ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಂದು ಯುದ್ಧ, ಒಬ್ಬ ಖೈದಿ ಮತ್ತು ಆಕೆ

ಪ್ರೇಮಶೇಖರ
ಇತ್ತೀಚಿನ ಬರಹಗಳು: ಪ್ರೇಮಶೇಖರ (ಎಲ್ಲವನ್ನು ಓದಿ)

ಅವಳಿಗೆ ಅರ್ಥವಾಗಿಹೋಯಿತು. ಅವನ ಬಗ್ಗೆ ವಿವರಗಳನ್ನು ಅವನ ಬಾಯಿಂದಲೇ ಹೊರಡಿಸುವುದು ಯಾರಿಂದಲೂ ಆಗದ ಕೆಲಸ. ಎಲ್ ಟಿ ಟಿ ಇ ಹುಡುಗರು ಯಾತಕ್ಕೂ ಜಗ್ಗುವವರಲ್ಲ. ಇರಲಿ, ಇಷ್ಟಕ್ಕೂ ಅವನ ಹೆಸರು ನನಗೇಕೆ? ನನ್ನ ದೃಷ್ಟಿಯಲ್ಲಿ ಅವನೊಬ್ಬ ಖೈದಿ. ಅಷ್ಟು ಸಾಕು.

ಪ್ರೇಮಶೇಖರ ರ ಈ ಕೆಳಗಿನ ಕಥೆಯಿಂದ ….

ರಾತ್ರಿಯ ಊಟ ಮುಗಿಸಿ ಕೈ ತೊಳೆಯುತ್ತಿದ್ದ ಅಸಾಂತಿ ದೂರದಲ್ಲಿ ಗುಂಡಿನ ಶಬ್ಧ ಕೇಳಿ ಒಂದುಕ್ಷಣ ಹಾಗೇ ನಿಂತಳು. ಮುಂದಿನ ಎರಡು ಮೂರು ನಿಮಿಷಗಳಲ್ಲಿ ಒಂದೇಸಮನೆ ಗುಂಡುಗಳು ಹಾರಿದ ಶಬ್ಧ ಕಿವಿಗಳನ್ನು ಇರಿಯಿತು. ಒಮ್ಮೆ ನಿಟ್ಟುಸಿರಿಟ್ಟು ಹಗ್ಗದ ಮೇಲಿದ್ದ ತುಂಡು ಟವಲ್ ಅನ್ನು ಕೈಗೆಳೆದುಕೊಂಡಳು.

ಗುಂಡಿನ ಕಾಳಗದ ಶಬ್ಧ ಅವಳಿಗೆ ಹೊಸದೇನಲ್ಲ. ನಾಲ್ಕು ವರ್ಷಗಳ ಹಿಂದೆ ಎರಕಾಂಡಕ್ಕೆ ಬಂದಾಗಿನಿಂದ ಅದು ಮಾಮೂಲು. ಹೇಳಿಕೇಳಿ ಎರಕಾಂಡ ಸಿಂಹಳಿ ಸೀಮೆಯ ಕೊನೆಯ ಹಳ್ಳಿ. ಎರಡು ಮೈಲಿ ದೂರದಲ್ಲಿ ಹರಿಯುತ್ತಿರುವ ಗಾಲ ಓಯೋ ನದಿಯನ್ನು ದಾಟಿದರೆ ಸಿಗುವುದು ತಮಿಳು ಜಿಲ್ಲೆ ಅಂಪರೈ. ಅಲ್ಲಿ ಎಲ್ ಟಿ ಟಿ ಇ ಗೆರಿಲ್ಲಾಗಳದೇ ಅಟ್ಟಹಾಸ. ಅವರಿಗೂ ಸೇನೆಗೂ ಗುಂಡಿನ ಚಕಮಕಿ ಮಾಮೂಲು. ಹೀಗಾಗಿ ಅಸಾಂತಿಗೆ ಗುಂಡಿನ ಶಬ್ಧ ಎಲೆಗಳ ಮರಮರ ಸದ್ದು ಹಾಗೂ ಹಕ್ಕಿಗಳ ಚಿಲಿಪಿಲಿ ಇಂಚರದಷ್ಟೇ ಚಿರಪರಿಚಿತ.

ಎರಡು ನಿಮಿಷದಲ್ಲಿ ಗುಂಡಿನ ಕಾಳಗದ ಸದ್ದು ಹೇಗೆ ಆರಂಭವಾಯಿತೋ ಅಷ್ಟೇ ಅನಿರೀಕ್ಷಿತವಾಗಿ ನಿಂತುಹೋಯಿತು.

`ಎಷ್ಟು ಹೆಣಗಳು ಉರುಳಿರಬಹುದು?’ ಅವಳು ಮತ್ತೊಮ್ಮೆ ನಿಟ್ಟುಸಿರಿಟ್ಟಳು.

`ಇನ್ನೆಷ್ಟು ದಿನ ಈ ಮಾರಣಹೋಮ? ಇದಕ್ಕೆ ಅಂತ್ಯವೇ ಇಲ್ಲವೇ?’

ಹಿಂದೆಯೇ ಮತ್ತೊಂದು ಪ್ರಶ್ನೆ.

`ಇನ್ನೆಷ್ಟು ದಿನ ನನಗೆ ಈ ಬದುಕು? ಇದಕ್ಕೆ ಅಂತ್ಯವೇ ಇಲ್ಲವೇ?’

* *

…ಕರುನೇಗಾಲದಲ್ಲಿನ ಬಾಲ್ಯ… ಯೂನಿಫಾರ್ಮ್ ತೊಟ್ಟು ಕುಣಿಕುಣಿಯುತ್ತಾ ಶಾಲೆಗೆ ಹೋಗುತ್ತಿದ್ದ ಆ ದಿನಗಳು!… ಮಳೆಗಾಲದ ಒಂದುದಿನ ಎಲ್ಲವೂ ಬದಲಾಗಿಹೋಗಿತ್ತು. ತಿಂಗಳ ಹಿಂದೆ ಉತ್ತರದ ಜಾಫ್ನಾದಲ್ಲಿ ಆರಂಭವಾದ ಅಂತರ್ಯುದ್ಧ ಆ ಬೆಳಗು ಕರುನೇಗಾಲಕ್ಕೂ ಬಂದುಬಿಟ್ಟಿತ್ತು. ನಾಲ್ಕು ಬಸ್‌ಗಳಲ್ಲಿ ಬಾಂಬ್‌ಗಳು ಸಿಡಿದಿದ್ದವು. ಸತ್ತವರಲ್ಲಿ ಕರುನೇಗಾಲದಿಂದ ಕೊಲಂಬೋಗೆ ಹೋಗುತ್ತಿದ್ದ ಬಸ್ಸಿನ ಚಾಲಕ ದುಲೀಪ ವೀರಕೂನ್ ಸಹ ಒಬ್ಬ.

ದುಲೀಪ ವೀರಕೂನ್ ಅಸಾಂತಿಯ ತಂದೆ.

ಕುಟುಂಬದ ಆಧಾರಸ್ತಂಭ ಉರುಳಿಹೋಗಿತ್ತು. ಅವಿದ್ಯಾವಂತ ತಾಯಿ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಮೂವತ್ತು ಮೈಲಿ ದೂರದ ಕ್ಯಾಂಡಿಯಲ್ಲಿನ ಅಣ್ಣನ ಮನೆ ಸೇರಿದಳು. ಅವಳ ಅಣ್ಣ ಪೊಲ್ಲೆಕಾಂಡೆ ಅಲ್ಲಿನ ಟೀ ತೋಟದಲ್ಲಿ ಕೆಲಸಗಾರ. ಅವನ ಶಿಫಾರಸಿನಿಂದ ತಾಯಿಗೆ ಅಲ್ಲೇ ಕೆಲಸ ಸಿಕ್ಕಿತು. ಟೀ ಎಲೆಗಳನ್ನು ಬಿಡಿಸುವ ಕೆಲಸ. ತಿಂಗಳಿಗೆ ಎಂಟುನೂರು ರೂಪಾಯಿ ಸಂಬಳ… ಬದುಕಿನ ಬಂಡಿ ಸರಿದಾರಿಗೆ ತಿರುಗಿತು ಎನ್ನುವಷ್ಟರಲ್ಲಿ ಮತ್ತೊಂದು ಆಘಾತ. ಮೊದಲೇ ಅಸ್ತಮಾ ರೋಗಿಯಾಗಿದ್ದ ತಾಯಿಗೆ ಕ್ಯಾಂಡಿಯ ತಂಪು ಹವೆ ಒಗ್ಗಲಿಲ್ಲ. ಜತೆಗೇ ಒಂದೇಸಮನೆ ವಾರಗಟ್ಟಲೆ ಹನಿಯುತ್ತಿದ್ದ ಮಳೆಯಲ್ಲಿ ತಲೆಗೊಂದು ಪ್ಲಾಸ್ಟಿಕ್ ಗೊಪ್ಪೆ ಏರಿಸಿ ದಿನಪೂರ್ತಿ ಟೀ ಎಲೆಗಳನ್ನು ಬಿಡಿಸುತ್ತಾ ತಿರುಗುವ ಕೆಲಸ ಅವಳಿಗೆ ಹೊಂದಿಕೆಯಾಗಲಿಲ್ಲ. ಅಸ್ತಮಾ ಉಲ್ಬಣಿಸಿತು… ಒಂದು ಸಂಜೆ ಅಮ್ಮ ತೀರಿಕೊಂಡಳು…

ಹದಿನೈದು ವರ್ಷದ ಅಸಾಂತಿ ಶಾಲೆ ಬಿಟ್ಟು ಟೀ ಎಲೆ ಬಿಡಿಸುವ ಕೆಲಸಕ್ಕೆ ಸೇರಿಕೊಂಡಳು. ಹದಿಮೂರು ವರ್ಷದ ತಮ್ಮ ವಿಜೆ ವೀರಕೂನ್ ಆರ್ಮಿ ಬ್ಯಾರಕ್ಕಿನ ಕ್ಯಾಂಟೀನಿನಲ್ಲಿ ಪಾತ್ರೆ ತೊಳೆಯಲಾರಂಭಿಸಿದ.

ದೇಶದಲ್ಲಿ ಅಂತರ್ಯುದ್ಧ ಮುಂದುವರಿದಿತ್ತು.

ಅಸಾಂತಿಯ ಬಾಳಿನಲ್ಲೂ ಸಹಾ…

ಪೊಲ್ಲೆಕಾಂಡೆಯ ಹಾಸಿಗೆಗೆ ಹರಯದ ಹೆಣ್ಣೊಂದು ಬೇಕಾಗಿತ್ತು. ಜತೆಗೇ ಅವನ ಸೋಮಾರೀ ಹೆಂಡತಿಗೆ ತಾನು ಹೇಳಿದಂತೆ ಕೇಳುವ, ಎಲ್ಲ ಕೆಲಸಗಳನ್ನೂ ಮಾಡುವ ಸೇವಕಿಯೊಬ್ಬಳ ಅಗತ್ಯವಿತ್ತು… ಪರಿಣಾಮ…

ನಲವತ್ತೆರಡರ ಪೊಲ್ಲೆಕಾಂಡೆಗೆ ಹದಿನೈದರ ಅಸಾಂತಿ ಎರಡನೆಯ ಹೆಂಡತಿಯಾದಳು.

ಸುತ್ತಲಿನ ಸಮಾಜಕ್ಕೆ ಅದರಲ್ಲಿ ಯಾವ ಅಸಹಜತೆಯೂ ಕಾಣಲಿಲ್ಲ. ಆದರೆ ಅಸಾಂತಿಯ ಎದೆಯಲ್ಲಿ ಕೋಲಾಹಲ…

…ಅಂತರ್ಯುದ್ಧ ಮುಂದುವರಿದೇ ಇತ್ತು.

ಶ್ರೀಲಂಕಾ ಸೇನೆಗೆ ಸೈನಿಕರ ಕೊರತೆ… ಇನ್ನೂ ಹದಿನೈದು ತುಂಬದ ವಿಜೆ ವೀರಕೂನ್ ಸೈನಿಕನಾಗಿ ಉತ್ತರದ ವೆಲ್ವೆಟ್ಟಿತುರೈ ರಣಾಂಗಣಕ್ಕೆ ಹೊರಟುಹೋದ… ಆ ದಿನ ಅಸಾಂತಿ ಭೋರಿಟ್ಟು ಅತ್ತಳು.

ಆರು ತಿಂಗಳ ನಂತರ ಮೂರು ದಿನಗಳ ರಜೆಯಲ್ಲಿ ಕ್ಯಾಂಡಿಗೆ ಬಂದ ವಿಜೆ ಅಕ್ಕನ ಪಕ್ಕ ಕುಳಿತು ಸಮಾಧಾನಿಸಿದ.

“ನೀನೇನೂ ಯೋಚಿಸ್ಬೇಡ. ತಮಿಳರ ಆಟ ಇನ್ನು ಹೆಚ್ಚು ಕಾಲ ನಡೆಯೋದಿಲ್ಲ. ಇನ್ನು ಮೂರು ತಿಂಗಳಲ್ಲಿ ಜಾಫ್ನಾ ನಮ್ಮ ಕೈ ಸೇರುತ್ತೆ. ಅಲ್ಲಿಗೆ ಯುದ್ಧ ನಿಂತ ಹಾಗೆ. ಆಮೇಲೆ ನಾನು ಎಲ್ಲಿಗೆ ಹೋಗ್ತೀನೋ ಅಲ್ಲಿಗೆ ನಿನ್ನನ್ನ ಕರಕೊಂಡು ಹೋಗ್ತೀನಿ. ಈ ನರಕದಿಂದ ದೂರವಾಗಿ ನೀನು ನೆಮ್ಮದಿಯಾಗಿರಬೋದು.” ಹೇಳುತ್ತಾ ಅಕ್ಕನ ಕಣ್ಣೀರು ಒರೆಸಿದ್ದ.
ಅವನು ಹೇಳಿದಂತೇ ಮೂರು ತಿಂಗಳಲ್ಲಿ ಜಾಫ್ನಾ ಸೇನೆಯ ವಶವಾಯಿತು. ಆದರೆ ಯುದ್ಧ ಮಾತ್ರ ನಿಲ್ಲಲಿಲ್ಲ. ವಾವುನೀಯ, ವಡೈಮರಚ್ಚಿ, ವೆಲ್ವೆಟ್ಟಿತುರೈನಲ್ಲಿ ಅದು ಭೀಕರವಾಗಿ ಮುಂದುವರೆಯಿತು. ಅಷ್ತೇ ಅಲ್ಲ, ಪೂರ್ವದ ಬತ್ತಿಕಲೋವ, ಅಂಪರೈಗಳಿಗೂ ಹರಡಿಬಿಟ್ಟಿತು… ಅದಷ್ಟೇ ಅಲ್ಲ, ಒಂದು ದಿನ ಅದು ವಿಜೆಯನ್ನು, ಅಸಾಂತಿಯ ತಮ್ಮ ವಿಜೆ ವೀರಕೂನ್‌ನನ್ನು ಬಲಿತೆಗೆದುಕೊಂಡುಬಿಟ್ಟಿತು.

