- ಜಾನ್ ಡ್ಯೂಯಿ ಚಿಂತನೆಗಳು ಮತ್ತು ಬಾಬಾಸಾಹೇಬ್ - ಏಪ್ರಿಲ್ 14, 2021
ಬಾಬಾಸಾಹೇಬ್ ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್(14 ಏಪ್ರಿಲ್ 1891 – 6 ಡಿಸೆಂಬರ್ 1956) ಅವರ ಜನ್ಮದಿನವಾದ ಇಂದು ಅವರ ಜನಾಳ್ವಿಕೆ ಪರಿಕಲ್ಪನೆಗೆ ಸ್ಫೂರ್ತಿ ನೀಡಿದ ಮಹಾನುಭಾವರೊಬ್ಬರನ್ನು ನೆನೆಯಲೇಬೇಕು. ಅವರೇ ಅಮೆರಿಕದ ತತ್ವಶಾಸ್ತ್ರಜ್ಞ, ಮನೋವಿಜ್ಞಾನಿ, ಹಾಗೂ ಶಿಕ್ಷಣ ಸುಧಾರಕ ಜಾನ್ ಡ್ಯೂಯಿ(ಅಕ್ಟೋಬರ್ 20, 1859 – ಜೂನ್ 1, 1952). ಅಂಬೇಡ್ಕರ್ ಅವರು 1916ರಲ್ಲಿ ಅಮೆರಿಕದ ಪ್ರತಿಷ್ಟಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಅವರ ಪ್ರಾಧ್ಯಾಪಕರಾಗಿದ್ದವರು.
ಡ್ಯೂಯಿಯವರನ್ನು ಸಮಾನತೆ, ಜನಾಳಿಕೆ(democracy)ಯಲ್ಲಿ ನಂಬಿಕೆಯಿರಿಸಿಕೊಂಡಿರುವ ಎಲ್ಲ ಭಾರತೀಯರೂ ನೆನೆಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯನ್ನು ಅನುಸರಿಸುವವರು. ಡ್ಯೂಯಿಯವರ ಚಿಂತನೆ, ವಿಶೇಷವಾಗಿ ಜನಾಳಿಕೆ, ಅಂಬೇಡ್ಕರರನ್ನು ಎಷ್ಟು ಗಾಢವಾಗಿ ಪ್ರಭಾವಿಸಿತೆಂದರೆ, ಡ್ಯೂಯಿಯವರ ಮಾತುಗಳನ್ನು ಅನುಮೋದಿಸುತ್ತಲೇ ಅದನ್ನು ಭಾರತೀಯ ಸಂದರ್ಭಕ್ಕೆ ಅನ್ವಯಿಸುತ್ತ, ವ್ಯಾಖ್ಯಾನಿಸುತ್ತ ಹೋಗುವ ಮೂಲಕ ಇಪ್ಪತ್ತನೇ ಶತಮಾನದ ಪ್ರಮುಖ ತತ್ವಶಾಸ್ತ್ರಜ್ಞರಾಗಿ ಹೊರಹೊಮ್ಮುತ್ತಾರೆ.
ಅಂಬೇಡ್ಕರ್ ಅವರು ಒಮ್ಮೆ ತಮ್ಮ ಗೆಳೆಯರೊಂದಿಗೆ ಹೇಳಿದ್ದರಂತೆ, “ಡ್ಯೂಯಿಯವರು ತೀರಿಕೊಂಡರೆ, ಅವರ ಉಪನ್ಯಾಸದ ಪ್ರತಿ ಸಾಲನ್ನೂ ಅಕ್ಷರಶಃ ಹಾಗೆಯೇ ಬರೆಯಬಲ್ಲೆ” ಎಂದು. ಅಷ್ಟರ ಮಟ್ಟಿಗೆ ಅವರು ಡ್ಯೂಯಿಯವರನ್ನು ಅನುಸರಿಸಿದ್ದರು. ಅನೇಕ ಸಂದರ್ಭಗಳಲ್ಲಿ ಅವರನ್ನು ನೆನೆಸಿಕೊಂಡಿದ್ದರೂ, 1936ರಲ್ಲಿ ಪ್ರಕಟಿಸಿದ Annihilation of Caste(AoC) ಪುಸ್ತಕದಲ್ಲಿ ವಿಶೇಷವಾಗಿ ಸ್ಮರಿಸುವುದನ್ನು ಗಮನಿಸಬಹುದು. ಅದರಲ್ಲೂ, ಡ್ಯೂಯಿಯವರ Democracy and Education ಪುಸ್ತಕದಿಂದ ಉಲ್ಲೇಖಿಸುತ್ತಲೇ ಹೋಗುತ್ತಾರೆ. ಹಾಗಾಗಿ, ಡ್ಯೂಯಿಯವರು ಅಂಬೇಡ್ಕರ್ ಅವರಿಗೆ ಹೇಗೆ ಪ್ರೇರಣೆ ನೀಡಿದ್ದರು ಎಂಬುದನ್ನು ಬರೆದರೆ ಒಂದು ಥೀಸಿಸ್ ಆಗಿಬಿಡುತ್ತದೆ. ಆ ಕೆಲಸವನ್ನು ಯಾರಾದರೂ ಕನ್ನಡದಲ್ಲಿ ಮಾಡುವಂತಾಗಲಿ ಎಂಬ ಆಶಯದಿಂದ ನನ್ನ ಕಿರುಟಿಪ್ಪಣಿಯನ್ನಷ್ಟೇ ಇಲ್ಲಿ ಹಂಚಿಕೊಳ್ಳುವೆ. ಹಾಗೆಯೇ, ನಾನು ಅಂಬೇಡ್ಕರ್ ಚಿಂತನೆಗಳನ್ನಾಧರಿಸಿ ಕನ್ನಡದಲ್ಲಿ ಬರೆಯಬೇಕೆಂದಿರುವ ಪುಸ್ತಕದಲ್ಲಿ ಇದನ್ನು ವಿಸ್ತರಿಸಲು ಸಾಧ್ಯವೇ ಎಂದು ನೋಡುವೆ.
ಡ್ಯೂಯಿಯವರನ್ನು pragmatist ಎಂದು ಗುರುತಿಸಲಾಗುತ್ತದೆ. ಅವರ pragmatism(ಕನ್ನಡದಲ್ಲಿ ಪ್ರಾಯೋಗಿಕ ದೃಷ್ಟಿ ಅಥವಾ ಫಲಪ್ರಮಾಣವಾದ ಎಂದೆಲ್ಲ ಭಾಷಾಂತರಿಸಿದ್ದಾರೆ. ಅದಕ್ಕಿಂತ ಒಳ್ಳೆಯ ಪದ ಗೊತ್ತಿದ್ದರೆ ತಿಳಿಸಿ) ಅನ್ನು “cultural naturalism”(ಸಾಂಸ್ಕೃತಿಕ ಸಹಜವಾದ?) ಎಂದೂ ಕರೆಯಲಾಗುತ್ತದೆ. ಹಾಗೆಂದರೆ, ಡಾರ್ವಿನನ್ನ ಲೋಕನೋಟದ ಪರಿಧಿಯಲ್ಲೇ ತತ್ವಶಾಸ್ತ್ರದ ಪುನಾರಚನೆಯ ವಿಮರ್ಶೆ ಎಂಬುದಾಗಿ ಅರ್ಥಮಾಡಿಕೊಳ್ಳಬಹುದು. ಅದನ್ನು ಮತ್ತಷ್ಟು ಸರಳಗೊಳಿಸಿ ಹೇಳಬಹುದಾದರೆ, ತತ್ವಶಾಸ್ತ್ರವು ಸಂಪೂರ್ಣವಾಗಿ ಬೌದ್ಧಿಕ ಚಟುವಟಿಕೆಯಾಗಿ ದ್ವೈತದಲ್ಲೇ ಸಿಕ್ಕಿಹಾಕಿಕೊಂಡಿದನ್ನು ವಿಮರ್ಶಿಸುತ್ತಲೇ ಅದನ್ನು ಪುನಾರಚಿಸುವ ಕ್ರಮ. ಉದಾಹರಣೆಗೆ, ಮನಸ್ಸು-ದೇಹ, ಪ್ರಕೃತಿ-ಸಂಸ್ಕೃತಿ, ಆತ್ಮ-ಸಮಾಜ, ವಿಚಾರ-ಭಾವನೆ, ಇತ್ಯಾದಿ. ಇವನ್ನು ನಿರಂತರತೆಯಾಗಿ ಯಾಕೆ ನೋಡಬಾರದು ಎನ್ನುವುದು ಡ್ಯೂಯಿಯವರ ಕಾಳಜಿಯಾಗಿತ್ತು. ಮಾನವವ ಚಿಂತನೆಯನ್ನುವುದು ಜಗತ್ತಿನ ಹೊರಗಿನಿಂದ ಬಂದುದಾಗಲಿ, ಹೊರಗಿರುವುದಾಗಲಿ ಅಲ್ಲ. ಅರುಹು ಅನ್ನುವುದು, ಅಂತಿಮವಾಗಿ ಯಾವುದ ನಿಜ ಅಥವಾ ಸತ್ಯ ಎಂಬ ಭ್ರಮೆಯಿಂದ ಪಾರಾಗಲು ರೂಪಿಸಿಕೊಂಡ ವೈಚಾರಿಕ ಪ್ರಕ್ರಿಯೆಯೇನಲ್ಲ. ಒಟ್ಟಾರೆಯಾಗಿ ಆಚರಣೆ-ಸಿದ್ಧಾಂತ-ಆಚರಣೆ ಎಂಬ ಸೂತ್ರದಲ್ಲಿ ಅವರ ಬೌದ್ಧಿಕ ಹಾಗೂ ಶೈಕ್ಷಣಿಕ ಚಿಂತನೆಯನ್ನು ಹಿಡಿದಿಡಬಹುದೇನೋ. ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ಅಮೆರಿಕದ ಪ್ರಮುಖ ಲೋಕಚಿಂತಕರಾಗಿದ್ದ ಡ್ಯೂಯಿಯವರಿಗೆ ಮಾನವ ಸ್ವಾತಂತ್ರ್ಯ, ಶಿಕ್ಷಣ, ಮಹಿಳಾ ಮತದಾನ, ಯುದ್ಧ ಮತ್ತು ಶಾಂತಿ ಮುಂತಾದ ವಿಷಯಗಳು ಪ್ರಮುಖವಾಗಿದ್ದವು. ಇಂದು ಅವರ ಚಿಂತನೆಯನ್ನು ಅನೇಕ ಕ್ಷೇತ್ರಗಳಲ್ಲಿ ಅನ್ವಯಿಸುವುದುಂಟು.
ಪ್ರಸಿದ್ಧ ಸಮಾಜಶಾಸ್ತ್ರಜ್ಞ ಘುರ್ಯೆ ಅವರು 1932ರಲ್ಲಿ Caste and Race in India ಪ್ರಕಟಿಸುವ ಒಂದೂವರೆ ದಶಕದಷ್ಟು ಹಿಂದೆಯೇ ಅಂಬೇಡ್ಕರ್ ಕೊಲಂಬಿಯಾದಲ್ಲಿ ವಿದ್ಯಾರ್ಥಿಯಾಗಿದ್ದಾಗ, ತಮ್ಮ 25ನೇ ವಯಸ್ಸಿನಲ್ಲಿ ಆಂತ್ರೊಪೊಲಜಿ ಸೆಮಿನಾರ್ ನಲ್ಲಿ ಮಂಡಿಸಿದ Castes in India: Their Mechanism, Genesis and Development ಲೇಖನದಲ್ಲಿ ಜಾತಿಯ ಉಗಮದ ಬಗ್ಗೆ ಚರ್ಚಿಸಿದ್ದರು. ಆದರೂ, ಸವರ್ಣೀಯರೇ ತುಂಬಿಕೊಂಡಿದ್ದರಿಂದಲೋ ಏನೋ ಸಮಾಜಶಾಸ್ತ್ರಜ್ಞದಲ್ಲಾಗಲಿ, ಮಾನವಶಾಸ್ತ್ರದಲ್ಲಾಗಲಿ ಅಂಬೇಡ್ಕರ್ ಹೆಸರು ಪ್ರಸ್ತಾಪವಾಗಿದ್ದನ್ನು ನಾವು ತೀರ ಇತ್ತೀಚಿನವರೆಗೂ ಕೇಳೇ ಇರಲಿಲ್ಲ. ಇದಕ್ಕೆ ಇಂಡಿಯಾದಲ್ಲಿ ಮಾನವಶಾಸ್ತ್ರದ ಪಿತಾಮಹರೆಂದು ಗುರುತಿಸಲಾಗುವ ಎಂ. ಎನ್. ಶ್ರೀನಿವಾಸ್ ಆಗಲಿ, ಲೂಯಿ ಡ್ಯೂಮ ಅವರನ್ನೇ ಕಾರಣರನ್ನಾಗಿಸಬೇಕಾಗುತ್ತದೋ ಏನೋ.
