ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಸಿಲ್ ಆಫ್ ಆಲ್ಬಕರ್ಕೀ

ರೋಹಿಣಿ ಸತ್ಯ
ಇತ್ತೀಚಿನ ಬರಹಗಳು: ರೋಹಿಣಿ ಸತ್ಯ (ಎಲ್ಲವನ್ನು ಓದಿ)

“ನೀವು ನನ್ನೊಂದಿಗೆ ಡಾನ್ಸ್ ಮಾಡುತ್ತೀರಾ?” ಕೇಳಿದ. “ಇಲ್ಲ ನನಗೆ ಡಾನ್ಸ್ ಬರೋದಿಲ್ಲ” ಅನ್ನುತ್ತ ಆತನ ಕಣ್ಣುಗಳನ್ನ ದಿಟ್ಟಿಸಿದೆ. “ನೀವೇಕೆ ಪದೇ ಪದೇ ನನ್ನ ಕಣ್ಣುಗಳನ್ನ ದಿಟ್ಟಿಸುತ್ತೀರ? ” ಈ ಕಂಗಳು ಚಿರುತೆಯ ಕಂಗಳಂತೆ ಎಲ್ಲೊ ನೋಡಿದ ಹಾಗೆ ಅನಿಸುತ್ತಿವೆ”. “ಕಣ್ಣುಗಳು ನಮ್ಮ ಆತ್ಮವನ್ನು ಪ್ರತಿನಿಧಿಸುತ್ತವಂತೆ ಗೊತ್ತಾ?” ಅಂದ ಆಶ್ಚರ್ಯವಾಗಿ.”ಹೌದಾ! ಆದರೆ ನೀವು ಬೆನ್ನಟ್ಟಿದ ಆತ್ಮನಾ?” ಆತ ಮಾತನಾಡದೇ ವೈನ್ ಸಿಪ್ ಮಾಡುತ್ತಿದ್ದ.

ರೋಹಿಣಿ ಸತ್ಯ ಅನುವಾದಿಸಿದ “ಕಾಸಿಲ್ ಆಫ್ ಆಲ್ಬಕರ್ಕೀ” ಯಿಂದ

ಆತನ ತಾಮ್ರದ ಬಣ್ಣದ ಕೂದಲು, ನೋಡಿದ ತಕ್ಷಣ ಭಿನ್ನವಾಗಿ ಅನಿಸಿದ ಮೊದಲ ವಿಷಯ. ಆತ ಆ ಸ್ಪ್ಯಾನಿಷ್ ಕೋಟೆಯೊಳಗೆ ಕಂಡಿರದಿದ್ದರೆ ನಾನಷ್ಟು ಗಮನಿಸುತ್ತಿರಲಿಲ್ಲವೇನೋ! ಏಕೋ ಆತ ಎಷ್ಟೋ ವರುಷಗಳ ಹಿಂದೆ ಆ ಕೋಟೆಗೆ ಸೇರಿದವನಂತೆ ಅನಿಸಿದ. ಸ್ಪ್ಯಾನಿಷ್ ರಾಜನೊ, ಸೈನ್ಯಾಧ್ಯಕ್ಷನೋ ಅಥವಾ ಮಂತ್ರಿ ಮಗನೋ! ಆ ಕೋಟೆಯ ಮೇಲಿನ ಮೋಹವೋ ಇಲ್ಲಾ ಆತನ ನೋಟದಲಿ ಯಾವುದೊ ಆಸೆಯೋ ಚಿರತೆ ಹುಲಿಯಂತಹ ಆತನ ಕಣ್ಣುಗಳಲ್ಲಿ ಬೆರೆತುಹೋಗಿ ಕಾಣುತ್ತಿವೆ. 
ಗಾಳಿಗೆ ಹಾರುತ್ತಿರುವ ಆತನ ತಾಮ್ರದ ಬಣ್ಣದ ಕೂದಲು ಆ ಪ್ರದೇಶಕ್ಕೆ ಹೊಸ ಸೌಂದರ್ಯವನ್ನು ತಂದೊಡ್ಡುತ್ತಿವೆ. ಎದುರಾಗಿ ಇದ್ದ ಸ್ಪ್ಯಾನಿಷ್ ಯುವತಿಯೊಂದಿಗೆ ಏನೋ ಮಾತನಾಡುತ್ತಿದ್ದಾನೆ. ಮಾತುಗಳು ಅರ್ಥವಾಗುತ್ತಿಲ್ಲ. ಆದರೆ ಆ ಶಬ್ದಗಳ ಅರ್ಥ ಮಾತ್ರ ಗೊತ್ತಾಗುತ್ತಿದೆ. ಆಕೆಯ ಮೇಲಿನ ಬಯಕೆಯನ್ನು ಅವು ವ್ಯಕ್ತಪಡಿಸುತ್ತಿವೆ. ನಾನು ನಿನ್ನ ಬಯಕೆಯನ್ನು ಅರಿತಿದ್ದೇನೆ, ಅದನ್ನು ಆಸ್ವಾದಿಸುತ್ತಿದ್ದೇನೆ ಎನ್ನುವಂತೆ ಆಕೆಯ ನಗು ಪುಳಕಗೊಳ್ಳುವಂತಿದೆ. 
