ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾವಿತ್ರಿಬಾಯಿ ಫುಲೆ : ಕ್ರಾಂತಿಯ ದೀಪಮಾಲೆ

ಸಿ. ಎಸ್. ಭೀಮರಾಯ

ಸಾವಿತ್ರಿಬಾಯಿ ಫುಲೆ
ಲೇ: ಡಾ. ಸರಜೂ ಕಾಟ್ಕರ್
ಪುಟ: 152, ಬೆಲೆ: 150/-
ಪ್ರಕಾಶನ: ಯಾಜಿ ಪ್ರಕಾಶನ ಹೊಸಪೇಟೆ

ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಡಾ.ಸರಜೂ ಕಾಟ್ಕರ್ ಅನನ್ಯ ಹಾಗೂ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದಾರೆ. ಅವರು ಆರಂಭದಿಂದಲೂ ಭಿನ್ನ ಧಾಟಿಯಲ್ಲಿಯೇ ಬರೆಯತೊಡಗಿ ದಲಿತ ಬಂಡಾಯ ಸಾಹಿತ್ಯ ಚಳವಳಿಯ ಘಟ್ಟದಲ್ಲಿ ಬೆಳೆದು ಬಂದ ವಿಶಿಷ್ಟ ಸಂವೇದನೆಗಳ ಅಭಿವ್ಯಕ್ತಿಗೆ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡವರು. ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸ ಕಥನ, ವೈಚಾರಿಕ, ಅನುವಾದ, ಜೀವನ ಚರಿತ್ರೆ-ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿಗೈದು ತಮ್ಮತನದ ವಿಶಿಷ್ಟ ಛಾಪು ಮೂಡಿಸಿದ ದೈತ್ಯ ಪ್ರತಿಭೆ ಸರಜೂ ಕಾಟ್ಕರ್‍ದು. ಇವರ ಸಮಗ್ರ ಸಾಹಿತ್ಯ ಸೃಷ್ಟಿಯಲ್ಲಿ ಅಡಗಿರುವ ಅನುಭವದ ವ್ಯಾಪ್ತಿ ಬೆರಗುಗೊಳಿಸುವಂಥದ್ದು.

Sarjoo Katkar withdraws his consent to use his writing
ಡಾ. ಸರಜೂ ಕಾಟ್ಕರ್

ಪ್ರಸ್ತುತ ‘ಸಾವಿತ್ರಿಬಾಯಿ ಫುಲೆ’ ಸರಜೂ ಕಾಟ್ಕರ್‍ರ ನಾಲ್ಕನೆಯ ಕಾದಂಬರಿ. ಕಾಟ್ಕರ್ ಭಾರತದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದ ‘ಆಧುನಿಕ ಭಾರತದ ಮೊದಲ ಶಿಕ್ಷಕಿ ಮತ್ತು ಸಮಾಜ ಸುಧಾರಕಿ’ ಸಾವಿತ್ರಿಬಾಯಿ ಫುಲೆಯವರ ಜೀವನ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಕುರಿತು ಸಂಶೋಧನಾತ್ಮಕವಾದ ಐತಿಹಾಸಿಕ ಕಾದಂಬರಿಯನ್ನು ರಚಿಸಿದ್ದಾರೆ. ಅದಕ್ಕಾಗಿ ಅವರು ಬೇರೆ ಬೇರೆ ಕಡೆ ಅಲೆದಾಡಿ, ಆಳವಾದ ಅಧ್ಯಯನ ಮಾಡಿ, ಶ್ರಮವಹಿಸಿ ಈ ಕಾದಂಬರಿಯನ್ನು ರಚಿಸಿದ್ದು ಗಮನಾರ್ಹ. ಸಾಮಾಜಿಕ ಸ್ತರದ ಅಪ್ರತಿಮ ವ್ಯಕ್ತಿಗಳ ಚರಿತ್ರೆಯನ್ನು ಐತಿಹಾಸಿಕ ಆವರಣದಲ್ಲಿ ಬಿಂಬಿಸಿ ತೋರಿಸುವ ಕಾದಂಬರಿಗಳ ಪರಂಪರೆ ಕನ್ನಡದಲ್ಲಿದೆ. ಸರಜೂ ಕಾಟ್ಕರ್ ‘ಸಾವಿತ್ರಿಬಾಯಿ ಫುಲೆ’ ಕಾದಂಬರಿ ಈ ಪರಂಪರೆಯಲ್ಲಿ ಗುರುತಿಸಬಹುದಾದ ಒಂದು ವಿಶಿಷ್ಟ ಕೃತಿ. ಆಧುನಿಕ ಭಾರತದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಒಂದು ವಿಶಿಷ್ಟ ಮತ್ತು ಅಪೂರ್ವವಾದ ಕ್ರಾಂತಿ ಮಾಡಿದ ಸಾಧಕರಲ್ಲಿ ಅತ್ಯಂತ ಪ್ರಮುಖವಾಗಿ ಗಮನಿಸಬಹುದಾದ ವ್ಯಕ್ತಿತ್ವ ಹೊಂದಿರುವ ಸಾವಿತ್ರಿಬಾಯಿ ಫುಲೆಯ ಜೀವನ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಹೊಸ ದೃಷ್ಟಿಕೋನದಿಂದ ಈ ಕಾದಂಬರಿ ಕಟ್ಟಿಕೊಡುತ್ತದೆ. ಐತಿಹಾಸಿಕ ಘಟನೆಗಳನ್ನು ಕ್ರಮಕ್ರಮವಾಗಿ ಹಾಗೂ ವಿವರಣಾತ್ಮಕವಾಗಿ ಕಟ್ಟಿಕೊಡುವ ‘ಸಾವಿತ್ರಿಬಾಯಿ ಫುಲೆ’ ಕಾದಂಬರಿಯ ಕಥನಕ್ರಮ ಆಕರ್ಷಕವಾಗಿದೆ. ಕಾದಂಬರಿಯ ಮುಖ್ಯ ಪಾತ್ರಗಳ ಮೂಲಕವೇ ಅದರ ಕಥೆ ಹೇಳಿದ್ದು ಮತ್ತು ಬೆಳೆಸಿದ್ದು ಲೇಖಕರು ಇಲ್ಲಿ ತೋರಿದ ತಂತ್ರದಲ್ಲಿ ಹೊಸತನವಿದೆ. ತಮ್ಮ ಅನುಭವದ ಪರಿಧಿಯಲ್ಲಿ ಆಯಾ ಪಾತ್ರಗಳು ಕಥೆಯನ್ನು ಬಿಚ್ಚುತ್ತ ಹೋಗಿರುವ ಕ್ರಮ ಕಾದಂಬರಿಯ ಐತಿಹಾಸಿಕತೆಯನ್ನು ಗಟ್ಟಿಗೊಳಿಸಿದೆಯಷ್ಟೇ ಅಲ್ಲ; ಅದರ ವೈವಿಧ್ಯತೆಯನ್ನು ಸಹಜವಾಗಿಯೇ ಹೆಚ್ಚಿಸಿದೆ.

