- ಕೂಡಿ ಹಾಕಿದ ಬೆಕ್ಕು ಮತ್ತು ಇನ್ನೊಂದು ಕವಿತೆ - ಅಕ್ಟೋಬರ್ 23, 2022
- ಮತ್ತೇನಿಲ್ಲ - ಜೂನ್ 27, 2021
ಕುಂಟು ಲೋಕದಲ್ಲಿ ನಾವು ಹೆಳವರಾಗಬಾರದು
ಮುಂಜ್ ಮುಂಜಾನೆ
ಅಲ್ಲಾ ಹು ಅಕ್ಬರ್ ಕೂಗಿದಾಗ ಇನಿ ಬೆಳಕು
ಜಗತ್ತನ್ನು ತುಂಬುತ್ತದೆ ಎಳೆಯ ಬಿಸಿಲಿನ ಜೊತೆ
ಮನೆಯ ಪಕ್ಕದ ತೋಟ ಆಗತಾನೇ ಮೈ
ಮುರಿಯುತ್ತಿರುತ್ತದೆ
ಪಾರಿಜಾತ, ಮಾವು, ಬೇವು, ಸಪೋಟ, ನೇರಳೆ
ಸೀತಾಫಲ ಕರಿಬೇವುಗಳೆಲ್ಲಾ ಇಬ್ಬನಿ ಜಳಕದಿ ಪುಳಕ
ಕಾಕಡ, ಕನಕಾಂಬರ, ಗುಲಾಬಿ, ದುಂಡು ಮಲ್ಲಿಗೆಗಳಿಗಿನ್ನೂ ನಿದ್ದೆ
ಮುದುಡಿ ಮಲಗಿದ ಬಸಳೆ , ಮೈನೆರೆಯದ ಸಂಪಿಗೆ,
ಮೈ ಚಳಿಬಿಟ್ಟ ನಿಂಬೆಹೂಗಳ ನರ್ತನ ಚಳಿ ಚಳಿ!
ಕನಸು ಹೊದ್ದ ಅಡಕೆ ನಾಳೆಯ ಅತಿ ಬೆಲೆಗೆ ಬೀಗು
-ತ್ತಿರುವಾಗಲೇ ಮೂಲೆಯ ತಿಪ್ಪೆಗೆ ಕೋಗಿಲೆ
ನಡೆದು ಬಂದದ್ದು ಅಚ್ಚರಿ
ಗಾಜ ಸರಿಸಿ ಕಿಟಕಿಯಾಚೆ
ಥಂಡಿ ಹವೆಗೆ ಕಣ್ಣು ನೆಟ್ಟು ಕೂತಿದ್ದೆ
ಬಳಸಿ ಬಿಸಾಡಿದ್ದ ಸಕಲವೂ ಆ ಗುಂಡಿಯಲ್ಲಿ ವಿರಾಜಮಾನ!
ಮಗಳ ಎಂಜಲ ಹಾಲನ್ನ, ರೆಕ್ಕೆ ಪುಕ್ಕ ಕತ್ತರಿಸಿಕೊಂಡ
ತರೇವಾರಿ ತರಕಾರಿ ರಾಶಿ, ಮೀನ ಮುಳ್ಳು, ಮೊಟ್ಟೆ ಸಿಪ್ಪೆ,
ಫ್ರಿಜ್ಜೊಳಗೆ ಅಸುನೀಗಿದ
ಎಲ್ಲ ಅಂದರೆ ಎಲ್ಲಾ ಅಲ್ಲಿ ಅಯೋಮಯ!
ಹಾರಲಾರದ ಕೋಗಿಲೆ ತಿಪ್ಪೆ ರಾಸಿಯಲ್ಲಿ ಹುಡುಕಿದ್ದು ಅದೇ
ಹಾಲನ್ನ; ಮಗಳು ತಿಂದುಳಿಸಿದ ಅನ್ನವೀಗ
ಕೊಕ್ಕಲಿ ಅಮೃತ!
ಯಾರೋ ಬೀಸಿದ ಕಲ್ಲಿರಬೇಕು ಒಂದು ಕಾಲು ಊನ
ನಮ್ಮ ಮನಸಿನ ಹಾಗೆ… ಕೊರಳ ಹಾಡು
ಕಂದನ ಕರೆವ ದನಿಗಷ್ಟೇ ಮೀಸಲಾ? ಅಥವಾ
ಗೂಡಿಲ್ಲದ ನೆಲೆಗೆ ತಿಪ್ಪೆ ಅನ್ನಸಾಮ್ರಾಜ್ಯ!
