- ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ - ಅಕ್ಟೋಬರ್ 20, 2024
- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
ಹಿರಿಯ ಮಿತ್ರರಾದ ಶ್ರೀ ಕೆ ಜನಾರ್ದನ ತುಂಗ ಅವರು, ತುಂಬ ಒಳ್ಳೆಯ ಓದುಗ, ಸ್ವತಃ ಒಳ್ಳೆಯ ಲೇಖಕ. ಬ್ಯಾಂಕ್ ಆಫ್ ಬರೋಡದ ನಿವೃತ್ತ ಅಧಿಕಾರಿಯಾದ ಅವರು, ಸಾಹಿತ್ಯ ಹಾಗೂ ಫಿಲಾಸಫಿಯನ್ನು ಆಳವಾಗಿ ಅಧ್ಯಯನ ಮಾಡಿದವರು.
ಡಾ.ಗೋವಿಂದ್ ಹೆಗಡೆ
ನನ್ನ ಸರಣಿ ಕವಿತೆ #ಮಾತು ವಿನ ಮೊದಲ ಕವಿತೆಯ ಬಗ್ಗೆ ಅವರ ಒಳನೋಟಗಳು ಇಲ್ಲಿವೆ.
ಮಾತಿನ ಬಗ್ಗೆ ಬರೆದರೆ ಮೌನದ ಬಗ್ಗೆಯೂ ಬರೆದಂತಾಗುತ್ತದೆಯೇ? ಮಾತಿನಲ್ಲಿ ಮೌನ ವಿದೆಯೇ? ಮೌನದಲ್ಲಿ ಮಾತಿದೆಯೇ? ಸ್ವಲ್ಪ ಯೋಚಿಸಿ ನೋಡಿದರೆ ಇವೆಲ್ಲವೂ ಕೂಡ “ಹೌದು” ಎಂಬ ಉತ್ತರವನ್ನೇ ಕೊಡುತ್ತವೆ. ಹೀಗಾಗಿ ಮಾತಿನ ಬಗ್ಗೆ ಬರೆವ ವ್ಯಾಖ್ಯಾನ ಮೌನದ ವ್ಯಾಖ್ಯಾನವೂ ಆಗಬಹುದು.
ಮೇಲಿನ ಸಾಲುಗಳು ನನ್ನ ಲೇಖನವೊಂದರ ಪ್ರಾರಂಭದ ಸಾಲುಗಳಲ್ಲ. ಡಾ. ಗೋವಿಂದ ಹೆಗಡೆಯವರು ಈ ವರ್ಷದ ಆದಿಯಲ್ಲಿ ವಾಟ್ಸಪ್ ವೇದಿಕೆಯೊಂದರಲ್ಲಿ ಬರೆದ “ಮಾತು” ಸರಣಿ ಕವನಗಳನ್ನು ಅವಲೋಕಿಸಿದಾಗ ನನ್ನಲ್ಲಿ ಮೂಡಿದ ವಿಚಾರಗಳಿವು. ಅತ್ಯಂತ ಮಹತ್ವದ ಈ ಕವಿತಾ ಸರಣಿ ಆ ದಿನಗಳಲ್ಲಿ ವೇದಿಕೆಯ ಇತರ ಸದಸ್ಯರ ಗಮನವನ್ನು ಸೆಳೆಯದಿರಲು ಬಹುಶಃ ವೇದಿಕೆಯಲ್ಲಿ ಪುಂಖಾನುಪುಂಖವಾಗಿ ಪ್ರಕಟವಾಗುತ್ತಿದ್ದ ಇತರ ಜನಪ್ರಿಯ ಬರಹಗಳು ಕಾರಣವಿರಬಹುದು. ಆಗ ನಾನೂ ಕೂಡ “ಚೆನ್ನಾಗಿವೆ” ಎಂದೆನೇ ಹೊರತು ಹೆಚ್ಚಿನ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಉತ್ತಮವಾದ ಕವನವನ್ನು ಮೆಚ್ಚಿದ ಮೇಲೆ ಆ ಬಗ್ಗೆ ನಾಲ್ಕು ಸಾಲು ಬರೆಯದೆ ಇದ್ದರೆ ಅದು ಕವನಕ್ಕೆ ಮಾಡುವ ಅಪಚಾರ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ತಡವಾದರೂ ಈ ನಾಲ್ಕು ಮಾತುಗಳು ಓದುಗರ ಅವಗಾಹನೆಗೆ.
