ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ, ಆಕಾಶ, ಪುಟ್ಟ ಬೆರಳು ಹಾಗೂ ನಕ್ಷತ್ರ

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಇದು ಸುಲಭ ಅಲ್ಲ,ಕಠಿಣದ ಹಾದಿ. ಆದರೆ ಇಲ್ಲಿ ಗುರಿಯನ್ನು ಮುಟ್ಟುವುದಕ್ಕಿಂತ ಈ ಪಯಣದ ರೋಚಕತೆಯೇ ತೃಪ್ತಿದಾಯಕ. ಒಂದಷ್ಟು ನಿಯಮಗಳಿದ್ದಾಗ ಆ ವಿಷಯದಲ್ಲಿ ಶಿಸ್ತು ಇರೋದು ಕೂಡಾ ಸಹಜ ಗುಣ. ಆದರೆ, ಕಾವ್ಯಕ್ಕೆ, ಸಾಹಿತ್ಯಕ್ಕೆ? ನಿಯಮಗಳಿವೆಯಾ, ಕಟ್ಟುಪಾಡುಗಳಿವೆಯಾ? ಯಾಕಿಲ್ಲ; ಎಲ್ಲಾ ಇವೆಯಲ್ಲಾ! ಹಾಗಾದರೆ ಈ‌ ನಿಯಮಗಳನ್ನ ಮೀರುವುದು ಎಷ್ಟು‌ ಸಮಂಜಸ ಅನ್ನೋದು ಒಂದು ಪ್ರಶ್ನೆಯಾಗಿ ಇದಿರಾದಾಗ, ಯಾಕೆ ಮೀರುತ್ತಿದ್ದೇವೆ ಅನ್ನುವ ಅರಿವಿದ್ದಾಗ, ಅವುಗಳಾಚೆಗೆ ಹುಟ್ಟುವ ರಚನೆಗಳಿಗೆ ಒಂದು ಪ್ರತ್ಯೇಕ ದೃಷ್ಟಿಕೋನ ಅಗತ್ಯವಾಗುತ್ತದೆ. ನಿಯಮಗಳ ಒಳಗೂ, ನಿಯಮಗಳ ಆಚೆಗೂ ತನ್ನ ಕೃಷಿಯನ್ನ ಮಾಡಿ, “ಕಾವ್ಯ ಬದುಕಿನ ಧರ್ಮ” ಅನ್ನುವುದನ್ನ ಪಾಲಿಸಿದವರಲ್ಲಿ ಶ್ರೀ ಕೆ ವಿ ತಿರುಮಲೇಶ್ ಸರ್ ಕೂಡಾ ಒಬ್ಬರು. ಇದು ಖಂಡಿತಾ ಅತಿಶಯೋಕ್ತಿ‌ ಅಲ್ಲ; ಅವರನ್ನು ಓದುವಾಗ ಸಿಕ್ಕಿದ‌ ನೋಟದ ಒಂದು ತುಣುಕು‌ ಇದು ಅಷ್ಟೇ. ಮೊದಲನೇ ವಾಕ್ಯದಲ್ಲೇ ಹೇಳಿದಂತೆ ಶ್ರೀ ತಿರುಮಲೇಶ್ ಅವರನ್ನು ಓದುವುದು ಸುಲಭದ ಮಾತಲ್ಲ, ಆದರೆ ಈ ಪಯಣ ರೋಚಕವಾದದ್ದು.

ಕವಿತೆ ಬರೆಯುವವ ಇಂಥದ್ದೇ ವಿಷಯಗಳ ಬಗ್ಗೆ ಬರೆಯಬೇಕು, ಅದು ಅಂದಿನ ರಾಜಕೀಯ, ಸಾಮಾಜಿಕ, ತಾತ್ವಿಕ ಬೆಳವಣಿಗೆ, ವಿಪ್ಲವಗಳ ಧ್ವನಿಯಾಗಿರಬೇಕು. ವ್ಯವಸ್ಥೆಯ ವಿವಿಧ ಸ್ತರಗಳ ಕುರಿತಾಗಿ ಬರೆದಾಗ ಅದು ಆ ವರ್ಗಗಳಿಗೆ, ಅಲ್ಲಿನ ವಾತಾವರಣಕ್ಕೆ ಸ್ಪಂದನೆಯಾಗಬಲ್ಲದು ಇತ್ಯಾದಿಗಳ ನಡುವೆ ಒಬ್ಬ ಕವಿಗೆ ತನ್ನದೇ ಒಂದು ಅಸ್ತಿತ್ವವನ್ನ ಹುಡುಕಿಕೊಳ್ಳುವ ಆ ಹೋರಾಟ ಹಾಗೂ ಇವುಗಳೆಲ್ಲದರ ಆಚೆಗೆ ತನ್ನ ಬದುಕಿನ ಪ್ರತೀ ಭಾವಕ್ಕೂ ಕವಿತೆ ಅಭಿವ್ಯಕ್ತಿಯ ಮಾಧ್ಯಮವಾಗಬಹುದಾದ ಸಾಧ್ಯತೆಗಳು ಸಾಮಾನ್ಯದ್ದಲ್ಲ. ಇಂಥ ಸಾಧ್ಯತೆಗಳನ್ನೇ ನಾವು ‘ಜೀವಿಸುವುದು’ ಅಂತ ಕರೆಯುತ್ತೇವೆ. ಅಂಥವರಲ್ಲಿ ಶ್ರೀ ಕೆ ವಿ ತಿರುಮಲೇಶ್ ಕೂಡಾ ಒಬ್ಬರು ಅನ್ನುವುದು ಅವರು ಬರೆದ ಹಲವಾರು ಕವಿತೆಗಳಲ್ಲಿ ಕೆಲವೇ ಕೆಲವನ್ನು ಓದಿದರೂ ಸ್ಪಷ್ಟವಾಗಿ ಗಮನಕ್ಕೆ ಬಂದೇ ಬರುತ್ತದೆ, ಅವರ ಬದುಕಲ್ಲಿ ಕವಿತೆಯ ಪಾತ್ರವೇನು ಅನ್ನುವ ಒಂದು ಸಣ್ಣ ಪ್ರಶ್ನೆಗೆ ಉತ್ತರವಾಗಿ ನನಗೆ ದಕ್ಕಿದ ಸಂಗತಿಗಳನ್ನ ಇಟ್ಟು ನೋಡಿದಾಗ ಅನಿಸಿದ್ದೇನೆಂದರೆ, ಕವಿತೆ ಕೇವಲ ಬರೆದುಮುಗಿಸಿಬಿಡಬಹುದಾದ ವಿಷಯ ಆಗಿರಲಿಲ್ಲ ಶ್ರೀ ತಿರುಮಲೇಶ್ ಅವರಿಗೆ; ಅದೊಂದು ನಿರಂತರವಾದ ಸಂವಹನವಾಗಿತ್ತು,‌ಸಂವಹನವಾಗಿಯೇ ಇದೆ. ಬುದ್ಧಿ, ಅಂತರಂಗ ಹಾಗೂ ಬಾಹ್ಯ ಅಂಶಗಳ ನಡುವಿನ ಯಾವತ್ತಿನ ಮಥನವಾಗಿತ್ತು ಅದು. ಕವಿತೆ ಬರೆದ ಅದೆಷ್ಟೋ ದಿನಗಳ ನಂತರವೂ ಮತ್ತೆ ಅದೇ ವಿಷಯದ ಕುರಿತಾಗಿ ಇನ್ನೊಂದು ಕವಿತೆ ಅವರಲ್ಲಿ ಹುಟ್ಟಿಕೊಳ್ಳುತ್ತಿತ್ತು; ಅಂದರೆ, ಅದು ಅವರಲ್ಲಿ ಸತತವಾಗಿ ಜಾರಿಯಲ್ಲಿರುತ್ತಿತ್ತು. ಶ್ರೀ ತಿರುಮಲೇಶ್ ಅವರ ಈ ಎಂಭತ್ತನೇ ಜನುಮದಿನದ ಸಂದರ್ಭದಲ್ಲಿ ಹೀಗೆ ನನ್ನ ನೋಟದ ವ್ಯಾಪ್ತಿಗೆ ಸಿಕ್ಕಿದ ಕೆಲವು ಅಂಶಗಳನ್ನ ದಾಖಲಿಸುವ ಸಂಭ್ರಮದಲ್ಲಿ ಭಾಗಿಯಾಗಬಹುದಾದ ಅವಕಾಶಕ್ಕೆ ಕೃತಜ್ಞನಾಗಿದ್ದೇನೆ.

ಒಂದೇ ವಿಷಯವನ್ನು ಎರಡು ಭಿನ್ನ ಕವಿತೆಗಳನ್ನಾಗಿಸುವ ವಿಶಿಷ್ಟ ಪದ್ಧತಿಯನ್ನ ಶ್ರೀ ತಿರುಮಲೇಶರು ಪಾಲಿಸಿದ್ದನ್ನ ಅವರ ಹಲವು ಕವಿತೆಗಳಲ್ಲಿ ಕಾಣಬಹುದು. ನಮ್ಮ ನಂಬಿಕೆಗಳಲ್ಲಿ ಸತ್ತ‌ಮೇಲಿನ ರೂಪಗಳ ಕುರಿತಾಗಿ ಬೇರೆ ಬೇರೆ ಅಭಿಪ್ರಾಯಗಳಿವೆ. ಸಂತೃಪ್ತ ಜೀವನ ನಡೆಸಿದವರು ಮನುಷ್ಯ ದೇಹದಿಂದ ಅಥವಾ ಇತರ ಯಾವುದೇ ದೇಹದಿಂದ ಮುಕ್ತರಾಗುತ್ತಾರೆ, ಅವರಿಗೆ ಪುನರ್ಜನ್ಮ ಅನ್ನುವುದು ಇರಲಾರದು. ಇನ್ನೂ ತೀರದ ಆಸೆ ಇದ್ದವರು, ಇದೇ ಲೋಕದಲ್ಲಿ ದೇಹದಿಂದ ಬೇರಾಗಿ ಬೇರೆ ಬೇರೆ ರೂಪಗಳಲ್ಲಿ ಕಾಡುತ್ತಾರೆ ಅನ್ನುವ ಒಂದಷ್ಟು ನಂಬಿಕೆಗಳ ಮಧ್ಯ ಮಾನವ ಜನಾಂಗ ಬೆಳೆದುಬಂದಿದೆ. ಇದು ಕೇವಲ ನಮ್ಮ ದೇಶಕ್ಕೆ ಸೀಮಿತ ಅಲ್ಲ, ಎಲ್ಲಾ ನಾಗರಿಕತೆಯಲ್ಲೂ ಅದರದ್ದೇ ಆದ ಅಭಿವ್ಯಕ್ತಿಯಲ್ಲಿ ಈ ನಂಬಿಕೆ ಇದೆ. ಇದೇ ವಿಷಯವನ್ನ ಬೇರೆ ದೃಷ್ಟಿಕೋನದಿಂದ ಎರಡು ಕವಿತೆಗಳಲ್ಲಿ ಶ್ರೀಯುತರು ನೋಡುತ್ತಾರೆ. ನಿತ್ಯದ ಒಡನಾಟದ ಎಲ್ಲಾ ಜಾಗದಲ್ಲೂ ಸತ್ತವರ ನೆರಳು ಇರಬಹುದಾದ ಸಾಧ್ಯತೆಗಳ ಮೂಲಕ ಕವಿತೆ ತೆರೆದುಕೊಳ್ಳುತ್ತದೆ, ಅದರ ಶೀರ್ಷಿಕೆ ‘ಸತ್ತವರಿಂದ ನಾವು ಬಯಸುವುದೇನನ್ನು?’. ಆಸೆಗಳಿಂದ ವಿಮುಖನಾಗಬಹುದಾದ ಸಾಧ್ಯತೆ ಮನುಷ್ಯನಿಗೆ ಸುಲಭವಾಗಿ ದಕ್ಕುವಂಥದ್ದಲ್ಲ, ಹಾಗೇ ದೇಹಾಂತವಾದ ಬಳಿಕ ಮತ್ತೆ ನೆನಪುಗಳನ್ನ, ಸಹಜವಾಗಿ ತಾವು ಒಡನಾಡಿದ ಜಾಗಗಳನ್ನ, ವ್ಯಕ್ತಿಗಳನ್ನ ಹುಡುಕಿಕೊಂಡು ಬರಬಹುದಾದಲ್ಲಿ, ಒಂದು ಕಳಕಳಿಯಿದೆ ಹಿರಿಯರೇ ಅನ್ನುವ ಒಂದು ಆಪ್ತ ಧ್ವನಿ ಈ ಕವಿತೆಯಲ್ಲಿದೆ. ಅರಳಿದ ಹೂವನ್ನ ಹಾಗೆಯೇ ಇರಗೊಡಿ, ಮತ್ತೆ ಆ ಹೂವು ಇನ್ಯಾವುದೋ ಶ್ವಾಸವಿರದ ದೇಹವನ್ನ ಅಲಂಕರಿಸುವುದು ಬೇಡ, ಹಾಗೇ ಓಡಾಡುವುದೇ ಬೇಡ ಅನ್ನುವುದಿಲ್ಲ, ಆದರೆ ಗಮನವಿರಲಿ ಅನ್ನುವಾಗಿನ ಆ ವಿನಂತಿ ಅಶಕ್ತನೊಬ್ಬನ ಪ್ರಾರ್ಥನೆಯಾಗದೇ, ಅದು ಮನುಷ್ಯ ಮನುಷ್ಯನೊಂದಿಗಿನ ಆತ್ಮೀಯ ಸಂಬಂಧದ ಗುರುತಾಗಿ ಕಂಡಿತು. ಇದೇ ಈಗ ‘ಸತ್ತವರು ನಮ್ಮಿಂದ ಬಯಸುವುದೇನನ್ನು’ ಅಂತ ಪ್ರಶ್ನಿಸಿಕೊಂಡಾಗ, ಸಿಗಬಹುದಾದ ಉತ್ತರಗಳ ಸಾಧ್ಯತೆಗಳನ್ನ ಕವಿ ಹೇಳುವುದು ಹೀಗೆ; ಯಾರೋ ಒಬ್ಬರು ಸತ್ತಾಗ ಬಹುತೇಕವಾಗಿ ಅವರ ಕುರಿತಾಗಿ ಸಾಧ್ಯವಾದಷ್ಟು ಒಳ್ಳೆಯ ಮಾತುಗಳನ್ನೇ ಸಮಾಜ ಆಡುತ್ತದೆ. ಯಾಕೆಂದರೆ ಸಾವು ಎಲ್ಲಾ ದ್ವೇಷವನ್ನೂ, ಈರ್ಷೆಯನ್ನೂ, ಮನಸ್ತಾಪವನ್ನೂ ಕರಗಿಸುವ, ಇವುಗಳೆಲ್ಲದರಿಂದ ವ್ಯಕ್ತಿಗಳನ್ನು ಆಚೆತರುವ ಒಂದು ಬಿಂದು. ಆದರೂ ಒಮ್ಮೊಮ್ಮೆ ಹೇಗೂ ಆ ವ್ಯಕ್ತಿ ಮತ್ತೆ ಬಂದು ಉತ್ತರಿಸುವುದಿಲ್ಲ ಅಥವಾ ಪ್ರಶ್ನಿಸುವುದಿಲ್ಲ ಅನ್ನುವ ಸತ್ಯದಿಂದ ಹುಟ್ಟಿಕೊಳ್ಳಬಹುದಾದ ಬಣ್ಣದ ಕತೆಗಳ ಕುರಿತಾಗಿ ಕವಿ ಹೇಳುತ್ತಾರೆ; ಆದರೆ ನಿಜವಾಗಿಯೂ ಸಾವು ಒಂದು ಪ್ರಯಾಣ. ಅದೊಂದು ಎಲ್ಲವುಗಳಿಂದ ಆಚೆ ನಿಂತು ನೋಡಬೇಕಾದ ಸಂಗತಿ. ಮುಕ್ತನಾಗುವ ಒಂದು ಪ್ರಕ್ರಿಯೆ ಅನ್ನುವುದನ್ನು ಹೇಳುತ್ತಾರೆ.

‘ವಾನ್‍ಗಾಫ್‍ನ ಬೂಟುಗಳು’ ಅನ್ನುವ ಕವಿತೆಯಲ್ಲಿ ಕವಿ, ಕಲೆಯನ್ನ ಮತ್ತು ಕಲಾವಿದನನ್ನ ಒಂದಷ್ಟು ನಿರ್ದಿಷ್ಟ ವಿಷಯಗಳಿಗಷ್ಟೇ ಸೀಮಿತಗೊಳಿಸುವ ವಿಮರ್ಶಕರನ್ನ ಕಟುವಾಗಿ ನೋಡುತ್ತಾರೆ. ನೀವು ಕೇಳಬಹುದು, ಈ ಥರದ್ದೊಂದರ ಅಗತ್ಯವಿತ್ತೇ ಎಂದು. ಮೊದಲು ಇದು ಯಾಕಾಗಿ ಬಂದಿರಬಹುದು ಅನ್ನುವುದನ್ನ ತಿಳಿಯುವ ಪ್ರಯತ್ನ ಮಾಡಿದರೆ ಇದರ ಪ್ರಸ್ತುತತೆಯ ಅನಿವಾರ್ಯತೆ ಖಂಡಿತವಾಗಿ ಅರಿವಾಗುತ್ತದೆ. ಯಾವುದೇ ಕಲಾಪ್ರಕಾರವಾಗಿರಲಿ, ನಮ್ಮಲ್ಲಿ ಇಂಥದ್ದೇ ವಿಷಯಗಳ ಅಭಿವ್ಯಕ್ತಿಯಾದಲ್ಲಿ ಮಾತ್ರವೇ ಅವರನ್ನ ಆ ಪ್ರಪಂಚಕ್ಕೆ ಸೇರಿಸಿಕೊಳ್ಳಬಹುದಾದ ಸಾಧ್ಯತೆಗಳೇ ಹೆಚ್ಚು. ಇದು ಇಂದು ನಿನ್ನೆಯದಲ್ಲ; ಹಲವು ತಲೆಮಾರುಗಳಿಂದ ನಡೆದುಬಂದ ಪದ್ಧತಿ ಅನ್ನುವುದು ಹೊಸ ವಿಷಯವೇನಲ್ಲ. ಈ ಕವಿತೆಯಲ್ಲಿ ಒಬ್ಬ ಕಲಾವಿದ ಆತನ ಅಭಿವ್ಯಕ್ತಿಗೆ ಬಳಸಿಕೊಂಡ ವಸ್ತುಗಳ ಕುರಿತಾಗಿಯೇ ವಿಮರ್ಶಕರಿಗೆ ಸಮ್ಮತಿಯಿಲ್ಲ. ಅವು ಕಲೆಯ ಪರಿಧಿಯಲ್ಲಿ ಬರುವುದಿಲ್ಲವೆಂದೇ ವಿಮರ್ಶಕರು ಹೇಳಿದಾಗ, ಆತ ಏನು ಮಾಡಬಹುದು; ಕಲಾವಿದನಿಗೆ ಕಲೆಯನ್ನ ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ. ಕಲಾವಿದ ಒಂದು ದಿನ ಸಾಯಲೇಬೇಕು, ಆದರೆ ಕಲಾಕೃತಿ? ಅನ್ನುವುದನ್ನ ಹೇಳುತ್ತಲೇ ಒಂದು ನೇರವಾದ ಉತ್ತರವನ್ನ ದಾಟಿಸಿದ್ದಾರೆ ಕೆಲವೇ ಕೆಲವು ವಿಷಯಗಳನ್ನ ಮಾತ್ರವೇ ಅಭಿವ್ಯಕ್ತಿಗೆ ಬಳಸಿದಲ್ಲಿ ಮಾತ್ರವೇ ಕಲಾವಿದ ಅನ್ನುವ ವಿಮರ್ಶಕರಿಗೆ. ಇದು ಎಲ್ಲಾ ವಿಮರ್ಶಕರ ಕುರಿತಾಗಿನ ಒಟ್ಟೂ ಅಭಿಪ್ರಾಯವೆಂದುಕೊಂಡರೆ ಗ್ರಹಿಕೆ ತಪ್ಪಾದೀತು, ನೆನಪಿರಲಿ !

ಇಡೀ ಚರಿತ್ರೆಯನ್ನ ನಾವು ಗಮನಿಸುತ್ತಾ ಹೋದಲ್ಲಿ, ಮನುಷ್ಯನಿಗೆ ಅಮರನಾಗಿ ಉಳಿಯುವ ಹಂಬಲ ಎಲ್ಲಾ ಕಾಲಘಟ್ಟದಲ್ಲೂ ಇರುವಂಥದ್ದೇ. ಈ ಹೊತ್ತು, ವಿಜ್ಞಾನ ಅದೆಷ್ಟೇ ಮುಂದುವರೆದಿದ್ದರೂ ನಮ್ಮ ಸಂಶೋಧನೆಗಳೆಲ್ಲವೂ ಚಿರಂಜೀವಿಯಾಗುವುದರ ಕುರಿತಾಗಿ ಇದೆಯೇ ಹೊರತೂ, ಸಿಕ್ಕಿದ ಬದುಕನ್ನ ಆನಂದಪೂರ್ಣವಾಗಿ ಅನುಭವಿಸುವುದರಲ್ಲಿ ಚೂರು ನಾವು ಹಿಂದೆಯೇ ಅನ್ನಬಹುದೇನೋ. ಎಲ್ಲಾ ನಾಗರಿಕತೆಗಳಲ್ಲೂ, ಅದನ್ನು ಆಳಿದ ರಾಜರುಗಳಿರಬಹುದು ಅಥವಾ ಮುಖ್ಯಸ್ಥರಿರಬಹುದು, ಎಲ್ಲರಿಗೂ ತಮ್ಮ ಹೆಸರು ಆಚಂದ್ರಾರ್ಕವಾಗಿ ಇರಲಿ ಅನ್ನುವ ಆಸೆಯೂ, ಆ ಉದ್ದೇಶವನ್ನ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನವೂ ಇತ್ತು. ಯಾವುದೇ ದೇಶದ ಮೇಲೆ ದಾಳಿಯಾದಾಗ, ಮೊದಲು ಹಿಂದಿನ ಈ‌ ಎಲ್ಲಾ ದಾಖಲೆಗಳನ್ನು ನಾಶಮಾಡುವುದರ ಹಿಂದಿನ ಮನಸ್ಥಿತಿ ಕೂಡಾ ಇದೇ. ‘ಅಖಿಟೋಪ’ ಅನ್ನುವ ಕವಿತೆ ಈ ವಿಷಯವನ್ನೇ ಪ್ರಸ್ತುತಪಡಿಸುತ್ತದೆ. ಇಂಥದ್ದೇ ಇನ್ನೊಂದು ಕವಿತೆ, ‘ಒಬ್ಬ ವಿಯೆಟ್ನಾಮೀ ಸುಂದರಿಗೆ’. ವಿಯೆಟ್ನಾಮ್ ಒಂದು ಅಪರೂಪದ ಸೌಂದರ್ಯದ ದೇಶ. ಪ್ರಕೃತಿ ತುಸು ಹೆಚ್ಚೇ ಅಲ್ಲಿ ನೆಲೆಸಿದ್ದಾಳೆ ಅನ್ನುವ ಸಹಜ ಭಾವ ಮೂಡುವುದರಲ್ಲಿ ಸಂದೇಹವೇ ಇಲ್ಲ; ಅಂಥ ಸುಂದರ ನಾಡು ಅದು. ಈ ನಾಡಿನ ಮೇಲೆ ಪದೇ ಪದೇ ದಾಳಿಯಾದಾಗ, ಅಲ್ಲಿನ ಸೂರ್ಯೋದಯ ಸೂರ್ಯಾಸ್ತ, ಹಕ್ಕಿಯ ಚಿಲಿಪಿಲಿ, ಪ್ರಾತಃಕಾಲದ ಸ್ವಪ್ನ ಕೂಡಾ ಅಸ್ತವ್ಯಸ್ತವಾಯಿತು ಅನ್ನುತ್ತಾ ಅಲ್ಲಿನ ಯುದ್ಧದ ಚಿತ್ರಣವನ್ನು ತಮ್ಮದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೆಷ್ಟೇ ವಿಯೆಟ್ನಾಮಿನ ಸೌಂದರ್ಯವನ್ನು ಹಾಳು ಮಾಡಲು ಯತ್ನಿಸಿದರೂ, ಸೃಷ್ಟಿ ವಿಯೆಟ್ನಾಮ್ ಮೇಲೆ ಪ್ರೀತಿಯ ಕೈಯಾಡಿಸುತ್ತಲೇ ಇತ್ತು ಅಂತ ಹೇಳುತ್ತಾರೆ. ಒಂದು ಜಾಗತಿಕ ಘಟನೆಗೆ ಕವಿಯ ಸ್ಪಂದನೆ ಇಲ್ಲಿ ಹೃದ್ಯವಾಗಿದೆ.