ಅವನಿದ್ದ ಜೀಪ್ ಲ್ಯಾಂಡ್ ಮೈನ್‌ಗೆ ಸಿಕ್ಕಿ ಚೂರುಚೂರಾಯಿತು. ವಿಜೆಯ ದೇಹ ಛಿದ್ರಛಿದ್ರವಾಗಿಹೋಯಿತು… ಶವಸಂಸ್ಕಾರಕ್ಕೆಂದು ಅಸಾಂತಿಗೆ ಸಿಕ್ಕಿದ್ದು ದೊಡ್ಡದೊಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ತಮ್ಮನ ದೇಹದ ತುಂಡುಗಳು…

ಯುದ್ಧ ಎಷ್ಟೋಂದು ಭೀಕರ!

* *

ಮನೆಯ ಮುಂದೆ ಜೀಪ್ ನಿಂತ ಶಬ್ಧ… ಮರುಕ್ಷಣ ಕಲ್ಲು ಹಾಸಿನ ನೆಲದ ಮೇಲೆ ಬೂಟುಗಾಲುಗಳ ಆತುರಾತುರದ ಹರಿದಾಟ. ಕ್ಷಣದಲ್ಲಿ ಅವು ಬಾಗಿಲನ್ನು ಸಮೀಪಿಸಿದವು.

`ಅವನು ಬಂದ! ಓಹ್ ದೇವರೇ!’ ಗಾಬರಿಗೊಂಡು ಸಣ್ಣಗೆ ನಡುಗಿದಳು ಅಸಾಂತಿ. ಮರುಕ್ಷಣ ಬಾಗಿಲ ಮೇಲೆ ಬೆರಳುಗಳ ರಪರಪ ಬಡಿತ. ಬಾಗಿಲು ತೆರೆಯದಿರುವ ಸ್ವಾತಂತ್ರ್ಯ ಅವಳಿಗಿರಲಿಲ್ಲ. ಎದೆಯನ್ನು ಒತ್ತಿಹಿಡಿದು ಬಾಗಿಲು ಸಮೀಪಿಸಿದಳು.

ತೆರೆದ ಬಾಗಿಲಲ್ಲಿ ಮೇಜರ್ ಜನರಲ್ ಫತನಸಾರಾ ನಿಂತಿದ್ದ. ಅಸಾಂತಿಯತ್ತ ನೋಡಿ ಒಮ್ಮೆ ನಕ್ಕ ಅವನು ಹಿಂದೆ ತಿರುಗಿ ಸನ್ನೆ ಮಾಡಿದ. ಮನೆಗೆ ಹತ್ತಡಿ ದೂರದಲ್ಲಿ ನಿಂತಿದ್ದ ಜೀಪಿನತ್ತ ಅವಳ ನೋಟ ತಿರುಗಿತು. ಹಾಲು ಚೆಲ್ಲಿದಂತೆ ಹರಡಿದ್ದ ಬೆಳದಿಂಗಳಲ್ಲಿ ಕಂಡ ದೃಶ್ಯ ಅವಳನ್ನು ಮರಗಟ್ಟಿಸಿತು.

ಹೆಡೆಮುರಿ ಕಟ್ಟಿದ್ದ ಮನುಷ್ಯದೇಹವೊಂದನ್ನು ಮೂವರು ಸೈನಿಕರು ಜೀಪಿನಿಂದ ಕೆಳಗುರುಳಿಸಿದರು. ಕಲ್ಲಿನ ನೆಲಕ್ಕೆ ಧಡ್ಡನೆ ಬಿದ್ದೊಡನೇ ಆ ದೇಹದಿಂದ ಗೊರಗು ಚೀತ್ಕಾರ ಹೊರಟಿತು. ಅಸಾಂತಿಯ ಮೈಯಿಡೀ ತಣ್ಣಗೆ ಪ್ರವಹಿಸಿದ ಹಿಮಜಲ.

“ಆ ನಾಯಿಯನ್ನ ಎಳಕೊಂಡು ಬಂದು ಇಲ್ಲಿ ಹಾಕಿ.” ಮೇಜರ್ ಜನರಲ್ ಫತನಸಾರಾ ಆಜ್ಞಾಪಿಸಿದ. ಪಟ್ಟೆಪಟ್ಟೆ ಉಡುಪಿನಲ್ಲಿದ್ದ ಆ ದೇಹವನ್ನು ಸೈನಿಕರು ದರದರನೆ ಎಳೆದುಕೊಂಡು ಬಂದು ಅಸಾಂತಿಯ ಮನೆಯ ಒಳಗೆ ಕೆಡವಿದರು.

“ನೆಟ್ಟಗೆ ನಿಲ್ಲಿಸಿ ಆ ಕಂಬಕ್ಕೆ ಕಟ್ಟಿಹಾಕಿ.” ಮೇಜರ್‌ ಜನರಲ್‌ನಿಂದ ಮತ್ತೊಂದು ಆಜ್ಞೆ.

ಸೈನಿಕರು ಅವನ ಕಂಕುಳುಗಳಿಗೆ ಕೈ ಹಾಕಿ ಒರಟಾಗಿ ಮೇಲೆತ್ತಿದರು. ಗೊರಗೊರ ಸದ್ದು ಹೊರಡಿಸಿದ ಅವನನ್ನು ನಡೆಸಿಕೊಂಡು ಹೋಗಿ ಹಜಾರದ ಮೂಲೆಯಲ್ಲಿದ್ದ ಕಂಬಕ್ಕೆ ಸೇರಿಸಿ ನಿಲ್ಲಿಸಿದರು. ಮೂವರೂ ಸೇರಿ ಒರಟು ತೆಂಗಿನ ನಾರಿನ ಹಗ್ಗದಿಂದ ಅವನನ್ನು ಕಂಬಕ್ಕೆ ಕಟ್ಟಿದರು. ಅವನ ಕಾಲುಗಳಿಂದ ಹಿಡಿದು ಕುತ್ತಿಗೆಯವರೆಗೂ ಹುರಿಯನ್ನು ಸುತ್ತಿ ಸುತ್ತಿ ಕಟ್ಟಿಬಿಟ್ಟರು. ಅವನಲ್ಲಿ ಪ್ರತಿಭಟಿಸುವ ಚೈತನ್ಯವೇ ಇರಲಿಲ್ಲ. ಸುಮ್ಮನೆ ಕಣ್ಣುಗಳನ್ನು ತೆರೆಯುತ್ತಾ ಮುಚ್ಚುತ್ತಾ ಶೂನ್ಯನೋಟ ಬೀರುತ್ತಿದ್ದ. ತಮ್ಮ ಕೆಲಸ ಮುಗಿಸಿ ಸೈನಿಕರು ಸದ್ದಿಲ್ಲದೇ ಹೊರನಡೆದುಬಿಟ್ಟರು. ಫತನಸಾರಾ ಕಣ್ಣುಗಳನ್ನು ಅಗಲವಾಗಿ ತೆರೆದುಕೊಂಡು ನಿಂತಿದ್ದ ಅಸಾಂತಿಯತ್ತ ತಿರುಗಿ ನಕ್ಕ.

“ಇದೊಂದು ಎಲ್ ಟಿ ಟಿ ಇ ನಾಯಿ. ನನ್ನ ಈ ವರ್ಷದ ಅತಿದೊಡ್ಡ ಬೇಟೆ.” ಬಾಯಿ ತೆರೆದು ನಕ್ಕ. ಮಾತು ಹೊರಡದೇ ನಿಂತಿದ್ದ ಅಸಾಂತಿಯ ಹತ್ತಿರ ಸರಿದು ಹೇಳಿದ: “ಇವನ್ಯಾರು ಗೊತ್ತೇ? ಕಳೆದ ತಿಂಗಳು ದಂಬಗಲ್ಲದ ಮಿಲಿಟರಿ ಬ್ಯಾರಕ್ಕಿನ ಮೇಲೆ ನಡೆದ ಧಾಳಿಯ ಯೋಜನೆಯನ್ನ ರೂಪಿಸಿದೋನು ಇವನೇ.”

ದಂಬಗಲ್ಲದ ಮಿಲಿಟರಿ ಬ್ಯಾರಕ್ಕಿನ ಮೇಲಿನ ಧಾಳಿ!

ಇತ್ತೀಚಿನ ವರ್ಷಗಳಲ್ಲಿ ನಡೆದ ಅತೀ ಭೀಕರ ಘಟನೆ ಅದು. ಅತೀ ಸುರಕ್ಷಿತ ಎನಿಸಿದ ದಂಬಗಲ್ಲದ ಮಿಲಿಟರಿ ಬ್ಯಾರಕ್ಕಿನ ಮೇಲೆ ಎಲ್ ಟಿ ಟಿ ಇ ಉಗ್ರರು ಬೆಳಗಿನ ಜಾವ ಹಠಾತ್ತಾಗಿ ಗ್ರೆನೇಡ್ ಧಾಳಿ ನಡೆಸಿದ್ದರು. ಹೊತ್ತಿಕೊಂಡ ಬೆಂಕಿ ಕ್ಷಣದಲ್ಲಿ ಮದ್ದುಗುಂಡುಗಳ ದಾಸ್ತಾನಿಗೂ ಹರಡಿ ಭಯಂಕರ ಆಸ್ಫೋಟನೆಗಳಿಗೆ ಕಾರಣವಾಯಿತು. ಸುಮಾರು ಅರ್ಧಗಂಟೆಯವರೆಗೆ ನಡೆದ ಆ ಆಸ್ಫೋಟನೆಗಳ ಸದ್ದು ಇಪ್ಪತ್ತು ಮೈಲಿ ದೂರದ ಎರಕಾಂಡಕ್ಕೂ ಕೇಳಿಸಿತ್ತು! ಇಡೀ ಬ್ಯಾರಕ್ಕನ್ನು ಧ್ವಂಸ ಮಾಡಿದ್ದಲ್ಲದೇ ದಂಬಗಲ್ಲ ಊರಿನ ಅರ್ಧದಷ್ಟು ಮನೆಗಳಿಗೆ ಹಾನಿ ಮಾಡಿದ ಆ ದುರ್ಘಟನೆಯಲ್ಲಿ ಸತ್ತ ಸೈನಿಕರ ಸಂಖ್ಯೆ ಐನೂರ ಅರವತ್ತನಾಲ್ಕು. ಪ್ರಾಣ ಕಳೆದುಕೊಂಡ ನಾಗರೀಕರ ಲೆಕ್ಕ ಇನ್ನೂ ಸಿಕ್ಕಿಲ್ಲ…

“ಓಹ್!” ಅಸಾಂತಿ ಎದೆಗೆ ಕೈಒತ್ತಿಕೊಂಡಳು. ಫತನಸಾರಾ ಮುಂದುವರೆಸಿದ: “ಇವನ ಮೇಲೆ ಬಲೆ ಬೀಸಿ ವಾರದಿಂದ್ಲೂ ಕಾದಿದ್ವಿ. ಈಗ ಅರ್ಧಗಂಟೆಯ ಹಿಂದೆ ಸಿಕ್ಕಿಬಿದ್ದ. ನಡೆದ ಗುಂಡಿನ ಚಕಮಕಿಯಲ್ಲಿ ಇವನ ನಾಲ್ವರು ಸಹಚರರು ಖಲಾಸ್. ಇವನು ಸೆರೆಸಿಕ್ಕಿದ. ನಾಳೆ ಬೆಳಿಗ್ಗೆ ನಾನೇ ಇವನನ್ನು ಖುದ್ದಾಗಿ ನನ್ನ ಜೀಪಿನಲ್ಲೇ ಕೊಲಂಬೋಗೆ ಕರಕೊಂಡು ಹೋಗ್ತೀನಿ.” ಒಮ್ಮೆ ಕೆಮ್ಮಿ ಮಾತು ಮುಂದುವರೆಸಿದ: “ಇವನ ಜತೆಯವನೊಬ್ಬ ಕಾಡಿನಲ್ಲಿ ನುಗ್ಗಿ ತಪ್ಪಿಸಿಕೊಂಡ. ಅವನಿಗಾಗಿ ಹುಡುಕಾಟ ನಡೀತಾ ಇದೆ. ನಾನೀಗ ಅಲ್ಲಿಗೆ ಹೋಗಬೇಕು. ಇನ್ನು ಮೂರುನಾಲ್ಕು ಗಂಟೇನಲ್ಲಿ ಹಿಂದಕ್ಕೆ ಬರ್ತೀನಿ. ಅಲ್ಲೀವರೆಗೆ ಈ ಖೈದಿಯ ಜವಾಬ್ದಾರಿ ನಿನ್ನದು.”