ಸರಣಿಯ ಮೊದಲ ಕವಿತೆಯಲ್ಲಿ ಮಾತು ಮತ್ತು ಮೌನಗಳ ಕಣ್ಣುಮುಚ್ಚಾಲೆಯಾಟದ ಕುರಿತು ಕವಿ ಬರೆಯುತ್ತಾರೆ. ಮಾತು ಮತ್ತು ಮೌನಗಳಲ್ಲಿ ಸಂದೇಶವೇನಾದರೂ ಇರಲೇಬೇಕೆ? ಎಂಬ ಪ್ರಶ್ನೆಯನ್ನು ಕೇಳಿಕೊಂಡು ಮಾತಿನ ಬಗ್ಗೆ ಮಾತಿಗಿಳಿಯುತ್ತಾರೆ ಕವಿ! “ಮಾತಿಗೂ ಇದ್ದೀತು ಬೇಸರ ಆಯಾಸ ಅಥವಾ ಬರೀ ಆಕಳಿಕೆ”. ಮಾತು ಕೂಡ ಒಂದು ಕ್ರಿಯೆ. ಪ್ರತಿಯೊಂದು ಕ್ರಿಯೆಯಿಂದಲೂ ಬಳಲಿಕೆಯಾಗುತ್ತದೆ. ಅದೇ ಕ್ರಿಯೆಯ ಪುನರಾವರ್ತನೆಯಿಂದ ಬೇಸರವೂ ಉಂಟಾಗುತ್ತದೆ. ಬೇಸರ ಹೆಚ್ಚಾದಾಗ ಕ್ರಿಯೆ ಯಾಂತ್ರಿಕವಾಗಿ ಆಕಳಿಕೆ ಬರುವುದು ಸಹಜ. ಆಡಿ ಬಿಟ್ಟ ಮಾತು ಆಡುವವನಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗುತ್ತದೆ. ಮಾತನಾಡುತ್ತ ಆಡುವವನಿಗೆ ಬೇಸರವಾದರೆ ಆ ಬೇಸರ ಮಾತುಗಳಲ್ಲಿ ಹರಿಯುತ್ತದೆ. ಆಡುವವನಿಗೆ ದಣಿವಾದರೆ ಹೊದ್ದು ಮಲಗುತ್ತಾನೆ. ಮಾತುಗಳ ದಣಿವನ್ನು ನಿವಾರಿಸಲು ಮೌನವೇ ಹೊದೆವಸ್ತ್ರ.
ಭಾವಗಳ ಮೊತ್ತವನ್ನು ಅದು ಹೇಗಿದೆಯೋ ಹಾಗೆಯೇ ಹರಿದು ಬಿಡಲು ಮಾತುಗಳಿಗೆ ಸಾಧ್ಯವಿಲ್ಲ. ಮಾತುಗಳಿಗೆ ಜನ್ಮಜಾತ ವೈಕಲ್ಯ. ಇದರ ನಡುವೆಯೂ ಅದು ನಿವೇದಿಸುವುದು ಗೋಳಾಟದಂತೆ ಇರುತ್ತದೆ. ಆದರೆ ಕವಿತೆಯೆಂದರೆ ಕೇವಲ ಮಾತುಗಳಲ್ಲ ಮಾತುಗಳು ಹೊಮ್ಮಿಸುವ ಗೋಳಾಟವಲ್ಲ “ಕವಿತೆಯೆಂದರೆ ಬರಿ ಗೋಳಲ್ಲ”. ಕವಿತೆಗಳಲ್ಲಿ ಮೌನವೂ ಇದೆ. ಕವಿತೆಗಳು ಮೌನವನ್ನು ಹೊದ್ದು ನಿಂತಿರುವ ಮಾತುಗಳು. ಮಾತುಗಳನ್ನು ಆವರಿಸಿರುವ ಮೌನವು ಏನನ್ನೋ ಹೇಳುತ್ತಿರುತ್ತದೆ.
