ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಣದಂತೆ ಮಾಯವಾದನೋ..

ಪ್ರೊ.ಸಿದ್ದು ಯಾಪಲಪರವಿ

ಅನಿರೀಕ್ಷಿತ ಎಂಬ ಪದ ಮತ್ತೆ ಮತ್ತೆ ತನ್ನ ಅಸ್ತಿತ್ವವನ್ನು ಸಾವಿನ ಮೂಲಕ ಸಾಬೀತು ಮಾಡುತ್ತದೆ. ಬದುಕಿದ್ದು ಕೇವಲ ನಲ್ವತ್ತಾರು ವರ್ಷ ಆದರೆ ಬದುಕಿರುವಷ್ಟು ಕಾಲ ಬಣ್ಣದ ನಂಟನ್ನು ಬಿಡಲಿಲ್ಲ. ಆರೋಗ್ಯಪೂರ್ಣ ದೇಹ,ಮನಸು ಹೊಂದಿದ್ದ ಪುನೀತ್ ರಾಜ್‍ಕುಮಾರ್ ಅವರ ಹೃದಯ ಬಹು ಬೇಗನೇ ನಿಂತು ಹೋಗಿದೆ. ದೊಡ್ಮನೆಯ ಆಸರೆಯಿದ್ದರೂ ತನ್ನ ಸ್ವಂತಿಕೆ ಮತ್ತು ಸರಳತೆಯ ಮೂಲಕ ಚಿತ್ರರಂಗದ ಪವರ್ ಸ್ಟಾರ್ ಆಗಿ ಉಳಿದವರು. ನೃತ್ಯ, ಫೈಟು,ಹಾಡು ಹೀಗೆ ಎಲ್ಲ ರೀತಿಯ ಕಮರ್ಶಿಯಲ್ ಅಗತ್ಯಗಳ ಜೊತೆಗೆ, ಕಲಾತ್ಮಕ ಅಭಿನಯದಲ್ಲಿ ಛಾಪು ಮೂಡಿಸಿದ ಅಪ್ಪಟ ಕಲಾವಿದ.

ರಾಜಕುಮಾರ ಅವರ ಮುದ್ದಿನ ಮಗನಾಗಿ ಬೆಳೆದು, ತಂದೆಯೊಂದಿಗೆ ನಾಯಕನಾಗಿ ನಟಿಸಿದ ಹಿರಿಮೆ. ‘ಎರಡು ನಕ್ಷತ್ರಗಳು’ ಸಿನೆಮಾದಲ್ಲಿ ಯುವರಾಜ ಪಾತ್ರಧಾರಿ ಮಗನೊಂದಿಗೆ ಅತ್ಯಂತ ಖುಷಿಯಿಂದ ರಾಜ್ ಅಭಿನಯಿಸಿದ್ದರು.
ಬಾಲ ಕಲಾವಿದನಾಗಿ, ಗಾಯಕನಾಗಿ ರಾಷ್ಟ್ರೀಯ ಪುರಸ್ಕಾರ ಪಡೆದ ಪುನೀತ್ ನಂತರ ಕೆಲಕಾಲ ಚಿತ್ರರಂಗದಿಂದ ದೂರ ಉಳಿದರು. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಚಿತ್ರರಂಗದಲ್ಲಿ ಹೆಸರು ಮಾಡುವಾಗ ನಟನಾಗಿ ಮರಳುವ ಲಕ್ಷಣಗಳು ಇರಲಿಲ್ಲ.

ಪಾರ್ವತಮ್ಮ ಅವರು ಪುನೀತ್ ಅವರನ್ನು ಹೀರೊ ಆಗಿ ತುಂಬ ಎಚ್ಚರಿಕೆಯಿಂದ ಪರಿಚಯಿಸಿದರು. ಬಾಲ ಕಲಾವಿದರಾಗಿ ಹೆಸರು ಮಾಡಿದವರು, ನಾಯಕರಾಗಿ ಮಿಂಚಿದ ಇತಿಹಾಸ ಇರಲಿಲ್ಲ ಎಂಬ ಆತಂಕ ಕಾಡುತ್ತಿತ್ತು.
ಆದರೆ ಪುನೀತ್ ಬಾಲ ನಟನಾಗಿ ಗಳಿಸಿದ ಖ್ಯಾತಿಯನ್ನು ನಾಯಕನಾಗಿ ಮತ್ತಷ್ಟು ಸಮೃದ್ಧಗೊಳಿಸಿದರು.

ನಟಿಸಿದ ಎಲ್ಲಾ ಚಿತ್ರಗಳು ಸೂಪರ್ ಡೂಪರ್. ನಿರ್ಮಾಪಕರ ಪಾಲಿನ ಕಾಮಧೇನು, ಕಲ್ಪವೃಕ್ಷವಾದರು. ಸಹನಟರು ಮತ್ತು ನಿರ್ಮಾಪಕರ ಜೊತೆಗಿನ ಆತ್ಮೀಯ ಬಾಂಧವ್ಯ, ವೈಯಕ್ತಿಕ ಬದುಕಿನ ಸರಳತೆ, ಸದೃಢ ದೇಹಸೌಂದರ್ಯ, ಸಮಯ ಪ್ರಜ್ಞೆ ಇವರ ಹೀರೋಗಿರಿಯ ಶಕ್ತಿ, ಸಾಮರ್ಥ್ಯವನ್ನು ನೂರ್ಮಡಿಸಿತು. ನಾಯಕನಾದವನಿಗೆ ಕಾಡುವ ಬಣ್ಣದ ಮಹಿಮೆಯನ್ನು ಮುರಿದ ಶ್ರೇಯಸ್ಸು ಪುನೀತ್ ಅವರದು.