ಅಸಾಂತಿ ಬೆದರಿದಳು. ಅವಳು ಏನೋ ಹೇಳಲು ಪ್ರಯತ್ನಿಸಿದಂತೆ ಕಂಡಿತು. ಆದರೆ ಮಾತುಗಳು ಹೊರಡಲಿಲ್ಲ. ಅದನ್ನು ಗಮನಿಸಿದ ಫತನಸಾರಾ ಪಕಪಕನೆ ನಕ್ಕುಬಿಟ್ಟ. ಅವಳ ಭುಜ ತಟ್ಟಿ ಹೇಳಿದ: “ಇವನಿಗೆ ನೀನು ಹೆದರೋದಿಕ್ಕೆ ಕಾರಣ ಇಲ್ಲ. ನನ್ನ ಜನ ಇವನನ್ನ ಹೇಗೆ ಕಟ್ಟಿಹಾಕಿದ್ದಾರೆ ನೋಡು. ಬಿಡಿಸಿಕೊಳ್ಳೋದಿಕ್ಕೆ ಪ್ರಯತ್ನಿಸಿದ್ರೆ ಇವನ ಕೈಕಾಲು ಜತೆಗೆ ಕತ್ತೂ ಕತ್ತರಿಸಿಹೋಗುತ್ತೆ. ನೀನೇನೂ ಹೆದರಬೇಡ. ಇದು ತಮಿಳು ಹುಲಿ ಅಲ್ಲ. ತಮಿಳು ನಾಯಿ. ಅಹ್ಹಹ್ಹಾ ತಮಿಳು ನಾಯಿ.” ಮೇಜರ್ ಜನರಲ್ ಫತನಸಾರಾ ಗಹಗಹಿಸಿದ.

ಖೈದಿ ಒಮ್ಮೆ ಹೂಂಕರಿಸಿದ. ಅಗಲವಾಗಿ ತೆರೆದುಕೊಂಡ ಅವನ ಕಣ್ಣುಗಳು ಬೆಂಕಿಯುಗುಳಿದವು. ಫತನಸಾರಾ ಅವನತ್ತ ಸರ್ರನೆ ನುಗ್ಗಿದ. “ಇನ್ನೂ ಇಳಿದಿಲ್ಲ ನಿನ್ನ ಕೊಬ್ಬು! ಸ್ವಲ್ಪ ತಾಳ್ಕೋ. ಅವನನ್ನು ಹಿಡಕೊಂಡು ಬರ್ತೀನಿ. ಇಬ್ಬರಿಗೂ ಒಟ್ಟಿಗೆ ತಿಥಿ ಮಾಡ್ತೀನಿ” ಅಂದವನೇ ಒಮ್ಮೆ ಗಟ್ಟಿಯಾಗಿ ಕ್ಯಾಕರಿಸಿ ಖೈದಿಯ ಮುಖದ ಮೇಲೆ ಪಚಕ್ಕನೆ ಉಗಿದ. ಹಳದೀ ಬಣ್ಣದ ಶ್ಲೇಷ್ಮ ಖೈದಿಯ ಎಡಗಣ್ಣಿನ ಮೇಲೆ ಬಿತ್ತು. ಜತೆಗೆ ಇಡೀ ಮುಖದ ಮೇಲೆ ಎಂಜಲಿನ ಸಿಂಚನ. ಖೈದಿ ಬುಸುಗುಟ್ಟಿದ. ಬಿಡಿಸಿಕೊಳ್ಳಲೆಂದು ಕೈಗಳನ್ನು ರಭಸವಾಗಿ ಅಲುಗಿಸಿದ. ಒರಟು ಹುರಿ ಮುಂಗೈಗಳ ಮೇಲೆ ರಕ್ತಗೆಂಪು ಗೆರೆಗಳನ್ನು ಮೂಡಿಸಿತು. ಅತೀವ ನೋವಿನಲ್ಲಿ ಮುಖ ಕಿವಿಚಿದ. ಅಂಟಿಕೊಂಡಂತೆ ಕಂಡ ತುಟಿಗಳಿಂದ ನರಳುವಿಕೆ ಹೊರಟಿತು. ಮೇಜರ್ ಜನರಲ್ ಫತನಸಾರಾ ವಿಕಟವಾಗಿ ನಕ್ಕ. ಅಸಾಂತಿಯತ್ತ ತಿರುಗಿ ಹೇಳಿದ: “ಆಯ್ತು ನಾನೀಗ ಹೊರಡ್ಬೇಕು. ಮಧ್ಯರಾತ್ರಿ ಹೊತ್ತಿಗೆಲ್ಲಾ ಬಂದುಬಿಡ್ತೀನಿ” ಎನ್ನುತ್ತಾ ಬಾಗಿಲ ಕಡೆ ನಡೆದ. ಬಾಗಿಲು ಸಮೀಪಿಸಿದವನು ಗಕ್ಕನೆ ನಿಂತು ಅವಳತ್ತ ತಿರುಗಿದ. “ವಾರದಿಂದಾ ನೀನು ಸಿಗದೇ ನನಗೆ ಹುಚ್ಚೇ ಹಿಡಿದುಬಿಟ್ಟಿದೆ” ಎನ್ನುತ್ತಾ ಅವಳನ್ನು ಸಮೀಪಿಸಿದ.

ಅಸಾಂತಿ ಯಾವುದಕ್ಕೆ ಹೆದರಿದ್ದಳೋ ಆ ಗಳಿಗೆ ಬಂದೇಬಿಟ್ಟಿತ್ತು.

ಈ ಹಾಳು ಬದುಕಿನಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಯಾತನಾಮಯ ಅಧ್ಯಾಯದ ಮತ್ತೊಂದು ಪುಟ ಈಗ ತೆರೆದುಕೊಳ್ಳತೊಡಗಿತ್ತು…

ನಾಲ್ಕು ವರ್ಷಗಳ ಹಿಂದೆ…

…ತಮ್ಮನ ಶವಸಂಸ್ಕಾರವಾದ ನಂತರ ಅಸಾಂತಿಗೆ ಕಂಡದ್ದು ಬರೀ ಕತ್ತಲು. ಮೊದಲು ತಂದೆ, ನಂತರ ತಾಯಿ, ಈಗ ತಮ್ಮ- ಮೂವರೂ ಒಬ್ಬೊಬ್ಬರಾಗಿ ಹೊರಟುಹೋಗಿದ್ದರು. ಅವಳಿಗೆ ತನ್ನವರೆನ್ನುವವರು ಯಾರೂ ಇಲ್ಲ. ಪೊಲ್ಲೆಕಾಂಡೆ ನಿಜವಾದ ಅರ್ಥದಲ್ಲಿ ಅವಳಿಗೆಂದೂ ಗಂಡನಾಗಲೇ ಇಲ್ಲ. ಅವಳ ಬೇಕು ಬೇಡಗಳಿಗೆ ಅವನ ಗಮನವಿರಲಿಲ್ಲ. ಅವನ ಆಸಕ್ತಿಯಿದ್ದುದು ರಾತ್ರಿಯ ಕತ್ತಲಿನಲ್ಲಿ ಕೈಗೆ ಸಿಗುವ ಅವಳ ದೇಹದ ವಿವಿಧ ಭಾಗಗಳತ್ತ ಮಾತ್ರ.

ಹೋಗಲೀ ಅವಳಿಗೆ ಮಕ್ಕಳಾದರೂ ಆದವೇ?

ಉಹ್ಞುಂ. ಆರನೆಯ ಮಗುವಾದ ಮೇಲೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಪೊಲ್ಲೆಕಾಂಡೆಯಿಂದ ಅವಳು ತಾಯಿಯಾಗುವುದು ಸಾಧ್ಯವೇ ಇರಲಿಲ್ಲ.

ಇದರರ್ಥ ಅಸಾಂತಿಗೆ ತನ್ನವರೆನ್ನುವವರು ಯಾರೂ ಇಲ್ಲ. ಅವಳು ಒಂಟಿ…

ಚಹಾ ಗಿಡಗಳ ನಡುವೆ ಹುದುಗಿ ಕುಳಿತು ರೋಧಿಸುತ್ತಿದ್ದ ಅವಳನ್ನು ಸಂತೈಸಿದವನು ಜಯತಿಲಕೆ. ಹೊಳೆಯುವ ಕಣ್ಣುಗಳ, ಚಿಗುರು ಮೀಸೆಯ ಚಂದದ ಯುವಕ ಅವನು. ಉತ್ತರದ ಮಾರೀಚಖಡೈ ಊರಿನಿಂದ ಬಂದು ಟೀ ತೋಟದ ಕೆಲಸಕ್ಕೆ ಇತ್ತೀಚೆಗಷ್ಟೇ ಸೇರಿದ್ದ ಅವನು ತನ್ನ ಮೃದುವಾದ ಬೆರಳುಗಳಿಂದ ಅಸಾಂತಿಯ ಕಣ್ಣೀರು ಒರೆಸಿದ…

ಆಕಾಶ ತುಂಬಾ ಕಡುಗಪ್ಪು ಮೋಡಗಳು ಸೂತಕದಂತೆ ಕವಿದುಕೊಂಡಿದ್ದ ಒಂದು ಸಂಜೆ ಅಸಾಂತಿ ಜಯತಿಲಕೆಯ ಜತೆ ಓಡಿಹೋದಳು. ಕಿಕ್ಕಿರಿದು ತುಂಬಿದ್ದ ರೈಲುಬೋಗಿಯಿಂದ ಕೊಲಂಬೋ ರೈಲ್ವೇ ಸ್ಟೇಷನ್‌ನಲ್ಲಿ ಇಳಿದಾಗ ಭಯಂಕರ ಮಳೆ. ಎಲ್ಲೆಲ್ಲೂ ಹರಿಯುತ್ತಿದ್ದ ಪ್ರವಾಹದಂಥಾ ನೀರು… ಹಳೆಯದೆಲ್ಲವೂ ತೊಳೆದುಹೊಗಲಿ ಎಂದು ಬಯಸಿದಳು ಅಸಾಂತಿ…

ಬುದ್ಧಲೋಕ ಮಾವತದಲ್ಲಿದ್ದ ಒಂದು ಸಣ್ಣ ಬಾರಿನಲ್ಲಿ ಜಯತಿಲಕೆಗೆ ಕೆಲಸ ಸಿಕ್ಕಿತು. ಸೇನಾನಾಯಿಕೆ ಮಾವತದ ಒಂದು ಗಲ್ಲಿಯಲ್ಲಿನ ಒಂದು ಗೂಡಿನಲ್ಲಿ ಜಯತಿಲಕೆ – ಅಸಾಂತಿಯರ ಸಂಸಾರ ಆರಂಭವಾಯಿತು.

ಅಸಾಂತಿ ಕನಸು ಕಟ್ಟಲಾರಂಭಿಸಿದಳು…

ವಾರ ಕಳೆದಿರಲಿಲ್ಲ. ದಿನಾ ರಾತ್ರಿ ಹನ್ನೆರಡು ಗಂಟೆಗೆ ಮನೆ ಸೇರುತ್ತಿದ್ದ ಜಯತಿಲಕೆ ಆವತ್ತು ಎಂಟು ಗಂಟೆಗೇ ಬಂದ. ಮುಖದಲ್ಲಿ ಗಾಬರಿ. ಅಸಾಂತಿ ಏನೆಂದು ಕೇಳುವ ಮೊದಲೇ ಬಡಬಡಿಸಿದ.

“ಬಾರಿನಲ್ಲಿ ಹಣ ಕಳುವಾಗಿದೆ. ಎಲ್ಲರಿಗೂ ನನ್ನ ಮೇಲೆ ಅನುಮಾನ. ಮಾಲೀಕ ಪೋಲೀಸರಿಗೆ ಕಂಪ್ಲೇಂಟ್ ಕೊಟ್ಟುಬಿಟ್ಟಿದ್ದಾನೆ. ಯಾವ ಗಳಿಗೆಯಲ್ಲಾದರೂ ಪೋಲೀಸರು ಇಲ್ಲಿಗೆ ಬರಬಹುದು. ನಮಗಿರೋ ದಾರಿ ಒಂದೇ. ಇಲ್ಲಿಂದ ಓಡಿಹೋಗೋದು.”

ಅವನಿಗಿದ್ದ ದಾರಿ ಅದೊಂದೇ. ಅವಳಿಗೂ ಅಷ್ಟೇ. ಅವನ ಹಿಂದೆ ಓಡುವುದನ್ನು ಬಿಟ್ಟು ಅವಳಿಗೆ ಬೇರೆ ದಾರಿ ಎಲ್ಲಿದೆ?

ಉಟ್ಟಬಟ್ಟೆಯಲ್ಲಿ ಮನೆಬಿಟ್ಟು ಹೊರಟರು. ರೈಲು ಹತ್ತಿ ಅಡಗಿ ಕೂತರು. ಆಮೆವೇಗದ ರೈಲು ತೆವಳುತ್ತಾ ಇಪ್ಪತ್ತು ಮೈಲು ದೂರದ ಕಲುತರ ಸೇರಿದಾಗ ಮಧ್ಯರಾತ್ರಿ ದಾಟಿತ್ತು. ರಾತ್ರಿ ರೈಲ್ವೇ ಸ್ಟೇಷನ್‌ನ ಮೂಲೆಯಲ್ಲಿ ಮುದುರಿ ಕುಳಿತರು. ಬೆಳಗಾದೊಡನೇ ಜಯತಿಲಕೆ ಅವಳನ್ನು ಹೋಟೆಲಿಗೆ ಕರೆದುಕೊಂಡು ಹೋಗಿ ತಿಂಡಿ ತಿನ್ನಿಸಿದ. ಜೇಬಿನಿಂದ ಗರಿಗರಿ ನೋಟು ತೆಗೆದು ಮಾಣಿಗೆ ನೀಡಿದ. ಮಧ್ಯಾಹ್ನ ಒಂದು ಒಳ್ಳೆಯ ಹೋಟೆಲಿನಲ್ಲಿ ಭರ್ಜರಿ ಊಟ. ಸಂಜೆ ಬೀಚ್‌ನಲ್ಲಿ ಸುತ್ತಾಟ… ಅವಳನ್ನು ಅಲ್ಲೇ ಒಂದುಕಡೆ ಕೂರಿಸಿ ಕಡಲೆಬೀಜದ ಪೊಟ್ಟಣವನ್ನು ಕೈಗಿತ್ತು “ಇದೀಗ ಬಂದೆ. ಇಲ್ಲೇ ಇರು” ಎಂದು ಹೇಳಿ ಹೋದ ಜಯತಿಲಕೆ ಹಿಂತಿರುಗಿ ಬರಲೇ ಇಲ್ಲ. ಅವಳು ಕಾದೇ ಕಾದಳು…

ಕತ್ತಲಾವರಿಸಿದಂತೇ ಬೀಚ್‌ನಲ್ಲಿದ್ದ ಜನ ಒಬ್ಬೊಬ್ಬರಾಗಿ ಕರಗಿಹೋದರು. ನಿರ್ಜನ ಬೀಚ್‌ನಲ್ಲಿ ಒಂಟಿ ಹೆಣ್ಣು. ಅಪರಿಚಿತ ಊರಿನಲ್ಲಿ ಅವಳು ಏಕಾಕಿ. ಕೈಯಲ್ಲಿ ಬಿಡಿಗಾಸೂ ಇಲ್ಲ. ಅಸಾಂತಿ ವಿಹ್ವಲಳಾದಳು. ಜಯತಿಲಕೆ ತನ್ನನ್ನು ಬಿಟ್ಟು ಓಡಿಹೋಗಿದ್ದಾನೆ ಎಂದು ನಂಬಲು ಅವಳಿಗೆ ಕಷ್ಟವಾಗಿತ್ತು. ಇನ್ನೂ ಸ್ವಲ್ಪ ಹೊತ್ತು ಕಾಯೋಣ ಅಂದುಕೊಂಡು ಅಲ್ಲೇ ಕೂತಳು.

