ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು

ಕೆ ಸತ್ಯನಾರಾಯಣ
ಇತ್ತೀಚಿನ ಬರಹಗಳು: ಕೆ ಸತ್ಯನಾರಾಯಣ (ಎಲ್ಲವನ್ನು ಓದಿ)

ಅನ್ನಾ ಕರೆನೀನಾ ಕಾದಂಬರಿ ಬರೆದವನು ಟಾಲಸ್ಟಾಯ್‌. ಕಾದಂಬರಿಯ ಕತೆ ನಡೆದದ್ದು ರಷ್ಯಾದಲ್ಲಿ. ಮಾಸ್ಕೋ,
ಹೀಟರ್ಸ್‌ಬರ್ಗ್‌ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ. ಇದೆಲ್ಲ ನಿಜವೇ! ಆದರೆ ಅನ್ನಾ ರೈಲು ಗಾಲಿಗಳಡಿ ಎರಡು ಸಲ ಮಲಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡದ್ದು ನಮ್ಮೂರಾದ ಮಂಡ್ಯದ ರೈಲ್ವೆ ಸ್ಟೇಷನ್‌ನಲ್ಲಿ.

ಕಾದಂಬರಿಯ ಓದು ಒಂದು ಘಟ್ಟಕ್ಕೆ ಬಂತು. ಅನ್ನಾಳ ಹತಾಶೆ, ಸೋಲು, ಖಿನ್ನತೆ ಇವುಗಳಿಂದೆಲ್ಲಾ ನರಳುತ್ತಾ
ತನ್ನೊಳಗೆ ಏನಾಗುತ್ತಿದೆ ಎಂದು ಅರ್ಥವಾಗುವ ಮೊದಲೇ ಆತ್ಮ ವಿನಾಶದ ಹಾದಿಯನ್ನು ಹಿಡಿದಳು. ನಾನು ಕೂಡ ಅವಳನ್ನು ಸ್ಟೇಷನ್‌ಗೆ ಹಿಂಬಾಲಿಸಿದೆ.

ನಮ್ಮೂರಿನದು ಪುಟ್ಟ ಸ್ಟೇಷನ್‌. ಒಂದೇ ಪ್ಲಾಟ್‌ಫಾರಂ. ಎರಡೇ ಹಳಿಗಳು. ಮೂರನೇ ಹಳಿ ಗೂಡ್ಸ್‌ ಗಾಡಿಗಳಿಗೆ
ಮಾತ್ರ ಮೀಸಲಾದದ್ದು.ನಾನು ನೋಡ ನೋಡುತ್ತಿದ್ದಂತೆ ಅನ್ನಾ ಮೂರನೆಯ ಹಳಿಯನ್ನು ಆಯ್ಕೆ ಮಾಡಿಕೊಂಡಳು. ಹಳಿ ಹತ್ತಿರ ಬಂದಳು. ಮುಖವೆಲ್ಲ ವಿವರ್ಣವಾಗಿತ್ತು. ತುಟಿಯೆಲ್ಲ ನಡುಗುತ್ತಿತ್ತು. ಕೂದಲೆಲ್ಲಾ ಜೆಲ್ಲಾಪಿಲ್ಲಿಯಾಗಿ ಮುಖದ ಎಡಭಾಗದ ಮೇಲೆ ಹರಡಿಕೊಂಡಿತ್ತು. ಬಟ್ಟೆಯೆಲ್ಲ ಸಡಿಲವಾಗಿತ್ತು. ತೂರಾಡಿಕೊಂಡೇ ಬಂದಳು. ಅವಳ ನಡಿಗೆಯ ವೇಗಕ್ಕೆ ಗುಲಾಬಿ ಬಣ್ಣದ ಸ್ಕಾರ್ಫ್‌ ಬಿದ್ದೇ ಹೋಯಿತು.

ಅನ್ನಾಗೇ ಮೀಸಲಾಗಿರುವಂತೆ ಒಂದು ಗೂಡ್ಸ್‌ ಗಾಡಿ ಷಂಟಿಂಗ್‌ ಮಾಡುತ್ತಲೇ ಇತ್ತು. ಆತುರಾತುರವಾಗಿ ಮೊದಲನೆ ಸಲ ಗಾಲಿಗಳ ನಡುವೆ ಮಲಗಲು ಹೋದಾಗ, ಎಡವಟ್ಟಾಯಿತು. ಲೆಕ್ಕ ತಪ್ಪಿತು. ಗಾಲಿ ಅವಳ ಮೇಲೆ ಹರಿಯಲೇ ಇಲ್ಲ. ಎದ್ದು ಅಲ್ಲೇ ಕುಕ್ಕರಗಾಲಿನಲ್ಲಿ ಕುಳಿತು ಲೊಚಗುಟ್ಟಿದಳು. ಈಗ ಎದುರುಗಡೆಯಿಂದ ಬರುತ್ತಿದ್ದ, ಸಮೀಪಿಸುತ್ತಿದ್ದ ಗಾಲಿಗಳ ಕಡೆಗೇ ತನ್ನ ಗಮನವನ್ನೆಲ್ಲ ಕೇಂದ್ರೀಕರಿಸಿದಳು. ಇನ್ನೂ ಜೋರಾಗಿ ಕೆಳ ತುಟಿ ಕಚ್ಚಿಕೊಂಡಳು. ಕಚ್ಚಿಕೊಂಡ ರಭಸಕ್ಕೆ ಕಣ್ಣುಗಳು ಚಿಕ್ಕದಾದದ್ದು ಅವಳಿಗೆ ಗೊತ್ತಾಗಲೇ ಇಲ್ಲ. ಕಂಪಿಸುತ್ತಿದ್ದ ಉಸಿರನ್ನು ಹಿಡಿದುಕೊಂಡು ದೇಹದ ಮಧ್ಯ ಭಾಗದ ಮೇಲೆ ಗಾಲಿ ಸರಿಯಾಗಿ ಹರಿಯುವಂತೆ ತನ್ನ ಸಪೂರ ಶರೀರವನ್ನು ಚೆಲ್ಲಿದಳು. ಬಂತು ಬಂತು, ಗಾಲಿ ಬಂದೇ ಬಿಡ್ತು, ಉರುಳೇಬಿಡ್ತು.
ಅನ್ನಾ ಒಂದು ಕ್ಷಣ ಎದ್ದ ಹಾಗಾಯಿತು. ಮುಂದೆ ಚೆಲ್ಲಿದ ಪುಟ್ಟದಾದ ಕೈಗಳು ಕೊಂಚ ಮೇಲೆತ್ತಿ ಅಲುಗಾಡಿದಂತಾಯಿತು. ಬಲಗೈ ಬೇಡ, ಬೇಡ, ಬೇಡ ಎಂದು ಯಾರಿಗೋ ಏನನ್ನೋ ಹೇಳುತ್ತಿರುವಂತೆ ಕಂಡಿತು. ಗಾಲಿ ಇಡಿಯಾಗಿ ಅವಳ ದೇಹದ ಮೇಲೆ ಹರಿದೇಬಿಟ್ಟಿತು. ಹಾಗೆ ಹರಿದೇಬಿಟ್ಟಾಗ ಅವಳ ದೇಹದಿಂದ ಜ್ಯೋತಿಯೊಂದು ಹೊರಬಂದು ಕ್ಷಣ ಮಾತ್ರ ಮಿಂಚಿ ಅಲ್ಲೇ ಕರಗಿಹೋಯಿತು.
ನಾನು ತುಂಬಾ ಹೊತ್ತು ಅಲ್ಲೇ ನಿಂತಿದ್ದೆ. ರೈಲ್ವೆ ಸಿಬ್ಬಂದಿ ಯಾರೂ ಬರಲೇ ಇಲ್ಲ. ನಾನು ಮನೆಗೆ ಹೋಗಿ ಓದುತ್ತಾ
ನಿಲ್ಲಿಸಿದ್ದ ಕಾದಂಬರಿಯನ್ನು ಮುಂದೆ ಓದಲು ಪ್ರಾರಂಭಿಸಿದೆ. ಕಾದಂಬರಿಯಲ್ಲಿ ಅನ್ನಾ ಆತ್ಮಹತ್ತೆ ಮಾಡಿಕೊಂಡ ರೀತಿ ನಾನು ಕಣ್ಣೆದುರಿಗೆ ಕಂಡಂತೆ ಇತ್ತು. ಕಾದಂಬರಿಯ ಉಳಿದ ಭಾಗವನ್ನು ನಾನು ಓದಲಿಲ್ಲ, ಅಂದೂ ಮತ್ತು ಮುಂದೆಂದೂ.