ದಿನಾ ಈ ಹಾಲನ್ನ ದಾಸೋಹ ಕುಂಟು ಕೋಗಿಲೆಗೆ
ಹಾರದು, ಏರದು ಇಲ್ಲಿನ ಸಸ್ಯರಾಶಿ ಗೂಡು ಅದರ ಪಾಲಿಗೆ
ಮಗಳಿಗೆ ಈಗೀಗ ನಾನೇ ಅನ್ನ ತಿನ್ನಿಸುತ್ತಿದ್ದೇನೆ;
ಹೆಚ್ಚು ಹಾಕಿಕೊಂಡು
ಬಿಟ್ಟಿದ್ದೆಲ್ಲಾ ತಿಪ್ಪೆಯ ಸಿಂಹಾಸನಕ್ಕೆ ಮತ್ತು ಅದರ ದೊರೆಗೆ…
ಕುಂಟು ಲೋಕದಲ್ಲಿ
ನಾವು ಹೆಳವರಾಗಬಾರದು… ಅಷ್ಟೆ!
ಕೂಡಿ ಹಾಕಿದ ಬೆಕ್ಕು
ಕುರುಕ್ಷೇತ್ರ ನೆಲ ಗುಲಾಬಿ ಕೆಂಪು ಸತ್ತ ಜೀವಗಳು
ನಡೆದಾಡಿ ಉಸಿರಾಡುತ್ತಿವೆ, ಉರುಳಿದ ತಲೆಗಳಲಿ ಯಾವ ಲೆಕ್ಕ
ಬರಿದೆ ಮೌನ ಯಾನದಿ ಪಯಣ!
ಆಕಾಶ ನೋಡದ ಕರ್ಣನ ಕೈ, ಎಳೆದೆಳೆದು ಬಿಸುಟಿದ
ದುಶ್ಯಾಸನನ ಕೈಗಳು ರಕುತ ಮರಳಲ್ಲಿ
ಹೂತಿವೆ ; ಎಂದೋ ಆಡಿದ ಮಾತು ಇಂದು ನೆನಪಾಗಿ
ತುಂಬಿದಂತೆ ಕಣ್ಣ ಕೆರೆ
ಸಮರ ಮುಗಿಯಿತೆಂದವರಾರು ಇಡೀ ರಣಕಣದಿ ಒಬ್ಬಳೇ
ಮೃದು ಮಾಂಸಕೆ ಅರಸೋ ಹದ್ದಾಗಿ ದ್ರೌಪದಿ ಅಲೆಯುತ್ತಿದ್ದಾಳೆ!
ಕಣ್ಣ ಹಸಿವಿಗೆ ಸುಯೋಧನ ದರ್ಶನ ಬೇಕು
ಎಡವಿದೆಡೆಯೆಲ್ಲಾ ತಲೆ, ಕಾಲು ಮತ್ತು ನಿಶ್ಚಿಂತೆಯ ಕೊನೆ
ಉಸಿರಿನ ನಿಟ್ಟುಸಿರು ಕವಿಗಪ್ಪಳಿಸಿ ಶರಣು
ಬಯಸಿದ್ದು ಬೇಕೆಂದು ಹಠ ಹೂಡುವ
ಅಂಗಡಿ ಮುಂದಿನ ಮಗು ಈಗ ದ್ರೌಪದಿ
ಕಣ್ಣ ಹಸಿವಿಗೆ ಯಾರು ಅಡ್ಡ ಬಂದರೂ ತೃಪ್ತಿ ದೂರ
ಶರಶಯ್ಯೆಯ ಅಜ್ಜ ಅನತಿ ದೂರ, ಒಲ್ಲೆ ಅವನ ಹಿತಮಾತು
ಎದೆಗಿಳಿಸಿಕೊಳ್ಳಬೇಕು ಕೌರವನೆದೆಯ ರಕ್ತ
ಪಾದವೂರಿ ಅದೇ ಹೃದಯದ ಮೇಲೆ
ಅಲೆಯುತ್ತಿದ್ದಾಳೆ ಕಣ್ಣಲಿ ಕಾಡಲೆವ ಸಿಂಹ
ಹೆಜ್ಜೆಯಿಟ್ಟಂತೆ!
ಯದಾಯದಾಹಿ ಅಂದ ಕೃಷ್ಣನ ಅಭಯ ಕೆಲಸಕ್ಕೆ ಬಾರದೀಗ
ಹುಡುಕಬೇಕು
ಮರೆತ ಮಾತುಗಳ, ಆರಿ ಹೋದ ಬಿಸಿ ಕಣ್ಣ ಹನಿಗಳ
ಮತ್ತು
ತಟ್ಟಿದ ತೊಡೆಯ ಒಳ ಮೂಳೆ ಕಣ್ತುಂಬಿಕೊಳ್ಳಲಷ್ಟೇ
ಕಣ್ಣು ಹಸಿದಿದೆ!