ಕತ್ತಲು ದಟ್ಟವಾದಂತೇ ಬೀಚ್‌ನಲ್ಲಿ ಬೇರೆಯೇ ರೀತಿಯ ಚಟುವಟಿಕೆಗಳು ಆರಂಭವಾದವು… ಅವಳು ನೋಡುನೋಡುತ್ತಿದ್ದಂತೇ ಇಡೀ ಬೀಚ್ ಒಂದು ವಿಶಾಲ ಹೊರಾಂಗಣ ವೇಶ್ಯಾವಾಟಿಕೆಯಾಗಿ ಬದಲಾಗಿಹೋಗಿತ್ತು! ಅಸಾಂತಿ ಹೆದರಿಹೋದಳು. ಎದ್ದು ನಿಂತಳು. ಕಾಲು ನಡೆದತ್ತ ಹೆಜ್ಜೆ ಸರಿಸಿದಳು. ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಅವಳ ಹಿಂದೆ ಮುಂದೆ ಹತ್ತಾರು ಹಸಿದ ನಾಯಿಗಳು… ಅಸಾಂತಿ ದಿಕ್ಕೆಟ್ಟುಹೋದಳು. ಸಾಧ್ಯವಾದಷ್ಟು ವೇಗವಾಗಿ ಓಡಿದಳು. ಕಾಲುಗಳು ಸೋತಾಗ ಕೆಳಗೆ ಕುಸಿದು ದನಿಯೆತ್ತರಿಸಿ ಅಳತೊಡಗಿದಳು. ನಾಯಿಗಳ ಕೇಕೆ ತಾರಕಕ್ಕೇರಿತು. `ಇಲ್ಲಿಗೆ ಎಲ್ಲವೂ ಮುಗಿಯಿತು’ ಎಂದವಳು ಅಂದುಕೊಳ್ಳುವಷ್ಟರಲ್ಲಿ ಯಾವುದೋ ವಾಹನ ಕತ್ತಲನ್ನು ಸೀಳಿಕೊಂಡು ನುಗ್ಗಿಬಂತು. “ಯಾರದು? ಇಲ್ಲೇನು ನಡೀತಿದೆ?” ಎನ್ನುತ್ತಾ ಗಂಡಸೊಬ್ಬ ಕೆಳಗಿಳಿದ. ಅವನ ಕೈಯಲ್ಲಿ ಪಿಸ್ತೂಲು. ಅದನ್ನು ಕಂಡೊಡನೇ ನಾಯಿಗಳು ಸದ್ದಿಲ್ಲದೇ ಓಟಕಿತ್ತವು. ಮಿಲಿಟರಿ ಸಮವಸ್ತ್ರದಲ್ಲಿದ್ದ ಮಧ್ಯವಯಸ್ಸಿನ ದಢೂತಿ ಮನುಷ್ಯ ಅವಳ ಮುಂದೆ ಬಂದು ನಿಂತ.

ಮೇಜರ್ ಜನರಲ್ ಫತನಸಾರನನ್ನು ಅಸಾಂತಿ ಮೊಟ್ಟ ಮೊದಲು ಭೇಟಿಯಾದದ್ದು ಹೀಗೆ.

ಅಲ್ಲಿಂದ ಬದುಕು ಬೇರೊಂದು ದಾರಿ ಹಿಡಿಯಿತು. ಅವಳಿಗೆ ಸಂಪೂರ್ಣ ರಕ್ಷಣೆಯ ಭರವಸೆಯಿತ್ತ ಫತನಸಾರ ಅವಳನ್ನು ಕರೆತಂದದ್ದು ಉವಾ ಪ್ರಾಂತ್ಯದ ಪೂರ್ವದಂಚಿನಲ್ಲಿದ್ದ ಎರಕಾಂಡ ಹಳ್ಳಿಗೆ.

ನೂರಾ ಅರವತ್ತು ಮನೆಗಳ ಆ ಸಿಂಹಳೀ ಹಳ್ಳಿ ಎರಡು ತಿಂಗಳ ಹಿಂದೆ ಎಲ್ ಟಿ ಟಿ ಇ ಗೆರಿಲ್ಲಾಗಳ ಧಾಳಿಗೊಳಗಾಗಿತ್ತು. ಆದರೆ ಮುನ್ಸೂಚನೆ ಸಿಕ್ಕಿದ್ದರಿಂದ ಹೆಚ್ಚಿನ ಜನ ಊರನ್ನೇ ಬಿಟ್ಟು ಓಡಿಹೋಗಿ ಜೀವ ಉಳಿಸಿಕೊಂಡಿದ್ದರು. ಒಂದೆರಡು ದಿನಗಳಲ್ಲಿ ಹಳ್ಳಿ ಸೇನೆಯ ವಶವಾಯಿತು. ಓಡಿಹೋಗಿದ್ದ ಜನರಲ್ಲಿ ಹೆಚ್ಚಿನವರು ಹಿಂತಿರುಗಿದರು. ಆದರೆ ಹಲವಾರು ಕುಟುಂಬಗಳು ಹಿಂದಕ್ಕೆ ಬರಲೇ ಇಲ್ಲ. ಅವರೆಲ್ಲಿ ಹೋದರೋ ಏನಾದರೋ ಯಾರಿಗೂ ಗೊತ್ತಿಲ್ಲ. ಅವರ ಮನೆಮಠಗಳು ದಿಕ್ಕಿಲ್ಲದೇ ನಿಂತಿದ್ದವು. ಅಂತಹ ಒಂದು ಮನೆಗೆ ಫತನಸಾರ ಅಸಾಂತಿಯನ್ನು ಕರೆತಂದ. ನಾಲ್ಕು ವರ್ಷಗಳ ಹಿಂದೆ ಮೋಡ ಕವಿದ ಆ ಮುಂಜಾನೆ ಆ ಮನೆಯ ಮುಂದೆ ನಿಂತದ್ದು ನಿನ್ನೆಯೋ ಮೊನ್ನೆಯೋ ಅನಿಸುತ್ತಿದೆ ಅಸಾಂತಿಗೆ. ಸಿಪಾಯಿಯೊಬ್ಬ ಬೀಗ ಮುರಿದು ಬಾಗಿಲು ತೆರೆದಾಗ ಒಳಗೆ ಕಾಲಿಟ್ಟ ಅಸಾಂತಿ ಕಂಡ ದೃಶ್ಯಗಳು ಅವಳ ಕಣ್ಣುಗಳಲ್ಲಿ ಇನ್ನೂ ಅಚ್ಚೊತ್ತಿವೆ. ಎಲ್ಲವನ್ನೂ ಹೇಗಿತ್ತೋ ಹಾಗೇ ಬಿಟ್ಟು ಓಡಿಹೋಗಿದ್ದ ಕುರುಹುಗಳು… ಹಗ್ಗದ ಮೇಲೆ ಒಣಹಾಕಿದ್ದ ಬಟ್ಟೆಗಳು, ಅಡಿಗೆಮನೆಯಲ್ಲಿ ತೊಳೆಯದೇ ಬಿಟ್ಟುಹೋಗಿದ್ದ ಪಾತ್ರೆಗಳು, `ಟಿಕ್ ಟಿಕ್…’ ಎಂದು ಇನ್ನೂ ನಡೆಯುತ್ತಿದ್ದ ಗಡಿಯಾರ… ಮಗುವೊಂದು ಆಟ ಆಡಿ ಇನ್ನು ಸಾಕು ಎಂದುಕೊಂಡು ಅತ್ತ ಒಂದು ಇತ್ತ ಒಂದು ಒಗೆದಿದ್ದ ಆಟದ ಸಾಮಾನುಗಳು…

ಯುದ್ಧ ಬದುಕನ್ನು ಹೇಗೆಲ್ಲಾ ಅಸ್ತವ್ಯಸ್ತಗೊಳಿಸಿಬಿಡುತ್ತದೆ!

ಇಡೀ ಮನೆಯಲ್ಲಿ ಒಮ್ಮೆ ಸುತ್ತಾಡಿದ ಫತನಸಾರ ಅವಳ ಮುಂದೆ ನಿಂತು ಹೇಳಿದ್ದ. “ಇದು ನಿನ್ನ ಮನೆ. ಇಲ್ಲಿ ನೀನು ನೆಮ್ಮದಿಯಾಗಿರಬೋದು. ನಿನ್ನ ಊಟ ತಿಂಡಿ ಬಟ್ಟೆ ಬರೆ ಎಲ್ಲದರ ವ್ಯವಸ್ಥೆ ನನ್ನ ಜವಾಬ್ದಾರಿ.” ಅಸಾಂತಿ ಕಣ್ಣಗಲಿಸಿ ಕೇಳಿದ್ದಳು. ಅವನ ಮುಂದಿನ ಮಾತುಗಳು ಕಿವಿಗೆ ಬಿದ್ದವು. “…ಇದೆಲ್ಲಕ್ಕೆ ಪ್ರತಿಯಾಗಿ ನನಗೆ ನೀನು ಬೇಕು. ನಾನು ಬಯಸಿದಾಗೆಲ್ಲಾ ನೀನು ನನ್ನ ಜತೆಗಿರಬೇಕು.” ಅವನ ಮಾತು ನೇರವಾಗಿತ್ತು, ಸ್ಪಷ್ಟವಾಗಿತ್ತು. ಯಾವ ಎಗ್ಗಾಗಲೀ ಸಿಗ್ಗಾಗಲೀ ಅದರಲ್ಲಿರಲಿಲ್ಲ. ಈ ಮಧ್ಯವಯಸ್ಸಿನ, ದಢೂತಿ ಸೇನಾಧಿಕಾರಿಯ ಬಯಕೆಯನ್ನು ನಿರಾಕರಿಸುವ ಸ್ವಾತಂತ್ರ್ಯ ತನಗಿದೆಯೇ ಎಂದವಳು ಒಮ್ಮೆ ಯೋಚಿಸಿದಳು. ಇಲ್ಲ. ಅವನ ಮಾತು ಬೇಡಿಕೆಯಂತಿರಲಿಲ್ಲ. ಅದರಲ್ಲಿ ಅಧಿಕಾರವಿತ್ತು, ಸ್ಪಷ್ಟ ಹಕ್ಕಿತ್ತು. ನಿರಾಕರಿಸುವ ಸ್ವ್ಯಾತಂತ್ರ್ಯ ಅವಳಿಗಿರಲೇ ಇಲ್ಲ. `ಯಾಕಾದರೂ ನಿರಾಕರಿಸಬೇಕು? ಇವನು ಸ್ವಾರ್ಥಿ ಕಾಮುಕ ಪೊಲ್ಲೆಕಾಂಡೆಗಿಂತ, ಸುಳ್ಳುಗಾರ ಕಳ್ಳ ಜಯತಿಲಕೆಗಿಂತ ಅದೆಷ್ಟೋ ಪಾಲು ಒಳ್ಳೆಯವನಾಗಿ ಕಾಣುತ್ತಾನೆ. ನನ್ನೆಲ್ಲಾ ಅಗತ್ಯಗಳನ್ನೂ ಪೂರೈಸಿದ ನಂತರವೇ ತನ್ನ ಬೇಡಿಕೆಯನ್ನು ಮುಂದಿಟ್ಟಿದ್ದಾನೆ. ಕಲುತರ ಬೀಚಿನಲ್ಲಿ ಕಾಮುಕ ನಾಯಿಗಳು ಕಚ್ಚಿ ಎಳೆದಾಡಹೊರಟಿದ್ದ ನನ್ನ ಬದುಕು ನನ್ನದೇ ಬದುಕಾಗಿ ಉಳಿದದ್ದೇ ಇವನಿಂದ. ಇವನಿಗೆ ನನ್ನನ್ನು ಒಪ್ಪಿಸಿಕೊಂಡರೆ ನನಗೆ ಬೇಕಾದ ರಕ್ಷಣೆ, ನೆಮ್ಮದಿ ಸಿಗಬಹುದು.’ ಅಸಾಂತಿ ತರ್ಕಿಸಿದಳು…

ಮುಂದಿನ ಒಂದುವಾರ ಅವನು ಮನೆಯಿಂದ ಹೊರಗೆ ಹೋಗಲೇ ಇಲ್ಲ. ಆ ಏಳು ದಿನಗಳಲ್ಲಿ ಅವನ ನಿಜರೂಪ ಅವಳೆದುರು ಅನಾವರಣಗೊಂಡಿತು.

ಫತನಸಾರ ಒಬ್ಬ ವಿಕೃತಕಾಮಿ. ಅವಳನ್ನು ವಿವಸ್ತ್ರಗೊಳಿಸಿ ಯಾವುಯಾವುದೋ ಭಂಗಿಗಳಲ್ಲಿ ನಿಲ್ಲಿಸಿದ, ಕೂರಿಸಿದ, ಮಲಗಿಸಿದ, ಹೊರಳಾಡಿಸಿದ… ಅಸಾಂತಿ ನೋವಿನಿಂದ ನರಳಿದಳು.

