- ಗಂಡ ಹೆಂಡತಿ ಜಗಳ ಡೈವೋರ್ಸ್ ಗೆ ಅರ್ಜಿ? - ಆಗಸ್ಟ್ 7, 2022
- ಪರಿವರ್ತನೆ - ಏಪ್ರಿಲ್ 28, 2022
ಚಂದ್ರು ಅಂದ..ನೋಡು ರಜನಿ, ನಾನೊಂದು ತೀರ, ನೀನೊಂದು ತೀರ ಮನಸೂ ಮನಸೂ ದೂರಾ,
ಪ್ರೀತಿ ಹೃದಯಾ ಭಾರ..
ರಜನಿ ಅಂದಳು. “ಮಿಂಚಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ..”ಒಡೆದು ಹೋದ ಕನ್ನಡಿ ಜೋಡಿಸಲಾಗೊಲ್ಲ..”
ಚಂದ್ರು ರೇಗುತ್ತಾ ಅಂದ. ಜೋಡ್ಸು ಅಂತ ಯಾರು ಹೇಳಿದ್ದು? ನಂಗೂ ನಿನ್ನ ಜೊತೆ ಏಗೀ ಏಗೀ ಸಾಕಾಯ್ತು, ಯಾಕೋ ಬೇಜಾರಾಯ್ತು, ನೀನೇ ಮಾತಾಡ್ತೀಯೇನೋ ಅಂತ ಅನ್ನಿಸ್ತು. ಸರಿ ಹೋಗ್ತೀಯೇನೋ ಅಂದ್ರೆ ತೀರಾ ಮಿತಿ ಮೀರಿ ಹೋಗ್ತಿದೆ ನಿನ್ನ ಬಿಹೇವಿಯರ್.. ತಲೆ ನಿಲ್ತಾ ಇಲ್ಲ, ಹೆಡ್ ವೇಯ್ಟ್ ಜಾಸ್ತಿ ಆಯ್ತು.. ನೀನಿಲ್ದಿದ್ರೆ ಅಷ್ಟೇ ಹೋಯ್ತು, ಕತ್ತೆ ಬಾಲ ಕುದುರೆ ಜುಟ್ಟು.. ನಂಗೇನು ಎರಡನೇ ಮದುವೆ ಆದ್ರೂ ಬೇಕಾದಷ್ಟು ಜನ ಕ್ಯೂ ನಿಲ್ತಾರೆ.. ಅಜ್ಜಿ ಕೋಳಿ ಕೂಗದೇ ಇದ್ರೆ ಬೆಳಗಾಗೊಲ್ಲ ಅಂತ ಅಂದುಕೊಂಡಿದೀಯ..ಹ್ಞಾ??
ರಜನಿ, ನಾನೇನು ಅಂದ್ಕೊಂಡ್ರೆ ನಿಮಗೇನು? ನಾನಾಗ್ಲೇ ಹೇಳಿದ್ನಲ್ಲ.. ಒಡೆದ ಕನ್ನಡಿ ಜೋಡಿಸಕಾಗೊಲ್ಲ, ಬೈ ದ ವೇ.. ಈಗ್ಲೂ ಹೇಳ್ತೀನಿ ಮಿಂಚಿ ಹೋದುದಕ್ಕೆ ಚಿಂತಿಸಿ ಫಲವಿಲ್ಲ.. ನೀವು ನೆನ್ನೆ ತಂದುಕೊಟ್ಟ ಗಿಫ್ಟೂ ಬೇಡ ಏನು ಬೇಡಾ, ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ.. ನಿಮಗೊಬ್ರಿಗೇನಾ ಮದುವೆಗೆ ಅಂತ ಕ್ಯೂ ನಿಲ್ಲೋದು, ನನ್ನ ಅಂದಚಂದಕ್ಕೆ ಯಾರಾದ್ರೂ ದಮ್ಮಯ್ಯ ಅಂತ ಕಾಲಿಗೆ ಬಿದ್ದು ಮದುವೆ ಮಾಡಿಕೋತಾರೆ.. ನಾವಿಬ್ಬರೂ ಎಂದೂ ಸೇರದ ರೇಖೆಗಳು.. ಅಷ್ಟೇ.. ಈ ಗತಿಗೆ ಇನ್ನು ಮಕ್ಕಳು ಬೇರೆ ಕೇಡು! ಥ್ಯಾಂಕ್ ಗಾಡ್, ಮಕ್ಕಳು ಅಂತ ಆಗಲಿಲ್ಲ.. ಇಲ್ದಿದ್ರೆ ಅದೊಂದು ದೊಡ್ಡ ಪ್ರಾಬ್ಲಂ ಆಗುತ್ತಿತ್ತು.. ನಿಮಗೊಂದು ದೊಡ್ಡ ನಮಸ್ಕಾರ.. ಗುಡ್ ಬೈ..