ಈ ಕಾದಂಬರಿಯ ಬಂಧ ಕೂಡ ಸಾಕಷ್ಟು ಗಟ್ಟಿಯಾಗಿದೆ. ಐತಿಹಾಸಿಕ ಘಟನೆಗಳಲ್ಲಿರುವ ಸಂಘರ್ಷದ ಗಂಭೀರತೆ ಕಾದಂಬರಿಯಲ್ಲಿ ಯಥಾವತ್ತಾಗಿ ಮೂಡಿಬಂದಿರುವುದರಿಂದ ಕುತೂಹಲ ಕೆರಳಿಸುತ್ತದೆ. ಆಧುನಿಕ ಚರಿತ್ರೆಯಲ್ಲಿ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆಯವರನ್ನು ಬಿಟ್ಟರೆ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ , ಸಮಾಜ ಸುಧಾರಣೆ ಮತ್ತು ಸಾಂಸ್ಕøತಿಕ ಕ್ಷೇತ್ರಗಳ ಬದಲಾವಣೆಗಾಗಿ ಆ ರೀತಿ ಕ್ರಾಂತಿ ಮಾಡಿದವರು ಯಾರೂ ಇಲ್ಲ. ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆಯವರ ಶ್ರೇಷ್ಠತೆ ಅವರ ಜೀವನ ಸಾಧನೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಮನುಷ್ಯ-ಮನುಷ್ಯರ ನಡುವೆ ಶೋಷಣೆ, ಮೇಲುಕೀಳೆಂಬ ಭೇದ, ಅಸ್ಪøಶ್ಯತೆ ಆಚರಣೆ, ಜಾತೀಯತೆ ಮತ್ತು ಮೌಢ್ಯತೆ ಮನೆಮಾಡಿರುವ ಹಿಂದೂ ಧರ್ಮದಲ್ಲಿ ದಲಿತರು ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಲು ಇನ್ನೂ ಸಾಧ್ಯವಾಗಿಲ್ಲ. ಇಂತಹ ವ್ಯವಸ್ಥೆಯ ನಡುವೆ ಅಲ್ಲಲ್ಲಿ ಶೋಷಣೆಯ ವಿರುದ್ಧ ನಿರಂತರವಾಗಿ ದನಿ ಎದ್ದಿದೆ. ಅದು ಬುದ್ಧ, ಬಸವ, ಗಾಂಧಿ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ,ನಾರಾಯಣಗುರು, ಪೆರಿಯಾರ್ ,ಅಂಬೇಡ್ಕರ್-ಮೊದಲಾದವರ ಕಾಲದಲ್ಲಿ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯಪೂರ್ವ ಭಾರತದ ಮಹಾನ್ ಸಮಾಜ ಸುಧಾರಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರದು. ಕಳೆದ ಹದಿನೆಂಟನೆ ಶತಮಾನದ 40-90ರ ದಶಕದಲ್ಲಿ ಬ್ರಾಹ್ಮಣರ ಆಚರಣೆಗಳಿಂದ ಜಿಡ್ಡುಗಟ್ಟಿ ಹೋಗಿದ್ದ ದೇಶದ ಜನತೆಯಲ್ಲಿ ಶೈಕ್ಷಣಿಕ, ಸಾಮಾಜಿಕ, ವೈಚಾರಿಕ ಮಿಂಚಿನ ಸಂಚಾರ ಹೊಳೆಯಿಸಿದವರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರು.

‘Svitribai Phule is educational mother of modern India. She was a women’s educationist and social reformer,
Savitribai Phule alongside her husband contributed significantly during the British rule for the improvement of women’s rights in the country. She was even abused by the orthodox society. Orthodox India was shocked to see her achievements. She had charm, vision, deep-rooted moral, rational convictions and remarkable courage. It is seldom that we come across persons like her in public life. Savitribai Phule left an indelible imprint on our education and culture. Her life was many-sided splendour. Posterity will remember her not only as a teacher of modern Indian education, a lover of downtrodden people and mother of orphans but also as a fearless crusader for social change. Savitribai Phule was a purist. She never compromised on the quality of modern Indian education. She established many schools for poor people. Her greatest contribution to education, however, was as a liberator of women’s education. She had a many-faceted personality. She had the vision of a poet and great educationist and looked at the beautiful side of things.
Savitribai Phule was one of the most important personalities of social reform of the country. She worked enormously for social reform. During the time of epidemic, Savitribai Phule herself fed around two thousand children.