ಈಗಲೂ ನನಗೆ ಅನ್ನಾ ಕಾದಂಬರಿ ಓದುವಾಗಲೆಲ್ಲ, ಓದಿದ್ದು ನೆನಪಾಗುವಾಗಲೆಲ್ಲ, ಆಕೆ ಅಷ್ಟೊಂದು ದೂರದಿಂದ ಬಂದದ್ದು, ನಮ್ಮೂರಿನ ಗೂಡ್ಸ್‌ ಗಾಡಿಗಳ ಹಳಿಗಳ ಮೇಲೆ ಮಲಗಿದ್ದು ಎಲ್ಲವೂ ಕಣ್ಣಿಗೆ ಕಟ್ಟುತ್ತದೆ. ಮತ್ತೆ ಕಾದಂಬರಿ ಓದುತ್ತೇನೆ, ಮತ್ತೆ ಸ್ಟೇಷನ್‌ ಹತ್ತಿರ ಹೋಗುತ್ತೇನೆ. ಮತ್ತೆ ಮತ್ತೆ ಅನ್ನಾ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರುತ್ತಾಳೆ. ನಾನು ಇದನ್ನೆಲ್ಲ ಯಾರಲ್ಲೂ ಹೇಳಲು ಹೋಗಿಲ್ಲ. ಯಾರಿಗೂ ತೊಂದರೆಯಾಗಬಾರದೆಂದು. ಹಾಗೆ ತೊ೦ಂದರೆಯಾಗಬಾರದೆಂದು ನಮ್ಮೂರ ಸ್ಟೇಷನ್‌ ಕೂಡ ದೊಡ್ಡದಾಗಲೇ ಇಲ್ಲ. ಅನ್ನಾ ಮಲಗಿದ್ದ ಗೂಡ್ಬ್‌ ಗಾಡಿಗಳ ಹಳಿಯ ಭಾಗ ಹಾಗೇ ಇದೆ. ಯಾವ ಪ್ರಯತ್ನವೂ ಇಲ್ಲದೆ ನಮ್ಮೂರಿನಲ್ಲಿ ಅನ್ನಾಗೆ ಒಂದು ಸ್ಮಾರಕ ನಿರ್ಮಾಣವಾಗಿದೆ. ನನಗ೦ತೂ ಮತ್ತೆ ಮತ್ತೆ ಭೇಟಿ ನೀಡುವ ಪವಿತ್ರ ಯಾತ್ರಾ ಸ್ಥಳವಾಗಿದೆ.


ನನ್ನ, ನನ್ನ ತಂಗಿಯ ದುರಾದೃಷ್ಟವೆಂದರೆ, ನಮ್ಮಿಬ್ಬರ ತಂದೆ-ತಾಯಿ, ನಾವಿಬ್ಬರೂ ಮೆಜಾರಿಟಿಗೆ ಬಂದಮೇಲೆ ವಿಚ್ಛೇದನ ಪಡೆದದ್ದು. ಇಬ್ಬರೂ ಗಣ್ಯ ವಕೀಲರಾದ್ದರಿಂದ, ಅವರವರ ಕೇಸನ್ನು ಅವರೇ ಪ್ರಖರವಾಗಿ ವಾದ ಮಾಡಿದರು. ಆ ವಾದವನ್ನು ನೋಡಲು, ಕೇಳಿಸಿಕೊಳ್ಳಲು ಕೋರ್ಟ್‌ ಹಾಲ್‌ನಲ್ಲಿ ಕಿಕ್ಕಿರದ ಜನಸಂದಣಿ. ನ್ಯಾಯಮೂರ್ತಿ ಚಂದ್ರಕಾಂತರು ವಿಚ್ಛೇದನವನ್ನು ಆದೇಶಿಸಿದರು.

ಚಂದ್ರಕಾಂತರಿಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಪ್ರತಿದಿನವೂ ಬೇರೆ ಬೇರೆ ಉದ್ಯಾನವನಗಳಲ್ಲಿ ವಾಕಿಂಗ್‌ ಮಾಡುತ್ತಿದ್ದರು. ಈ ರೀತಿಯ ವಾಕಿಂಗ್‌ನಿಂದ ಮನಸ್ಸು ಪ್ರಫುಲ್ಲವಾಗುತ್ತದೆ, ಜಿಗಿತ ಪಡೆಯುತ್ತದೆ, ಚಿಂತನದಲ್ಲಿ ಸ್ಪಷ್ಟತೆ ಇರುತ್ತದೆ, ಕೊನೆಯದಾಗಿ ನಾನು ಕೊಡುವ ತೀರ್ಪುಗಳು ಕೂಡ ಸರಿಯಿರುತ್ತದೆ ಎನ್ನುವುದು ಅವರ ವಾದ.

ವಿಚ್ಛೇದನಾ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅವರಿಗೆ ನನ್ನ ಪರಿಚಯವಾಗಿತ್ತು. ನನ್ನ ಹೇಳಿಕೆಯನ್ನು ಕೂಡ ರೆಕಾರ್ಡ್‌ ಮಾಡಿಕೊಂಡಿದ್ದರು. ನಮ್ಮ ತಂದೆ-ತಾಯಿ ಇಬ್ಬರೂ ಒಳ್ಳೆಯವರು. ಅವರು ಮಾಡಿರುವ ವಾದ ಕೂಡ ಸರಿಯಾಗಿದೆ. ಆದರೆ, ಇಬ್ಬರೂ ಸೇರಿ ಒಂದೇ ವಾದವನ್ನು ಮಂಡಿಸಬೇಕಾಗಿತ್ತು. ಹಾಗಾಗಾಲಿಲ್ಲ. ಅದೇ ತೊಂದರೆಯಾಗಿರುವುದು ಎಂದು ನಾನು ಪರಿತಪಿಸಿದ್ದೆ.

ಒಂದು ದಿನ ಬೆಳಿಗ್ಗೆ ವಾಕಿಂಗ್‌ ಮುಗಿದ ಮೇಲೆ ಉದ್ಯಾನವನದ ಉಯ್ಯಾಲೆಯಲ್ಲಿ ಕುಳಿತು Herbal Tea ಕುಡಿಯುತ್ತಿದ್ದ ಚಂದ್ರಕಾಂತರು ಎದುರಾಗಿ ವಿರಾಮಶೈಲಿಯ ಮುಗುಳ್ನಗೆ ನಕ್ಕು ಹೀಗೆ ಹೇಳಿದರು:

“ನಿಮ್ಮ ಮಾತಾಪಿತರ ಪ್ರೇಮವು ಯುಕ್ತವಾದದ್ದೇ! ಇಬ್ಬರೂ ಒಳ್ಳೆಯವರೆಂದು, ಸರಿಯಿದ್ದರೆಂದು ಹೇಳಿದ್ದೂ ಸರಿ. ಆದರೆ ಹಾಗೆ ಇಬ್ಬರೂ ಸರಿಯಿದ್ದರೆಂದು ನಂಬಬೇಡಿ. ನಿಮ್ಮ ತಾಯಿ-ತಂದೆ ಇಬ್ಬರೂ ಸರಿಯಿದ್ದರೆಂದು ನೀವು ಹೇಳ ಹೊರಟರೆ, ಆ ನಂಬಿಕೆಯನ್ನು ಇಟ್ಟುಕೊಂಡು ನೀವು ಮದುವೆ ಮಾಡಿಕೊಂಡರೆ, ನಿಮ್ಮ ಮದುವೆ ಆದ ಎರಡು-ಮೂರು ವರ್ಷಗಳೊಳಗೇ ಖಂಡಿತ ವಿಚ್ಛೇದನ ಆಗುತ್ತದೆ. ಅದೂ ಸರಿ, ಇದೂ ಸರಿ, ಎಲ್ಲವೂ ಸರಿ. ಎಲ್ಲವೂ ಸರಿ ಎಂದುಕೊಂಡರೆ ಸಂಬಂಧದಲ್ಲಾಗಲೀ, ದಾಂಪತ್ಯದಲ್ಲಾಗಲೀ ಸಾಮರಸ್ಯವೂ ಇರೋಲ್ಲ, ಸೊಗಸಂತೂ ಇರೋದೇ ಇಲ್ಲ. ಯಾರಾದರೂ ಒಬ್ಬರದು ತಪ್ಪಾಗಿದೆ ಅಂತ ಖಚಿತವಾಗಿ ತಿಳಿದು ಅದನ್ನು ಒಪ್ಪಿ, ಪ್ರತಿಭಟಿಸಿ, ನಿಭಾಯಿಸಿದರೇನೇ ದಾಂಪತ್ಯ ಗೆಲ್ಲೋದು. Only partisanship can lead to perfection.”


ಸದಾಶಿವಪ್ಪನೆಂಬ ಕತೆಗಾರರ ಒಂದು ಸಂಕಲನದ ಹೆಸರು “ಮೌನ-ಮೌನಿ”. ನಿಜಕ್ಕೂ ಅವರು ಮೌನಿಯೇ. ಅರವತ್ತುನಾಲ್ಕು ವಯಸ್ಸಿನ ಬದುಕಿನಲ್ಲಿ ಸ್ನೇಹಿತರ, ಸಹಲೇಖಕರ ಹತ್ತಿರ ಮಾತನಾಡಿದ್ದೆಲ್ಲ ಸೇರಿ ಮೂವತ್ತೇಳು ವಾಕ್ಯಗಳಾಗಿರಬಹುದಷ್ಟೇ! ಆ ಮೂವತ್ತೇಳು ವಾಕ್ಯಗಳಲ್ಲೂ ಮೂರು-ನಾಲ್ಕು ಪದಗಳ ವಾಕ್ಯಗಳೇ ಹೆಚ್ಚು. 