ತಗೋಳಿ, ನೀವು ತಂದು ಕೊಟ್ಟ ಗಿಫ್ಟ್ ಬಾಕ್ಸ್ ಅಂತ ಜೋರಾಗಿ ಎಸೆದಾಗ.. ಪಕ್ಕದಲ್ಲಿ ಮಲಗಿದ್ದ ಚಂದ್ರು ನೆತ್ತಿಗೆ ಹೆಂಡತಿಯ ಕೈ ತಗುಲಿ, ಗಾಬರಿಯಾಗಿ, ಏಯ್, ರಜೂ, ಏನಾಯ್ತು ಡಾರ್ಲಿಂಗ್?? ಯಾಕೆ ನಂಗೆ ನಿನ್ನ ಕೈಯಿಂದ ಹೊಡೀತಾ ಇದೀಯಾ? ಏಳು.. ಏನಾದರೂ ಕನಸು ಕಂಡ್ಯಾ.. ಅಂತ ರಜನಿಯ ಭುಜ ಹಿಡಿದು ಅಲ್ಲಾಡಿಸಿ, ಎಬ್ಬಿಸಿದ.
ಆ..ಆ..ಹ್ಞಾ..ಏನಾಯ್ತು ರೀ.. ನಾನೇನು ಮಾಡಿದೆ ನಿಮಗೆ? ತಡಬಡಾಯಿಸುತ್ತಾ ಎದ್ದು ಕುಳಿತಳು ರಜನಿ.
ಚಂದ್ರು ಅವಳ ತಲೆ, ಬೆನ್ನು ನೇವರಿಸುತ್ತಾ. ಓಕೆ…ಓಕೆ ರಿಲಾಕ್ಸ್.. ತಗೋ ನೀರು ಕುಡಿ ಅಂತ ಸ್ವಲ್ಪ ಹೊತ್ತಾದ ಮೇಲೆ ಹ್ಞು ಈಗ ಹೇಳು ಏನಾಯ್ತು? ಅಂತಂದ.
ರಜನಿಗೆ ವಾಸ್ತವಕ್ಕೆ ಬರಲು ಕೆಲ ಸಮಯವೇ ಹಿಡಿಯಿತು. ಅಯ್ಯೋ.. ಏನು ಹೇಳಬೇಕೋ ಗೊತ್ತಾಗ್ತಿಲ್ಲ ರೀ.. ನೀವು ನನ್ನ ಕೈ ಬಿಡಲ್ಲ ತಾನೇ, ನಿಮ್ಮನ್ನು ಬಿಟ್ಟು ನಾನಿರಲಾರೆ. ನನಗೆ ಕೆಟ್ಟ ಕನಸೊಂದು ಬಿತ್ತು, ಇಬ್ಬರೂ ವಿಪರೀತ ಜಗಳವಾಡಿದಂತೆ .. ನಾವಿಬ್ಬರೂ ಬೇರೆ ಬೇರೆಯಾದಂತೆ ಕನಸು. ಅಬ್ಬ! ಈಗಲೂ ನೆನೆಸಿಕೊಂಡರೆ ನಡುಕ ಬರುತ್ತೆ..
ಚಂದ್ರು ಅಂದ, ಅರೇ ಅದೆಲ್ಲಾ ಯಾಕಮ್ಮಾ ಯೋಚನೆ ಮಾಡಿದೆ? ಅಂಥದ್ದೆಲ್ಲಾ ಏನೂ ನಡೆದೇ ಇಲ್ಲವಲ್ಲ.
ಅಲ್ಲಾ ರೀ, ನಿನ್ನೆ ನನ್ನ ಆಫೀಸ್ ಫ್ರೆಂಡ್ ಗೀತ ಅವಳ ಹಾಗೂ ಅವಳ ಗಂಡನ ಸಂಬಂಧ ಇತ್ತೀಚೆಗೆ ಹದಗೆಡುತ್ತಿರುವುದರ ಬಗ್ಗೆ, ಅವಳು ಡೈವೋರ್ಸ್ ಬಗ್ಗೆಯೂ ಆಲೋಚನೆ ಮಾಡಿದ್ದಾಗಿ ತಿಳಿಸಿದ್ದಳು. ಅದನ್ನು ಮನಸ್ಸಿಗೆ ತೀವ್ರವಾಗಿ ಆಲೋಚಿಸಿ ನನಗೇ ಒಂದು ರೀತಿಯ ದುಃಖವಾಗಿತ್ತು. ಈಗ ತಿಂಗಳ ಹಿಂದಿನಿಂದಲೇ ಅವಳ ದುಃಖವನ್ನು ಆಗಾಗ್ಗೆ ಹೇಳಿಕೊಳ್ಳುತ್ತಿದ್ಧಳು. ಅಬ್ಬಬ್ಬಾ ಅಂತೂ ಇದು ಕನಸು ಅಷ್ಟೇ ಅಂತ ಗೊತ್ತಾಗಿ ಈಗ ಖುಷಿ ಆಯ್ತು.