ಈ ಜಗತ್ತು ಅಸಂಗತ ಜಗತ್ತು. ಎಲ್ಲವಕ್ಕೂ ಅರ್ಥವಿದೆ ಎನ್ನಿಸಿದರೂ ಯಾವುದೋ ಕ್ಷಣದಲ್ಲಿ ಯಾವುದಕ್ಕೂ ಅರ್ಥವಿಲ್ಲ ಅನಿಸುತ್ತದೆ. ಜಗತ್ತಿನಲ್ಲಿ ವೈರುಧ್ಯಗಳಿವೆ. ಎಲ್ಲ ವೈರುಧ್ಯಗಳಲ್ಲಿಯೂ ಒಂದು ಸೂತ್ರವಿದೆ. ಒಂದಿಲ್ಲದೆ ಇನ್ನೊಂದಿಲ್ಲ. ಅಸಂಗತಿಗಳಲ್ಲಿಯೂ ಒಂದು ಸೂತ್ರವಿದೆ. ಈ ಜಗತ್ತಿನಲ್ಲಿ ಯಾವುದು ಸರಿ? ಯಾವುದು ತಪ್ಪು? ಈ ತಪ್ಪು ಕೂಡ ಈ ಜಗತ್ತಿನ ಭಾಗವೇ ಆಗಿರುವುದರಿಂದ ಹಾಗೂ ಒಂದೇ ಸೂತ್ರದಲ್ಲಿ ಪೋಣಿಸಿಕೊಂಡಿರುವುದರಿಂದ ತಪ್ಪು ಕೂಡ ಸರಿಯೇನು?
ಇಷ್ಟೆಲ್ಲ ಯೋಚಿಸುತ್ತಾ ಕವಿ ಬಸ್ಸಿನಲ್ಲಿ ಹೊರಟಾಗ ಕಾಣುವ ವಿದ್ಯಮಾನಗಳು ಕವಿಯ ಯೋಚನೆಗಳಿಗೆ ಪೂರಕವಾಗಿ ಒದಗಿ ಬರುತ್ತವೆ. ಅಥವಾ ಈ ವಿದ್ಯಮಾನಗಳೇ ಕವಿಯ ವಿಚಾರಗಳನ್ನು ಪ್ರಚೋದಿಸಿರಬಹುದು.
ಇದು ಮಾತಿನ ಲೋಕ. ದಣಿವಿನ ಲೋಕ. ಮಾತಿನ ಲೋಕದಲ್ಲಿ ಮುಳುಗೆದ್ದು ಹೊರಡುವಾಗ ಪ್ರತಿಯೊಬ್ಬರೂ ದಣಿದಿರುವುದು ಕಾಣಿಸುತ್ತದೆ. ಎಲ್ಲರಿಗೂ ದಣಿವಾರಿಸಿಕೊಳ್ಳಲು ಬೆಚ್ಚನೆಯ ತಾವು ಬೇಕು. ದಣಿದ ಮಾತಿಗೆ ಮೌನದ ಆಸರೆ ಬೇಕು. ಜನರು ಸಂಜೆ ಸೂರ್ಯನನ್ನು ಕಂತಿಸಿ ಕತ್ತಲನ್ನು ಬರಿಸಿಕೊಳ್ಳುತ್ತಾರೆ, ದಣಿವಾರಿಸಿಕೊಳ್ಳುತ್ತಾರೆ. ಮಾತುಗಳು ತಮ್ಮನ್ನು ಕಂತುವ ಸೂರ್ಯನ ಸೌಂದರ್ಯದ ಆಸರೆ ಪಡೆದು ಕೊಳ್ಳುತ್ತ ಮೌನವಾಗುತ್ತವೆ. ಮಾತುಗಳು ಮೌನವಾಗಲು ಸೌಂದರ್ಯ ಬೇಕು.
