- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಗಾಂಧೀವಾದ ಇಂದಿಗೆ ಪ್ರಸ್ತುತವೇ ಎನ್ನುವ ಪ್ರಶ್ನೆಯನ್ನು ಚರ್ಚೆಗೆ ಒಡ್ಡುವ ಮುನ್ನ ಗಾಂಧೀವಾದ ಏನು ಎನ್ನುವುದು ತಿಳಿಯಲು ಪ್ರಯತ್ನಿಸೋಣ. ಸ್ವತಃ ಗಾಂಧೀಯವರೇ ಹೇಳಿದಹಾಗೆ “ ಗಾಂಧೀವಾದ ಅಥವಾ ತತ್ವ ಎಂಬುದಿಲ್ಲ. ನಾನು ಯಾವ ಹೊಸ ಸಿದ್ಧಾಂತವನ್ನು ಕಂಡು ಹಿಡಿದಿಲ್ಲ. ಶಾಶ್ವತವಾದ ಸತ್ಯವನ್ನು ನಮ್ಮ ದೈನಂದಿನ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅನುಸರಿಸುತ್ತಿದ್ದೇನೆ ಅಷ್ಟೇ. ಸತ್ಯ ಮತ್ತು ಅಹಿಂಸೆಗಳು ಗುಡ್ಡ ಮತ್ತು ಬೆಟ್ಟಗಳಷ್ಟೇ ಹಳೆಯವು.“ ಎಂದಿದ್ದಾರೆ. ಹಾಗಾದರೆ ಅವರು ಅನುಸರಿಸಿದ ಸತ್ಯ, ಅಹಿಂಸೆ, ಸತ್ಯಾಗ್ರಹ ಇವುಗಳನ್ನು ಗಾಂಧಿಯವರಿಗೆ ಆಪಾದಿಸಿ ಅವುಗಳನ್ನು ಗಾಂಧೀವಾದ ಎನ್ನುವುದೇಕೆ. ಉತ್ತರ ಇಷ್ಟೇ. ಬುದ್ಧನ ನಂತರ ಗಾಂಧೀಯವರೆ “ಅಹಿಂಸಾ ಪರಮೋಧರ್ಮಃ “ ಎಂದು ನಂಬಿ ಅದನ್ನು ಆಚರಿಸುತ್ತಾ ಇತರರಿಗೆ ಆಚರಿಸಲು ಹೇಳಿದವರು. ಅವರು ಹೇಳಿದ್ದಾರೆ. “ನಾನು ತಪ್ಪುಗಳು ಮಾಡಿಲ್ಲ ಅಂತಲ್ಲ. ಆದರೆ ಆ ತಪ್ಪುಗಳಿಂದ ಕಲಿತು ಮತ್ತೆ ಮಾಡದಂತೆ ನೋಡಿಕೊಂಡಿದ್ದೇನೆ” ಅಂತ. ’ ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರೂತ್’ ಪುಸ್ತಕದಲ್ಲಿ ಅವರು ಸತ್ಯವನ್ನೇ ಹೇಳುವ ಪ್ರಯತ್ನಗಳನ್ನು ವಿವರಿಸಿದ್ದಾರೆ. ಅವರ ವ್ಯಕ್ತಿತ್ವ ನಮಗೆ ಕಾಣುವುದು ಇದರಲ್ಲೇ.
