- ಇಂಥ ಕ್ಷೀರಪಥವೂ ಕನಸೇ - ಅಕ್ಟೋಬರ್ 30, 2024
ಗಂಗಾಧರ ಚಿತ್ತಾಲರ ಜನ್ಮ ಶತಮಾನೋತ್ಸವದ ಹೊತ್ತಿದು. ಅವರು ಬರೆದ ಕೆಲವು ಕವನಗಳನ್ನು ಓದುತ್ತಿರುವಾಗ ಮನಸ್ಸು ಈ ಮೇಲಿನ ಸಾಲುಗಳಲ್ಲಿ ನಿಂತು ಬಿಟ್ಟಿತು. ಇದು ಗಂಗಾಧರ ಚಿತ್ತಾಲರ ‘ಹಾಲು’ಕವನದ ಕೆಲವು ಸಾಲುಗಳು.
ಆಕಾಶದಿಬ್ಬನಿಗೆ ನೆಲವ ನೆನೆಯಲು ಬಿಟ್ಟು
ಹಸರಾಣಿ ಬೀಜಗಳ ಹವೆಯಲ್ಲಿ ತೂರಿಟ್ಟು
ಹಸೀಹಸೀ ಹಸಿರಾಗಿ ಹುಲ್ಲುಗಾವಲ ಬೆಳೆಸು
ಗೋದಲೆಗಳಲ್ಲಿ ಸಾಲುಕಟ್ಟಿ ಹಸುಗಳ ಹಿಂಡು
ಕೊರಳಿಗೊಂದೊoದು ಇನಿದನಿಯ ಗಂಟೆಯ ಕೊಂಡು
ಹಗಲಿಡೀ ಹಸಿರಿನೆಳಗರಿಕೆ ಮೇಯಲು ಕಳಿಸು
ಮಳೆ ಗಾಳಿ ಬಿಸಿಲ ಹಿತವಾದ ಆರೋಗಣೆಗೆ ಮೈತುಂಬುವವು ಅವು ಬೆದೆಯುವವು, ಈಯುವವು, ಕೆಚ್ಚಲು ಗುಮ್ಮೆ ತೊರೆಯುವವು ಬೆಂದೊಡಲ ತಣಿಸೆ ಧಾರೆಗರೆವ ಹಾಲೋಹಾಲು!
ಈ ಸಾಲುಗಳನ್ನು ಓದುವಾಗ ಮನಸ್ಸು ಉಲ್ಲಸಿತವಾಗುತ್ತದೆ. ಕೃಷ್ಣನ ಗೋಕುಲವನ್ನು ನೆನಪಿಸುವ ಈ ಸಾಲುಗಳು ನಿಜಕ್ಕೂ ನಮ್ಮ ಸುತ್ತಮುತ್ತಲ ಪರಿಸರ ಹೀಗೂ ಅದ್ಭುತವಾಗಿದೆ ಎನ್ನುವ ಭಾವನೆ ಹುಟ್ಟಿಸುತ್ತಾ ಒಂದು ನಿರಾಳತೆಯನ್ನು ಮೂಡಿಸುತ್ತದೆ. ಸಮೃದ್ಧಿ,ತನ್ನ ಬದುಕಿನಲ್ಲಿ ನಿರಂತರವಾಗಿ ಇರಬೇಕು ಎಂದು ಪ್ರತೀ ಮನುಷ್ಯನ ಅನಂತ ನಿರೀಕ್ಷೆಯಾಗಿದೆ.ಕಾವ್ಯ ನಮ್ಮಲ್ಲಿ ಬದುಕಿನ ಬಗೆಗೆ ಹುಟ್ಟಿಸುವ ಅನನ್ಯ ನಂಬಿಕೆಯಿದು. ಆದರೆ ಕವನದ ಮುಂದಿನ ಸಾಲು ಮರುಕ್ಷಣದಲ್ಲಿ ಕಣ್ಣಿಗೆ ಬೀಳುತ್ತದೆ!
