. ನಾಟಕದ ಬಹು ಮುಖ್ಯ ಪಾತ್ರ ಸರಿಯಾದ ಜಾಗದಲ್ಲಿ, ಸರಿಯಾದ ಪ್ರಮಾಣದಲ್ಲಿ, ಬೇಕಾದ ಬೆಳಕು ಬೀರುವ ಪ್ರತಿಭೆ,ಶ್ರಮ ಕೂಡ ಮೆಚ್ಚಬೇಕಾದ್ದೆ.

‘ಮಲ್ಲಿಗೆ’ ನಾಟಕದ ದೃಶ್ಯ

ನಾರಾಯಣಸ್ವಾಮಿ ಅವರು ಬರೆದ ಮಲ್ಲಿಗೆ ನಾಟಕದ ಮೊದಲ ಸನ್ನಿವೇಶ ಒಬ್ಬಾತ ಆತ್ಮಹತ್ಯೆ ಮಾಡಿಕೊಂಡದ್ದು. ಬಳಿಕದ ಸನ್ನಿವೇಶ ಮೃತನ ಹೆಂಡತಿಯೊಂದಿಗೆ, ತನಿಖೆ ನಡೆಸುತ್ತಿರುವ ಪೋಲಿಸ್ ಇನ್ಸಪೆಕ್ಟರ್ ಇದೊಂದು ಕೊಲೆಯ ಪ್ರಕರಣ ಇರಬಹುದೇ, ಹೆಂಡತಿಯೇ ಯಾಕೆ ಇದನ್ನು ಮಾಡಿರಬಾರದು ಎಂಬ ಸಂಶಯದೊಂದಿಗೆ ವಿಚಾರಣೆ ಆರಂಭಿಸಿರುವುದು. ಇಲ್ಲಿ ಬರುವ ಪಾತ್ರಗಳೆಲ್ಲ ಜೀವಂತ, ಅವರ ಸಂಭಾಷಣೆಗಳು ಕೂಡ. ಪ್ರಸ್ತುತ ಕಾಲದ ಘಟನೆಯ ಜೊತೆಗೆ ಈ ನಾಟಕ, ನಕ್ಕರೆ ಮಲ್ಲಿಗೆ ಸುರಿಯುವ ವರದೊಂದಿಗೆ ಹುಟ್ಟಿದ ಮಲ್ಲಿಗೆರಾಯ ಎಂಬ ರಾಜ ಹಾಗೂ ಆತನ ಪಟ್ಟದ ರಾಣಿಯ ಕಾಲದ ಕಥೆಯೊಂದಿಗೆ ಸಮಾನಾಂತರವಾಗಿ ಹೆಣೆಯಲ್ಪಟ್ಟಿದೆ. ಎಲ್ಲದಕ್ಕೂ ಸಾಕ್ಷಿಯಾಗಿರುವುದು ಮನೆಯಲ್ಲಿ ಜೋತು ಬಿಟ್ಟ ಸಿಂಗರಿಸಿದ ಗೊಂಬೆ.ಮುನ್ನೆಲೆಯಲ್ಲಿರುವ ಆಡುವ ಗೊಂಬೆಗಳಿಗೆ ಕಾಣುವ ಸತ್ಯ,ಅವನ್ನು ಹಿಂದಿನಿಂದ ಆಡಿಸುವ ಸೂತ್ರಧಾರರಿಗೆ ಕೂಡ ತಿಳಿದಿರುವುದಿಲ್ಲ ಎಂಬ ಮಾತು ಬರುತ್ತದೆ.

ಮಲ್ಲಿಗೆರಾಯ ನಕ್ಕಾಗ ಮಲ್ಲಿಗೆ ಮಳೆ ಸುರಿಯುತ್ತದಾ ಎಂದು ಕಾಯುವ ರಾಜ ಹಾಗೂ ಜನತೆ
ಮಹಾರಾಣಿಗೆ ಸಾಮಾನ್ಯ ಸಖಿಯ ಸುಖೀ ಜೀವನದ ಬಗ್ಗೆ ಕೌತುಕ