‘ಸಾವಿತ್ರಿಬಾಯಿ ಫುಲೆ’ ಕಾದಂಬರಿಯ ಪ್ರತಿಯೊಂದು ಘಟನೆಯೂ ಕುತೂಹಲಕಾರಿಯಾಗಿದೆ. ಇಂಥ ಘಟನೆಗಳನ್ನೇ ಕೊಂಡಿ ಕೊಂಡಿಯಾಗಿ ಜೋಡಿಸುತ್ತ ಸಾಗಿರುವ ಕಾರಣ ಅದರ ಕ್ರಿಯಾ ಪ್ರವಾಹದಲ್ಲಿ ತೀವ್ರತೆಯೂ ಇದೆ. ಅಷ್ಟೇ ಅದು ಆಕರ್ಷಕವೂ ಆಗಿದೆ. ಈ ಕಾದಂಬರಿಯಲ್ಲಿ ಸಾವಿತ್ರಿಬಾಯಿ ಫುಲೆಯದೇ ಮುಖ್ಯ ಪಾತ್ರವೆಂದು ಹೇಳುವ ಅಗತ್ಯವಿಲ್ಲ. ಆ ಪಾತ್ರವೇ ಈ ಕಾದಂಬರಿಯ ಕೇಂದ್ರಬಿಂದು. ಅವಳ ವ್ಯಕ್ತಿತ್ವದ ಪ್ರಕರ್ಷಕ್ಕೆ ಪೂರಕವಾದ ಪಾತ್ರಗಳೂ ಇಲ್ಲಿ ಸ್ಫುಟವಾಗಿ ಮೂಡಿಬಂದಿವೆ. ಚರಿತ್ರೆಯ ಸಾವಿತ್ರಿಬಾಯಿಗೂ ಸರಜೂ ಕಾಟ್ಕರ್ ರೂಪಿಸಿದ ಸಾವಿತ್ರಿಬಾಯಿಗೂ ಸಾಕಷ್ಟು ವ್ಯತ್ಯಾಸವಿದೆ. ಅದರರ್ಥ ಕಾಟ್ಕರ್‍ವರು ಚರಿತ್ರೆಯನ್ನು ಹೊರತುಪಡಿಸಿ ಈ ಕಾದಂಬರಿಯನ್ನು ರಚಿಸಿದ್ದಾರೆಂದು ಭಾವಿಸುವುದು ಅಗತ್ಯವಿಲ್ಲ. ಆದರೆ ಅವರು ಚರಿತ್ರೆಗೆ ಸೃಜನಶೀಲತೆಯ ಹೊಸರೂಪ ನೀಡಿದ್ದಾರೆ. ಆದ್ದರಿಂದ ಈ ಕೃತಿಯೊಂದು ಸೃಜನಶೀಲ ಕಲಾಕೃತಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಚರಿತ್ರೆಯಲ್ಲಿರುವ ಸಾವಿತ್ರಿಬಾಯಿಗೆ ಸ್ವಂತ ವ್ಯಕ್ತಿತ್ವವಿಲ್ಲ. ಆದರೆ ಇಲ್ಲಿ ಅವಳಿಗೆ ಸ್ವಂತ ವ್ಯಕ್ತಿತ್ವವಿದೆ. ಸ್ವಂತ ಅಸ್ಮಿತೆಯೂ ಇದೆ.

ಜಾತಿಯಾಧಾರಿತ ಸಾಮಾಜಿಕ ಅಸಮಾನತೆ ಹಾಗೂ ಶೋಷಣೆಯನ್ನು ನಿವಾರಿಸುವ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರ ಮುಖ್ಯ ಧ್ಯೇಯದ ಹಿನ್ನೆಲೆಯಲ್ಲಿ ಈ ಕಾದಂಬರಿ ಮಹತ್ವದ ಸ್ಥಾನ ಪಡೆಯುತ್ತದೆ. ಪರಿಸ್ಥಿತಿಯ ವ್ಯಂಗ್ಯ, ಕ್ರೌರ್ಯವನ್ನು ಸಮಚಿತ್ತದಿಂದ ಸ್ವೀಕರಿಸಿ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆಯವರು ಸಾಮಾಜಿಕವಾಗಿ-ಶೈಕ್ಷಣಿಕವಾಗಿ ಬೆಳೆದು ಕ್ರಾಂತಿಜ್ವಾಲೆಯಾಗುವವರೆಗಿನ ಕಥೆ ಈ ಕಾದಂಬರಿ ಒಳಗೊಂಡಿದೆ. ಸಾಮಾಜಿಕಗೊಂಡ ಸಂದರ್ಭದಲ್ಲೇ ತನ್ನ ವೈಯಕ್ತಿಕತೆಯ ಆಳಕ್ಕೆ ಇಳಿಯುವ ಒಳಶೋಧವೂ ಜರುಗುತ್ತದೆ. ಸಮಾಜದಲ್ಲಿ ಸಾವಿರಾರು ಜನರಿಗೆ ಆಸರೆಯಾಗುವ ನಾಯಕಿ ಸಾವಿತ್ರಿಬಾಯಿ ತನ್ನ ಅಸರೆಗಾಗಿ ಪರಿತಪಿಸುವ ವಿಷಾದವೂ ಕೂಡ ಇಲ್ಲಿದೆ. ಸಾವಿತ್ರಿಬಾಯಿ ಯಾವ ಸಂದರ್ಭದಲ್ಲಿಯೂ ಆಕೆ ಅಧೀರಳಾಗದೆ ತನ್ನ ಗುರಿ-ಉದ್ದೇಶಗಳ ಕಡೆಗೆ ಆತ್ಮಸ್ಥೈರ್ಯದಿಂದ ಮುನ್ನಡೆಯುತ್ತಾಳೆ ಎಂಬುದರ ಮೂಲಕ ಕಾದಂಬರಿಯ ಸ್ತ್ರೀಪರ ಮತ್ತು ಜೀವಪರ ಧೋರಣೆಗಳು ದಾಖಲಾಗುತ್ತವೆ. ಇದಕ್ಕಾಗಿ ಕಾಟ್ಕರ್‍ರು ನಿರ್ಮಿಸುವ ವಸ್ತು ಪರಿಕರಗಳು ಅಧಿಕ ಸಮೃದ್ಧವೂ, ಕುತೂಹಲಕರವೂ ಆಗಿವೆ.