ಹೀಗೆ ಮೌನ ಆವರಿಸುತ್ತಿರುವಾಗ ಬಸ್ಸಿನ ಹಿಂದಿನ ಸೀಟಿನಲ್ಲಿ ತಾಯಿಯ ಕೈಯಲ್ಲಿದ್ದ ಕೂಸು ರಚ್ಚೆ ಹಿಡಿಯುವ ಶಬ್ದ ಕೇಳಿಬರುತ್ತದೆ ಅಲ್ಲಿ ಮಾತುಗಳಿಲ್ಲ. ಮಾತುಗಳಿಲ್ಲದ ಸ್ಥಿತಿ ಮೌನವೇ? ಆ ಮಗುವಿನ ರಚ್ಚೆಯೂ ಒಂದು ಭಾವವನ್ನು ಒಂದು ಸಂದೇಶವನ್ನು ಹೊರಡಿಸುತ್ತಿರುವುದು ಯಾರಿಗೂ ತಿಳಿಯುತ್ತದೆ. ಅದೊಂದು ಅಚ್ಚರಿ, ಅದೊಂದು ದಿವ್ಯಾನುಭವ, ಮೌನವಾಗಲು ಅಚ್ಚರಿ ಬೇಕು.
ಒಂದು ಕಡೆ ಆ ಮಗುವಿದ್ದರೆ ಇನ್ನೊಂದು ಕಡೆ ಸತತವಾಗಿ ಮಾತನಾಡುತ್ತಿರುವ ಮುದುಕಿ ಒಂದೇ ಗತಿಯಲ್ಲಿ ಪ್ರಯಾಣ ಮಾಡುವುದು ಒಂದು ರೀತಿಯ ಜಡತ್ವ. ಬದುಕು ಕೂಡ ಒಂದೇ ರೀತಿ ಮುಂದುವರಿದರೆ ನೀರಸವಾಗಿರುತ್ತದೆ. ಮರವು ಸ್ಥಿರವಾಗಿರುವುದರಿಂದ ಅದಕ್ಕೆ ವರಲೆ ಹತ್ತುತ್ತದೆ. ಅದನ್ನು ಒಮ್ಮೆ ಅಲ್ಲಾಡಿಸಿದರೆ ವರಲೆ ಉದುರಿಹೋಗುತ್ತದೆ. ಅದೇ ರೀತಿ ಮಾತುಗಳು ಒಂದೇ ರೀತಿ ಪ್ರವಹಿಸುತ್ತಿದ್ದರೆ ಅವಕ್ಕೂ ವರಲೆ ಹತ್ತುತ್ತವೆ, ಅವು ನಿಷ್ಫಲವಾಗುತ್ತವೆ. ಆ ಮುದುಕಿಯ ಮಾತುಗಳೂ ವರಲೆ ಹತ್ತಿದಂತಿದ್ದವು. ಕೇಳುಗ ಮೌನವಾಗಿದ್ದರೆ ಮೌನದಲ್ಲಿ ಮಾತು ಕರಗುತ್ತದೆಯೋ ಮಾತುಗಳಲ್ಲಿ ಮೌನ ಕಲೆಸಿ ಹೋಗುತ್ತದೆಯೇ?
ಈ ಜಗತ್ತಿನ ಪರಿಯೇ ವಿಚಿತ್ರ ಮಾತನಾಡುತ್ತಿದ್ದರೆ “ಆರಾಂ ಮಾಡು, ಆಮೇಲೆ ಮಾತಾಡೋಣವಂತೆ” ಎನ್ನುತ್ತಾರೆ. ನಮ್ಮ ಮಾತು ಅವರಿಗೆ ಬೇಸರ ತರಿಸಿರಬಹುದು, ದಣಿವುಂಟುಮಾಡಿರಬಹುದು. ಹಾಗೆಂದು ಮೌನವಾದರೆ “ಅರೆ ಏನಾಯಿತು” ಎಂದು ಎಲ್ಲರೂ ಆತಂಕದಿಂದ ಕೇಳುತ್ತಾರೆ.
ಮಾತು ಏನೂ ಹೇಳದಿದ್ದುದರಿಂದ ಬೇಸರ ಬಂದು “ಮಾತು ಸಾಕು ಆರಾಂ ಮಾಡು” ಎಂದು ಹೇಳುತ್ತಾರೆ. ಮಾತುಗಳು ಏನನ್ನಾದರೂ ಹೇಳುತ್ತಿರಲೇ ಬೇಕೆ? ಮೌನವೂ ಏನನ್ನೋ ಹೇಳುತ್ತಿದೆಯೆಂದು ಭಾವಿಸುವುದೇಕೆ?