ಆದರೆ ಅವರ ಕತೆಗಳೆಲ್ಲವೂ ಸಂಭಾಷಣಾ ಪ್ರಧಾನವಾದಂಥವು. ಪ್ರಕೃತಿ ಚಿತ್ರಣ ಅಥವಾ ಮನೋವ್ಯಾಪಾರ ಕಡಿಮೆ. ಪ್ರೌಢವಾದ ಭಾಷೆ, ಧ್ವನಿಪೂರ್ಣವಾದ ಭಾಷೆ, ಪೇಟೆ ಮಾತು, ಹರಟೆಯ ರೀತಿ, ಎಲ್ಲವೂ ಅವರ ಸಂಭಾಷಣಾ ಪ್ರಧಾನ ಕತೆಗಳಲ್ಲಿ ಪ್ರಕಟವಾಗುತ್ತಿದ್ದವು. ಕತೆಗಳು ಮಾತನಾಡಬೇಕು, ಮಾತನಾಡುತ್ತಾ ಚಲಿಸಬೇಕು ಎಂದು ಒಂದೇ ವಾಕ್ಯದಲ್ಲಿ ಅವರ ಕಥಾ ಧರ್ಮವನ್ನು ಪ್ರಕಟಿಸಿದ್ದರು. ಬರೆದದ್ದು ಕೂಡ ಕೇವಲ ಹತ್ತು ಕತೆಗಳು. ಹತ್ತೂ ಗಟ್ಟಿಕಾಳು. ಆದರೆ ವಿಧಿ ನೋಡಿ ಇವರಿಗೇ ಗಂಟಲು ಕ್ಯಾನ್ಸರ್‌ ಆಯಿತು. ಧೂಮಪಾನವಿಲ್ಲ, ಮಾಂಸಾಹಾರವಿಲ್ಲ, ಮದ್ಯಪಾನವಿಲ್ಲ, ಬೊಜ್ಜಿರಲಿಲ್ಲ. ಕ್ಯಾನ್ಸರ್‌ ಬಂತು ಮಾತ್ರವಲ್ಲ, ಬಹುಬೇಗನೆ ಆಳವಾಯಿತು, ವಿಸ್ತಾರವಾಯಿತು. ಧ್ವನಿಪೆಟ್ಟಿಗೆ ತೆಗೆಯಬೇಕಾಗುತ್ತದೆ ಅಂದರು. ಮಾತನಾಡುವ ಅಭ್ಯಾಸವಿದ್ದರೆ ತಾನೇ ಅವರಿಗೆ ತೊಂದರೆಯಾಗುವುದು. ವಿಶೇಷವಾದ ತೊಂದರೆ ಆಗುವುದಿಲ್ಲ ಎಂದು ನಾವು ಭಾವಿಸಿದೆವು.

ಸದಾಶಿವಪ್ಪ ಒಬ್ಬ ಲಿಪಿಕಾರ ಮತ್ತು ಶೀಘ್ರಲಿಪಿಕಾರರನ್ನು ಸಹಾಯಕರಾಗಿ ಇಟ್ಟುಕೊಂಡರು. ಸದಾಶಿವಪ್ಪನವರ ಮನೆ ದೂರವಾಣಿಗೆ ಫೋನ್‌ ಮಾಡಿ, ನಿಮಗೆ ಬೇಕಾದ್ದನ್ನು ಹೇಳಿದರೆ ಅವರು ಬರೆದುಕೊಂಡು ಸದಾಶಿವಪ್ಪನವರಿಗೆ ತೋರಿಸುತ್ತಿದ್ದರು. ಸದಾಶಿವಪ್ಪ ಇವರ ನೆರವಿನಿಂದ ಉತ್ತರ ಬರೆಯುತ್ತಿದ್ದರು. ಆ ಉತ್ತರವನ್ನು ಅವರ ಸಹಾಯಕರು ನಮಗೆ ದೂರವಾಣಿಯಲ್ಲಿ ಹೇಳುತ್ತಿದ್ದರು. ಮತ್ತೆ ನಾವು ಪ್ರಶ್ನೆ ಕೇಳುತ್ತಿದ್ದೆವು. ಅದೇ ರೀತಿಯಲ್ಲಿ ಉತ್ತರ ಬರುತ್ತಿತ್ತು.

ಹೀಗೇ ಒಂದಾರು ತಿಂಗಳು ಕಳೆಯಿತು. ಮುಂದಿನ ಹಂತದಲ್ಲಿ ಅವರು ಯಾವ ದೂರವಾಣಿ ಕರೆಗೂ ಕಾಯುತ್ತಿರಲಿಲ್ಲ. ಸಹಾಯಕರ ಮೂಲಕ ತಾವೇ ತಾವಾಗಿ ಅವರು ಬರೆದದ್ದನ್ನು/ಬರೆಸಿದ್ದನ್ನು ನಮಗೆ ತಲುಪಿಸುತ್ತಿದ್ದರು.

ಎಲ್ಲವೂ ಚೆನ್ನಾಗಿದ್ದಾಗ, ಸುಸೂತ್ರವಾಗಿದ್ದಾಗ, ಅವರ ಮಾತು ಹೇಗೂ ಕಡಿಮೆ ಇದ್ದುದರಿಂದ, ಇದಕ್ಕೆ ಹೊಂದಿಕೊಳ್ಳಲು ನಮಗೆ ಕಷ್ಟವಾಗಲಿಲ್ಲ. ಸದಾಶಿವಪ್ಪನವರ ಕ್ಯಾನ್ಸರ್‌ ಮರೆತೇ ಹೋಯಿತು. ಹಾಗೆಯೇ ಸದಾಶಿವಪ್ಪ ಕೂಡ.

ಮುಂದೊಂದು ದಿನ ಅವರು ತೀರಿಕೊಂಡರು. ಅವರ ಮೌನ ಸ್ವಭಾವಕ್ಕನುಗುಣವಾಗಿ ಎಲ್ಲೂ ನುಡಿನಮನಗಳಾಗಲೀ, ಶ್ರದ್ಧಾಂಜಲಿ ಬರಹವಾಗಲೀ ಪ್ರಕಟವಾಗಲಿಲ್ಲ.

ಸ್ವಲ್ಪ ದಿನಗಳ ನಂತರ, ಸದಾಶಿವಪ್ಪನವರಿಗೆ ಎಷ್ಟು ವಾಕ್ಯದ, ಯಾವ ರೀತಿಯ ವಾಕ್ಯದ ಮೂಲಕ ಗೌರವ ಸಲ್ಲಿಸಬೇಕು ಎಂದು ಸಹಲೇಖಕರಿಗೆಲ್ಲ ಸಮಸ್ಯೆಯಾಯಿತು. ಕಥಾಲೋಕದಲ್ಲಿ ಇನ್ನು ಮುಂದೆ ಮೌನ ಎನ್ನಬೇಕೆ? ಮೂತುಗಳ ಮೂಲಕ ಕತೆಗಳನ್ನು ಹೇಳುವ ಕಾಲ ಮುಗಿದುಹೋಯಿತೆನ್ನಬೇಕೆ?

ಗೊಂದಲವಾಗಿ, ಯಾರೂ ಮೌನಿ ಸದಾಶಿವಪ್ಪನವರ ಬಗ್ಗೆ ಏನೂ ಹೇಳಲೇ ಇಲ್ಲ.

ಈಗ ಬಿಡಿ ಅವರ ಬಗ್ಗೆ ಯಾರಿಗೂ ಗೊತ್ತೂ ಇಲ್ಲ. ಒಂದೇ ಒಂದು ಮಾತು ಕೂಡ ಹುಟ್ಟುವುದಿಲ್ಲ.


ಕಥಾ ಸಂಕಲನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕತೆಗಾರನಾಗಿ ಪ್ರಸಿದ್ಧಿಯೂ ಬಂದಿದೆ. ಇದನ್ನು ಗಮನಿಸಿದರೆ ನನಗೆ ನನ್ನ ಬಗ್ಗೆಯೇ ನಗು ಬರುತ್ತದೆ. ಏಕೆಂದರೆ, ಕತೆಗಳನ್ನು ಬರೆಯುತ್ತಾ ಬರೆಯುತ್ತಾ ನಾವು ತುಂಬಾ ಜಾಣರಾಗಿ, ನಿಜವಾಗಲೂ ಬರೆಯಬೇಕಾದ ಕತೆಗಳನ್ನು, ಪಾತ್ರಗಳನ್ನು, ಸನ್ನಿವೇಶಗಳನ್ನು ಮುಚ್ಚಿಡಲು ಕೂಡ ಕಲಿಯುತ್ತೇವೆ. ಹೀಗೆ ನಾನು ಓದುಗರಿಂದ ಮುಚ್ಚಿಟ್ಟ ಕತೆಗಳು ತುಂಬಾ ಇವೆ. ಇನ್ನು ಮೇಲಾದರೂ ಇಂತಹ ಕತೆಗಳನ್ನೆಲ್ಲ ಬರೆದುಬಿಡಬೇಕು ಬರೆದುಬಿಡುತ್ತೇನೆ. ಸ್ಮಶಾನದಲ್ಲಿ ಚಿಕ್ಕಪ್ಪನ ಮನೆ ಈ ಪೈಕಿ ಮೊದಲನೆಯದು.

