ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪರಿವರ್ತನೆ

ಸುಮನಾ
ಇತ್ತೀಚಿನ ಬರಹಗಳು: ಸುಮನಾ (ಎಲ್ಲವನ್ನು ಓದಿ)

೧೯೬೫ರ ಮಳೆಗಾಲದ ಒಂದು ದಿನ. ಬೆಳಗಿನಿಂದ ಒಂದೇ ಸಮನೆ ಕೆಲಸ ಮಾಡಿ ಧಾರಿಣಿ ಗೆ ಆಯಾಸವೆನಿಸುತ್ತಿತ್ತು. ಮಳೆ ಬೇರೆ ಭೋರೆಂದು ‌‌‌‌‌‌ಸುರಿಯುತ್ತಿತ್ತು. ಕರೆಂಟ್ ಕೂಡ ಇಲ್ಲ ಯಾವಾಗ ಬರುತ್ತೋ, ಪಕ್ಕದ ಬೀದಿಯ ಮನೆಗಳಲ್ಲಿ ಕರೆಂಟ್ ಇದೆಯಂತೆ ಮಗ ಹೇಳುತ್ತಿದ್ದ. ಆದಷ್ಟು ಬೇಗ ಬಂದರೆ ವಾಸಿ, ಮಕ್ಕಳು ಓದಿಕೊಳ್ಳುವುದಿದೆ‌‌, ಮುುಂಬರುವ ಪರೀಕ್ಷೆ ಬೇರೆ ಇದೆ.‌. ರಾತ್ರಿಗೆ ಅಡಿಗೆಗೆ ಏನು ಮಾಡಬೇಕು ಎಂದು ಯೋಚಿಸುತ್ತಾ, ತಿಂಗಳ ಕಡೆ ಬೇರೆ, ಸಾಮಾನುಗಳು ಆಗಿ ‌‌‌ಹೋಗಿದೆ.. ಸದ್ಯ ಮುಂದಿನ ತಿಂಗಳಿಂದ ಗುಮಾಸ್ತರುಗಳಿಗೆ ಸಂಬಳ ಸ್ವಲ್ಪ ಹೆಚ್ಚುತ್ತದೆಯಂತೆ. ಇವರಿಗೂ ಸ್ವಲ್ಪ ಸಂಬಳ ಹೆಚ್ಚುತ್ತದಂತೆ ಅಂತ ಮನಸ್ಸಿಗೆ ಸ್ವಲ್ಪ ಸಮಾಧಾನ ತಂದುಕೊಂಡು, ಬೆಳಗ್ಗೆಯ ಅನ್ನ ಸ್ವಲ್ಪ ಮಿಕ್ಕಿ ದೆ. ಜೊತೆಗೆ ಅಷ್ಟು ಉಪ್ಪಿಟ್ಟು ಮಾಡೋಣ ಅಂದುಕೊಂಡು, ಡಬ್ಬಿ ಮುಚ್ಚಳ ತೆಗೆದು ನೋಡಿದ್ರೆ ರವೇನೂ ಇಲ್ಲ. ಎರಡನೇ ಮಗನನ್ನು ಕರೆದು ಹೋಗಪ್ಪ ಕಿಟ್ಟ, ಪಕ್ಕದ ರಸ್ತೆಯ ಶೆಟ್ರ ಅಂಗಡೀಲಿ ಒಂದು ಕೆ.ಜಿ ರವೆ, ಅರ್ಧ ಕೆ.ಜಿ. ಈರುಳ್ಳಿ, ನಾಲ್ಕಾಣೆ ಹಸಿ ಮೆಣಸಿನ ಕಾಯಿ ತೊಗೊಂಡು ಬಾ ಎಂದು ಚಿಕ್ಕ ಡಬ್ಬಿಯಲ್ಲಿ ಇಟ್ಟಿದ್ದ ರೂಪಾಯಿಗಳನ್ನು ಜೋಡಿಸಿ ಕೊಟ್ಟಳು. ಅಮ್ಮ ಮಳೆ ಬರುತ್ತಾ ಇದೆ. ರಸ್ತೆ ಕೊಚ್ಚೆಯಾಗಿರುತ್ತೆ. ಅಣ್ಣನನ್ನು ಕಳಿಸಿ, ಅವನಾದ್ರೆ ಅವನ ಗೆಳೆಯನ ಸೈಕಲ್ ನಲ್ಲಿ ಹೋಗಿ ಬರ್ತಾನೆ ಅಂತ ಅಂದ ಮಗನಿಗೆ, ಅವನು ಪಕ್ಕದ ಬೀದಿಯ ವೆಂಕಟಯ್ಯನ ಮನೆ ಮಕ್ಕಳಿಗೆ ಪಾಠ ಹೇಳ್ತಾ ಇದಾನೆ, ನಿನ್ನ ಅಕ್ಕಂದಿರು ಕೂಡಾ ಅಲ್ಲೇ ಓದಿಕೊಳ್ಳುತ್ತಿದ್ದಾರೆ. ತಂಗಿ ಈಗ ಅಲ್ಲಿಗೆ ಹೊರಡುತ್ತಿದ್ದಾಳೆ. ನೀನೇ ಹೋಗಿ ತಂದುಕೊಡು, ಆಮೇಲೆ ಅಣ್ಣನ ಬಳಿ ನೀನೂ ಪಾಠಕ್ಕೆ ಹೋಗುವೆಯಂತೆ, ಆಗಲೇ ಲೇಟ್ ಆಗುತ್ತಿದೆ ಇನ್ನು ಅಪ್ಪ ಬರುವ ಟೈಂ ಆಗುತ್ತಿದೆ. ಹಸಿದು ಬರ್ತಾರೆ, ಸಿಕ್ಕಾಪಟ್ಟೆ ಕೋಪ ಬೇರೆ.. ನಿಂಗೇ ಗೊತ್ತಲ್ಲ ಅಂತ ಹೇಳಿ ಸುಮಾರಾಗಿ ಇದ್ದ ಛತ್ರಿಯನ್ನು ಕೊಟ್ಟು ಕಳಿಸಿದಳು. ಪಾಠಕ್ಕೆ ಹೊರಡುತ್ತ ಇದ್ದ ಮಗಳು ಅಂದಳು ಅಮ್ಮಾ ಏನೇ ಸಿಟ್ಟು ಬಂದರೂ ಅಪ್ಪನ ಮನಸ್ಸು ಮೃದು ಅಲ್ವಾ ಅಮ್ಮ ಎಂದಳು. ಹೌದು ಎಂಬಂತೆ ತಲೆಯಾಡಿಸಿದಳು ಧಾರಿಣಿ. ಮಗಳು ಸರಿ ಅಮ್ಮಾ, ನಾನು ಹೊರಟೆ. ಅಣ್ಣ ಪಾಠಕ್ಕೆ ಬರುವಾಗ ಛತ್ರಿ ಕೊಟ್ಟು ಕಳಿಸಿ, ಮಳೆ ಈಗ ಸ್ವಲ್ಪ ನಿಂತಂತೆ ಕಾಣುತ್ತೆ, ಆದರೂ ಹೇಳೋಕಾಗಲ್ಲ ಎಂದು ಹೇಳಿ ಹೊರಟಳು.

ಆಗಲೇ ಗಂಡನೂ ಮಳೇಲಿ ನೆನೆದು ಬಂದು ಹಸಿವಾಗ್ತಾ ಇದೆ ಅಡುಗೆ ಆಯ್ತಾ ಅಂತ ಕೂಗಾಡಲು ಆರಂಭಿಸುತ್ತಿರುವಾಗಲೇ ಆಯ್ತು ರೀ…ಇನ್ನೇನು ಅಂಗಡಿಗೆ ಹೋಗಿರುವ ಕಿಟ್ಟ ಬರುವ ಸಮಯ. ಬಂದ ತಕ್ಷಣ ಉಪ್ಪಿಟ್ಟು ಮಾಡ್ತೀನಿ ಅಂತ ಮಗ ಬರುವ ದಾರಿ ನೋಡ್ತಾ ಇದ್ದಳು. ಮಗನೂ ಛತ್ರಿ ಇದ್ದರೂ ಜೋರು ಮಳೆಯಲ್ಲಿ ಅರ್ಧಂಬರ್ಧ ನೆನೆದು ಬಂದ‌‌. ರವೆ ಪೊಟ್ಟಣ ಹಾಗೂ ಇನ್ನಿತರ ಸಾಮಾನುಗಳಿದ್ದ ಕೈ ಚೀಲವನ್ನು ಅಮ್ಮನ ಕೈಗೆ ಕೊಟ್ಟು, ನೆಂದಿದ್ದ ಅವನ ತಲೆ ಮೈ ಕೈ ಒರೆಸಿಕೊಂಡು ಪಾಠಕ್ಕೆ ಹೊರಡಲುತಯಾರಾಗುತ್ತಿದ್ದ. ಇತ್ತ ಧಾರಿಣಿ ಚೀಲದಲ್ಲಿ ಮಿಕ್ಕ ಚಿಲ್ಲರೆ ಎಂಟಾಣೆ ಜೊತೆಗೆ ಇನ್ನೂ ಹತ್ತು ಪೈಸೆ ಇರಬೇಕಲ್ಲ ಅಂತ ಕೈ ಚೀಲದಲ್ಲಿ ಹುಡುಕುತ್ತಿದ್ದವಳಿಗೆ ಚಿಲ್ಲರೆ ಸಿಗಲಿಲ್ಲ. ಇನ್ನೂ ಆಗಲಿಲ್ವೇ ಉಪ್ಪಿಟ್ಟು ಅಂತ ಗಂಡ ಕಿರುಚಿದ್ದು ಕೇಳಿ ಆಯ್ತು ರೀ.. ಚಿಲ್ಲರೆ ಹುಡುಕುತ್ತಿದ್ದೆ ‌‌ಅಂದವಳನ್ನು ಯಾವ ಚಿಲ್ರೆ ? ಕೃಷ್ಣ (ಅಪ್ಪ ಮಗನನ್ನು ಹಾಗೇ ಕರೆಯುತ್ತಿದ್ದುದು) ಸರಿಯಾಗಿ ಎಣಿಸಿ ತರಲಿಲ್ವೇ ಅಂತ ಮಗನನ್ನು ಕರೆದು ಕೇಳಿದಾಗ ಅಂಗಡಿಯವರು ಕೊಟ್ಟಂತೆ ತಂದಿದೀನಿ ಅಂದ ಕಿಟ್ಟ. ಅಂಗಡಿಯವ್ರು ಕೊಟ್ಟರೆ ಚೀಲದಲ್ಲಿ ಇರಬೇಕಲ್ಲ ನಿಮ್ಮಮ್ಮ ಕಾಣಿಸ್ತಿಲ್ಲ ಅಂತಾ ಇದಾಳೆ. ಹಾಗಾದರೆ ಮಿಕ್ಕ ಚಿಲ್ಲರೆ ಎಲ್ಲಿ? ನೀನೇ ತೊಗೊಂಡು ಸುಳ್ಳು ಹೇಳ್ತಿದೀಯಾ ಅಂತ ಅಲ್ಲೇ ಕೈಗೆ ಸಿಕ್ಕ ಕೋಲಿನಿಂದ ಹೊಡೆಯಲು ಆರಂಭಿಸಿ, ಈಗಲೇ ಅಮ್ಮನಿಗೆ ಆ ಹಣ ಕೊಟ್ಟು ಬಿಡು ಅಂದರು ಅಪ್ಪ. ಅಪ್ಪಾ ನಂಗೆ ಗೊತ್ತಿಲ್ಲ ಅಂತ ಅಳುತ್ತಲೇ ಅಂದ. ಮಗನ ಅಂಗಿ ನಿಕ್ಕರ್ ಜೇಬುಗಳೆಲ್ಲವನ್ನೂ ನೋಡಿದರು. ಕಾಸು ಏನೂಸಿಗಲಿಲ್ಲ. ತಾರಾಮಾರಾ ಹೊಡೆದರು. ತಡೆಯಲು ಬಂದ ಹೆಂಡತಿಯನ್ನೂ ನೀನು ಮಧ್ಯ ಬರಬೇಡ ಮೊದಲು ಅಡುಗೆ ಕಡೆ ನೋಡು ನಂಗೆ ವಿಪರೀತ ಹಸಿವು ಆಗ್ತಾ ಇದೆ ಅಂತ ಅಂದಾಗ ಬೇಗನೇ ಮಾಡಿ ಬಿಡುತ್ತೇನೆ ಅಂತ ಗಡಿಬಿಡಿಯಲ್ಲಿ ಅಡಿಗೆ ಶುರುಮಾಡಿದಳು ಧಾರಿಣಿ.‌ ಇತ್ತ ಕೋಪದಲ್ಲಿ ಅಪ್ಪ ಮಗನನ್ನು ಪುನಃ ಸಿಕ್ಕಾಪಟ್ಟೆ ಥಳಿಸಿದಾಗ ಕಿಟ್ಟನ ಮೊಣಕೈಗೆ ಕೋಲಿನಿಂದ ತಗುಲಿ ರಕ್ತ ಹರಿದು ಗಾಯವಾಯಿತು.