ಅವರ ವೈಯಕ್ತಿಕ ಜೀವನದ ಕೆಲವಾರು ಲೋಪ ದೋಷಗಳು ಇತ್ತೀಚಿನ ಸಾಮಾಜಿಕ ತಾಣಗಳಲ್ಲಿ ಚರ್ಚೆಗೊಳಗಾಗಿದ್ದು ಅವರೇನೂ ಅಷ್ಟು ಮಹಾನ್ ವ್ಯಕ್ತಿ ಅಲ್ಲ, ಅನಕರಣೀಯರಲ್ಲ ಎನ್ನುವ ತುಂಬಾ ಸಂದೇಶ ಕಾಣಬಹುದು. ಅದೂ ಅವರ ಜಯಂತಿಯ ದಿನ ಇದರ ಮಟ್ಟ ತಾರಕ್ಕೇರಿದರೂ ಅಚ್ಚರಿ ಇಲ್ಲ. ಇತ್ತೀಚೆಗೆ ಅವರನ್ನು ಹತ್ಯೆ ಗೈದ ನಾಥೂರಮ್ ಗೋಡ್ಸೆಯವರ ಸಮರ್ಥಕರು ಸಹ ತಯಾರಾಗಿ ಗಾಂಧಿಯವರ್ ಪಟಕ್ಕೆ ಗುಂಡಿಟ್ಟು ಹೊಡೆಯವ ವಿಡಿಯೋ ಸಹ ಕಂಡಿದೆ. ಆದರೆ ಒಂದಿದೆ. ಇವ್ಯಾವೂ ಅವರು ಮಾಡಿದ ಮಹತ್ಕಾರ್ಯವಾದ ಭಾರತದ ಸಂಘಟನೆ, ಆಂಗ್ಲರ ಉಚ್ಚಾಟನೆ, ಜಗತ್ತಿಗೇ ಒಬ್ಬ ಮಾದಿರಿಯಾದ ಒಂದು ಚೇತನವಾಗಿ ಉಳಿದ ವ್ಯಕ್ತಿತ್ವಕ್ಕ ಕುಂದು ತರಲಾರವು ಎಂದು ನನ್ನ ಭಾವನೆ.
ನಾನು “ಗಾಂಧಿ” ಚಿತ್ರ ನೋಡುತ್ತಿದ್ದೆ. ಅದಕ್ಕೂಮುಂಚೆ ನಾನು ಸಹ ಗಾಂಧಿಯವರ ಬಗ್ಗೆ ಅಷ್ಟೇನೂ ಹಿತವಾದ ಅಭಿಪ್ರಾಯವಿಟ್ಟಿರಲಿಲ್ಲ. ಎಲ್ಲೋ ಅಸಮಾಧಾನ ಹೊಗೆಯಾಡುತ್ತಿತ್ತು. ಆ ಚಿತ್ರದಲ್ಲಿಯ ಒಂದು ಸನ್ನಿವೇಶದಲ್ಲಿ ಗಾಂಧೀಯವರ ಪ್ರೇರಣೆಯ ಮೇರೆಗೆ, ಬಹುಶಃ ಅಸಹಕಾರ ಚಳುವಳಿ ಇರಬಹುದು, ಸ್ವಯಂ ಸೇವಕರು ಇಬ್ಬಿಬ್ಬರಾಗಿ ಸಾಲಿನಲ್ಲಿ ನಿಂತು ಬ್ರಿಟಿಷ್ ಅಧಿಕಾರಿಗಳನ್ನು ಧಿಕ್ಕರಿಸುತ್ತಾರೆ. ಸಾಲಿನ ಮೊದಲಿಗರಿಗೆ ಲಾಠಿ ಪೆಟ್ಟು ಬೀಳುತ್ತದೆ. ಅವರು ಉರುಳುತ್ತಾರೆ. ಅವರ ಗಾಯಗಳಿಗೆ ಉಪಚರ್ಯೆ ಮಾಡಲು ಹೆಂಗಸರು ತಯಾರಿರುತ್ತಾರೆ. ಮತ್ತೆ ಇಬ್ಬರು ಮುಂದಾಗುತ್ತಾರೆ. ಪೆಟ್ಟು ತಿನ್ನುತ್ತಾರೆ, ಉರುಳುತ್ತಾರೆ. ಹೀಗೇ ಇಬ್ಬಿಬ್ಬರಾಗಿ ಮುಂದೆ ಬರುತ್ತಾ ಹೋಗುತ್ತಾರೆ. ಇಲ್ಲಿ ಗಮನಿಸ ಬೇಕಾದ್ದು ಅಥವಾ ನನ್ನ ಕದಡಿದ್ದು ತಮ್ಮ ಮುಂದಿನವರು ಪೆಟ್ಟು ತಿನ್ನುವುದನ್ನು