ಅವರನ್ನು ಹೆಚ್ಚಿಗೆ ಗಮನಿಸದಂತೆ ಮುಂದೆ ನಡೆದು ಒಳಗೆ ಹೋದೆ. ಕಾಸ್ತಿಯೋ ದೆಲ್ ಆಲ್ಬುರ್ಕೆರ್ಕೆ. ಕಾಸಿಲ್ ಆಫ್ ಆಲ್ಬಕರ್ಕಿ ಬಹಳ ದೊಡ್ಡ ಕೋಟೆ. ಎದುರಾಗಿ ವಿಶಾಲವಾದ ಕೋಣೆ. ಗೋಡೆಗೆ ವರುಸೆಯಾಗಿ ಕಿಟಕಿಗಳು. ಅವುಗಳಿಂದ ಪಶ್ಚಿಮ ಬೆಟ್ಟಗಳಿಗೆ ವಾಲುತ್ತಿರುವ ಸೂರ್ಯ ಕಾಣುತ್ತಿದ್ದಾನೆ. ಸಂಜೆಯ ಬಣ್ಣಗಳು ಆ ಜಾಗಕ್ಕೆ ವಿಚಿತ್ರ ಸೊಬಗನ್ನು ನೀಡುತ್ತಿವೆ. ನಾನು ಒಳಗೆ ಕಾಲಿಟ್ಟೊಡನೆ ಆ ಕಿಟಕಿಗಳಿಂದ ಬರುತ್ತಿರುವ ಮಂದ್ರಗಾಳಿ ಹಠಾತ್ತಾಗಿ ಅಚಲವಾದಂತೆ , ಎಲ್ಲಿಂದಲೋ ಯಾರೋ ನನ್ನ ಕಡೆಯೇ ಅಲುಗಾಡದೆ ನೋಡುತ್ತಿರುವಂತೆ ಅನಿಸಿತು. ಯಾವುದೋ ಪುರಾತನ ಸ್ಮೃತಿಗಳು ನನ್ನೊಳಗೆ ಕದಲುತ್ತಿರುವಂತೆ ಕೆಲವು ಕ್ಷಣಗಳು ಚಿತ್ರವಾದ ಅನಿಸಿಕೆ. ಎಷ್ಟೋ ಸಂಜೆಗಳು ನಾನು ಆ ಸೂರ್ಯಾಸ್ತಮಾನ ಅದ್ಭುತವನ್ನು ನೋಡಿದಂತೆ, ಅದೆಷ್ಟೋ ಜನರು ನನ್ನಿಂದ ಹೊರಹೋಗುತ್ತಿರುವಂತೆ, ಯಾರೋ ನನ್ನನ್ನ ಬರಸೆಳೆದಂತೆ… ಎಂದಿನಿಂದಲೋ ನಾನು ಇಲ್ಲಿಗೆ ಸೇರಿದವಳೇ?!
ದೂರದಿಂದ ತಾಮ್ರದ ಬಣ್ಣದ ಕೂದಲಿನವ ಕರೆಯುತ್ತಿದ್ದಾನೆ. ಆತನ ದನಿಯಲ್ಲಿ ವಿಸ್ಮಯ. 
‘ಇನೇಸ್ ದೆ ಕಾಸ್ತ್ರೋ!’ ಅನ್ನುತ್ತಾ ಯಾವುದೋ ಚಿತ್ರವಾದ ಹೆಸರಿನಿಂದ ಕರಿದ. ಯಾಕೆ ಹಾಗೆ ಕರೆದನೋ ಅರ್ಥವಾಗಲಿಲ್ಲ.
 
ಹತ್ತಿರ ಬರುತ್ತಾ “ನೀವು ಚೆನ್ನಾಗಿದ್ದೀರಾ?” ಎಂದು ಕೇಳಿದ. 
‘ಹಾ ಚೆನ್ನಾಗಿದ್ದೇನೆ” ಅಂದೆ ಸಾವರಿಸಿಕೊಂಡು. 
“ಕೋಟೆ ಮುಚ್ಚುವ ಹೊತ್ತಾಗುತ್ತಿದೆ ನಾವಿಲ್ಲಿಂದ ಹೋಗ ಬೇಕಾಗಿದೆ” ಆತನ ಆಂಗ್ಲ ಭಾಷೆಯ ಉಚ್ಚಾರಣೆ ಭಿನ್ನವಾಗಿದೆ. 