ಇದು ದಿನನಿತ್ಯದ ಕಠೆಯಾದರೆ ಆಗೊಮ್ಮೆ ಹೀಗೊಮ್ಮೆ ಅವಳ ಮೈ ಮೇಲಿನ ಬಟ್ಟೆಗಳನ್ನು ಚೂರೂ ಬಿಡದೆ ಕಿತ್ತೆಸೆದು ಈವತ್ತು ಇಡೀ ದಿನ ನನ್ನೆದುರು ಹೀಗೇ ಬೆತ್ತಲಾಗೇ ಓಡಾಡು ಎನ್ನುತ್ತಿದ್ದ. ಮೊದಲ ಸಲ ಅವಳು ಪ್ರತಿಭಟಿಸಿದಾಗ ಅವನು ರೋಷಗೊಂಡಿದ್ದ. ಅವಳನ್ನು ಹಿಗ್ಗಾಮುಗ್ಗ ಬಡಿದಿದ್ದ. ಅಸಾಂತಿ ತತ್ತರಿಸಿಹೋಗಿದ್ದಳು… ಅವನು ಕಿತ್ತೆಸೆದ ತನ್ನ ಬಟ್ಟೆಗಳತ್ತ ಕೈಚಾಚುವ ದೈಹಿಕ ಚೈತನ್ಯವಾಗಲೀ ಮಾನಸಿಕ ಸ್ಥೈರ್ಯವಾಗಲೀ ಅವಳಲ್ಲಿ ಉಳಿದಿರಲೇ ಇಲ್ಲ… ನಡೆಯುವಾಗ, ಕೂರುವಾಗ, ಅವನ ಕೈಗೆ ಟೀ ಲೋಟವನ್ನಿಡುವಾಗ, ಊಟ ಬಡಿಸುವಾಗ, ಪಾತ್ರೆ ತೊಳೆಯುವಾಗ ತಮ್ಮದೇ ರೀತಿಯಲ್ಲಿ ಅಲುಗುವ, ಚಲಿಸುವ ತನ್ನ ದೇಹದ ವಿವಿಧ ಅಂಗಾಂಗಳನ್ನು ಅವನು ಕಣ್ಣಗಲಿಸಿ ನೋಡುವುದನ್ನು ಸಹಿಸಿಕೊಳ್ಳುವುದು ಅವಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ಅದನ್ನು ವಿರೋಧಿಸುವ, ಅದರಿಂದ ಮುಕ್ತಿ ಹೊಂದುವ ಮಾರ್ಗವೂ ಅವಳಿಗೆ ಕಂಡಿಲ್ಲ. ಇಡೀ ಪ್ರದೇಶದಲ್ಲಿ ಅವನದೇ ಕಾರುಬಾರು. ಅವನಿಂದ ತಪ್ಪಿಸಿಕೊಂಡು ಓಡಿಹೋಗಲು ಅವಳು ನಡೆಸಿದ ಒಂದೇ ಒಂದು ಪ್ರಯತ್ನದ ಪರಿಣಾಮ ಭೀಕರವಾಗಿತ್ತು. ಹೀಗಾಗಿ ಮತ್ತೊಂದು ಪ್ರಯತ್ನದ ಬಗ್ಗೆ ಯೋಚಿಸಲೂ ಅವಳು ಹೆದರುತ್ತಿದ್ದಳು.

ಅವನೀಗ ತನ್ನನ್ನು ಸಮೀಪಿಸಿದಾಗ ಅಸಾಂತಿ ಒಂದು ಕ್ಷಣ ಶಿಲೆಯಾಗಿ ನಿಂತುಬಿಟ್ಟಳು. ಅವನು ಅವಳನ್ನು ಮೊಣಕೈನಿಂದ ತಳ್ಳುತ್ತಾ ಕೋಣೆಯೊಳಗೆ ನಡೆಸಿದ…

ಮುಂದಿನ ಎರಡು ನಿಮಿಷಗಳಲ್ಲಿ ತನ್ನ ಬಾಯಿಂದ ಹೊರಟ ನರಳುವಿಕೆ ಹೊರಗಿದ್ದ ಖೈದಿಯ ಕಿವಿಗಳನ್ನು ತಲುಪದಿರಲಿ ಎಂದವಳು ಹತಾಷಳಾಗಿ ಹಂಬಲಿಸಿದಳು…

ಮೇಜರ್ ಜನರಲ್ ಫತನಸಾರ ಹೊರಟುಹೊದ ನಂತರ ಬಾಗಿಲು ಮುಚ್ಚಿ ಅಗುಳಿ ಹಾಕಿದ ಅಸಾಂತಿ ಕಂಬಕ್ಕಂಟಿ ನಿಂತಿದ್ದ ಖೈದಿಯತ್ತ ತಿರುಗಿದಳು. ಅವನ ತೆರೆದ ಬಲಗಣ್ಣು ಅವಳನ್ನೇ ದಿಟ್ಟಿಸುತ್ತಿತ್ತು. ಮುಚ್ಚಿಕೊಂಡಿದ್ದ ಎಡಗಣ್ಣಿನ ರೆಪ್ಪೆಗಳ ಮೇಲೆ ಫತನಸಾರನ ಶ್ಲೇಷ್ಮ ಒಂದು ಗೊಬ್ಬರದ ಹುಳುವಿನಂತೆ ಅಂಟಿಕೊಂಡಿತ್ತು.

“ನಿನ್ನ ಹೆಸರೇನು?” ತಮಿಳಿನಲ್ಲಿ ಕೇಳಿದಳು. ಅವನ ಮುಖದಲ್ಲಿ ನಸುನಗೆ ಕಾಣಿಸಿಕೊಂಡಿತು. ತನ್ನ ತಮಿಳು ಉಚ್ಚಾರಣೆ ಅವನಿಗೆ ತಮಾಷೆಯಾಗಿ ಕಂಡಿತೇನೋ ಎಂದು ಅಳುಕಿದಳು. ಹಾಗೇನೂ ಆದಂತಿರಲಿಲ್ಲ. ಅವನು ನಕ್ಕ ಕಾರಣವೇ ಬೇರೆ.

“ನನ್ನ ಹೆಸರು! ನನ್ನ ಬಾಯಿ ಬಿಡಿಸೋಕೆ ಆ ಮಿಲಿಟರಿ ಹಂದಿ ಕೈಲಿ ಆಗಲೇ ಇಲ್ಲ.” ಮಾತು ನಿಲ್ಲಿಸಿ `ಇನ್ನು ನಿನ್ನ ಕೈಲಿ ಆಗುತ್ತಾ?’ ಎನ್ನುವಂತೆ ನಕ್ಕ.

ಅವಳಿಗೆ ಅರ್ಥವಾಗಿಹೋಯಿತು. ಅವನ ಬಗ್ಗೆ ವಿವರಗಳನ್ನು ಅವನ ಬಾಯಿಂದಲೇ ಹೊರಡಿಸುವುದು ಯಾರಿಂದಲೂ ಆಗದ ಕೆಲಸ. ಎಲ್ ಟಿ ಟಿ ಇ ಹುಡುಗರು ಯಾತಕ್ಕೂ ಜಗ್ಗುವವರಲ್ಲ. ಇರಲಿ, ಇಷ್ಟಕ್ಕೂ ಅವನ ಹೆಸರು ನನಗೇಕೆ? ನನ್ನ ದೃಷ್ಟಿಯಲ್ಲಿ ಅವನೊಬ್ಬ ಖೈದಿ. ಅಷ್ಟು ಸಾಕು.

ಒಳಕೋಣೆಯತ್ತ ತಿರುಗಿದಳು. ಎರಡು ಹೆಜ್ಜೆ ನಡೆದವಳು ಹಾಗೇ ನಿಂತಳು. ಮುಂಬಾಗಿಲ ಚಿಲಕವನ್ನು ಸರಿಯಾಗಿ ಹಾಕಿದ್ದೇನೆಯೇ ಎಂದು ಒಮ್ಮೆ ನೋಡಿ ಖಾತ್ರಿ ಪಡಿಸಿಕೊಂಡಳು. ನೋಟ ಮತ್ತೆ ಖೈದಿಯತ್ತ ತಿರುಗಿತು.

ಅವನು ಸೋತಂತೆ ಕತ್ತನ್ನು ಒಂದುಕಡೆ ವಾಲಿಸಿದ್ದ. ಗಂಟಲಿನಿಂದ ಗೊರಗೊರ ಸದ್ದು ಹೊರಟಿತ್ತು.

ಪಾಪ ಇನ್ನೂ ಇಪ್ಪತ್ತರ ಅಸುಪಾಸಿನ ಹುಡುಗ. ಫತನಸಾರಾನ ಕೈಯಲ್ಲಿ ಸಾಕಷ್ಟು ಯಾತನೆ ಅನುಭವಿಸಿರಬೇಕು. ದೈಹಿಕವಾಗಿ ಸೋತುಹೋಗಿದ್ದಾನೆ. ಮರುಕವೆನಿಸಿತು.

“ನಿನಗೆ ನೀರು ಬೇಕೆ?” ನಿಂತಲ್ಲಿಂದಲೇ ಕೇಳಿದಳು.

ಅವನು ನಿಧಾನವಾಗಿ ಅವಳತ್ತ ತಿರುಗಿದ. ತೆರೆದಿದ್ದ ಬಲಗಣ್ಣಿನಲ್ಲಿ ಅಚ್ಚರಿ. ಸಿಂಹಳೀ ಹೆಂಗಸೊಬ್ಬಳು ತಮಿಳು ಗೆರಿಲ್ಲಾಗೆ ಕುಡಿಯಲು ನೀರು ಬೇಕೆ ಎಂದು ಕೇಳುವ ಸನ್ನಿವೇಶ ಅವನ ಕಲ್ಪನೆಗೆ ವ್ಯತಿರಿಕ್ತವಾಗಿ ಕಂಡಿರಬೇಕು. ಅದರಲ್ಲಿ ಆಶ್ಚರ್ಯವಿಲ್ಲ.

“ನೀರು ಬೇಕೇ?” ಮತ್ತೊಮ್ಮೆ ಕೇಳಿದಳು. ಅವನಿಗೆ ಈಗ ನಂಬಿಕೆಯಾದಂತೆ ಕಂಡಿತು. “ಹ್ಞೂ” ಎಂಬ ಗೊರಗು ದನಿ ಗಂಟಲಿನಿಂದ ಹೊರಟಿತು. ಅಸಾಂತಿ ಅಡಿಗೆ ಕೋಣೆಗೆ ನಡೆದು ಲೋಟದಲ್ಲಿ ನೀರು ತುಂಬಿಸಿ ತಂದಳು. ಅವನು ತಾನಾಗಿ ಕುಡಿಯುವ ಸ್ಥಿತಿಯಲ್ಲಿರಲಿಲ್ಲ.

ಅಸಾಂತಿ ಲೋಟವನ್ನು ಅವನ ಬಾಯಿಗೆ ಹಿಡಿದಳು. ಅವನು ಅತೀ ನಿಧಾನವಾಗಿ ಒಂದೊಂದು ಗುಟುಕಾಗಿ ನೀರು ಕುಡಿದ. “ಗೊಳಕ್ ಗೊಳಕ್” ಸದ್ದಿನೊಡನೆ ನೀರು ಅವನ ಗಂಟಲಲ್ಲಿ ಇಳಿಯುವುದನ್ನೇ ನೋಡಿದ ಅವಳಿಗೆ ಏಕಾಏಕಿ ಫತನಸಾರಾನ ನೆನಪಾಯಿತು.

`ತಮಿಳು ಗೆರಿಲ್ಲಾಗೆ ಕೈಯಾರೆ ನೀರು ಕುಡಿಸುತ್ತಿರುವ ನನ್ನನ್ನು ಅವನೀಗ ನೋಡಿದರೆ ಹೇಗೆ?’

ಆ ಯೋಚನೆ ಬಂದದ್ದೇ ತಡ ಅವಳ ಮೈಯಿಡೀ ನವಿರಾಗಿ ಕಂಪಿಸಿತು. ಬೆನ್ನಹುರಿಯಲ್ಲಿ ಸಳಸಳನೆ ಹರಿದಾಡಿದ ಭೀತಿ. ಈ ದೃಶ್ಯವನ್ನು ಫತನಸಾರ ನೋಡಿದರೆ ಖೈದಿಗಾಗಿರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಶಿಕ್ಷೆ ತನಗೆ ಕಟ್ಟಿಟ್ಟ ಬುತ್ತಿ ಎಂದವಳಿಗೆ ಚೆನ್ನಾಗಿ ಗೊತ್ತು.
ಅವಳ ಕೈನ ಕಂಪನಕ್ಕೆ ಲೋಟ ಅಲುಗಿ ನೀರು ಖೈದಿಯ ಗಲ್ಲ, ಎದೆಯ ಮೇಲೆ ಚೆಲ್ಲಿತು. ಅವನು ಬಲಗಣ್ಣನ್ನು ಅಗಲವಾಗಿ ತೆರೆದು ಅವಳನ್ನೇ ನೋಡಿದ. ಆ ನೋಟದಲ್ಲಿ ಅಚ್ಚರಿ.

ತನ್ನ ಎದೆಯಲ್ಲುದಿಸಿದ ಭಯದ ಸುಳಿವು ಅವನಿಗೆಲ್ಲಿ ತಿಳಿದುಹೋಯಿತೋ ಎಂದವಳು ಅಳುಕಿದಳು. ಅವನ ಮುಖವನ್ನೇ ಅನುಮಾನದಿಂದ ನೋಡಿದಳು.