ನೋಡಿ ಸಾಧಾರಣವಾಗಿ ಓಡುವವರೇ ಜಾಸ್ತಿ ಇರುವಂಥಾ ಸನ್ನಿವೇಶದಲ್ಲೂ ಇಬ್ಬಿಬ್ಬರು ಮುಂದೆ ಹೋಗಿ ಪೆಟ್ಟು ತಿನ್ನ ಬೇಕಾದರೆ ಆ ಮನಃಸ್ಥಿತಿಯ ಹಿಂದೆ ಬರೀ ದೇಶಭಕ್ತಿಯಷ್ಟೇ ಅಲ್ಲ, ಮತ್ತೇನೋ ಪ್ರೇರಕ ಶಕ್ತಿ ಇರಬೇಕು ಅನಿಸಿತ್ತು. ಅದೇ ಗಾಂಧೀ ವಾದ ಎನ್ನ ಬಹುದು. ಅದನ್ನು ನೋಡಿದ ಆಂಗ್ಲರ ಪತ್ರಿಕಾ ವಿಲೇಖರಿಯೊಬ್ಬ ಫೋನಿನಲ್ಲಿ ಮಾತಾಡುತ್ತ ಇದೊಂದು ಸೋಜಿಗವೆಂಬಂತೆ ವರ್ಣಿಸುತ್ತಾರೆ. ಇದು ಒಂದು ಮಹಾನ್ ಕಾರ್ಯ.
ಅವರ ಅಹಿಂಸಾವಾದ ಅವರ ಅನುಯಾಯಿಗಳಲ್ಲೇ ಅಷ್ಟು ಇಷ್ಟವಾಗಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳು ಕೊಡುವ ಕಿರುಕುಳವನ್ನು ಸಹಿಸಲಾರದೆ ಕೆಲವಾರು ಸ್ವಾತಂತ್ರ್ಯ ವೀರರು ಹಿಂಸೆಗಿಳಿದರು. ಆದರೆ ಗಾಂಧಿಯವರು ತಮ್ಮ ಹಾದಿಯನ್ನು ಬಿಡಲಿಲ್ಲ. ಕೆಲ ನಾಯಕರು ಅವರ ಹಾದಿಯನ್ನು ತೊರೆದು ಅವರದ್ದೇ ಆದ ಸಿದ್ಧಾಂತದೊಂದಿಗೆ ದೇಶದ ಸ್ವಾತಂತ್ರ್ಯದ ಸಲುವಾಗಿ ಇತರೆ ದೇಶಗಳ ಸಹಾಯ ಪಡೆಯಲು ಮುಂದಾದರು. ಅದರೆ ಅವ್ಯಾವೂ ಇವರನ್ನು ತಾವು ನಂಬಿದ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳ ಹಾದಿಯಿಂದ ಅಳುಗಾಡಿಸಲಿಲ್ಲ. ಇದನ್ನು ಗಾಂಧೀ ವಾದವೆನ್ನ ಬಹುದು. ತಮ್ಮ ಯಾವುದೇ ಬೇಡಿಕೆಯನ್ನು ಸರಕಾರ ಕೇಳದಿದ್ದಲ್ಲಿ ಉಪವಾಸ ಕೈಗೊಂಡು ಅದನ್ನು ಬಗ್ಗುವಂತೆ ಮಾಡುತ್ತಿದ್ದರು. ಅದಕ್ಕೆ ಬ್ರಿಟಿಷ್ ಸರಕಾರ ಹೆದರುತ್ತಿತ್ತು. ಇದರ ಕಾರಣ ಅವರಿಗೆ ಗೊತ್ತಿತ್ತು ಗಾಂಧೀಯವರಿಗೆ ಏನಾದರೂ ಆದರೆ ಜನತೆ ರೊಚ್ಚಿಗೇಳುವುದು ಖಚಿತ ಎಂದು. ಆ ಪರಿಯ ತಮ್ಮ ಛಾಪನ್ನು ಭಾರತದಷ್ಟು ಉದ್ದ ಅಗಲದ ಪ್ರದೇಶದ ಜನತೆಯ ಮೇಲೆ ಬೀರುವುದು ಇದೆಯಲ್ಲ ಅದು ಗಾಂಧೀವಾದ.