ನಾನು ಆತನ ಹಿಂದೆ ಹೆಜ್ಜೆ ಹಾಕಿದೆ. 
‘ಈ ರಾತ್ರಿ ಮದ್ರೀದ್ ನಲ್ಲಿ ಪುಟ್ಟ ಲೈವ್ ಮ್ಯೂಸಿಕ್ ಪ್ರೋಗ್ರಾಮ್ ಇದೆ. ನೀವಲ್ಲಿಗೆ ಬರ್ತೀರಾ?” ಅಂತ ಕೇಳಿದ. 
ಬರ್ತೀನಿ, ಇಲ್ಲ ಅನ್ನುವಂತೆ ತಲೆಯಾಡಿಸಿ ಅಲ್ಲಿಂದ ಹೊರಟುಬಿಟ್ಟೆ. 
ಇಲ್ಲಿ ಇರೋದು ಒಂದು ದಿನವಷ್ಟೇ. ಆದರೆ ವಿಚಿತ್ರವಾಗಿ ಒಂದು ದಿನದಲ್ಲೇ ಎಷ್ಟೋ ನಡೆಯುತ್ತವೆ. ಮನಸು, ಪ್ರಪಂಚ, ಮನುಷ್ಯರು ಕ್ಷಣದಲ್ಲೇ ಎಷ್ಟೋ ಬದಲಾಗಿಬಿಡುತ್ತವೆ. ಆ ಕ್ಷಣ ಕಾಲ ಯಾರೋ ಹೇಳಿದ ಹಾಗೆ, ಯಾವುದೊ ಶಕ್ತಿ ಆದೇಶ ಮಾಡಿದಹಾಗೆ, ಯಾವುದೊ ಗತಕಾಲ ಕುರುಹುಗಳು ಅಲ್ಲಿ ಬಚ್ಚಿಟ್ಟುಕೊಂಡ ಹಾಗೆ, ಆ ಶಿಧಿಲಗಳಲ್ಲಿ ಛಿದ್ರವಾದ ಹೃದಯವೊಂದು ಅವಿತ ಹಾಗೆ ಅನಿಸಿ ಅಲ್ಲಿ ಕಾಲ ಕಳೆದುಬಿಡುತ್ತಿವೇನೋ!

ಇಲ್ಲಿಗೆ ಹೀಗೆ ಬರಲು ಯಾವುದಾದರೂ ಕಾರಣವಿದೆಯಾ? ಒಳಗೆಲ್ಲೋ ಅರಿವಿರದ ಆಲೋಚನೆಗಳಿಂದ ಇಲ್ಲಿಗೆ ಬರಬೇಕೆಂದು, ಹೀಗೆ ಈ ಕ್ಷಣವನ್ನು ಕಳೆಯಬೇಕೆಂದು, ಈ ಪರಿಸರಗಳನ್ನು ನೋಡಬೇಕೆಂದು, ಹೀಗೇ ಒಬ್ಬ ಮನುಷ್ಯನನ್ನು ಭೇಟಿ ಆಗಬೇಕು ಎಂದೆನಿಸಿರುತ್ತಾ! ಒಳಒಳಗೇ ಏನಾದರೂ ನಡೆದಿರುತ್ತದಾ? ಇದಾವುದೂ ಆಗಿರದೆ ಇರಬಹುದು! ಮನುಷ್ಯರ ಬದುಕು ಬಹಳ ಚಿಕ್ಕದು. ಯಾವುದೂ ಯಾರಿಗೂ ಅಷ್ಟಾಗಿ ಬೇಕಿರುವುದಿಲ್ಲ. ಜೀವಂತಿಕೆಯಿಂದ ಬದುಕಿರುವ ಕ್ಷಣಗಳನ್ನು ಕಲ್ಪಿಸಿಕೊಳ್ಳಲು ಮನಸಿನ ತಾಪತ್ರಯವೇನೋ ಇದೆಲ್ಲಾ! 

ಆತ ಕರೆದ ನಾನೆಂದೂ ಕೇಳದ ಹೆಸರಿನಿಂದ ನನ್ನನ್ನೇ ಕರೆದ. ಎಲ್ಲೊ ತಿಳಿದಂತೆ ಇರುವ ಹೆಸರಿನಿಂದ ಯಾರೋ ಇದಕ್ಕೋ ಮುನ್ನ ಕರೆದ ಹೆಸರಿನಿಂದ… ಏನೋ ತಿಳಿಯದ ಆಶ್ಚರ್ಯ! ಹಾಗೇಕೆ ಆತ ಕರೆದ. ಇವ ಬಿಡದೆ ಆಗಿನಿಂದಲೂ ನನ್ನನ್ನು ಹಿಂಬಾಲಿಸುತ್ತಿದ್ದಾನಾ?

