ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾವ್ಯ-ಅನುಸಂಧಾನದ ಹೊಸ ವಿಸ್ತಾರ: ‘ಕ್ಷಿತಿಜ’

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಪ್ರೊ.ಪ್ರಮೋದ ಮುತಾಲಿಕರು ನ್ಯಾಷನಲ್ ಕಾಲೇಜು ಬಸವನಗುಡಿಯಲ್ಲಿ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಇಂಗ್ಲೀಷ್ ಮೇಷ್ಟ್ರಾಗಿದ್ದು, ಈಗ ನಿವೃತ್ತರು.
ಮೂವತ್ತೆಂಟು ವರ್ಷಗಳ ಹಿಂದೆ, ನಾನು ಪಿಯುಸಿ ಓದುವಾಗ, ಎರಡು ವರ್ಷ ಇಂಗ್ಲಿಷ್ ಡೀಟೇಲ್ಡ್ ಟೆಕ್ಸ್ಟ್‌ನ ಗದ್ಯಭಾಗದ ಪಾಠವನ್ನು ಅವರಿಂದ ಕಲಿತಿದ್ದೇನೆ.ಅದು ನೂರಿಪ್ಪತ್ತು ಜನರ ತರಗತಿಯಲ್ಲಿ, ಗುಂಪಿನಲ್ಲಿ ‘ಗೋವಿಂದ’ನಾಗಿ! ಹಾಗಿದ್ದೂ ತನ್ಮಯತೆಯಿಂದ,ತುಂಬು ಪ್ರೀತಿಯಿಂದ ಅವರು ಪಾಠಮಾಡುತ್ತಿದ್ದ ರೀತಿ ಈಗಲೂ ನೆನಪಿದೆ.

ನನ್ನ ಈ ಇಂಗ್ಲಿಷ್ ಮೇಷ್ಟ್ರು ಎರಡು ವರ್ಷಗಳ ಹಿಂದೆ ಧಾರವಾಡದ ‘ಸಾಹಿತ್ಯ ಸಂಭ್ರಮ’ದಲ್ಲಿ ನನಗೆ ಮರಳಿ ಸಿಕ್ಕರು. ಆಗವರು ಕಾರಂತರ ‘ಅಳಿದ ಮೇಲೆ’ ಕಾದಂಬರಿಯನ್ನು ಅನುವಾದಿಸುತ್ತಿರುವುದಾಗಿ, ಅದನ್ನು ಜೆ ಎನ್ ಯು ನ ಕನ್ನಡ ಪೀಠ ಪ್ರಕಟಿಸಲಿರುವುದಾಗಿ ಹೇಳಿದ್ದರು. ಅದು ಪ್ರಕಟವಾಗಿ ಉತ್ತಮ ಸ್ಪಂದನೆಯನ್ನು ಪಡೆದು ಮರು ಮುದ್ರಣವನ್ನು ಕಂಡಿದೆ. ಜೊತೆಗೆ ಈ ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದಕ್ಕಾಗಿನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕಳೆದ ವರ್ಷ ಒಮ್ಮೆ ಮಾತನಾಡಿದಾಗ ಶ್ರೀ ಮುತಾಲಿಕರು ತರಾಸು ಅವರ ಪ್ರಸಿದ್ಧ ಕಾದಂಬರಿ ‘ಹಂಸಗೀತೆ’ಯನ್ನು ಇಂಗ್ಲಿಷ್‌ಗೆ ಅನುವಾದಿಸುತ್ತಿರುವುದಾಗಿ ಹೇಳಿದ್ದರು. ಈ ಮೊದಲೇ ಅವರು ಡಾ ಎಚ್ ಎನ್ ಅವರ ಆತ್ಮಚರಿತ್ರೆ ಹಾಗೂ ಯಶವಂತ ಚಿತ್ತಾಲರ ಕಥೆಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇವೆಲ್ಲಾ ಕನ್ನಡದಿಂದ ಇಂಗ್ಲಿಷ್ ಗೆ ತೆಗೆದುಕೊಂಡುಹೋದ ಸಂಗತಿಗಳಾದರೆ, ಆರ್ ಕೆ ನಾರಾಯಣ ರ ‘ಗೈಡ್’ ಚಿನುವಾ ಅಚಿಬೆ ಯವರ ‘ಥಿಂಗ್ಸ್ ಪಾಲ್ ಅಪಾರ್ಟ್’ ಮತ್ತು ಸ್ಕಾಟ್ ಫಿಜರಾಲ್ಡರ ‘ಗ್ರೇಟ್ ಗ್ಯಾಟ್ಸ್ ಬಿ’ ಕಾದಂಬರಿಗಳನ್ನು ಕನ್ನಡಕ್ಕೆ ತರುವ ಮೂಲಕ ಎರಡು ಭಾಷೆಗಳ ನಡುವಿನ ಕೊಡುಕೊಳುವಿಕೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