ಖೈದಿಯ ಮುಖವನ್ನೇ ನೇರವಾಗಿ ದಿಟ್ಟಿಸಿದ ಅವಳಿಗೆ ಅವನ ಹುಬ್ಬುಗಳು ಸತ್ತುಹೋದ ತನ್ನ ತಮ್ಮನ ಹುಬ್ಬುಗಳಂತೇ ದಟ್ಟವಾಗಿವೆಯಲ್ಲಾ ಅನಿಸಿತು. ಮತ್ತಷ್ಟು ಆಸಕ್ತಿಯಿಂದ ನೋಡಿದಳು. ಅವನ ಗುಂಡು ಮೂಗು, ಅಗಲ ಕಿವಿಗಳು ತಮ್ಮ ವಿಜೆ ವೀರಕೂನ್‌ನಂತೇ ಇವೆಯಲ್ಲ! ಅವಳಿಗೆ ಅಚ್ಚರಿಯಾಯಿತು.

ಅವಳ ಬೆರಗಿನ ನೋಟಕ್ಕೆ ಅವನು ಸಂಕೋಚಗೊಂಡ. ಲೋಟಕ್ಕೆ ಅಂಟಿದ್ದ ತುಟಿಗಳು ಬಿಗಿದುಕೊಂಡವು. ಅವಳಿಗೆ ಅದ್ಯಾವುದರ ಪರಿವೆಯೂ ಇರಲಿಲ್ಲ. ಒಬ್ಬ ತಮಿಳು ಗೆರಿಲ್ಲಾನ ಮುಖದಲ್ಲಿ ತನ್ನ ಸೈನಿಕ ತಮ್ಮ ವಿಜೆಯನ್ನು ಕಾಣಬಹುದೆಂದು ಅವಳು ಕನಸುಮನಸಿನಲ್ಲೂ ನೆನಸಿರಲಿಲ್ಲ. ಅವಳಿಗೆ ಎದೆಯಲ್ಲೇನೋ ಭಾರವಾಗಿ ಒತ್ತಿದಂತಹ ಅನುಭವ. ಗಂಟಲುಬ್ಬಿ ಬಂದಂತೆನಿಸಿ ಕೊರಳು ಕಟ್ಟಿತು. ಕಣ್ಣುಗಳಲ್ಲಿ ಎರಡು ಹನಿ ಕಣ್ಣೀರು ಫಳಕ್ಕನೆ ಚಿಮ್ಮಿತು.

ಅವನಿಗದು ನಂಬಲಾಗದ ನೋಟ. ವಿಷಯವೇನೆಂದು ಕೇಳಲಾಗದಷ್ಟು ಅಚ್ಚರಿಯ ಛಳಕು. ಆ ಗಳಿಗೆಯಲ್ಲಿ ಅವಳು ಕ್ರೂರಿ ಮಿಲಿಟರಿ ಅಧಿಕಾರಿಯ ಸಹಾಯಕಿಯಾಗಿರಲಿಲ್ಲ. ಬದಲಾಗಿ ಒಬ್ಬಳು ಮೃದುಹೃದಯದ ಸಹೋದರಿಯಾಗಿ ಬದಲಾಗಿಬಿಟ್ಟಿದ್ದಾಳೆ ಎಂದು ಅವನೇನು ಬಲ್ಲ?

ಅಸಾಂತಿ ಎರಡು ಹೆಜ್ಜೆ ಹಿಂದೆ ಸರಿದಳು. ಮಂಜುಗಟ್ಟಿದ್ದ ಕಣ್ಣುಗಳನ್ನು ಸೆರಗಿನಿಂದ ಒರೆಸಿಕೊಂಡಳು. ಮತ್ತೊಮ್ಮೆ ಖೈದಿಯತ್ತ ನೋಡಿದಳು. ಅವನ ತೆರೆದಿದ್ದ ಬಲಗಣ್ಣು ಅವಳನ್ನೇ ದಿಟ್ಟಿಸುತ್ತಿತ್ತು. ಆ ಕಣ್ಣಿನಲ್ಲಿ ನೂರಾರು ಪ್ರಶ್ನೆಗಳು.

ಅವಳ ನೋಟ ಅವನ ಮುಖದಿಂದ ಕೆಳಗಿಳಿಯಿತು. ಮೆಲ್ಲಗೆ… ನಿಧಾನವಾಗಿ ಇಂಚಿಂಚೇ ಕೆಳಗಿಳಿದು ಅವನ ಪಾದಗಳನ್ನು ತಲುಪಿತು. ಅಲ್ಲಲ್ಲಿ ಹರಿದಿದ್ದ ಎಲ್ ಟಿ ಟಿ ಇ ಹುಲಿಯ ಪಟ್ಟೆಪಟ್ಟೆ ಸಮವಸ್ತ್ರದ ಒಳಗಿದ್ದ ದೇಹದ ಅವಸ್ಥೆ ಹೇಗಿರಬಹುದೆಂಬ ಕಲ್ಪನೆ ಮಾಡಿಕೊಳ್ಳಲು ಅವಳು ಶ್ರಮಪಡಬೇಕಾಗಿರಲಿಲ್ಲ. ಉಡುಪಿನಲ್ಲಿ ಅಲ್ಲಲ್ಲಿ ಧಾರಾಳವಾಗಿ ಅಂಟಿದ್ದ ರಕ್ತ ಎಲ್ಲ ಕಥೆಯನ್ನೂ ಹೇಳಿಬಿಟ್ಟಿತು. ಅಸಾಂತಿ ತನ್ನ ಸತ್ತ ತಮ್ಮನನ್ನು ಆ ಸ್ಥಿತಿಯಲ್ಲಿ ಕಲ್ಪಿಸಿಕೊಂಡಳು. ಮನದಲ್ಲಿ ಕೊಲಾಹಲ…

ಹಗ್ಗದ ಮೇಲಿದ್ದ ತುಂಡು ಟವಲನ್ನು ಸರ್ರನೆ ಸೆಳೆದುಕೊಂಡಳು. ಅದನ್ನು ನೀರಿನಲ್ಲಿ ಒದ್ದೆ ಮಾಡಿ ಅವನತ್ತ ನಡೆದಳು. ಮೃದುವಾಗಿ ಅವನ ಮುಖದ ಮೇಲೆ ಟವಲ್ ಒತ್ತಿದಳು. ಅವನ ಎಡಗಣ್ಣಿನ ಮೇಲೆ ಅಂಟಿಕೊಂಡಿದ್ದ ಫತನಸಾರಾನ ಶ್ಲೇಷ್ಮವನ್ನು ಒರೆಸಿ ತೆಗೆದಳು. ಖೈದಿ ಮೌನವಾಗಿ ನಿಂತಿದ್ದ.

“ನೀನು ಹಸಿದಿದ್ದೀಯ. ನಿನಗೆ ಊಟ ಮಾಡಿಸಲೇ ಮಗೂ?” ಅಕ್ಕರೆಯಿಂದ ಕೇಳಿದಳು. ಅವನು ಮತ್ತೊಮ್ಮೆ ಅಚ್ಚರಿಯ ಪ್ರಪಾತಕ್ಕೆ ಉರುಳಿದುದನ್ನು ಅವನ ಕಣ್ಣುಗಳು ಸ್ಪಷ್ಟವಾಗಿ ಸೂಚಿಸಿದವು. ಅವುಗಳತ್ತ ಗಮನವೀಯದೇ ಅವಳು ಅಡಿಗೆ ಮನೆಯತ್ತ ನಡೆದಳು. ತಟ್ಟೆಯಲ್ಲಿ ಅನ್ನ, ಬೀಟ್ ರೂಟಿನ ಸಾರನ್ನು ಹಾಕಿ ತಂದು ತುತ್ತು ಮಾಡಿ ಅವನ ಬಾಯಿಗಿಟ್ಟಳು. ಖೈದಿ ಅನ್ನವನ್ನು ಆತುರಾತುರವಾಗಿ ಅಗಿದ. ಮತ್ತೊಂದು ತುತ್ತು ಅವನ ಬಾಯಿ ಸೇರಿತು. ಅವಳಿಗೇನೋ ವರ್ಣಿಸಲಾಗದ ತೃಪ್ತಿ.

“ನೀನು ಇವನ ಕೈಗೆ ಹೇಗೆ ಸಿಕ್ಕಿಬಿದ್ದೆ?” ತುತ್ತುಗಳ ಮಧ್ಯೆ ಕೇಳಿದಳು.

“ನನ್ನ ಸಯನೈಡ್ ಕ್ಯಾಪ್ಸೂಲ್ ಇದ್ದ ಸರ ಗಿಡದ ಟೊಂಗೆಗೆ ಸಿಕ್ಕಿ ಕಿತ್ತು ಬಿದ್ದುಹೋಯಿತು. ಇಲ್ಲದಿದ್ದರೆ ಇವನ ಕೈಗೆ ನಾನೆಲ್ಲಿ ಜೀವಂತವಾಗಿ ಸಿಗುತ್ತಿದ್ದೆ?” ಅವನ ಉತ್ತರ ಕತ್ತಿಯ ಅಲುಗಿನಂತಿತ್ತು. ಅಸಾಂತಿ ನಿಟ್ಟುಸಿರಿಟ್ಟಳು. ಅವರಿಬ್ಬರ ನಡುವೆ ಮತ್ತೆ ಮೌನ. ಅವಳು ಅನ್ನವನ್ನು ಕಲೆಸುತ್ತಿದ್ದ ಹಾಗೂ ಅವನು ಅದನ್ನು ಆತುರಾತುರವಾಗಿ ಅಗಿಯುತ್ತಿದ್ದ ಶಬ್ಧಗಳ ಹೊರತಾಗಿ ಯಾವ ಶಬ್ಧವೂ ಇಲ್ಲ.

ಅಸಾಂತಿಯ ಮನದಲ್ಲಿ ಚಿತ್ರಗಳು ಮೂಡಿದವು.

…ನಾಳೆ ಬೆಳಿಗ್ಗೆ ಫತನಸಾರಾ ಇವನನ್ನು ಕೊಲಂಬೋಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಇವನಿಗೆ ಕಾದಿರುವುದು ಎಂತಹ ಶಿಕ್ಷೆ? ದಂಬಗಲ್ಲದ ಮಿಲಿಟರಿ ಬ್ಯಾರಕ್ಕಿನ ಧ್ವಂಸದಿಂದ ಹುಚ್ಚೆದ್ದುಹೋಗಿರುವ ಮಿಲಿಟರಿ ಮಂದಿ ಇವನನ್ನು ಅದೆಷ್ಟು ಚಿತ್ರಹಿಂಸೆಗೆ ಒಳಪಡಿಸಬಹುದು? ನನಗಾದರೋ ಶವಸಂಸ್ಕಾರಕ್ಕೆಂದು ವಿಜೆವೀರನ ದೇಹದ ತುಂಡುಗಳಾದರೂ ಸಿಕ್ಕಿದವು. ಇವನ ಜನಕ್ಕೆ ಅವೂ ಸಿಗುವುದಿಲ್ಲ. ಇವನ ದೇಹ ಛಿದ್ರಛಿದ್ರವಾಗುವುದು ಬಯೋನೆಟ್‌ಗಳಿಂದ, ಹರಿತ ಚಾಕುಗಳ ಮೊನೆಗಳಿಂದ. ಆನಂತರ ಶವಸಂಸ್ಕಾರ…? ಅದು ನಿಶ್ಚಯವಾಗಿಯೂ ನಾಯಿ ನರಿ ಹದ್ದು ಕಾಗೆಗಳಿಂದ. ದೇವರೇ ಇವನೇಕೆ ತನ್ನ ಸಯನೈಡ್ ಕ್ಯಾಪ್ಸೂಲನ್ನು ಕಳೆದುಕೊಂಡ?

`ಇವನು ಓಡಿಹೋಗಲು ನಾನೇಕೆ ಸಹಾಯ ಮಾಡಬಾರದು?’

ಮನದಲ್ಲಿ ಮಿಂಚಿನಂತೆ ಮೂಡಿದ ಪ್ರಶ್ನೆಗೆ ತಾನೇ ತತ್ತರಿಸಿದಳು. `ಓಹ್! ನನಗೇಕೆ ಇಂಥಾ ಯೋಚನೆ! ಸೆರೆಸಿಕ್ಕ ಎಲ್‍‍ಟಿಟಿಇ ಗೆರಿಲ್ಲಾಗೆ ಓಡಿಹೋಗಲು ಅವಕಾಶ ಮಾಡಿಕೊಟ್ಟರೆ ನನಗೆ ಕಾದಿರುವ ಗತಿ? ಫತನಸಾರಾನ ರೋಷಕ್ಕೆ ಎಣೆಯೆಲ್ಲಿ? ಆಗ ಬಯೋನೆಟ್‌ಗಳಿಗೆ ಚಾಕುಗಳ ಹರಿತ ಮೊನೆಗೆ ತುತ್ತಾಗುವುದು ನನ್ನ ದೇಹ. ಈ ಖೈದಿ ಸುರಕ್ಷಿತವಾಗಿ ತನ್ನ ಜನ ಸೇರುತ್ತಿದ್ದಂತೇ ನನ್ನ ದೇಹ ಈ ಕಾಡಿನ ನಾಯಿ ನರಿ ಹದ್ದುಕಾಗೆಗಳಿಗೆ ಆಹಾರವಾಗುತ್ತದೆ!’ ಅವಳ ಮೈ ಛಿಲ್ಲನೆ ಬೆವರಿತು. ಮರುಕ್ಷಣ ಮನದಲ್ಲಿ ಮತ್ತೊಂದು ಯೋಚನೆ.

`ಇವನ ಜತೆ ನಾನೂ ಓಡಿಹೋದರೆ ಹೇಗೆ?’

ಅಬ್ಬ ಎಂಥ ಯೋಚನೆ! ಬೆಚ್ಚಿದಳು ಅಸಾಂತಿ. ಎದೆ ಹಾರಿಹೋಗುವಂತೆ ಹೊಡೆದುಕೊಂಡಿತು. ಮನಸ್ಸನ್ನು ನಿಧಾನವಾಗಿ ತಹಬಂದಿಗೆ ತಂದುಕೊಂಡಳು. ಆಲೋಚನೆ ಇನ್ನಷ್ಟು ಸ್ಪಷ್ಟವಾಗಿ ಮೇಲೆದ್ದುಬಂತು.

