ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಟೈಬೀರಿಯಸ್ ನಾಟಕ ಕೃತಿಯ ರಂಗಪ್ರಯೋಗ ಸಾಧ್ಯತೆ

ರಜನಿ ಗರುಡ
ಇತ್ತೀಚಿನ ಬರಹಗಳು: ರಜನಿ ಗರುಡ (ಎಲ್ಲವನ್ನು ಓದಿ)

ಕನ್ನಡದ ಪ್ರಸಿದ್ಧ ಕವಿ ಕೆ.ವಿ. ತಿರುಮಲೇಶ್ ರೋಮನ್ ಇತಿಹಾಸಕ್ಕೆ ಸಂಬಂಧಪಟ್ಟ ಎರಡು ನಾಟಕ ಇತ್ತೀಚಿನ ವರ್ಷಗಳಲ್ಲಿ(2017) ಬರೆದಿದ್ದಾರೆ. ಅವರು ಕವಿ, ಲೇಖಕ, ವಿಮರ್ಶಕ, ಅನುವಾದಕ ಎಂದು ತಿಳಿದಿದ್ದೇವೆ. ಅಲ್ಲದೆ ಸ್ವತಂತ್ರ ನಾಟಕವನ್ನೂ ರಚಿಸಿದ್ದಾರೆ ಎನ್ನುವುದು ನಾಟಕದವರಿಗಂತೂ ತಿಳಿಯದು. ರೋಮನ್ ಇತಿಹಾಸದ ಎರಡು ಮುಖ್ಯ ಸರ್ವಾಧಿಕಾರಿಗಳಾದ ಟೈಬೀರಿಯಸ್ ಮತ್ತು ಕಲಿಗುಲ ಅವರ ಬಗೆಗಿನ ಅದೇ ಹೆಸರಿನ ನಾಟಕಗಳು ಅವು. (ಅವರು ಶೇಕ್ಸ್ ಪಿಯರನ ರೋಮಿಯೋ ಜ್ಯೂಲಿಯಟ್ ನಾಟಕವನ್ನು ನೀನಾಸಂ ತಿರುಗಾಟ – 2005 ರೆಪರ್ಟರಿಗೆ ಅನುವಾದ ಮಾಡಿಕೊಟ್ಟಿದ್ದರು. ಸುಪ್ರಸಿದ್ಧ ನಿರ್ದೇಶಕರಾದ ಅತುಲ್ ತಿವಾರಿ ಇದನ್ನು ನಿರ್ದೇಶಿಸಿದ್ದು, ಕರ್ನಾಟಕದಾದ್ಯಂತ 40ಕ್ಕೂ ಹೆಚ್ಚು ಪ್ರದರ್ಶನವಾಗಿದೆ.) ಈ ಕೃತಿಗಳಲ್ಲಿ ರೋಮನ್ ನಾಗರಿಕತೆ, ಇತಿಹಾಸದ ಬಗೆಗಿನ ಅವರ ಅಪಾರ ಓದು – ಪರಿಶ್ರಮ ಎದ್ದುಕಾಣುತ್ತದೆ. ನಾನಿಲ್ಲಿ ಅವರ ಮೊದಲ ಕೃತಿ ಟೈಬೀರಿಯಸ್ ನಾಟಕದ ರಂಗಸಾಧ್ಯತೆಯನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದೇನೆ.


ಕೆಲವು ಶತಮಾನಗಳವರೆಗೆ ಗಣತಂತ್ರವಾಗಿದ್ದ ರೋಮನ್ ಸಾಮ್ರಾಜ್ಯದಲ್ಲಿ ಜ್ಯೂಲಿಯಸ್ ಸೀಸರ್ ನ ಕಾಲದಿಂದ ಸರ್ವಾಧಿಕಾರ ಪ್ರಾರಂಭವಾಯಿತು. ಈ ಕಾರಣಕ್ಕಾಗಿಯೆ ಅವನ ಹತ್ಯೆಯಾಗುವುದನ್ನು ಶೇಕ್ಸ್ ಪಿಯರನ ದುರಂತ ನಾಟಕಗಳಲ್ಲಿ ಒಂದಾದ ಜ್ಯೂಲಿಯಸ್ ಸೀಸರ್ ನಾಟಕದಲ್ಲಿ ಕಾಣಬಹುದು. ಅದರ ಮುಂದುವರಿಕೆಯ ಇತಿಹಾಸವೆ ಟೈಬೀರಿಯಸ್ ಮತ್ತು ಕಲಿಗುಲರ ಕಾಲ. ಇವು ಮೂರೂ ತ್ರಿವಳಿ ನಾಟಕಗಳಂತೆ ಓದಿಕೊಂಡರೆ ನಿಚ್ಚಳವಾಗಿ ರೋಮನ್ ಸಾಮ್ರಾಜ್ಯದ ಭವ್ಯ ಪರಂಪರೆ ಮತ್ತು ಅದು ಸೊರಗಿದ ಕಥೆಯನ್ನು ತಿಳಿಯಬಹುದು.
ಜ್ಯೂಲಿಯಸ್ ಸೀಸರನ ನಂತರ ಒಕ್ಟೇವಿಯಸ್ ಆಗಸ್ಟಸ್ (ಕ್ರಿ.ಪೂ.63-ಕ್ರಿ.ಶ.14) ಅಧಿಕಾರಕ್ಕೆ ಬರುತ್ತಾನೆ. ಇವನೊಬ್ಬ ಜನಪ್ರಿಯ ರಾಜ ಅಲ್ಲದೆ ರೋಮನ್ ಸಾಮ್ರಾಜ್ಯವನ್ನು ಭದ್ರವಾಗಿ ಕಟ್ಟಿದ. ಅಗಸ್ಟಸ್ ಗೆ ಗಂಡುಮಕ್ಕಳಿರಲಿಲ್ಲ. ಅದಕ್ಕಾಗಿ ಪತ್ನಿ ಲಿವಿಯಾಳ ಮೊದಲ ಗಂಡನಿಂದ ಹುಟ್ಟಿದ ಟೈಬೀರಿಯಸ್ ನನ್ನು ದತ್ತು ತೆಗೆದುಕೊಳ್ಳುತ್ತಾನೆ ಮತ್ತು ಅವನ ಹೆಂಡತಿ ವಿಪ್ಸಾನಿಯಾಳಿಗೆ ವಿಚ್ಛೇದನ ಕೊಡಿಸಿ, ತನ್ನ ಮಗಳು ಜ್ಯೂಲಿಯಾಳೊಂದಿಗೆ ಮದುವೆ ಮಾಡುತ್ತಾನೆ. ಆಗಸ್ಟಸ್ ತೀರಿಕೊಂಡ ನಂತರ ಟೈಬೀರಿಯಸ್ ಅಧಿಕಾರಕ್ಕೆ ಬರುತ್ತಾನೆ(ಕ್ರಿ.ಪೂ.42–ಕ್ರಿ.ಶ.37). ಉತ್ತಮ ಆಡಳಿತಗಾರ – ಪ್ರಸಿದ್ಧ ಯೋಧನೆಂದು ಹೆಸರುವಾಸಿಯಾಗಿದ್ದ ಇವನು ಅಧಿಕಾರಕ್ಕೆ ಬಂದಾಗ 55ವರ್ಷಗಳು. ಆಗಸ್ಟಸ್ ನ ಮಗಳ ಮಗ ಪೋಸ್ತುಮಸ್ ರೋಮನ್ ಚಕ್ರಾಧಿಪತ್ಯಕ್ಕೆ ನಿಜವಾದ ಉತ್ತರಾಧಿಕಾರಿಯಾದರೂ ಅವನನ್ನು ಗಡಿಪಾರು ಮಾಡಲು ಆಗಸ್ಟಸ್ ಆದೇಶ ಮಾಡಿರುತ್ತಾನೆ. ಅಲ್ಲದೆ ತಾನು ತೀರಿಕೊಂಡ ತಕ್ಷಣ ಅವನ ಹತ್ಯೆ ಮಾಡುವುದಕ್ಕೆ ಹೇಳಿರುತ್ತಾನೆ. ತನ್ನೊಂದಿಗೆ ಪೋಸ್ತುಮಸ್ ನನ್ನೂ ದತ್ತು ತೆಗೆದುಕೊಳ್ಳುವಂತೆ ಆಗಸ್ಟಸ್ ಗೆ ಟೈಬೀರಿಯಸ್ ಒತ್ತಾಯಿಸುತ್ತಾನೆ. ಸಾಮ್ರಾಜ್ಯದ ಚುಕ್ಕಾಣಿ ಹಿಡಿದು ಮುನ್ನಡೆಸುವ ಆಸಕ್ತಿಯೂ ಇಲ್ಲದೆ, ಸ್ವೇಚ್ಛಾಚಾರಿಯಾದ ಹೆಂಡತಿಯೊಂದಿಗೆ ಬಾಳಲೂ ಆರದೆ, ಬಹುಕಾಲ ಟೈಬೀರಿಯಸ್ ರೋಮ್ ನಿಂದ ದೂರ ಇರುವ ಕಾಪ್ರಿ ದ್ವೀಪದಲ್ಲಿ ಐಶಾರಾಮಿ ಅರಮನೆಯಲ್ಲಿದ್ದೇ ಸಾಮ್ರಾಜ್ಯ ನಡೆಸುತ್ತಾನೆ. ಅಧಿಕಾರಿಗಳ ಭ್ರಷ್ಟ ಆಡಳಿತಕ್ಕೆ ಸೈನಿಕರು, ನಾಗರಿಕರು ಬೇಸತ್ತಿರುತ್ತಾರೆ. ಡ್ರೂಸಸ್ ಅವನ ಒಬ್ಬನೆ ಮಗ. ಡ್ರೂಸಸ್ ನ ಹೆಂಡತಿ ಲುವಿಲ್ಲಾ ಮತ್ತು ರಕ್ಷಣಾದಳದ ನಾಯಕ ಸೆಜಾನಸ್ ಜೊತೆಗೂಡಿ ವಿಷವುಣ್ಣಿಸಿ ಅವನ್ನು ಕೊಲ್ಲುತ್ತಾರೆ. ಸೆಜಾನಸ್ ನನ್ನು ಇನ್ನೊಬ್ಬ ರಕ್ಷಣಾದಳದ ನಾಯಕ ಮ್ಯಾಕ್ರೋನಿಂದ ಕೊಲ್ಲಿಸುತ್ತಾನೆ. ಆತನ ತಮ್ಮ ನೀರೊ ಕ್ಲಾಡಿಯಸ್ ಡ್ರೂಸಸ್ ನ ಮಗ ಜರ್ಮಾನಿಕಸ್ ರೋಮಿನ ನಿಷ್ಟಾವಂತ ಮತ್ತು ಜನಪ್ರಿಯ ಸೇನಾಪತಿಯಾಗಿರುತ್ತಾನೆ, ಅವನ ಜನಪ್ರಿಯತೆಗೇ ಹೆದರಿ ಅವನನ್ನೂ ಕೊಲ್ಲಿಸುತ್ತಾನೆ. ಅವನ ಮಗ ಕಲಿಗುಲ ತನ್ನ ಮುಂದಿನ ವಾರಸುದಾರ ಎಂದು ತಾನಿರುವಾಗಲೇ ಘೋಷಿಸುತ್ತಾನೆ. ಕೊನೆಯಲ್ಲಿ ತಾನೂ ಹತ್ಯೆಗೊಳಗಾಗುತ್ತಾನೆ. ತನ್ನ ತಾಯಿ ಲಿವಿಯಾ, ದೊರೆ ಆಗಸ್ಟಸ್ ನನ್ನು ವಿಷದ ಅಂಜೂರದ ಹಣ್ಣು ತಿನ್ನಿಸಿ ಕೊಂದಳು ಎಂದು ಮಾತಾಡಿಕೊಳ್ಳುತ್ತಿದ್ದ ಇಬ್ಬರನ್ನು ಕೊಲೆಗೈಯ್ಯುವ ಮೂಲಕ ಪ್ರಾರಂಭವಾದ ಟೈಬೀರಿಯಸ್ ನ ಹತ್ಯೆಯ ಸರಣಿ ಅವನದೇ ಹತ್ಯೆಯೊಂದಿಗೆ ಕೊನೆಗೊಳ್ಳುತ್ತದೆ.

ಐದು ಅಂಕದ ಈ ನಾಟಕದಲ್ಲಿ ರೋಮನ್ ಪುರಾಣ, ಇತಿಹಾಸ, ಸಂಸ್ಕೃತಿ, ಜನಜೀವನ ಎಲ್ಲವುಗಳ ಕುರಿತು ಸಾಕಷ್ಟು ವಿವರಗಳಿವೆ. ನಾಲ್ಕನೆಯ ಅಂಕದಿಂದ ನಿಜವಾದ ನಾಟಕ ಪ್ರಾರಂಭವಾಗುತ್ತದೆ. ಅಲ್ಲಿಯವರಗೆ ಪೂರ್ವರಂಗ ಎನ್ನಬಹುದು. ಬಹು ನಿಧಾನಗತಿಯಲ್ಲಿ ಕಥೆ ಸಾಗುತ್ತದೆ. ನಾಲ್ಕು ದೃಶ್ಯಗಳಿಗಾಗುವಷ್ಟು ಸಾಮಗ್ರಿ ನಾಲ್ಕನೆಯ ಅಂಕದ ಮೊದಲ ದೃಶ್ಯದಲ್ಲೇ ಇದ್ದು, ತುಂಬ ವಿಷಯಗಳನ್ನೊಳಗೊಂಡಿದೆ. ಉದಾ – ಪ್ಲನೇಶಿಯಾ ದ್ವೀಪದಲ್ಲಿ ಹತ್ಯೆಯಾದ ಪೋಸ್ತುಮಸ್, ನಿಜಕ್ಕೂ ಸತ್ತಿಲ್ಲ, ನಾನೇ ಪೋಸ್ತುಮಸ್ ಎಂದು ಅವನ ಜೀತದ ಆಳು ಕ್ಲೆಮೆನ್ಸ್ , ರೋಮಿಗೆ ಬಂದು ಸೇನಿಕರನ್ನು ಸೇರಿಸಿಕೊಂಡು ಗದ್ದಲ-ದೊಂಬಿ ಮಾಡುತ್ತಾನೆ. ಅದೇ ದೃಶ್ಯದಲ್ಲಿ ಟೈಬೀರಿಯಸ್ ನ ಮಗ ಡ್ರೂಸಸ್ ಬಂದು ದೊಂಬಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ, ಜಮಾರ್ಕಸ್ ಬಂದು ಅವರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ವ್ಯವಹರಿಸಿ, ದೊಂಬಿ ನಿಲ್ಲಿಸುತ್ತಾನೆ. ಇಷ್ಟು ವಿಷಯಗಳಿರುವ ದೊಡ್ಡ ದೃಶ್ಯ ಮೆನೋ ಮತ್ತು ಮಾರ್ಕೋ ಎಂಬ ಇಬ್ಬರು ನಾಗರಿಕರ ಸಂಭಾಷಣೆಯಾಗಿದೆ. ಇದೇ ಬಿಡಿ ಬಿಡಿಯಾದ ದೃಶ್ಯಗಳಾಗಿ ಎದುರು-ಬದುರಾಗಿದ್ದರೆ, ಜಾಮಾರ್ಕಸ್, ಪೋಸ್ತುಮಸ್, ಕ್ಲೆಮೆನ್ಸ್ ಪಾತ್ರಗಳೆಲ್ಲ ಟೈಬೀರಿಯಸ್ ನೊದಿಗೆ ಮುಖಾಮುಖಿಯಾಗಿದ್ದರೆ, ಬಿಗಿಯಾದ ಬಂಧದ ನಾಟಕೀಯತೆ ನಾಟಕಕ್ಕೆ ತನ್ನಿಂದ ತಾನೆ ಒದಗುತ್ತಿತ್ತು. ಇಡೀ ನಾಟಕದಲ್ಲಿ ಪಾತ್ರ – ದೃಶ್ಯ – ಸನ್ನಿವೇಶಗಳು ಎಲ್ಲಿಯೂ ಮುಖಾಮುಖಿಯಾಗುವುದಿಲ್ಲ. ರಂಗ ಕ್ರಿಯೆಗಳೆಲ್ಲ ವಿವರಣೆಯ ಮಾತುಗಳಾಗಿದ್ದರಿಂದ ನಾಟಕೀಯ ಸನ್ನಿವೇಶಗಳ ಕೊರತೆಯಾಗಿದೆ.

ಈ ಸಂದರ್ಭದ ನಾಟಕವೆಂದರೆ ಅತ್ಯಂತ ಕಡಿಮೆ ಪಾತ್ರಗಳ, ಅತ್ಯಂತ ಕಡಿಮೆ ಅವಧಿಯದ್ದಾಗಿರಬೇಕು. ಒಂದು ತಾಸು, ಒಂದೂವರೆ ತಾಸಿನ ನಾಟಕಕ್ಕೆ ನಾವು ಬಂದು ತಲುಪಾಗಿದೆ. ಎರಡು ತಾಸಿನ ಅವಧಿಯದೆಂದರೆ ಜನರನ್ನು ಹಿಡಿದಿಡುವುದು ಕಷ್ಟ. ಹಾಗೆಯೇ 3-4 ಜನರಿಗಿಂತ ಹೆಚ್ಚು ನಟರಿದ್ದರೂ ತಂಡವನ್ನು ನಿಭಾಯಿಸುವುದು ಕಷ್ಟ. ಟೈಬೀರಿಯಸ್ ನಾಟಕಕ್ಕೆ ಕನಿಷ್ಠ 35 ಜನ ಬೇಕು. ಇಷ್ಟು ಜನರನ್ನು ನಿಭಾಯಿಸುವುದು, ಸಂಘಟಿಸುವುದು ರಂಗತಂಡಗಳಿಗೆ ಬಹಳಷ್ಟು ಕಷ್ಟವಾಗುತ್ತಿದೆ. ಈ ಕಾರಣದಿಂದಲೂ ಹಲವು ಉತ್ತಮ ರಂಗಕೃತಿಗಳು ರಂಗವನ್ನೇರುವುದೇ ಕಷ್ಟವಾಗಿದೆ.

ಈ ನಾಟಕದ ಬಹಳ ವಿವರಗಳು ಅವರ ಮುಂದಿನ ನಾಟಕ ಕಲಿಗುಲದಲ್ಲಿ ದೊರೆಯುತ್ತವೆ. ಟೈಬೀರಿಯಸ್ ಯಾಕೆ ಮತ್ತು ಎಲ್ಲಿ ಸೋಲುತ್ತಾನೆ ಎನ್ನುವುದು ಇದರಲ್ಲಿ ಸ್ಪಷ್ಟವಾಗುವುದಿಲ್ಲ. ಆದರೆ ಸೈನಿಕರ ದೊಂಬಿ ಮಾತ್ರ ನಮಗೆ ತಿಳಿಯುತ್ತದೆ. ನಾಗರಿಕರು ಆಡಳಿದ ವೈಫ಼ಲ್ಯ, ಅಮಾಯಕರ ಹತ್ಯೆಗಳ ಬಗೆಗೆ ಮಾತಾಡಿಕೊಳ್ಳುತ್ತಾರೆ. ಅದೂ ದೃಶ್ಯವಾಗಿದ್ದರೆ ಅದರ ಪರಿಣಾಮ ಬೇರೆಯದೇ ಆಗಿರುತ್ತಿತ್ತು. ಟೈಬೀರಿಯಸ್ ನ ಹತ್ಯೆಯನ್ನು ಕಲಿಗುಲಾ ಮತ್ತು ಮ್ಯಾಕ್ರೋ ಕೂಡಿ ಮಾಡುತ್ತಾರೆ ಎನ್ನುವ ವಿವರ ಕೂಡ ಕಲಿಗುಲದಲ್ಲಿದೆ. ರೋಮನ್ ಸಾಮ್ರಾಜ್ಯದಲ್ಲಿ ಅತೃಪ್ತಿ – ಅಶಾಂತಿ, ಕ್ರೌರ್ಯ ವಿಪರೀತವಾದ ಘಟ್ಟದಲ್ಲೇ ಏಸುವಿನ ಜನನ , ಈಸಾಯಿ ಧರ್ಮದ ಸ್ಥಾಪನೆ, ಅವನನ್ನು ಶಿಲುಬೆಗೇರಿಸಿದ ಸಂಗತಿಯೂ ಬರುತ್ತದೆ. ಮೂರ್ತಿ ಪೂಜೆ ಖಂಡನೆ, ಬಹುದೈವಾರಾಧನೆಯ ವಿರೋಧ, ಏಕದೈವದ ನಂಬಿಕೆ, ಏಸುವಿನ ನುಡಿಗಳನು ಬಿತ್ತರಿಸುವ ಮತ್ತು ಅದನ್ನೂ ಹತ್ತಿಕ್ಕುವ ಸನ್ನಿವೇಶವಿದೆ. ಚರಿತ್ರೆಯ ನಾಟಕಕ್ಕೆ ಬಹುಆಯಾಮ ಕೊಡುವ ಪ್ರಯತ್ನವಿದೆ. ಇಂದಿನ ನಮ್ಮ ಸಮಕಾಲೀನ ಸಂದರ್ಭದಲ್ಲಿ ಗಣತಂತ್ರ ಹತ್ತಿಕ್ಕಿ ಸರ್ವಾಧಿಕಾರವನ್ನು ಪ್ರಜೆಗಳ ಮೇಲೆ ಹೇರಲ್ಪಡುವ ಸಂಗತಿಗಳೆಲ್ಲವೂ ಈ ನಾಟಕದಲ್ಲಿದೆ. ಆದರೆ ನಾಟಕದ ಬಂಧ ಇನ್ನೂ ಗಟ್ಟಿಯಾಗಿ, ಚುರುಕಾಗಿರಬೇಕಿತ್ತು. .