ಇಪ್ಪತ್ತನೆಯ ಶತಮಾನದ ಆಪ್ತ ವಿಂಟೇಜ್ ದಾಟಿಯ, “ನೆರೆದ ಸುಜನರಿಗೆ ಸ್ವಾಗತಂ” ಎನ್ನುತ್ತಾ ಶುರುವಾದ ನಾಟಕದ ಒಟ್ಟು ಅವಧಿ ಕೇವಲ ಒಂದೂವರೆ ತಾಸಿನಷ್ಟೇ. ಆದರೆ ಪ್ರತಿ ಸನ್ನಿವೇಶ, ಪ್ರತಿ ಸಂಭಾಷಣೆಗಳು, ಒಳ್ಳೆಯ ಲಯ, ವೇಗಗಳೊಂದಿಗೆ ಸಾಗುತ್ತ, ಕುತೂಹಲವನ್ನು ಕೊನೆಯವರೆಗೂ ಕಟ್ಟಿಕೊಡುತ್ತದೆ. ಸಂಗೀತ ಪ್ರಧಾನ ಎಂದ ಕೂಡಲೇ ನನಗೆ ಇನ್ನೊಂದು ಸಂದೇಹವಿತ್ತು. ಮಧ್ಯೆ ಮಧ್ಯೆ ಸಿಕ್ಕಾ ಪಟ್ಟೆ ಹಾಡುಗಳನ್ನ ತುರುಕಿ ಕಥೆಯ ನಿರೂಪಣೆಗೆ ಎಲ್ಲಿ ಧಕ್ಕೆ ತರುತ್ತಾರೋ ಎಂಬುದು. ಅಲ್ಲಿ ನಿರ್ದೇಶಕರು ಯಾವುದೇ ತಪ್ಪಿಗೂ ಆಸ್ಪದ ಕೊಡಲಿಲ್ಲ. ಈ ಮುಂಚೆ ಹಲವು ಪ್ರಯೋಗಗಳಾಗಿದ್ದುದರಿಂದ ಏನೋ ಎಲ್ಲಿಯೂ ಯಾವುದನ್ನೂ ಎಳೆಯದೆ ತಿದ್ದಿ ತೀಡಿ ಇದನ್ನು ಪರಿಪೂರ್ಣತೆಯ ಸನಿಹಕ್ಕೆ ತಂದಿದ್ದಾರೆ ಎಂದು ಮನವರಿಕೆಯಾಯಿತು. ಅಂದ ಹಾಗೆ ಈ ನಾಟಕವನ್ನು ಪ್ರದರ್ಶಿಸಿದವರು ಬೆಂಗಳೂರಿನ ರಂಗ ಮಂಟಪದವರು. ನಿರ್ದೇಶಿಸಿದ ಪ್ರಕಾಶ ಶೆಟ್ಟಿ ಹಾಗೂ ಅಭಿನಯಿಸಿದ ಚಂಪಾ ಶೆಟ್ಟಿ ದಂಪತಿಗಳು ಇದರ ಹಿಂದಿನ ರೂವಾರಿಗಳು. ಕನ್ನಡ ರಂಗ ಭೂಮಿ ಕ್ಷೇತ್ರದಲ್ಲಿ ಅವರು ಈಗಾಗಲೇ ಜನಪ್ರಿಯರು.