‌‌ ಅದರ ಗಮನವೇ ಇಲ್ಲದಂತೆ ಮಗನನ್ನು ಶಿಕ್ಷಿಸಿ ಮಾಡಿದ ತಪ್ಪು ಒಪ್ಪಿಕೋ ಇಲ್ಲದಿದ್ದರೆ ಈಗಿಂದೀಗಲೇ ಹೊರಗೆ ಕಳಿಸುತ್ತೇನೆ ಎಂದ ಗಂಡನನ್ನು ಪುನಃ ಸಮಾಧಾನಿಸಿದಳು ಧಾರಿಣಿ.‌ ಅಡಿಗೆ ಆಯ್ತು ಬನ್ನಿ ಎಂದು ಕರೆದು, ನೋವು, ಸಂಕಟವನ್ನು ಅನುಭವಿಸುತ್ತಿದ್ದ ಮಗನನ್ನು ಪ್ರೀತಿಯಿಂದ ಊಟಕ್ಕೆ ಕರೆದಳು. ನಂಗೆ ಊಟ ಬೇಡಮ್ಮ ಅಂತ ಅಂದವನನ್ನು ಸಮಾಧಾನಪಡಿಸುತ್ತಾ ಗಾಯಕ್ಕೆ ಔಷಧಿ ಹಚ್ಚುತ್ತಾ ಹೇಳಿದಳು. ನೋಡು ಮಗು. . ತಪ್ಪು ಮಾಡಿದ್ರೆ ಒಪ್ಪಿಕೊಳ್ಳಲೇಬೇಕಪ್ಪ ಅಂದಳು‌‌ ಅಮ್ಮ.‌ ನಾನು ಯಾವ ಚಿಲ್ಲರೆ ಕಾಸೂ ತಗೊಂಡಿಲ್ಲಮ್ಮ. ಅಪ್ಪ ಯಾಕೆ ಹೀಗೆ ಹೊಡೀತಾರೆ? ಅಂದವನಿಗೆ ಧಾರಿಣಿಯ ಮೌನವೇ ಉತ್ತರ ವಾಯಿತು. ಬಾರಪ್ಪ ನಿನ್ನ ಅಣ್ಣ, ಅಕ್ಕ, ತಂಗಿಯರು ಎಲ್ಲರೂ ಬಂದಾಯಿತು ಅಂತ ಕರೆದು ಎಲ್ಲರ ತಟ್ಟೆಗೆ ಆಗ ತಾನೇ ಮಾಡಿದ್ದ ಉಪ್ಪಿಟ್ಟು, ಬೆಳಿಗ್ಗೆ ಮಿಕ್ಕಿದ್ದ ಅನ್ನಕ್ಕೆ ಮಜ್ಜಿಗೆ ಹಾಕಿ ಕಲೆಸಿ, ಎಲ್ಲರ ತಟ್ಟೆಗೂ ಹಂಚಿದಳು. ಅಪ್ಪ ಇದ್ದಾಗ ಎಲ್ಲರೂ ಎಂದಿನಂತೆ ಮೌನ‌‌.

ಅಳುತ್ತಲೇ ಕಿಟ್ಟ ಎರಡು ತುತ್ತು ತಿಂದಿರಬಹುದು‌‌. ಮೂರನೇ ಬಾರಿಗೆ ತಿನ್ನಲೆಂದು ತಟ್ಟೆಗೆ ಕೈ ಹಾಕಿದವನಿಗೆ ಕೈಗೆ ಗಟ್ಟಿ ವಸ್ತು ಸಿಕ್ಕಿದಂತಾಗಿ ನೋಡಿದರೆ ಅಪ್ಪ ಕೇಳಿದ್ದ ಹತ್ತು ಪೈಸೆ‌‌!! ತನ್ನ ಕಣ್ಣುಗಳನ್ನು ತಾನೇ ನಂಬಲಾಗದೆ ಆಶ್ಚರ್ಯಚಕಿತನಾದ. ಅಪ್ಪಾ!!!ಇಲ್ನೋಡಿ, ನೀವು ಕೇಳ್ತಿದ್ದ ಚಿಲ್ಲರೆ ಕಾಸು ಹತ್ತು ಪೈಸೆ ಇಲ್ಲಿದೆ‌‌‌‌. ಅಳುತ್ತಾ , ದುಃಖಿಸುತ್ತಾ ಹೇಳಿದ‌‌. ಅಮ್ಮ‌,ಅಪ್ಪ,ಅಕ್ಕಂದಿರು, ,ಅಣ್ಣ ತಂಗಿ ಎಲ್ಲರೂ ಆಶ್ಚರ್ಯದಿಂದ ನೋಡಿದರು.