*****

ನಮಗೆ ಇಬ್ಬರು ರಾಮು ಚಿಕ್ಕಪ್ಪಂದಿರಿದ್ದರು. ಒಬ್ಬರು ನೇರವಾದ, ನಿಜವಾದ ಚಿಕ್ಕಪ್ಪ. ಇನ್ನೊಬ್ಬರು ದಾಯಾದಿ ಚಿಕ್ಕಪ್ಪ. ನೇರವಾದ ಚಿಕ್ಕಪ್ಪ ನಮ್ಮ ತಂದೆಯ ಸ್ವಂತ ತಮ್ಮ. ದಾಯಾದಿ ಚಿಕ್ಕಪ್ಪ ಅಂದರೆ ನಮ್ಮ ತಂದೆಯ ತಂದೆ ಮತ್ತು ದಾಯಾದಿ ಚಿಕ್ಕಪ್ಪ ಎಂದು ಕರೆಸಿಕೊಳ್ಳುತ್ತಿರುವ ರಾಮು ಚಿಕ್ಕಪ್ಪನ ತಂದೆ ಇಬ್ಬರೂ ಅಣ್ಣ-ತಮ್ಮಂದಿರಾಗಿದ್ದರಂತೆ. ಇಬ್ಬರು ಚಿಕ್ಕಪ್ಪಂದಿರ ಅಧಿಕೃತ ಹೆಸರು ಕೆ.ಎಸ್‌. ರಾಮರಾವ್‌ ಮತ್ತು ಕೆ.ಆರ್‌. ರಾಮರಾವ್‌ ಎಂದೇ. ನೇರವಾದ ಚಿಕ್ಕಪ್ಪನನ್ನು ಗೌರವಪೂರ್ವಕವಾಗಿ ರಾಮರಾವ್‌ ಎಂದೇ ಕರೆಯುತ್ತಿದ್ದರು. ಆದರೆ ದಾಯಾದಿ ಚಿಕ್ಕಪ್ಪನನ್ನು ಮಾತ್ರ ರಾಮರಾಯ ಎಂದು ಹಗುರಾಗಿಯೂ ಸ್ಮಶಾನದ ರಾಮ ಎಂದು ತಾತ್ಸಾರದಿಂದಲೂ ಕರೆಯುತ್ತಿದ್ದರು.

ದಾಯಾದಿ ರಾಮು ಚಿಕ್ಕಪ್ಪನ ಮನೆ ಸ್ಮಶಾನದ ಆವರಣದಲ್ಲೇ ಇತ್ತು. ಅಂದರೆ ಹೆಣಗಳನ್ನು ಸುಡುವ ಕಟ್ಟೆ ಇತ್ತಲ್ಲ, ಅದರೆದುರಿಗೆ ಸ್ವಲ್ಪ ಎತ್ತರದಲ್ಲಿ. ಎತ್ತರದಲ್ಲಿದ್ದರೂ ಮೆಟ್ಟಲುಗಳಿರಲಿಲ್ಲ. ಹಾಗೇ ಹತ್ತುಕೊಂಡು ಹೋಗಬೇಕಾಗಿತ್ತು. ಕಟ್ಟೆ ಎದುರಿಗೆ ಒಂದು ರಾಟೆ ಬಾವಿ, ಅದರ ಪಕ್ಕ ನಾಲ್ಕು ಸ್ನಾನದ ತೊಟ್ಟಿಗಳು, ತೊಟ್ಟಿಗಳ ಸುತ್ತ ಬಕೀಟು, ಚೆಂಬು. ಚಿಕ್ಕಪ್ಪನ ಮನೆ ಸ್ವಲ್ಪ ಭಾಗ ಶೀಟ್‌, ಸ್ವಲ್ಪ ಭಾಗ ತಾರಸಿ. ಒಂದೇ ಒಂದು ದೊಡ್ಡ ಬಾಗಿಲು. ಬಾಗಿಲ ಮುಂದೆ ರಂಗೋಲಿ ಗೆರೆಗಳು. ರಂಗೋಲಿ ಸುಣ್ಣದ ಪುಡಿಯದಲ್ಲ, ಕಲಸಿದ ಹಿಟ್ಟಿನದು ಎಂದು ಯಾರಿಗಾದರೂ ಗೊತ್ತಾಗುತ್ತಿತ್ತು.

ಮನೆಯೊಳಗೆ ಒಂದೋ, ಎರಡೋ ಕುರ್ಚಿ, ಬೆಂಚಿಲ್ಲ, ಮಂಚವಿಲ್ಲ, ವಿಪರೀತವೆನ್ನುವಷ್ಟು ಸ್ಟೂಲುಗಳು, ಮಣೆಗಳು. ಬಟ್ಟೆಗಳನ್ನು ಒಣ ಹಾಕಲು ಹತ್ತು ಹನ್ನೆರಡು ಸಾಲು ಗಳು, ತಂತಿ. ಒಂದೆರಡು ತಂತಿಗಳ ಸಾಲು ಸಡಿಲವಾಗಿ ತುಂಬಾ ಕೆಳಗೆ ಬಂದಿದ್ದವು. ಒಂದೇ ಒಂದು ಕಿಟಕಿ, ಅದೂ ಮನೆಯ ಮುಂಭಾಗದಲ್ಲಿ. ಬೆಳಕು ಕಡಿಮೆ. ಒಳಗಡೆಯೆಲ್ಲ ತುಂಬಾ ಕತ್ತಲು. ಅಡುಗೆ ಮನೆಯಲ್ಲಂತೂ ಬರೇ ಕತ್ತಲೆ. ವಿಪರೀತ ಅಡುಗೆ ಸಾಮಾನುಗಳು. ಪಾತ್ರೆ, ಪಗಡಿ, ತರಕಾರಿ, ತೆಂಗಿನ ಕಾಯಿ, ಎಲೆ, ದೊನ್ನೆ, ಈಳಿಗೆ ಮಣೆ, ಊಟದ ತಟ್ಟೆ, ಲೋಟ, ಬಾಳೆ ಎಲೆ ಕಟ್ಟು, ಗಂಧ ತೇಯುವ ಮಣೆ, ಇತ್ಯಾದಿ. ಗೋಡೆಯ ತುಂಬಾ ದೇವರ ಫೋಟೋಗಳು, ಜಗದ್ಗುರುಗಳ ಒಂದು ಫೋಟೋ ಕೂಡ. ಚಿಕ್ಕಮ್ಮ ಯಾವಾಗಲೂ ಅಡುಗೆ ಮನೆಯಲ್ಲೇ ಕೆಲಸ ಮಾಡುತ್ತಿದ್ದರು. ಚಿಕ್ಕಮ್ಮ ಒಂದು ವಿಷಯಕ್ಕೆ ಬಂಧು-ಬಳಗದವರಲ್ಲೆಲ್ಲಾ ಫೇಮಸ್‌ ಆಗಿದ್ದರು. ಏನಾದರೂ ಊಟ-ತಿಂಡಿ ಅಡುಗೆ ಮಾಡಿದರೆ, ಮಾಡಿದ ತಕ್ಷಣ ಬಡಿಸುತ್ತಿರಲಿಲ್ಲ. ಮೊದಲು ಅಡುಗೆ ಮಾಡಿದ ಪಾತ್ರೆ ಪಗಡಿಗಳನ್ನು ತೊಳೆಯಬೇಕು. ತೊಳೆದು ಒರಸಿ ಇಡಬೇಕು. ಆಮೇಲೆ ತಯಾರಿಸಿರುವ ಪದಾರ್ಥಗಳನ್ನು ಕೊಡುವುದು, ಬಿಡುವುದು.