ಬರಹಗಾರನಿಗೆ ಮುಖ್ಯವಾಗಿ ಬೇಕಾಗುವುದು ತನ್ನ ಬರೆಹದ ವಸ್ತು ಇರುವ ಪರಿಸರದ ಕುರಿತಾಗಿನ ಅರಿವು ಹಾಗೂ ಆ ಪರಿಸರದ ಸೂಕ್ಷ್ಮಗಳ ಅವಲೋಕನ. ಅಂಥದ್ದೊಂದು ಅವಲೋಕನಕ್ಕೆ ಅಪ್ಪಟ ಉದಾಹರಣೆ ‘ಬಸ್ಸಿನಿಂದ ಇಳಿದವಳಿಗೆ’ ಕವಿತೆ. ತನ್ನ ಮನೋಭೂಮಿಕೆಯಲ್ಲಿ ಕಟ್ಟಿಕೊಂಡ ನಗರ ಹಾಗೂ ಅಲ್ಲಿ ಅಪರಿಚಿತೆಯಾಗಿ ಬಂದಿಳಿಯುವ ಹೆಣ್ಣಿನ ಕುರಿತಾಗಿನ ಕವಿತೆ ಇದು. ಅಜ್ಞಾತ ಜಾಗದಲ್ಲಿ ಬಂದಿಳಿದಾಗ ಇರುವ ಹಿಂಜರಿಕೆ, ಅದರಲ್ಲೂ ಹೆಣ್ಣಾಗಿದ್ದಲ್ಲಿ ಅವಳ ದೈಹಿಕ ಮತ್ತು ಆಂತರಿಕ ತಲ್ಲಣಗಳನ್ನ ಹೇಳುತ್ತಾ, “ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೋ ಹೊರಟುಹೋಯಿತು. ಎದ್ದ ಧೂಳಿನಲ್ಲಿ ಯಾರೋ ಹಿಂದಿರುಗಿ ನೋಡಿದರು”, ಇಂಥದ್ದೊಂದು ಸಾಲು ನುಸುಳುತ್ತದಲ್ಲಾ, ಇದು ಕವಿಯ ಚಿತ್ರಕ ಶಕ್ತಿ. ಕವಿತೆ ನಮಗೆ ಹತ್ತಿರದ್ದು ಅನಿಸಿಕೊಳ್ಳುವುದು ಇಂಥ ವಿಸ್ಮಯಗಳಿಂದ. ಈ ಥರದ ಘಟನೆಗಳನ್ನು ನಾವೂ ನೋಡಿರುತ್ತೇವೆ, ಅದೆಷ್ಟೋ ಸಲ ಬಹುಶಃ ನಾವೂ ಆ ಪಾತ್ರವಾಗಿರುತ್ತೇವೆ, ಅದು ತೀರಾ ಸಹಜ ಕೂಡಾ. ಆದರೆ, ಅದು ಕವಿತೆಯಾದಾಗ ಅದಕ್ಕೆ ಸಿಗಬಹುದಾದ ವ್ಯಾಪ್ತಿ ಬೇರೆ. ಹಾಗೇ ನಾವೇ ಕಟ್ಟಿಕೊಂಡ ನಮ‌್ಮ ಕಲ್ಪನೆಗಳಲ್ಲಿ ನಾವು ಸುಖಿಸುವುದನ್ನ, ಹಾಗೂ ಒಂದು ಅಸಹಾಯಕತೆಯ ಕೂಗನ್ನೂ ಈ ಕವಿತೆ ಒಳಗೊಂಡಿದೆ. ಇದರ ಹಿಂದೆಯೂ, ಮುಂದೆಯೂ ಇನ್ನಷ್ಟು ಕತೆಗಳು ಸೇರಿಕೊಳ್ಳಬಹುದು, ಅದು ಈ ಕವಿತೆ ತೆರೆದಿಡಬಹುದಾದ ಅವಕಾಶ.

ಇದೇ ಥರದ ‘ಆಗಮನ’ದ ಕುರಿತಾಗಿ ಇನ್ನೊಂದು ಕವಿತೆಯಿದೆ. ಮೊದಲೇ ಹೇಳಿದ್ದೆನಲ್ಲಾ, ಒಂದೇ ವಿಷಯದ ಕುರಿತಾಗಿ ಬೇರೆ ಬೇರೆ ಕವಿತೆಗಳಿವೆ ಅಂತ. ಹೇಗೆ ಯಾವುದೋ ಬಸ್ಸಲ್ಲಿ ಅಜ್ಞಾತ ಜಾಗಕ್ಕೆ ಬಂದಿಳಿದ ಹೆಣ್ಣಿನ ಸ್ಥಿತಿಯನ್ನು ಹೇಳಿದರೋ ಹಾಗೆಯೇ ವಿಮಾನದಲ್ಲಿ, ತನ್ನವರಿರುವ ಜಾಗಕ್ಕೆ ಬಂದಿಳಿಯುವ ಗಂಡಿನ ಸ್ಥಿತಿಯನ್ನೂ ಕವಿತೆಯಲ್ಲಿ ಹಿಡಿದಿಟ್ಟಿದ್ದಾರೆ ಕವಿ. ಇದು ಕೇವಲ ಅಷ್ಟಕ್ಕೇ ಸೀಮಿತವಾದ ಕವಿತೆ ಅಲ್ಲ, ಇಲ್ಲಿ ಎರಡು ಭಿನ್ನ ಜಗತ್ತುಗಳ ಮುಖಾಮುಖಿಯಿದೆ. ವಿಮಾನ ಪ್ರಯಾಣದಲ್ಲಿ ನೆಲದ ಕಡೆ ನೋಡಿದಾಗ ಸೃಷ್ಟಿಯ ಅಗಾಧತೆಯ ಅರಿವಾಗುತ್ತದಲ್ಲಾ, ಅದರ ಜೊತೆಗೆ ಐಷಾರಾಮಿ ಜಗತ್ತಿನಿಂದ ನೆಲದ ಮೇಲೆ ಕಾಲಿಟ್ಟಾಗ ಒಂದು ವಾಸ್ತವದ ಜಗತ್ತು ತೆರೆದುಕೊಳ್ಳುತ್ತದಲ್ಲಾ, ಅವೆರಡರ ನಡುವಿನ ತಾಕಲಾಟಗಳೇ ಈ ಕವಿತೆಯ ವಸ್ತು. ಒಂದಷ್ಟು ಹೊಸ ರೂಪಕಗಳನ್ನೂ ಕಾಣಬಹುದು ಇಲ್ಲಿ; “ನೆಲ ಬಿದ್ದಿದೆ ಚಾಪೆಯ ಹಾಗೆ, ಮನೆ ಮರ ಕಾರ್ಖಾನೆ ಮರೆತುಬಿಟ್ಟ ಆಟಿಕೆಗಳಂತೆ, ಮೊಡವೆಗಳಂಥ ಬಂಡೆಗಳು”

ಎರಡು ಪ್ರಪಂಚಗಳ ಕುರಿತಾಗಿ ಹೇಳುತ್ತಿರುವಾಗಲೇ ಅವರ ಇನ್ನೊಂದು ಕವಿತೆ ನೆನಪಾಗುತ್ತದೆ, ಅದರ ಹೆಸರು “ಹೊರತು”. ಅದು ಶುರುವಾಗುವುದು ಹೀಗೆ, ” ಈ ಸೆಲ್ಲಿನೊಳಗಿಂದ ನೋಟವೇ ಬೇರೆ”. ಜೈಲು-ಹೇಗೆ ಬೇಕಾದರೂ ಗ್ರಹಿಸಿಕೊಳ್ಳಬಹುದು;ನಮಗೆ ನಾವೇ ನಿರ್ಮಿಸಿಕೊಂಡಿದ್ದು ಅಥವಾ ಯಾವುದೋ ಅಪರಾಧಕ್ಕೆ ಖೈದಿಯಾಗಿ ಹೋಗಬಹುದಾದ ಶಬ್ದಾರ್ಥದ್ದೇ ಆಗಿರಬಹುದು. ಎರಡೂ ವರ್ತಮಾನದ ಪ್ರಪಂಚದಿಂದ ನಮ್ಮನ್ನು ವಿಮುಖರನ್ನಾಗಿಸುತ್ತವೆ ಹಾಗೂ ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸಬಹುದಾದ, ಅವುಗಳನ್ನು ಅನುಭವಿಸಬಹುದಾದ ಸಾಧ್ಯತೆಗಳನ್ನು ಮೊಟಕುಗೊಳಿಸುತ್ತವೆ. ಒಂದು ದೀರ್ಘಕಾಲದ ಪರಿಧಿ ಎಂಥವರನ್ನೂ ಕಾಡುತ್ತದೆ. ಕಾಲ ಎಲ್ಲರನ್ನೂ ಜರ್ಝರಿತರನ್ನಾಗಿಸುತ್ತದೆ. ಯಾವುದೇ ಗೋಡೆಗಳಿಲ್ಲದ ಆಕಾಶ, ಅದರ ಕೆಳಗಿನ ಜಗತ್ತಿನ ಹರವು ಇವುಗಳನ್ನ ನೆನೆಸಿಕೊಳ್ಳುವ ಪುಟ್ಟ ಕೋಣೆಯ ಕುರಿತಾದ ಮಾತುಗಳು ಈ ಕವಿತೆ. ಬಯಲಿನಂತಿರುವ ಹೊರ ಜಗತ್ತು ಹಾಗೂ ಅಲ್ಲಿನ ಗಾಳಿಗೂ ಇರಬಹುದಾದ ಬೇರೆ ಬೇರೆ ಗಂಧ, ಈ ಎಲ್ಲಾ ಧ್ವನಿಗಳು ಕಾರಾಗೃಹದ ಗೋಡೆಗಳ ಬಡಿದು,ಅವು ಇಲ್ಲಿ ಒಳಗಡೆ ತೆಗೆಯುವ ಧ್ವನಿಗಳೇ ಬೇರೆ ಅನ್ನುವಾಗ, ಗೋಡೆ ಕೂಡಾ ಒಂದು ಪಾತ್ರವಾಗಿ ಕವಿತೆಯಲ್ಲಿ ಉಸಿರಾಡುತ್ತದಲ್ಲಾ! ಇವಿಷ್ಟೇ ಆಗಿದ್ದರೆ ಅದು ಬಹುಶಃ ಒಳಹೊರಗಿನ ಮಾತಾಗಿ ಉಳಿದುಹೋಗುತ್ತಿತ್ತು. ಆದರೆ ಒಳಗಿರುವ ಒಳಗನ್ನೂ ಮುಟ್ಟಬೇಕಾದುದು ಕವಿಯ ಮತ್ತು ಕವಿತೆಯ ಕರ್ತವ್ಯ ಅನ್ನುವುದು ಇಲ್ಲಿನ ಇನ್ನೊಂದು ಮುಖ್ಯ ಅಂಶ. ಈ ಎಲ್ಲಾ ದ್ವಂದ್ವಗಳೂ, ತಲ್ಲಣಗಳೂ ದಾಖಲಾಗುವುದು ಅವರವರ ಅಂತರಂಗದಲ್ಲಿ. ಮನುಷ್ಯ ಅವಸ್ಥೆಗಳ‌ ನಡುವೆ ನಡೆವ ಈ ಭಾವೋನ್ಮಾದವೇ ಬೇರೆ ಅನ್ನುವುದು ಈ ಕವಿತೆಯ ಧ್ವನಿ.

ಇದೇ ಥರ ಮತ್ತೆ ಬೇರೆ ಬೇರೆ ಪ್ರಪಂಚಗಳ ಕುರಿತಾಗಿ ಮಾತನಾಡುವ ಕವಿತೆ ‘ಕಿಟಕಿ’. ಇಲ್ಲಿ ಕಿಟಕಿಯೇ ಈ ಎರಡು ಜಗತ್ತಿನ ಸಮಾಗಮದ ಬಿಂದು. ಉದ್ದಕ್ಕೆ ಏಳು, ಅಡ್ಡಕ್ಕೆ ಐದು ಸರಳುಗಳ ಈ ಕಿಟಕಿ ನನಗೆ ಕಾಣಿಸುತ್ತಿರುವುದು ಒಂದು ತಿಂಗಳಿಗೆ ಇರುವ ರೂಪಕವಾಗಿ. ಒಮ್ಮೆ ‘ಆಹ್ಞಾ’ ಅನ್ನದೇ ಹೇಗೆ ಇರಲಾದೀತು ಈ ಪದಬಳಕೆಗೆ ನೀವೇ ಹೇಳಿ! ನಿತ್ಯದ ಬದುಕಿನಲ್ಲಿ ಪ್ರಭಾವಿಸಬಹುದಾದಂಥ ಒತ್ತಡಗಳು ಹಾಗೂ ಅದರಿಂದ ನಮ್ಮ ಕಿಟಕಿಯೊಳಗಿನ ನೆಮ್ಮದಿ ಕದಡುವ, ಜೊತೆಗೆ ಪ್ರಶಾಂತತೆ ಮತ್ತು ಗದ್ದಲಗಳ ಬೆರೆಯುವಿಕೆಯ ಕ್ಷಣಗಳ ಕುರಿತಾದ ಕವಿತೆ ಇದು.