1.ಜ್ಯೋತಿಬಾನ ಜೊತೆ ವಿವಾಹ. 2.ನಾರ್ಮಲ್ ಸ್ಕೂಲಿನಿಂದ ಟ್ರೇನ್ಡ್ ಶಿಕ್ಷಕಿ. 3.ಭಾರತದ ಮೊದಲ ಬಾಲಕಿಯರ ಶಾಲೆ ಆರಂಭ. ಸಾವಿತ್ರಿಬಾಯಿ ಭಾರತದ ಮೊದಲ ಶಿಕ್ಷಕಿಯಾಗಿ ಕೆಲಸ ಆರಂಭ. 4.ಪ್ರೌಢ ಶಾಲೆ ಆರಂಭ. 5.ಗೃಹತ್ಯಾಗ. 6.18 ಶಾಲೆಗಳ ಸ್ಥಾಪನೆ. 7. ಬಾಲಹತ್ಯಾ ಪ್ರತಿಬಂಧಕ ಗೃಹ ಸ್ಥಾಪನೆ. 8.‘ಕಾವ್ಯಫುಲೆ’ ಕವನ ಸಂಕಲನ ಪ್ರಕಟಣೆ. 9.ವಿಧವಾ ವಿವಾಹ ಪ್ರಸಾರಕ ಮಂಡಳಿ ಸ್ಥಾಪನೆ.10.ಮಹಾತ್ಮಾ ಫುಲೆಯವರ ಭಾಷಣಗಳ ಸಂಗ್ರಹದ ಕೃತಿ ಪ್ರಕಟಣೆ. 11.ಬಾಲವಿಧವೆಯ ಮಗನ ದತ್ತಕ ಪಡೆಯುವುದು.12.ನೀರಿನ ಬಾವಿಯನ್ನು ಅಸ್ಪøಶ್ಯರಿಗಾಗಿ ಮುಕ್ತ ಮಾಡುವಿಕೆ. 13.ಸತ್ಯಶೋಧಕ ಸಮಾಜದ ಸ್ಥಾಪನೆ.14.ಬರಗಾಲ ನಿರ್ವಹಣೆ. 15.ಯಶವಂತನ ಮದುವೆ. 16.ಕ್ಷೌರಿಕರ ಸಂಘದ ಸ್ಥಾಪನೆ. 17.ಮಹಾತ್ಮಾ ಫುಲೆ ನಿಧನ.18. ಮಹಾತ್ಮ ಫುಲೆ ರಾಷ್ಟ್ರೀಯ ಸ್ಮಾರಕ ಸ್ಥಾಪನೆ. 19. ಸಾವಿತ್ರಿಬಾಯಿ ಸ್ಮಾರಕ ಸ್ಥಾಪನೆ -ಹೀಗೆ ಹಲವು ಮಹತ್ವಪೂರ್ಣ ಅಂಶಗಳನ್ನು ಕೇವಲ ಒಂದು ನೂರ ಐವತ್ತು ಪುಟಗಳಲ್ಲಿ ನಿರ್ವಹಿಸಿರುವುದರಿಂದ ಇಡೀ ಕೃತಿ ‘ಮಿನಿಯೇಚರ್’ ನಂತೆ ಕಾಣುತ್ತದೆ. ಈ ಹಲವು ಹದಿನೆಂಟು ಅಂಶಗಳನ್ನು ಕಾದಂಬರಿಯಾಗಿಸುವ ಆಯ್ಕೆಯೇ ಕಾಟ್ಕರ್‍ರ ಶಕ್ತಿ. ಸಾಂಪ್ರದಾಯಿಕ ಒಳ ವಿವರಗಳನ್ನು ನಿರೂಪಿಸುವಲ್ಲಿ ಅವರು ತೋರಿರುವ ಶ್ರದ್ಧೆ ಮೆಚ್ಚುವಂಥದ್ದು. ಕೃತಿ ಸಾಮಾಜಿಕಗೊಳ್ಳುತ್ತ ಹೋದಾಗಲೂ ವಿಚಲಿತವಾಗದ ಬರವಣಿಗೆ ಅವರದು. ಸಬಲ ಮತ್ತು ಸ್ವಾಯತ್ತ ಬಾಳಿನ ಸಮರ್ಥ ಸ್ಫೂರ್ತಿಯೆಂಬಂತೆ ಕಥಾನಾಯಕಿ ಸಾವಿತ್ರಿಬಾಯಿಯನ್ನು ಅವರು ರೂಪಿಸಿದ್ದಾರೆ. ಆಧುನಿಕ ಭಾರತದಲ್ಲಿ ಬದಲಾದ ಸಾಮಾಜಿಕ, ಶೈಕ್ಷಣಿಕ, ಸಾಂಪ್ರದಾಯಿಕ ಮತ್ತು ಸಾಂಸ್ಕøತಿಕ ಸಂದರ್ಭದಲ್ಲಿ ಸಮಸ್ಯೆಯ ಸ್ಥಿತ್ಯಂತರಗಳನ್ನು ಗುರುತಿಸುವ ಉಪಕ್ರಮ ಈ ಕಾದಂಬರಿಯಲ್ಲಿ ಪ್ರಮುಖವಾಗಿದೆ. ಐತಿಹಾಸಿಕ ಘಟನೆಗಳ ಕಾರ್ಯಕಾರಣ ಸಂಬಂಧದ ಮೇಲೆ ತನ್ನ ಬಂಧವನ್ನು ನಿರ್ಮಿಸಿಕೊಂಡಿರುವ ‘ಸಾವಿತ್ರಿಬಾಯಿ ಫುಲೆ’ ಕಾದಂಬರಿ ಅತ್ಯಂತ ಕುತೂಹಲಕಾರಿಯಾಗಿದೆ. ಒಂದಾದ ನಂತರ ಒಂದರಂತೆ ಸಂಭವಿಸುವ ಘಟನೆಗಳು ಕಾದಂಬರಿಯ ಕ್ರಿಯೆಯನ್ನು ತೀವ್ರಗೊಳಿಸಿವೆ. ತನ್ನ ಸಾವಯವ ಸಂಬಂಧದಲ್ಲಿ ಅತ್ಯಂತ ತಾರ್ಕಿಕವಾಗಿ ಮತ್ತು ಆಕರ್ಷಕವಾಗಿ ಹೆಣೆದುಕೊಂಡು ಸಾಗಿರುವ ಕ್ರಮದಲ್ಲಿ ಗಟ್ಟಿತನವಿದೆ.