ಚಿಕ್ಕಪ್ಪ-ಚಿಕ್ಕಮ್ಮನ ಬಗ್ಗೆ ತುಂಬಾ ಆಕ್ಷೇಪಣೆಯ ಮಾತುಗಳನ್ನು ಕೇಳಿಸಕೊಂಡೇ ನಮ್ಮ ಬಾಲ್ಯವೆಲ್ಲ ಕಳೆದು ಹೋಯಿತು. ಚಿಕ್ಕಪ್ಪ ಕೂಡ ಎಲ್ಲ ಬಂಧುಗಳಂತೆ ಟೆಂಪೊರರಿ ಸ್ಕೂಲ್‌ ಮೇಷ್ಟರಾಗಿದ್ದನೆಂದು, ಉಳಿದವರೆಲ್ಲ ಇನ್‌ಸ್ಪೆಕ್ಟರ್‌, ಎಇಓಗಳಿಗೆಲ್ಲ ಲಂಚ ಕೊಟ್ಟು ಕೆಲಸವನ್ನು ಪರ್ಮನೆಂಟ್‌ ಮಾಡಿಸಿಕೊಂಡರೆ, ಇವನು ಮಾತ್ರ ದುಷ್ಟ ನಂಜಪ್ಪಶಾಸ್ತ್ರಿ ಸಹವಾಸಕ್ಕೆ ಬಿದ್ದು ಅಪರಕರ್ಮಗಳನ್ನು ಮಾಡಿಸುವುದರಲ್ಲೇ ಹೆಸರು ಮಾಡಿಕೊಂಡು ಕೊನೆಗೆ ಸ್ಮಶಾನದ ಎದುರುಗಡೆ ಮನೆ ಸೇರಿದ್ದನೆಂದು, ಇಲ್ಲದೆ ಹೋಗಿದ್ದರೆ, ಅವನು ಕೂಡ ಎಲ್ಲರಂತೆ ಹೆಡ್‌ ಮೇಷ್ಟರಾಗಿರುತ್ತಿದ್ದನೆಂದು ಬಯ್ಯುತ್ತಿದ್ದರು. ಹೋಗಲಿ ಹಿಡಿದ ಕೆಲಸವನ್ನಾದರೂ ನಿಷ್ಠೆಯಿಂದ ಮಾಡ್ತಾನೆ ಅಂದರೆ ಅದೂ ಇಲ್ಲ. ಎಲ್ಲ ವ್ಯವಹಾರಗಳಲ್ಲೂ ಮೋಸ ತಟವಟ. ತಿಥಿ ಮಾಡಿಸುವ ಬ್ರಾಹ್ಮಣರ ಹತ್ತಿರ ಕಟ್‌ ತೆಗೆದುಕೊಳ್ಳುವುದು, ಸೌದೆ, ಬೆರಣಿ, ಸೀಮೆಎಣ್ಣೆಯನ್ನೆಲ್ಲ ಒಂದಕ್ಕೆ ಎರಡು ಬೆಲೆಗೆ ಮಾರುವುದು, ಯಾರಾದರೂ ದಾಯಾದಿಗಳ ಪೈಕಿ ತೀರಿಹೋದರೆ, ಅವರ ಹೆಣದ ವಿಲೇವಾರಿಗೆ ನಾನಾ ರೀತಿಯ ಅಡ್ಡಗಾಲು ಹಾಕುವುದು, ಸಮಾರಾಧನೆಗೆಂದು ತಂದ ದಿನಸಿ ಕದಿಯುವುದು, ಒಂದೇ ಎರಡೇ? ಇಷ್ಟಾಗಿ ಒಂದು ಮಂತ್ರ, ಒಂದು ಜಪ ಬರುತ್ತಿರಲಿಲ್ಲ. ಅಷ್ಟು ಸಂಪಾದನೆ ಮಾಡಿದರೂ ಯಾವುದೇ ರೀತಿಯ ದಾನ ಧರ್ಮ ಮಾಡುತ್ತಿರಲಿಲ್ಲ. ಮದುವೆ ಆದ ಹೊಸದರಲ್ಲಿ ಚಿಕ್ಕಮ್ಮ ಇಂಥವರ ಜೊತೆ ನಾನು ಸಂಸಾರ ಮಾಡಲಾರೆ ಎಂದು ಓಡಿಹೋಗಿಬಿಟ್ಟಿದ್ದಳಂತೆ. ಆದರೆ ಈವತ್ತು ಇದೇ ಚಿಕ್ಕಮ್ಮ ಮನೆ, ಸ್ಮಶಾನದ ಎಲ್ಲ ಆಡಳಿತವನ್ನು ತನ್ನ ಕಪಿ ಮುಷ್ಠಿಯಲ್ಲೇ ಇಟ್ಟಿಕೊಂಡಿದ್ದಳು. ಸ್ಮಶಾನದ ಮನೆಯವರು ಅಂತ ಯಾರೂ ಅವರನ್ನು ಯಾವ ಶುಭಕಾರ್ಯಕ್ಕೂ ಕರೆಯುತ್ತಿರಲಿಲ್ಲ.

ಮಕ್ಕಳಾದ ನಮಗೂ ಚಿಕ್ಕಪ್ಪನ ಮನೆಗೆ ಹೋಗಬಾರದೆಂದು ಹೇಳಿಕೊಡುತ್ತಿದ್ದರು. ಹಗಲು ರಾತ್ರಿ ಅನ್ನದೆ ಅವರ ಮನೆಗೆ ಯಾವಾಗಲೂ ಭೂತ, ದೆಯ್ಯಗಳು ಬರುತ್ತವೆ. ಒಂದೊಂದು ಸಲ ಸೌದೆ ಸೊಪ್ಪು ಸಾಕಾಗದೆ ಹೆಣಗಳು ಸರಿಯಾಗಿ ಸುಡೋದೇ ಇಲ್ಲ. ಅಂತಹ ಹೆಣಗಳೆಲ್ಲ ಎದ್ದು ಚಿಕ್ಕಪ್ಪನ ಮನೆಗೆ ಬಂದು ಕೂರುತ್ತವೆ. ಚಿಕ್ಕಪ್ಪ ಹೆಣದ ವಾರಸುದಾರರ, ನೆಂಟರಿಷ್ಟರ ಮನೆಗೆ ಹೋಗಿ ಅವರನ್ನು, ಪುರೋಹಿತರನ್ನು ಮತ್ತೆ ಕರೆದುಕೊಂಡು ಬಂದು ಹೆಣಕ್ಕೆ ಒಂದು ಗತಿ ಕಾಣಿಸಬೇಕಾಗುತ್ತದೆಂದು ಮತ್ತೆ ಮತ್ತೆ ಮಾತನಾಡಿಕೊಳ್ಳುತ್ತಿದ್ದರು. ನಮಗೆಲ್ಲ ಭೂತ, ದೆಯ್ಯದ ಬಗ್ಗೆ ವಿಪರೀತ ಭಯ ಇದ್ದರೂ ನೋಡಬೇಕೆಂಬ ಆಸೆ ಕೂಡ ಇತ್ತು. ಅಲ್ಲದೆ ಚಿಕ್ಕಪ್ಪನ ನಾಲ್ಕು ಮಕ್ಕಳು ನಮ್ಮ ವಯಸಿನವರೇ! ನಾವು ಓದುತ್ತಿದ್ದ ಕ್ಲಾಸುಗಳಲ್ಲಿ ಓದುತ್ತಿದ್ದವರೇ! ಯಾರ ಜೊತೆಯೂ ಜಗಳ ಕಾಯುತ್ತಿರಲಿಲ್ಲ. ಎರಡನೆಯವಳ ಕಂಠ ತುಂಬಾ ಚೆನ್ನಾಗಿದ್ದು, ಸ್ಕೂಲಿನ ಎಲ್ಲ ಸಮಾರಂಭಗಳಲ್ಲೂ ಅವಳ ಕೈಲೇ ಪ್ರಾರ್ಥನೆ ಮಾಡಿಸುತ್ತಿದ್ದರು. ನಮ್ಮನ್ನೇ ಅವರ ಮನೆಗೆ ಬನ್ನಿ ಅಂತ ಕರೆಯುತ್ತಿದ್ದರೇ ಹೊರತು ನಮ್ಮ ಮನೆಗೆ ಬಂದರೆ ಹಿರಿಯರು ಸೇರಿಸದೇ ಹೋಗಬಹುದು ಎಂಬ ಭಯಕ್ಕೆ ನಮ್ಮ ಮನೆಗೆ ಬರುತ್ತೇವೆ ಎಂದು ಒಂದೇ ಒಂದು ಸಲ ಕೂಡ ಹೇಳುತ್ತಿರಲಿಲ್ಲ.