ಯಾವಾಗಲೂ ಈ ಜಾಗಕ್ಕೆ ಬಂದವಳಲ್ಲ. ಆ ಪುರಾತನ ಕೋಟೆಗೆ ಹೋಗಿ ಬಂದಮೇಲೆ ಏನೋ ತಿಳಿಯದ ಕಳವಳ. ನನಗಿರುವ ಏಕೈಕ ಸ್ನೇಹಿತ ಮಾಲಿಕ್ ಗೆ ಕರೆ ಮಾಡಿದೆ. ಏನಾದರೂ ಮಾತನಾಡಬೇಕೆಂದುಕೊಂಡೆ. ಆದರೆ, ಅವ ಫೋನ್ ತೆಗೆಯದಿದ್ದರೆ ಚೆನ್ನ ಅಂತ ಮನಸಿಗೆ ಅನಿಸುತ್ತಿದೆ. ಹಾಗೇಕೆ ಅನಿಸುತ್ತಿದೆ ಎಂದು ತಿಳಿಯುತ್ತಿಲ್ಲ. ಸದ್ಯ ಅವ ಫೋನ್ ತೆಗೆಯಲಿಲ್ಲ ಉಸಿರೆಳೆದುಕೊಂಡೆ. 
ಮ್ಯಾಡ್ರಿಡ್ ಲೈವ್ ಮ್ಯೂಸಿಕ್ ಗೆ ಹೋಗಬೇಕೆಂದು ನಿಶ್ಚಯಿಸಿಕೊಂಡೆ. ಹುಡುಕಿ ಎಷ್ಟೋ ಇಷ್ಟವಾದ ತಿಳಿ ನೇರಳೆ ಬಣ್ಣದ ಫ್ರಾಕ್ ಹಾಕಿಕೊಂಡೆ. ಅದಕ್ಕೆ ಕಂದು ಬಣ್ಣ ಬೆರೆತ ನೇರಳೆ ಬ್ರೋಚ್ ಹಾಕಿದೆ. ವಂಕೀ ಕೂದಲಿಗೆ ಚಿಕ್ಕ ಪಿನ್ ಸಿಗಿಸಿದೆ. ಆ ಉಡುಪು ಇಲ್ಲಿಯವರೆಗೂ ಹಾಕಿಕೊಳ್ಳದೆ ಹಾಗೇ ಇಟ್ಟಿದ್ದು ಬಹುಶ ಈಗ ಹಾಕಿಕೊಳ್ಳಲೇನೋ! ಎಲ್ಲ ಆದಮೇಲೆ ಕನ್ನಡಿಯಲ್ಲಿ ನೋಡಿಕೊಂಡೆ. ಯಾರೋ ಕಂಡೊ ಕಾಣದಂತೆ ಕಂಡರು. ನನ್ನೊಳಗೆ ನಾನಲ್ಲದೇ ನನ್ನಂತೆ ಯಾರೋ! ಆ ಆಲೋಚನೆಗೆ ನಗು ವುಕ್ಕಿತು. 

ಆತ ಒಬ್ಬನೇ ಅಲ್ಲೇ ಆಚೆ ಕೂತು ನನಗಾಗಿ ಎದುರು ನೋಡುತ್ತಿದ್ದಂತಿದೆ. ದೂರದಿಂದಲೇ ನನ್ನ ನೋಡಿ ಏನೋ ಅಂದಂತೆ ಅನಿಸಿತು. ಅದು ಇದಕ್ಕೂ ಮುನ್ನ ಕರೆದಂತೆ! ಹೋಗಿ ಎದುರಲ್ಲಿ ಕುಳಿತೆ. ಆತನಲ್ಲಿ ಏನೋ ಚಡಪಡಿಕೆ. 
“ನಿಮಗಿಷ್ಟವಾದ ನೇರಳೆ ಬಣ್ಣ ಆಲ್ವಾ ಇದು. ನೀವು ಈ ಸಂಜೆಗಿಂತಲೂ, ಈ ಮನುಷ್ಯರಿಗಿಂತಲೂ, ಈ ದೀಪಗಳಿಗಿಂತಲೂ ಎಷ್ಟೋ ಪ್ರತ್ಯೇಕವಾಗಿದ್ದೀರ” ಆತನ ಆಂಗ್ಲ ಭಾಷೆಯಲ್ಲಿ ಸ್ಪ್ಯಾನಿಷ್ ಅಕ್ಸೆಂಟ್ ಇದೆ. ಆತನ ಹೊಗಳಿಕೆಯಲ್ಲಿ ಬಯಕೆ ಕಾಣಿಸಲಿಲ್ಲ. ಮುಂಚಿನಂತೆಯೇ ಆತನ ಮಾತುಗಳಲ್ಲಿ ಆ ವಿಸ್ಮಯ ಧ್ವನಿ ಹಾಗೆ ಇದೆ. 
