ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೇಮಶೇಖರ
ಇತ್ತೀಚಿನ ಬರಹಗಳು: ಪ್ರೇಮಶೇಖರ (ಎಲ್ಲವನ್ನು ಓದಿ)

ಬೆಳ್ಳನೆ ಅರಳಿ
ಕೊಳ್ಳುತ್ತಿದ್ದ ಕಿಟಕಿಯಾಚೆ
ರಪ್ಪನೆ ಹಾರಿ ಗಬಕ್ಕನೆ ಹಿಡಿದು
ಕೂಗುತ್ತಿದ್ದ ಕೋಳಿಮರಿ
ಯ ಕೊರಳು ಮುರಿದಿತ್ತು
ಕರಿಯ ಬೆಕ್ಕು.
ಎದುರಿನ ಮುಚ್ಚಿದ ಕಿಟಕಿಯೊಳಗೆ
ಅಯ್ಯೋ ಸಾಕು ಬಿಡ್ರೀ
ಎಂಬ ಕೀರಲು ಕಂಠ ಒರಲಿತ್ತು.
ಮತ್ತೆ ಲಾಕ್‍ಡೌನ್!
ವಾಟ್ಸ್‌ಆ್ಯಪ್ ವಿಡಿಯೋ ಕೂಗಿತ್ತು,
ಕಾಫಿ ಗಮಗಮಿಸತೊಡಗಿತ್ತು,
ಇನ್ನೊಂದು ದಿನ ಬಾಯಿ ತೆರೆದಿತ್ತು.

ಅಂದು ಅಪ್ಪಿಕೋ ಚಳುವಳಿ
ಇಂದಾಗಬೇಕಿದೆ
ತಪ್ಪಿಸಿಕೋ ಚಳುವಳಿ!
ಅಂದು ಮರ ಉಳಿಸಬೇಕಿತ್ತು,
ಇಂದು ನರನೇ ಉಳಿಯಬೇಕಿದೆ!
ಕೂಗುತ್ತಿದ್ದಾಳೆ ಆ್ಯಪಲ್ ಪರದೆಯೊಳಗೆ
ಸೇಬುಗೆನ್ನೆಯ
ಕಂದು ಸೀರೆಯ ತುಂಡುಗೂದಲಿನಾಕೆ

ಹಿತ್ತಲ ಮಾಮರ
ದಲ್ಲಿ ಕೂತ ಕೋಗಿಲೆ
ಯ ಕೊರಳಿಗೆ
ಕಲ್ಲು ಸಿಕ್ಕಿಕೊಂಡಂತಿದೆ,
ಬಾಗಿಲಲ್ಲಿ ನಿಂತ ಎದುರು ಮನೆಯಾಕೆ
ಯ ಕೂದಲು ಆತುರಾತುರವಾಗಿ
ಒಪ್ಪ ಮಾಡಿದಂತಿದೆ,
ಕಣ್ಣುಗಳಲ್ಲಿ ಕೆಂಪಿನ ಜತೆ ಅರೆ
ನಿದ್ದೆಯಿದೆ, ಸುತ್ತ ಕಪ್ಪೂ ಇದ್ದಂತಿದೆ.
ತುಟಿಗಳಲ್ಲಿ ಸಣ್ಣನೆಯ ನಗೆಯಿದೆ,
ಅಂಚಿನಲ್ಲಿನ್ನೂ ಒರಲಾಟವಿರುವಂತಿದೆ,
ಬಡಿವಾರವರಿಯದ ಇರುವಂತಿಗೆ
ಜಡೆಯಲ್ಲಾಗಲೇ ಮುರುಟಿಹೋಗಿದೆ.
ಎದೆಗೊತ್ತಿದ ಕೈಯಲ್ಲಿ
ಒಂದು ಖಾಲಿ ಲೋಟವಿದೆ.

ಇವರು ಹೋಗಿ ತಂದುಬಿಡುತ್ತಾರೆ ನಾಲ್ಕು
ದಿನಗಳಿಗಾಗುವಷ್ಟು, ತೊಂದರೆಯಿಲ್ಲ.
ಮನೆಯಾಕೆ ಎದುರು ಮನೆಯಾಕೆ
ಯ ಮುಂದೆ ತುಂಬಿ
ದ ಲೋಟ ಹಿಡಿದು ಹೇಳುತ್ತಿದ್ದಾಳೆ.
ಪ್ಯಾನಿಕ್ ಬೈಯಿಂಗ್ ಬೇಡ!
ಬೈಯುತ್ತಿದ್ದಾಳೆ ಟೀವಿಯಾಕೆ
ಎಚ್ಚರಗೊಂಡು ದನಿಯೆತ್ತರಿಸಿ.
ಜೋಪಾನ ಸರ್! ಅಳುಕು
ನಗೆಯರಳಿಸುತ್ತಾಳೆ ಎದುರು ಮನೆಯಾಕೆ
ಮುಂಗುರುಳು ಪಕ್ಕ ಸರಿಸಿ,
ಫಕ್ಕನೆ
ಒಣ ಇರುವಂತಿಗೆಗಳೆರಡನುದುರಿಸಿ.

