ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚ್ಯಾಪ್‍ಮನ್‍ನ ಹೋಮರನೊಳಕ್ಕೆ ಮೊದಲ ಬಾರಿ ಇಣುಕಿದಾಗ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಚ್ಯಾಪ್‍ಮನ್‍ನ ಹೋಮರನೊಳಕ್ಕೆ ಮೊದಲ ಬಾರಿ ಇಣುಕಿದಾಗ (1816)

ಜಾನ್ ಕೀಟ್ಸ್

ಚಿನ್ನದ ನಾಡುಗಳಲ್ಲಿ ಸಂಚರಿಸಿದ್ದೇನೆ ಸಾಕಷ್ಟು, ಕಂಡಿರುವೆ
ಹಲವಾರು ಉತ್ತಮ ಸಂಸ್ಥಾನಗಳ ಮತ್ತು ಸಾಮ್ರಾಜ್ಯಗಳ;
ಅದೆಷ್ಟೋ ಪಾಶ್ಚಾತ್ಯ ದ್ವೀಪಗಳ ಸುತ್ತಿರುವೆ,
ಕವಿಗಳು ಅಪೋಲೋನ ನಿಷ್ಠೆಯಲಿ ನುತಿಸುವ.

ಹಲವು ಸಲ ಕೇಳಿರುವೆ ಒಂದು ವಿಸ್ತೃತ ಪ್ರದೇಶದ ಕುರಿತು,
ಅದು ಆಳ ಹುಬ್ಬುಗಳ ಹೋಮರನು ಆಳುವ ಸ್ವಂತ ಅಧಿದೇಶ.
ಆದರೂ ನಾನೆಂದೂ ಅದರ ಶುದ್ಧ ಪ್ರಾಂಜಲ ಹವೆಯನ್ನು ಸವಿದದ್ದೆ ಇಲ್ಲ,
ಚ್ಯಾಪ್‍ಮನ್ ಮಾತಾಡುವ ವರೆಗೆ, ಗಟ್ಟಿಗೆ ಮತ್ತು ಧೈರ್ಯದಿಂದ:

ಆಗ ಅನಿಸಿತು ನನಗೆ ಒಬ್ಬ ಆಕಾಶ ವೀಕ್ಷಕನಿಗೆ
ನವೀನ ಗ್ರಹವೊಂದು ದೃಷ್ಟಿಗೆ ಬಂದರೆ ಹೇಗೆ
ಅಥವ ಬಲಿಷ್ಠ ಕೋರ್ಟೆಝ್ ತನ್ನ ಡೇಗೆ ಕಣ್ಣುಗಳಿಂದ
ಶಾಂತ ಸಾಗರವ ದಿಟ್ಟಿಸಿದಾಗ–ಅವನ ಜನವೆಲ್ಲ

ಮುಖ ಮುಖ ನೋಡುತ್ತ ಬೇಕಾಬಟ್ಟೆ ಊಹೆಯೊಂದಿಗೆ–
ನಿಶ್ಶಬ್ದ, ಡೇರಿಯನ್ನ್‍ನಲ್ಲಿ ಒಂದು ಶಿಖರದ ಮೇಲೆ.

ಕನ್ನಡಕ್ಕೆ: ಕೆ.ವಿ. ತಿರುಮಲೇಶ್

ಜಾರ್ಜ್ ಚ್ಯಾಪ್‍ಮನ್ (1559-1634). ಇಂಗ್ಲಿಷ್ ಕವಿ. ಹೋಮರನ ಈಲಿಯಡ್ ಮತ್ತು ಒಡಿಸ್ಸಿಗಳನ್ನು ಇಂಗ್ಲಿಷ್‍ಗೆ ಅನುವಾದಿಸಿದವ.

ಹರ್ನಾಂಡೋ ಕೋರ್ಟೆಝ್ (1485-1547). ಸ್ಪ್ಯಾನಿಶ್ ಯೋಧ, ಭೂಶೋಧಕ, ಮೆಕ್ಸಿಕೋವನ್ನು ಗೆದ್ದವ.

ಡೇರಿಯನ್: ಕೆರಿಬ್ಬಿಯನ್ ಸಮುದ್ರದಲ್ಲಿನ ಒಂದು ಕೊಲ್ಲಿ.

[ಕೀಟ್ಸ್ ಒಮ್ಮೆ ತನ್ನ ಶಾಲಾಮಿತ್ರ ಚಾರ್ಲ್ಸ್ ಕೌಡನ್ ಕ್ಲರ್ಕ್ ಎಂಬವನ ಮನೆಗೆ ಹೋಗಿದ್ದಾಗ ಇಬ್ಬರೂ ಜತೆಯಲ್ಲಿ ಚ್ಯಾಪ್‍ಮನ್ ಅನುವಾದ ಮಾಡಿದ ಹೋಮರನ ಕಾವ್ಯಭಾಗಗಳನ್ನು ಒಟ್ಟಿಗೆ ಓದಿದ್ದರು. ಮಾರನೆ ನಸುಕಿಗೆ ತನ್ನ ಮನೆಗೆ ಹೋದ ಕೀಟ್ಸ್ ಈ ಸಾನೆಟ್ ಬರೆದು ಗೆಳೆಯನಿಗೆ ರವಾನಿಸಿದ. ಕೀಟ್ಸ್ ಗತಿಸಿ ಇದೇ ಫೆಬ್ರವರಿ 23, 2021ಕ್ಕೆ ಇನ್ನೂರು ವರ್ಷ. ಅವನು ರೋಮಿನಲ್ಲಿ ತನ್ನ 25ರ ಎಳೆ ಹರೆಯದಲ್ಲಿ ತೀವ್ರ ಕ್ಷಯ ರೋಗದಿಂದ ತೀರಿಕೊಂಡ.]