“ನಿಮ್ಮ ತಾಮ್ರದ ಬಣ್ಣದ ಕೂದಲೇ ನಿಮ್ಮನ್ನು ಬೇರೆಯವರಿಗಿಂತ ಭಿನ್ನವಾಗಿ ತೋರುತ್ತಿದೆ.” ನಾನಾ ಮಾತು ಹೊಗಳುತ್ತಿರುವಂತೆ ಅಂದದ್ದೋ ಅಥವಾ ಆತನನ್ನು ಮೊದಲು ಗಮನಿಸಿದ್ದ ಕಾರಣ ಅದೇಯೆಂದು ಹೇಳಬಯಸಿದ್ದೇನೋ ಗೊತ್ತಿಲ್ಲ. 
“ನೀವೇನು ಮಾಡುತ್ತೀರಿ?” 
ಆತ ನಗುತ್ತ “ಇಂತಹ ಪ್ರಶ್ನೆಗಳಿಲ್ಲದೇ ಈ ಸಂಜೆಯನ್ನು ಕಳೆಯೋಣವೇ!” ಉತ್ತರ ನೀಡಿದ. ಆತನ ನಗು ನನ್ನ ಪ್ರಶ್ನೆಯಲ್ಲಿನ ಅಧಿಕಾರ ಪ್ರದರ್ಶನವನ್ನು ತಡೆದಂತೆ ಅನಿಸಿತು. 
“ವೈನ್ ತೆಗೆದುಕೊಳ್ಳುತ್ತೀರಾ ಪ್ರಿನ್ಸೆಸ್?” ನನ್ನ ಮುಖದಲ್ಲಿ ಕಿರುನಗೆ ಕಂಡಿತೇನೋ ನಾನು ಉತ್ತರಿಸುವ ಮುನ್ನವೇ ಆರ್ಡರ್ ಮಾಡಿದ. “ಇಲ್ಲಿಗೆ ನನ್ನನ್ನು ಏಕೆ ಕರೆದದ್ದು?” ನೇರವಾಗಿ ಕೇಳಿದೆ. “ಮ್ಯೂಸಿಕ್ ಕೇಳುತ್ತಿರಿ ಅಂತ” ಆತನ ಧ್ವನಿಯ ಭಾವ ಎಟುಕಲಿಲ್ಲ. 
ಯಾವುದೋ ಸ್ಪ್ಯಾನಿಷ್ ಹಾಡು. ಜಾನಪದ ಸಂಗೀತದಂತಿದೆ. “ಆ ಹಾಡು ಈಗಿನದಲ್ಲ” ನಾನು ಆ ಹಾಡು ಕೇಳಲು ಪ್ರಯತ್ನಿಸಿ ಹಿಡಿಸದಂತೆ ಆತನ ಕಡೆ ನೋಡಿದೆ. 
“ನಿಜಕ್ಕೆ ನಿಮಗೊಂದು ಕಥೆ ಹೇಳಲೆಂದು ಇಲ್ಲಿಗೆ ಬರಹೇಳಿದೆ.” ಅನ್ನುತ್ತಾ ಹೇಳಲು ಪ್ರಾರಂಭಿಸಿದ. ನನ್ನ ಅಂಗೀಕಾರಕ್ಕಾಗಿ ಆತ ಎದುರು ನೋಡಲಿಲ್ಲ. “ಈ ದಿನ ಕೋಟೆಯೊಳಗೆ ನೀವು ಸೂರ್ಯಾಸ್ತಮಾನ ನೋಡುತ್ತಿರುವಾಗ ನಿನ್ನ ನೋಡಿದರೆ ಇನೆಸ್ ದೆ ಕಾಸ್ತ್ರೋನ ನೋಡಿದಂತೇ ಅನಿಸಿತು”. ಅದೇ ಹೆಸರು ಇದಕ್ಕೂ ಮುನ್ನ ಆತನ ಕಂಠದಿಂದ ಕೇಳಿದ ಹೆಸರು, ವಿಚಿತ್ರವಾಗಿ ಧ್ವನಿಸಿದ ಹೆಸರು. “ಯಾರದ್ದು ಆ ಹೆಸರು?”
ವೈನ್ ಕುಡಿಯುತ್ತಾ ಆತ ಹೇಳಲು ಪ್ರಾರಂಭಿಸಿದ. 