ಅವರ ಈ ಅನುವಾದಗಳ ಮಾಲಿಕೆಯಲ್ಲಿ ಇತ್ತೀಚಿನ ಪುಷ್ಪ ‘ಕ್ಷಿತಿಜ’. ‘ಜಗತ್ತಿನ ಕೆಲ ಶ್ರೇಷ್ಠ ಕವನಗಳ ಕನ್ನಡ ಅನುವಾದ’ ಎಂದು ಅವನ್ನು ಕರೆದಿದ್ದಾರೆ ಪ್ರೊ. ಮುತಾಲಿಕರು.
ಒಟ್ಟು ಮೂವತ್ತೆಂಟು ಕವಿಗಳ ಅರವತ್ತನಾಲ್ಕು ಕವಿತೆಗಳ ಅನುವಾದ ಈ ಸಂಕಲನ. ೧೫೦ ಪುಟಗಳ ಈ ಸಂಕಲನವನ್ನು ತುಲನ ಪ್ರಕಾಶನ ಹೊರತಂದಿದೆ. ಗಿರಿಧರ ಕಾರ್ಕಳರಿಂದ ರಚಿಸಲ್ಪಟ್ಟ ಸುಂದರ ಮುಖಪುಟ,ಅಚ್ಚುಕಟ್ಟಾದ ಮುದ್ರಣ, ಡಾ ಪುರುಷೋತ್ತಮ ಬಿಳಿಮಲೆ ಅವರ ಅಧ್ಯಯನಪೂರ್ಣ ಮುನ್ನುಡಿ ಸಂಕಲನದ ಶೋಭೆಯನ್ನು ಹೆಚ್ಚಿಸಿವೆ.

ಇಂಗ್ಲಿಷ್ ನಲ್ಲಿ ಬರೆಯುವ ಭಾರತೀಯ ಕವಿಗಳನ್ನು ಒಳಗೊಂಡಂತೆ ಹಲವು ದೇಶ, ಕಾಲಗಳ ಕವಿಗಳ ರಚನೆಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ‘ಕಾವ್ಯ ಪ್ರಸ್ತುತವಾಗುವುದು ಅದು ಕಾಲ ದೇಶಗಳ ಎಲ್ಲೆಯನ್ನು ದಾಟಿದಾಗ. ಎಂತಲೇ ಶೇಕ್ಸ್ಪಿಯರ್ ಬ್ಲೇಕರಷ್ಟೇ ನಮಗೆ ಮಾಯಾ ಏಂಜೆಲೋ, ಬ್ರೆಕ್ಟ್, ಸೋಯಿಂಕಾ ಮುಖ್ಯ ಆಗುತ್ತಾರೆ. ನಿಸಿಂ ಇಜೆಕಿಲ್, ಅರುಣ ಕೋಲಾಟ್ಕರ್ ತುಂಬಾ ಆಪ್ತವಾಗಿ ಬಿಡುತ್ತಾರೆ. ಈ ಕಾರಣಕ್ಕೆ ಇಲ್ಲಿನ ಕವಿಗಳ ಕಾಲ ವ್ಯಾಪ್ತಿ ಹದಿನಾರನೇ ಶತಮಾನದಿಂದ ಇಪ್ಪತ್ತೊಂದನೇ ಶತಮಾನದ ವರೆಗೂ ವ್ಯಾಪಿಸಿದೆ’. ಎನ್ನುತ್ತಾರೆ ಪ್ರೊ. ಮುತಾಲಿಕ್ ಅವರು, ತಮ್ಮ ‘ಅರಿಕೆ’ಯಲ್ಲಿ.
ಇಲ್ಲಿನ ಕವಿಗಳ, ಕವಿತೆಗಳ ಆಯ್ಕೆಯಲ್ಲಿ ಅನುಸರಿಸಲಾದ ಮಾನದಂಡ ಯಾವುದು? ಅವರು ಹೇಳುತ್ತಾರೆ- ” ಒಂದು ಚೌಕಟ್ಟಿನ ಒಳಗೆ ಇಲ್ಲಿನ ಕವನಗಳ ಆಯ್ಕೆ ಮಾಡಿಲ್ಲ. ವ್ಯಕ್ತಿ ವ್ಯಕ್ತಿಗಳನ್ನು ಬಂಧಿಸುವ, ಬೇರ್ಪಡಿಸುವ,ಪ್ರೀತಿ ದ್ವೇಷಗಳನ್ನು ಸೃಷ್ಟಿಸಿಕೊಂಡು ವಿಜೃಂಭಿಸುವ, ಮನುಷ್ಯ ಸಂಬಂಧಗಳಲ್ಲಿ ಅಪಾರ ವಿಶ್ವಾಸವಿಟ್ಟು ಆ ನಂಬುಗೆಯನ್ನು ಬದುಕಿನ ಮೌಲ್ಯವಾಗಿಸುವ, ಅಪಾರವಾದ ಆಶಾವಾದದ ಜೊತೆಗೆ ಪರಸ್ಪರ ಅವಿಶ್ವಾಸ ಅಪನಂಬಿಕೆಗಳು ಹುಟ್ಟಿಕೊಳ್ಳುವ ಪ್ರಕ್ರಿಯೆಗಳು ಇಲ್ಲಿನ ಕವನಗಳ ಮೂಲಸ್ರೋತ ವಾಗಿವೆ. …. ಕಾವ್ಯ ತೆರೆದಿಡುವ ವಿಸ್ಮಯಗಳು ನಮ್ಮನ್ನು ಬಲವಾಗಿ ತಟ್ಟಿ ಆತ್ಮಾವಲೋಕನೆಗೆ ಪ್ರೇರೇಪಿಸುವವು. ಕವನಗಳ ಸಾಧ್ಯತೆ ಅಪರಿಮಿತವಾದದ್ದು. ಭೂತ ವರ್ತಮಾನಗಳ ಮುಖಾಮುಖಿ ಆಗುವುದರೊಂದಿಗೆ ಭವಿಷ್ಯತ್ತಿಗೂ ದಿಕ್ಸೂಚಿ ಆಗುವವು”
ಅಭ್ಯಾಸಪೂರ್ಣ ಮುನ್ನುಡಿ ಬರೆದಿರುವ ಹಿರಿಯ ವಿದ್ವಾಂಸ ಡಾ ಪುರುಷೋತ್ತಮ ಬಿಳಿಮಲೆಯವರು” … ಇದೀಗ ‘ಕ್ಷಿತಿಜ’ದ ಮೂಲಕ ವಿಶ್ವ ಸಾಹಿತ್ಯದ ಕೆಲವು ಕವಿತೆಗಳನ್ನು ಕನ್ನಡಕ್ಕೆ ತಂದು ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸಿದ್ದಾರೆ. ಮುತಾಲಿಕರು ಈ ಕೃತಿಯಲ್ಲಿ ಮೂಲ ಕವಿಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನೂ ಅವರ ಕವಿತೆಗಳ ಸಮಕಾಲೀನ ಮಹತ್ವವನ್ನೂ ಕವಿಯ ಭಾವಚಿತ್ರ ಸಮೇತ ನೀಡಿ ಉಪಕರಿಸಿದ್ದಾರೆ. ಅನುವಾದಕ್ಕೆ ಕವಿಗಳನ್ನು ಆಯ್ದುಕೊಳ್ಳುವಲ್ಲಿ ತಮ್ಮ ವಿಶಿಷ್ಟ ಪ್ರತಿಭೆ ಮೆರೆದಿದ್ದಾರೆ” ಎಂದು ಅಭಿಪ್ರಾಯಪಡುತ್ತಾರೆ.

ಆಚಾರ್ಯ ಬಿಎಂಶ್ರೀ ಇಂಗ್ಲಿಷ್ ಗೀತಗಳನ್ನು ಅನುವಾದಿಸಿ ಪ್ರಕಟಿಸಿದ ಸುಮಾರು ಒಂದು ಶತಮಾನದ ನಂತರ ಬಂದ ಈ ಸಂಕಲನ ಅವರ ಕಾರ್ಯದ ಮುಂದುವರಿಕೆಯಂತೆ ನನಗೆ ತೋರುತ್ತದೆ. ಇಂಥದೊಂದು ಸ್ಮರಣೀಯ ಕೊಡುಗೆಗಾಗಿ ನನ್ನ ಗುರುಗಳಾದ ಪ್ರೊ. ಪ್ರಮೋದ ಮುತಾಲಿಕರನ್ನು ಅಭಿವಂದಿಸುತ್ತೇನೆ. ಇಂಗ್ಲೀಷ್-ಕನ್ನಡಗಳ ನಡುವಿನ ಸೇತುವೆಯಾಗಿ ಇನ್ನೂ ದಶಕಗಳ ಕಾಲ ಗುರುಗಳು ನುಡಿ ಸೇವೆಯನ್ನು ಮಾಡುವಂತಾಗಲಿ; ಇನ್ನೂ ಮಹತ್ವದ ಕೊಡುಗೆಗಳು ಅವರಿಂದ ಬರಲಿ ಎಂದು ಪ್ರಣಾಮ ಪೂರ್ವಕ ಹಾರೈಸುತ್ತೇನೆ.

***********

ಪುಸ್ತಕಕ್ಕೆ- ತುಲನ ಪ್ರಕಾಶನ
ಬಸವನಗುಡಿ, ಬೆಂಗಳೂರು-೦೪
ಚರವಾಣಿ- ೯೪೮೦೧೮೪೯೮೫