ಇದೆಲ್ಲಕ್ಕಿಂತ ಮುಖ್ಯವಾಗಿ ನಮಗೆ ಚಿಕ್ಕಪ್ಪನ ಮನೆ ಬಗ್ಗೆ ಇನ್ನೊಂದು ಕಾರಣಕ್ಕೆ ಆಕರ್ಷಣೆಯಿತ್ತು. ಯಾವಾಗಲೂ ಅವರ ಮನೆಯಲ್ಲಿ ತಿಂಡಿ, ತೀರ್ಥ, ಪದಾರ್ಥಗಳು ತುಂಬಿ ತುಳುಕುತ್ತಿದ್ದವು. ವಡೆ, ರವೆಉಂಡೆ, ಚಕ್ಕುಲಿ, ಸಿಕ್ಕಿನುಂಡೆ, ಒಬ್ಬಟ್ಟು, ಸಜ್ಜಪ್ಪ. ಎಲ್ಲ ಮಕ್ಕಳಿಗೂ ಕೈ ತುಂಬಾ ಕೊಡೋರು. ಕೊಟ್ಟ ತಿಂಡಿಯನ್ನು ತಿನ್ನುತ್ತಾ ಕುಳಿತುಕೊಂಡಿದ್ದಾಗ ಬೇರೆ ಯಾರಾದರೂ ಮಕ್ಕಳು ಬಂದರೆ, ಅವರಿಗೆ ತಿಂಡಿ ಕೊಡುವಾಗ ಮತ್ತೆ ನಮಗೂ ಕೊಡೋರು. ನಮ್ಮ ಮನೆಗಳಲ್ಲೇ ಹಾಗೆ ಎರಡು ಸಲ ತಿಂಡಿ ಪದಾರ್ಥಗಳನ್ನು ಕೊಡುತ್ತಿರಲಿಲ್ಲ. ತಿಂಡಿ ತೀರ್ಥಕ್ಕಿಂತ ಹೆಚ್ಚಾಗಿ ಚಿಕ್ಕಪ್ಪನ ಮನೆಯಲ್ಲಿ ತುಂಬಾ ಪಗಡೆ ಹಾಸು, ದಾಳಗಳು ಇದ್ದವು. ಮೂರು ನಾಲ್ಕು ಜೊತೆ ಇದ್ದವು. ಎಷ್ಟು ಹೊತ್ತು ಬೇಕಾದರೂ ಅಡಬಹುದಿತ್ತು. ಮನೆಗೆ ಹೋಗಿ ಅಂತ ಒಂದು ಸಲವೂ ಗದರಿಸುತ್ತಿರಲಿಲ್ಲ. ಆದರೆ ಪಗಡೆ ಆಡುವುದಕ್ಕೆ ಇದ್ದ ತೊಂದರೆಯೆಂದರೆ, ಚಿಕ್ಕಪ್ಪನ ಮನೆಯಲ್ಲಿ ದೀಪವನ್ನೇ ಹಾಕುತ್ತಿರಲಿಲ್ಲ. ಬೀದಿ ದೀಪದ ಬೆಳಕು ಮನೆ ಒಳಗೆ ಎಷ್ಟು ಬೀಳತ್ತೋ ಅಷ್ಟೇ. ಹಾಸಿಗೆಯಲ್ಲೇ ಯಾವಾಗಲೂ ಉರುಳಿಕೊಂಡು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ಬದಲಾಯಿಸುತ್ತಲೇ ಇದ್ದ ಚಿಕ್ಕಪ್ಪ ಇದ್ದಕ್ಕಿದ್ದಂತೆ ಏನನ್ನೋ ನೆನಪಿಸಿಕೊಂಡು ಎದ್ದು ಮನೆಯಿಂದ ಹೊರಗೆ ಹೋಗಿ ಬೀದಿ ದೀಪದ ಕೆಳಗಿ ನಿಂತುಕೊಂಡು ಯಾವುದೋ ಲೆಕ್ಕದ ಪುಸ್ತಕಗಳನ್ನ್ನೋ, ಕಾಗದ ಪತ್ರಗಳನ್ನೋ ಓದಿ ಚಿಂತಾಕ್ರಾಂತನಾಗಿ ಮನೆಯ ಕಡೆ ಬರುತ್ತಿದ್ದ.

ತಿಂಡಿ ತಿನ್ನುವ ಸಡಗರ, ಪಗಡೆ ಆಟ ಆಡುವ ಕಡೆಯ ಗಮನದಲ್ಲಿ ನಮಗೆ ದೆಯ್ಯ, ಭೂತಗಳನ್ನು ನೋಡುವುದು, ಅವುಗಳ ಮಾತು ಕೇಳಿಸಿಕೊಳ್ಳುವುದು ನೆನಪಿಗೇ ಬರುತ್ತಿರಲಿಲ್ಲ. ಮಾರನೇ ದಿನ ಚಿಕ್ಕಪ್ಪನ ಮಕ್ಕಳನ್ನು ಸ್ಕೂಲಿನಲ್ಲಿ ಕೇಳುತ್ತಿದ್ದೆವು. ಹೌದು ಬರುತ್ತವೆ. ಆದರೆ ಮಕ್ಕಳಿದ್ದಾಗ ಬರುವುದಿಲ್ಲವಂತೆ. ನೀವು ನೋಡಿದ್ದೀರಾ ಎಂದು ಕೆಳಿದರೆ, ಆಗಾಗ್ಗೆ ನೋಡಿರುವುದಾಗಿ, ಆದರೆ ರಾತ್ರಿ ಹೊತ್ತು ಎಚ್ಚರವಾದಾಗಲೆಲ್ಲ ದೆಯ್ಯ, ಭೂತಗಳು ಅಪ್ಪನೊಡನೆ ತುಂಬಾ ಹೊತ್ತು ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾ ನಿದ್ರೆಯೇ ಬರುವುದಿಲ್ಲ ಎಂದು ಹೇಳಿದರು. ಚಿಕ್ಕಪ್ಪನ ಮನೇಲಿ ಕಂತೆ ಕಂತೆ ಚಂದಮಾಮ, ಬಾಲಮಿತ್ರ ಇರೋದು. ಯಾವಾಗಲೂ ಅಟ್ಟದ ಮೇಲೆ ಕಟ್ಟಿಡುತ್ತಿದ್ದರು. ಯಾರಿಗೂ ಕೊಡುತ್ತಿರಲಿಲ್ಲ. ಆದರೆ ಅದರಿಂದ ಓದಿದ ಕತೆಗಳನ್ನೆಲ್ಲ ಮಕ್ಕಳು ನಮಗೆ ಹೇಳೋರು. ಆ ಕತೆಗಳಲ್ಲಿ ಬರುವ ಬೇತಾಳ, ದೆಯ್ಯ, ಭೂತಗಳಂತೆಯೇ ಅವರ ಮನೆಗೆ ಬರುವ ಭೂತ, ದೆಯ್ಯಗಳು ರಾತ್ರಿ ಹೊತ್ತು ಮಾತನಾಡುತ್ತವೆಂದು ನಮಗೆ ಮಕ್ಕಳು ಕತೆ ಹೇಳುವಾಗ ಹೇಳುತ್ತಿದ್ದರು. ದೆಯ್ಯ, ಭೂತಾನ ನಾವು ನೋಡದೇ ಹೋದರೂ ಅರ್ಧ-ಮುಕ್ಕಾಲು ಸುಟ್ಟಿದ ಹೆಣದ ಬಂಧುಗಳೆಲ್ಲ ಬಂದು ಚಿಕ್ಕಪ್ಪನ ಹತ್ತಿರ ಜಗಳ ಕಾಯುವುದನ್ನು ಕೇಳಿಸಿಕೊಂಡಿದ್ದೇನೆ. ಸೌದೆ, ಬೆರಣಿ, ಎಣ್ಣೆಯನ್ನು ನೀನು ನಾವು ಕೊಟ್ಟ ದುಡ್ಡಿಗೆ ತಕ್ಕಂತೆ ಹಾಕಿಲ್ಲ. ಅದಕ್ಕೇ ಹೆಣಗಳು ಪೂರ್ತಿ ಸುಡದೆ ಒದ್ದಾಡುತ್ತಿವೆ ಎಂದು ಅವರು ವಾದಿಸಿದರೆ, ಇಲ್ಲ ನಾನು ಲೆಕ್ಕಾಚಾರದ ಪ್ರಕಾರವೇ ಸೌದೇನೆಲ್ಲ ಹಾಕಿದ್ದೀನಿ, ನಿಮ್ಮೆದುರಿಗೇ ಹಾಕಿದ್ದೀನಿ, ಮುನಿಸ್ವಾಮಿ ಕೊಡುವ ಸೌದೆಯೆಲ್ಲ ಹಸಿ ಹಸಿಯಾಗಿದ್ದರೆ, ಟೊಳ್ಳಾಗಿದ್ದರೆ ನಾನೇನು ಮಾಡಲಿ ಅಂತ ಚಿಕ್ಕಪ್ಪನ ವಾದ. ಒಂದು ಮುಸ್ಸಂಜೆಯಂತೂ ಮೂರು ನಾಲ್ಕು ಜನ ಕಾರಿನಲ್ಲೇ ಬಂದಿದ್ದರು. ತುಂಬಾ ಜಗಳ ಆಯ್ತು. ಹೊಸ ಸೌದೆ ಕಟ್ಟು, ಬೆರಣಿ, ಸೀಮೆಎಣ್ಣೆ ಡಬ್ಬದ ಜೊತೆಗೆ ಚಿಕ್ಕಪ್ಪನನ್ನು ದರದರ ಅಂತ ಎಳೆದುಕೊಂಡು ಹೋದರು. ರೂಮಿನಲ್ಲಿ ಕುಳಿತು ಮಕ್ಕಳ ಜೊತೆ ತಿಂಡಿ ತಿನ್ನುತ್ತಿದ್ದ ನಾವು ಹೊರಗಡೆ ನಡೆಯುತ್ತಿದ್ದ ಜಗಳ, ಗಲಾಟೆಗೆ ಹೆದರಿ, ಆಚೆಗೆ ಬಂದೆವು. ಹೆಣಕ್ಕೆ ಇನ್ನೊಂದು ಸಲ ಬೆಂಕಿ ಹಾಕುವುದನ್ನು, ಧಗಧಗ ಉರಿಯುವುದನ್ನು ನಾವು ಮನೆಯೊಳಗೇ ನಿಂತು ನೋಡಿದೆವು. ತಲೆ ಸಿಡಿದ ಶಬ್ದ ಜೋರಾಗಿ ಕೇಳಿ ತುಂಬಾ ಹೊತ್ತು ನಡುಗುತ್ತಾ ನಿಂತಿದ್ದೆವು. ಮೂರು-ನಾಲ್ಕು ದಿನ ಕನಸಿನಲ್ಲಿ ಅದೇ ಬೀಳೋದು. ಚಿಕ್ಕಪ್ಪನ ಮಕ್ಕಳು ಮಾತ್ರ ಇದಕ್ಕೆಲ್ಲ ತಾವು ಹೆದರುವುದಿಲ್ಲವೆಂದು, ಇಂತಹ ದೃಶ್ಯಗಳನ್ನೆಲ್ಲ ಬಹಳ ಸಲ ನೋಡಿರುವುದಾಗಿಯೂ ಹೇಳಿಕೊಂಡು ಓಡಾಡುತ್ತಿದ್ದರು.