‘ಸಾವಿತ್ರಿಬಾಯಿ ಫುಲೆ’ ಚಾರಿತ್ರಿಕ ಮಹತ್ವವುಳ್ಳ ಕೃತಿ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪರಿಣಾಮದಿಂದಾಗಿ ಭಾರತದ ಜನಜೀವನದಲ್ಲಿ ಕ್ಷಿಪ್ರ ಬದಲಾವಣೆಗಳಾದವು. ಸನಾತನ ಧರ್ಮ-ಪರಂಪರೆಯೊಳಗಿನ ಮೌಲ್ಯಗಳು ಹಾಗೂ ಆಧುನಿಕ ವಿಚಾರಗಳ ತಾಕಲಾಟಗಳು ಸಂಭವಿಸಿದವು. ಅಂಥ ಸಂದಿಗ್ಧ ಕಾಲದ ಹಲವಾರು ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಾಟ್ಕರ್‍ರು ಗ್ರಹಿಸಿದ್ದಾರೆ. ಅಂದಿನ ಸಾಮಾಜದ ನಡುವೆ ಆಗುತ್ತಿದ್ದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಿತ್ಯಂತರಗಳನ್ನು ‘ಸಾವಿತ್ರಿಬಾಯಿ ಫುಲೆ’ ಕಾದಂಬರಿಯಲ್ಲಿ ದಾಖಲಿಸಲಾಗಿದೆ. ಸಮಕಾಲೀನವರಿಗೆ ಈ ಕಾದಂಬರಿಯ ಕಥೆ ಹಳೆಯದೆನಿಸಿದರೂ, ಕಾದಂಬರಿ ರಚನೆಯಲ್ಲಿ ಲೇಖಕರು ತೋರಿದ ಪರಿಣತಿ ಮುಂದಿನ ಬರಹಗಾರರಿಗೆ ಮಾರ್ಗದರ್ಶನವಾಗುವಂತಿದೆ. ಪ್ರಗತಿಪರ ಸಮಾಜ ನಿರ್ಮಾಣ ಭಾರತೀಯ ಸಂಸ್ಕøತಿಯ ನೆಲೆಗಟ್ಟಿನಲ್ಲಿ ನಡೆಯಬೇಕು. ಆದರೆ, ರೂಢಿಗತ ಸಂಪ್ರದಾಯಗಳಿಂದ ಬಿಡುಗಡೆಗೊಂಡು ಹೊಸ ಜೀವನ ವಿಧಾನಗಳಿಂದ ತೆರೆದುಕೊಳ್ಳಬೇಕೆಂಬುದು ಲೇಖಕರ ನಿಲುವಾಗಿದೆ. ಹೀಗಾಗಿ, ‘ಸಾವಿತ್ರಿಬಾಯಿ ಫುಲೆ’ ಕಾದಂಬರಿಯಲ್ಲಿ ಸ್ತ್ರೀ ಶಿಕ್ಷಣ, ಸತಿ ಸಹಗಮನ ಪದ್ಧತಿ ನಿಷೇದ, ವಿಧವಾ ಪುನರ್‍ವಿವಾಹದ ಬಗೆಗಿನ ಕಾಳಜಿ, ಪೇಶ್ವೆಗಳ ದುರಾಡಳಿತ, ಸಾಮಾಜಿಕ ಅಸಮಾನತೆ, ಸಾಂಪ್ರದಾಯಿಕ ಅಂಧಶ್ರದ್ಧೆಗಳನ್ನು ಕುರಿತ ಅಸಹನೆ ಕಂಡುಬರುತ್ತದೆ. ಈ ಕಾದಂಬರಿ ಅಂದಿನ ಸಾಮಾಜಿಕ,ಧಾರ್ಮಿಕ,ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳ ತಲ್ಲಣಗಳನ್ನು ನೈಜವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಮಹಿಳೆಯ ಸ್ವಂತಿಕೆಯ, ಇರುವಿಕೆಯ ಪ್ರಶ್ನೆಯೊಂದು, ಪುರುಷನ ಸ್ವಭಾವದ ವಿವಿಧ ಚಾಚುಗಳ ಹಿನ್ನೆಲೆಯಲ್ಲಿ ತಳೆಯುವ ಆಕಾರವನ್ನು ಈ ಕಾದಂಬರಿ ತನ್ನ ಪ್ರಮುಖ ತಾತ್ವಿಕ ಆಸಕ್ತಿಯನ್ನಾಗಿ ಪ್ರಕಟಿಸಿದೆಯೆಂದು ಗುರುತಿಸಬಹುದು. ಅಲ್ಲದೆ ಆ ಕಾಲದಲ್ಲಿ ನಮ್ಮ ಸಮಾಜದ ವಿವಿಧ ಜನಾಂಗಗಳ ಪರಸ್ಪರ ಸಂಘರ್ಷ, ಧರ್ಮ, ಜಾತಿ, ನೀತಿಯ ಬೇರೆ ಬೇರೆ ವ್ಯಾಖ್ಯಾನಗಳು, ವರ್ಣವ್ಯವಸ್ಥೆಯ ಕೆಲವು ವೈರುಧ್ಯಗಳು-ಮುಂತಾದ ಕೆಲವು ಸಂಗತಿಗಳ ನೆಲೆಯಲ್ಲಿ ಕಾದಂಬರಿಯನ್ನು ಪ್ರವೇಶಿಸುವುದು ಅವಶ್ಯಕ. ಈ ಕಾದಂಬರಿ ಒಂದು ರೋಚಕ ಕಥಾನಕವಲ್ಲ. ನಾಯಕಿ ಪ್ರಧಾನವಾದ ಕಥೆಗಳಲ್ಲಿ ಕಾಣುವ ರೋಚಕತೆಯನ್ನು ಬಹು ಎಚ್ಚರಿಕೆಯಿಂದಲೇ ಕಥನದಿಂದ ದೂರವಿರಿಸಿದ್ದಾರೆ. ವರದಿ ಮತ್ತು ಕಥನದ ತಂತ್ರಗಳನ್ನು ವಿಶಿಷ್ಟ ರೀತಿಯಲ್ಲಿ ಬೆರೆಸಿ ಇಲ್ಲಿ ಒಂದು ಹೊಸ ನಿರೂಪಣಾ ವಿಧಾನವನ್ನು ರೂಪಿಸಿಕೊಂಡಿದ್ದಾರೆ. ರಿಕಾರ್ಡು, ದಾಖಲೆಗಳನ್ನು ಯಥಾವತ್ತಾಗಿ ಬಳಸಿಕೊಂಡಿದ್ದು ಕಂಡುಬರುತ್ತದೆ. ಇದು ಚರಿತ್ರೆಯ ಮರುಕಟ್ಟುವಿಕೆಯಲ್ಲ; ಚರಿತ್ರೆಗೆ ಸೃಜನಶೀಲತೆಯ ಸ್ಪರ್ಶ. ಅದರ ಹಿಂದಿನ ಜನಪರವಾದ ತರ್ಕಗಳನ್ನು, ನೈಜ ಘಟನೆ ಮತ್ತು ವಿಚಾರಗಳನ್ನು ಮುಂಚೂಣಿಗೆ ತರುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ. ಕಾಟ್ಕರ್‍ರ ಬಂಡಾಯ ಮನೋಧರ್ಮ ಅವರು ಬಳಸಿರುವ ಭಾಷೆಯ ಮೂಲಕವೇ ಒಡೆದು ಕಾಣುತ್ತದೆ. ವಸ್ತುಸ್ಥಿತಿಯನ್ನು ಇದ್ದಕ್ಕಿದ್ದಂತೆ ಹೇಳುವಲ್ಲಿ ಇದನ್ನು ಗುರುತಿಸಬಹುದಾಗಿದೆ.