ಇದು ಕನಸೆ, ನೆಮ್ಮದಿಯ ಈ ಇಂಥ ಕ್ಷೀರಪಥವೂ ಕನಸೇ
ನಮ್ಮ ಈ ಹತವೀರ್ಯ ಶತಮಾನದಲ್ಲಿ?
ದಿನವೂ ನಡೆದಿದೆಯಲ್ಲ ಕೊಲ್ಲು ಕೊಲ್ಲು ಕೊಲ್ಲು
ಈ ನಿರಂತರ ಹತಿಗೆ ತಡೆಯೆಂತು, ಕೊನೆಯೆಲ್ಲಿ
ನಿನ್ನೆ ಹಿರೋಶಿಮಾ ಕ್ಷಣಾರ್ಧದಲ್ಲಿ ಹೋಮ
ಇಂದು ವಿಯೆತ್ನಾಮಿನಗ್ನಿಕುಂಡ
ನಾಳೆ ಮತ್ತೆಲ್ಲೊ ಭಗ್ಗನೆ ಹೊತ್ತಿಕೊಳ್ಳುವ ಹತ್ಯಕಾಂಡ
ಆಹುತಿಯನಿತ್ತಷ್ಟು ಹಸಿವ ಕೆಂಡ.
ಏಕಾಏಕಿ ಹಸಿರು ಸಮೃದ್ಧ ವಾತಾವರಣದಿಂದ ಬೆಂಕಿಯುಗುಳುವ ಮರುಭೂಮಿಯಲ್ಲಿ ಬಂದು ನಿಂತ ಅನುಭವವಾಗುತ್ತದೆ. ಸುಮಾರು ಎರಡ್ಮೂರು ದಶಕಗಳ ಹಿಂದೆ ಬರೆದ ಈ ಕವನವು ಇಂದಿಗೂ ಓದುವಾಗ ಅದೇ ವಿಷಾದವನ್ನು ಮೂಡಿಸುತ್ತದೆ ಎಂದರೆ ನಾವು ಆ ಹಿಂಸೆಯ ಮನೋಭಾವದಿಂದ ಒಂದಿoಚೂ ಕದಲದೇ ಇದ್ದೇವೆ ಎನ್ನುವುದು ಅರಿವಾಗುತ್ತದೆ. ಜೊತೆಯಲ್ಲಿ ಕವನವೊಂದು ಹೇಗೆ ಕಾಲದೇಶವನ್ನು ಮೀರಿ ಜೀವಿಸುತ್ತದೆ ಎನ್ನುವುದನ್ನೂ ನೆನಪಿಸುತ್ತದೆ. ಗಂಗಾಧರ ಚಿತ್ತಾಲರ ಕವನಗಳನ್ನು ಓದುವಾಗ ಅವರ ಬಹುದೊಡ್ಡ ಶಕ್ತಿಯಾಗಿ ಕಂಡದ್ದು ಅವರ ಭಾವತೀವ್ರತೆ. ‘ಕನ್ನಡ ನವೋದಯ ಕಾವ್ಯ’ ಅನ್ನುವ ವಿಮರ್ಶಾಗ್ರಂಥದಲ್ಲಿ ಹಿರಿಯ ಕವಿ ದೊಡ್ಡರಂಗೇಗೌಡರು ಭಾವ ಪ್ರವಾಹದ ಭೋರ್ಗರೆತವನ್ನು ಸಹೃದಯನು ಸವಿಯಬೇಕೆಂದರೆ ಕವಿ ಗಂಗಾಧರ ಚಿತ್ತಾಲರ ಮನುಕುಲದ ಹಾಡು’ ಕವನ ಸಂಕಲವನ್ನು ಓದಬೇಕು’ ಎನ್ನುತ್ತಾರೆ. ಅಷ್ಟು ತೀವ್ರವಾದ ಅಭಿವ್ಯಕ್ತಿ ಚಿತ್ತಾಲರದು. ಈ ಭಾವತೀವ್ರತೆಯ ಅದ್ಭುತ ನೋಟ ಈ ಹಾಲು ಕವನದಲ್ಲಿ ಕಾಣಲು ಸಿಗುತ್ತದೆ. ಹಾಲು ಎನ್ನುವುದೇ ಸಮೃದ್ಧತೆಯ ಸಂಕೇತ. ಅದು ತಾಯ ಎದೆಹಾಲಿನಿಂದ ಆಕಳಿನ ಹಾಲಿನವರೆಗೂ ಅದು ಫಲವಂತಿಕೆಯ ದ್ಯೋತಕ. ಜೀವವನ್ನು ಪೋಷಿಸುವ ಆಧಾರ. ಹಾಲಿನ ಹೊಳೆ ಹರಿಯುತ್ತದೆ, ಕ್ಲಿಯೋಪಾತ್ರ ಹಾಲಿನಲ್ಲಿ ಮೀಯುತ್ತಿದ್ದಳು ಎನ್ನುವ ಇಂಥ ರೂಪಕಗಳೆಲ್ಲವೂ ಶ್ರೀಮಂತ, ಸಮೃದ್ಧ, ತೃಪ್ತ ಬದುಕನ್ನು ಹೇಳುವ ರೀತಿಯಾಗಿದೆ. ಹುಟ್ಟಿದ ಪ್ರತೀ ಜೀವವೂ ತನ್ನ ಬೆಳವಣಿಗೆಯನ್ನು ಕಾಣುವುದೇ ತನ್ನ ಹೆತ್ತತಾಯಿಯ ಎದೆಹಾಲನ್ನು ಕುಡಿದು ಎನ್ನುವುದು ತಿಳಿದಿದೆ. ಅಂದರೆ ಸುಸ್ಥಿತಿಯ, ಆತಂಕವಿಲ್ಲದ ಭಾವದಲ್ಲಿ ತೇಲಾಡುತ್ತಿರುವಾಗ ಕವನದ ಮುಂದಿನ ಸಾಲುಗಳು ಮನುಷ್ಯನ ಮನಸ್ಸಿನ ಭೀಭತ್ಸ ಗುಣವೊಂದು ಹೇಗೆ ಕ್ಷಣದಲ್ಲಿ ಬದುಕನ್ನು ಬರಡಾಗಿಸಿ ಬಿಡುವುದು ಮತ್ತು ಅದಕ್ಕೆ ಕಾರಣವೂ ಮನುಷ್ಯನ ದುರಾಸೆಯಿಂದಲೇ ಎಂದು ಹೇಳುತ್ತಾರೆ! ಅಂದರೆ ಸಮೃದ್ಧಿ ಮತ್ತು ವಿನಾಶ ಎರಡೂ ಬೀಜರೂಪದಲ್ಲಿ ಇರುವುದು ಅಥವಾ ಹುಟ್ಟುವುದೂ ಮನುಷ್ಯನ ಮನದಲ್ಲಿಯೇ ಎಂದು ಕವಿ ವಿಷಾದದಿಂದ ಹೇಳಿದ್ದು ಕಂಡು ಬರುತ್ತದೆ.
ಹಿಂಸೆ, ಮನಶ್ಶಾಸ್ತ್ರದ ಪ್ರಕಾರ ಮಾನವನ ಮೂಲಗುಣವಂತೆ! ಅದು ಮಾನವನ ಮನಸ್ಸಿನಲ್ಲಿ ಸಮೃದ್ಧವಾಗಿ ಬೆಳೆಯುವ ಕಳೆಗಿಡ. ಇನ್ನು ಅದರ ಬೆಳವಣಿಗೆಗೆ ಸುತ್ತಮುತ್ತಲಿನ ಪರಿಸರವೂ ಒದಗಿ ಬಂದರೆ ಗೊಬ್ಬರ ಸಿಕ್ಕ ಕಳೆಗಿಡ ರಾಕ್ಷಸಾಕಾರ ಪಡೆಯುವಂತೆ ಹಿಂಸೆಯೂ ವಿಜೃಂಭಿಸಲು ತೊಡಗುತ್ತದೆ. ಹಿಂಸೆಗೆ ಮೂಲಕಾರಣ ಮನುಷ್ಯನ ಅಹಂಕಾರ. ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ನಮ್ಮ ಸುಖದುಃಖಗಳಿಗೆ ಮನಸ್ಸೇ ಮೂಲಕಾರಣ. ಚಿತ್ತಾಲರು ಕವನದ ಆರಂಭದಲ್ಲಿ ‘ಆಕಾಶದಿಬ್ಬನಿಗೆ ನೆಲವ ನೆನೆಯಲು ಬಿಟ್ಟು’ ಎಂದ ರೀತಿ ಈ ಭೂಮಿ ಆಕಾಶದಿಂದ ಅತ್ಯಂತ ಹಗುರವಾಗಿ ಸೂಕ್ಷ್ಮವಾಗಿ ಸುರಿಯುವ ಮುತ್ತಿನಂತಹ ಇಬ್ಬನಿಯಿಂದ ಸಹಜವಾಗಿ ತೇವಗೊಂಡು ಹೊಸ ಬದಲಾವಣೆಗೆ ತಯಾರಾಗಿ ನಿಂತಾಗ ಗಾಳಿ ಅಷ್ಟೇ ಹಗುರವಾಗಿ ಕೊಂಡೊಯ್ಯುವ ಬೀಜಗಳು ಭೂಮಿ ಮೇಲೆ ಬಿದ್ದು ತೇವದೊಂದಿಗೆ ಸಂಯೋಗವಾಗಿ ಹೊಸ ಹಸಿರು ಮೂಡಲು ಹೇಗೆ ಭೂಮಿ ಒಂದು ವೇದಿಕೆಯಾಗುವುದೋ ಅದೇ ಭೂಮಿ ಮನುಷ್ಯನ ಅಹಂಕಾರಕ್ಕೆ ಅಗ್ನಿಯನ್ನು ಉಗುಳುವ ಕಾರ‍್ಯಕ್ಕೂ ಸಾಕ್ಷಿಯಾಗುತ್ತದೆ. ಒಂದು ಸ್ಫೋಟದಿಂದ ಈ ಅಗ್ನಿಯ ಹೊಟ್ಟೆ ತುಂಬುತ್ತದೆಯೇ! ಈ ಅಗ್ನಿಗೆ ಆಹುತಿಯನ್ನು ನೀಡಿದಷ್ಟು ಅದು ನಿಗಿನಿಗಿಗೊಳ್ಳುತ್ತಾ ಇನ್ನೂ ನಾಲಗೆಯನ್ನು ಚಾಚಿ ಅದರ ಹಸಿವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತದೆ. ಇಂಥ ಕೆಂಡಕ್ಕೆ ತಂಪೆರೆಯುವ ಸಾಧ್ಯತೆಗಳಿವೆಯೇ ಎನ್ನುವುದೇ ವಿಷಾದದ ದನಿ ಕವನದಲ್ಲಿ ಕೇಳುತ್ತದೆ.