ಇನ್ನು ಸ್ತ್ರೀ ಸಂವೇದನೆಯ ಕವಿತೆಗೆ ಒಂದು ಉದಾಹರಣೆಯೆಂದರೆ, ‘ರವಿವರ್ಮನ ಹೆಂಗಸರು’. ಹೆಣ್ಣು, ಗಂಡಿನ ಆಸೆಯಂತೆ, ಅಭಿರುಚಿಯಂತೆ ತನ್ನನ್ನ ತಾನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನ ಕಾಲದ ಹೆಸರಿನಲ್ಲಿ ಸಮಾಜ ತಂದಿಟ್ಟಿತು ಅನ್ನುತ್ತಲೇ ಕವಿತೆಯ ಆರಂಭ. ಹೆಣ್ಣಿನ ಒಳಗನ್ನು ಅರಿತವರು ಯಾರೂ ಇಲ್ಲ ಅನ್ನುವ ಉಕ್ತಿ ಯಾವತ್ತಿನದ್ದೇ ಆದರೂ ಆ ಥರದ ಪ್ರಯತ್ನಗಳು ಗಂಡಿಂದ ಎಷ್ಟರ ಮಟ್ಟಿಗೆ ಆಗಿದೆ ಅನ್ನುವುದು ಬಹುದೊಡ್ಡ ಚರ್ಚೆಯಾಗಬಹುದು. ಇದ್ದುದನ್ನ ಇದ್ದಂತೆ ಹೇಳುವುದಕ್ಕೆ ಬಣ್ಣಗಳ ಹಂಗೇಕೆ ಅನ್ನುವ ದಿಟ್ಟ ಪ್ರಶ್ನೆ ಗಂಡಸಿನ ಮನಸ್ಸನ್ನು ಒಮ್ಮೆ ಆವರಿಸಿದರೆ ಸಾಕು, ರವಿವರ್ಮನ ಹೆಂಗಸರು ಆ ಕ್ಷಣದ ಒಲವನ್ನು ಒಪ್ಪಿಕೊಳ್ಳುತ್ತಾರೆ.

ಶ್ರೀ ತಿರುಮಲೇಶ್ ಅವರು ಕವಿತೆಗೆ ಇರಬಹುದಾದ ಸಾಧ್ಯತೆಗಳನ್ನ ಅನ್ವೇಷಿಸುತ್ತಲೇ ಹೋದರು. ಅದರ ಬೇರನ್ನೂ, ಟೊಂಗೆಯನ್ನೂ, ಚಿಗುರನ್ನೂ ಹುಡುಕಿ ಹೊರಟವರಂತೆ. ಪಾಶ್ಚಿಮಾತ್ಯ ಹಾಗೂ ಭಾರತೀಯ ಸಾಹಿತ್ಯ ಪ್ರಪಂಚದ ಒಂದು ಕೊಂಡಿಯಾಗಿ, ಹಾಗೂ ಕೊಡುಕೊಳ್ಳುವಿಕೆಯ, ಸಮೀಕರಿಸುವಿಕೆಯ ಮಹತ್ವದ ಭಾಗವಾಗಿ ಕಾಣುತ್ತಾರೆ. ಅವರ ‘ಬೇರು’ ಕವಿತೆ ಇದಕ್ಕೊಂದು ಸಾಕ್ಷಿ. ದೂರದ ದೇಶದಲ್ಲಿ ಒಂದಷ್ಟು ವರ್ಷ ಇದ್ದು, ಅದೆಷ್ಟೇ ದೂರ ಹೋದರೂ ಬೇರು ಇರುವುದು ನಮ್ಮನೆಯ ತೋಟದಲ್ಲೇ, ಅಲ್ಲೇ ಅಗೆಯಬೇಕು ಹೊಕ್ಕುಳ ಬಳ್ಳಿಯ ತದಡುವುದಕ್ಕೆ ಅನ್ನುತ್ತಾರೆ. ಇಷ್ಟಾದಮೇಲೆ ಬರೀ ಮೂಲವನ್ನ ತಿಳಿದರೆ ಸಾಲದು, “ದಹಿಸು ಪಶ್ಚಾತ್ತಾಪದಂತೆ, ಹುಟ್ಟು ಮನಸ್ಸಾಕ್ಷಿಯಂತೆ, ಏಳು ಎಚ್ಚರದಂತೆ”

ಧಾವಂತದ ಬದುಕಿನಲ್ಲಿ ಅದೆಷ್ಟೋ ಮಾತುಗಳನ್ನ ನಾವು ಹೇಳಲಾಗುವುದೇ‌ ಇಲ್ಲ. ನಾಳೆ ಹೇಳಿದರಾಯಿತು ಅನ್ನುತ್ತಲೋ, ಹೇಳಬೇಕು ಅನ್ನುವುದನ್ನ ಮರೆಯುತ್ತಾ ನೆನಪಿಸಿಕೊಳ್ಳುತ್ತಾ ದಿನ ಕಳೆಯುತ್ತಲೋ ಇದ್ದುಬಿಡುತ್ತೇವೆ. ಆದರೆ, ಕೊನೆಗೊಮ್ಮೆ ಆ ಒಂದು ದಿನ ಬರುತ್ತದಲ್ಲಾ , ಒಂದು ಬಿಳಿ ವಸ್ತ್ರ ನಮ್ಮನ್ನ ಸುತ್ತಿಕೊಳ್ಳುವ ದಿನ, ಆ ದಿನ ಇಷ್ಟು ದಿನ ಹೇಗೋ ಬದುಕಿದ್ದ ಮಾತು ಅನಾಥವಾಗುತ್ತದೆ ಅಂತ ಅವರ ಹೇಳಬೇಕೆಂದಿದ್ದು’ ಕವಿತೆ ಹೇಳುತ್ತದೆ.