ಅಂಬೇಡ್ಕರ್ AoC ನಲ್ಲಿ ಬರೆಯುವುದನ್ನು ಗಮನಿಸಿ: “ಹಿಂದೂಗಳು ತಮ್ಮ ಇಡೀ ಸಾಮಾಜಿಕ ಪರಂಪರೆಯನ್ನು ಸಂರಕ್ಷಿಸಬೇಕೆ ಅಥವಾ ಭವಿತವ್ಯಕ್ಕೆ ಉಪಯುಕ್ತವಾದುದನ್ನು ಮಾತ್ರ ಆಯ್ದು ದಾಟಿಸುವ ಕೆಲಸ ಮಾಡಬೇಕೆ ಎಂಬುದನ್ನು ಪರಿಗಣಿಸಬೇಕು. ನಾನು ತುಂಬ ಋಣಿಯಾಗಿರುವ ನನ್ನ ಗುರುಗಳಾಗಿದ್ದ ಪ್ರೊ. ಜಾನ್ ಡ್ಯೂಯಿಯವರು ಹೇಳಿದ್ದರು. ಪ್ರತಿ ಸಮಾಜವು ಕ್ಷುಲ್ಲಕವಾದುದರ ಋಣಭಾರದಲ್ಲೇ ಬದುಕುತ್ತ, ಗತಕಾಲದ ಸತ್ತಮರದಂತೆ (‘ಗೆದ್ದಲು ಹಿಡಿದ ಮರದಂತೆ’ ಎಂದು ಕನ್ನಡಕ್ಕೆ ಹತ್ತಿರವಾದ ನುಡಿಗಟ್ಟಿನಲ್ಲಿ ಹೇಳಬಹುದೇನೋ)… ಚೆಂದದ ಮುಸುಂಡಿತನದಲ್ಲಿ ಕಳೆದುಹೋಗುತ್ತದೆ. ಸಮಾಜವು ಅರಿವಿನೆಡೆಗೆ ಸಾಗಿದಂತೆಲ್ಲ ಅದು ತನ್ನ ಇಡೀ ಸಾಧನೆಗಳನ್ನೆಲ್ಲ ಸಂರಕ್ಷಿಸಿ, ದಾಟಿಸುವುದಕ್ಕಿಂತ ಸಮಾಜದ ಭವಿತವ್ಯಕ್ಕೆ ಉತ್ತಮವಾದುದನ್ನು ದಾಟಿಸುವ ಜವಾಬ್ದಾರಿಯನ್ನು ಮನಗಾಣುತ್ತದೆ.”
ಅಕ್ಟೋಬರ್ 14ರ ಪೋಸ್ಟ್ ನಲ್ಲಿ ಅಂಬೇಡ್ಕರ್ ಅವರ ಬೌದ್ಧ ಮತಾಂತರದ ಹಿಂದಿನ ಚಿಂತನೆಯ ಬಗ್ಗೆ ಬರೆದಿದ್ದಾಗ, 1935ರಲ್ಲಿ ನಾಸಿಕ್ ನಲ್ಲಿ ನಡೆದ ಸಮಾವೇಶ, ನಂತರ 1936ರಲ್ಲಿ Annihilation of Caste ಪ್ರಕಟಣೆಯ ಬಗ್ಗೆ ಪ್ರಸ್ತಾಪಿಸಿದ್ದೆ. ಅದಕ್ಕೂ ಏಳೆಂಟು ವರ್ಷಗಳ ಹಿಂದೆ 1927ರಲ್ಲಿ ಮಹಾಡ್ ಸತ್ಯಾಗ್ರಹದಲ್ಲಿ ಮಾನವ ಹಕ್ಕುಗಳ ಘೋಷಣೆಯನ್ನು ಜಾರಿಗೊಳಿಸಿ, ನಂತರ ಮನುಸ್ಮೃತಿ ಕೃತಿಯ ಸಾರ್ವಜನಿಕ ದಹನವನ್ನೇ ಗಮನಿಸಿದರೂ ಡ್ಯೂಯಿಯವರು ಹೇಳುವ ಸತ್ತಮರವನ್ನು ಸುಡುವ ಕೆಲಸಕ್ಕೆ ಸಾಂಕೇತಿಕವಾಗಿ ಅಂಬೇಡ್ಕರ್ ಕೈಹಾಕಿದಂತೆಯೇ ಕಾಣುತ್ತದೆ. ಹಾಗೆಯೇ, ಅವರನ್ನು ಜೀವಮಾನವಿಡೀ ಪ್ರಭಾವಿಸಿದ್ದ ಫ್ರೆಂಚ್ ಕ್ರಾಂತಿಯ ಪ್ರಭಾವವನ್ನು ಕೂಡ.