ಜ್ಯೋತಿಬಾ ಪ್ರಗತಿಪರ ಚಿಂತಕ. ಅವನು ಶೋಷಿತರ ದನಿ. ಜ್ಯೋತಿಬಾ ಸಮಾಜದ ಅನಿಷ್ಟ ಪರಂಪರೆಗಳಿಗೆ ಕೊಡಲಿ ಏಟು ಹಾಕಬೇಕೆಂದರೆ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕೆಂದು ಯೋಚಿಸುತ್ತಾನೆ. ಈ ಕಾರಣಕ್ಕಾಗಿ ಅಲ್ಲಲ್ಲಿ ಶಾಲೆಗಳನ್ನು ಆರಂಭಿಸಿ ಶೂದ್ರರು, ದಲಿತರು ಮತ್ತು ಸ್ತ್ರೀಯರನ್ನು ಶಿಕ್ಷಿತರನ್ನಾಗಿ ಮಾಡಬೇಕೆಂದು ನಿರ್ಧರಿಸಿದನು. ಅವನ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದಲೂ ವಿರೋಧ ವ್ಯಕ್ತವಾಗುತ್ತದೆ. ಆದರೆ ಅವನು ಈ ಪ್ರಯತ್ನದಲ್ಲಿ ಯಶಸ್ವಿಯಾದನು. ಆತನ ಈ ನಿರ್ಧಾರವು ಭಾರತದ ಮುಖಚರ್ಯೆಯನ್ನೇ ಬದಲಿಸುತ್ತದೆ. ದಲಿತರು ಮತ್ತು ಶೂದ್ರರು ಹಾಗೂ ಸ್ತ್ರೀಯರ ಕೈಗಳಿಗೆ ಶತಶತಮಾನಗಳಿಂದ ತೊಡಿಸಿದ್ದ ಅನಿಷ್ಟ ಪರಂಪರೆಯ ಬೇಡಿಗಳು ಜ್ಯೋತಿಬಾನ ಒಂದು ನಿರ್ಧಾರದಿಂದ ಕಳಚಿ ಬಿದ್ದವು. ಶೂದ್ರ, ದಲಿತರು ಹಾಗೂ ಸ್ತ್ರೀಯರು ಮನುಷ್ಯರೆಂಬುದನ್ನು ಜ್ಯೋತಿಬಾ ಜಗತ್ತಿಗೆ ತೋರಿಸಿದ ಸಾಹಸಿಗ, ಮಹಾ ಮಾನವತಾವಾದಿ ಮತ್ತು ಕ್ರಾಂತಿಯ ಹರಿಕಾರ.