ಚಿಕ್ಕಪ್ಪನ ಮನೆಗೆ ಹೋಗಬೇಡಿ, ಅವನ ಮನೆಯವರನ್ನು ಯಾವ ಶುಭಸಮಾರಂಭಕ್ಕೂ ಕರೆಯಬೇಡಿ ಎಂದು ಹೇಳುತ್ತಿದ್ದ ಬಂಧುಗಳೇ ಚಿಕ್ಕಪ್ಪನ ಜೀವನದ ಪ್ರತಿ ಹಂತದ ಬಗ್ಗೆಯೂ ವ್ಯಾಖ್ಯಾನ ಮಾಡುತ್ತಿದ್ದರು. ಸ್ಮಶಾನದ ಮನೆಯಲ್ಲಿದ್ದರೂ ರಾಮರಾಯ ಬಡ್ಡೀಮಗ ಅಲಾಲ್‌ಟೋಪಿಯಲ್ಲವೆಂದು, ಸೋಮನಹಳ್ಳಿ ಲೇ ಔಟ್‌ನಲ್ಲಿ ದೊಡ್ಡ ಸೈಟು ತೆಗೆದುಕೊಂಡು ಮನೆ ಕಟ್ಟಿ ಬಾಡಿಗೆಗೆ ಕೊಟ್ಟಿದ್ದಾನೆಂದು ಆಪಾದಿಸುತ್ತಿದ್ದರು. ಸ್ಮಶಾನದಲ್ಲಿರುವುದರಿಂದ, ಕರ್ಮಾಂತರದ ಕಾಂಟ್ರಾಕ್ಟ್‌ ಮಾಡಿಸುವುದು ನಮ್ಮ ಮನೆತನದ ಕಸುಬಲ್ಲವಾದ್ದರಿಂದ, ಅವನ ಸಂಸಾರ ಎಂದೆಂದೂ ಏಳಿಗೆಯಾಗುವುದಿಲ್ಲವೆಂದು ಯಾವಾಗಲೂ ಅಲವತ್ತುಕೊಳ್ಳೋರು. ಆದರೆ ಚಿಕ್ಕಮ್ಮನ ಮೈ ಮೇಲೆ ಏನೇನು ಒಡವೆಗಳು ಈಚೆಗೆ ಬಂದಿವೆಯೆಂದು, ನಮ್ಮ ತಾಯಿಯೂ ಸೇರಿದಂತೆ ಪ್ರತಿಯೊಬ್ಬರೂ ಅಸೂಯೆಯಿಂದ ಪಟ್ಟಿ ಮಾಡುತ್ತಿದ್ದರು. ಮಕ್ಕಳು, ನಮ್ಮಂತೆ, ನಮ್ಮಷ್ಟೇ ಚೆನ್ನಾಗಿ ಓದಿದವು. ಚಿಕ್ಕಪ್ಪನ ಎರಡನೆ ಮಗಳು ನಮ್ಮ ಪೈಕಿ ಮೊದಲ Cost Accountant ಆದಳು. ಇನ್ನೊಬ್ಬಳು ಹಿಂದಿ ಶೀಘ್ರಲಿಪಿಕಾರ್ತಿಯಾದಳು.

ಸ್ಮಶಾನವನ್ನು renovate ಮಾಡಿಸಬೇಕು ಅಂತ ಶಾಸಕರ ನಿಧಿಯ ಅನುದಾನ ಸಿಕ್ಕಿ ಕೆಲಸ ಶುರುವಾದಾಗ, ಚಿಕ್ಕಪ್ಪನ ಸ್ಮಶಾನದ ಮನೆ ಕೂಡ ಕೆಡವುತ್ತಾರೆ ಎಂದು ಗೊತ್ತಾದಾಗ ಬಂಧುಗಳೆಲ್ಲ ಸಂತೋಷಪಟ್ಟರು. ಬಿದ್ದ ಬೀದಿಗೆ ಬಡ್ಡಿ ಮಗ, ಬಾಡಿಗೆಯಿಲ್ಲದೆ ಇಷ್ಟು ವರ್ಷಗಳಿಂದ ಮಜಾ ಮಾಡ್ತಾ ಇದ್ದ ಅಂತ ವ್ಯಂಗ್ಯ ಮಾಡಿದರು.

ಏನಾದರೂ ಆಗಲಿ, ಮನೆಯನ್ನು ಉಳಿಸಿಕೊಳ್ಳಲೇಬೇಕು, ಬೇಕಾದರೆ ಸ್ಮಶಾನದ ಭಾಗವನ್ನು ನವೀಕರಿಸಲಿ, ಮನೆ ಏನು ಮಾಡಿದೆ, ಗಟಿಮುಟ್ಟಾಗಿದೆ ಅಂತ ಚಿಕ್ಕಪ್ಪ ಪ್ರಚಾರ ಶುರುಮಾಡಿದ. ಇಷ್ಟು ವರ್ಷ ಸಾವಿರಾರು ಕುಟುಂಬಗಳ ಹೆಣಗಳನ್ನು ಸುಡುವುದಕ್ಕೆ, ಕರ್ಮಾಂತರಗಳನ್ನು ಮಾಡಿಸುವುದಕ್ಕೆ ನೆರವಾಗಿದ್ದೀನಿ, ಎಲ್ಲರೂ ನನಗೆ ಈಗ ಬೆಂಬಲ ಕೊಟ್ಟೇ ಕೊಡುತ್ತಾರೆ ಎಂಬ ಅವನ ನಿರೀಕ್ಷೆ ಹುಸಿಯಾಯಿತು. ಯಾರೊಬ್ಬರೂ ಇವನ ಮನವಿಯನ್ನು ಪುರಸ್ಕರಿಸಲಿಲ್ಲ. ಬಂಧುಗಳಿಗಂತೂ ವಿಘ್ನ ಸಂತೋಷ ಮುಗಿಲು ಮುಟ್ಟಿತ್ತು. ವಿಘ್ನ ಸಂತೋಷ ಎಂದು ಏಕೆ ಹೇಳಬೇಕು, ಚಿಕ್ಕಪ್ಪ ಕೂಡ ದಾಯಾದಿ ಮಚ್ಚರದಲ್ಲಿ ಏನೇನೂ ಕಡಿಮೆ ಇಲ್ಲ. ಕೆಲವು ಬಂಧುಗಳ ಹೆಣ ಸುಡುವಾಗ ತುಂಬಾ ಕ್ಯಾತೆ ತೆಗೆದಿದ್ದ. ಸೋದರಮಾವ ಗೋವಿಂದಪ್ಪ ಸತ್ತಾಗ ಇನ್ನೂ ಸರಿಯಾಗಿ ಸಂಜೆ ಆಗದೇ ಹೋದರೂ, ಸೂರ್ಯಾಸ್ತವಾದಮೇಲೆ ಹೆಣ ಸುಡುವ ಹಾಗಿಲ್ಲವೆಂದ. ಮಾರನೇ ದಿನ ಬೆಳಿಗ್ಗೆ ಜಡಿ ಮಳೆ. ಸೌದೆಯಲ್ಲ ಹಸಿಯಾಯಿತು. ಗೋವಿಂದಪ್ಪನ ಮನೆಯವರೆಲ್ಲ ಕಂಗಾಲಾಗಿಬಿಟ್ಟರು. ಇನ್ನು ಕೆಲವು ಬಂಧುಗಳ ಹೆಣ ಸುಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದ. ಅದಕ್ಕೆ ದುಡ್ಡು ತಗೋತಿದ್ದ ಅನ್ನುವುದು ನಿಜವಾದರೂ ಹೆಣದ ಮುಖದ ಕಡೆ ನೋಡುತ್ತಿರಲಿಲ್ಲ. 