ಈ ವಾದ ಇಂದಿಗೂ ಪ್ರಸ್ತುತವೇ ಎನ್ನುವ ಅಂಶವನ್ನು ನೋಡೋಣ. ಮೇಲೆ ಕಾಣುವಂತೆ ಗಾಂಧೀವಾದ ಎನ್ನುವುದು ಎಂದಿಗೂ ಚಿರಾಯುವಾದ ಸತ್ಯ ಮತ್ತು ಅಹಿಂಸೆಗಳ ಸಂಗಮ. ಅದು ಮುಂಚೆಯೂ ಇತ್ತು, ಈಗಲೂ ಇದೆ. ಮುಂದೆ ಸಹ ಇರುತ್ತದೆ. ಆದರೆ ಅವುಗಳನ್ನು ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಪ್ರಸ್ತುತ ಮತ್ತು ಅಪ್ರಸ್ತುತ ಎನ್ನುವುದು ಚರ್ಚಿಸಬೇಕಾಗುತ್ತದೆ. ಇಂದಿಗೂ ಪ್ರಸ್ತುತವೇ ಎನ್ನುವ ಪ್ರಶ್ನೆಯಲ್ಲಿ ಪ್ರಸ್ತುತವಲ್ಲವೇನೋ ಎನ್ನುವ ವ್ಯತಿರೇಕ ಧ್ವನಿ ಕೇಳುತ್ತದೆ. ಅಂದರೆ ನಾವೇ ಸಂಶಯಾಸ್ಪದರಾಗಿದ್ದೇವೆ. ನಮ್ಮವರೇ ಆದ ನಾಯಕರು ಅದನ್ನು ವಿಜಯವಂತವಾಗಿ ಆಚರಣೆಯಲ್ಲಿಟ್ಟಿದ್ದರು ಎನ್ನುವ ಸತ್ಯ ಕಣ್ಣೆದುರಿನಲ್ಲಿದ್ದರೂ ನಾವು ಅದನ್ನು ಆಚರಣೀಯವೆಂದು ಒಪ್ಪಲು ತಯಾರಿಲ್ಲ.
ಯಾವುದೇ ಚಳುವಳಿಯಾಗಲಿ, ವೈಯಕ್ತಿಕ ಮಟ್ಟದಿಂದ ಪ್ರಾರಂಭವಾಗಿ ನಂತರ ಉದ್ಯಮದ ಮಟ್ಟಕ್ಕೆ ಏರಬೇಕು. ಅನುಸರಿಸುವ ಜನರು ನಾಯಕರಲ್ಲಿಯ ಗುಣಗಳ ಬಗ್ಗೆ ನೋಟ ಹರಿಸುತ್ತಾರೆ. ಹಾಗಾಗಿ ಸತ್ಯ, ಅಹಿಂಸೆ, ಸತ್ಯಾಗ್ರಹ ಮೊದಲಾದ ಗಾಂಧೀವಾದದ ಗುಣಗಳನ್ನು ಎಲ್ಲರೂ ವೈಯಕ್ತಿಕ ಮಟ್ಟದಲ್ಲಿ ಆಚರಿಸಿ ತಮ್ಮ ಮನೆಗೆ, ಬೀದಿಗೆ, ಊರಿಗೆ ಕೊನೆಗೆ ದೇಶಕ್ಕೆ ಆದರ್ಶವಾಗ ಬಹುದು. ಆಗ ಗಾಂಧೀವಾದ ಪ್ರಸ್ತುತವೆನಿಸುತ್ತದೆ.