ಗತಕಾಲವನ್ನು ಆರಾಧಿಸುವ ಪ್ರವೃತ್ತಿಯನ್ನು ಹೀಗಳೆಯುವ ಡ್ಯೂಯಿಯವರ ಮಾತುಗಳನ್ನು ಅವರು AoCನಲ್ಲಿ ಬೇರೆ ರೀತಿಯಲ್ಲಿ ಹೇಳುವುದನ್ನು ಗಮನಿಸಬೇಕು.
“ವ್ಯಕ್ತಿ ವರ್ತಮಾನದಲ್ಲಿ ಮಾತ್ರ ಜೀವಿಸಲು ಸಾಧ್ಯ. ವರ್ತಮಾನವೆಂದರೆ, ಭೂತದ ನಂತರ ಬರುವಂತದ್ದಲ್ಲ. ಅದರಿಂತ ಸೃಷ್ಟಿಯಾದದ್ದೂ ಅಲ್ಲ. ತನ್ನ ಹಿಂದೆ ಕಳೆದಿದ್ದನ್ನು ಬಿಡುವಂತದ್ದರಲ್ಲೇ ಜೀವನ ಅಡಗಿದೆ. ಹಿಂದಿನದನ್ನು ಅಧ್ಯಯನ ಮಾಡುವುದರಿಂದ ವರ್ತಮಾನವನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಭೂತದ ಜ್ಞಾನ ವರ್ತಮಾನಕ್ಕೆ ಹರಿದಾಗ ಮಾತ್ರ ಅದಕ್ಕೆ ದೊಡ್ಡ ಮಹತ್ವವಿರುತ್ತದೆ. ಗತದ ಪಳೆಯುಳಿಕೆಗಳು, ದಾಖಲೆಗಳು ಶಿಕ್ಷಣದ ಮುಖ್ಯ ವಸ್ತುವಾಗಿಸುವ ತಪ್ಪೆಸಗುವುದರಿಂದ ಭೂತವು ವರ್ತಮಾನದ ವಿರುದ್ಧವಾಗಿಸಿಬಿಡುತ್ತೇವೆ ಹಾಗೂ ಹೆಚ್ಚುಕಡಿಮೆ ಭೂತದ ನಿರರ್ಥಕವಾದ ಅನುಕರಣೆಯಾಗಿಸಿಬಿಡುತ್ತೇವೆ. “
ಡ್ಯೂಯಿಯವರ ಕೆಲವು ಚಿಂತನೆಗಳನ್ನು ಅಂಬೇಡ್ಕರ್ ಮತ್ತೊಂದು ರೀತಿಯಲ್ಲಿ ಹೇಳುತ್ತಾರಾದಾರೂ, ಅವರ ಸಂದರ್ಭ, ಅವರ ಉದ್ದಿಶ್ಟ ಪ್ರೇಕ್ಷಕರು ಬೇರೆಯಾಗಿರುವ ಕಾರಣ, ಧರ್ಮಶಾಸ್ತ್ರಗ್ರಂಥಗಳನ್ನು ಮಾನ್ಯ ಮಾಡುವುದರ ಟೀಕೆಯಾಗಿರುವುದರಿಂದ ಅದಕ್ಕೆ ಅವರ ಸಂದರ್ಭದಲ್ಲಿ ಇನ್ನಿಲ್ಲದ ಮಹತ್ವ ಒದಗಿಬಿಡುತ್ತದೆ. ಗಾಂಧಿಯವರು ಅಂಬೇಡ್ಕರ್ ಅವರು ವೇದಗಳನ್ನು ಟೀಕಿಸಿದ್ದನ್ನು ಟೀಕಿಸಿದ್ದನ್ನು ಇಲ್ಲಿ ನೆನೆಸಿಕೊಂಡಾಗ ಅದು ಮತ್ತಷ್ಟು ಚೆನ್ನಾಗಿ ಮನದಟ್ಟಾಗುತ್ತದೆ.