ಆ್ಯಪಲಿನಾಕೆ,
ಟೀವಿಯಾಕೆ,
ಎದುರು ಮನೆಯಾಕೆ
ಬೆಳಿಗ್ಗೆಯೇ ಬೆಳೆಸಿದ್ದಾದರೂ ಯಾಕೆ
ಇಷ್ಟೊಂದು ಗೊಂದಲದ ಗರಿಕೆ?

ಮಾತಾಡದೇ ಕಾಫಿ ಗುಟುಕರಿಸುತ್ತೇನೆ.
ಪಕ್ಕ ಕೂತು ಇನ್ನೆರಡು ವಾರ
ನಾ ಮನೆಯಲ್ಲೇ ಅನ್ನುತ್ತಾ ಗರಿಕೆ
ಕೀಳುತ್ತಾಳೆ ಈಕೆ.

ಕಿಟಕಿಯಾಚೆ ಓಡುತ್ತಿದೆ
ಎದುರು ಮನೆಯ ಹೇಂಟೆ
ಬದುಕಿನ ಹಾಗೆ,
ಅಟ್ಟಿಸಿಕೊಂಡು ಓಡುತ್ತಿದೆ
ನಮ್ಮ ಮನೆಯ ಹುಂಜ
ಕಾಲದ ಹಾಗೆ.

ಹೇಂಟೆಯ ಓಟ ಪರಿಚಿತ ಅಲ್ಲವೇ?
ಗೊಣಗುತ್ತೇನೆ ಸಲಿಗೆಯಲ್ಲಿ
ಗುಟುಕು ಗಂಟಲಿಗಿಳಿಸಿ.
ಹುಂಜಕ್ಕೋ ನಿಮಗೋ?
ಕಾಫಿ ತುಂಬಿದ ಬೆಳಗು
ಬಾಯಲ್ಲಿ ಗುನುಗುತ್ತಾಳೆ ಈಕೆ,
ಹರಡಿಹೋಗುತ್ತದೆ ಸುತ್ತ ಕಿತ್ತ ಗರಿಕೆ
ಈಕೆ ಆಕೆ
ಯರಲೊಬ್ಬಳಾದದ್ದಾದರೂ ಏಕೆ?

ನಗುತ್ತಾಳೆ ಈಕೆ ಮೆಲ್ಲನೆ,
ಎದ್ದು ಕಿಟಕಿ ಪರದೆ ಎಳೆಯುತ್ತಾಳೆ.
ಕೈಗೆ ಭಾರವಾಗುತ್ತದೆ ಖಾಲಿ ಲೋಟ.
ಇಸಿದುಕೊಂಡು ಈಕೆ
ಕೈಲಿಡುತ್ತಾಳೆ ಖಾಲಿ ಚೀಲ.
ಈಕೆ ಈಕೆಯೇ.

ಲಾಕ್‍ಡೌನ್
ಕೋಳಿಗೂ ಇಲ್ಲ, ಕೊರೋನಾಗೂ ಇಲ್ಲ!
ಇದಿರಿಗೂ ಇಲ್ಲ, ಬದಿರಿಗೂ ಇಲ್ಲ,
ಕಣ್ಣಿಗೆ ಕಾಣುವುದೂ ಇಲ್ಲ!
ಜೋರಾಗಿಯೇ ನಗುತ್ತಾಳೆ
ಹುಂಜಕ್ಕೇ ಕೇಳುವಂತೆ.
ಕಿತ್ತ ಗರಿಕೆಯನೆತ್ತಿ
ಹಿತ್ತಲತ್ತ ಹೆಜ್ಜೆ ಹಾಕುತ್ತಾಳೆ.

ಅಷ್ಟರ ಹೊತ್ತಿಗೆ…

ಗೊಂದಲವೆಲ್ಲ ಕರಗಿಹೋಗಿರುತ್ತದೆ,
ದಿನ ನಿಚ್ಚಳವೂ ಆಗಿರುತ್ತದೆ.
ಕಣ್ಣು ಮುಚ್ಚಿ
ಗಟ್ಟಿಯಾಗಿ ಹೇಳಿಕೊಳ್ಳುತ್ತೇನೆ-
ಅಹಂ ಕೊರೋನಾಸ್ಮಿ!