ಸಾವಿನ ಬಳಿಕ ರಾಣಿಯಾದ ಇನೆಸ್ ದೆ ಕಾಸ್ತ್ರೋ


“ಆಕೆಯನ್ನು ಡೆತ್ ಕ್ವೀನ್ ಅನ್ನುತ್ತಾರೆ. ೧೪ ನೇ ಶತಮಾನದ ವ್ಯಕ್ತಿ. ಆಕೆಯ ನಿಜವಾದ ಹೆಸರು ಇನೆಸ್ ದೆ ಕಾಸ್ತ್ರೋ. ಆಕೆಯನ್ನು ಪೋರ್ಚುಗಲ್ ರಾಜಕುಮಾರ ಪೆದ್ರೋ ಪ್ರೀತಿಸಿದ್ದ. ಆಕೆಯ ಪ್ರೀತಿಯಲ್ಲಿ ಆತ ಎಲ್ಲವನ್ನು ಮರೆತಿದ್ದ. ಇದು ತಂದೆ, ರಾಜ ಅಫೋನ್ಸೋ ಗೆ ಹಿಡಿಸಲಿಲ್ಲ. ಆತನನ್ನು ಬದಲಾಯಿಸಲು ಅದೆಷ್ಟೋ ಪ್ರಯತ್ನ ಪಟ್ಟ. ಆದರೂ ಪೆದ್ರೋ ಆಕೆಯನ್ನು ಬಿಡಲಿಲ್ಲ. ರಾಜ ಅಫೋನ್ಸೋ, ಆಕೆಯ ಮಾಯೆಯಿಂದ ಮಗನನ್ನು ಹೊರತರಲು ಆಕೆಯನ್ನು ಸಾಯಿಸಲು ಆದೇಶ ನೀಡಿದ.” 
ಕೆಲ ಹೊತ್ತು ಹೇಳುವುದನ್ನು ನಿಲ್ಲಿಸಿ ಬಲವಾಗಿ ಉಸಿರೆಳೆದುಕೊಂಡ. “ಇದೊಂದು ಸಾಧಾರಣ ಪ್ರೇಮ ಕಥೆಯಂತೆ ಇದೆಯಲ್ಲವೇ! ರಾಜ ಅಫೆನ್ಸೋ ಸತ್ತು ಹೋದ ಎರಡು ವರುಷಗಳಿಗೆ ಪೆದ್ರೊ ರಾಜನಾದ. ಸಾಯಿಸಲ್ಪಟ್ಟ ಇನೇಸ್ ದೆ ಕಾಸ್ತ್ರೋ ಶವವನ್ನು ಸಮಾಧಿಯಿಂದ ಅಗೆದು ಹೊರ ತೆಗೆಸಿದ. ಆಕೆಗೆ ಸ್ಕೆಲಿಟನ್ ಕ್ವೀನ್ ಸ್ಥಾನಮಾನ ಕಲ್ಪಿಸಿ ಸಿಂಹಾಸನದ ಮೇಲೆ ಕೂಡಿಸಿದ. ಆಕೆ ಜೀವಂತವಿರುವಾಗಲೇ ರಹಸ್ಯವಾಗಿ ಮದುವೆಯಾಗಿದ್ದೆ ಅಂತ ಹೇಳಿ ಪ್ರಜೆಗಳು ಆಕೆಯನ್ನು ರಾಣಿ ಎಂದು ಒಪ್ಪಿಕೊಳ್ಳುವಂತೆ ಮಾಡಿದ. ಎಲ್ಲರೂ ಆಕೆಯ ಅಸ್ಥಿಪಂಜರದ ಕೈ ಅನ್ನು ಮುದ್ದಾಡುವಂತೆ ಮಾಡಿದ. ಆಕೆಯನ್ನು ಸಾಯಿಸಿದವರನ್ನು ಹಿಡಿದು ಜನರೆದುರು ಅವರ ಗುಂಡಿಗೆಯನ್ನು ಬಗೆದು ಸಾಯಿಸುವಂತೆ ಆದೇಶ ನೀಡಿದ.”
ಆತ ನನ್ನ ಕಡೆ ಅಪರೂಪವಾಗಿ ನೋಡುತ್ತಾ “ನಿಮ್ಮ ಗೋಧಿ ಬಣ್ಣದ ದೇಹ, ಜೇನು ಬಣ್ಣದ ಕಂಗಳು, ಕಪ್ಪು ಕೂದಲು ತುಂಬಾ ಹಿಡಿಸಿವೆ” ಎಂದ. ಕೂದಲನ್ನು ಮುಟ್ಟುವುದೋ ಬೇಡವೋ ಎನ್ನುವ ಸಂದೇಹದಿಂದ ಚಾಚಿದ ಕೈಯನ್ನು ಹಿಂದಕ್ಕೆ ತೆಗೆದುಕೊಂಡ. 