ಶ್ರೀ ತಿರುಮಲೇಶ್ ಅವರು ಎಲ್ಲದಕ್ಕೂ ಕವಿತೆ ಬರೆದರು ಅಂತನ್ನಿಸಿದರೆ, ಅವರು ಕಾವ್ಯವನ್ನ ಅಷ್ಟು ಉಸಿರಾಡಿದರು ಅನ್ನುವುದಕ್ಕೆ ಅದು ಪ್ರತ್ಯಕ್ಷ ಸಾಕ್ಷಿಯಾಗುತ್ತದೆ. ಯಾವುದೋ ಒಂದು ಪುಸ್ತಕ ಓದಿ ಮುಗಿಸಿದ ಕೂಡಲೇ ಅದರ ಬಗ್ಗೆ ಕವಿತೆ ಬರೆದವರು ಅವರು! ಯಾವುದೇ ಬರೆಹಗಾರನಿಗೆ ಅವನ ಕುರಿತಾಗಿ ಮಾತಾಡುವುದಕ್ಕಿಂತ, ಅವನ ರಚನೆಗಳ ಕುರಿತಾಗಿ ಮಾತಾಡಿದಾಗ ಅದೊಂದು ತೆರನಾದ ಸಂಭ್ರಮ. ಬಯಲಿನಲ್ಲಿ ಆಟವಾಡಲಿಕ್ಕೆ ಬಿಟ್ಟ ಮಗುವಿನ ಕಾಳಜಿ ಸಮಾಜದ್ದೂ ಆಗಿರಬೇಕು ಅನ್ನುವ ಆಶಯ ಹೊಸ ಬಾಂಧವ್ಯವನ್ನ, ಮನುಷ್ಯ ಸಂಬಂಧಗಳನ್ನ ಹುಟ್ಟುಹಾಕಬಲ್ಲದು ಅಂತಾದರೆ, ಈ ಪ್ರಪಂಚಕ್ಕೆ ಕವಿ ಕೊಟ್ಟ ಕವಿತೆಗಳ ಕುರಿತಾಗಿ ಗಮನಹರಿಸುವುದು ಕೂಡಾ ನಮ್ಮ ಜವಾಬ್ದಾರಿ ಅಂತ ನನಗನಿಸುತ್ತದೆ.

ಶ್ರೀ ತಿರುಮಲೇಶ್ ಅವರ ಕವಿತೆಗಳ ಬಗ್ಗೆ ಬರೆಯಹೊರಟಾಗ ಒಂದು ಅಳುಕಿತ್ತು, ಈಗಲೂ ಅದು ಇದೆ.. ಅವರ ಕವಿತೆಗಳನ್ಯಾವುದನ್ನೂ ವಿವರಿಸಲು ಹೋಗಬಾರದು; ಅಸಲಿಗೆ ಯಾರ ಕವಿತೆಯನ್ನೂ ವಿವರಿಸಬಾರದು! ತಿರುಮಲೇಶ್ ಎಂಬ ಆಕಾಶದ ಕೆಳಗೆ ಕೂತು, ಅಲ್ಲಲ್ಲಿ ಈ ಕ್ಷಣಕ್ಕೆ ನನಗೆ ಕಂಡ ಚುಕ್ಕಿಗಳೊಂದೊಂದಕ್ಕೇ ನನ್ನ ಪುಟ್ಟ ಬೆರಳುಗಳಿಂದ ಒಂದೊಂದೇ ಗೆರೆ ಎಳೆದು ನನ್ನ ಲೋಕವನ್ನ ಕಟ್ಟಿಕೊಳ್ಳುವಾಸೆ ಅಷ್ಟೇ. ಆ ನಕ್ಷತ್ರಗಳ ಗಾತ್ರ, ಅವುಗಳ ಆಕಾರ, ಗುಣ ಯಾವುದರ ಕಲ್ಪನೆಯೂ ನನಗಿಲ್ಲ. ಅದ್ಯಾವುದೋ ದೂರದಲ್ಲಿ ಇರುವೆಗಳಂತೆ ಚಲಿಸುವ ಮನುಷ್ಯರ ಮಧ್ಯವೇ ನಿಂತು ನೋಡಿದಾಗ ಬೆರಗಾಗಿದ್ದೇನೆ. ಯಾವುದೋ ನಕ್ಷತ್ರ ನನ್ನೆದೆಗೇ ಬೀಳಬಹುದು ಇಡಿಯಾಗಿ ಅಥವಾ ನಾನೇ ಮುಂದೊಂದು ದಿನ ಆಕಾಶಕ್ಕೆ‌ ನೆಗೆಯಬಹುದು. ಅಲ್ಲಿನ ಅಂಗಳದಿ ಕೂತು ಫಕೀರಪ್ಪನ ಕತೆ ಹೇಳುತ್ತಾ , ಒಂದು ಆಲದ ಮರದ ಕೆಳಗೆ ಚಿಟ್ಟೆ ಹಿಡಿಯುವುದ ಕಲಿಯಬಹುದು. ನನಗೂ ಇಬ್ಬರು ಸಿಗಬಹುದು. ಒಬ್ಬರು ಶಾಪಗ್ರಸ್ತ ನನ್ನ ಕತೆ ಕೇಳುವವರು ಹಾಗೂ ಕೇಳಿದ ಮೇಲೆ ಯಾವ ತೀರ್ಪು ಹೇಳದೇ ಮೂರು ಅವಸ್ಥೆಗಳ ಸಂತೆಯಲ್ಲಿ ನನ್ನ ಮುಖ ಮತ್ತು ಮುಖವಾಡವನ್ನೇ ಮುಖಾಮುಖಿಯಾಗಿಸುವವರು. ಕೆಲವರು ಮಂಡಿಯಲ್ಲಿ ಕವಿ ಬಂದಿದ್ದಾನೆ ಅಂತ ಪಿಳಿಪಿಳಿ ನೋಡಬಹುದು, ಹೇಳದೇ ಹೋದರೆ ತಪ್ಪಾಗುತ್ತದೆ, ಅವಧ ಇಲ್ಲಿಯೂ ಇದೆ, ಅಲ್ಲಿಯೂ!