ರಕ್ತವಾಸನೆಯ ಬಯಲಲಿ ದ್ರೌಪದಿ ಈಗ ಕೂಡಿ ಹಾಕಿದ ಬೆಕ್ಕು
ಕಣ್ಣು ಇಂಗಿದ ಕ್ಷಣ
ಶಾಂತಮೂರ್ತಿ ಬಿಡಿಸಿದ ಮುಡಿಗೆ ವೈರಿರುಧಿರ
ತೈಲವೆಲ್ಲಿಯೋ ಅರಸೋ ಕಣ್ಣು ಅಲೆಯುತ್ತಿದೆ
ಅಲೆದಾಟ ನಿಂತಾಗ ಯುದ್ಧ ನಿಂತಿತು
ನಮ್ಮ ಕಣ್ಣು ಅದೇನು ಹುಡಕುತ್ತಿದೆಯೋ
ನಮ್ಮೊಳಗಿನ ಶತ್ರುವ ಕಾಣಲು ನಮ್ಮ ಕಣ್ಣೇ ಬೇಕು
ಹುಡುಕೋಣ!
ವಿಳಾಸ ಕಳೆದಿದೆ
ನದಿ ಸಾಗುತಿದೆ
ಹಳೆಯ ಹಾಡಿನೊಂದಿಗೆ
ಬಲು ದೂರದಿಂದ ಸಾಗಿದ ಪಯಣ
ಸಿಕ್ಕವರನ್ನೆಲ್ಲಾ ತನ್ನವರೆಂದು ನಡೆದಿದೆ ;
ಪಕ್ಷಕ್ಕೆ ಬಂದವರೆಲ್ಲಾ ಹಿತೈಷಿ
ಗಳು ಎಂದುಕೊಂಡ ಮಂತ್ರಿಯಂತೆ!
ಸಾಗಿದೆಯಷ್ಟೇ ಸೇರೋ ವಿಳಾಸ ಅದೆಲ್ಲೋ ಕಳೆದಿದೆ ;
ಬಿದ್ದ ರಭಸಕ್ಕೆ ಆದ ಗಾಯಗಳ ಮರೆತು
ಸಿಗುವ ಅಮ್ಮನ ಮಡಿಲಿಗೆ ಓಡುವ ಮಗು ನದಿ ;
ನದಿಗೆ ವಿಳಾಸ ಬೇಕಾಗಿದೆ!
ಇಲ್ಲೆ, ಇದೇ ಗಿಡದಗೂಡಲ್ಲಿ ಕಣ್ಣು ಬಿಟ್ಟು
ಕೊಕ್ಕು ವಿನಿಮಯಿಸಿಕೊಂಡ ಹಕ್ಕಿಗೆ ತಾನು
ರೆಕ್ಕೆ ಫಡಫಡಿಸಿ ಹಾರಲು ಕಲಿತ ಮರದ ವಿಳಾಸ ಸಿಕ್ಕುತ್ತಿಲ್ಲ!
ಆ ಹಸಿರು, ಆ ಗೂಡ ಹಾಡು, ಆ ಮರದ ಬಿಸಿಯಪ್ಪುಗೆ ಇಲ್ಲೆ
ಎಲ್ಲೋ ಕಳೆದಿದೆ
ಸುರಿದ ಮಳೆಗೆ ಮನೆ ಕಳೆದುಕೊಂಡ ಕಣ್ಣುಗಳಿಗೆ
ದೃಷ್ಟಿಯಿಟ್ಟೆಡೆಯೆಲ್ಲಾ ನೀರು ತನ್ನ
ವಿಳಾಸ ನಾಪತ್ತೆ!
ಮರಿ ಹಕ್ಕಿ ಈಗ ತಾಯಿ ಹಕ್ಕಿಯಾಗಿದೆ,
ಅದೇ ಮರ ಹುಡುಕಿ ಬಂದಿದೆ
ಮರದ ಜಾಗದಲ್ಲಿ ಅರೆಬರೆ ಸಿಮೆಂಟು ತಿಂದ ವಿಳಾಸವಿಲ್ಲದ
ರಸ್ತೆಯೊಂದು ಅಂಗಾತ ಮಲಗಿದೆ ; ಹಕ್ಕಿ ಹಾರುತ್ತಲೇ ಇದೆ
ವಿಳಾಸ ಸಿಕ್ಕುತ್ತಿಲ್ಲ!
ಒಂದು ಮಾತು, ಎರಡು ಭೇಟಿ ಒಂದಿಷ್ಟು ಹಂಚಿಕೊಳ್ಳುವ ಪ್ರೀತಿಗೆ
ಹೃದಯ ನದಿಯಾಗಿದೆ
ಅಲೆವ ಹಕ್ಕಿಯಾಗಿದೆ
ವಿಳಾಸ ಸಿಕ್ಕರೆ
ಮನುಷ್ಯರನ್ನು ದಯಮಾಡಿ ಸಂಪರ್ಕಿಸಿ!
ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..