`ಎರಕಾಂಡ ಹಳ್ಳಿಯ ಹೊರತಾಗಿ ಸುತ್ತಮುತ್ತಲ ಪ್ರದೇಶ ನನಗೆ ಅಪರಿಚಿತ. ಅಲ್ಲಿ ಒಂಟಿಯಾಗಿ ಕಾಲಿಟ್ಟ ಅರೆಗಳಿಗೆಯಲ್ಲಿ ಫತನಸಾರಾನ ಬಂಟನೊಬ್ಬನ ಕೈಗೆ ನಾನು ಸಿಕ್ಕಿಬೀಳುವುದು ಖಂಡಿತ. ಕಳೆದ ಬಾರಿ ಆದದ್ದೂ ಅದೇ. ಆದರೆ ಈ ಗೆರಿಲ್ಲಾಗೆ ಇಡೀ ಪ್ರದೇಶದ ಅಂಗುಲ ಅಂಗುಲವೂ ಗೊತ್ತಿರುತ್ತದೆ. ಸೈನಿಕರ ಕಣ್ಣುತಪ್ಪಿಸಿ ಇವನು ನನ್ನನ್ನು ದೂರಕ್ಕೆ ಕರೆದೊಯ್ಯಬಲ್ಲ. ಹೇಗಾದರೂ ಕ್ಯಾಂಡಿಗೆ ತಲುಪಿಬಿಟ್ಟರೆ ಸಾಕು. ಯಾವುದಾದರೂ ಟೀ ತೋಟದಲ್ಲಿ ಕೂಲಿ ಕೆಲಸ ಸಿಕ್ಕಿಬಿಟ್ಟರೆ…

ತಟ್ಟೆಯಲ್ಲಿದ್ದ ಕೊನೆಯ ತುತ್ತು ಖೈದಿಯ ಬಾಯಿ ಸೇರುವ ಹೊತ್ತಿಗೆ ಅವಳು ದೃಢ ನಿರ್ಧಾರ ಕೈಗೊಂಡಳು. ಕಟ್ಟುಗಳಿಂದ ಮುಚ್ಚಿಹೋಗಿದ್ದ ಅವನ ಮುಂಗೈಯನ್ನು ಹಿಡಿಯುವ ಪ್ರಯತ್ನ ಮಾಡುತ್ತಾ ಬಿಡಿಬಿಡಿ ಶಬ್ಧಗಳಲ್ಲಿ ಹೇಳಿದಳು: “ನೋಡು, ನಾನೀಗ ನಿನ್ನ ಕಟ್ಟುಗಳನ್ನು ಬಿಚ್ಚುತ್ತೇನೆ. ಆ ಮೇಜರ್ ಜನರಲ್ ಬಹುಶಃ ಇನ್ನು ಒಂದು ಗಂಟೆಯವರೆಗೆ ಇತ್ತ ಬರಲಾರ. ಅಷ್ಟರ ಒಳಗೆ ನಾವಿಬ್ಬರೂ ಇಲ್ಲಿಂದ ಓಡಿಹೋಗೋಣ. ಹೇಗಾದರೂ ಮಾಡಿ ನನ್ನನ್ನು ಕ್ಯಾಂಡಿಯವರೆಗೆ ತಲುಪಿಸಿಬಿಡು. ಆಮೇಲೆ ನಿನ್ನ ದಾರಿ ಹಿಡಿದು ನೀನು ಹೊರಟುಹೋಗಬಹುದು.” ಹೇಳುತ್ತಾ ಅವನ ಉತ್ತರಕ್ಕೂ ಕಾಯದೇ ಅಡಿಗೆಮನೆಗೆ ಓಡಿಹೋಗಿ ಚಾಕುವೊಂದನ್ನು ತಂದು ಅವನನ್ನು ಬಂಧಿಸಿದ್ದ ಹುರಿಗಳನ್ನು ಸರಸರನೆ ಕತ್ತರಿಸತೊಡಗಿದಳು. ಖೈದಿ ದಂಗಾಗಿ ಹೋಗಿದ್ದ.

ಅವಳಿನ್ನೂ ಕಟ್ಟುಗಳನ್ನು ಪೂರ್ತಿಯಾಗಿ ಕತ್ತರಿಸಿರಲಿಲ್ಲ. ಹೊರಗೆ ಜೀಪ್ ಬಂದ ಶಬ್ಧ ಕಿವಿಗಳನ್ನು ಇರಿಯಿತು. ಮುಂದಿನ ಕ್ಷಣಗಳಲ್ಲಿ ಬಾಗಿಲಾಚೆ ಬೂಟುಗಾಲುಗಳ “ಜ಼ರಕ್ ಜ಼ರಕ್” ಸೀಳು ಸದ್ದು!

ಮೇಜರ್ ಜನರಲ್ ಫತನಸಾರಾ ಹಿಂತಿರುಗಿದ್ದ!

ಅಸಾಂತಿ ಬೆವತುಹೊದಳು. ಕೈಗಳು ಸೋತಂತೆ ಕೆಲಸ ನಿಲ್ಲಿಸಿದವು.

ಇನ್ನು ಒಂದೆರಡು ಕ್ಷಣಗಳಲ್ಲಿ ಕಟ್ಟುಗಳನ್ನು ಮೊದಲಿನಂತೇ ಕಟ್ಟಿ ಫತನಸಾರಾನ ಮುಂದೆ ತಾನು ಅಮಾಯಕಳಂತೆ ನಿಲ್ಲುವುದು ಸಾಧ್ಯವಿಲ್ಲ. ಇದರರ್ಥ… ಈ ಬದುಕು ಇಲ್ಲಿಗೆ ಮುಗಿದಂತೆ!

ಇಲ್ಲ ಹಾಗಾಗಕೂಡದು.

ಕಟ್ಟುಗಳನ್ನು ಮತ್ತೆ ಕಟ್ಟುವುದಕ್ಕಿಂತ ಉಳಿದಿರುವ ಕಟ್ಟುಗಳನ್ನು ಕತ್ತರಿಸಿ ಹಾಕುವುದು ಸುಲಭ! ಆಮೇಲೆ ಹಿಂಬಾಗಿಲಿನಿಂದ ಓಡಿಹೋಗಬಹುದು. ಸ್ವಾತಂತ್ರಕ್ಕೆ ಒಂದು ಕೊನೆಯ ಪ್ರಯತ್ನ!

ಬಾಗಿಲ ಮೇಲೆ ಬೆರಳುಗಳು ಆಡುತ್ತಿದ್ದಂತೇ ಅಸಾಂತಿಯ ಕೈಗಳು ಹುಚ್ಚುವೇಗದಲ್ಲಿ ಚಲಿಸತೊಡಗಿದವು. ಎರಡು ಕ್ಷಣದಲ್ಲಿ ಖೈದಿ ಬಂಧಮುಕ್ತನಾಗಿದ್ದ. ಕೈಲಿದ್ದ ಚಾಕುವನ್ನು ಅಲ್ಲೇ ಎಸೆದು ಖೈದಿಗೆ ಸನ್ನೆ ಮಾಡಿ ಹಿಂಬಾಗಿಲತ್ತ ಓಡಿದಳು.

ಬಾಗಿಲ ಮೇಲಿನ ಬಡಿತ ಜೋರಾಯಿತು!

ಮುಂದೆ ಒಂದು ಹೆಜ್ಜೆಯಿಟ್ಟ ಖೈದಿ ತೂರಾಡುತ್ತಾ ಕೆಳಗೆ ಕುಸಿದ. ತಲೆಯೆತ್ತಿ ಅವಳತ್ತ ಹತಾಷೆಯ ನೋಟ ಬೀರಿದ. ಅಸಾಂತಿ ದಿಗ್ಭ್ರಮೆಗೊಳಗಾದಳು.

“ಅಸಾಂತೀ, ಬೇಗ ಬಾಗಿಲು ತೆರೆಯಬಾರದೇನು?” ಫತನಸಾರಾನ ಗಡಸು ದನಿ ಸಿಡಿಲಿನಂತೆ ಬಂದು ಬಡಿಯಿತು. ಹಿಂದೆಯೇ ಬಾಗಿಲ ಮೇಲೆ ಅಂಗೈಯಿಂದ ಗುದ್ದಿದ ಶಬ್ಧ.

ಅಸಾಂತಿ ಹಿಂದಕ್ಕೆ ಓಡಿಬಂದಳು. ಖೈದಿಯ ಕಂಕುಳುಗಳಿಗೆ ಕೈ ಹಾಕಿ ಅವನನ್ನು ಮೇಲೆತ್ತಿದಳು. “ದಯವಿಟ್ಟು… ದಯವಿಟ್ಟು ನಡೆಯಲು ಪ್ರಯತ್ನಿಸು.” ಅರ್ತಳಾಗಿ ಬೇಡಿದಳು. ಅವನನ್ನು ತಬ್ಬಿ ಹಿಡಿದು ನಾಲ್ಕು ಹೆಜ್ಜೆ ನಡೆಸಿದಳು. ಸೋತು ನಿಂತುಬಿಟ್ಟಳು.

ಫತನಸಾರಾ ಬಾಗಿಲಿಗೆ ಒದ್ದ. ಹಿಂದೆಯೇ ಅವಾಚ್ಯ ಬೈಗಳು.

ಖೈದಿ ಅವಳಿಂದ ಬಿಡಿಸಿಕೊಂಡು ನೆಟ್ಟಗೆ ನಿಂತ. ಎರಡೂ ಕೈಗಳನ್ನೂ ಒಮ್ಮೆ ಮೇಲೆತ್ತಿ ಕೆಳಗಿಳಿಸಿದ. ಕಾಲುಗಳನ್ನು ಎಳೆದುಹಾಕುತ್ತಾ, ಅತ್ತಿತ್ತ ಜೋಲಿ ಹೊಡೆಯುತ್ತಾ ಹಿಂಬಾಗಿಲತ್ತ ಸಾಗಿದ.

ಫತನಸಾರಾನ ಮತ್ತೊಂದು ಒದೆತಕ್ಕೆ ಮುಂಬಾಗಿಲು ಕಟಕಟ ಸದ್ದು ಮಾಡಿತು. “ಅಸಾಂತೀ, ನೀನೇನು ಸತ್ತುಹೋಗಿದ್ದೀಯಾ ಅಥವಾ ಆ ಎಲ್‌ಟಿಟಿಇ ನಾಯಿಯನ್ನ ತಬ್ಬಿ ಮಲಗಿದ್ದೀಯಾ?” ಫತನಸಾರಾ ಅರಚಿದ.

ಅಸಾಂತಿಗೆ ಅದರತ್ತ ಗಮನವೇ ಇರಲಿಲ್ಲ. ಓಡಿಹೋಗಿ ಸದ್ದಾಗದಂತೆ ಹಿಂಬಾಗಿಲು ತೆರೆದಳು. ಹತ್ತಿರ ಬಂದ ಖೈದಿಯ ತೋಳು ಹಿಡಿದು ಮೆಟ್ಟಲಿಳಿಸಿದಳು. ಮತ್ತೆ ಸದ್ದಾಗದಂತೆ ಬಾಗಿಲು ಮುಚ್ಚಿದಳು. ಕುರುಚಲು ಗಿಡಗಳ ನಡುವೆ ಆತುರಾತುರವಾಗಿ ಕಾಲು ಹರಿಸಿದಳು. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಖೈದಿ ಹಿಂದಿನಿಂದ ವೇಗವಾಗಿ ಬಂದು ಅವಳನ್ನು ದಾಟಿ ಮುಂದೆ ಓಡಿದ. ಅಸಾಂತಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಮರುಕ್ಷಣ ಮನದಲ್ಲಿ ಉಕ್ಕಿಧ ಸಮಾಧಾನ. ಧಾಪುಗಾಲಿಟ್ಟು ಅವನನ್ನು ಹಿಂಬಾಲಿಸಿದಳು. ಮನೆಗೆ ಇಪ್ಪತ್ತು ಅಡಿ ದೂರದಲ್ಲಿದ್ದ ತಗ್ಗೊಂದಕ್ಕೆ ಇಳಿಯುತ್ತಿದ್ದಂತೇ ಮುಂಬಾಗಿಲ ಮೇಲೆ ಬಿದ್ದ ಒಂದು ಭಾರೀ ಒದೆತ ರಾತ್ರಿಯ ನೀರವತೆಯನ್ನು ಭಂಗಿಸಿತು. ಹಿಂದೆಯೇ “ಲಟಲಟ” ಶಬ್ಧ. ಬಾಗಿಲು ಮುರಿದುಬಿದ್ದಿರಬೇಕು.

ಖೈದಿ ತಗ್ಗಿನಲ್ಲಿಳಿದು ಬಂಡೆಯನ್ನು ಬಳಸಿ ಓಡಿ ಕಾಡು ಸೇರಿದ. ಅಸಾಂತಿ ಉಸಿರುಗಟ್ಟಿ ಓಡಿದಳು. ದಟ್ಟಕಾಡಿನ ಕಪ್ಪು ಕತ್ತಲಲ್ಲಿ ಎತ್ತಲೋ ಕಾಲು ಹಾಕಿದವಳ ತೋಳು ಹಿಡಿದು ಬೇರೊಂದು ಕಡೆ ನಡೆಸಿದ ಖೈದಿ. ಅಸಾಂತಿ ಏದುಸಿರು ಹಾಕುತ್ತಾ ಅವನ ಹಿಂದೆ ಗಿಡಮರಗಳ ನಡುವೆ ಓಡಿದಳು…

ಕಾಲ ವೇಗವಾಗಿ ಸರಿದೋಡಿತು…

ಓಡುತ್ತಿದ್ದ ಖೈದಿ ಗಕ್ಕನೆ ನಿಂತ. ಅವಳೂ ಬೆಚ್ಚಿ ತೂರಾಡುತ್ತಾ ನಿಂತಳು. “ಏನಾಯ್ತು?” ಪಿಸುಗಿದಳು. ಅವನು ಅವಳ ಬಾಯಿ ಮೇಲೆ ಕೈಒತ್ತಿ ಸುಮ್ಮನಿರಲು ಸೂಚಿಸಿದ. ಹತ್ತಿರದಲ್ಲೇ ಬೂಟುಗಾಲುಗಳ ಶಬ್ಧಗಳು ಕೇಳಿಬಂದವು! “ಇತ್ತಕಡೆಯೇ ಓಡಿದ ಹಾಗೆ ಕಾಣಿಸ್ತು.” ಮನುಷ್ಯನ ಧ್ವನಿ! “ಸರಿ ಸರಿ. ಸರಿಯಾಗಿ ಹುಡುಕು.” ಅದಕ್ಕೆ ಬಂದ ಸ್ಪಷ್ಟ ಪ್ರತಿಕ್ರಿಯೆ!

