ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕ್ಲಿಯೋಪಾತ್ರ್ರಾಳ ಮೂಗು

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಕ್ಲಿಯೋಪಾತ್ರಾಳ ಮೂಗು ಸ್ವಲ್ಪವೇ ಕಿರಿದಾಗಿರುತ್ತಿದ್ದರೂ
ಚರಿತ್ರೆಯ
ಗತಿಯೆ ಬದಲಾಗುತ್ತಿತ್ತು
ಎನ್ನುತ್ತಾನೆ ಬ್ಲಾಸೆ ಪಾಸ್ಕಾಲ್ ಮ್ಯಾತಮೆಟೀಶಿಯನ್
ಅದು ಅವನ ದೃಷ್ಟಿ..

ಅಷ್ಟೊಂದು ಚಂದವಿದ್ದಳೇ ಕ್ಲಿಯೋಪಾತ್ರ
ಎಂದು ಬೆರಗಾಗುತ್ತೇವೆ
ಅಥವ
ಪಾಸ್ಕಾಲ್ ಮತ್ತು ಶೇಕ್ಸ್‍ಪಿಯರ್ ಸೇರಿ
ಅಸಾಮಾನ್ಯ ಮಾಡಿದರೇ ಅವಳನ್ನ..
ಒಬ್ಬ ಫಿಲಾಸಫರ್, ಇನ್ನೊಬ್ಬ ಕವಿ —
ನಮ್ಮ ಸಿನೆಮಾದ ಎಲಿಙಬೆತ್ ಟೈಲರಳಷ್ಟು?

ನೋಡನೋಡುತ್ತ ಕ್ಯಾಂಪ್‍ಬೆಲ್ ಸೂಪ್ ಕ್ಯಾನುಗಳು
ಕಲಾವಿದನ (ಆ್ಯಂಡಿ ವರ್ಹಾಲ್)
ಕಲಾ
ಕೃತಿಗಳಾಗುತ್ತವೆ ಎಲ್ಲಿದ್ದವು ಅವು ಇಷ್ಟರ ತನಕ
ಮಲ್ಟಿಪ್ಲೆಕ್ಸ್ ಮಾಲ್‍ಗಳಲ್ಲಲ್ಲದೆ?

ಅಥವ ಪಿಕಾಸೋನ ‘ವೀನಸ್ ದು ಗಾಸ’
ಎಲ್ಲಿಯ ಕುಕಿಂಗ್ ಗ್ಯಾಸ್ ಎಲ್ಲಿಯ ವೀನಸ್ ದು ಗಾಸ್
ನಮಗೆ ಗೊತ್ತಿರುವುದೊಬ್ಬಳೇ ಅಪ್ರತಿಮ ವೀನಸ್
ವೀನಸ್ ಅಫ್ ಟಿಶಿಯನ್

ಕಲೆಯೆಂದರೇನೆಂದು ಕವಿತೆಯೇನೆಂದು
ಹಲವು ಬಾರಿ ಕೇಳಿದ್ದೇನೆ ತಿಳಿದವರು ಹೇಳಿದ್ದಾರೆ
ನನಗರ್ಥವಾಗಿಲ್ಲ…. ಎಂಥಾ ದಡ್ಡ ನಾನು ಕ್ಷಿತಿಜವ
ನೋಡಬಯಸುತ್ತೇನೆ.. ಮರೀಚಿಕೆಯ ಕುಡಿಯಬಯಸುತ್ತೇನೆ..
ಕನಸಿನೊಳಗೆ ಕನಸ ಕಾಣಬಯಸುತ್ತೇನೆ
ಆಮೇಲೆ ಇದ್ದಲ್ಲೆ ಮಲಗಿಬಿಡುತ್ತೇನೆ ಮರದ ನೆರಳಲ್ಲಿ
ಅಥವ ಹಾಸು ಪಾರೆಯ ಮೇಲೆ

ಅಲ್ಲಾ ಒಂದು ಮೂಗಿನ ಚೆಲುವಿನ ಮೇಲೆ ಚರಿತ್ರೆ
ನಿಂತಿದೆಯೆಂದರೇನರ್ಥ… ಇದನ್ನು ನಂಬಬೇಕೇ
ಬಿಡಬೇಕೆ ?
ಕವಿತೆಗೆ ಎರಡೂ ಬೇಕು.. ಬಹುಶಃ ಚರಿತ್ರೆಗೂ..