ಸರ್ಕಾರದವರು ಅಂತೂ ಚಿಕ್ಕಪ್ಪನ ಮನೆಯನ್ನು ಕೆಡವೇಬಿಟ್ಟರು. ಬಂಧುಗಳು ಆಸೆಪಟ್ಟಂತೆ ಅವನು ಬೀದಿಗೇನೂ ಬೀಳಲಿಲ್ಲ. ಸ್ಮಶಾನದ ಪಕ್ಕದ ವಿಠಲನಗರದ ಮೊದಲನೇ ಕ್ರಾಸ್‌ನಲ್ಲಿ ಒಂದು ಮನೆ ಬಾಡಿಗೆಗೆ ತೆಗೆದುಕೊಂಡ. ಶ್ರೀನಿವಾಸ ಕಾಂಪ್ಲೆಕ್ಸ್‌ನ ಮೊದಲನೆ ಮಹಡಿಯಲ್ಲಿ ಒಂದು ಆಫೀಸು ತೆಗೆದ. ಕಾಂಪ್ಲೆಕ್ಸ್‌ನ ಕೆಳ ಅಂತಸ್ತಿನಲ್ಲಿ ಪೂಜಾ ಸಾಮಾನಿನ ಅಂಗಡಿ, ಬಾರ್‌ಬರ್‌ ಶಾಪ್‌, ದಿನಸಿ ಅಂಗಡಿ, ಗ್ರಂಧಿಗೆ ಅಂಗಡಿ, ದರ್ಶಿನಿ ಹೋಟೆಲ್‌ ಎಲ್ಲ ಇದ್ದು ಚಿಕ್ಕಪ್ಪನ ಬಿಸಿನೆಸ್‌ಗೆ ಅನುಕೂಲವಾಗುವ ಹಾಗೇ ಇತ್ತು. ಉಲ್ಟಾ ಹೊಡೆದ ಸಮಾಚಾರವೆಂದರೆ, ಚಿಕ್ಕಪ್ಪ ಹಳೇ ವೈರವನ್ನೆಲ್ಲ ಮರೆತು ಎಲ್ಲ ಬಂಧುಗಳನ್ನೂ ಆಫೀಸಿನ ಪ್ರವೇಶ ಸಮಾರಂಭಕ್ಕೆ ಆಹ್ವಾನಿಸಿದ್ದು. ಚಿಕ್ಕಪ್ಪ, ಚಿಕ್ಕಮ್ಮ ಇಬ್ಬರೂ ಎಲ್ಲರ ಮನೆಗೂ ಬಂದು ಅಕ್ಷತೆ ಸಮೇತ ಎಲ್ಲರನ್ನೂ ಪ್ರೀತಿಯಿಂದಲೇ ಆಹ್ವಾನಿಸಿದರು. ಬಂಧುಗಳು ಆಹ್ವಾನವನ್ನು ವ್ಯಂಗ್ಯ ಮಾಡಿದರೂ ಸಮಾರಂಭಕ್ಕೆ ಹೋಗಲೇ ಬೇಕಾಯಿತು. ಯಾರದೇ ಮನೆಯಲ್ಲಿ ಸಾವಾದರೂ ನನ್ನನ್ನೇ ನೇರವಾಗಿ ಸಂಪರ್ಕಿಸಬೇಕು ಎಂದು ಚಿಕ್ಕಪ್ಪನು ಎಲ್ಲರಿಗೂ ತಾಕೀತು ಕೂಡ ಮಾಡಿದ.

ಇದೆಲ್ಲ ನಡೆದು ಈಗ ಹದಿನೆಂಟು ಇಪ್ಪತ್ತು ವರ್ಷಗಳಾಗಿವೆ. ಚಿಕ್ಕಪ್ಪನಿಗೂ ವಯಸ್ಸಾಗಿದೆ. ಚಿಕ್ಕಮ್ಮನಿಗೂ ಕೂಡ. ವ್ಯವಹಾರಕ್ಕೆ, ಅಡುಗೆ ಕೆಲಸಕ್ಕೆ ಅಂತ ಮನೆಯಲ್ಲೇ ಇಬ್ಬರು ಸಹಾಯಕರನ್ನು ಇಟ್ಟುಕೊಂಡಿದ್ದಾರೆ. ಒಂದೇ ಬೇಸರದ ಸಂಗತಿಯೆಂದರೆ ಚಿಕ್ಕಪ್ಪನ ಮಕ್ಕಳೆಲ್ಲ ಮಹಾನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಹತ್ತಿರದಲ್ಲೇ ಇದ್ದರೂ ಯಾವ ಮಕ್ಕಳೂ ಚಿಕ್ಕಪ್ಪ, ಚಿಕ್ಕಮ್ಮನನ್ನು ಅಷ್ಟೊಂದು ಹಚ್ಚಿಕೊಂಡಿಲ್ಲ. ಹೋಗಿ ಬಂದು ಮಾಡುತ್ತಿಲ್ಲ.

ಎಲ್ಲವೂ ಬದಲಾಗಿದೆ, ಬದಲಾಗುತ್ತದೆ, ಎಲ್ಲರೂ ಬದಲಾದರು, ಎಲ್ಲರೂ ಬದಲಾಯಿಸುತ್ತಲೇ ಇರುತ್ತಾರೆ ಎಂದು ಹೇಳುವ ಮಾತು ಅಷ್ಟು ಸರಿಯಾಗಲಾರದು. ಏಕೆಂದರೆ, ಚಿಕ್ಕಪ್ಪನ ಬಗ್ಗೆ ಈಗಲೂ ಪ್ರಸ್ತಾಪಿಸುವಾಗ ಬಂಧುಗಳೆಲ್ಲ ಇನ್ನೂ ಸ್ಮಶಾನದ ಚಿಕ್ಕಪ್ಪ ಎಂದೇ ಕರೆಯುತ್ತಾರೆ.

ಚಿಕ್ಕಪ್ಪನ ಬದುಕು ಎಲ್ಲಿಂದ ಎಲ್ಲಿಗೆ ಹೋಗಿದೆ, ಬದುಕು ಇರುವುದೇ ಹಾಗೆ ಎಂಬುದನ್ನು ನಾನು ಕೂಡ ಒಪ್ಪುತ್ತೇನೆ. ಇದರಿಂದ ಯಾರ ಮೇಲೂ ಏನೂ ಪರಿಣಾಮವಾಗಲಿಲ್ಲವೇ ಎಂಬ ಪ್ರಶ್ನೆ ನನ್ನನ್ನು ಬಾಧಿಸಿದೆ. ನಾನು ನನ್ನ ಜೊತೆಯ ಮಕ್ಕಳೆಲ್ಲ, ನಮ್ಮ ತಾಯಿ-ತಂದೆಗಳು ಬೇಡ ಬೇಡವೆಂದರೂ ಚಿಕ್ಕಪ್ಪನ ಮನೆಗೆ ಹೋಗಿ ತಿಂಡಿ ತೀರ್ಥ ತಿನ್ನುತ್ತಾ ಇದ್ದದ್ದು, ಕತ್ತಲಿನಲ್ಲಿ ಪಗಡೆ ಆಟ ಆಡಿದ್ದು, ಹಾಗೆ ನಾವು ಆಡುತ್ತಾ ಇದ್ದಾಗ ಸ್ಮಶಾನದ ಕಟ್ಟೆಯಲ್ಲಿ ಹೆಣಗಳು ಉರಿಯುತ್ತಾ ಇದ್ದದ್ದು, ಎಲ್ಲಾ ನೆನಪಾಗುತ್ತದೆ. ನನ್ನ ಜೊತೆಯವರಿಗೂ ಇಂತಹ ನೆನಪುಗಳೇ ಇರಬೇಕು. ಚಿಕ್ಕಪ್ಪನದು ಸಾಧಾರಣ ಜೀವನ, ಸಾಮಾನ್ಯ ಬದುಕು. ಕತೆಯಾಗಬೇಕಾದ್ದು ದಾಖಲಾಗಬೇಕಾದ್ದು ಏನೂ ಇಲ್ಲ ಎಂದು ಯಾರಾದರೂ ಹೇಳಿದರೆ ಉತ್ತರ ಕೊಡುವುದು ಕಷ್ಟ.

ಚಿಕ್ಕಪ್ಪನ ಮನೆಗೆ ಬಾಲ್ಯದಲ್ಲಿ ಹೋಗುತ್ತಿದ್ದ ಮಕ್ಕಳ ಪೈಕಿ ಕೆಲವರು ತಾವು ಸತ್ತಾಗ ದೇಹದಾನವನ್ನು ಮಾಡಬೇಕೆಂದು ಹೇಳಿದ್ದಾರೆ. ಇನ್ನು ಕೆಲವರು ಯಾವ ರೀತಿಯ ಕರ್ಮಾಂತರವನ್ನೂ ಮಾಡಬಾರದೆಂದು ಕೂಡ ಹೇಳಿದ್ದಾರೆ. ಚಿಕ್ಕಪ್ಪ, ಚಿಕ್ಕಮ್ಮ ಏನು ನಿರ್ಧಾರ ಮಾಡುವರೋ ಗೊತ್ತಿಲ್ಲ. ಗೊತ್ತಾದರೆ, ಇದೆಲ್ಲವನ್ನೂ ಮತ್ತೆ ಬೇರೆ ರೀತಿಯಲ್ಲಿ ಬರೆಯಬೇಕಾಗುತ್ತದೆ.

*****