ಬಹಳ ಹೊತ್ತಿನ ಮೌನದ ನಂತರ ಕೇಳಿದೆ. “ಪೆದ್ರೊದು ಮಹತ್ವ ಪ್ರೀತಿ ಎನ್ನುತ್ತೀಯಾ?” “ಗೊತ್ತಿಲ್ಲ” ಉತ್ತರಿಸಿದ. 
“ಇನೇಸ್ ಅನ್ನು ಸಾಯಿಸುವವ ಆಕೆಯ ಸೌಂದರ್ಯವನ್ನು ಗಮನಿಸಬೇಕಿತ್ತು”. 
“ಅದನ್ನು ನೋಡೇ ಹಾಗೆ ಮಾಡಿದನೇನೋ!” ಆತನಲ್ಲಿ ಏನೋ ದಿಗ್ಭ್ರಮೆ. 
ಕೆಲಹೊತ್ತಿಗೆ ‘ ನೀವು ವೈನ್ ತೆಗೆದುಕೊಂಡಿಲ್ಲ’ ಅನ್ನುತ್ತಾ ನನ್ನ ಕಡೆ ಗ್ಲಾಸ್ ಅನ್ನು ತಳ್ಳಿದ. “ಬಹಳಷ್ಟು ಸಲ ಕಥೆಗಳಿಗೆ ಸಾಕ್ಷ್ಯವಾಗಿ ಕಲ್ಲುಗಳು ಗೋಡೆಗಳೇ ಉಳಿಯುತ್ತವೆ” ಅಂದೆ ವೈನ್ ಗ್ಲಾಸ್ ಅನ್ನು ತೆಗೆದುಕೊಳ್ಳುತ್ತಾ. ಆತ ಏನೂ ಮಾತನಾಡಲಿಲ್ಲ. 
ಆತ ಅಪರಿಚಿತನಾದರೂ ಕರೆದಕೂಡಲೇ ಯಾಕೆ ಬಂದೆ ಎನ್ನುವ ಸಂದೇಹ ವುಂಟಾಯಿತು. ಆತ ಹೇಳುವ ಕಥೆಗಳು ಏನಾದರೂ ಆಗಿರಬಹುದು. ಇಲ್ಲಿಂದ ಬೇಗ ಹೊರಡಬೇಕು ಎಂದು ಬಲವಾಗಿ ಅನಿಸಿತು. ಆದರೆ ಆತನ ನೋಟ ನಾನು ಹೊರಡದಂತೆ ತಡೆಯುತ್ತಿದೆ. 
“ನೀವು ನನ್ನೊಂದಿಗೆ ಡಾನ್ಸ್ ಮಾಡುತ್ತೀರಾ?” ಕೇಳಿದ. “ಇಲ್ಲ ನನಗೆ ಡಾನ್ಸ್ ಬರೋದಿಲ್ಲ” ಅನ್ನುತ್ತ ಆತನ ಕಣ್ಣುಗಳನ್ನ ದಿಟ್ಟಿಸಿದೆ. “ನೀವೇಕೆ ಪದೇ ಪದೇ ನನ್ನ ಕಣ್ಣುಗಳನ್ನ ದಿಟ್ಟಿಸುತ್ತೀರ? ” ಈ ಕಂಗಳು ಚಿರುತೆಯ ಕಂಗಳಂತೆ ಎಲ್ಲೊ ನೋಡಿದ ಹಾಗೆ ಅನಿಸುತ್ತಿವೆ”. “ಕಣ್ಣುಗಳು ನಮ್ಮ ಆತ್ಮವನ್ನು ಪ್ರತಿನಿಧಿಸುತ್ತವಂತೆ ಗೊತ್ತಾ?” ಅಂದ ಆಶ್ಚರ್ಯವಾಗಿ.”ಹೌದಾ! ಆದರೆ ನೀವು ಬೆನ್ನಟ್ಟಿದ ಆತ್ಮನಾ?” ಆತ ಮಾತನಾಡದೇ ವೈನ್ ಸಿಪ್ ಮಾಡುತ್ತಿದ್ದ. ಆತನ ಸಮಕ್ಷಮ ಯಾಕೋ ಇಕ್ಕಟ್ಟಾಗಿ ಮುಜುಗರವೆನಿಸುತ್ತಿದೆ. “ಇನ್ನು ಹೊರಡುತ್ತೇನೆ” ತಟ್ಟನೆ ಎದ್ದು ನಿಂತೆ. ” ಒಂದಿಷ್ಟು ಹೊತ್ತು ನನ್ನೊಂದಿಗೆ ಕೂತುಕೊಳ್ಳಿ ಪ್ರಿನ್ಸೆಸ್” ಅಂತ ಬೇಡಿಕೊಳ್ಳುವಂತೆ ಕೇಳಿದ. ಆ ಕಥೆಯನ್ನು ಹೇಳಿದ ನಂತರ ಆತ ಮುಂಚಿನಂತೆ ನಗುತ್ತಿಲ್ಲ ನಿಶ್ಶ್ಬ್ಧವಾಗಿದ್ದಾನೆ.  