ರಂಗ ಮಂಟಪದ ಪ್ರಕಾಶ ಶೆಟ್ಟಿ ಮತ್ತು ಚಂಪಾ ಶೆಟ್ಟಿ ದಂಪತಿಗಳಿಗೆ ಸನ್ಮಾನ

ಇಂತಹ ಚೆಂದದ ನಾಟಕಕ್ಕೆ ಉಚಿತ ಪ್ರವೇಶ ಇಟ್ಟಿದ್ದು ಕೇಳಿ ಸ್ವಲ್ಪ ಕಸಿವಿಸಿ ಆಯಿತು. ಇದರ ಬಗ್ಗೆ ಕೇಳಬೇಕು ಅಂದುಕೊಂಡಿದ್ದೇನೆ. ನೀವು ಈ ತರದ ಒಳ್ಳೆಯ ನಾಟಕ ಇಟ್ಟುಕೊಂಡರೆ ಮುಂಗಡ ಟಿಕೆಟ್ ಖರೀದಿಸಿ ಬರುತ್ತೇವೆ ಎನ್ನುವುದು. ಇಂಥ ನಾಟಕಗಳನ್ನು ಒಳನಾಡು, ಹೊರನಾಡು ಎಲ್ಲ ಕಡೆಗಳಲ್ಲೂ ಪ್ರದರ್ಶನವಾಗುತ್ತಿರಲಿ. ನನ್ನ ಮಟ್ಟಿಗೆ ರಂಗಭೂಮಿ ಎನ್ನುವುದು ಹಸಿ ಗದ್ದೆಯ ಮೇಲೆ ಖುದ್ದು ನಿಂತು ಸುತ್ತಣವನ್ನು ವೀಕ್ಷಿಸುವುದು. ಅಲ್ಲಿ ಸಾಹಿತ್ಯ, ಸಂಗೀತ, ಅಭಿನಯ ಕಲಬೆರಕೆ ಇಲ್ಲದೇ ಆಸ್ವಾದಿಸಲು ಸಿಗುತ್ತದೆ. ನಾವು ಕನ್ನಡಿಗರು ತಪ್ಪಿಸದೇ , ಕನ್ನಡ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಲಿ. ಕಾಲೇಜುಗಳಲ್ಲಿ ನಾಟಕಗಳನ್ನು ಪ್ರಾಯೋಜಿಸಬೇಕು. ಯುವ ಪೀಳಿಗೆ ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಕು. ಮತ್ತೆ ನಾಟಕ ನೋಡುವ ಸಂಸ್ಕೃತಿ ಬರಲಿ. ಇಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಹೋಲಿಕೆಯ ಅಗತ್ಯವೇ ಬರುವುದಿಲ್ಲ. ರಂಗಭೂಮಿ/ನಾಟಕ ಕ್ಷೇತ್ರಗಳು ಒಟಿಟಿ ಯಿಂದಾಗಿ ತೆರೆ ಮರೆಯಾಗುವುದು ಕೂಡ ಸಾಧ್ಯ ಇಲ್ಲ. ಇವುಗಳ ರುಚಿಯೇ ಬೇರೆ. ಹೊಸ ಪ್ರಯೋಗಗಳಾಗಬೇಕು. ಎಲ್ಲ ಸಮಯದಲ್ಲಿ ಕಣ್ಮುಂದೆ ಸ್ಕ್ರೀನ್ ಇಟ್ಕೊಂಡು ಮನೋರಂಜನೆಗೊಳ್ಳುವುದರ ಬದಲಿಗೆ, ಕೊನೆ ಪಕ್ಷ ತಿಂಗಳಿಗೊಂದು ಒಂದೂವರೆ ತಾಸಿನ ಒಳ್ಳೆ ನಾಟಕ ನೇರವಾಗಿ ನೋಡಿದರೆ ಅದರಿಂದ ಸಿಗುವ ಅನುಭೂತಿಯೇ ಬೇರೆ.

ಕಲಾವಿದರ ಜೊತೆಗೆ ಆಗಮಿಸಿದ ಗಣ್ಯರು

ಹೀಗೆ ಹೈದರಾಬಾದಿನಲ್ಲಿ ನಾನು ನಾಟಕ ನೋಡಿದ ವಿಷಯ ಬೆಂಗಳೂರಿನಲ್ಲಿರುವ ನನ್ನ ತಂಗಿಗೆ ತಿಳಿಸಿದಾಗ ಆಕೆ ಥಟ್ಟನೆ ಪ್ರತಿಕ್ರಯಿಸಿದ್ದು ಹೀಗೆ. “ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! ” ಅದು ಹೇಗೆ ಅಂತ. ಅದನ್ನೇ ಇಲ್ಲಿ ಶೀರ್ಷೀಕೆಯಾಗಿಸಿದ್ದೇನೆ. ಹೇಗೆ ಅನ್ನುವ ಆಕೆಯ ಪ್ರಶ್ನೆಗೆ ಉತ್ತರ ಹೈದರಾಬಾದಿನ ಕನ್ನಡ ನಾಟ್ಯ ರಂಗ. ಅದರ ಸ್ಫೂರ್ತಿಯುತ ಹಿನ್ನೆಲೆಯ ಬಗ್ಗೆ ಮುಂದಿನ ಬರಹದಲ್ಲಿ ಬರೆದಿದ್ದೇನೆ. ಬಿಡುವಾದಾಗ ಓದಿ ನೋಡಿ.