ಕಮಾನ್, ರಿಲಾಕ್ಸ್.. ನಿನ್ನ ಬಿಟ್ಟು ನಾನೂ ಇರಲು ಸಾಧ್ಯವೇ ಇಲ್ಲ. ಡಾರ್ಲಿಂಗ್.. ದಂಪತಿಗಳ ಜೀವನವೆಂಬ ಗಾಡಿಗೆ ಎರಡು ಸಮಾನವಾದ ಚಕ್ರಗಳು ಇರಲೇಬೇಕಲ್ಲ. ಒಂದು ಚಕ್ರ ಕೆಟ್ಟರೂ, ಗಾಡಿ ಮುಂದೆ ನಡೆಯುವುದಿಲ್ಲ. ಈ ಎರಡು ಚಕ್ರಗಳು ಎಂದೂ ಸೇರದ ರೇಖೆಗಳಂತೇ ಇರುತ್ತದೆ. ಆದರೆ ಒಂದು ರೇಖೆಯೆಂಬ ಚಕ್ರವಿಲ್ಲದೇ ಮತ್ತೊಂದು ರೇಖೆಯೆಂಬ ಚಕ್ರ ನಡೆಯದು. ಒಂದನ್ನೊಂದು ಅವಲಂಬಿಸಿರುತ್ತದೆ. ನಮ್ಮಿಬ್ಬರ ಜೀವನದ ಅದ್ಭುತ ಯಶಸ್ಸು ನಮ್ಮ ಪರಸ್ಪರ ಪ್ರೀತಿ, ಪ್ರೇಮ
ಒಡನಾಟದಲ್ಲಿ, ಒಬ್ಬರೊನ್ನೊಬ್ಬರು ಅರ್ಥೈಸಿಕೊಳ್ಳುವುದರಲ್ಲೇ ಇದೆ. ನಮ್ಮಿಬ್ಬರ ಜೀವನ ಪಾವನವಾಗುವುದು ಅದರಲ್ಲೇ ನೋಡು ಅಂದ ಚಂದ್ರು.
ಸರಿ..ಇನ್ನೇನು ಬೆಳಗಾಗುತ್ತಿದೆ, ಇಬ್ಬರೂ ಏಳಬೇಕಲ್ಲ. ನಮ್ಮ ದಿನನಿತ್ಯದ ಯೋಗಾಭ್ಯಾಸ, ಧ್ಯಾನ, ವಾಕಿಂಗ್ ಇತ್ಯಾದಿ ಮಾಡಬೇಕಲ್ಲ. ಆಮೇಲೆ ನಿನಗೆ ಅಡುಗೆಗೆ ತರಕಾರಿ ಹೆಚ್ಚಿ ಕೊಟ್ಟು ,ಮತ್ತೆ ಕೆಲವು ಮನೆ ಕೆಲಸದ ಸಹಾಯ ಮಾಡಬೇಕಲ್ಲ ಅಂತ ಚಂದ್ರು ಹೇಳಿದಾಗ ನಿರಾಳವಾದ ನಿಟ್ಟುಸಿರು ಬಿಟ್ಟು, ಗಂಡನೆಡೆಗೆ ಪ್ರೀತಿ ಬೆರೆತ ಹೆಮ್ಮೆಯಿಂದ ನೋಡಿದಳು. ರಜನಿಗೆ ಪ್ರಿಯವಾದ “ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು, ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ ಜೀವನಾ ಸಾಗದು.. ಪಾವನಾ ಆಗದೂ” ಎಂದು ಗಂಡ ಚಂದ್ರು ಹಾಡುತ್ತಿದುದನ್ನು ಕೇಳಿ ಸಂತಸ ಪಡುತ್ತಾ…ದಿನಚರಿಯ ಕೆಲಸಗಳಿಗೆ ತೊಡಗಿದಳು ರಜನಿ.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