ಓದುಗರಲ್ಲಿ ಹಲವು ವಿಚಾರಗಳನ್ನು ಬಡಿದೆಬ್ಬಿಸುವ ಈ ಕವಿತೆ ಕೆಳಗಿನಂತಿದೆ.
ಮಾತು-೧
ಮಾತು ಏನನ್ನಾದರೂ ಹೇಳುತ್ತಲೇ
ಇರಬೇಕೆಂದು ಯಾರಾದರೂ ಏಕೆ
ಒತ್ತಾಯಿಸಬೇಕು ಪಟ್ಟು ಹಿಡಿಯಬೇಕು
ಮಾತು ಮಾತ್ರವಲ್ಲ ಮೌನ ಕೂಡ
ಮಾತಿಗೂ ಇದ್ದೀತು ಬೇಸರ ಆಯಾಸ
ಅಥವಾ ಬರೀ ಆಕಳಿಕೆ ಮತ್ತು
ಮೌನ ಹೊದ್ದು ಉಸ್ಸೆನ್ನುವ ಕೇವಲ
ಬಯಕೆ
ಈ ಮಾತು ಕೂಡ ಎಷ್ಟು ಅಸಹಾಯ!
ಕುಬ್ಜ ಹೆಳವ ಮತ್ತು ಚೂರು ಕಿವುಡ
ಮತ್ತು ಉಬ್ಬಸ ಪಡುತ್ತ ಅದು
ಹೇಳುವುದೇನನ್ನು? ಬಿಡು,
ಕವಿತೆಯೆಂದರೆ ಬರಿ ಗೋಳಲ್ಲ
ಎಲ್ಲ ಅಸಂಗತತೆಯಲ್ಲಿ ಏನೋ ಸೂತ್ರ
ಅಥವಾ ವಿಪರೀತವೂ ಸರಿಯೇನು
ಯಾರಿಗೆ ಗೊತ್ತು
ಮೊನ್ನೆ ಅಷ್ಟೊಂದು ಮಾತಿನ ಲೋಕದಲ್ಲಿ
ಮುಳುಗಿ ಎದ್ದು ಹೊರಟಾಗ ಊರಿಗೆ
ಊರೇ ಮಾಗಿಯ ಸಂಜೆಗೆ ಮೈಯೊಡ್ಡುತ್ತ
ಮಂಕು ಸೂರ್ಯನ ಮಾತಿಲ್ಲದೆ
ಕಂತಿಸುತ್ತ
ಹಿಂದಿನ ಸೀಟಿನಲ್ಲಿ
ಅಮ್ಮನ ಕೈಯಲ್ಲಿ ಬೆಚ್ಚಗೆ ಮೊಲೆಗೂಸು
ಥಟ್ಟನೆರಗಿ “ಉವ್ವೇ ಉವ್ವೇ” ರಚ್ಚೆ
ಚಕಿತತೆಯಲ್ಲಿ ದಿಟ್ಟಿಸಿ ಮಾತಿಲ್ಲದೆ
ಅದೊಂದು ದಿವ್ಯ
ಆ ಮಗು ಆ ಸಂಜೆ ಆ ಪಯಣ-
ಕ್ಕೆ ಪಕ್ಕಾದ ನನ್ನ ಪಕ್ಕ
ಒರಲೆ ಹತ್ತಿದಂತೆ ಮಾತು ಸೋತಂತೆ
ಆದರೂ ತಾನೇ ಮಾತಾದಂತೆ
ಮುದುಕಿ ತಾಯಿ
ಮಾತು ಮೌನದಲ್ಲಿ ರಮಿಸಿ
ಮೌನ ಮಾತಿನಲ್ಲಿ ಕಲಸಿ
ಮಾತಾದರೆ ‘ಆರಾಂ ಮಾಡು
ಆಮೇಲೆ ಮಾತು’
ಸುಮ್ಮನಾದರೆ “ಅರೇ ಏನಾಯಿತು?”