ನಮ್ಮ ಇತಿಹಾಸಕಾರರು ಸಾವಿತ್ರಿಯನ್ನು ಈವರೆಗೆ ಕೇವಲ ಶಿಕ್ಷಕಿಯನ್ನಾಗಿ ಮಾಡಿ ವೈಭವೀಕರಿಸಿದ್ದಾರೆ. ಆದರೆ, ಸರಜೂ ಕಾಟ್ಕರ್ ಸಾವಿತಿಬಾಯ್ರಿಯನ್ನು ತುಂಬಾ ವಿಭಿನ್ನವಾಗಿ ಹೊಸ ನೆಲೆಯಲ್ಲಿ ಚಿತ್ರಿಸಿದ್ದಾರೆ. ನಾವು ಈ ಕಾದಂಬರಿಯಲ್ಲಿ ಕಾಣುವ ನಾಯಕಿ ಚರಿತ್ರೆ ನಿರ್ಮಿಸಿದ ನಯವಾದ,ಜಡವಾದ, ಸ್ವಂತಿಕೆಯಿಲ್ಲದ, ಸಂವೇದನಾರಹಿತ, ಸ್ವಂತ ಅಸ್ಮಿತೆಯೇ ಇಲ್ಲದ ಸಾವಿತ್ರೆಯಲ್ಲ; ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ದಂಗೆ ಏಳುವ, ಸಮಾಜದಲ್ಲಿನ ಅನಿಷ್ಟ ಪರಂಪರೆಗಳನ್ನು ಧೈರ್ಯದಿಂದ ಪ್ರಶ್ನಿಸುವ, ಸಾಮಾಜಿಕ ರೀತಿ-ರಿವಾಜುಗಳನ್ನು ಧಿಕ್ಕರಿಸುವ, ಶೋಷಿತರ ದನಿಯಾಗುವ, ಬಡವರಾತ್ಮದ ಹಣತೆಯಾಗುವ, ಪುರೋಹಿತಶಾಹಿಗಳ ಹುನ್ನಾರವನ್ನು ಬಯಲಿಗೆಳೆಯುವ ‘ಅಪ್ರತಿಮ ದಿಟೆ’್ಟ ಸಾವಿತ್ರಿ. ಕಾಟ್ಕರ್‍ರ ಈ ನೈಜದೃಷ್ಟಿಯ ಚಿತ್ರಣ ಕಾದಂಬರಿಯ ಆರಂಭದಿಂದಲೇ ಸ್ಪಷ್ಟವಾಗುತ್ತದೆ. ಇತಿಹಾಸದಲ್ಲಿದ್ದ ವ್ಯಕ್ತಿಯೊಬ್ಬಳನ್ನು ಉಪಲಬ್ಧ ಆಧಾರಗಳಿಂದಲೇ ನೈಜ ದೃಷ್ಟಿಕೋನದಿಂದ ಚಿತ್ರಿಸಿರುವ ಲೇಖಕರ ಈ ಸೃಜನಶೀಲ ಪ್ರಯತ್ನ ಅದ್ಭುತವಾಗಿದೆ. ಮಹಾತ್ಮಾ ಜ್ಯೋತಿಬಾ ಫುಲೆ ಅಂತಿಮ ಕಾಲದ ದಾರುಣ ಪ್ರಸಂಗ ಎಂಥವರ ಎದೆಯನ್ನೂ ಕಲುಕಿಸುವಷ್ಟು ಸಶಕ್ತವಾಗಿ ಮೂಡಿಬಂದಿದೆ. ಲಕ್ವಾದಿಂದ ಹಾಸಿಗೆ ಹಿಡಿದ ಜ್ಯೋತಿಬಾನನ್ನು ಆರೈಕೆ ಮಾಡುವಾಗ, ಧೈರ್ಯ ತುಂಬುವಾಗ ಸಾವಿತ್ರಿಬಾಯಿ ತೋರಿದ ಧೈರ್ಯ ನಿಜಕ್ಕೂ ಮೆಚ್ಚುವಂಥದ್ದು. ‘ಅನ್ಯಾಯದ ವಿರುದ್ಧ ಸಿಡಿದೆದ್ದ ಬೆಂಕಿ’ ತಣ್ಣಗಾಗಿರುವ ಸಂದರ್ಭದಲ್ಲಿಯೂ ಅವಳು ಧೈರ್ಯಗುಂದುವುದಿಲ್ಲ.

ಬ್ರಿಟಿಷರು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆಯವರ ಶೈಕ್ಷಣಿಕ-ಸಾಮಾಜಿಕ ಕಾರ್ಯ ಸಾಧನೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಾರೆ. ‘ಸಾವಿತ್ರಿಬಾಯಿ ಫುಲೆ’ ಕಾದಂಬರಿ ಪ್ರಧಾನವಾಗಿ ಬ್ರಿಟಿಷರು, ಭಾರತದ ಮೇಲ್ವರ್ಗ, ಮಧ್ಯಮ ವರ್ಗ ಮತ್ತು ಕೆಳವರ್ಗದವರ ಕಥನ, ಅವುಗಳಲ್ಲಿನ ಪಾತ್ರಗಳು ವಿಭಿನ್ನ ಜೀವನದ ನೆಲೆಯಲ್ಲಿ ರೂಪಗೊಂಡಿವೆ. ಸಾವಿತ್ರಿಬಾಯಿಯ ವ್ಯಕ್ತಿತ್ವದ ಪ್ರಖರತೆಗೆ ಪೂರಕವಾಗಿ ಬರುವ ಖಂಡೋಜಿ, ಲಕ್ಷ್ಮೀಬಾಯಿ, ಸಗುಣಾಬಾಯಿ, ಜ್ಯೋತಿಬಾ ಫುಲೆ, ತಾರಾಬಾಯಿ, ಚಂದ್ರಾಬಾಯಿ, ಮುಕ್ತಾಬಾಯಿ, ಮೀರಾಬಾಯಿ, ಜಾಕ್ಸನ್, ಗೋವಿಂದರಾವ್, ತಾತ್ಯಾರಾವ ಭಿಡೆ, ಉಸ್ಮಾನ ಶೇಖ, ಫಾತಿಮಾ,ಯಶವಂತ, ಲಕ್ಷ್ಮೀಯರು ಮನಸ್ಸಿನಲ್ಲಿ ಉಳಿಯುವಂಥ ಪಾತ್ರಗಳು. ಕಾದಂಬರಿ ಪಾತ್ರಗಳು ಬೆಳೆಸುತ್ತ ಹೋಗಿರುವ ಕಥೆಯಲ್ಲಿ ಎಲ್ಲಿಯೂ ವೈಭವೀಕರಣವಿಲ್ಲ, ಅಸಹಜತೆಯಿಲ್ಲ. ಹೀಗಾಗಿ ಕಾದಂಬರಿಯ ಬಂಧ ಕೂಡ ಸಾಕಷ್ಟು ಗಟ್ಟಿಯಾಗಿದೆ. ಐತಿಹಾಸಿಕ ಘಟನೆಗಳಲ್ಲಿರುವ ಸಂಘರ್ಷದ ಗಂಭೀರತೆ ಕಾದಂಬರಿಯಲ್ಲಿ ಯಥಾವತ್ತಾಗಿ ಮೂಡಿಬಂದಿರುವುದರಿಂದ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತದೆ.