`ಓಹ್ ದೇವರೇ! ಸೈನಿಕರು ನಮ್ಮ ಬೆನ್ನು ಹತ್ತಿದ್ದಾರೆ!’ ಅಸಾಂತಿ ವಿಹ್ವಲಳಾದಳು. ಅವಳ ಬಾಯಿಯ ಮೇಲೆ ಕೈ ಇಟ್ಟಂತೇ ಖೈದಿ ಅವಳನ್ನು ಎಳೆದುಕೊಂಡು ಪೊದೆಯೊಂದರ ಒಳಗೆ ನುಗ್ಗಿದ. ಮರುಕ್ಷಣ ಹಲವಾರು ಬೂಟುಗಾಲುಗಳು ಹತ್ತಿರದಲ್ಲೇ ಹರಿದಾಡಿದವು. ಅಸಾಂತಿ ಉಸಿರು ಬಿಗಿಹಿಡಿದಳು.

ನಿಮಿಷಗಳ ನಂತರ ಶಬ್ಧಗಳು ದೂರವಾದವು. ಏಳೆಂಟು ನಿಮಿಷಗಳವರೆಗೆ ಹಾಗೆಯೇ ಕುಳಿತಿದ್ದ ಖೈದಿ ನೆಮ್ಮದಿಯ ಉಸಿರು ಹಾಕಿದ. “ನೇರವಾಗಿ ಈ ಕಡೆ ಹೋದರೆ ಗಾಲ ಓಯೋ ನದಿ ಸಿಗುತ್ತೆ. ಅದು ದಾಟಿದರೆ ನಾವು ಸುರಕ್ಷಿತ.” ಅವಳ ಕಿವಿಯಲ್ಲಿ ಪಿಸುಗಿ ಎದ್ದುನಿಂತ.

ಅವನು ಪೊದೆಯಿಂದ ಹೊರಬಂದು ಎರಡು ಹೆಜ್ಜೆ ಇಟ್ಟಿದ್ದನಷ್ಟೇ. “ನಿಲ್ಲು” ಎಂಬ ಕರ್ಕಶ ಸದ್ದು ಹತ್ತಿರದಲ್ಲೇ ಕೇಳಿಬಂತು. ಮರುಕ್ಷಣ ಖೈದಿ ಪೊದೆಗಳ ನಡುವೆ ಜಿಗಿಜಿಗಿಯುತ್ತಾ ಕತ್ತಲಲ್ಲಿ ಕರಗಿಹೋದ. ಪೊದೆಯಿಂದ ಹೊರಬರುತ್ತಿದ್ದ ಅಸಾಂತಿಯ ಮುಂದೆಯೇ ಇಬ್ಬರು ಸೈನಿಕರು ಧಡಧಡನೆ ಓಡಿದರು. ಬೆಚ್ಚಿ ಹಿಂದೆ ಸರಿದ ಅವಳ ಕಿವಿಗೆ ಬಿದ್ದದ್ದು ಒಂದರ ಹಿಂದೊಂದರಂತೆ ಹಾರಿದ ಗುಂಡುಗಳ ಶಬ್ಧ!

ಅವಳು ಮತ್ತಷ್ಟು ಮರೆಗೆ ಸರಿದಳು. ಹಾರುತ್ತಿದ್ದ ಎದೆಯನ್ನು ಒತ್ತಿಹಿಡಿದು ಮುದುರಿ ನಿಂತಳು. ಈಗವಳು ಒಂಟಿ! ಮುಂದೇನು ಮಾಡಬೇಕೆಂದು ಅವಳೇ ನಿರ್ಧರಿಸಬೇಕು. ಸನ್ನಿವೇಶ ಏಕಾಏಕಿ ಬದಲಾಗಿಹೋಗಿತ್ತು. ಅವಳು ಊಹಿಸಿರದಷ್ಟು ಭೀಕರವಾಗಿ ಎದುರು ನಿಂತಿತ್ತು.

ಮುಂದಿನ ಕ್ಷಣಗಳಲ್ಲಿ ಮತ್ತಷ್ಟು ಗುಂಡುಗಳು ಹಾರಿದ ಶಬ್ಧ ಬಲಗಡೆಯಿಂದ ಕೇಳಿಬಂತು. `ಇಲ್ಲಿ ಹೆಚ್ಚು ಹೊತ್ತು ಇರುವುದು ಅಪಾಯ!’ ಮನ ತರ್ಕಿಸಿತು. ಮೆಲ್ಲಗೆ ಹಿಂದೆ ಸರಿದಳು. ಪೊದೆಗಳ ನಡುವೆ ಸದ್ದಾಗದಂತೆ ಸರಿಯತೊಡಗಿದಳು. ಕ್ಷಣಗಳು ಯುಗಗಳಾದವು.

ಬೃಹದಾಕಾರದ ವೃಕ್ಷವೊಂದನ್ನು ದಾಟುತ್ತಿದ್ದಂತೇ ಕಣ್ಣ ಮುಂದಿನ ನೆಲ ಬೆಳ್ಳಗೆ ಹೊಳೆಯುತ್ತಿರುವಂತೆನಿಸಿತು. ಗಕ್ಕನೆ ನಿಂತು ಎದುರಿನ ದೃಶ್ಯವನ್ನೇ ಬೆರಗಿನಿಂದ ನೋಡಿದಳು.

ಗಾಲ ಓಯೋ ನದಿ ಅವಳಿಂದ ಅನತೀ ದೂರದಲ್ಲಿ ಮಂದವಾಗಿ ನಿಶ್ಶಬ್ಧವಾಗಿ ಹರಿಯುತ್ತಿತ್ತು!

ಎಡ ಬಲ ಹಾಗೂ ಹಿಂದೆ- ಮೂರೂ ಕಡೆ ಫತನಸಾರಾನ ನಿಯಂತ್ರಣಕ್ಕೊಳಗಾದ ಪ್ರದೇಶಗಳು. ಅಲ್ಲೆಲ್ಲಾ ಅವನ ಸೈನಿಕರು ತುಂಬಿಹೋಗಿದ್ದಾರೆ. ಮುಂದಿರುವ ಗಾಲ ಓಯೋ ನದಿಯ ಆಚೆ ಇರುವುದೇ ತಮಿಳು ಜಿಲ್ಲೆ ಅಂಪರೈ. ಫತನಸಾರಾನ ಕೈ ಅಲ್ಲಿಯವರೆಗೆ ಚಾಚುವುದಿಲ್ಲ.

`ಎಲ್‌ಟಿಟಿಇ ಗೆರಿಲ್ಲಾಗಳು ಸಿಂಹಳೀಯರ ಕಡು ವೈರಿಗಳು. ನಾನು ಸಿಂಹಳೀ ಹೆಣ್ಣು. ಅವರ ನಡುವೆ ನನಗೆ ರಕ್ಷಣೆ ಸಿಗುತ್ತದೆಯೇ?’ ಪ್ರಶ್ನೆ ಭೂತಾಕಾರವಾಗಿ ಎದ್ದು ನಿಂತಿತು.

`ಯೋಚಿಸುತ್ತಾ ನಿಲ್ಲಲು ಸಮಯವೇ ಇಲ್ಲ. ಫತನಸಾರಾನ ಸೈನಿಕರು ಯಾವ ಗಳಿಗೆಯಲ್ಲಾದರೂ ಇತ್ತ ಬರಬಹುದು! ಅವರಿಂದ ತಪ್ಪಿಸಿಕೊಳ್ಳಬೇಕಾದರೆ ನಾನು ನದಿಯನ್ನು ದಾಟಲೇಬೇಕು. ತಮಿಳು ಗೆರಿಲ್ಲಾಗಳು ಸಿಂಹಳೀಯರ ಕಡುವೈರಿಗಳು, ನಿಜ. ಆದರೆ ಅವರೆಂದೂ ಯಾವುದೇ ಸಿಂಹಳೀ ಸ್ತ್ರೀಗೆ ಹಾನಿ ಮಾಡಿದ ಉದಾಹರಣೆ ಇಲ್ಲ. ಅವರ ನಡುವೆ ನಾನು ಸುರಕ್ಷಿತವಾಗಿರಬಲ್ಲೆ. ಈ ಗಳಿಗೆಯಲ್ಲಿ ನನ್ನ ವೈರಿ ಫತನಸಾರಾ. ಅವನು ಎಲ್‌ಟಿಟಿಇ ಗೆರಿಲ್ಲಾಗಳಿಗೂ ವೈರಿ. ನನ್ನ ವೈರಿಯ ವೈರಿ ನನಗೆ ಮಿತ್ರ. ನನಗೀಗ ರಕ್ಷಣೆ ಸಿಗುವುದು ತಮಿಳರ ನಡುವೆ ಮಾತ್ರ.’

ಮುಂದೆ ಅಡಿಯಿಟ್ಟಳು ಅಸಾಂತಿ. ಮರಳಿನ ತೀರ ಸೇರಿ ನಿಶ್ಶಬ್ಧವಾಗಿ ಹರಿಯುತ್ತಿದ್ದ ನದಿಯನ್ನೇ ದಿಟ್ಟಿಸಿದಳು.

ಬಂಧನ ಹಾಗೂ ಮುಕ್ತಿಯ ನಡುವಿನ ಗೆರೆ! ಅದನ್ನು ದಾಟಲೇ ಬೇಕು.

ನಿರ್ಧಾರ ಅಚಲವಾಯಿತು.

ಕಾಲುಗಳಿಂದ ಚಪ್ಪಲಿಗಳನ್ನು ತೆಗೆದು ನಡುವಿಗೆ ಸಿಕ್ಕಿಸಿಕೊಂಡಳು. ಸೆರಗನ್ನು ಸುತ್ತಿ ಸೊಂಟಕ್ಕೆ ಬಿಗಿದಳು. ನೀರಿಗೆ ಕಾಲಿಟ್ಟಳು.

ತಣ್ಣನೆಯ ನೀರು!

ಮುಂದೆ ಒಂದೊಂದೇ ಹೆಜ್ಜೆಯಿಟ್ಟಳು. ನೀರು ಮೊಣಕಾಲಿಗೆ, ಮಂಡಿಯ ಮೇಲಕ್ಕೆ ಏರಿತು. ಮುಂದಿನ ಮೂರು ಹೆಜ್ಜೆಗಳಲ್ಲಿ ಅದು ಸೊಂಟಕ್ಕೇರಿತು. ಒಮ್ಮೆ ನಿಂತಳು. ಹಿಂದೆ ತಿರುಗಿ ದಟ್ಟ ಕಾಡಿನತ್ತ ನೋಡಿದಳು. ಖೈದಿಯ ನೆನಪು ಏಕಾಏಕಿ ಒತ್ತರಿಸಿಕೊಂಡು ಬಂತು. `ಬಹುಶಃ ಅವನು ಜತೆಗೆ ಸಿಗದೇಹೋಗಿದ್ದರೆ ನಾನು ಮನೆಯಿಂದ ಕಾಡೊಳಗೆ ಅಷ್ಟು ದೂರ ಬರಲು ಆಗುತ್ತಲೇ ಇರಲಿಲ್ಲ. ಈ ನದಿಯನ್ನು ಕಣ್ಣಿಂದ ನೋಡಲೂ ಸಾಧ್ಯವಾಗುತ್ತಿರಲಿಲ್ಲ. ಬಂಧನದ ಬದುಕಿಗೆ ಅಂತ್ಯವೇ ಕಾಣುತ್ತಿರಲಿಲ್ಲ! ಓ ಬುದ್ಧ ಭಗವಾನ್, ನನಗೆ ಸ್ವಾತಂತ್ರದ ದಾರಿ ತೋರಿದ ಆ ಖೈದಿಯನ್ನು ಸುರಕ್ಷಿತವಾಗಿ ಅವನ ನೆಲೆ ತಲುಪಿಸು.’ ಕೈಯೆತ್ತಿ ಕರುಣಾಮಯಿ ಬುದ್ಧನಲ್ಲಿ ಬೇಡಿದಳು ಅಸಾಂತಿ. ಮರುಕ್ಷಣ ಎರಡೂ ಕೈಗಳನ್ನು ನೀರ ಮೇಲೆ ವಿಶಾಲವಾಗಿ ಹರಡಿದಳು. ಎಡಗಾಲನ್ನು ನೀರತಳದ ನೆಲಕ್ಕೆ ಬಲವಾಗಿ ಒತ್ತಿದಳು. ಬಲಗಾಲನ್ನು ಮೆಲ್ಲಗೆ ಮೇಲೆತ್ತಿ ದೇಹವನ್ನು ಮುಂದಕ್ಕೆ ಬಾಗಿಸಿದಳು. ಬೆನ್ನಹಿಂದೆ ಬಲಗಾಲು ನೀರ ಮೇಲೆ ಬರುತ್ತಿದ್ದಂತೇ ಎಡಗಾಲಿನಿಂದ ನೆಲವನ್ನು ಒದ್ದು ನೀರಿನ ಮೇಲೆ ಮುಂದಕ್ಕೆ ಚಿಮ್ಮಿದಳು. ನೀರ ಮೇಲೆ ತೇಲಿದ ಎರಡೂ ಕಾಲುಗಳನ್ನು ರಭಸವಾಗಿ ಆಡಿಸುತ್ತಾ ಎರಡೂ ಕೈಗಳಿಂದ ನೀರನ್ನು ಆವೇಶದಿಂದ ಬಗೆಯುತ್ತಾ ಮುನ್ನುಗ್ಗಿದಳು…

೦೦೦