ಹಾಗೆಯೇ, ಗಾಂಧಿಯವರು ಭೂತಕ್ಕೆ ಹೋಗಿ ರಾಮನನ್ನ ಆದರ್ಶಪುರುಷನನ್ನಾಗಿಸಿ ‘ರಾಮರಾಜ್ಯ’ವೆಂಬ ಆದರ್ಶ ರಾಜ್ಯದ ಪರಿಕಲ್ಪನೆ ಮಾಡಿಕೊಂಡರೆ, ಆಧುನಿಕತವಾದಿಯಾದ ಅಂಬೇಡ್ಕರ್, ಫ್ರೆಂಚ್ ಕ್ರಾಂತಿಯನ್ನು ಆಧರಿಸಿದ ಜನಾಳಿಕೆಯ ಆದರ್ಶಗಳನ್ನಾಧರಿಸಿದ ಸಮಾಜವನ್ನು ಪರಿಕಲ್ಪಿಸಿಕೊಳ್ಳುವ ಮೂಲಕ ವರ್ತಮಾನಕ್ಕೆ ಸಲ್ಲುತ್ತಾರೆ.
ಅವರು ಹೇಳುತ್ತಾರೆ:
“ನನ್ನನ್ನು ಕೇಳಿದರೆ, ನನ್ನ ಆದರ್ಶವೆಂದರೆ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಆಧರಿಸಿದ ಸಮಾಜ. ಯಾಕಾಗಬಾರದು? ಭ್ರಾತೃತ್ವಕ್ಕೆ ತಕರಾರೆಲ್ಲಿಯದು ನಾನಂತೂ ಏನನ್ನೂ ಕಲ್ಪಿಸಿಕೊಳ್ಳಲಾರೆ. ಆದರ್ಶ ಸಮಾಜವೆಂದರೆ, ಅದು ಚಲನಶೀಲವಾಗಿರಬೇಕು. ಒಂದು ಭಾಗದಲ್ಲಾಗುವ ಬದಲಾವಣೆ ಮತ್ತೊಂದು ಭಾಗಕ್ಕೆ ಹರಿದುಬರಲು ಧಾರೆಗಳಿಂದ ತುಂಬಿಕೊಂಡಿರಬೇಕು. ಆದರ್ಶ ಸಮಾಜವೊಂದರಲ್ಲಿ ಪ್ರಜ್ಞಾಪೂರ್ವಕವಾಗಿ ಸಂವಹನಗೊಳಿಸುವ ಹಾಗೂ ಹಂಚಿಕೊಳ್ಳುವ ಹಲವು ಹಿತಾಸಕ್ತಿಗಳಿರಬೇಕು. ಇತರ ಒಡನಾಟದ ವಿಧಗಳೊಂದಿಗೆ ಮುಕ್ತ ಸಂವಾದದ ಬಿಂದುಗಳನ್ನು ಹೊಂದಿರಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಾಮಾಜಿಕ ಎಂಡೋಸ್ಮಿಸ್ ಇರಬೇಕು. ಜನಾಳಿಕೆಯೆಂದರೆ ಅದು ಕೇವಲ ಸರಕಾರದ ರೂಪವಲ್ಲ. ಅದು ಮೊದಲನೆಯದಾಗಿ ಸಾಮುದಾಯಿಕ ಅನುಭವದ ಸಹಬಾಳ್ವೆಯ ವಿಧಾನ. ಅದು ಸಹಜೀವಿಗಳಿಗೆ ಗೌರವ ಹಾಗೂ ತೋರುವ ಧೋರಣೆ.”
ಈ ಲೇಖನವನ್ನು ಬರೆಯುವಾಗ ನನಗನಿಸಿದ್ದು, ಕನ್ನಡ ಸಾಹಿತ್ಯಾಧ್ಯಯನ ಇಂತಹ ತತ್ವಶಾಸ್ತ್ರೀಯ ಪರಿಕಲ್ಪನೆಗಳನ್ನು ತನ್ನ ವಿಮರ್ಶೆ ಅಥವಾ ಸಂಶೋಧನೆಯನ್ನು ಬಳಸಿಕೊಂಡಲ್ಲಿ ಅಂಬೇಡ್ಕರ್ ಚಿಂತನೆಯನ್ನು ಮತ್ತಷ್ಟು ಗಟ್ಟಿಯಾಗಿ ಒರೆಗೆ ಹಚ್ಚಬಹುದೆಂದು. ಅಂತಹ ಪ್ರಯತ್ನಗಳು ಮಾತ್ರ ಅವರ ಜನ್ಮದಿನದ ಆಚರಣೆಯನ್ನು ಹೆಚ್ಚು ಅರ್ಥಪೂರ್ಣವಾಗಿಸಬಲ್ಲವು.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