ದಟ್ಟ ವಿವರಗಳು, ಅನುಭವದ ಮೂಸೆ ಕಥೆಯ ಜೀವಾಳ. ಅಗ್ರಹಾರದ ಗೋವಿಂದಭಟ್ಟರ ಮಗ ಹನ್ನೆರಡು ವರ್ಷದ ನರಸಿಂಹಭಟ್ಟ ಮುಂಜಾನೆ ಬಯಲುಕಡೆಗೆ ಹೋದಾಗ ಅವನಿಗೆ ನಾಗರಹಾವು ಕಚ್ಚಿ, ನರಸಿಂಹಭಟ್ಟ ನಾಗರಹಾವಿನ ವಿಷದಿಂದ ಮರಣ ಹೊಂದುತ್ತಾನೆ. ಆತನ ಮದುವೆ ಮೂರು ವರ್ಷಗಳ ಹಿಂದೆ ಅಂಬೇವಾಡಿಯ ಕುಲಕರ್ಣಿಯವರ ಮಗಳು ಸರಸ್ವತಿಯೊಂದಿಗೆ ನಡೆದಿತ್ತು. ಗೋವಿಂದಭಟ್ಟರು ತನ್ನ ಹೆಂಡತಿ ರಾಧಾಬಾಯಿಗೆ ‘ಸರಸ್ವತಿಗೆ ಸರ್ವಾಲಂಕೃತ ತಯಾರು ಮಾಡಿ, ನರಸಿಂಹನ ಜೊತೆಗೆ ಅವಳು ಸಹಗಮನ ಮಾಡಬೇಕೆಂದು ಹೇಳುತ್ತಾರೆ’, ಈ ವಿವರವೊಂದು ಕಾದಂಬರಿಯ ಆರಂಭದಲ್ಲಿದೆ. ಅದು ಕಾದಂಬರಿಕಾರರ ಚಿತ್ರಶಕ್ತಿಗೆ ಸಾಕ್ಷಿಯಾಗಿದೆ. ಇಂಥ ಅನೇಕ ವಿವರಗಳು ಕಾದಂಬರಿಯುದ್ದಕ್ಕೂ ಬರುತ್ತವೆ. ಓದುಗರನ್ನು ಕಾಡುತ್ತವೆ. ಕಾದಂಬರಿಯಲ್ಲಿ ಹೊಸತನಕ್ಕಿಂತಲೂ ಹೆಚ್ಚಾಗಿ ನಿರೂಪಣಾ ಶೈಲಿ ಓದುಗರ ಗಮನ ಸೆಳೆಯುತ್ತದೆ. ವರ್ತಮಾನದಿಂದ ಭೂತಕ್ಕೆ ಮತ್ತೆ ಭೂತದಿಂದ ವರ್ತಮಾನಕ್ಕೆ ಜಿಗಿಯುವ ನಿರೂಪಣೆ ಕಥೆಯ ಗಹನತೆಯನ್ನು ಇಮ್ಮಡಿಗೊಳಿಸಿದೆ. ಪಾತ್ರ ಸಂಯೋಜನೆ, ಸನ್ನಿವೇಶ ನಿರ್ಮಾಣ ಓದುಗರಲ್ಲಿ ಆಸಕ್ತಿಯನ್ನು ಕೆರಳಿಸುತ್ತದೆ. ಸಂಭಾಷಣೆಯಲ್ಲಿ ಅಚ್ಚುಕಟ್ಟುತನವಿದೆ. ದೃಶ್ಯಕಲ್ಪನೆಯಿದೆ; ಮನುಷ್ಯ ಸ್ವಭಾವಗಳ ಅನಾವರಣವಿದೆ, ಅಂದಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿಕ ವಿದ್ಯಮಾನಗಳ ಬಗೆಗಿನ ವೈಚಾರಿಕ ನಿಲುವುಗಳಿವೆ. ಸರಳತೆ, ಸಹಜತೆ, ಸ್ಪಷ್ಟತೆಯುಳ್ಳ ಬರವಣಿಗೆಯಲ್ಲಿ ಶಕ್ತಿಯುತವಾದ ಕನ್ನಡತನವಿದೆ. ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಈ ಕೃತಿ ವಿಶೇಷ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

  • ಸಿ.ಎಸ್.ಭೀಮರಾಯ (ಸಿಎಸ್ಬಿ)
    ಮೊ. ನಂ-9741523806