‌‌ ಅಪ್ಪನಿಗೆ ದುಃಖ,ನಾಚಿಕೆ ಎರಡೂ ಆಯಿತು.‌ ನೋಡದೇ ,ಮಾಡದೇ ಮಗನಿಗೆ ವೃಥಾ ಸಿಕ್ಕಾಪಟ್ಟೆ ಹೊಡೆದುಬಿಟ್ಟೆನಲ್ಲ ಅಂತ ಬೇಸರವೂ ಆಯಿತು. ಅಮ್ಮ ಅಂದುಕೊಂಡಳು‌‌; ಛೇ ಅವಸರದಲ್ಲಿ, ಕತ್ತಲೆಯ‌ಲ್ಲಿ ದೀಪದ ಬುಡ್ಡಿಯ ಮಿಣಕು ಬೆಳಕಿನಲ್ಲಿ ಗಡಿಬಿಡಿಯಲ್ಲಿ ಅಡುಗೆ, ಮಾಡಿದಾಗ ಬಹುಶಃ ರವೆಯಲ್ಲಿ ಸೇರಿದ್ದ ಹತ್ತು ಪೈಸೆ ಕಣ್ಣಿಗೆ ಕಾಣಿಸದೆ ಎಂಥಾ ಆಭಾಸವಾಯಿತು. ನಾನೂ ಸರಿಯಾಗಿ ನೋಡಬೇಕಿತ್ತು, ನನ್ನಿಂದ ಮಗನೂ ಅನ್ಯಾಯವಾಗಿ ಏಟು ತಿನ್ನುವಂತಾಯಿತು‌‌‌ ಎಂದು ಮನದಲ್ಲೇ ದುಃಖವನ್ನು ತಡೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ದುಃಖಿಸುತ್ತಿದ್ದ ಧಾರಿಣಿಯನ್ನು ಗಂಡ ಸಮಾಧಾನ ಮಾಡಿ, ನನ್ನದೂ ತಪ್ಪಾಯಿತು ನಾನೂ ಹೀಗೆ ಮೃಗದಂತೆ ವರ್ತಿಸಬಾರದಿತ್ತು ಎಂದು ಮಗನತ್ತ ನೋಡುತ್ತಾ, ಕೃಷ್ಣಾ ನನ್ನ ನ್ನು ಕ್ಷಮಿಸು ಮಗು ಎಂದ. ಕೋಪದಲ್ಲಿ ಎಂಥಹ ಅನರ್ಥವಾಗುತ್ತದೆ, ನಿನಗೆ ಈ ಹತ್ತು ಪೈಸೆ ಈಗ ಸಿಗದೇ ಇದ್ದಿದ್ದರೆ ಇನ್ನು ನಿನ್ನ ಗಂಟಲಿಗೆ ಸಿಕ್ಕಿಕೊಂಡು ಮುಂದೆ ಏನೇನು ಗ್ರಹಚಾರ ಕಾದಿತ್ತೋ, ಎಂಥ ದುಃಖ ಅನುಭವಿಸಬೇಕಿತ್ತೋ, ಭಗವಂತಾ.. ನನ್ನ ಕೆಟ್ಟ ಕೋಪವೇ ಇದಕ್ಕೆ ಕಾರಣ. ಇನ್ನು ಮುಂದೆ ಈ ರೀತಿಯ ಅನರ್ಥವಾಗದಂತೆ ನೋಡಿಕೊಳ್ಳುತ್ತೇನೆ. ನನ್ನನ್ನು ನಾನು ಸುಧಾರಣೆಯ ದಾರಿಯಲ್ಲಿ ತೊಡಗಿಸಿಕೊಳ್ಳುತ್ತೇನೆ ಇದು “ನನ್ನ ಪ್ರಾಮಿಸ್ “ಅಂದಾಗ ಕಿಟ್ಟ ಸಂತಸಗೊಂಡ. ಅಮ್ಮನ ಜೊತೆಗೆ ಮಿಕ್ಕ ಮಕ್ಕಳೆಲ್ಲರಿಗೆ ಅಪರಿಮಿತ ಆನಂದವಾಗಿ ಕಿಟ್ಟನ ಮೇಲಿನ ಪ್ರೀತಿ ಅಪ್ಪನ ಬಗ್ಗೆ ಗೌರವ ಇಮ್ಮಡಿಸಿತು.