ಆತ ನನ್ನ ಕೈ ಅನ್ನು ತನ್ನ ಕೈಯೊಳಗೆ ತೆಗೆದುಕೊಂಡ. ಆತನ ಕೈ ಬೆಚ್ಚಗೆ ಮೃದುವಾಗಿತ್ತು. ಕೈ ಸೋಕಿದರೇನೇ ಆತನ ಉಸಿರು ತಾಕುತ್ತಿರುವಂತೆ ಅನಿಸಿತು. ಕತ್ತಲು ಕವಿಯಿತು. ನಕ್ಷತ್ರಗಳು ಹೊಳೆಯುತ್ತಿವೆ. ಆಗಾಗ ನಕ್ಷತ್ರಗಳು ಕೂಡ ಇತಿಹಾಸವನ್ನು ಹೇಳುತ್ತವೆ. 
“ಬಹುಶ: ಪ್ರಿನ್ಸ್ ಪೆದ್ರೋ ತನ್ನ ಪ್ರೀತಿಯನ್ನು ತೋರ್ಪಡಿಸುವುದಕ್ಕಲ್ಲದೆ,ಮಹಾರಾಣಿಯಾಗಿರಬೇಕೆನ್ನುವ ಇನೇಸ್ ಬಯಕೆಯನ್ನು ತೀರಿಸುವುದಕ್ಕಾಗಿ ಹಾಗೆ ಮಾಡಿರಬಹುದು” ಅಂದ. ಕೈಯಲ್ಲಿರುವ ಪುಸ್ತಕ ತೆಗೆದು ಈ ಫೋಟೋ ನೋಡಿ ಎಂದು ತೋರಿಸಿದ. 
ನೇರಳೆ ಬಣ್ಣದ ಫ್ರಾಕ್ ತೊಟ್ಟು ಸಿಂಹಾಸನದ ಮೇಲೆ ಕುಳಿತ ಡೆತ್ ಕ್ವೀನ್ ಇನೇಸ್ ದೆ ಕಾಸ್ತ್ರೋ. ಆಕೆಯ ಸ್ಕೆಲಿಟನ್ ಕೈ ಅನ್ನು ಯಾರೋ ಮುದ್ದಾಡುತ್ತಿದ್ದಾರೆ. ಅದನ್ನು ನೋಡುತ್ತಲೇ ಒಳಗೆಂತದೋ ಕಂಪನ. ವಿಸ್ಮಯದಿಂದ ನಾನು ಹಾಕಿದ್ದ ನೇರಳೆ ಬಣ್ಣದ ಗೌನ್ ನೋಡಿಕೊಂಡೆ! “ಇನ್ನು ಹೊರಡುತ್ತೇನೆ” ಅಂತ ಎದ್ದು ಬಿರುಸಿನಿಂದ ಹೆಜ್ಜೆ ಹಾಕಿದೆ. 
ಆತ ನನ್ನ ಹಿಂದೆಯೇ ಬಂದ. ಕತ್ತಲಲ್ಲಿ ವೇಗವಾಗಿ ನಡೆಯುತ್ತಾ ಕಾಲಿಗೆ ಏನೋ ತಾಕಿದಂತಾಗಿ ಆಯತಪ್ಪಿ ಬೀಳಹೋದೆ. ಆತ ಕೆಳಗೆ ಬೀಳದಂತೆ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ. ಇದ್ದಕ್ಕಿದ್ದಂತೆ ಮೊಣಕಾಲನ್ನು ಊರಿ ನನ್ನ ಕೈಯನ್ನು ಮುತ್ತಿಟ್ಟ. 
“ನಿನ್ನ ಹೆಸರು?”
“ಅಲ್ವರೋ ಗೋನ್ಸಾಲ್ವಿಸ್” 
ಆತನು ತೋರಿಸಿದ ಪುಸ್ತಕದಲ್ಲಿನ ಒಂದು ವಾಕ್ಯ ನೆನಪಿಗೆ ಬಂತು. The three noble men, appointed by king Afonso – Pêro Coelho, Álvaro Gonçalves, and Diogo Lopes Pacheco – went to the Monastery of Santa Clara-a-Velha in Coimbra, in the gardens where she and Pedro used to meet, and killed Inês by decapitating her.

ತೆಲುಗು ಮೂಲ : ಶ್ರೀಸುಧ ಮೋದುಗು ಅನುವಾದ : ರೋಹಿಣಿ ಸತ್ಯ 

ಚಿತ್ರ ಕೃಪೆ ವಿಕಿಪೀಡಿಯ