ವಿವಿಧ ಬಗೆಯ ಕಥೆಗಳನ್ನು ಹುಡುಕಿಕೊಂಡು ನಿರ್ಮಾಪಕರು ಮನೆ ಬಾಗಿಲು ತಟ್ಟಿದಾಗ ನಿರಾಸೆ ಮೂಡಿಸದೇ ಅಭಿನಯಿಸಿ ಲಾಭ ಮಾಡಿಕೊಡುವ ಔದಾರ್ಯವಿತ್ತು.
ದೊಡ್ಮನೆಯ ಸೌಜನ್ಯ ಕಾಪಾಡುವ ಹೊಣೆಗಾರಿಕೆಯನ್ನು ರಾಜ್ ಪುತ್ರರು ಸಮರ್ಥವಾಗಿ,ಸಮತೋಲನದಿಂದ ಕಾಪಾಡಿಕೊಂಡವರು. ವಿವಾದ,ವಿಷಾದಗಳ ಗೊಡವೆಗೆ ಹೋಗದೇ ವೈಯಕ್ತಿಕ ಬದುಕಿನ ಶುದ್ಧತೆಯನ್ನು ಕಾಪಾಡಿಕೊಂಡಿದ್ದಾರೆ. ಪುನೀತ್ ಕೂಡ ವಿವಾದಗಳ ಸುಳಿಗೆ ಸಿಗದೆ ಮುದ್ದಿನ ಅಪ್ಪುವಾಗಿ, ಗಂಭೀರ ವ್ಯಕ್ತಿತ್ವದ ರಾಜಕುಮಾರರಾಗಿ ಮೆರೆದರು.

ಸುಪರ್ ಸ್ಟಾರಗಿರಿ ಲೆಕ್ಕಿಸದೇ ಕಿರುತೆರೆಯಲ್ಲಿ ಭಾಗವಹಿಸಿ ಅಮಿತಾಬ್ ಹಾದಿ ತುಳಿದು ಯಶಸ್ವಿಯಾದರು. ಕನ್ನಡದ ಕೋಟ್ಯಾಧಿಪತಿಯ ನಿರ್ವಹಣೆಯ ಮೂಲಕ ಮನೆ ಮಾತಾದರು. ಜಾಹೀರಾತು, ಕಿರುತೆರೆ, ಹಿರಿತೆರೆ,ಸಾರ್ವಜನಿಕ ಕಾರ್ಯಕ್ರಮಗಳು, ಅಭಿಮಾನಿಗಳ ಖಾಸಗಿ ಸಮಾರಂಭ ಹೀಗೆ ಎಲ್ಲಂದರಲ್ಲಿ ಸರಳವಾಗಿ ಹಾಜರಾಗಿ ಅಭಿಮಾನಿಗಳ ಹೃದಯ ಕದ್ದು ಬಿಡುತ್ತಿದ್ದರು.
ಇತ್ತೀಚಿಗೆ ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿ ಸಂಚಲನ ಮೂಡಿಸಿದ್ದರು.

ಅವರ ಹಣದ ಸದ್ವಿನಿಯೋಗ ಕೂಡ ಅನುಕರಣೆಯ. ಅನಾಥಾಲಯಗಳು, ವೃದ್ಧಾಶ್ರಮ, ಶಾಲೆಗಳ ದತ್ತು ಸ್ವೀಕಾರ, ಹಿಗೆಯೇ ಚಾರಿಟಿಗಳ ಸಾಲು ಸಾಲು ಪುಣ್ಯದ ಕೆಲಸಗಳ ಒಳ್ಳೆಯತನ ಇವರನ್ನು ಇನ್ನಷ್ಟು ಕಾಲ ಬದುಕಿಸಬೇಕಿತ್ತು ಎಂದು ಫಲಾನುಭವಿಗಳ ಅಳಲನ್ನು ಭಗವಂತ ಆಲಿಸಲಿಲ್ಲ.
ಮಾಡಿದ ಉಪಕಾರಕ್ಕೆ ಅನಗತ್ಯ ಪ್ರಚಾರ ಪಡೆಯದ ವಿನೀತ ಭಾವ.
ಸಾವು ಅನಿವಾರ್ಯ ನಿಜ, ಆದರೆ ಅದಕ್ಕೆ ಅದರದೇ ಆದ ಸಮಯವಿರುತ್ತದೆ. ಅಕಾಲಿಕ ಅಗಲಿಕೆಯನ್ನು ಅವರ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ಸಹಿಸಿಕೊಳ್ಳಬೇಕು.‌ ಕಲಾವಿದರು ಕೇವಲ ದೈಹಿಕವಾಗಿ ಅಗಲಿರುತ್ತಾರೆ, ಆದರೆ ಅವರು ಬಿಟ್ಟು ಹೋದ ಕಲಾ ಕೃತಿಗಳ ಮೂಲಕ ಅಜರಾಮರರಾಗಿರುತ್ತಾರೆ. ಪುನೀತ್ ನಿಮಗೆ ಸಾವೆಂಬುದೊಂದು ಕೇವಲ ನೆಪ.