ಆತಂಕದಲ್ಲಿ
ಮಾತು ಏನಾದರೂ ಹೇಳಲೆಂದು
ಯಾರಾದರೂ ಯಾಕೆ ಒತ್ತಾಯಿಸುತ್ತಾರೆ…
ಡಾ.ಗೋವಿಂದ ಹೆಗಡೆ
೧-೧-೨೦೨೦
ಈ ಮಾತಿನ ಮಾತುಗಳ ನಡುವಣ ಮೌನ ಅನೇಕ ಸಂದೇಶಗಳನ್ನು ನೀಡುತ್ತಿದೆ.
ಈ ಮಾತು ಕೂಡ ಎಷ್ಟು ಅಸಹಾಯ!
ಕವಿತೆಯೆಂದರೆ ಬರಿ ಗೋಳಲ್ಲ
ಮಂಕು ಸೂರ್ಯನ ಮಾತಿಲ್ಲದೆ
ಕಂತಿಸುತ್ತ
ಒರಲೆ ಹತ್ತಿದಂತೆ ಮಾತು ಸೋತಂತೆ
ಆದರೂ ತಾನೇ ಮಾತಾದಂತೆ
ಮಾತು ಮೌನದಲ್ಲಿ ರಮಿಸಿ
ಮೌನ ಮಾತಿನಲ್ಲಿ ಕಲಸಿ
ಮುಂತಾದ ಸಾಲುಗಳು ಮಾತಿಗಿಂತ ಮೌನವನ್ನೇ ಹೆಚ್ಚಾಗಿ ಹಬ್ಬಿಸುತ್ತವೆ.
ಮಂಕು ಸೂರ್ಯನ ಮಾತಿಲ್ಲದೆ ಕಂತಿಸುತ್ತ ಎಂಬ ಸಾಲನ್ನು ಓದುವಾಗ ದಿನದ ಕೆಲಸ ಮುಗಿಸಿ ಸಂಜೆ ಹೊತ್ತು ಕತ್ತಲಾಗುವುದನ್ನೇ ದಿಟ್ಟಿಸುತ್ತಾ ಕುಳಿತು ಕೊಳ್ಳುವ ಶ್ರಮಿಕರ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಇಲ್ಲಿ ಸೂರ್ಯ ಅವನಾಗಿಯೇ ಕಂತುವುದಲ್ಲ, ಇವರು ಕಂತಿಸುತ್ತಿದ್ದಾರೆ! ಕ್ರಿಯೆಯಿಂದ ಉಂಟಾದ ದಣಿವನ್ನು ಪರಿಹರಿಸಿಕೊಳ್ಳುವ ಸ್ವಪ್ರಯತ್ನ.
ಕವನದ ಆಶಯವನ್ನು ನಾನು ಗ್ರಹಿಸಿದ್ದು ಹೀಗೆ. ನಿಮಗೇನನ್ನಿಸುತ್ತದೆ, ನೀವೂ ಬರೆಯಿರಿ. ಆಗ ಕವನ ಸಶರೀರಿಯಾಗಿ ನಮ್ಮ ನಿಮ್ಮ ನಡುವೆ ಸಂಚರಿಸಿ ಶಾಶ್ವತವಾದೀತು.
ಐದೂ ಕವನಗಳ ಕುರಿತು ಒಟ್ಟಾರೆಯಾಗಿ ಬರೆಯಬೇಕೆಂದಿದ್ದೆ. ಆದರೆ ಪ್ರತಿಯೊಂದು ಕವನವೂ ತನ್ನದೇ ಆದ ಅವಕಾಶವನ್ನು ಬೇಡುತ್ತಿದೆ. ನನ್ನ ಮಾತುಗಳಿಗೂ ಒರಲೆ ಹಿಡಿಯುವ ಅಂಜಿಕೆಯಿಂದ ಉಳಿದ ಕವನಗಳ ಬಗ್ಗೆ ಪ್ರತ್ಯೇಕವಾಗಿ ಬರೆಯುತ್ತೇನೆ.
ಕೆ.ಜನಾರ್ಧನ ತುಂಗ
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!