ವಿಶ್ವದ ಸ್ತರದಲ್ಲಿ ನೆಲ್ಸನ್ ಮಂಡೆಲ, ಮಾರ್ಟಿನ್ ಲೂಥರ್ ಕಿಂಗ್, ಅಂಗ್ ಸ್ಯಾನ್ ಸು ಕಿ ಅವರುಗಳೆಲ್ಲಾ ಈ ವಾದವನ್ನೇ ಆದರ್ಶವಾಗಿ ತೊಗೊಂಡು ತಮ್ಮ ದೇಶಗಳ ಮತ್ತು ಜಾತಿಗಳ ಏಳ್ಗೆಗಾಗಿ ದುಡಿದು ಯಶಸ್ಸು ಕಂಡಿದ್ದಾರೆ. ಇತರರಿಗೆ ಕಂಡ ಆದರ್ಶ ನಮಗ್ಯಾಕೆ ಕಾಣುವುದಿಲ್ಲ ? ಗಾಂಧಿಯವರ ಬಗ್ಗೆ ಆಲ್ಬರ್ಟ್ ಐನಸ್ಟೀರ ನುಡಿ ನೆನಪಿಸಿಕೊಳ್ಳಬಹುದು. “ ಮುಂದಿನ ಪೀಳಿಗೆಯ ಮಕ್ಕಳು ಆಶ್ಚರ್ಯ ಪಡುವ ದಿನ ಬರಲಿದೆ. ಇಂತಹಾ ಮನುಷ್ಯ ಭೂಮಿಯ ಮೇಲೆ ನಡೆದಾಡಿರ ಬಹುದೇ ? ಎಂದು.” . ಆ ತರದ ಗೌರವ ಕಂಡ ಗಾಂಧೀವಾದ ನಮಗೇಕೆ ಆಚರಣಾ ಯೋಗ್ಯವೆನಿಸುವುದಿಲ್ಲ? ಸತ್ಯವನ್ನೇ ಹೇಳುವ ಪಣ ತೊಗೊಂಡು ಕೆಲಸ ಮಾಡಿದರೆ ಭ್ರಷ್ಟಾಚಾರಕ್ಕೆ ಸ್ಥಾನವಿರುವುದಿಲ್ಲ. ಮತ್ತೊಬ್ಬರಿಗೆ ಅನಾನುಕೂಲ ಮಾಡದಿರುವುದೇ ಅಹಿಂಸೆ. ಇವೆರಡರಿಂದ ಕೆಲಸವಾಗದಿದ್ದಲ್ಲಿ ಪ್ರತಿಭಟನೆಯ ದಾರಿ ಸತ್ಯಾಗ್ರಹ. ಅದೂ ಸಹ ಅಹಿಂಸಾ ಪದ್ಧತಿಯಲ್ಲೇ. ಯಾವ ತರದ ಆಸ್ತಿ ನಷ್ಟ, ಪ್ರಾಣ ನಷ್ಟವಾಗದ ರೀತಿಯಲ್ಲಿ ಪ್ರತಿಭಟನೆ ತೋರುವುದು ಅಭ್ಯಾಸ ಮಾಡಿದರೆ ಗಾಂಧೀವಾದ ಎಂದಿಗೂ ಪ್ರಸ್ತುತವೇ. ಮತ್ತ ಅನುಕರಣೀಯವೇ.
ಹೆಚ್ಚಿನ ಬರಹಗಳಿಗಾಗಿ
ಗಾಂಧಿ ಎಂಬ ಯುಗ-ಜಗ ಚೇತನ..
ಗಾಂಧಿತಾತ
ಗಾಂಧೀಜಿ ಯವರಿಗೆ…