ಈ ಕವನದಲ್ಲಿ ಭೂಮಿ ಮೇಲಿನ ಮನುಷ್ಯನ ಪಾಡು ಕಂಡರೂ ಒಟ್ಟು ಪ್ರಕೃತಿಯ ಅಂತಃಸತ್ವವೂ ಹೀಗೆ ಇದೆ ಎಂದೂ ಹೇಳಬಹುದು. ಮನುಷ್ಯ ಎಷ್ಟೆಂದರೂ ಪ್ರಕೃತಿಯ ಕೂಸು. ಪ್ರಕೃತಿಯ ರಜೋಗುಣಗಳು ಅವನಿಗೂ ಬರುವುದು ಸಹಜವಲ್ಲವೇ. ತಣ್ಣಗೆ ವರ್ಷವಿಡೀ ಹರಿಯುವ ನದಿ ಜೀವದಾಯಿನಿಯಾಗಿ ಪೊರೆಯುತ್ತಿದ್ದವಳು ವರ್ಷಋತುವಿನಲ್ಲಿ ತನ್ನ ವೇಗವನ್ನೇ ನರ‍್ಮಡಿಯಾಗಿಸಿ ತನ್ನ ಇಕ್ಕೆಲಗಳನ್ನು ಕೊಚ್ಚಿಕೊಂಡು ಹೋಗಿ ಸಿಕ್ಕಿದ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತದೆ. ಅಕ್ಕಿಯನ್ನು ಅನ್ನ ಮಾಡುತ್ತಾ ಮನುಷ್ಯನನ್ನು ಬೆಳೆಸಿದ ಅಗ್ನಿ ಆಕಾಶಕ್ಕೆ ನೆಗೆದು ಎಲ್ಲವನ್ನೂ ಸ್ವಾಹಾ ಎಂದು ನುಂಗುತ್ತದೆ. ಕಾಯುವ ಮತ್ತು ಕೊಲ್ಲುವ ಎರಡೂ ಶಕ್ತಿಗಳೂ ಹೀಗೆ ಇರುವುದೇ ಸತ್ಯವಿರುವಾಗ ಅವುಗಳ ಗುಣ ನಮ್ಮಲ್ಲಿ ಚಿಗುರುವುದು ಸಹಜವೇನೋ! ಪ್ರಾಯಶಃ ಕವಿ ಚಿತ್ತಾಲರು ಇದನ್ನೇ ಹೇಳಿದರೋ? ಅಷ್ಟಿದ್ದೂ ಅಂತಿಮ ನಿರ್ಣಯವಾಗಿ ಕವಿ ‘ಸಮರಾಗ್ನಿ ನಂದಿಸಲಿ ಕ್ಷೀರಸಿಂಧು’ ಎಂದೆನ್ನುತ್ತಾ ದ್ವೇಷ, ರೋಷದ ಆವೇಷವನ್ನು ಅಂತಃಕರಣವು ಶಮನಗೊಳಿಸಲಿ ಎನ್ನುವ ಆಶಾಭಾವನೆಯನ್ನೇ ಮುಂದಿಡುತ್ತಾರೆ. ತೀವ್ರವಾಗಿ ಭಾವುಕನಾದ ಮನುಷ್ಯ ಎಂದೂ ನಕಾರಾತ್ಮಕ ಭಾವದಲ್ಲಿ ಇರಲಾರ. ಮತ್ತೆ ಬದುಕಿನತ್ತ,ಹೊಸ ಬೆಳಕಿನತ್ತ ಅವನು ಹೆಜ್ಜೆಯಿಟ್ಟೇ ಇಡುತ್ತಾನೆ ಎನ್ನುವುದಕ್ಕೇ ಭಾವತೀವ್ರತೆಗೆ ಹೆಸರಾದ ಕವಿ ಗಂಗಾಧರ ಚಿತ್ತಾಲರು ಹಾಲು ಕವನದಲ್ಲಿ ಎರಡೂ ಬಗೆಯ ಸಂವೇದನೆಯನ್ನೂ ಮತ್ತು ಉನ್ಮಾದವನ್ನೂ ಹೇಳುತ್ತಾ ಪ್ರಕೃತಿಯ ಸತ್ವ ಮನುಜನಲ್ಲಿದೆ ಎಂದು ಕವನದಲ್ಲಿ ಹೇಳಿದ್ದಾರೆ. ಇಷ್ಟೇ ಕುತೂಹಲ ಹುಟ್ಟಿಸಿದ್ದು ಚಿತ್ತಾಲರಸಂಪರ್ಕ’ ಎನ್ನುವ ಇನ್ನೊಂದು ಕವನ. ಇಲ್ಲಿ ಜೀವ ಹುಟ್ಟುವ ಬಗೆಯೇ ಅತ್ಯಂತ ಸೋಜಿಗದ್ದು. ಎಲ್ಲ ಅಗತ್ಯಗಳಿದ್ದೂ ವ್ಯವಸ್ಥೆಗಳಿದ್ದೂ ಚಿಗುರದೇ ಇರುವ ಜೀವವೊಂದು ಅತ್ಯಂತ ಕಡಿಮೆ ಅಗತ್ಯಗಳ ಜೊತೆಗೆ ಸೃಷ್ಟಿಯಾಗಿ ಬಿಡುತ್ತದೆ. ಕುಂಡದಲ್ಲೋ, ನೆಲದಲ್ಲೋ ಪಾತಿ ಮಾಡಿ, ಬೀಜ ಹಾಕಿ ನೀರುಣಿಸಿ ಗೊಬ್ಬರ ಹೂಡಿಯೂ ಹಸಿರು ಸೃಷ್ಟಿಯಾಗದೇ ಹೋಗುವ ಸಾಧ್ಯತೆಗಳಿರುವಾಗ ಇದರ ನಡುವೆಯೇ ಮಣ್ಣೇ ಇಲ್ಲದ, ಸಂದಿಯಲ್ಲಿ ಇದ್ದ ಧೂಳಿಗೆ ಇಬ್ಬನಿ ಸೇರಿ ಎಲ್ಲಿಂದಲೋ ಬಂದು ಬಿದ್ದ ಬೀಜವೊಂದು ಚಿಗುರೊಡೆಯುವ ಸೃಷ್ಟಿಯ ನಡೆ, ಕೌತುಕವಲ್ಲವೇ! ಇದನ್ನು ಕವಿ ಮನಸ್ಸು ನಿರೂಕಿಸಿದಾಗ ಅಲ್ಲೊಂದು ಚೆಂದದ ಕವಿತೆ ಹುಟ್ಟುತ್ತದೆ.
ಕಳೆದ ವಾರ ಕುಣಿಯುತ್ತಲೇ ಬಂದಳು ನಮ್ಮ ಸರಿತೆ!
ಸಾಲೆಯಲ್ಲಿ ಹೇಳಿದರಂತೆ
ಒಂದಿಷ್ಟು ಗೋಧಿ, ಒಂದಿಷ್ಟು ಜೋಳ, ಭತ್ತ
ಹೀಗೆಯೇ ಮತ್ತೇನೇನೊ
ಮನೆಯಲ್ಲೇ ನೆಟ್ಟು ಸಸಿ ಬೆಳೆಸಿ ತರಬೇಕು
ಹಸಿರೊಡೆಯುವ ಜೀವ ಪ್ರಕ್ರಿಯೆಯನ್ನು ಕವಿ ಇಲ್ಲಿ ಹೀಗೆ ಆಗಿಸುತ್ತಾರೆ’. ಏಕೆಂದರೆ ನಗರದಲ್ಲಿ ಹಸಿರು ಚಿಗುರೊಡೆಯುವ ಸೊಬಗು ನೋಡಲು ಅದೆಲ್ಲಿ ಸಾಧ್ಯವಿದೆ. ಹಾಗಾಗಿ ಪುಟ್ಟ ಟಿನ್ನುಗಳಲ್ಲಿ ಧೂಳೆಂಬ ಮಣ್ಣು ತುಂಬಿ ಬಾಟಲಿ ನೀರನ್ನೇ ಪರ್ಜನ್ಯವಾಗಿಸಿ ಬೀಜವೂರಿ ಅದು ಮೊಳಕೆಯೊಡೆಯುವುದನ್ನು ನೋಡಲು ಕಾಯುತ್ತಾ ನಿಂತ ಕತೆಯನ್ನು ಕವನವಾಗಿಸಿದ್ದಾರೆ. ನಮ್ಮ ಭೂಮಿಯ ಮಡಿಲು ಅದು ಅಮೃತ. ಇಲ್ಲಿ ಕ್ಷಾಮವೆನ್ನುವುದು ಹೊರಗಿನ ಆವರಣದಲ್ಲಿ ಅಷ್ಟೇ. ಬೇಸಗೆಯಲ್ಲಿ ಬರಡಾದ ಭೂಮಿ ನಾಲ್ಕು ಹನಿ ಮಳೆ ಬಿದ್ದ ಕೂಡಲೇ ಅದೆಲ್ಲಿ ಅಡಗಿಸಿಟ್ಟಿತ್ತೊ ಹಸಿರನ್ನು ಎನ್ನುವಂತೇ ಹಸಿರಿನ ಚಾದರವೊಂದನ್ನು ಹಾಸಿ ಬಿಡುತ್ತದೆ. ನೆಲದ ಮರೆಯ ನಿದಾನದಂತೇ ಅನ್ನುವುದು ಇದಕ್ಕೆ ತಾನೇ. ನಿಜಕ್ಕೂ ಹಸಿರೆನ್ನುವುದು ನಿಧಿಯಂತೇ. ಆ ನಿಧಿಯ ಬಾಗಿಲಿಗೆ ಇರುವ ಬೀಗವನ್ನು ತೆರೆಯಲು ಕೀಲಿಯೆಂದರೆ ತೇವ, ಆರ್ದ್ರತೆ ಅಥವಾ ಮಳೆಯೇ. ಇದನ್ನೇ ಕವಿ,
ಕುತೂಹಲದಿಂದ ಬದಿಯ ಮಣ್ಣನ್ನಿಷ್ಟು ಸರಿಸಿ ನೋಡಿದೆ
ಹಿಗ್ಗಿ ದುಂಡಗೆ ಗಬ್ಬವಾಗಿ ಬಿರಿದಿವೆ ಬೀಜ
ಕೆಳಕ್ಕೆ ಬಾಯೂರಿದಲ್ಲಿ ಇಳಿಸಿವೆ ಬೇರು-ಸೂಜಿಮೊನೆ ಐದಾರು
ಒಡಲು ಬಿರಿದಲ್ಲಿ ಮೇಲಕ್ಕೆ ಕಳಿಸಿವೆ ದೇಟು-ಸಸಿಯ ಮೂಲಸ್ತಂಭ
ಖಾಲಿ ಟಿನ್ನುಗಳ ಬೀದಿ ಧೂಳಲ್ಲು ಮೈತಳೆದ ಸೃಜನದೀ ಕೌತುಕವ
ನಿಯಾಳಿಸುತ ಕುಳಿತೆ, ಸೋಕಿ ಸೋಕಿ ಬೆರಾಳಡಿಸಿದೆ
ಉರದಲುಮ್ಮಳ, ಮತ್ತೆ ಮತ್ತೆ ಜೀಕಳಿ ಪುಳಕ
ಇಷ್ಟು ಹತ್ತಿರದ ಜೀವ ಸೃಷ್ಟಿ ಸಂಪರ್ಕಕ್ಕೆ!
ಪ್ರಕೃತಿಯ ಸೃಷ್ಟಿ ಸಾಮರ್ಥ್ಯ ಅಪರಿಮಿತ. ಅದರ ಬಸಿರ ತುಂಬ ಸಾವಿರ ಚೋದ್ಯಗಳು, ಸಾವಿರಾರು ಸುಳಿಗಳು. ಪ್ರಕೃತಿಯ ಭಾಗವಾದ ಮನುಷ್ಯನಿಗೆ ಇದನ್ನು ಕುತೂಹಲದಿಂದ ನೋಡುವ ಧನ್ಯತೆಯಷ್ಟೇ ಉಳಿದಿದೆಯೇನೋ ಎನ್ನುವಂತಿದೆ ಚಿತ್ತಾಲರ ಬೆರಗಿನ ನೋಟ.
ಹೆಚ್ಚಿನ ಬರಹಗಳಿಗಾಗಿ
ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ
ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ
ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು