- ಡಾ. ಅರವಿಂದ ಮಾಲಗತ್ತಿ ಬರೆದ ಹೊಸ ನಾಟಕದ ಕುರಿತು - ಅಕ್ಟೋಬರ್ 11, 2022
- ಸಾವಿತ್ರಿಬಾಯಿ ಫುಲೆ : ಕ್ರಾಂತಿಯ ದೀಪಮಾಲೆ - ಸೆಪ್ಟೆಂಬರ್ 8, 2022
- ಬರಗೂರರ ´ಪರಂಪರೆಯೊಂದಿಗೆ ಪಿಸುಮಾತು´ - ಆಗಸ್ಟ್ 23, 2022
ಡಾ. ಶ್ರೀರಾಮ ಇಟ್ಟಣ್ಣವರ
ಲೇ: ಕಲ್ಲೇಶ್ ಕುಂಬಾರ್
ಪುಟ: 88, ಬೆಲೆ: 90/-
ಪ್ರಕಾಶನ: ನೆಲೆ ಪ್ರಕಾಶನ, ಸಿಂದಗಿ
ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಇದೀಗ ನಾಡಿನ ಪ್ರಮುಖ ಜಾನಪದ ವಿದ್ವಾಂಸರಾದ ಡಾ. ಎಂ. ಎಂ. ಪಡಶೆಟ್ಟಿಯವರ ಹೆಸರಿನಲ್ಲಿ ಸಾಂಸ್ಕೃತಿಕ ಪ್ರತಿಷ್ಠಾನವೊಂದನ್ನು ಸ್ಥಾಪಿಸಿ ಜಾನಪದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಒಬ್ಬ ಹಿರಿಯ ಜಾನಪದ ವಿದ್ವಾಂಸರಿಗೆ ಪ್ರತಿವರ್ಷ ‘ದೇಸಿ ಸನ್ಮಾನ’ ಪ್ರಶಸ್ತಿಯನ್ನು ಕೊಡಮಾಡುತ್ತಲಿದೆ. ‘ಎಂ.ಎಂ. ಪಡಶೆಟ್ಟಿ ಸಾಂಸ್ಕøತಿಕ ಪ್ರತಿಷ್ಠಾನ’ವು ಕೊಡಮಾಡುವ 2020ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರು ನಾಡಿನ ಪ್ರಮುಖ ಜಾನಪದ ವಿದ್ವಾಂಸರಾದ ಡಾ. ಶ್ರೀರಾಮ ಇಟ್ಟಣ್ಣವರು. ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಲೇಖಕರ ಜೀವನ ಮತ್ತು ಸಾಹಿತ್ಯದ ಅಧ್ಯಯನದ ಅವಶ್ಯಕತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಒಂದು ಕೃತಿಯನ್ನು ಹೊರತರಲಾಗುತ್ತದೆ. ಈ ವರ್ಷ ಆ ಕೃತಿಯನ್ನು ನಾಡಿನ ಬಹುಮುಖ ಪ್ರತಿಭೆಯ ಕವಿ ಮತ್ತು ಕಥೆಗಾರರಾದ ಕಲ್ಲೇಶ್ ಕುಂಬಾರ್ ಬರೆದಿದ್ದಾರೆ.
ಪ್ರಸ್ತುತ ‘ಡಾ. ಶ್ರೀರಾಮ ಇಟ್ಟಣ್ಣವರ’ ಕೃತಿಯಲ್ಲಿ ಕಲ್ಲೇಶ್ ಕುಂಬಾರರು ಶ್ರೀರಾಮ ಇಟ್ಟಣ್ಣವರ ಬದುಕು ಮತ್ತು ಬರಹಗಳ ಕುರಿತು ವಿಶ್ಲೇಷಣಾತ್ಮಕವಾಗಿ ವಿವರಿಸಿದ್ದಾರೆ. ಲೇಖಕರು ಶ್ರಮವಹಿಸಿ ಇಟ್ಟಣ್ಣವರ ಬದುಕು ಮತ್ತು ಸಾಹಿತ್ಯವನ್ನು ಈ ಕೃತಿಯಲ್ಲಿ ದಾಖಲಿಸುವ ಕ್ರಮ ವಿಶಿಷ್ಟವಾಗಿದೆ. ಡಾ. ಶ್ರೀರಾಮ ಇಟ್ಟಣ್ಣವರ ಸೃಜನಶೀಲ ಸಾಹಿತಿ, ಸಂಶೋಧಕ, ವಿಮರ್ಶಕ ಮತ್ತು ಜಾನಪದ ವಿದ್ವಾಂಸರೆಂದೇ ನಾಡಿನ ಜನರಿಗೆ ಪರಿಚಿತರು. ಸರಳತೆ, ಪ್ರಾಮಾಣಿಕತೆ ಮತ್ತು ಸಹೃದಯತೆಗಳು ಅವರಲ್ಲಿ ಕಂಡುಬರುವ ಮಾನವೀಯ ಮೌಲ್ಯಗಳಾಗಿವೆ. ಪ್ರಾಮಾಣಿಕ ಪ್ರಯತ್ನ ಮತ್ತು ನಿರಂತರ ಅಧ್ಯಯನದ ಮೂಲಕ ಯಶಸ್ಸಿನ ಮೆಟ್ಟಿಲೇರುತ್ತಾ ಮುನ್ನಡೆದ ಶ್ರೀರಾಮ ಇಟ್ಟಣ್ಣವರು ಬೋಧನೆ, ಬರವಣಿಗೆ ಮತ್ತು ಆಡಳಿತದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಶಿಕ್ಷಣ, ಸಾಹಿತ್ಯ, ಸಮಾಜ, ಕಲೆ, ಜಾನಪದ, ಸಂಘ ಸಂಸ್ಥೆಗಳ ಗೌರವ ಸೇವೆ -ಹೀಗೆ ತಮ್ಮ ವ್ಯಕ್ತಿತ್ವಕ್ಕೆ ಹತ್ತು ಮುಖಗಳನ್ನು ಹುಟ್ಟಿಸಿಕೊಂಡವರು. ಅವರು ಸುಮಾರು ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಉತ್ತರ ಕರ್ನಾಟಕದ ಜೀವನಾನುಭವ ಮತ್ತು ಸಂಸ್ಕೃತಿ ಯನ್ನು ಅವರ ಕೃತಿಗಳಲ್ಲಿ ಕಾಣಬಹುದು. ಯಾವುದೇ ಪೂರ್ವಾಗ್ರಹಗಳಿಲ್ಲದೆ ಶ್ರೀರಾಮ ಇಟ್ಟಣ್ಣವರ ಜೀವನ, ಸಾಧನೆ, ವ್ಯಕ್ತಿತ್ವ ಮತ್ತು ಕೃತಿಗಳನ್ನು ಕುರಿತ ಮಹತ್ವದ ಲೇಖನಗಳು ಈ ಕೃತಿಯಲ್ಲಿವೆ. ಆ ಹಿರಿಯರ ಮನಸ್ಸಿನ ವೈಶಾಲ್ಯ, ಬರಹದ ಹದ ಎಲ್ಲ ಇವುಗಳಲ್ಲಿ ಪ್ರತಿಬಿಂತವಾಗುವುದರೊಂದಿಗೆ ಸಾಹಿತ್ಯಾಭ್ಯಾಸಿಗರಿಗೆ ಉಪಯೋಗವಾಗುವ ಯೋಜನೆಯನ್ನು ಸಾರ್ಥಕವಾಗಿ ಸಾಧಿಸಿವೆ.
ಡಾ. ಶ್ರೀರಾಮ ಇಟ್ಟಣ್ಣವರ ಜಾನಪದ ಜ್ಞಾನ ಅನುಭವ ಜನ್ಯ. ಅವರು ಅದಕ್ಕೆ ವಿಸ್ತೃತ ಅಧ್ಯಯನದ ಲೇಪನಕೊಟ್ಟವರು. ಜಾನಪದ ಹಾಡಿನ ಗತ್ತು, ಧಾಟಿಗಳನ್ನು ಚೆನ್ನಾಗಿ ರೂಢಿಸಿಕೊಂಡ ಕೆಲವೇ ಪ್ರಾಧ್ಯಾಪಕರಲ್ಲಿ ಅವರೂ ಒಬ್ಬರು. ಶ್ರೀರಾಮ ಇಟ್ಟಣ್ಣವರಂತೆ ಗ್ರಾಮೀಣ ಬದುಕು, ಸಂಸ್ಕøತಿಯ ದಟ್ಟ ಸಂಬಂಧ ಇಟ್ಟುಕೊಂಡ ಪ್ರಾಧ್ಯಾಪಕರು ತೀರ ವಿರಳವೆಂದೇ ಹೇಳಬೇಕು. ಕೃಷಿ ಮತ್ತು ಜನಪದ ವ್ಯಕ್ತಿಗಳ ಪರಿಜ್ಞಾನ ಶ್ರೀರಾಮ ಇಟ್ಟಣ್ಣವರಿಗೆ ಗಾಢವಾಗಿದೆ. ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಅವರ ಬದುಕಿನ ಉಸಿರು. ಹುಟ್ಟಿನಿಂದಲೇ ಜಾನಪದ ಪ್ರೀತಿ ಅವರಲ್ಲಿ ರಕ್ತಗತವಾಗಿದೆ. ಶ್ರೀರಾಮ ಇಟ್ಟಣ್ಣವರ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ. ಸಂಸ್ಕೃತಿ ಹಲವು ಪದರಗಳು ಸ್ಪಷ್ಟವಾಗಿ ಬಿಚ್ಚಿಕೊಂಡಿದ್ದನ್ನು ಇಲ್ಲಿಯೇ ಕಾಣಬೇಕು. ‘ಪಾರಿಜಾತದವರು’, ‘ಶ್ರೀಕೃಷ್ಣ ಪಾರಿಜಾತ-ಒಂದು ಅಧ್ಯಯನ’, ‘ಲಾವಣಿ’ ಕೃತಿಗಳನ್ನು ಹುಡುಕುವುದು ಈಗಲೂ ಕಷ್ಟ. ‘ಜಾನಪದ ಪರಿಕ್ರಮ’, ‘ಹಲಗಲಿ ಜಾನಪದ’ ಮೊದಲಾದ ಅವರ ಕೃತಿಗಳು ಜಾನಪದ ಸ್ವರೂಪ ಮತ್ತು ವ್ಯಾಪ್ತಿಯ ಕಲ್ಪನೆ ಕೊಡುವ ಮಹತ್ವದ ಕೃತಿಗಳಾಗಿವೆ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಗಳ ಸದಸ್ಯತ್ವ ಹಾಗೂ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಶ್ರೀರಾಮ ಇಟ್ಟಣ್ಣವರು ಕೊಟ್ಟ ಕೊಡುಗೆ ಅಪಾರವಾದುದು.
ಶ್ರೀರಾಮ ಇಟ್ಟಣ್ಣವರ ‘ಹೊಳೆಸಾಲ ಬಳ್ಳಿ’, ‘ಗಾಳಿ ಉಳ್ಳತೈತಿ’, ‘ಹಾಡೂನು ಬಾರಾ ಪ್ರೇಮದ ಹಾಡು’, ‘ನೂರು ಶಿಶು ಗೀತೆಗಳು’, ‘ಹೊತ್ತು ಮೂಡುವ ಸಮಯ’ ಕವನಸಂಕಲನಗಳಲ್ಲಿನ ಪ್ರಮುಖ ಕವಿತೆಗಳ ಕುರಿತ ಲೇಖನಗಳು ವಿಶ್ಲೇಷಣೆ ಮತ್ತು ವಿಮರ್ಶೆಗಳಿಂದ ಕೂಡಿವೆ. ಇದರಿಂದಾಗಿ ಕಾವ್ಯದ ವಿವರಣೆಯ ಜೊತೆಜೊತೆಗೇ ಕವಿಯ ಕಾವ್ಯದ ಪ್ರಮುಖ ಒಲವುಗಳು ಗೊತ್ತಾಗುವಂತೆ ಕಲ್ಲೇಶ್ ಕುಂಬಾರರು ಬರವಣಿಗೆ ಮಾಡಿದ್ದಾರೆ. ಶ್ರೀರಾಮ ಇಟ್ಟಣ್ಣವರ ಕೃತಿ ಸಂಖ್ಯೆಯ ಅರ್ಧಭಾಗ ಜೀವನ ಚರಿತ್ರೆಗಳಿಂದ ತುಂಬಿದೆ. ‘ಜನಪದ ವೈದ್ಯ ಸಿದ್ದಪ್ಪ ಬೀಳಗಿ’, ‘ಕೌಜಲಗಿ ನಿಂಗವ್ವ’, ‘ಸೀತಾಬಾಯಿ ತಿಮಸಾನಿ’, ‘ಡಾ. ಲೀಲಾವತಿ ತೋರಣಗಟ್ಟಿ’, ‘ಲೋಕಾಪುರ ಕೃಷ್ಣಾಜಿ ದೇಶಪಾಂಡೆ’ಯವರಂಥ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಜೀವಿಗಳ ಆದರ್ಶ ಬಿತ್ತುವ ಬಯಕೆ ಅವರದು. ಪಾರಂಪರಿಕ ಮೌಲ್ಯಗಳನ್ನು ಯುವ ಪೀಳಿಗೆಗೆ ನೀಡಿದ ಶ್ರೇಯಸ್ಸು ಶ್ರೀರಾಮ ಇಟ್ಟಣ್ಣವರದೆಂಬುದನ್ನು ಕಲ್ಲೇಶ್ ಕುಂಬಾರರು ಈ ಕೃತಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಕೃತಿ ರಚನೆಯ ಹಿಂದೆ ಲೇಖಕರ ಪರಿಶ್ರಮ ಕೃತಿಯನ್ನು ಓದುತ್ತಾ ಹೋದಂತೆ ನಮ್ಮ ಅರಿವಿಗೆ ಬಂದೇ ಬರುತ್ತದೆ.
ಈ ಕೃತಿ ಶ್ರೀರಾಮ ಇಟ್ಟಣ್ಣವರ ಬದುಕು, ಬರವಣಿಗೆ, ಸಾಧನೆ ಮತ್ತು ವ್ಯಕ್ತಿತ್ವದ ಹತ್ತಿರದ ಚಿತ್ರಣ ನೀಡುವಲ್ಲಿ ಯಶಸ್ವಿಯಾಗಿದೆ. ಕಲ್ಲೇಶ್ ಕುಂಬಾರರ ಭಾಷೆ ನೇರ ಮತ್ತು ಸರಳ. ಇಲ್ಲಿ ಲೇಖಕರು ಇಟ್ಟಣ್ಣವರ ಸಾಹಿತ್ಯದ ಬಗ್ಗೆ ಕೊಟ್ಟ ವಿವರಣೆಗಳು ಮತ್ತು ಪೂರಕ ಮಾಹಿತಿಗಳು ಓದುಗರನ್ನು ಗಂಭೀರ ಅಧ್ಯಯನಕ್ಕೆ ಮತ್ತು ಚಿಂತನೆಗೆ ಎಳೆಸುವಂತಿವೆ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